Saturday, 11 January 2020

ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು (ಲೇಖನ-9)

- ಡಾ. ಸಿಸ್ಟರ್ ಪ್ರೇಮ (ಎಸ್.ಎಮ್.ಎಮ್.ಐ)
-------------------------------------
ಹಿಂದಿನ ಸಂಚಿಕೆಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು’ ಎಂಬ ವಿಷಯದಡಿಯಲ್ಲಿ ಸ್ವಾತಂತ್ರ್ಯೋತ್ತರದ ಪ್ರಮುಖ ಕನ್ನಡ ಕ್ರೈಸ್ತ ಸಾಹಿತಿಯಾದ ರೆವರೆಂಡ್ ಉತ್ತಂಗಿ ಚೆನ್ನಪ್ಪರವರ ಬದುಕಿನ ವೈಖರಿಯನ್ನು ವಿವೇಚಿಸಿದ್ದೇವೆ. ಈ ಪ್ರಸ್ತುತ ಸಂಚಿಕೆಯಲ್ಲಿ ಕನ್ನಡ ಸಾಹಿತ್ಯಕ್ಕೆ ಅವರ ಸೇವೆಯ ಅಮೋಘತೆಯನ್ನು ಸಾದಾರಪಡಿಸುವ ಪುಟ್ಟ ಪ್ರಯತ್ನ ಮಾಡಿರುತ್ತೇನೆ. 
-------------------------------------
ಸರ್ವಜ್ಞ ಸಾಹಿತಿ : 
ಉತ್ತಂಗಿ ಚೆನ್ನಪ್ಪರವರಿಗೆ ಕೀರ್ತಿಯನ್ನು ತಂದುಕೊಟ್ಟಿದ್ದು ಅವರ ‘ಸರ್ವಜ್ಞ ಅಧ್ಯಯನ’. ಸರ್ವಜ್ಞನನ್ನು ಮನೆ ಮನೆಗೆ ಕೊಂಡೊಯ್ಯುವುದರ ಜೊತೆಗೆ ಚೆನ್ನಪ್ಪನವರೂ ಬೆಳೆದರು. ಅವರ ಬಗ್ಗೆ ಮಾಹಿತಿ ಇರುವ ಪುಸ್ತಕಗಳಲ್ಲಿ ಉತ್ತಂಗಿ ಚೆನ್ನಪ್ಪರವರು ಸರ್ವಜ್ಞನ ಸರಳ ಭಾಷೆಗೆ ಮನಸೋತು ಅಧ್ಯಯನಕ್ಕೆ ತೊಡಗಿದನೆಂದು ಅವರೇ ಹೇಳಿರುವುದು ನಿಜವಾಗಿಯು ಶ್ಲಾಘನೀಯ.
‘ತಿರುಳುಗನ್ನಡ ತಿರುಕ ಮರುಳಾದನು ಅವಗೆ
ಅರಳಿ ಹೋಯಿತು ಅವನ ಸರಳ ಭಾವಕೆ ಮನವು’
ಎಂದು ತಮ್ಮ ಸ್ಪೂರ್ತಿಯ ನೆಲೆಯನ್ನು ಗುರುತಿಸಿಕೊಂಡಿದ್ದಾರೆ. 
ಕನ್ನಡವ ಕನ್ನಡಿಸಿ ಕನ್ನಡಿಗರೆಲ್ಲರಿಗೆ
ಕನ್ನಡದ ಕನ್ನಡಿಯದೇನೆಂದು ತೋರಿ
ಕನ್ನಡವು ಕನ್ನಡಿಯ ತಾ ಬೇರೆಯಲ್ಲ ಈ
ಕನ್ನಡಿಯ ನೋಡದನು ಕನ್ನಡಿಗನೇ ಅಲ್ಲ
ಎನ್ನುತ ಬೆಳಗಿದನು ಕನ್ನಡದ ಜಾಣ
ಕನ್ನಡವು ಕನ್ನಡಿಯು ಸರ್ವಜ್ಞ ಕಾಣ||.
ಸರ್ವಜ್ಞ ಒಬ್ಬ ಸಾಮಾನ್ಯ ಸರಳ ಕವಿ, ಅವನ ಕಾವ್ಯದಲ್ಲಿ ಕಥಾವಸ್ತುವಿಲ್ಲ, ನವರಸಗಳಿಲ್ಲ, ಅವನೊಬ್ಬ ಪೂರ್ವಕವಿ, ಕುವರರನ್ನು ಸ್ಮರಿಸದ ಸಂಪ್ರದಾಯ ವಿರೋಧಿ ಎಂದು ಪಂಡಿತರೆನಿಸಿಕೊಳ್ಳುವವರು ಸರ್ವಜ್ಞನನ್ನು ಕುರಿತು ಮೂಗು ಮುರಿದು ಮಾತಾನಾಡುವ ಕಾಲವೊಂದಿತ್ತು. ಇದು ಮಹಾಸರ್ವಜ್ಞನ ಬಗೆಗಿನ ಪಂಡಿತರ-ಮೇಧಾವಿಗಳ ಅಲ್ಪತನವನ್ನು ಸೂಚಿಸುತ್ತದೆ. ಇಂತಹ ಸಮಯದಲ್ಲಿ ಪಂಡಿತ ಪಾಮರರಿಬ್ಬರಿಗೂ ಮಾನ್ಯವಾದ ‘ಸರ್ವಜ್ಞ ಮೂರ್ತಿ’ಯನ್ನು ಬೆಳಕಿಗೆ ತಂದ ಕೀರ್ತಿ ಉತ್ತಂಗಿಯವರದು. ಅಲ್ಲಿಯವರೆಗೂ ಯಾರ ಕಣ್ಣಿಗೂ ಗೋಚರಿಸದ ಸರ್ವಜ್ಞ ಕವಿಯು ಉತ್ತಂಗಿಯವರ ಪರಿಶ್ರಮದಿಂದ ಪ್ರತ್ಯಕ್ಷನಾದ. ಉತ್ತಂಗಿಯವರ ಅವಿರತ ಶ್ರಮದಿಂದ ಸರ್ವಜ್ಞನ ಸುವಿಚಾರಗಳು ಹಳ್ಳಿಯ ಮುಗ್ಧರಿಂದಿಡಿದು ಪಟ್ಟಣದ ಪಂಡಿತರವರೆಗೂ ಹರಡಿದವು. ಜನಸಾಮಾನ್ಯರು ಸರ್ವಜ್ಞನನ್ನು ಹಾಡಿ ಹೊಗಳಿದರು. ಅವನ ಅರ್ಥಪೂರ್ಣ ವಚನಗಳಿಗೆ ಮಾರುಹೋದರು. ದಿನನಿತ್ಯದ ಸಮಸ್ಯೆಗಳಿಗೆ ಪರಿಹಾರ ನೀಡುವ ಶಕ್ತಿಗಳಾಗಿ ಉಪಯೋಗವಾದವು.
ಇಂತಹ ಸರ್ವಜ್ಞ ಕವಿಯನ್ನು ಸಾಕ್ಷಾತ್ಕರಿಸಿಕೊಂಡ ಉತ್ತಂಗಿಯವರ ಕಾರ್ಯ ಆತ್ಮ್ಯಂತ ಘನತರವಾದುದು. ಅಜ್ಞಾತವಾಸದಲ್ಲಿದ್ದ ಸರ್ವಜ್ಞ ಕವಿಯನ್ನು ಹುಡುಕಿ ತಂದು ಕನ್ನಡದ ಸಿಂಹಾಸನದಲ್ಲಿ ಕುಳ್ಳಿರಿಸಿದ ಉತ್ತಂಗಿಯವರ ಪ್ರಯತ್ನ ನಿಜವಾಗಿಯು ಶ್ಲಾಘನೀಯ. ಸರ್ವಜ್ಞನ ಸೇವೆಯಲ್ಲಿ ಬದ್ಧರಾಗಿ ನಿಲ್ಲುವಂತೆ ಉತ್ತಂಗಿಯವರಿಗೆ ಪ್ರೇರಣೆಯನ್ನಿತ್ತವರು ವಿದೇಶಿ ಮಿಶನರಿಗಳಾದ ರೆವರೆಂಡ್. ಜೆ. ಜೆ. ಉರ್ನರವರು. ಅವರು ಬಾಸೆಲ್ ಮಿಷನ್ ಸಂಸ್ಥೆಯ ಮೂಲಕ ಕರ್ನಾಟಕದಲ್ಲಿ ಕ್ರೈಸ್ತ ಧರ್ಮಪ್ರಸಾರಕ್ಕಾಗಿ ಬಂದವರು, ಕನ್ನಡವನ್ನು ಕಲಿಯಲು ಅವರಿಗೆ ಚೆನ್ನಪ್ಪರವರು ಪ್ರೇರಣೆಯಾಗಿದ್ದರು. ಹೀಗೆ ಕನ್ನಡವನ್ನು ಕಲಿಯುವಾಗ ಉದಾಹರಣೆಗಳಿಗೆ ಸಂಬಂಧಿಸಿದಂತೆ ಸರ್ವಜ್ಞನ ಕೆಲವು ಪದ್ಯಗಳ ಅರ್ಥವನ್ನು ರೆವರೆಂಡ್ ಜೆ. ಜೆ. ಉರ್ನರವರಿಗೆ ವಿವರಿಸುತ್ತಿದ್ದರು. ಹೀಗೆ ಸರ್ವಜ್ಞನ ಸರಳವಾದ ಭಾಷೆಗೆ ಮತ್ತು ನವೀನ ವಿಚಾರಗಳಿಗೆ ಅವರು ಮಾರುಹೋದರು ಮತ್ತು ತಮ್ಮ ವಿಚಾರಗಳು ಸರ್ವಜ್ಞನ ವಿಚಾರಗಳಿಗೂ ಬಹುಮಟ್ಟಿಗೆ ಸಾಮ್ಯವಿದ್ದುದನ್ನು ಕಂಡು ಸಂತಸಗೊಂಡರು. ಸರ್ವಜ್ಞನು ಹುಟ್ಟಿದ ಸ್ಥಳ, ಮತ, ಕಾಲ ಇತ್ಯಾದಿಗಳ ಬಗೆಗೆ ವಿವರ ನೀಡಬೇಕೆಂದು ಆ ಮಿಶನರಿಯೂ ಅಂಗಲಾಚಿ ಬೇಡಿಕೊಂಡನು. ಹೀಗೆ ರೆವರೆಂಡ್ ಉರ್ನರ್‍ರಿಂದ ಸ್ಪೂರ್ತಿ ಪಡೆದ ಉತ್ತಂಗಿಯವರು ಸರ್ವಜ್ಞ ಕವಿ ಹಾಗೂ ಅವನ ವಚನಗಳ ಹುಡುಕಾಟಕ್ಕೆ ಮುಂದಾದರು. 
ಹೊರದೇಶದವರು ಸರ್ವಜ್ಞನ ಬಗೆಗೆ ಆದರಾಭಿಮಾನಗಳನ್ನು ತಳೆದು ಅವನ ಸೇವೆಗೆ ಸಿದ್ಧರಾಗಿರುವುದನ್ನು ಕಂಡು ಸರ್ವಜ್ಞನು ಜನ್ಮಿಸಿದ ಜಿಲ್ಲೆಯವರಾದ ಉತ್ತಂಗಿಯವರಿಗೆ ನಾಚಿಕೆಯಾಯಿತು. ತಮ್ಮ ಜಿಲ್ಲೆಯ, ತಮ್ಮ ನುಡಿಯ ಕವಿಯ ಸೇವೆ ಮಾಡದೆ ಕೈಕಟ್ಟಿ ಕುಳಿತುಕೊಳ್ಳುವುದು ನಾಚಿಗೇಡಿತನವೆಂದು ಬಗೆದರು. ಆಗ ತನು-ಮನ-ಧನಗಳಿಂದ ಸರ್ವಜ್ಞನ ಸೇವೆ ಮಾಡಲು ಉದ್ಯುಕ್ತರಾದರು. ತತ್ವಶಾಸ್ತ್ರದಲ್ಲಿ ವಿಶೇಷವಾದ ಆಸೆಯಿದ್ದರೂ ಅದರಿಂದ ಅವರ ಮನಸ್ಸಿಗೆ ಶಾಂತಿ ದೊರೆಯಲಿಲ್ಲ, ಸಾಹಿತ್ಯದಲ್ಲೂ ಮೊದಮೊದಲು ಅವರಿಗೆ ಆಸಕ್ತಿ ಇರಲಿಲ್ಲ. ಹೀಗಾಗಿ ಜೀವನದಲ್ಲಿ ಜಿಗುಪ್ಸೆಯೆನಿಸಿದಾಗ ಸರ್ವಜ್ಞ ಕವಿಯ ಜೀವನ ಹಾಗೂ ಕೃತಿಗಳ ಬಗೆಗಿನ ಸಂಶೋಧನೆ ಮಾಡಲು ಹೊರಟ ಸಂದರ್ಭವನ್ನು ಉತ್ತಂಗಿಯವರು ಈ ಕೆಳಕಂಡಂತೆ ಸ್ಮರಿಸಿಕೊಂಡಿರುವರು. ಹೀಗೆ ಭಗ್ನಾಶನಾಗಿ ಸಾಗುತ್ತಿದ್ದ ನನ್ನ ಜೀವನದ ಹಾದಿಯಲ್ಲಿ ಸರ್ವಜ್ಞನೆಂಬ ತಿರುಕನ ದರ್ಶನವಾಯಿತು. ಉಭಯತರ ಹಾಡು ಒಂದೇ ಎಂದು ಎನಿಸಿತು. ಆಗ ನಾನು ಅವನಲ್ಲಿ ನನ್ನನ್ನು ಕಂಡೆ. ಹೀಗೆ ಇಬ್ಬರಿಗೂ ಮೇಳವಾಯಿತು. ಕರಿಗೆ ಕರಿ ಕೂಡಿದಂತಾಗಿ ಪರಸ್ಪರರಲ್ಲಿ ಹಿರಿಯ ಸ್ನೇಹವುಂಟಾಯಿತು. ಪ್ರಿಯನು ಪ್ರೇಯಸಿಯ ಭಾಷೆಯನ್ನು ಕಲಿಯುವಂತೆ ನಾನು ಸರ್ವಜ್ಞನಿಂದ ಸರ್ವಜ್ಞನಿಗಾಗಿ ಕನ್ನಡವನ್ನು ಕಲಿತೆ. ಕನ್ನಡ ವ್ಯಾಕರಣ, ಛಂದಸ್ಸು, ಕಾವ್ಯ, ಅಲಂಕಾರ-ಮುಂತಾದ ಶಾಸ್ತ್ರ ಗ್ರಂಥಗಳನ್ನು ಓದಿದ್ದು ಸರ್ವಜ್ಞನ ಕಾರ್ಯವನ್ನು ಕೈಗೊಂಡ ನಂತರ ಎಂಬುದಾಗಿ ತಾವೆ ಹೇಳಿಕೊಂಡಿರುತ್ತಾರೆ.
ತಮ್ಮ ಸಂಸಾರದಲ್ಲಿ ತಿರಸ್ಕಾರ ಭಾವನೆಯನ್ನು ತಳೆದಿದ್ದ ಉತ್ತಂಗಿಯವರಿಗೆ ಸರ್ವಜ್ಞನ ದರ್ಶನವಾದದ್ದು ನಿಜವಾಗಿಯು ಅದ್ಭುತ. ಇಲ್ಲಿ ಉತ್ತಂಗಿಯವರು ಹೇಳುವ ‘ನಾನು ಅವನಲ್ಲಿ ನನ್ನನ್ನು ಕಂಡೆ ಎಂಬ ವಾಕ್ಯವು ನಿಜವಾಗಿಯು ಅಂತರಾವಲೋಕನಕ್ಕೆ ಎಡೆ ಮಾಡಿಕೊಡುವಂತದ್ದಾಗಿದೆ. ಸರ್ವಜ್ಞನ ಸ್ವಭಾವಕ್ಕೂ ಅವರ ಸ್ವಭಾವಕ್ಕೂ ವ್ಯತ್ಯಾಸವಿಲ್ಲವೆಂಬ ವಿಷಯ ಮನದಟ್ಟಾಗುವುದನ್ನು ಗಮನಿಸಬಹುದು. ಮದುವೆಯಾದ ಹೊಸತರಲ್ಲಿ ಪತಿಯ ಒಲವನ್ನು ಪಡೆಯಲೆತ್ನಿಸುವ ಪ್ರೀತಿಯ ಸತಿಯಂತೆ, ಉತ್ತಂಗಿಯವರು ಸರ್ವಜ್ಞನ ಉತ್ತಮವಾದ ವಚನಗಳನ್ನು ಅನುವಾದಿಸಿ ಇಂಗ್ಲೀಷಿನಲ್ಲಿ ಪ್ರಸಿದ್ಧಿಪಡಿಸಬೇಕೆಂದು ನಿಶ್ಚಯಿಸಿದರು. ಕನ್ನಡ ವಾಙ್ಞಯದಲ್ಲಿ ಸರ್ವಜ್ಞನಂತಹ ಕವಿಗಳು ಬಹು ವಿರಳವಾಗಿರುವುದರಿಂದ ಆತನ ವ್ಯಕ್ತಿತ್ವದ ಮಹಿಮೆಯನ್ನು ಪರದೇಶದವರಿಗೆ ತೋರಿಸಿಕೊಡಬೇಕೆಂಬ ಹೆಬ್ಬಯಕೆಯುಂಟಾಯಿತು. ಮರಾಠಿ ವಾಙ್ಞಯದಲ್ಲಿ ತುಕಾರಾಮನಿಗೂ, ತೆಲುಗು ವಾಙ್ಞಯದಲ್ಲಿ ವೇವನನಿಗೂ, ತಮಿಳು ವಾಙ್ಞಯದಲ್ಲಿ ಅವ್ವಾಯಿ, ಅರುಣಗಿರಿನಾಥರಿಗೂ ಸಮಾನನಾದ ಕವಿ ಸರ್ವಜ್ಞನಾಗಿದ್ದರೂ ಕನ್ನಡ ವಾಙ್ಞಯದಲ್ಲಿ ಅವನಿಗೆ ಅಂಥ ಎತ್ತರದ ಸ್ಥಾನವಿಲ್ಲದಿರುವುದನ್ನು ಕಂಡು ಉತ್ತಂಗಿಯವರಿಗೆ ವ್ಯಸನವಾಯಿತು. ರೂಢಗನ್ನಡ ಕವಿ ಶಿಶುಮಣಿ ಎನಿಸಿಕೊಳ್ಳಲು ಅರ್ಹನಾದ ಸರ್ವಜ್ಞನ ಭವ್ಯ ವ್ಯಕ್ತಿತ್ವವನ್ನು ಪರದೇಶಸ್ಥರಿಗೆ ತೋರಿಸಿಕೊಡುವ ಹಂಬಲ ಮೊದಲು ಅವರಿಗೆ ಉಂಟಾಯಿತು. ಅಂದಿನಿಂದ ಅವನ ವಚನಗಳನ್ನು ಇಂಗ್ಲೀಷ್ ಭಾಷೆಯಲ್ಲಿ ತರ್ಜುಮೆ ಮಾಡಲುದ್ಯುಕ್ತರಾದರು.
ಹೀಗೆ ಸರ್ವಜ್ಞನ ಕನ್ನಡತನಕ್ಕೆ ಮರುಳಾಗಿ, ಹಲವರ ಬಾಯಲ್ಲಿ, ಕೆಲವರ ಕೈಬರಹದಲ್ಲಿ ಚೆಲ್ಲಿ ಹರಿದು ಹೋಗಿದ್ದ ಸರ್ವಜ್ಞನ ವಚನಗಳನ್ನು ಅಲ್ಲೊಂದು ಇಲ್ಲೊಂದು ಎಂಬಂತೆ ಅಚ್ಚಾದ-ಅಚ್ಚಾಗದ ಸಹಸ್ರ ಸಹಸ್ರ ತ್ರಿಪದಿಗಳನ್ನು ಕಲೆಹಾಕಿದರು. ನಿರ್ಭೀತ, ನಿರಹಂಕಾರ ಪುರುಷರತ್ನನ ಮಿಂಚಿನ ಗೊಂಚಲ ನುಡಿ ಮುತ್ತುಗಳನ್ನು ಹಾಸ್ಯ ರಸಾಯನಗಳನ್ನು ವಿಂಗಡಿಸಿ, ಕ್ರಮಗೊಳಿಸಿ, ಸಂಕಲಿಸಿ ಯಶವಂತರಾವ್ ಜಾತಾರರ ನೆರವಿನಿಂದ 1924 ರಲ್ಲಿ ಮೊತ್ತ ಮೊದಲ ಆವೃತ್ತಿಯನ್ನು ಪ್ರಕಟಿಸಿದರು. ಕ್ರಮೇಣ 1927, 1935, 1957ರಲ್ಲಿ ಇದರ ಪರಿಷ್ಕøತ ಆವೃತ್ತಿಗಳನ್ನು ಹೊರತಂದು ಸರ್ವಜ್ಞನ ವಾಣಿಯನ್ನು ಮನೆ ಮನೆಗೆ ತಲುಪಿಸುವ ಮೂಲಕ ಅವನ ಸಮಗ್ರ ದರ್ಶನವನ್ನು ಮಾಡಿಸಿದರು. ಚೆನ್ನಪ್ಪನವರ ಕನ್ನಡದ ಅವಿರತ ಸೇವೆಯನ್ನು ಕಂಡು ಅನೇಕ ಮಹನೀಯರು ಅಂದು ಮೆಚ್ಚುಗೆಯ ಮಾತಾಡಿದರು. ವಿಶೇಷವಾಗಿ ಶ್ರೀ ತಿರುಮಲೆ ತಾತಾಚಾರ್ಯಶರ್ಮ ಅವರು –
‘ಉತ್ತಂಗಿ ಬರೆದಷ್ಟು ಮತ್ಯಾರು ಬರೆದಿಲ್ಲ
ವಿಸ್ತಾರದಿಂದ ಸರ್ವಜ್ಞನಾ ವಚನ
ಉತ್ತಮವು ಕಾಣೊ ಸರ್ವಜ್ಞ.
ಎಂದರೆ,
ಶ್ರೀ ಪುಣೇಕರ ಅವರು –
ಕ್ರಿಸ್ತರವರಿವರೆಂದು ಪುಸ್ತಕವ ತಿರುವದಿರು
ಹಸ್ತವನಿಗೆ ಹಣ್ಣನಿತ್ತಂತೆ
ಕ್ರೈಸ್ತರ ಶಿಸ್ತು ಕಾಣಾಯ್ಯ ಸರ್ವಜ್ಞ’
ಎಂದು ಬಾಯ್ತುಂಬ ಪ್ರಶಂಸಿಸಿದ್ದಾರೆ.
ಉತ್ತಂಗಿಯವರ ಕೃತಿ ರತ್ನಗಳು :
ಉತ್ತಂಗಿ ಚೆನ್ನಪ್ಪರವರು ಬುದ್ಧಿ ಮತ್ತು ಸರಳ ಜೀವಿ ಯಾವುದೇ ವಿಷಯವನ್ನು ತಮ್ಮ ಬುದ್ಧಿಯ ಒರೆಗಲ್ಲಿಗೆ ಉಜ್ಜಿನೋಡಿ, ಅಂದರೆ ವಿಮರ್ಶಿಸಿ, ವಿಶ್ಲೇಷಿಸಿ ಸತ್ಯವೆನಿಸಿದನ್ನು ಮಾತ್ರ ನಂಬುವ ಸ್ವಭಾವದವರು. ಕ್ರೈಸ್ತ ಸಂಸ್ಥೆಯ ಸೇವೆಯಲ್ಲಿ ನಿರತರಾಗಿದ್ದರೂ ಕ್ರೈಸ್ತ ಧರ್ಮದ ಮೇಲಿನ ದುರಭಿಮಾನದಿಂದ ಇತರ ಧರ್ಮ ತತ್ವಗಳನ್ನು ತಿರಸ್ಕರಿಸುವುದಾಗಲೀ, ನಿಂದಿಸುವುದಾಗಲಿ ಅಥವಾ ಖಂಡಿಸಿ ಉಪದೇಶ ಮಾಡುವ ಜಾಯಮಾನವಾಗಲಿ ಅವರದಲ್ಲ. ಅವರದೇನಿದ್ದರೂ ನೇರ ನುಡಿ-ನೇರ ಹಾದಿ, ಒಳ-ಹೊರಗು ಎಂಬುದಿಲ್ಲ. ಹಾಗಾಗಿಯೇ ಅವರು ಬೇರೆ ಧರ್ಮಗಳ ಕೃತಿಗಳನ್ನು ಅವಲೋಕಿಸಿ ಸಂಶೋಧನೆ ಮಾಡುವಂತಾಯಿತು.
ಸರ್ವಜ್ಞ ಕವಿಯನ್ನು ಅರಿಯಲು ಹೊರಟ ಉತ್ತಂಗಿಯವರು ವೀರಶೈವ ಧರ್ಮದ ಸಾಹಿತ್ಯ ಸತ್ವವನ್ನು ಹೀರಬೇಕಾಯಿತು ಅದರಿಂದ ಉಗಮವಾದದ್ದು ವೀರಶೈವ ಸಾಹಿತ್ಯವೆಂಬ ಕಲ್ಪವೃಕ್ಷ. ಚೆನ್ನಪ್ಪರವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಅಂತಹ ಹಲವು ಗ್ರಂಥಗಳ ಅವಲೋಕನ ಮಾಡಿದರೆ ಉತ್ತಂಗಿಯವರ ಮೇರು ವ್ಯಕ್ತಿತ್ವದ ಅರಿವಾಗುತ್ತದೆ ಮತ್ತು ವೀರಶೈವ ಧರ್ಮ ಹಾಗೂ ಸಾಹಿತ್ಯಗಳಿಗೆ ಸಲ್ಲಿಸಿದ ಅನುಪಮ ಸೇವೆಯ ದರ್ಶನವಾಗುತ್ತದೆ. ಶ್ರೀಯುತರ ಕೃತಿಗಳು ಕ್ರಮವಾಗಿ ‘ಬನಾರಸಕ್ಕೆ ಬೆತ್ಲಹೇಮಿನ ವಿನಂತಿ’ (1921), ‘ಹಿಂದೂ ಸಮಾಜ ಹಿತಚಿಂತಕ’ (1921), ‘ಸರ್ವಜ್ಞನ ವಚನಗಳು’ (1924), ‘ಬಸವೇಶ್ವರನೂ ಕರ್ನಾಟಕದ ಅಭ್ಯುದಯವೂ’ (1928), ‘ಅನುಭವ ಮಂಟಪ’, ‘ಮಕ್ಕಳ ಶಿಕ್ಷಣ ಪಾಠ’ (1933), ‘ಬಸವೇಶ್ವರನೂ ಅಸ್ಪøಶ್ಯರ ಉದ್ಧಾರವೂ’ (1933), ‘ಸಾಧು ಸುಂದರ ಸಿಂಗರ ಅನುಭವ ಸಿದ್ಧಾಂತ’ (1929), ‘ಅಧ್ಯಕ್ಷರ ಭಾಷಣ’ (1949), ‘ಮೋಳಿಗೆಯ ಮಾರಯ್ಯ ಮತ್ತು ಮಹಾ ದೇವಿಯವರ ವಚವನಗಳು’ (1950), ‘ಅನುಭವ ಮಂಟಪದ ಐತಿಹಾಸಿಕ’ (1951), ‘ಸಿದ್ಧರಾಮ ಸಾಹಿತ್ಯ ಸಂಗ್ರಹ’ (1955), ‘ಪೂಜ್ಯ ಉತ್ತಂಗಿಯವರ ಜೀವನ ಚರಿತ್ರೆ’ (1956), ಆದಯ್ಯನ ವಚನಗಳು’ (1958), ‘ಮೃತ್ಯುಂಜಯ’ (1968), ‘ಲಿಂಗಾಯತ ಧರ್ಮ ಹಾಗೂ ಕ್ರೈಸ್ತ ಧರ್ಮ’ (1969) ಇವುಗಳಲ್ಲದೆ, `Complete Concordance to Bhagavat Geeta, Creation : A wonderful child of God, Lingayatism' ªÀÄvÀÄÛ ‘Yellamma : A Goddess of South India’ ಎಂಬ ಇಂಗ್ಲೀಷ್ ಕೃತಿಗಳನ್ನೂ ರಚಿಸಿ ‘ಅಭಿನವ ಸರ್ವಜ್ಞ’ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. ಉತ್ತಂಗಿಯವರ ಒಟ್ಟು ಸಾಹಿತ್ಯವನ್ನು ಪ್ರಮುಖವಾಗಿ ಕ್ರೈಸ್ತ ಧರ್ಮದ ಕೃತಿಗಳು ಮತ್ತು ಕನ್ನಡ ಸಾಹಿತ್ಯ ಸಂಸ್ಕøತಿಯ ಕೃತಿಗಳು ಎಂಬುದಾಗಿ ವಿಭಾಗಿಸಬಹುದು.

-0--0--0--0--0--0-

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...