Wednesday, 15 January 2020

ಮಕ್ಕಳ ಸುಳ್ಳಿನ ಪ್ರಪಂಚ [ಭಾಗ 05]

- ಯೋಗೇಶ್ ಮಾಸ್ಟರ್

ವಿನಾಕಾರಣ ಸುಳ್ಳಿನ ಕಾರಣ
ಪ್ರಾಧಾನ್ಯತೆಗಾಗಿ

ಮೂರನೇ ತರಗತಿಯ ಒಬ್ಬ ಹುಡುಗ ಅವನ ಶಿಕ್ಷಕರ ಹತ್ತಿರ ತಾನು ರಾತ್ರಿ ಹನ್ನೊಂದೂವರೆವರೆಗೂ ಓದುತ್ತಿರುತ್ತೇನೆ. ಬೆಳಗ್ಗೆಯೇ ಐದು ಗಂಟೆಗೇ ಎದ್ದು ತನ್ನ ಪೋಷಕರೊಡನೆ ವ್ಯಾಯಾಮ ಮಾಡುತ್ತೇನೆ. ಇತ್ಯಾದಿ ತನ್ನ ಮನೆಯಲ್ಲಿ ತನ್ನ ಸುಶಿಸ್ತಿನ ವೇಳಾಪಟ್ಟಿಯನ್ನು ಬಿಡಿಸಿಡುತ್ತಿದ್ದ. ಆ ಹುಡುಗನ ಪೋಷಕರಲ್ಲೊಬ್ಬರು ಕಾರಣಾಂತರಗಳಿಂದ ಅದೇ ಶಿಕ್ಷಕರನ್ನು ಭೇಟಿ ಮಾಡಿದಾಗ ಸಹಜವಾಗಿ ಮಾತನಾಡುತ್ತಾ ಹೇಳುತ್ತಿದ್ದರು, “ಇವನು ನಿದ್ರೆ ತಡೆಯಲ್ಲ. ಎಂಟು – ಎಂಟೂವರೆಯಾಗುತ್ತಿದ್ದಂತೆ ಮಲಗಿಬಿಡುತ್ತಾನೆ. ಹೋಂ ವರ್ಕ್ ಮಾಡುತ್ತಿರಲಿ, ಹಾಗೆಯೇ ಮಲಗಿಬಿಡುತ್ತಾನೆ. ಕೆಲವೊಮ್ಮೆ ಊಟವೂ ಮಾಡಲ್ಲ.” ಇದು ಇಷ್ಟಕ್ಕೇ ಮುಗಿಯಲಿಲ್ಲ. “ಬೆಳಗ್ಗೆ ಎಷ್ಟು ಹೊತ್ತಾದರೂ ಏಳುವುದಿಲ್ಲ. ಇನ್ನೇನು ಸ್ಕೂಲ್ ಬಸ್ ಬರಕ್ಕೆ ಮುಕ್ಕಾಲು ಗಂಟೆ, ಒಂದು ಗಂಟೆ ಇದ್ದಂತೆ ಬಲವಂತವಾಗಿ ಎಬ್ಬಿಸಿ ಎಲ್ಲವನ್ನೂ ಗಡಿಬಿಡಿಯಲ್ಲಿಯೇ ಮಾಡಬೇಕು.”
“ಮತ್ತೆ, ಅವನು ಹೀಗೆ ಹೇಳಿದ...” ಶಿಕ್ಷಕರು ಅವನು ಹೇಳಿದ್ದನ್ನೇ ಹೇಳಿದಾಗ “ಎಲ್ಲಾ ಸುಳ್ಳು” ಎಂದು ಅವನ ಪೋಷಕರು ಎಲ್ಲರ ಎದುರೂ ಹೇಳಿದ್ದು ಆ ಹುಡುಗನಿಗೆ ತೀರಾ ಮುಜುಗರವಾಯಿತು. 
ಸಮಯ ಪಾಲನೆಯ ಬಗ್ಗೆ, ಶಿಸ್ತಿನ ಬಗ್ಗೆ; ಇತ್ಯಾದಿಗಳ ಬಗ್ಗೆ ಪಾಠ ಮಾಡುವಾಗ ತಾನೂ ಕೂಡಾ ಹಾಗಿರುವಂತ ವ್ಯಕ್ತಿ ಎಂದು ತೋರಿಸಿಕೊಂಡಾಗ ತನಗೆ ಪ್ರಶಂಸೆ ಸಿಗುತ್ತದೆ. ಎಲ್ಲರ ಎದುರು “ಗುಡ್, ಹೀಗಿರಬೇಕು” ಎಂಬ ಮಾದರಿಗೆ ಬೊಟ್ಟು ಮಾಡಿ ತನ್ನನ್ನು ತೋರಿದಾಗ ಏನೋ ಸಂತೋಷ. ಇತರರಿಗಿಂತ ತಾನು ಮೇಲು ಎಂಬ ಭಾವನೆಯಿಂದ ಆನಂದವಾಗುತ್ತದೆ. ಅದಕ್ಕಾಗಿ ಇಂತಹ ಸುಳ್ಳುಗಳು. ಒಂದು ಮಗು ಇಂತಹ ಸುಳ್ಳು ಹೇಳಿ ಮೆಚ್ಚುಗೆ, ಹೊಗಳಿಗೆ ಪಡೆಯುತ್ತಿದ್ದಾಗ ಇನ್ನೊಂದು ಮಗು ಆ ಪ್ರಶಂಸೆಗಳು ತನಗೂ ಸಿಗಲೆಂದು ತಾನೂ ಹೇಳತೊಡಗುತ್ತದೆ. ಸುಳ್ಳು ವೇಳಾಪಟ್ಟಿಗಳ ಪ್ರದರ್ಶನಗಳ ಪೈಪೋಟಿಯೇ ಪ್ರಾರಂಭವಾಗಿಬಿಡುತ್ತದೆ. ಶಿಕ್ಷಕರಿಗೆ ಇದು ಸುಳ್ಳು ಎಂದು ಗೊತ್ತಾದರೂ ಕೆಲವೊಮ್ಮೆ ಕಡ್ಡಿ ಮುರಿದಂತೆ ಮಾತಾಡಿ ಮಕ್ಕಳ ಮುಖ ಮುರಿಯಲು ಇಷ್ಟಪಡದೇ ನಿರ್ಲಕ್ಷದ ನಗೆ ನಕ್ಕು, ಪ್ರಶಂಸೆಗಳನ್ನು ನೀಡದೇ, ಅದನ್ನು ಬೆಳಸದೇ ಇರುವಂತೆ ನೋಡಿಕೊಳ್ಳುತ್ತಾರೆ. ಆದರೆ, ಒಂದು ಮಗುವಿನ ನಂತರ ಸುಳ್ಳಿನ ಸ್ಪರ್ಧೆಯ ಅಭ್ಯರ್ಥಿಗಳಿಗೆ ಅದರಿಂದ ನಿರಾಸೆಯಾಗುತ್ತದೆ. ಅವನ ಸುಳ್ಳಿಗೆ ಪ್ರತಿಫಲ ಸಿಕ್ಕಿತು, ತನ್ನ ಸುಳ್ಳಿಗೆ ಪ್ರತಿಫಲ ಸಿಗಲಿಲ್ಲ ಎಂದೋ, ಅಥವಾ ತನ್ನದು ಸುಳ್ಳು ಎಂದು ಗೊತ್ತಾಗಿಬಿಟ್ಟಿತೋ ಎಂದು ಬೇಸರಿಸಿಕೊಳ್ಳುತ್ತದೆ. ಆ ಇನ್ನೊಂದು ಸುಳ್ಳು ಹೇಳಿ ಪ್ರಾಧಾನ್ಯತೆ ಪಡೆದುಕೊಂಡ ಮಗುವಿನ ಬಗ್ಗೆ ಅಸೂಯೆ ತಾಳುತ್ತದೆ. ಇದು ಮುಗಿಯದ ಕತೆ. 
ಕೆಲವು ಗುಣವಿಶೇಷಗಳನ್ನು ಪ್ರಧಾನವಾಗಿ ಪ್ರಶಂಸಿಸುವ ಕಾರಣದಿಂದ ಮಕ್ಕಳು ತಾವು ಅಂತಹ ಗುಣಗಳನ್ನು ಹೊಂದಿದ್ದೇವೆ ಎಂದೋ, ಅಥವಾ ಅಂತಹ ಒಳ್ಳೆಯ ಅಭ್ಯಾಸಗಳಿವೆ ಎಂದೋ, ತೋರ್ಪಡಿಸುತ್ತಾ ಪ್ರಾಧಾನ್ಯತೆಯನ್ನು ಪಡೆಯಲು ಯತ್ನಿಸುತ್ತಾರೆ.
ಸ್ವಾತಂತ್ರ್ಯಕ್ಕಾಗಿ
ಹದಿಹರೆಯಕ್ಕೆ ಕಾಲಿಡುತ್ತಿರುವ ಮಕ್ಕಳು ಪ್ರಶಂಸೆಯ ಕಾರಣದಿಂದ ಸುಳ್ಳು ಹೇಳುವುದಕ್ಕಿಂತ ತಮ್ಮ ಸಂಗತಿಗಳನ್ನು ತಾವೇ ಕಾಪಾಡಿಕೊಳ್ಳುವುದಕ್ಕೆ, ತಾವೇ ವ್ಯವಹರಿಸಿಕೊಳ್ಳುವುದಕ್ಕೆ ಯತ್ನಿಸುತ್ತಿರುತ್ತಾರೆ. ಉದಾಹರಣೆಗೆ ಸ್ನೇಹಿತರ ಜೊತೆಗೆ ಹೋಗುವಂತಹ ಯಾವುದೋ ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಕರು ಕರೆದುಕೊಂಡು ಹೋಗುತ್ತಾರೆ ಎಂದು ಮನೆಯಲ್ಲಿ ಹೇಳುತ್ತಾರೆ. ಇಲ್ಲಿ ತಾವು ತಾವಾಗಿ ಸ್ನೇಹಿತರೆಲ್ಲಾ ಒಟ್ಟಾಗಿ ಹೋಗುವ ಆಸೆ ಬಿಟ್ಟರೆ ಬೇರೆ ಏನೂ ಅಂತಹ ವಿಶೇಷ ಕಾರಣವೂ ಬೇಕಾಗಿರುವುದಿಲ್ಲ. ಸ್ನೇಹಿತರ ಜೊತೆಯಲ್ಲಿಹೋದರೆ ಒಂದು ಮಜಾ ಇರುತ್ತದೆ. ಆದರೆ, ಅಪ್ಪನೋ ಅಥವಾ ಅಮ್ಮನೋ ಗಾಡಿಯಲ್ಲಿ ಸೀದಾ ಕರೆದುಕೊಂಡು ಹೋಗಿ ಹೋಗಬೇಕಾದ ಸ್ಥಳದ ಬಾಗಿಲಿಗೇ ಬಿಟ್ಟು ಹೋಗುದು ಬೇಸರದ ಸಂಗತಿ. ಅಲ್ಲದೇ ತನ್ನ ಸ್ನೇಹಿತರ ಗುಂಪು ತಾವಾಗಿ ಬರುವ ಆನಂದವನ್ನು ಪಡೆಯುವಾಗ ತಾನು ಅದರಿಂದ ವಂಚಿತನಾಗಿ ಮೊದ್ದುಮೊದ್ದಾಗಿ, ಯಾವುದೇ ಮಜವಿಲ್ಲದೆ ಹಿರಿಯರ ಜೊತೆಗೆ ಗಾಡಿಯಲ್ಲಿ ಸೀದಾ ಬರುವುದು ಅವರಿಗೆ ಇಷ್ಟವಿರುವುದಿಲ್ಲ. ಆದ್ದರಿಂದ ಮನೆಯಲ್ಲಿ ಶಿಕ್ಷಕರು ಕರೆದುಕೊಂಡು ಹೋಗುತ್ತಾರೆ ಎಂದು ಸುಳ್ಳು ಹೇಳಿದರೆ, ಶಾಲೆಯಲ್ಲಿ ಅಪ್ಪ ಮತ್ತು ಅಮ್ಮನಿಗೆ ಕೆಲಸವಿತ್ತು, ಎಲ್ಲೋ ಹೋಗಿದ್ದರು, ಹಾಗಾಗಿ ಅವರಿಗೆ ಬರಲಾಗಲಿಲ್ಲ. ನಾವೇ ಬಂದೆವು; ಈ ರೀತಿಯಲ್ಲಿ ತಮ್ಮ ಸ್ವಾತಂತ್ರ್ಯವು ಹರಣವಾಗದಿರಬಾರದೆಂಬ ಕಾರಣಗಳಿಂದ ಸುಳ್ಳುಗಳನ್ನು ಹೇಳುತ್ತಾರೆ. ಸರ್ವೇ ಸಾಮಾನ್ಯವಾಗಿ ಸ್ವಾತಂತ್ರ್ಯದ ಕಾರಣಕ್ಕಾಗಿಯೇ ಸಾಕಷ್ಟು ಸುಳ್ಳುಗಳು ಪ್ರೌಢಶಾಲೆಯ ಅಥವಾ ಬೆಳೆದ ಮಕ್ಕಳಿಂದ ಹುಟ್ಟುವುದು. 
ವಿನಾಕಾರಣ
ತಮ್ಮ ಮಗ ವಿನಾಕಾರಣ ಸುಳ್ಳು ಹೇಳುತ್ತಾನೆ ಎಂದು ಪೋಷಕರೊಬ್ಬರು ತಮ್ಮ ಮಗನ ಬಗ್ಗೆ ದೂರುತ್ತಿದ್ದರು. ಎಷ್ಟೋ ಬಾರಿ ಮಕ್ಕಳ ಗುಂಪು ಯಾವುದೋ ಕೆಲಸವನ್ನು ಮಾಡಲು ಅಥವಾ ಎಲ್ಲಿಗೋ ಹೋಗಲು ಬಯಸುತ್ತದೆ. ಆಗ ಅವರು ಎಲ್ಲರೂ ಕೂಡಿ ಯಾವ ಸುಳ್ಳನ್ನುಮನೆಯಲ್ಲಿ ಹೇಳಬೇಕು ಎಂಬುದನ್ನು ಚರ್ಚಿಸುತ್ತಾರೆ. ಎಲ್ಲರೂ ಅದೇ ಸುಳ್ಳನ್ನುಹೇಳಬೇಕೆಂಬುದು ಮೊಟ್ಟ ಮೊದಲ ನಿಬಂಧನೆಯಾಗಿರುತ್ತದೆ. ನಂತರ ಒಂದು ವೇಳೆ ಸಿಕ್ಕಿಬಿದ್ದರೆ ಮತ್ತೇನು ಹೇಳಬೇಕು? ಎಂಬುದರ ಬಗ್ಗೆಯೂ ಕೂಡಾ ಒಂದು ಹಂತದ ಯೋಜನೆಯಿರುತ್ತದೆ. 
ಇದಕ್ಕೆ ಮುಖ್ಯ ಕಾರಣವೆಂದರೆ, ಅವರ ಆ ಯೋಜನೆ ಬರಿಯ ಒಂದು ಮೋಜಿನದೋ ಅಥವಾ ಬರಿದೇ ಕಾಲ ಕಳೆಯಲೋ ಆಗಿರುತ್ತದೆ. ಅದನ್ನು ಹೇಳಲು ಮನೆಯಲ್ಲಿ ಒಪ್ಪುವುದಿಲ್ಲ ಎಂದು ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಜೊತೆಗೆ ಅವರ ಕೆಲವು ‘ಔಟಿಂಗ್’ಗಳು ವಿವರಣೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಅಲ್ಲೇನೂ ಕೆಟ್ಟದ್ದೋ, ದುಷ್ಟತನದ್ದೋ ಏನೂ ಇರುವುದಿಲ್ಲ. ಆದರೆ ಆ ಔಟಿಂಗ್ ಏಕೆ ಬೇಕು ಎಂದು ವಿವರಿಸಲು ಅವರಿಗೆ ಸಾಧ್ಯವಿರುವುದಿಲ್ಲ. ಪೋಷಕರಾಗಲೀ, ಶಿಕ್ಷಕರಾಗಲಿ ಕಾರಣ, ವಿವರಣೆ, ಪರಿಣಾಮ ಇವೆಲ್ಲವನ್ನೂ ಕೇಳುತ್ತಾರೆ. ಆದರೆ ಅವು ಯಾವುವೂ ಅವರ ಕೆಲಸಗಳಿಗೆ ಇರುವುದಿಲ್ಲ. ಆದ್ದರಿಂದ ಕಾರಣ, ವಿವರಣೆ, ಪರಿಣಾಮ ಎಲ್ಲವೂ ಇರುವಂತಹ ಮಾದರಿ ಕೆಲಸದ ಹೆಸರನ್ನು ಹೇಳಿ ತಮ್ಮ ಯೋಜನೆಯನ್ನು ಯಶಸ್ವಿಯಾಗಿ ಪೂರೈಸಿಕೊಳ್ಳಲು ಮಕ್ಕಳು ಸುಳ್ಳು ಹೇಳುತ್ತಾರೆ. ಆದ್ದರಿಂದಲೇ ಶೈಕ್ಷಣಿಕವಾಗಿ, ನೈತಿಕವಾಗಿ, ಸಾಂಸ್ಕೃತಿಕವಾಗಿ ಅಥವಾ ಧಾರ್ಮಿಕವಾಗಿ ಒಪ್ಪುವಂತಹ ವಿಷಯಗಳನ್ನು ಮುಂದಿಟ್ಟುಕೊಂಡು ಮಕ್ಕಳು ತಮ್ಮ ಖುಷಿಯನ್ನು ತಾವು ಪಡೆಯುತ್ತಾರೆ. ಅಲ್ಲಿಂದಲ್ಲಿಗೆ ಮುಗಿಯುವಂತಹ ಆನಂದವೂ ಇದಾಗಿರಬಹುದು ಅಥವಾ ಇಂತಹ ಖುಷಿಗಳು ಕೆಲವೊಮ್ಮೆ ದುರಂತಕ್ಕೂ ದಾರಿಯಾಗಬಹುದು. ಹಾಗಾಗಿಯೇ ಮಕ್ಕಳ ಪ್ರತಿಯೊಂದು ನಡೆಗೂ ವಿವರಣೆ, ಕಾರಣ ಇತ್ಯಾದಿಗಳನ್ನು ಕಠೋರವಾಗಿ ಕೇಳುತ್ತಿರಬಾರದು. ಖುಷಿ, ಬರೀ ಖುಷಿ ನೀಡುವಂತಹ ಹಲವು ಸಂಗತಿಗಳಿರುತ್ತವೆ. ಅವನ್ನು ಪೋಷಕರು ಮತ್ತು ಶಿಕ್ಷಕರು ಮನಗಂಡಿದ್ದೇ ಆದರೆ ಮಕ್ಕಳನ್ನು ಅವರ ಎಲ್ಲಾ ಸಂಗತಿಗಳಿಗೂ ವಿವರಣೆಯನ್ನು ಕೇಳಲು ಹೋಗುದಿಲ್ಲ. 
ಏನೇ ಆಗಲಿ ಸುಳ್ಳು ಕಡಿಮೆ ಹೇಳುವ ಅಥವಾ ಸುಳ್ಳು ಹೇಳದಿರುವ ಮಕ್ಕಳೂ ಉಂಟು. ಅವರ ಹಿನ್ನೆಲೆಗಳನ್ನು ಗಮನಿಸಿದರೆ ಬಹಳಷ್ಟು ಕುತೂಹಲಕಾರಿ ಸಂಗತಿಗಳು ತಿಳಿಯುತ್ತವೆ. ಅವು ನಿಜಕ್ಕೂ ಸಾಕಷ್ಟು ಒಳನೋಟಗಳನ್ನು ನೀಡುವಂತಹದ್ದು. ಅವುಗಳೇನೆಂದು ಮುಂದೆ ನೋಡೋಣ.
-0--0--0--0--0--0-

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...