ಪ್ರಭು ಯೇಸುಕ್ರಿಸ್ತರು
ದೇವರ ಪುತ್ರ. ಸ್ವರ್ಗಸಾಮ್ರಾಜ್ಯದ ಒಡೆಯ. ಸ್ವರ್ಗಸಾಮ್ರಾಜ್ಯವನ್ನು ಗ್ರೀಕ್ ಬಾಷೆಯಲ್ಲಿ ಬಸಿಲೇಯ
(basileia) ಎಂತಲೂ ಅರಮಿಕ್‌ನಲ್ಲಿ ಮಲ್ಕುತ್ ಎಂತಲೂ ಕರೆವರು. ಪ್ರಭು ಯೇಸು ಈ ವಿಶ್ವದಲ್ಲಿ
ಸ್ವರ್ಗಸಾಮ್ರಾಜ್ಯವನ್ನು ಸ್ಥಾಪಿಸಿ ಮಾನವಕುಲವನ್ನು ಸರ್ವ ಬಂಧನಗಳಿಂದಲೂ, ಪಾಪದ ಸಂಕೋಲೆಗಳಿಂದಲೂ, ಸೈತಾನ ರಾಜ್ಯದಿಂದಲೂ ಬಿಡಿಸಿ
ರಕ್ಷಿಸುವುದು ಅವರ ಜೀವನದ ಪರಮ ಗುರಿಯಾಗಿತ್ತು. ನಾನು ಬಂದದ್ದಾದರೋ ಜೀವನೀಡಲು .. ಯಥೇಚ್ಛವಾಗಿ
ನೀಡಲು. (ಯೊವಾನ್ನ ೧೦:೧೦) ಎಂದು ಪ್ರಭು ಘೋಷಿಸಿದರು.
ಆ ಜೀವ ನಶಿಸಿ
ಹೋಗುವುದಿಲ್ಲ. ಅದು ಶಾಶ್ವತವಾದ ಎಂದೂ ಅಳಿಯದ ನಿತ್ಯಜೀವ. ಅದನ್ನು ಮಾನವಕುಲಕ್ಕೆ ದೊರಕಿಸಿಕೊಡಲು
ಪ್ರಭು ಸ್ವರ್ಗಸಾಮ್ರಾಜ್ಯವನ್ನು ಅಂದರೆ ತಂದೆಯ ಬಲಪಾರ್ಶ್ವವನ್ನು ಬಿಟ್ಟು ಬೆತ್ಲೆಹೇಮಿನಲ್ಲಿ
ಮರಿಯಳ ಉದರದಿ ಮಗುವಾಗಿ ಧರೆಗಿಳಿದರು, ಮಾನವರಲ್ಲಿ ಮಾನವರಾಗಿ ಜೀವಿಸಿದರು.
ಆದರೆ ಲೋಕವಾದರೋ ಅವರನ್ನು
ಅರಿತುಕೊಳ್ಳದೆ ಹೋಯಿತು. (ಯೊವಾನ್ನ ೧:೧೦) ಅವರನ್ನು ತಿರಸ್ಕಾರ ಮಾಡಿತು, ಪರಾಧೀನ ಮಾಡಿ ಹೀನಾಯವಾಗಿ
ಶಿಲುಬೆಗೇರಿಸಿತು. ಆದರೆ ಅವರು ತಾವು ಮುಂಚಿತವಾಗಿ ತಿಳಿಸಿದಂತೆ ಮರಣವನ್ನು ನಿರ್ನಾಮ ಮಾಡಿ
ಪುನರುತ್ಥಾನರಾದರು. ನಂತರ ‘ಎಲ್ಲಾ ಮುಗಿಯಿತು’ ಎಂದು ನಿರಾಸೆಯಿಂದ ಪರಿತಪಿಸುತ್ತಿದ್ದ ತಮ್ಮ ಪ್ರೇಷಿತರಿಗೆ ನಲವತ್ತು ದಿನಗಳ ಕಾಲ ವಿವಿಧ
ರೀತಿಯಲ್ಲಿ ಕಾಣಿಸಿಕೊಂಡು ಅವರನ್ನು ಸಶಕ್ತಗೊಳಿಸಿ, ಅವರ ವಿಶ್ವಾಸವನ್ನು ಸದೃಢಗೊಳಿಸಿ, ಅವರನ್ನು ಮರುರೂಪಿಸಿ ‘ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರಿ’ ಎಂದು ಹೇಳಿ ಪ್ರೇಷಿತರು
ನೋಡುತ್ತಿದ್ದಂತೆಯೇ, ಸ್ವರ್ಗಾರೋಹಣರಾದರು (ನೋಡಿ ಪ್ರೇ. ಕಾ. ೧:೯).
ಸ್ವರ್ಗದಿಂದ ಧರೆಗಿಳಿದು
ಒಂದಿದ್ದ ಪ್ರಭು ಸ್ವರ್ಗದೆಡೆಗೆ ಪಯಣಿಸಿದರು. ಹೌದು, “ನಾನು
ಪಿತನಿಂದಲೇ ಹೊರಟು ಈ ಲೋಕಕ್ಕೆ ಬಂದಿದ್ದೇನೆ. ಈಗ ಈ ಲೋಕವನ್ನು ಬಿಟ್ಟು ಪಿತನಲ್ಲಿಗೆ
ಹೋಗುತ್ತಿದ್ದೇನೆ” (ಯೊವಾನ್ನ ೧೬:೨೮). ಪ್ರಭು
ಪುನರುತ್ಥಾನದ ನಂತರ ಮರಿಯಳಿಗೆ ಕಾಣಿಸಿಕೊಂಡು ಅದನ್ನು ದೃಢೀಕರಿಸುತ್ತಾರೆ. “ನೀನು ನನ್ನ ಸಹೋದರರ ಬಳಿಗೆ ಹೋಗಿ ನನ್ನ ಪಿತನೂ ನಿಮ್ಮ ಪಿತನೂ, ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನಲ್ಲಿಗೆ ನಾನು ಏರಿ
ಹೋಗುತ್ತೇನೆಂದು ತಿಳಿಸು ಎಂದು ಹೇಳಿದರು”
(ಯೊವಾನ್ನ ೨೦:೧೭).
ಪ್ರಭುಕ್ರಿಸ್ತ ಮಾನವಕುಲದ
ರಕ್ಷಣೆಯ ಸೇವೆಯನ್ನು ಈ ವಿಶ್ವದಲ್ಲಿ ಫಲದಾಯಕವಾಗಿ ಸಂಪೂರ್ಣಗೊಳಿಸಿ ಮತ್ತೆ ತಂದೆಯ ಮಹಿಮೆಯ
ಬಲಪಾರ್ಶ್ವದಲ್ಲಿ ಆಸೀನರಾಗಿ ಸಮಸ್ತಕ್ಕೂ ಒಡೆಯರಾಗಿದ್ದಾರೆ. ‘ಅವರ ರಾಜ್ಯಭಾರಕ್ಕೆ ಅಂತ್ಯವೇ ಇರದು’. ಅವರು ದೈವ ಯೋಜನೆಯನ್ನು
ಸಂಪೂರ್ಣಗೊಳಿಸಿ ಮಾನವಕುಲವನ್ನು ಪುನರ್ ಸ್ಥಾಪಿಸಲು ತಮ್ಮನ್ನೇ ಸರ್ವಾಂಗಹೋಮವಾಗಿ ಸಮರ್ಪಿಸಿದರು.
ತಮಗೆಂದು ಅವರು ಏನನ್ನೂ ಹಿಡಿದಿಟ್ಟುಕೊಳ್ಳಲಿಲ್ಲ (ಫಿಲಿಪ್ಪಿ ೨:೬-೧೧). ಎಲ್ಲವನ್ನೂ ಸಮಸ್ತ
ಜನತೆಯ ಒಳಿತಿಗಾಗಿ ಮುಡಿಪಾಗಿಟ್ಟಿದ್ದರು.
ಪ್ರಭು ಕ್ರಿಸ್ತ ಈ ಲೋಕಕ್ಕೆ
ಬಂದದ್ದು ಸ್ವರ್ಗಸಾಮ್ರಾಜ್ಯವನ್ನು ಸ್ಥಾಪಿಸಲು. ಅದು ಈಗಾಗಲೇ ಪ್ರಾರಂಭವಾಗಿದೆ. ಅದು ಪ್ರೀತಿ
ಹಾಗೂ ಸಮಾನತೆಯ ಸಾಮ್ರಾಜ್ಯ. ಮಾನವ-ಮಾನವರ ನಡುವೆ ಇದ್ದ (ಇರುವ) ಭಿನ್ನ ಭೇದಗಳೆಂಬ ಗೋಡೆಗಳನ್ನು
ಕೆಡವಿ ಸಾಮರಸ್ಯವನ್ನು ಬಿತ್ತಿ, ಸ್ವಾರ್ಥದ ಬಿರುಕುಗಳನ್ನು ಮುಚ್ಚಿ, ಎಂದೂ ಅಳಿಯದ, ದೈವೀಸ್ನೇಹದ ಅಪ್ಪಟ ಪ್ರೀತಿಯ ಸಾಮ್ರಾಜ್ಯ. ಅದನ್ನು
ಸ್ಥಾಪಿಸಲು ಅವರು ಯುದ್ಧಗಳನ್ನು ಮಾಡಲಿಲ್ಲ ಬದಲಾಗಿ ತಮ್ಮ ಪಾಡು, ಮರಣ ಹಾಗೂ ಪುನರುತ್ಥಾನದಿಂದ
ಸ್ಥಾಪಿಸಿದ್ದಾರೆ. ಅದು ಈ ಲೋಕದಲ್ಲಿ ರಾಜಮಹಾರಾಜರುಗಳು ಸ್ಥಾಪಿಸಿದಂತಹ ರಾಜ್ಯವಾಗಿರಲಿಲ್ಲ.
ಏಕೆಂದರೆ ಈ ಲೋಕದ ಎಲ್ಲಾ ಸಾಮ್ರಾಜ್ಯಗಳಿಗೂ ನಿಕರವಾದ ಎಲ್ಲೆಗಳಿದ್ದವು. ನಿರ್ದಿಷ್ಟ ರಾಜ ಅಥವಾ
ಚಕ್ರವರ್ತಿಗಳಿದ್ದರು. ಇಂದು ಇತಿಹಾಸದಲ್ಲಿ ಅವರೆಲ್ಲರೂ ಮಾಯವಾಗಿದ್ದಾರೆ. ಕಾರಣ ಅವರಾರೂ ಅಳಿಯದ
ರಾಜ್ಯವನ್ನು ಕಟ್ಟುವ ಕಾಯಕ ಮಾಡಲೇ ಇಲ್ಲ. ಅವರಲ್ಲಿ ದೈವಿರಾಜ್ಯದ ಕನಸೇ ಇರಲಿಲ್ಲ. ಅವರೆಲ್ಲರೂ
ತಮ್ಮ ಸ್ವಾರ್ಥದ ಸುಳಿಯಲ್ಲಿ ಸಿಲುಕಿ ತಮ್ಮ ತಮ್ಮ ರಾಜ್ಯಗಳೇ ಅತಿ ಮುಖ್ಯವೆಂದು ಅದನ್ನು
ಉಳಿಸಿಕೊಳ್ಳುವುದರಲ್ಲಿಯೇ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.
ಆದರೆ ಪ್ರಭು ತಮ್ಮ
ನಿಸ್ವಾರ್ಥಸೇವೆಯಿಂದ ಪ್ರಾರಂಭದಿಂದಲೇ ದೈವೀ ರಾಜ್ಯವನ್ನು ಕಟ್ಟಲು ಪ್ರಾರಂಭಿಸಿದರು. ಅದು ಅವರ
ಪರಮ ಗುರಿಯಾಗಿತ್ತು. ಆ ಕಾರಣ ಆ ರಾಜ್ಯದ ಬಗ್ಗೆ ಸರ್ವಜನತೆಗೆ ಸಾರಿ ಹೇಳಿದರು. ಅದಲ್ಲದೆ ‘ನನ್ನ ಸಾಮ್ರಾಜ್ಯ ಈ ಲೋಕದ್ದಲ್ಲ’ (ಯೊವಾನ್ನ ೧೮:೩೬) ಎಂದು ಘಂಟಾಘೋಷವಾಗಿ ಜುದೇಯದ ರಾಜ್ಯಪಾಲ
ಪಿಲಾತ ಹಾಗೂ ಅಲ್ಲಿ ನೆರೆದ ಜನಸ್ತೋಮದ ಮುಂದೆ ಮುಕ್ತವಾಗಿ ಘೋಷಿಸಿದ್ದರು. ಹಾಗೆಯೇ ಪ್ರಭು ದೈವೀ
ರಾಜ್ಯದ ಸತ್ಯಗಳನ್ನು ಬೋಧಿಸಿದರು. ಅದರ ಕಿಚ್ಚನ್ನು ಎಲ್ಲರ ಅಂತರಂಗದಲ್ಲೂ ಹೊತ್ತಿ ಉರಿಯುವಂತೆ
ಮಾಡಿದರು. ಅದು ನಿರಂತರವಾಗಿ ಮಾನವರ ಅಂತರಂಗದಲ್ಲಿ ಬೆಳೆಯುವಂತೆಯೂ ಮಾಡಿದರು.
ಕೆಲವರು ಇದನ್ನು ಗ್ರಹಿಸಲು
ಪ್ರಯತ್ನಿಸಿದರೆ ಹಲವರು ಇನ್ನೂ ಸಹ ಅವರ ರಾಜ್ಯದಲ್ಲಿ ‘ಯಾರು
ಎಡಗಡೆ ಮತ್ತು ಯಾರು ಬಲಗಡೆ ಕುಳಿತುಕೊಳ್ಳುವುದು’ ಎಂದು ಕನಸುಕಾಣುತ್ತಲೇ ಇದ್ದರು. ಯಾಕೆಂದರೆ ಅವರ ಅಂತರಂಗದಲ್ಲಿ ಇನ್ನೂ
ಸಹ ಪ್ರಭುವಿನ ಸಂದೇಶ ಮೊಳೆಕೆಯೊಡೆಯುವಷ್ಟು ಫಲವತ್ತಾದ ವಿಶ್ವಾಸವೆಂಬ ಮಣ್ಣಿರಲಿಲ್ಲ. ಅವರ
ಅಂತರಂಗ ಲೌಕಿಕ ಆಶಾಪಾಶದಿಂದ ತುಂಬಿತ್ತು. ಅದು ಇಂದಿಗೂ ಸಹ ಸತ್ಯವೇ ಸರಿ!
ಪ್ರಭುವಿನ ಸಾಮ್ರಾಜ್ಯ
ಕಾಲಾನಂತರ ಅಳಿದು ಹೋಗುವಂತಹದ್ದಲ್ಲ. ಏಕೆಂದರೆ ಅದು ಬೌತಿಕ ಎಲ್ಲೆಗಳಿಗೆ ಸೀಮಿತವಾದದ್ದಲ್ಲ.
ಅದನ್ನು ಕಾಲಗಳಿಂದ ಕಟ್ಟಿಹಾಕಲು ಅಸಾಧ್ಯ, ಅದು ನಿತ್ಯ ನಿರಂತರ ಅಳಿಯದ ಅಮರ ಸಾಮ್ರಾಜ್ಯ. ಆ ಸಾಮ್ರಾಜ್ಯದ ಅರಸ
ಅವರೇ. ಅಲ್ಲಿ ಯಾರು ಕ್ರಿಸ್ತನಂತೆ ನಿಸ್ವಾರ್ಥ ಜೀವಿಗಳಾಗಿರುವರೋ ಅವರೆಲ್ಲರಿಗೂ ಪಾಲಿದೆ. “ನಾನು ಜಯಗಳಿಸಿ ನನ್ನ ತಂದೆಯೊಡನೆ
ಅವರ ಸಿಂಹಾಸನದಲ್ಲಿ ಕುಳಿತುಕೊಂಡಿದ್ದೇನೆ. ಅದೇ ಪ್ರಕಾರ ಜಯ ಹೊಂದಿದವನಿಗೆ ನನ್ನೊಡನೆ ನನ್ನ
ಸಿಂಹಾಸನದಲ್ಲಿ ಕುಳಿತುಕೊಳ್ಳುವ ಹಕ್ಕನ್ನು ನಾನು ಕೊಡುತ್ತೇನೆ” ಎಂಬ ವಾಗ್ದಾನವನ್ನು
ಮಾಡಿದ್ದಾರೆ (ಪ್ರಕಟನೆ ೩:೨೧).
ಇದು
ಮಾನವ ನಿರ್ಮಿತರಾಜ್ಯವಲ್ಲ, ದೈವ ನಿರ್ಮಿತವಾದುದು. ತಾತ್ಕಾಲಿಕವಾದುದಲ್ಲ ಶಾಶ್ವತವಾದುದು. ಈ ರಾಜ್ಯಕ್ಕೆ ಅಳಿವೂ ಇಲ್ಲ, ಅಂತ್ಯವೂ ಇಲ್ಲ. ಇದು ಶಾಂತಿಯ, ಸಮಾನತೆಯ ಸಾಮರಸ್ಯದ ರಾಜ್ಯ. ಈ
ರಾಜ್ಯಕ್ಕೆ ಕ್ರಿಸ್ತನೇ ಅಡಿಗಲ್ಲು. ಅವರ ಬೋಧನೆಗಳ ಸಾರವೇ ಶಕ್ತಿ. ಅವರ ಪಾಡು ಮರಣವೇ ಅದರ ಜೀವ.
ಅವರ ಪುನರುತ್ಥಾನವೇ ಅದರ ಪ್ರಗತಿಯ ಸಂಕೇತ. ಅವರ ಸ್ವರ್ಗಾರೋಹಣವೇ ನಮ್ಮ ಸ್ವರ್ಗಾರೋಹಣಕ್ಕೆ
ನಾಂದಿ. ಆದ್ದರಿಂದ ಕ್ರಿಸ್ತ ನಮ್ಮನ್ನು ಬಿಟ್ಟು ಹೋಗಿಲ್ಲ. ಅವರು ನಮಗಾಗಿ ಸಿದ್ಧಗೊಳಿಸಿರುವ
ನೀತಿಯ ಸಾಮ್ರಾಜ್ಯದ ರಾಜ್ಯಭಾರವನ್ನು ವಹಿಸಿಕೊಳ್ಳಲು ಈ ಲೋಕದಲ್ಲಿ ತಂದೆ ದೇವರು ತಮಗೆ ವಹಿಸಿದ್ದ
ಯೋಜನೆಯನ್ನು ಸಂಪೂರ್ಣವಾಗಿ ಸಫಲಗೊಳಿಸಿದ್ದಾರೆ. ಈಗ ಅವರು ಸಮಸ್ತಲೋಕದ ಒಡೆಯರಾಗಿ ಹಾಗೂ ನೈಜ
ನ್ಯಾಯಾಧಿಪತಿಯಾಗಿ ಸ್ವರ್ಗದಲ್ಲಿ ನಮ್ಮ ಪರವಾಗಿ ಬಿನ್ನಹಿಸುವವರಾಗಿದ್ದಾರೆ. ಅಂತಹ ರಾಜ್ಯದ ಪ್ರಜೆಗಳಾಗುವ
ನಾವು ಧನ್ಯರು!
-ಫಾದರ್ ವಿಜಯ್ ಕುಮಾರ್, ಬಳ್ಳಾರಿ