ಮನುಷ್ಯನೆಂಬ ಈ ಅಪ್ರಾಮಾಣಿಕ, ಅಸಹಾಯಕ ಜಂತುವಿನ ಮೇಲೆ
ನಿನಗೆ ಕರುಣೆಯೇ ಇಲ್ಲವೇ?
ಗುಣಮುಖ ನಾಟಕದಲ್ಲಿ ಕಂಡುಬರುವ ಪ್ರಾರ್ಥನೆಯ ಒಂದು ಸನ್ನಿವೇಶ:
ದೇವರೇ, ದೇವರೇ
ಮನುಷ್ಯನನ್ನು ಏಕಿಷ್ಟು ಕ್ಲಿಷ್ಟ ವಸ್ತುವಾಗಿ ಸೃಷ್ಟಿಸಿದೆ?
ಅವನ ಸೆರೆಮನೆಗಳೇ ಅವನಿಗೆ ಗೊತ್ತಿಲ್ಲ.
ಕಗ್ಗತ್ತಲಿನ ಕಾರಾಗೃಹದಿಂದ ಇನ್ನೂ ಕಗ್ಗತ್ತಲನ್ನುಳ್ಳ ಜಗತ್ತಿಗೆ ಇವನನ್ನು ತಳ್ಳಿದೆ
ಇಲ್ಲಿ ನೆನಪಿನ ಕಾರಾಗೃಹ. ನೋವಿನ ಕಾರಾಗೃಹ.
ಅಹಂಕಾರದ ಕಾರಾಗೃಹ; ದೇಹವೆಂಬ ಪಂಚೇಂದ್ರಿಯಗಳ
ಕೋಟ್ಯಂತರ ನರಗಳ, ಅಸಂಖ್ಯಾತ ನೆನಪುಗಳ ಕಾರಾಗೃಹ.
ತಪ್ಪಿಸಿಕೊಳ್ಳಲು ದಾರಿಗಳೇ ಇಲ್ಲದ ಈ ಶರೀರ ಕಾರಾಗೃಹ
ನಾಶವಾಗುತ್ತಿದ್ದರೂ ಎಲ್ಲರನ್ನೂ ಆಳುವ, ಹತ್ತಿಕ್ಕುವ ಕೊಲ್ಲುವ ಧಿಮಾಕು.
ದೇವರೇ, ದೇವರೇ,
ಮನುಷ್ಯನೆಂಬ ಈ ಅಪ್ರಾಮಾಣಿಕ, ಅಸಹಾಯಕ ಜಂತುವಿನ ಮೇಲೆ
ನಿನಗೆ ಕರುಣೆಯೇ ಇಲ್ಲವೇ?
ಭಟ್ಟಂಗಿತನ ಬಗ್ಗೆ ಹೇಳುವಾಗ ನಟರಾಜ್ ಹುಳಿಯಾರ್ ಪಿ. ಲಂಕೇಶ್ ನವರೊಡನೆ ಆದ ಒಂದು ಅನುಭವವನ್ನು
ಹೇಳುತ್ತಾರೆ:
ಅವೊತ್ತು ನಿರ್ದೇಶಕನೊಬ್ಬ ಲಂಕೇಶರ ಆ ವಾರದ ಟೀಕೆ ಟಿಪ್ಪಣಿಯ ಹಾಗೂ ಆ ಸಂಚಿಕೆಯ ಸಾಲುಗಳನ್ನೂ
ಕಣ್ಣಾಮುಚ್ಚಾಲೆ ಎಂಬ ತುಂಟ ಪ್ರಶ್ನೋತ್ತರಗಳ ಅಂಕಣದ ಉತ್ತರಗಳನ್ನೂ ಉರು ಹೊಡೆದವನಂತೆ
ಒಪ್ಪಿಸತೊಡಗಿದ.. ಅದೆಲ್ಲ ಆತ ಮೊದಲೇ ಸಿದ್ಧಪಡಿಸಿಕೊಂಡ ಚಿತ್ರಕತೆಯಂತೆ ಕಾಣಿಸತೊಡಗಿತ್ತು. ಆದ
ಹೋದ ನಂತರ ಲಂಕೇಶರು ಸುಮ್ಮನೆ ಹೇಳಿದ ಮಾತು: "ನಾಯಿಗಳು ಎಷ್ಟು ಲವ್ಲಿ ಎಂದರೆ ಅವಕ್ಕೆ
ಅಫೆಕ್ಷನೇಟ್ ಆಗಿ ಇರೋದು ಮಾತ್ರ ಗೊತ್ತಿರುತ್ತದೆ. ಭಟ್ಟಂಗಿತನ ಗೊತ್ತಿರಲ್ಲ.."
ಗಾಂಧೀಜಿ: "ರಸ್ಕಿನ್ನನ 'ಅನ್ ಟು ದಿಸ್ ಲಾಸ್ಟ್' ಎಂಬ ಪುಸ್ತಕ ಓದಲು
ಪ್ರಾರಂಭಿಸಿದ್ದೇ ತಡ, ಅದನ್ನು ಕೆಳಗಿಸಲು ಸಾಧ್ಯವಾಗಲಿಲ್ಲ. ಅದು ನನ್ನ ಮನಸ್ಸನ್ನು ಸೆರೆಹಿಡಿಯಿತು.
ಆ ಪುಸ್ತಕದಲ್ಲಿ ಹೇಳಿದ್ದ ಧ್ಯೇಯಗಳಗನುಸಾರವಾಗಿ ನನ್ನ ಜೀವನವನ್ನು ಬದಲಾಯಿಸಬೇಕೆಂದು ನಾನು
ನಿರ್ಣಯಿಸಿಕೊಂಡೆ. ನನ್ನ ಬಾಳಿನಲ್ಲಿ ತತ್ ಕ್ಷಣ ಪರಿಣಾಮಕಾರಿಯಾದ ಬದಲಾವಣೆಯನ್ನು ಮಾಡಿದುದು
'ಅನ್ ಟು ದಿಸ್ ಲಾಸ್ಟ್' ಎಂಬ ಪುಸ್ತಕ. ಆನಂತರ ನಾನು ಆ ಪುಸ್ತಕವನ್ನು ಸರ್ವೋದಯವೆಂಬ ಹೆಸರಿನಿಂದ
ಗುಜರಾತಿಗೆ ಅನುವಾದ ಮಾಡಿದೆ. 'ಅನ್ ಟು ದಿಸ್ ಲಾಸ್ಟ್' ಗ್ರಂಥದ ಸಿದ್ಧಾಂತಗಳನ್ನು ನಾನು ಹೀಗೆ
ತಿಳಿದೆ". ಎಲ್ಲರ ಒಳ್ಳೆಯದರಲ್ಲಿಯೇ ನಮ್ಮ ಒಳೆಯದು ಅಡಗಿದೆ. ವಕೀಲನ ಕೆಲಸಕ್ಕೆ ಇರುವ ಬೆಲೆಯೇ ಕ್ಷೌರಿಕನ ಕೆಲಸಕ್ಕೂ ಇದೆ. ತಮ್ಮ
ಕೆಲಸದಿಂದ ಜೀವನ ನಿರ್ವಹಿಸಲು ಎಲ್ಲರಿಗೂ ಸಮಾನವಾದ ಹಕ್ಕಿದೆ.ಶ್ರಮ ಜೀವಿಯ ಜೀವನ. ಉಳುವವನ ಅಥವ ಕೈಕಸುಬುಗಾರನ ಜೀವನವೇ ಯೋಗ್ಯ
ಜೀವನ.
ತೇಜಸ್ವಿಯವರು ತಮಗೆ `ಪಂಪ ಪ್ರಶಸ್ತಿ' ಬಂದಾಗ ಸಂದರ್ಶನವೊಂದರಲ್ಲಿ ಹೇಳಿದ ಮಾತುಗಳು
ಹೀಗಿವೆ. "ನಮ್ಮ ಅಂತಿಮ ಸವಾಲು ಇರೋದು ಪ್ರಶಸ್ತಿ ಗೆಲ್ಲೋದರಲ್ಲಿ ಅಲ್ಲ, ಓದುಗರನ್ನು
ತಲುಪುವುದರಲ್ಲಿ. ಭಾಷೆ, ಸಾಹಿತ್ಯ ಎರಡೂ ಕಮ್ಯೂನಿಕೇಷನ್‍ಗೇ ಇರೋದು. ಬರೆದು ಗೆಲ್ಲಬೇಕೇ ವಿನಃ ಪ್ರಶಸ್ತಿಯ
ಬೆನ್ನು ಹತ್ತಬಾರದು" (ಹೊಸ ವಿಚಾರಗಳು ಪುಸ್ತಕದಿಂದ)
No comments:
Post a Comment