ಪ್ರಭು ಯೇಸುಸ್ವಾಮಿಯ ಸಾಕುತಂದೆ ಸಂತ ಜೋಸೆಫರು ಎಂದ ಕೂಡಲೇ ನಮಗೆ ಕ್ರಿಸ್ಮಸ್ ಕೊಟ್ಟಿಗೆ, ಕೊಟ್ಟಿಗೆಯ ಗೋದಲಿಯಲ್ಲಿನ ಹಸುಗೂಸು ಯೇಸು, ಅಕ್ಕಪಕ್ಕ ಯೌವ್ವನಸ್ಥಳಾದ ಕನ್ಯಾಮಾತೆ ಮರಿಯ, ತಂದೆ ಜೋಸೆಫರು, ದೇವದೂತರ ಗಣ, ಮಿಂಚುವ ನಕ್ಷತ್ರ ಮತ್ತು ಮೂರು ರಾಯರ ಚಿತ್ರಣ ಕಣ್ಮುಂದೆ ಮೂಡುತ್ತದೆ. ಅದರೊಳಗಿನ ಜೋಸೆಫರ ನಿಲುವು ಮಧ್ಯವಯಸ್ಸು ಮೀರಿದ, ಬೋಳು ತಲೆಯ, ಉದ್ದ ಗಡ್ಡಮೀಸೆಯ ಕೋಲು ಹಿಡಿದ ಪುರುಷನನ್ನು ಹೋಲುತ್ತದೆ. ಕೆಲವೊಮ್ಮೆ ಈ ಸಂತ ಜೋಸೆಪ್ ರನ್ನು ಮಧ್ಯವಯಸ್ಸಿನ ದೃಢವಾದ ಮೈಕಟ್ಟಿನ ವ್ಯಕ್ತಿಯಾಗಿಯೂ ಚಿತ್ರಿಸಲಾಗಿದೆ. ಹಲವಾರು ಚಿತ್ರಗಳಲ್ಲಿ ಜೋಸೆಫರನ್ನು ಬಡಿಗನಂತೆ ಚಿತ್ರಿಸಲಾಗಿದೆ. ಕೆಲವುದರಲ್ಲಿ ಆತ ಯೇಸುಸ್ವಾಮಿಗೆ ಬಡಿಗತನವನ್ನು ಕಲಿಸುತ್ತಿದ್ದುದನ್ನು ಚಿತ್ರಿಸಲಾಗಿದೆ.
ಕಥೋಲಿಕರ ಮನೆಗಳಲ್ಲಿರುವ ಪವಿತ್ರ ಕುಟುಂಬದ ಚಿತ್ರಗಳಲ್ಲಿ, ಸ್ವರೂಪಗಳಲ್ಲಿ ಮತ್ತು ಕಥೋಲಿಕ ಪಂಥದ ಕ್ರೈಸ್ತರ ಚರ್ಚುಗಳಲ್ಲಿನ ದೊಡ್ಡಸ್ವರೂಪಗಳಲ್ಲಿ ನಾವು ಸಂತ ಜೋಸೆಫರನ್ನು ನೋಡಿದ್ದೇವೆ. ಆದರೆ, ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ, ಸಂತ ಜೋಸೆಫರ ಸ್ವರೂಪಗಳಲ್ಲಿ, ಚಿತ್ರಣಗಳಲ್ಲಿ ಒಂದು ವಿಶೇಷತೆಯನ್ನು ಕಾಣುತ್ತೇವೆ. ಅದು, ಸಂತ ಜೋಸೆಫರು ಒಂದು ಕೋಲನ್ನು ಹಿಡಿದುಕೊಂಡಿದ್ದಾರೆ. ಮತ್ತು ಆ ಕೋಲಿನಲ್ಲಿ ಬಳ್ಳಿಯೊಂದು ಅರಳಿದಂತೆ ಕಂಡು, ತುದಿಯಲ್ಲಿ ಹಲವಾರು ಬಿಳಿ ಮಲ್ಲಿಗೆ ಹೂವುಗಳು ಅರಳಿ ನಿಂತಿರುವುದನ್ನು ಕಾಣುತ್ತೇವೆ. ಮಲ್ಲಿಗೆ ಹೂವುಗಳು ಪವಿತ್ರತೆಯ ಸಂಕೇತ. ಕನ್ಯಾಮಾತೆ ಮರಿಯಳ ಕನ್ಯತ್ವವನ್ನು ಪವಿತ್ರವಾಗಿ ಕಂಡು ಗೌರವಿಸಿದ ಜೋಸೆಫರು, ದೈಹಿಕ ಸಂಪರ್ಕದಿಂದ ದೂರವೇ ಉಳಿದಿದ್ದರು. ಆವರದು, ಪರಲೋಕದ ದೇವಸುತ ಯೇಸುಸ್ವಾಮಿಯನ್ನು ಭೂಲೋಕದಲ್ಲಿ ಸಾಕು ತಂದೆಯಾಗಿ ಸಲುಹಿದ ಪವಿತ್ರ ಜೀವ.
ಕೊನರಿದ ಸಂತ ಜೋಸೆಫ್ ರ ಕೋಲು:
ಜೋಸೆಫರ ಕೈಯಲ್ಲಿ ಈ ಕೋಲು, ಅದರ ತಲೆಯಲ್ಲಿ ಹೂವುಗಳು ಎಲ್ಲಿಂದ ಬಂದವು? ಇಸ್ರೇಲಿನ ಸಮುದಾಯದವರಲ್ಲಿನ ಅಂದಿನ ಸಂಪ್ರದಾಯದಂತೆ, ಮಾತೆ ಮರಿಯಳು ಮೂರು ವರ್ಷದವಳಾಗಿದ್ದಾಗ, ಹರಕೆ ಹೊತ್ತಿದ್ದ ತಂದೆ ಜೋಕಿಮ್ ಮತ್ತು ತಾಯಿ ಅನ್ನಾ ಅವರು, ಮಗಳು ಕನ್ಯೆಯಾಗಿದ್ದು ದೇವರ ಸೇವೆಯಲ್ಲಿ ತೊಡಗಿರಲೆಂದು ತಮ್ಮೂರು ಜೆರುಸಲೇಮಿನಲ್ಲಿನ ದೇವಸ್ಥಾನದ ಸೇವೆಗೆ ಒಪ್ಪಿಸಿದ್ದರು.
ಕನ್ಯೆಯಾಗಿದ್ದ ಮರಿಯಳು ಪ್ರೌಢಾವಸ್ಥೆಗೆ ಮುಟ್ಟಿ ದೊಡ್ಡವಳಾಗುವ ಸಂದರ್ಭದಲ್ಲಿ, ದೇವಸ್ಥಾನದ ಪರಮೋಚ್ಚ ಪೂಜಾರಿ, ಪ್ರೌಢಾವಸ್ಥೆ ಮುಟ್ಟಿದ ಎಲ್ಲ ಕನ್ಯೆಯರನ್ನು ಅವರವರ ಮನೆಗಳಿಗೆ ಕಳುಹಿಸಲು ನಿರ್ಧಾರ ಕೈಗೊಂಡ. ಲೋಕರೂಢಿಯಂತೆ ಅವರು ಮದುವೆಯಾಗಿ ಸಂಸಾರಸ್ಥರಾಗಿ ಮನೆಗಳನ್ನು ಬೆಳಗಲಿ ಎಂಬುದು ಅವನ ಉದ್ದೇಶವಾಗಿತ್ತು. ಆದರೆ, ಮರಿಯಳು ತನ್ನ ತಂದೆ ತಾಯಿಗಳು `ನನ್ನನ್ನು ದೇವರ ಸೇವೆಗೆ ಒಪ್ಪಿಸಿದ್ದರು, ನಾನೂ ಸರ್ವೇಶ್ವರ ದೇವರಿಗೆ ಸಮರ್ಪಿಸಿಕೊಂಡಿರುವೆ' ಎಂದು ಮನೆಗೆ ಹೋಗದೇ ಪಟ್ಟು ಹಿಡಿದಳು. ಆಗ, ಸಂಕಷ್ಟಗಳು ಎದುರಾದಾಗ ನಮ್ಮ ನಾಡಿನಲ್ಲಿನ ಪೂಜಾರಿಗಳು ದೇವರಿಗೆ ಮೊರೆ ಇಡುವಂತೆ, ಜೆರುಸಲೇಮಿನಲ್ಲಿನ ಸರ್ವೇಶ್ವರ ದೇವರ ದೇವಸ್ಥಾನದ ಪರಮೋಚ್ಚ ಪೂಜಾರಿ, `ದೇವರೆ, ಈ ಹುಚ್ಚು ಹುಡುಗಿ ಮನೆಗೆ ಹೋಗಿ, ಎಲ್ಲರಂತೆ ಮದುವೆಯಾಗಿ ಸಂಸಾರ ನಡಸುವುದಕ್ಕೆ ಹಿಂದೇಟು ಹಾಕುತ್ತಿದ್ದಾಳೆ. ಈಗ ನಾನೇನು ಮಾಡಲಿ? ದಾರಿ ಕಾಣದು, ನೀನೆ ನನಗೆ ದಾರಿ ತೋರಿಸು' ಎಂದು ಮೊರೆಯಿಟ್ಟ.
ಆಗ, ಅವನಿಗೆ ಅಶರೀರವಾಣಿಯೊಂದು ಕೇಳಿಸಿತು. `ಎಲೈ ನನ್ನ ಸೇವಕ ಪೂಜಾರಿ, ನಾನು ಹೇಳಿದಂತೆ ಮಾಡು. ಹೋಗು, ಅರಸ ದಾವಿದನ ವಂಶಸ್ಥರ ಕುಟುಂಬಗಳಲ್ಲಿರುವ ಮದುವೆಯಾಗದ ಎಲ್ಲಾ ಪುರುಷರು, ತಮ್ಮ ಹೊಲದಲ್ಲಿನ ಮರಗಳಲ್ಲಿನ ಒಂದೊಂದು ನೀಟಾದ ರೆಂಬೆಯಿಂದ ಕೋಲು ಮಾಡಿಕೊಂಡು ಬಂದು, ದೇವರ ಪೀಠದ ಹತ್ತಿರದ ಜಗಲಿಯ ಮೇಲೆ ಇರಿಸುವಂತೆ ಪಟ್ಟಣದಲ್ಲಿ ಸಾರಿಕೆ ಇಡು' ಎಂಬ ದೈವ ವಾಕ್ಯ ಕಿವಿಗೆ ಅಪ್ಪಳಿಸಿತು.
ಅರ್ಹನ ಕೋಲು ಚಿಗುರಿ ಹೂವು ಬಿಡುವುದು:
ಆಗ ಆ ಪೂಜಾರಿ, `ಆಯಿತು ಪ್ರಭು ಮುಂದೇನು?' ಎಂದು ತನ್ನ ಅನುಮಾನವನ್ನು ದೇವರ ಮುಂದಿರಿಸಿದಾಗ, `ಯಾವ ಪುರುಷನು, ಮರಿಯಳನ್ನು ವರಿಸಲು ಅರ್ಹನಾಗಿರುವನೋ, ಅವನ ಕೋಲು ಚಿಗಿತು ಹೂವು ಬಿಡುವುದು. ಇಷ್ಟಲ್ಲದೇ, ಪವಿತ್ರಾತ್ಮರು ಪಾರಿವಾಳದ ರೂಪದಲ್ಲಿ ಬಂದು, ಆ ಪುರುಷನ ತಲೆಯ ಮೇಲೆ ಹಾರಾಡಿ, ಆ ಚಿಗಿತು ಹೂಬಿಟ್ಟ ಕೋಲಿನ ಮೇಲೆ ಕುಳಿತುಕೊಳ್ಳುವರು. ಇದು ನಿಶ್ಚಯ' ಎಂಬ ಅಧಿಕಾರಯುತ ವಾಣಿಯು ಕೇಳಿಸಿತು.
ಅಬ್ರಹಾಂ, ದಾವಿದರ ದೇವರಾದ ಜೆರುಸಲೇಮ್ ಪಟ್ಟಣದಲ್ಲಿರುವ ಅರಸ ಸಾಲೋಮನ್ ಕಟ್ಟಿಸಿದ ದೇವಸ್ಥಾನದ ಸರ್ವೇಶ್ವರ ದೇವರ ಅಪ್ಪಣೆಯಂತೆ, ದೇವಸ್ಥಾನದ ಪೂಜಾರಿ ಪಟ್ಟಣದಲ್ಲಿ ಡಂಗುರ ಸಾರಿಸಿದ.
ಪಟ್ಟಣದಲ್ಲಿನ ದಾವಿದ ವಂಶಸ್ಥರ ಕುಟುಂಬಗಳಿಗೆ ಸೇರಿದ ಮದುವೆಯಾಗದ, ಹೆಂಡತಿಯನ್ನು ಕಳೆದುಕೊಂಡ ಪುರುಷರೆಲ್ಲರೂ, ದೇವಸ್ಥಾನದ ಪರಮೋಚ್ಚ ಪೂಜಾರಿಯು ಸಾರಿಸಿದ ಡಂಗುರವನ್ನು ಕೇಳಿಸಿಕೊಂಡು, ಅದರಂತೆಯೇ ತಮ್ಮ ತಮ್ಮ ಹೊಲಗಳಲ್ಲಿನ ಮರಗಳಲ್ಲಿನ ಒಂದೊಂದು ನೀಟಾದ ರೆಂಬೆಗಳನ್ನು ಕತ್ತರಿಸಿ, ಅವುಗಳನ್ನು ಕೋಲಿನಂತೆ ಸಜ್ಜು ಮಾಡಿಕೊಂಡು, ಒಬ್ಬೊಬ್ಬರೆ, ಒಂದೊಂದು ಕೋಲಿನೊಂದಿಗೆ ದೇವಸ್ಥಾನಕ್ಕೆ ಬಂದರು. ಪೂಜಾರಿ ಹೀಗೇಕೆ ಮಾಡುತ್ತಿದ್ದಾನೆ ಎಂಬ ಸುಳಿವು ಅವರಿಗಿರಲಿಲ್ಲ. `ಕೋಲು ಕುರಿಗಾಹಿಗಳ ಸಂಗಾತಿ. ಹಿರಿಯರಿಗೆ ಊರುಗೋಲು. ಯುವಕರಿಗೆ, ಭಟರಿಗೆ ಹೊಡೆದಾಟದ ಸಾಧನ. ಯಾಕಾಗಿ ಈ ಪರಮೋಚ್ಚ ಪೂಜಾರಿ ನಮ್ಮಿಂದ ಈ ಕೋಲಿನ ಕೆಲಸ ಮಾಡಿಸುತ್ತಿದ್ದಾನೆ? ಬಹುಶಃ ದೇವರ ಅಪ್ಪಣೆಯಾಗಿರಬೇಕು' ಎಂದು ತಮ್ಮತಮ್ಮಲ್ಲಿ ವಿಚಾರಿಸಿಕೊಳ್ಳುತ್ತಾ ದೇವಸ್ಥಾನಕ್ಕೆ ದೌಡಾಯಿಸಿದ್ದರು. ಅವರಿಂದ ಪಡೆದ ಎಲ್ಲಾ ಕೋಲುಗಳಿಗೆ ಅವರವರ ಹೆಸರಿನ ಚೀಟಿ ಅಂಟಿಸಿ, ದೇವರ ಪೀಠದ ಜಗಲಿಯ ಮೇಲೆ ಇರಿಸಲಾಯಿತು.
ರಾತ್ರಿ ಕಳೆದು ಬೆಳಗಾಯಿತು. ದೇವಸ್ಥಾನದಲ್ಲಿನ ದೇವರ ಪೀಠದ ಜಗಲಿಯ ಮೇಲೆ ತಮ್ಮ ತಮ್ಮ ಹೊಲಗಳಲ್ಲಿರುವ ಮರದ ರೆಂಬೆಗಳನ್ನು ನೀಟಾದ ತಲಾ ಒಂದೊಂದು ಕೋಲುಗಳನ್ನು ತಂದಿರಿಸಿದ್ದ ಮದುವೆಯಾಗದ, ದಾವಿದ ವಂಶಸ್ಥರ ಕುಟುಂಬಗಳಿಗೆ ಸೇರಿದ್ದ ಪುರುಷರು, ಮರುದಿನ ಬೆಳಿಗ್ಗೆ ದೇವಸ್ಥಾನದ ಮುಂದೆ ನೆರೆದಿದ್ದರು. ಅವರೊಂದಿಗೆ ಊರಲ್ಲಿಯ ಜನರೂ ಅಲ್ಲಿ ಬಂದು ನೆರೆದಿದ್ದರು. ದೇವಸ್ಥಾನದ ಪರಮೋಚ್ಚ ಪೂಜಾರಿ ಬಂದು, ಹೆಬ್ಬಾಗಿಲನ್ನು ತೆರೆದು, ಪೂಜಾ ಅಂಕಣದ ಕೋಣೆಗೆ ಹೋಗುತ್ತಿದ್ದಂತೆಯೇ, ಅವನ ಹಿಂದೆಯೇ ಬಂದವರ ಕಣ್ಣುಗಳು ದೇವರ ಪೀಠದ ಜಗಲಿಯ ಮೇಲೆಯೇ ನೆಟ್ಟಿದ್ದವು. ಪರಮೋಚ್ಚ ಪೂಜಾರಿ, ದೇವರನಾಮಕ್ಕೆ ಸ್ತೋತ್ರ ಹೇಳುತ್ತಾ ಒಂದೊಂದೇ ಕೋಲನ್ನು ಎತ್ತಿ ಹಿಡಿದು ದೇವರು ಮುಂಗಾಣಿಸಿದಂತೆ ಹೂವುಗಳ ಇರುವನ್ನು ಹುಡುಕುತ್ತಾ ಅದಕ್ಕೆ ಕಟ್ಟಿದ್ದ ಚೀಟಿಯಲ್ಲಿನ ಹೆಸರನ್ನು ಕೂಗುತ್ತಿದ್ದ. ಆಯಾ ಪುರುಷರಿಗೆ ಅವರವರ ಹೆಸರಿನ ಕೋಲನ್ನು ಹಿಂದಿರುಗಿಸುತ್ತಾ ನಡೆದ. ಪಟ್ಟಣದಲ್ಲಿ ದಾವಿದನ ವಂಶಕ್ಕೆ ಸೇರಿದ ಎಷ್ಟೊಂದು ಕುಟುಂಬಗಳಿದ್ದವು. ಹೀಗಾಗಿ, ಕೋಲುಗಳ ಸಂಖ್ಯೆಯೂ ಅಧಿಕವಾಗಿತ್ತು. ಮದುವೆಯಾಗದ ಪುರುಷರಲ್ಲಿ ಯುವಕರು, ಮಧ್ಯ ವಯಸ್ಕರು, ವೃದ್ಧರು, ವಿಧುರರು ಹೀಗೆ ಎಲ್ಲರೂ ಕೋಲನ್ನು ತಂದಿರಿಸಿದ್ದರು.
ಸರ್ವೇಶ್ವರ ದೇವರ ಮಹಿಮೆ ಅಪರಂಪಾರ:
ಎಲ್ಲಾ ಕೋಲುಗಳನ್ನು ಎತ್ತಿನೋಡಿ, ಅವರವರ ಹೆಸರಿನ ಪುರುಷರಿಗೆ ಹಿಂದಿರುಗಿಸುವುದರಲ್ಲಿ ಪೂಜಾರಿ ಹೈರಾಣಾಗಿ ಸುಸ್ತಾಗಿ ಕುಳಿತಿದ್ದ. ಅವನು, ಸ್ವಲ್ಪ ಸುಧಾರಿಸಿಕೊಂಡು ಕೊನೆಗೆ ಉಳಿದ ಒಂದೆರಡು ಕೋಲುಗಳನ್ನು ಎತ್ತಿ ಕೊಡುವಾಗ, ಜೋಸೆಫ್ ಹೆಸರಿನ ಕೋಲು ಚಿಗಿತು, ಹೂವು ಬಿಟ್ಟಿತ್ತು. `ಆಹಾ ದೇವರ ಮಹಿಮೆ, ದೇವರಿಗೆ ಸ್ತುತಿಯಾಗಲಿ' ಎನ್ನುತ್ತಾ ಆ ಹೆಸರನ್ನು ಕೂಗಿ ಕರೆದು ಅವನ ಕೈಗೆ ಕೋಲು ಕೊಡುವಾಗ ನೋಡುತ್ತಾನೆ, ಅವನು ಯುವಕನಲ್ಲ ಮಧ್ಯವಯಸ್ಸು ಮೀರಿದ ಪುರುಷ. ವಿಧುರ ಜೋಸೆಫನ ಕೈಯಲ್ಲಿನ ಚಿಗುರೆಡೆದು ಹೂವು ಬಿಟ್ಟ ಕೋಲನ್ನು ಕಂಡ ಅಲ್ಲಿ ನೆರೆದಿದ್ದ ಮದುವೆಯಾಗದ ಪುರುಷರಿಗೆ, ಈ ವಿದ್ಯಮಾನ ನೋಡಿದ ಜನರಿಗೆ ಅಚ್ಚರಿ ಉಂಟಾಯಿತು. ಕೋಲು ಕೊನರಿದ್ದು ಅವರಿಗೆ ವಿಚಿತ್ರ ವಿದ್ಯಮಾನವಾಗಿ ಕಂಡಿತ್ತು. ಜೋಸೆಫರ ಕೈಗೆ ಹೂಬಿಟ್ಟ ಕೋಲು ಸೇರುತ್ತಿದ್ದಂತೆಯೇ, ಅದೆಲ್ಲಿತ್ತೋ, ಒಂದು ಬಿಳಿ ಪಾರಿವಾಳ ಹಾರಿ ಬಂದು ಅವನ ತಲೆಯ ಮೇಲೆ ಹಾರಾಡಿ, ಕೋಲಿನ ಮೇಲೆ ಬಂದು ಕುಳಿತಿದ್ದು, ಅಲ್ಲಿ ನೆರೆದ ಜನಕ್ಕೆ ಮತ್ತಷ್ಟು ದಿಗ್ಭ್ರಮೆ ಮೂಡಿಸಿತು.
`ದೇವ ಮಹಿಮೆ ಅಪರಂಪಾರ' ಎಂದ ದೇವಸ್ಥಾನದ ಪರಮೋಚ್ಚ ಪೂಜಾರಿ, `ನೋಡಿ, ಪುರದ ಜನರೆ. ಬಾಲ್ಯದಲ್ಲಿಯೇ ದೇವಸ್ಥಾನದ ಸೇವೆಗೆ ಬಂದ ಬಾಲಕಿಯರು ಈಗ ಪ್ರೌಢಾವಸ್ಥೆಗೆ ಬಂದಿದ್ದು, ಅವರಲ್ಲಿ ಜೋಕಿಮ್ ಮತ್ತು ಅನ್ನಾರ ಮಗಳು ಮನೆಗೆ ಹಿಂದಿರುಗಲು ಹಿಂದೇಟು ಹಾಕುತ್ತಿದ್ದಳು. ಮದುವೆ ನಿರಾಕರಿಸಿ, ಮತ್ತೆ ಸರ್ವೇಶ್ವರನ ಸೇವೆ ನಿರ್ಧರಿಸಿದ್ದಳು. ಆದರೆ, ದೇವರು ಸರ್ವೇಶ್ವರರ ಚಿತ್ತ ಬೇರೆಯೇ ಆಗಿತ್ತು. ಇಂದು ನಡೆದದ್ದು, ಕನ್ಯಾ ಮರಿಯಳ ಸ್ವಯಂವರ. ಇದು ದೇವರು ಎದುರು ನಿಂತು ಕಲ್ಪಿಸಿದ ಸಂಬಂಧ. ಯಾರ ಕೋಲು ಕೊನರಿ ಹೂವು ಬಿಡುವುದೋ, ಅವನನ್ನು ಮರಿಯಳು ವರಿಸಬೇಕು ಎಂದು ದೈವ ನಿಶ್ಚಯವಾಗಿದೆ' ಎಂದು ಘೋಷಿಸಿದ.
ಹೀಗೆ ಯೇಸುಸ್ವಾಮಿಯ ಮಾತೆ ಮರಿಯಳ ವಿವಾಹ ನಿಶ್ಚಯ ನಜರೇತಿನ ಬಡಿಗ ಜೋಸೆಫರೊಂದಿಗೆ ನಡೆಯಿತು.
ಈ ಕತೆಯ ಹಿನ್ನೆಲೆಯಓ ಕಾರಣವೇ, ನಾವು ಸಂತ ಜೋಸೆಫರ ಕೈಯಲ್ಲಿ ಚಿಗುರೊಡೆದ, ಹೂವು ಬಿಟ್ಟ ಕೋಲನ್ನು ಕಾಣುತ್ತೇವೆ. ಕಥೋಲಿಕರು ಮಾನ್ಯ ಮಾಡುವ ಶ್ರೀ ಗ್ರಂಥ ಬೈಬಲ್ಲಿನ ಶುಭಸಂದೇಶದ ಪುಸ್ತಕಗಳಲ್ಲಿ ಈ ಘಟನೆಯು ದಾಖಲಾಗಿಲ್ಲ. ಆದರೂ, ಈ ಘಟನೆಯ ಸ್ಮರಣೆಯಲ್ಲಿ, ಅದನ್ನು ಚಿತ್ರಿಸುವ ಹತ್ತಾರು ಬಗೆಯ ತೈಲ, ಜಲವರ್ಣಗಳ ಪಟಗಳು ಮೂಡಿಬಂದಿವೆ. ಬಗೆ ಬಗೆಯ ಭಂಗಿಯ ಸಂತ ಜೋಸೆಫರ ಕೈಯಲ್ಲಿ ಹೂವು ಬಿಟ್ಟ ಕೋಲಿನ ಸ್ವರೂಪಗಳು ರೂಪ ತಳೆದಿವೆ. ಅವು, ಚರ್ಚಿನ ಪೂಜಾ ಅಂಕಣಗಳಲ್ಲಿ, ಮನೆಮನೆಗಳ ದೇವರ ಪೀಠಗಳಲ್ಲಿ ಪ್ರಧಾನವಾದ ಸ್ಥಾನ ಪಡೆದಿವೆ.
ಶ್ರೀ ಗ್ರಂಥ ಬೈಬಲ್ಲಿನಲ್ಲಿ ಸಂತ ಜೋಸೆಫರು:
ಅರಸ ದಾವಿದನ ವಂಶಾವಳಿಗೆ ಯೇಸುಸ್ವಾಮಿಯು ಸೇರಿರುವುದನ್ನು ವಿವರಿಸುವ ಸಂದರ್ಭದಲ್ಲಿ ಮೊದಲ ಬಾರಿ ಶ್ರೀಗ್ರಂಥ ಬೈಬಲ್ಲಿನ, ಹೊಸ ಒಡಂಬಡಿಕೆಯ ಶುಭಸಂದೇಶದಲ್ಲಿ ಸಂತ ಜೋಸೆಫರ ಪ್ರಸ್ತಾಪ ಬರುತ್ತದೆ (ಮತ್ತಾಯ ಮತ್ತು ಲೂಕ). ನಂತರದಲ್ಲಿ ಮರಿಯಳನ್ನು ಮದುವೆಯಾದ ನಂತರದಲ್ಲಿ ಆಕೆ ಮೊದಲೇ ಗರ್ಭವತಿಯಾಗಿರುವುದನ್ನು ಕಂಡು, ನೀತಿವಂತ ಜೋಸೆಫರು ಬಹಿರಂಗವಾಗಿ ಅವಳನ್ನು ತಿರಸ್ಕರಿಸದೇ, ಅಂದಿನ ಧಾರ್ಮಿಕ ಕಟ್ಟಳೆಯಂತೆ ಇಬ್ಬರು ಸಾಕ್ಷಿಗಳ ಎದುರಿನಲ್ಲಿ ಅವಳಿಂದ ದೂರವಾಗಲು ಯೋಚಿಸುತ್ತಿದ್ದರು. ಆಗ, ದೇವದೂತನೊಬ್ಬ ಬಂದು, `ಮರಿಯಳು ಪವಿತ್ರಾತ್ಮರಿಂದ ಗರ್ಭಧರಿಸಿದ್ದು, ದೇವಸುತನನ್ನು ಹೆರುತ್ತಾಳೆ' ಎಂದು ತಿಳಿಸಿದಾಗ ಮರಿಯಳನ್ನು ಕೈಬಿಡುವ ತನ್ನ ನಿರ್ಧಾರದಿಂದ ಹಿಂದೆ ಸರಿಯುತ್ತಾನೆ ಎಂದು ಶುಭಸಂದೇಶದಲ್ಲಿ ಹೇಳಲಾಗಿದೆ (ಮತ್ತಾಯ). ಮುಂದೆ ಗರ್ಭಿಣಿ ಮರಿಯಳೊಂದಿಗೆ ಬೆತ್ಲೆಹೇಮಿಗೆ ಪ್ರಯಾಣಿಸುವ ಜೋಸೆಫ್, ಅಲ್ಲಿನ ಖಾನೆಸುಮಾರಿನ ನಂತರ, ದೇವದೂತನ ಮಾತನ್ನು ಆಲಿಸಿ, ಅರಸ ಹೆರೋದನಿಂದ ಪಾರಾಗಲು ಹಸುಗೂಸುನ್ನು ಕರೆದುಕೊಂಡು ಕುಟುಂಬ ಸಮೇತ ಇಜಿಪ್ತ್ ದೇಶಕ್ಕೆ ಪಲಾಯನ ಮಾಡುತ್ತಾನೆ. ಹೆರೋದ ತೀರಿಕೊಂಡನೆಂದು ದೇವದೂತನೊಬ್ಬ ತಿಳಿಸಿದಾಗ, ತನ್ನ ಕುಟುಂಬದೊಂದಿಗೆ ಪವಿತ್ರ ಭೂಮಿಗೆ ಹಿಂದಿರುಗಿ ಜುದೇಯ ಪ್ರಾಂತದ ನಜರೇತಿನಲ್ಲಿ ನೆಲೆಸುತ್ತಾನೆ (ಮತ್ತಾಯ). ಮುಂದೆ, ಯೇಸುಸ್ವಾಮಿ ಹನ್ನೆರಡು ವರ್ಷದ ಬಾಲಕನಿದ್ದ ಸಂದರ್ಭದಲ್ಲಿ ಮತ್ತೆ ತಂದೆ ಸಂತ ಜೋಸೆಫರ ಪ್ರಸ್ತಾಪ ಶುಭಸಂದೇಶದಲ್ಲಿ ಬಂದಿದೆ. ಜೆರುಸಲೇಮಿನಿಂದ ಹಿಂದಿರುಗಿ ಬರುವಾಗ, ಬಾಲಕ ಯೇಸುಸ್ವಾಮಿ ತಂದೆ ತಾಯಿಗಳಿಂದ ತಪ್ಪಿಸಿಕೊಂಡು ದೇವಸ್ಥಾನದಲ್ಲಿ, ಪಂಡಿತರೊಂದಿಗೆ ಸಂವಾದ ನಡೆಸುತ್ತಿರುತ್ತಾನೆ. ನಂತರ, ಬಾಲಕ ಯೇಸುಸ್ವಾಮಿಯನ್ನು ಹುಡುಕುತ್ತಾ ಬಂದ ಜೋಸೆಫ್ ಮತ್ತು ಮರಿಯ ದೇವಸ್ಥಾನದಲ್ಲಿ ಅವನನ್ನು ಪತ್ತೆ ಮಾಡುತ್ತಾರೆ (ಲೂಕ).
ಇದಾದ ನಂತರ ಶುಭಸಂದೇಶಗಳಲ್ಲಿ ಸಂತ ಜೋಸೆಫರ ಪ್ರಸ್ತಾಪವೇ ಬರುವುದಿಲ್ಲ. ಸಾರ್ವಜನಿಕ ಪ್ರಬೋಧನೆ ಮಾಡುವ ಮೊದಲು, ಕಾನಾ ಊರಲ್ಲಿನ ಮದುವೆ ಮನೆಗೆ ಯೇಸುಸ್ವಾಮಿ ಮತ್ತು ಮಾತೆ ಮರಿಯ ಇಬ್ಬರೇ ಬಂದ ಬಗ್ಗೆ ಪ್ರಸ್ತಾಪವಿದೆ (ಯೋವಾನ್ನ). ಅಷ್ಟರಲ್ಲಿ ಸಂತ ಜೋಸೆಫರು ತೀರಿಕೊಂಡಿದ್ದಿರಬಹುದೆಂದು ಅಂದಾಜು ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿಯೇ ಯೇಸುಸ್ವಾಮಿ ಕುಟುಂಬ ನಿರ್ವಹಣೆಯ ಹೊಣೆ ಹೊತ್ತು ತಾನು ಮೂವತ್ತು ವರ್ಷದವನಾದ ನಂತರದಿಂದ ಬಹಿರಂಗ ಸಾರ್ವಜನಿಕ ಪ್ರಬೋಧನೆ ಆರಂಭಿಸುತ್ತಾರೆ ಎಂದು ಹೇಳಲಾಗುತ್ತದೆ. ಮುಂದೆ ಯೇಸುಸ್ವಾಮಿಯನ್ನು ಶಿಲುಬೆಗೆ ಏರಿಸಿದಾಗ, ತಮ್ಮ ಅನುಪಸ್ಥಿತಿಯಲ್ಲಿ ತಾಯಿಯನ್ನು ನೋಡಿಕೊಳ್ಳಬೇಕೆಂದು ಶಿಷ್ಯ ಯೋವಾನ್ನರಿಗೆ ಸೂಚಿಸುವರು ಎಂದು ಶುಭಸಂದೇಶ ತಿಳಿಸುತ್ತದೆ (ಯೋವಾನ್ನ). ಒಬ್ಬ ಮಹಿಳೆ ವಿಧವೆಯ ಪಟ್ಟವನ್ನು ಹೊಂದಿರುವಾಗ ಮಾತ್ರ ಕುಟುಂಬದ ಹೊರಗಿನವರು, ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವ ಪರಿಪಾಠ ಆಗ ಚಾಲ್ತಿಯಲ್ಲಿತ್ತು ಎಂದು ತಜ್ಞರು ಹೇಳುತ್ತಾರೆ.
ಸಂತ ಜೋಸೆಫರ ಆದರಣೆ ನಡೆದು ಬಂದ ಹಾದಿ:
ಮಧ್ಯಯುಗದವರೆಗೂ ಸಂತ ಜೋಸೆಫರನ್ನು ಆದರಿಸುವ ಕ್ರಮ ಆರಂಭವಾಗಿರಲಿಲ್ಲ ಎಂದು ಇತಿಹಾಸಕಾರರು ಹೇಳುತ್ತಾರೆ. ಮಾತೆ ಮರಿಯಳ ಕನ್ಯತ್ವವನ್ನು ದೃಢಪಡಿಸುವ ಉದ್ದೇಶದಿಂದಲೇ, ಮಾತೆ ಮರಿಯಳನ್ನು ಮದುವೆಯಾದ ಸಂದರ್ಭದಲ್ಲಿ ಆತ ವಿಧುರನಾಗಿದ್ದ ಮತ್ತು ಆತ ವಯಸ್ಸು ೯೭ ಆಗಿತ್ತು ಎಂದು ನಾಲ್ಕನೇ ಶತಮಾನದಲ್ಲಿದ್ದ ಸಂತ ಎಪಿಫೋನಸ್ ಅವರು ಪ್ರತಿಪಾದಿಸಿದ್ದಾರೆ. ವೃದ್ಧನಾಗಿದ್ದರಿಂದ ಅವನ ನಪುಂಸಕತೆಯನ್ನು ನೆನಪಿಸುವಂತೆ ಅವನ ಚಿತ್ರಗಳಲ್ಲಿ ಊರುಗೋಲನ್ನು ಪ್ರಧಾನವಾಗಿ ಚಿತ್ರಿಸಲಾಗುತ್ತಿತ್ತು ಎಂತಲೂ ಹೇಳಲಾಗುತ್ತದೆ. ಆತ ವಿಧುರನಾಗಿದ್ದ. ಅವನಿಗೆ ಮೊದಲನೇ ಹೆಂಡತಿಯಿಂದ ಮಕ್ಕಳಾಗಿದ್ದವು. ಹೀಗಾಗಿಯೇ ಪ್ರೇಷಿತರ ಕಾರ್ಯಕಲಾಪಗಳಲ್ಲಿ ಕೆಲವು ಕಡೆಗಳಲ್ಲಿ ಪ್ರಭುವಿನ (ಯೇಸುಸ್ವಾಮಿಯ) ಸಹೋದರ ಎಂಬ ಪದಬಳಕೆ ಬಂದಿದೆ ಎಂದು ಕೆಲವು ಪಂಡಿತರು ವಾದಿಸುತ್ತಾರೆ.
ಹದಿನಾರನೇ ಶತಮಾನದವರೆಗೂ ಚರ್ಚಿನ ಅಂಗಳದಲ್ಲಿ ಪ್ರಧಾನ ಸ್ಥಾನ ಹೊಂದಿರದಿದ್ದ, ಸಂತ ಜೋಸೆಫರನ್ನು ಆದರಣೀಯವಾಗಿ ಕಾಣುವ ಪರಿಪಾಠ, ಅವಿಲದ ಸಂತ ತೆರೇಸಾ ಸಭೆಯು ಅವರನ್ನು ಪಾಲಕ ಸಂತರನ್ನಾಗಿ ಮಾಡಿಕೊಂಡಾಗ ಆರಂಭವಾಯಿತೆಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ನಂತರದಲ್ಲಿ ಫ್ರಾನ್ಸಿಕನ್ ಮತ್ತು ಯೇಸುಸಭೆಯ ಸದಸ್ಯರು ಅದನ್ನು ಕೈಗೆತ್ತಿಕೊಂಡು ಮುಂದುವರಿಸಿದರು. ಮುಂದೆ ೧೬೨೧ರಲ್ಲಿ, ಅಂದಿನ ಹದಿನೈದನೇ ಪೋಪ್ ಗ್ರೆಗೋರಿ ಅವರು, ಮಾರ್ಚ್ ೧೯ ರ ದಿನವನ್ನು ಸಂತ ಜೋಸೆಫರ ಗೌರವಾರ್ಥದ ಆದರಣೆಯ ದಿನವೆಂದು ನಿಗದಿ ಮಾಡಿ, ವಿಶ್ವಾದ್ಯಂತ ಆ ದಿನವನ್ನು ಆಚರಿಸಲು ಪ್ರೋತ್ಸಾಹ ನೀಡಿದರು. ಆ ಸಮಯದಿಂದ, ಸಂತ ಜೋಸೆಫರನ್ನು ಒಬ್ಬ ಪರಿಪೂರ್ಣ ತಂದೆ, ಎಂದು ಗುರುತಿಸುವುದು ಆರಂಭವಾಯಿತು. ಪರಲೋಕದ ತಂದೆಯ ನಿರ್ದೇಶನದ ಕೆಲಸವನ್ನು ಆರಂಭಿಸುವ ಮೊದಲು, ಬಾಲ ಯೇಸುವಿನ ಪಾಲನೆ ಪೋಷಣೆಯ ಜವಾಬ್ದಾರಿ ನಿರ್ವಹಿಸಿದ ಮಹಿಮಾವಂತ ಎಂದು ಪರಿಗಣಿಸುವ ಕ್ರಮಕ್ಕೆ ನಾಂದಿ ಹಾಡಲಾಯಿತು.
ಉತ್ತರ ಭೂಗೋಳದ ಯುರೋಪು ಮತ್ತು ನಂತರ ಅಮೆರಿಕ ಖಂಡಗಳಲ್ಲಿನ ದೇಶಗಳಲ್ಲಿ ಶತಮಾನಗಳಿಂದ ಮೇ ೧ ವಸಂತ ಋತುವಿನ ಪ್ರಾರಂಭದ ದಿನದ ಸಂಭ್ರಮದ ಹಬ್ಬವಾಗಿದೆ. ಹತ್ತೊಂಬತ್ತನೇ ಶತಮಾನದ ಕೊನೆಯ ಹೊತ್ತಿಗೆ ಮತ್ತು ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಸಮಾಜವಾದಿ ಮತ್ತು ಕಮ್ಯೂನಿಸ್ಟ್ ವಾದಿಗಳ ಹೋರಾಟ ಒಂದು ತಾತ್ವಿಕ ಹಂತ ತಲುಪಿತ್ತು. ಅಂದಿನ, ಕಾರ್ಮಿಕರ ಹಕ್ಕುಗಳನ್ನು ದೊರಕಿಸಿಕೊಡುತ್ತಿದ್ದ ಚಳುವಳಿಗಳ ನೇತಾರರು ಮೇ ೧ ರಂದು ವಿಶ್ವದಾದ್ಯಂತ ಕಾರ್ಮಿಕ ದಿನಾಚರಣೆ ಆಚರಿಸಲು ನಿಧರಿಸಿದರು. ಮೇ ೧ ವಸಂತದ ಹಬ್ಬದ ಜೊತೆಗೆ ಕಾರ್ಮಿಕರ ದಿನಾಚರಣೆಯೂ ಆಯಿತು. ಅದಕ್ಕೆ ಪೂರಕವಾಗಿ, ೧೯೫೫ರಲ್ಲಿ ಹನ್ನೆರಡನೇ ಭಕ್ತಿನಾಥ (ಪಾಯಸ್ ೧೨) ಸಂತ ಜೋಸೆಫ್ ರನ್ನು ಒಬ್ಬ ಕಾರ್ಮಿಕನೆಂದು ಗುರುತಿಸಿ ಆದರಿಸಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಅಂದಿನಿಂದ ಅವರೊಬ್ಬ ಕಾರ್ಮಿಕ ಸಂತರಾದರು. ಒಬ್ಬ ನಿಷ್ಠಾವಂತ ಕುಶಲಕರ್ಮಿಯಾಗಿ ಯೇಸುಸ್ವಾಮಿಯ ಜನನದ ದೃಶ್ಯಗಳ ಚಿತ್ರಣಗಳಲ್ಲಿ, ಅದುವರೆಗೂ ಚಿತ್ರಿಸಲಾಗುತ್ತಿದ್ದ ವಯಸ್ಸಾದ ಜೋಸೆಫ್ ತುಸು ದೃಢಕಾಯದ ಮಧ್ಯವಯಸ್ಸಿನ ವ್ಯಕ್ತಿಯಾಗಿ ರೂಪ ತಾಳತೊಡಗಿದರು.
ಸಂತ ಜೋಸೆಫರ ಕೆಲವು ಐತಿಹ್ಯಗಳು
ಕೋಲು ಕೊನರಿ ಮಲ್ಲಿಗೆ ಹೂವು ಅರಳಿದ ಸಂತ ಜೋಸೆಫರ ಕೋಲಿನಂತೆಯೇ ಇನ್ನೂ ಹಲವಾರು ಐತಿಹ್ಯಗಳು ಸಂತ ಜೋಸೆಫರ ಸುತ್ತ ಬೆಳೆದುಬಂದಿವೆ.
ಬಾಲಯೇಸುವನ್ನು ಅಂದಿನ ಸಂಪ್ರದಾಯದಂತೆ ಸುನ್ನತಿಗಾಗಿ ದೇವಸ್ಥಾನಕ್ಕೆ ಕರೆದೊಯ್ದಾಗ, ಕಾಣಿಕೆಯಾಗಿ ಸಂತ ಜೋಸೆಫರು ಕೆಲವು ನಾಣ್ಯಗಳನ್ನು ಮತ್ತು ಎರಡು ಪಾರಿವಾಳಗಳನ್ನು ಸಲ್ಲಿಸಿದರಂತೆ. ಆಗ ಅವರು ಅತ್ಯಂತ ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದರು. ಈ ಘಟನೆಯನ್ನು ಚಿತ್ರಿಸುವ ಹಲವಾರು ತೈಲಚಿತ್ರಪಟಗಳಿವೆ.
ಕೆಲವೊಂದು ಕಲಾಕೃತಿಗಳಲ್ಲಿ ಮೃತ್ಯಶಯ್ಯೆಯಲ್ಲಿರುವ ವಯೋವೃದ್ಧ ಸಂತ ಸಂತ ಜೋಸೆಫರ ಪಕ್ಕದಲ್ಲಿ ದೇವಸುತ ಯೇಸುಸ್ವಾಮಿ ಮತ್ತು ಮಾತೆ ಮರಿಯಳು ನಿಂತಿರುವುದನ್ನು ಚಿತ್ರಿಸಲಾಗಿದೆ. ತಂದೆ ಸರ್ವೇಶ್ವರನ ಮಗ ಯೇಸುಸ್ವಾಮಿಯ ಭೂಲೋಕದ ತಂದೆಯಾಗಿ ಸಲಹಿದ ಸಂತ ಜೋಸೆಫರಿಗೆ ಗೌರವಯುತ ವಿದಾಯದ ಹಿನ್ನೆಲೆಯಲ್ಲಿ ಈ ಐತಿಹ್ಯ ಮೂಡಿಬಂದಿದೆ ಎನ್ನಲಾಗುತ್ತದೆ.
`ದೈವೀ ಯೋಜನೆಯಲ್ಲಿನ ಅವರ ಪಾತ್ರವನ್ನು ಅಭಿನಂದಿಸಲೋ' ಎಂಬಂತೆ ಕೆಲವು ಚಿತ್ರಣಗಳಲ್ಲಿ, ಸ್ವರ್ಗದ ಮಾತೆಯೆಂದು ಗುರುತಿಸಿ ಮಾತೆಮರಿಯಳ ತಲೆಯ ಮೇಲೆ ಹೂವಿನ ಕಿರೀಟವನ್ನು ಇರಿಸಿದಂತೆ, ಮೃತ್ಯಂಜಯ ಯೇಸು ಸಂತ ಜೋಸೆಫರ ತಲೆಯ ಮೇಲೆ ಹೂವಿನ ಕಿರೀಟವನ್ನು ಇರಿಸುವ ಚಿತ್ರಗಳೂ ಮೂಡಿಬಂದಿವೆ.
ಇವಕ್ಕೆಲ್ಲ ಐದನೇ ಶತಮಾನದಲ್ಲಿ ರಚಿತಗೊಂಡ `ಬಡಿಗ ಜೋಸೆಫರ ಇತಿಹಾಸ' (ಹಿಸ್ಟರಿ ಆಫ್ ಜೋಸೆಫ್ ದಿ ಕಾರ್ಪೆಂಟರ್) ಪುಸ್ತಕವೇ ಮೂಲವಾಗಿದೆ. ಆದರೆ, ಆ ಪುಸ್ತಕವನ್ನು ಅಂಗಿಕಾರಾರ್ಹ ಧಾರ್ಮಿಕ ಸಾಹಿತ್ಯವಲ್ಲ ಎಂದು ಕಥೋಲಿಕ ಧರ್ಮಸಭೆ ಮಾನ್ಯಮಾಡಿಲ್ಲ. ಆದರೂ ಆ ಪುಸ್ತಕಗಳಲ್ಲಿನ ಮಾಹಿತಿಯ ಮೂಲದ ಪ್ರಭಾವಳಿಯಲ್ಲಿ ಅರಳುವ ಸಂತ ಜೋಸೆಫರ ಚಿತ್ರಣಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.
-ಎಫ್.ಎಂ.ನಂದಗಾವ್.
No comments:
Post a Comment