Wednesday, 9 May 2018

ಭೂಮಿ ಮುನಿಸಿಕೊಂಡರೆ ವಿಶ್ವವೇ ನಾಶವಾಗಲಿದೆ - ಎಚ್ಚರಿಕೆ

(ಪ್ಲಾಸ್ಟಿಕ್ ಮುಕ್ತ ಭೂಮಿ)

ನಮ್ಮ ಭೂತಾಯಿಯನ್ನು ಸಂರಕ್ಷಿಸುವ ಉನ್ನತ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಮ್ಮ ಪರಿಸರವನ್ನು ಸಂರಕ್ಷಿಸಿಕೊಳ್ಳುವ ಅನಿವಾರ್ಯತೆಯ ಸೂಕ್ಷ್ಮತೆಯನ್ನು ಸಹ ನಮಗೆ ತಿಳಿಸಲಾಗಿದೆ. ಪರಿಸರವನ್ನು ನಮ್ಮ ಸ್ವಾರ್ಥಕ್ಕಾಗಿ ನಾಶಮಾಡುತ್ತಿದ್ದೇವೆ. ಹೌದು ಪ್ರಕೃತಿದತ್ತ ನೈಸರ್ಗಿಕ ಸಂಪನ್ಮೂಲವನ್ನು ದುರಾಸೆಗೆ ನಾಶ ಮಾಡಲಾಗುತ್ತಿದೆ. ಭೂಗರ್ಭದಿಂದ ಖನಿಜ ಸಂಪತ್ತನ್ನು ಅಕ್ರಮವಾಗಿ ತೆಗೆದು ಮಾರಾಟ ಮಾಡಲಾಗುತ್ತಿದೆ. ಅಂತರ್ಜಲ ಪಾತಾಳಕ್ಕೆ ಕುಸಿದು ಕಲುಷಿತಗೊಂಡಿದೆ. ನದಿಮೂಲಗಳು ಬತ್ತಿವೆ. ವಾತಾವರಣವು ಏರುಪೇರಾಗಿ ಉಷ್ಣಾಂಶ ಏರುತ್ತಲೇ ಇದೆ. ಭೂಮಿ ಮುನಿಸಿಕೊಂಡರೆ ವಿಶ್ವವೇ ನಾಶವಾಗಲಿದೆ ಎಂಬ ಎಚ್ಚರಿಕೆ ನಮ್ಮಲ್ಲಿರಬೇಕು.
ಮೊನ್ನೆ ನನ್ನ ಗೆಳೆಯ ಒಂದು ವೀಡಿಯೊ ಕಳುಹಿಸಿದ. ಅದು ಒಂದು ಸರಳವಾದ ಕಥೆಯ ಮೂಲಕ ಪರಿಸರದ ಸಂರಕ್ಷಣೆಯ ಸೂಕ್ಷ್ಮತೆಯನ್ನು ತಿಳಿ ಹೇಳುತ್ತದೆ. ನದಿಯ ಪಕ್ಕದಲ್ಲಿ ಒಂದು ಮನೆ. ಮನೆಗೆ ಬೇಕಾದ ನೀರಿನ ಪೂರೈಕೆ ನದಿಯಿಂದಲೇ. ನದಿಯು ಮಾಲಿನ್ಯಗೊಳ್ಳದೆ ಪರಿಶುದ್ಧವಾದ ನೀರಿನಿಂದ ತುಂಬಿ ಹರಿಯುತ್ತಿದೆ. ಮನೆಯ ಯಜಮಾನ ತನ್ನ ಸ್ನಾನದ ಕೋಣೆಯಲ್ಲಿ ನದಿಯಿಂದ ಸರಬರಾಜು ಅಗುವ ಸ್ವಚ್ಚ ನೀರಿನಿಂದ ಉಲ್ಲಾಸದಿಂದ ಸ್ನಾನ ಮಾಡಿಕೊಳ್ಳುತ್ತಿದ್ದಾನೆ. ನಂತರ ದಿನಗಳಲ್ಲಿ ಈ ಮನುಷ್ಯ ತನ್ನ ತ್ಯಾಜ್ಯ ವಸ್ತುಗಳನ್ನು ಕಸಕಡ್ಡಿಗಳನ್ನು, ಹಾಳು ಪ್ಲಾಸ್ಟಿಕ್ ವಸ್ತುಗಳನ್ನು ನದಿಗೆ ಬಿಸಾಡಿ, ಆ ನದಿಯನ್ನು ಕಲುಷಿತಗೊಳಿಸುತ್ತಾನೆ. ನದಿಯು ಮಲಿನ ವಸ್ತುಗಳಿಂದ ತುಂಬಿ ಹೋಗುತ್ತದೆ. ಕೊನೆಗೆ ಅದೇ ಮನುಷ್ಯ ಎಂದಿನಂತೆ ತನ್ನ ಸ್ನಾನದ ಕೋಣೆಗೆ ಹೋಗಿ ಸ್ನಾನಮಾಡಲು ಶವರ್ ಅನ್ ಮಾಡುತ್ತಿದ್ದಂತೆ ತನ್ನ ಕೈಯಾರೆ ನದಿಗೆ ಬಿಸಾಡಿದ ತ್ಯಾಜ್ಯ ವಸ್ತುಗಳೇ ಅವನ ಮೇಲೆ ಬೀಳಲು ಮನುಷ್ಯನು ಕುರೂಪಿಯಾಗುತ್ತಾನೆ. ಹೌದು ಇದೊಂದು ಸರಳವಾದ ಕಥೆಯಾದರೂ ಅದರಲ್ಲಿ ಗಾಢವಾದ ಅರ್ಥವಿದೆ. ಮಾಡಿದ್ದುಣ್ಣೋ ಮಹಾರಾಯ ಎಂದು ತಿಳಿ ಹೇಳುವ ಪಾಠವಿದು.
ವಿಶ್ವಸಂಸ್ಥೆ ಪ್ರತಿವರ್ಷ ಪರಿಸರ ಉಳಿವಿಗೆ ನಿರ್ದಿಷ್ಟ ವಿಚಾರದ ಮೇಲೆ ಅಭಿಯಾನ ಆರಂಭಿಸುತ್ತದೆ. ಈ ಬಾರಿ ಪ್ಲಾಸ್ಟಿಕ್ ಮುಕ್ತ ಭೂಮಿ ಎಂಬ ಘೋಷವಾಕ್ಯದಡಿ ಪರಿಸರ ಕಾಳಜಿಗೆ ಕರೆ ನೀಡಿದ್ದು ನಾವೆಲ್ಲರೂ ಕೈಜೋಡಿಸೋಣ. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ವಸ್ತುಗಳನ್ನು ನಿರ್ಮೂಲನೆ ಮಾಡುವ ಮೂಲಕ ನಾವೆಲ್ಲರೂ ಭೂಮಿಯನ್ನು ಉಳಿಸಿಕೊಳ್ಳೋಣ.
ಇದಕ್ಕೆ ಪೂರಕವೆಂಬಂತೆ ಡಾ. ಮಹಾಂತೇಶ ಪಾಟೀಲರವರು ಬರೆದ ಮರದ ಹಕ್ಕಿ ಎಂಬ ಕವನ ಮನಮುಟ್ಟುತ್ತದೆ.
ನಾವು ಮನೆಕಟ್ಟುವ ಬದಲು
ಮರ ನೆಟ್ಟಿದ್ದರೆ
ಹತ್ತಾರು ಹಕ್ಕಿಗಳಾದರೂ
ಗೂಡು ಕಟ್ಟುತಿದ್ದವು

ಚಿಗುರುವ ಚೈತ್ರವ ಕಂಡು
ಮುಪ್ಪಾದರೂ ಮುಂದೂಡಬಹುದಿತ್ತು

ಜೀವ ಪಡೆಯಬಹುದಿತ್ತು ನೆಮ್ಮದಿಯ
ಹಕ್ಕಿಗಳ ಸ್ವಚ್ಛಂದ ನೋಡಿಯಾದರೂ.

ಸಾವ ಮರೆಯಬಹುದಿತ್ತು ನಾವು
ಹಕ್ಕಿಗಳ ಕಲರವ ಕೇಳಿಯಾದರೂ..

ಮರುಭೂಮಿ ಕಾಡಾಗಬಹುದಿತ್ತು ಇಂದಿಗೆ
ಹಕ್ಕಿಗಳ ಹಾಗೆ ಬೀಜ ಬಿತ್ತಿದ್ದರೆ.

ಒಂದೇ ಒಂದು ಸಲ ಮರವಾಗಿದ್ದರೆ
ನಾವು ಮನುಷ್ಯರಾಗಬಹುದಿತ್ತು.
ಫಾ. ಚಸರಾ ಹೇಳುವಂತೆ ಜೀವಾತ್ಮನ ಹೊರರೂಪವೇ ಈ ಸೃಷ್ಟಿಯ ಸಂಕುಲ. ಆತನ ಉಸಿರೊಂದಿಗೆ ಇದು ಜೀವ ಸಂಕುಲವಾಯಿತು. ಈ ಜೀವ ಸಂಕುಲದ ಮೇರು ಕೃತಿ ಮನುಷ್ಯನಾದ್ದರಿಂದ ಅವನ ಜವಾಬ್ದಾರಿಗೆ ಈ ಜೀವ ಸಂಕುಲವನ್ನು ನೀಡಲಾಯಿತು. ಸ್ವಾರ್ಥ ಹಿತವೇ ಮನುಷ್ಯನ ಮೂಲ ಮಂತ್ರವಾದ್ದರಿಂದ ಈ ಮನುಷ್ಯ ಜವಾಬ್ದಾರಿಯನ್ನು ಒಡೆತನವೆಂದು ಭಾವಿಸಿದ. ಈ ಜೀವ ಸಂಕುಲವನ್ನು ತನ್ನ ಸುಖಕ್ಕೆ ಏಣಿಯಾಗಿಸಿಕೊಂಡ. ತನ್ನ ದುಷ್ಟತೆಯನ್ನು ಶುದ್ಧ ಸಂಕುಲಕ್ಕೆ ಲೇಪಿಸಿದ ಜೀವ ಸಂಕುಲ ಕಲುಷಿತಗೊಂಡಿತು. ಕದಡಿದ ನೀರು ಕೆಸರಾಯಿತು.
ಹೌದು ,ಈ ಜೀವ ಸಂಕುಲದ ಮರುಶುದ್ಧತೆಗೆ ಮನುಷ್ಯರಾದ ನಾವು ಸ್ವಾರ್ಥಬಿಟ್ಟು ಇಡೀ ಜೀವಸಂಕುಲದ ಜೊತೆ ಸಂಧಾನ ಮಾಡಿಕೊಳ್ಳಬೇಕಾದ ಅವಶ್ಯಕತೆ ನಮಗಿದೆ. ಇಲ್ಲದಿದ್ದಲ್ಲಿ ಮನುಷ್ಯನಿಗೆ ಉಳಿಗಾಲವಿಲ್ಲ. 
-ಆನಂದ್ -

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...