"Give me oil in my lamp
Keep me burning--
Keep me burning till the break of day"
ಈ ಅರ್ಥಪೂರಿತ ಪಲ್ಲವಿಯನ್ನು ಹಾಡುವಾಗೆಲ್ಲಾ ನಮಗೆ ಯೇಸುಕ್ರಿಸ್ತರು, ತಮ್ಮ ಶಿಷ್ಯರಿಗೆ
ಹೇಳಿದ ಹತ್ತು ಅನಾಮಿಕ ಕನ್ಯೆಯರ ಸಾಮ್ಯದ ನೆನಪಾಗದಿರದು! ಆ ಶಿಷ್ಯರು ಅಮಾಯಕರು. ಮೋಸ ಕಪಟಗಳನ್ನು
ಅರಿಯದವರು. ಹಾಗಾಗಿ, ಯೇಸು, ಈಗ ತಾನೇ ಶಾಸ್ತ್ರಿಗಳನ್ನು ಹಾಗೂ ಫರಿಸಾಯರನ್ನು ಕಟುವಾದ
ಭಾಷೆಯಲ್ಲಿ ಸಂಬೋಧಿಸಿ. ಅವರ ಕಪಟ, ಮೋಸಗಳನ್ನು ಶಿಷ್ಯರ ಮುಂದೆ ಬಿಚ್ಚಿಟ್ಟಿದ್ದಾರೆ.
ಮುಂಬರಲಿರುವ ತಮ್ಮ ಪ್ರತ್ಯಕ್ಷತೆಯನ್ನು ಹಲವಾರು ಸಾಮ್ಯಗಳ ಮೂಲಕ ಯೇಸು, ತನ್ನ ಹಿಂಬಾಲಕರಿಗೆ
ವಿವರಿಸುತ್ತಿದ್ದಾರೆ. ಅವುಗಳಲ್ಲಿ ಒಂದು, ಹತ್ತು ಕನ್ಯೆಯರ ಸಾಮ್ಯ. ಆ ಕನ್ಯೆಯರ ಕೈಗಳಲ್ಲಿ
ಉರಿಯುತ್ತಿರುವ ಹಣತೆಗಳಿವೆ. ಯೆಹೂದ್ಯ ಸಂಪ್ರದಾಯದಂತೆ ವಿವಾಹಕ್ಕೆ ಸ್ವಲ್ಪ ಮುಂಚೆ, ಮದಲಿಂಗನು
,ತನ್ನ ಗೆಳೆಯರೊಂದಿಗೆ ಹೆಣ್ಣಿನ ಮನೆಗೆ ಬರುತ್ತಿದ್ದಾನೆ. ಆಗ ಈ ಹತ್ತು ಕನ್ಯೆಯರು ತಂತಮ್ಮ
ಹಣತೆಗಳೊಡನೆ ಆತನ ಬರುವಿಕೆಯನ್ನು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ. ಮದಲಿಂಗನು ಬರುವ ಸಮಯ
ಯಾರಿಗೂ ಖಚಿತವಾಗಿ ತಿಳಿದಿಲ್ಲ...
ಈ ಹತ್ತು ಕನ್ಯೆಯರಲ್ಲಿ, ಐದು ಮಂದಿ ಬುದ್ಧಿವಂತೆಯರು. ತಮ್ಮ ಹಣತೆಗಳ ತುಂಬಾ ಓಲಿವ್ ಎಣ್ಣೆ
ತುಂಬಿದ್ದರೂ, ನಡುವೆ ಬೇಕಾಗಬಹುದೆಂದು, ಹೆಚ್ಚಿನ ಎಣ್ಣೆಯನ್ನು ಒಂದು ಪಾತ್ರೆಯಲ್ಲಿ
ಇಟ್ಟುಕೊಂಡಿದ್ದಾರೆ. ಉಳಿದ ಐವರಿಗೆ ಮುಂದಾಲೋಚನೆಯಿಲ್ಲ. ಅವರು ಬೆಳಗುವ ಹಣತೆಗಳನ್ನು
ಇಟ್ಟುಕೊಂಡಿದ್ದಾರೆಯೇ ವಿನಃ ಹೆಚ್ಚಿನ ಎಣ್ಣೆಯನ್ನು ತಂದಿಲ್ಲ, ಮುಂದೆ ಬೇಕಾಗುವ ಅಗತ್ಯಗಳ
ಕುರಿತು ಚಿಂತಿಸದವರು ವಿವೇಕಶೂನ್ಯರು. ಮದಲಿಂಗನು ಬೇಗ ಬಂದುಬಿಡುತ್ತಾನೆ ಎಂದು ತಪ್ಪಾಗಿ
ತಿಳಿದುಕೊಂಡು, ಹೆಚ್ಚಿನ ಎಣ್ಣೆಯನ್ನು ತಾರದವರು. ನಡುರಾತ್ರಿ ಬೇರೆ. ಎಲ್ಲರ ಕಣ್ಣುಗಳೂ
ನಿದ್ರೆಯಿಂದ ಆವೃತವಾಗಿವೆ, ತೂಕಡಿಸುತ್ತಿದ್ದಾರೆ.
ಇಲ್ಲಿ, ಯೇಸುಕ್ರಿಸ್ತರೇ ಮದಲಿಂಗರು, ದೇವಸಭೆಯೇ ಮದಲಗಿತ್ತಿ. ಕನ್ಯೆಯರು ಸಭಾಸದಸ್ಯರು
ಅಂದರೆ ಕ್ರೈಸ್ತರು. ಕ್ರಿಸ್ತರ ಎರಡನೇ ಬರೋಣದ ನಿರೀಕ್ಷೆಯಲ್ಲಿರುವವರು. ಅವರು ತಮ್ಮ ಕೈಗಳಲ್ಲಿ
ಹೊತ್ತಿರುವ ಹಣತೆಗಳು, ಮದಲಿಂಗರನ್ನು ಸ್ವಾಗತಿಸಿ, ಆತನನ್ನು ಮದುವೆ ಮನೆಯೊಳಗೆ ಕರಕೊಂಡು
ಬರಲಿಕ್ಕಾಗಿ ಬೆಳಗುತ್ತಿರುತ್ತವೆ. ಕ್ರೈಸ್ತರು ಬೆಳಕಿನ ಮಕ್ಕಳಲ್ಲವೇ?
ಮದಲಿಂಗನೋ ಆಗಲೇ ಬಂದುಬಿಟ್ಟನು! ನಡುರಾತ್ರಿಯಲ್ಲಿ ಒಂದು ಕೂಗು ದೂರದಿಂದ ಕೇಳಿಸಿತು?
"ಇಗೋ,ಮದಲಿಂಗನು! ಆತನನ್ನು ಎದುರುಗೊಳ್ಳಲು ಹೊರಡಿರಿ"
ಧಡಕ್ಕನೆ ಎದ್ದ ಕನ್ಯೆಯರಲ್ಲಿ, ಬುದ್ಧಿವಂತರಾಗಿದ್ದ ಐವರು, ತಮ್ಮ ಹಣತೆಗಳಿಗೆ ಇನ್ನಷ್ಟು
ಎಣ್ಣೆ ಹಾಕಿ, ಬತ್ತಿಗಳನ್ನು ನೇರಮಾಡಿದರೆ, ಮಿಕ್ಕವರು ಎಣ್ಣೆಗಾಗಿ ಅವರನ್ನು
ಅಂಗಲಾಚುತ್ತಿದ್ದಾರೆ. ಆದರೆ, ಅವರು ಬುದ್ಧಿವಂತರಲ್ಲವೇ? "ನಿಮಗೆ ಎಣ್ಣೆ ಬೇಕಾದರೆ ಹೊರಗೆ
ಹೋಗಿ ಕೊಂಡುಕೊಳ್ಳಿರಿ, ಈಗ ನಾವೇನಾದರೂ ನಿಮಗೆ ಎಣ್ಣೆ ಕೊಟ್ಟರೆ, ಅದು ನಿಮಗೂ ಸಾಲುವುದಿಲ್ಲ
ನಮಗೂ ಸಾಕಾಗುವುದಿಲ್ಲ" ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು!
ಬುದ್ಧಿಹೀನ ಕನ್ಯೆಯರ ಹಣತೆಗಳಲ್ಲಿ ಬೆಳಕು ಆರಿಹೋಗಿದೆ. ಮೊದಲೆಲ್ಲ ಲೋಕದ ರೋಚಕ
ಆಸಕ್ತಿಗಳಲ್ಲಿ ಲೋಲರಾಗಿದ್ದ ಈ ಐದು ಕನ್ಯೆಯರಿಗೆ, ಈಗ ಪರಲೋಕರಾಜ್ಯದ ಅನುಕೂಲ, ಆನಂದಗಳನ್ನು
ಅನುಭವಿಸುವ ಆಸೆ! ಆದರೆ, ಅದಕ್ಕೆ ಬೇಕಾಗುವ ಸಿದ್ಧತೆ ಅವರಲ್ಲಿಲ್ಲ. ಆ ಸಿದ್ಧತೆಯನ್ನು ಇತರರಿಂದ
ಪಡೆಯಲೂ ಸಾಧ್ಯವಿಲ್ಲ. ರಕ್ಷಣೆ ಬೇಕಾದರೆ, ನಮ್ಮಲ್ಲಿ ಕೃಪೆ ಇರಬೇಕು. ಅದು, ಅವಸರದಲ್ಲಿ
ದಕ್ಕುವುದೂ ಇಲ್ಲ!
ಬುದ್ಧಿಹೀನ ಕನ್ಯೆಯರು ಎಣ್ಣೆ ಕೊಳ್ಳಲು, ಆ ರಾತ್ರಿಯಲ್ಲಿ ಅಲೆದಾಡುತ್ತಿರುವಾಗ, ಮದಲಿಂಗನ
ಆಗಮನವಾಯಿತು. ಸಿದ್ಧವಾಗಿದ್ದ ಐದು ಕನ್ಯೆಯರು ಸಂಭ್ರಮದಿಂದ ಮದುವೆ ಮನೆಯೊಳಗೆ ಪ್ರವೇಶಿಸಿದರು.
ಅವರಿಗೆ ಕ್ರಿಸ್ತರ ನಿಕಟ ಅನ್ಯೋನ್ಯತೆ ಲಭ್ಯವಾಯಿತು. ಬಾಗಿಲನ್ನು ಕೂಡಲೇ ಮುಚ್ಚಲಾಯಿತು. ಮೊದಲು,
ಇಕ್ಕಟ್ಟಾಗಿಯಾದರೂ ಅರೆತೆಗೆದುಕೊಂಡಿತ್ತು, ಈಗಲಾದರೋ ಅದು ಪೂರ್ತಿಯಾಗಿ ಮುಚ್ಚಿಕೊಂಡಿತು. ಎಷ್ಟು
ತಟ್ಟಿದರೂ, ಎಷ್ಟು ಕೂಗಿಕೊಂಡರೂ,ಅಲ್ಲಿನ ಪ್ರವೇಶದ ಆಶೀರ್ವಾದ ದೊರಕದು. ಬುದ್ಧಿಹೀನತೆಗೆ
ತಿರಸ್ಕಾರವೇ ಪ್ರತಿಫಲ!
ಪ್ರಿಯರೇ, ನಮಗೂ ಹೀಗಾಗದಂತೆ ನಾವು ನೋಡಿಕೊಳ್ಳೋಣ. ಕರ್ತರ ಪ್ರತ್ಯಕ್ಷತೆಯ ದಿನ ನಮಗೆ
ತಿಳಿಯದು. ಅವರು, ನಾವು ನೆನೆಸದ ಗಳಿಗೆಯಲ್ಲಿ ಬರುತ್ತಾರಾದ ಕಾರಣ, ನಾವು ಸದಾ ಎಚ್ಚರದಿಂದಿದ್ದು
ಪ್ರತಿ ನಿಮಿಷದಲ್ಲಿಯೂ ಸಿದ್ಧರಾಗಿರೋಣ. ನಮ್ಮ ಹೃದಯಗಳಲ್ಲಿ ಯಾವಾಗಲೂ ಪವಿತ್ರಾತ್ಮನು ತುಂಬಿರಲಿ!
-ಡಾ. ಲೀಲಾವತಿ ದೇವದಾಸ್
No comments:
Post a Comment