Wednesday, 9 May 2018

ಕೊನೇ ಮಾತು


ಒಂದಷ್ಟು ಮಂದಿ ಗೆಳೆಯರು ಒಟ್ಟುಗೂಡಿ, ಬೆಟ್ಟ ಹತ್ತುವುದೆಂದು ತೀರ್ಮಾನಿಸಿದೆವು. ಬೆಂಗಳೂರಿನಲ್ಲಿ ಬೆಟ್ಟವೆಂದರೆ ನಂದಿಬೆಟ್ಟ ತಾನೆ? ಆದರೆ ನಮಗೆ ಅದು ಚೂರೇ ಚೂರು ದೊಡ್ಡದಾಗಿ ಕಂಡದ್ದರಿಂದ, ನಂದಿಬೆಟ್ಟದ ಪಕ್ಕದ ಸ್ಕಂದಗಿರಿಯನ್ನು ಹತ್ತುವುದೆಂದು ಗುರುತು ಹಾಕಿಕೊಂಡೆವು. ಬೆಳ್ಳಂಬೆಳಗ್ಗೆ ಹೊರಟು ಗಿರಿಯ ಬುಡ ತಲುಪಿದ್ದಾಯಿತು.
ತಿಂಡಿ ಮುಗಿಸಿ, ಒಂದೆರಡು ನೀರಿನ ಬಾಟಲು ಎತ್ತಿಕೊಂಡು, ಮಧ್ಯಾಹ್ನದ ಹೊತ್ತಿಗೆಲ್ಲಾ ವಾಪಾಸು ಬಂದು ಬಿಡಬಹುದು ಎಂದುಕೊಂಡು ಕಾಲುದಾರಿ ಹಿಡಿದೆವು. ದಾರಿ ಸ್ವಲ್ಪ ದೂರ ಸಾಗುವಷ್ಟರಲ್ಲಿ ಮುಗಿದುಹೋಗಿತ್ತು. ದುರದೃಷ್ಟವಶಾತ್ ಎಲ್ಲರೂ ಸಾಮಾನ್ಯವಾಗಿ ಹತ್ತಿಳಿಯುವ ದಾರಿ ಅದಾಗಿರಲಿಲ್ಲ. ಇದು ದಟ್ಟವಾದ, ಮುಳ್ಳು ಗಿಡಗಂಟಿಗಳು ತುಂಬಿಕೊಂಡ ಕೊರಕಲು ಹಾದಿ. ಬೆಟ್ಟ ಹತ್ತಲೆಂದೇ ಅಷ್ಟು ದೂರದಿಂದ ಬಂದಿದ್ದೇವೆ. ಈಗ ಬೆನ್ನು ಮಾಡುವುದು ಹೇಗೆ? ಸರಿ, ನಾವೇ ಹಾದಿ ಮಾಡಿಕೊಂಡು ಹತ್ತುವುದೆಂಬ ಭಯಾನಕ ನಿರ್ಧಾರಕ್ಕೆ ಬಂದೆವು. ಅದರಂತೆ ಹತ್ತಲು ಮೊದಲಾದೆವು. ಏರುಹಾದಿಯ ಜೋರು ಉಸಿರಿನಲ್ಲಿ, ಬಿಸಿಲ ಝಳವೂ ಬೆರೆತು ಹಬೆಯಾಡತೊಡಗಿತು. ಹುಡುಗರೋ ಸಾಫ್ಟ್ ವೇರ್ ಜನ. ಕೆಲವರ ದೇಹದ ಆಕಾರಗಳು ಬೆಟ್ಟವನ್ನೇ ಅಣಕಿಸುವಂತಿದ್ದುವು. ಒಂದೆರಡು ಮೈಲು ಹತ್ತುತ್ತಿರುವಂತೆ ಒಬ್ಬೊಬ್ಬರಾಗಿ ವಾಸ್ಸು ಹೋಗತೊಡಗಿದರು. ಕೊನೆಗೆ ಉಳಿದಿದ್ದು ನಾನು ಮತ್ತು ಆಲ್ಬರ್ಟ್. ನನಗೋ ಹತ್ತೇ ಬಿಡಬೇಕೆನ್ನುವ ಅತೀವ ಉತ್ಸಾಹ. ಹತ್ತಿದೆ. ಹತ್ತೇ ಹತ್ತಿದೆ. ಬೆಟ್ಟದ ತುತ್ತತುದಿ ಮುಟ್ಟಿ 'ಹೋ...' ಎಂದು ಕೂಗಿದೆ. ಅದರ ನೆತ್ತಿಯ ಮೇಲೆ ಕೂತು ತಂಪು ಗಾಳಿ ಆಸ್ವಾದಿಸಿದೆ. ನೆಲದಲ್ಲಿ ಹೆಸರು ಬರೆದೆ. ಎಷ್ಟು ಹೊತ್ತಾದರೂ ಆಲ್ಬರ್ಟ್ ಬರಲೇ ಇಲ್ಲ. ನನಗೋ ಭಯವಾಗತೊಡಗಿತು. ಕತ್ತಲು ಬೇರೆ ಆವರಿಸುತ್ತಿತ್ತು. ಅಪರಿಚಿತರು ಯಾರಾದರೂ ದಾಳಿ ಮಾಡಿದರೆ? ಮೊಬೈಲು ಬೇರೆ ಹೊಸದು, ಏನು ಮಾಡುವುದೆಂದು ತೋಚದೆ ಬೆಟ್ಟ ಇಳಿಯತೊಡಗಿದೆ. ಒಂದು ತುದಿಯಲ್ಲಿ ನಿಂತು 'ಹೋಯ್' ಎಂದು ಕೂಗಿದೆ. ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ಕೂಗುತ್ತಲೇ ಇದ್ದೆ. ಕೂಗಿ ಕೂಗಿ ಸಾಕಾಯಿತು. ಕೊರಳಿನ ದನಿಯೂ ಉಡುಗಿ ಹೋದಂತಾಯಿತು. ಊಟ ಮಾಡಿರಲಿಲ್ಲ. ಕುಡಿಯಲು ನೀರೂ ಇರಲಿಲ್ಲ. ಮೊಬೈಲ್ ನೋ ನೆಟ್ ವರ್ಕ್. ಬೇರೆ ಯಾವ ದಾರಿ ಕಾಣದೆ ನನ್ನ ಅಂತರಂಗವನ್ನೆಲ್ಲಾ ಒಟ್ಟು ಮಾಡಿ ಕೂಗಿದೆ. 'ಹೋ...' ಎನ್ನುವ ಪ್ರತಿಕ್ರಿಯೆ ಬಂತೆ? ಅಥವಾ ಅದು ನನ್ನ ಭ್ರಮೆಯೇ? ಮತ್ತೊಮ್ಮೆ ಕೂಗಿದೆ. ಹೌದು ಬಾರಿ ಪ್ರತಿಧ್ವನಿಯಂತೆ ಕೇಳಿತು. ಅದು ಪ್ರತಿಧ್ವನಿಯಾಗಿರದೇ ಆಲ್ಬರ್ಟ್ ದನಿಯೇ ಆಗಿತ್ತು. ಅದೇ ದನಿಯನ್ನು ಅನುಸರಿಸಿ, ಅನುಕರಿಸಿ, ಇಬ್ಬರೂ ಒಟ್ಟಾಗಿ ಅದೇ ಬೆಟ್ಟದ ಮೇಲೆ ಕೂತು ಉಳಿದ ಬಾಳೆಹಣ್ಣು ಅರ್ಧರ್ಧ ಹಂಚಿಕೊಂಡು ತಿನ್ನುವಾಗ ಜೀವ ಬಂದಂತಾಯಿತು.
ಚುನಾವಣೆ ಹತ್ತಿರಾಗುತ್ತಿದೆ. ಪಕ್ಷಗಳ ಜಗಳ ತಾರಕ್ಕಕ್ಕೇರಿದೆ. ಎಲ್ಲರೂ ಭ್ರಷ್ಟರೇ, ಯಾರಿಗೆ ಮತ ಹಾಕಿದರೂ ಯಾವ ಪ್ರಯೋಜನವೂ ಇಲ್ಲ ಎನ್ನುವ ಮಾತುಗಳನ್ನು ಕೇಳಿದಾಗ ಕತೆ ನೆನಪಾಯಿತು. ನಾವು ಕೂಗುತ್ತಲೇ ಇರಬೇಕಾಗುತ್ತದೆ. ಮತಹಕ್ಕನ್ನು ಚಲಾಯಿಸಲೇ ಬೇಕಾಗುತ್ತದೆ. ಬೇರೆ ವಿಧಿಯಿಲ್ಲ. ಕೂಗುವುದನ್ನು ಬಿಟ್ಟರೆ ಬದುಕಿಲ್ಲ ಎಂದು ಅರಿತು ಕೂಗಬೇಕು. ಹೋ ಎಂದು ಕೂಗಬೇಕು. ಪ್ರತಿಕ್ರಿಯೆಗಾಗಿ ಕಾಯುತ್ತಾ......
ಜೀವಪರ ಸಮಾಜಕ್ಕಾಗಿ ಹಪಾಹಪಿಸುತ್ತಾ......
- ಸಮೀಶಾ

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...