Wednesday, 9 May 2018

ತಲೆ ತಗ್ಗಿಸುವ ಈ ಕೃತ್ಯವನ್ನು ವಿರೋಧಿಸುತ್ತಾ ವಿಶ್ವಮಾನವರಾಗೋಣ - ಜೋವಿ

ಏನಾಗಿದೆ ನಮಗೆ? ಪ್ರತಿಯೊಂದನ್ನೂ ಧರ್ಮದ ದೃಷ್ಟಿಯಿಂದ ನೋಡುತ್ತಿದ್ದೀವಲ್ಲ, ನಮ್ಮೊಳಗೆ ಕೋಮುವಾದವೆಂಬ ದೆವ್ವ ಸೇರಿಬಿಟ್ಟಿದ್ಯೋ ಎನೋ, ಇಂದು ಸಾಧು ಪ್ರಾಣಿ ಹಸುವನ್ನು ಹಿಂದೂ ಆಗಿಸಿದ್ದೀವಿ, ನಮ್ಮ ಸಂಕುಚಿತತೆಯಿಂದ ಹುಲಿ ಮುಸ್ಲಿಂ ಅಗಿಬಿಟ್ಟಿದೆ. ಹಸಿರೆಂಬ ಬಣ್ಣ ಮುಸ್ಲಿಂ ಅದರೆ, ಕೇಸರಿ ಎಂಬುವುದು ಹಿಂದೂ ಧರ್ಮವಾಗಿಬಿಟ್ಟಿದೆ. ಏಕೋ ಎನೋ ಎಲ್ಲವನ್ನೂ ಕೋಮುಪೀಡಿತ ಕಣ್ಣುಗಳಿಂದ ನೋಡುತ್ತಿದ್ದೇವಲ್ಲಾ, ಸರಿನಾ? ಓಲಾ ಕ್ಯಾಬನ್ನು ಬುಕ್ ಮಾಡಿ, ಚಾಲಕ ಮುಸ್ಲಿಂ ಆದ ಕಾರಣ ತಕ್ಷಣ ಕ್ಯಾನ್ಸೆಲ್ ಮಾಡುತ್ತೇವೆ. ಇನ್ನೊಂದು ಕಡೆ, ಮುಸ್ಲಿಂ ಆದ ಕಾರಣ ಅವರಿಗೆ ಮನೆಯನ್ನು ಬಾಡಿಗೆಗೆ ಕೊಡಲು ನಿರಾಕರಿಸುತ್ತೇವೆ. ಹೌದು ನಾವು ತಿನ್ನೋ ಊಟಕ್ಕೆ, ಹಾಕಿಕೊಳ್ಳೋ ಬಟ್ಟೆಗೆ, ಕಲಿಯುತ್ತಿರುವ ವಿದ್ಯಾಲಯಗಳಿಗೆ, ವಾಸ ಹೂಡುವ ಸ್ಥಳಗಳಿಗೆ, ಓದುವ ಪಾಠಗಳಿಗೆ ಎಲ್ಲದಕ್ಕೂ ಧರ್ಮ ಜಾತಿ ಸಮೀಕರಿಸಿ ಅಲ್ಪಮತಿಗಳಾಗುತ್ತಿದ್ದೇವೆ. ಇನ್ನಷ್ಟ ಅಪಾಯಕರ ವಿಷಯವೆಂದರೆ, ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಕೊಲೆಗಳಿಗೂ ಧರ್ಮಗಳ ಜತೆ ಸಂಬಂಧ ಕಲ್ಪಿಸಿ ಸಮರ್ಥಿಸಿಕೊಳ್ಳುತ್ತಿದ್ದೇವೆ. ಅಷ್ಟೇ ಅಲ್ಲ, ನ್ಯಾಯಪರವಾಗಿರಬೇಕಾದ ಕೋರ್ಟುಗಳ ತೀರ್ಪುಗಳೂ ಸಹ ಕೋಮುವಾದದ ವಾಸನೆಯಲ್ಲೇ ಹೊರಬರುತ್ತಿವೆ. ಮಾನವೀಯತೆಗೆ ಬದ್ಧರಾಗಬೇಕಾದ ಧಾರ್ಮಿಕ ನಾಯಕರು ರಾಜಕೀಯ ಲಾಭಕ್ಕಾಗಿ ದ್ವೇಷವನ್ನು ಪ್ರಚೋದಿಸುತ್ತಿದ್ದಾರೆ. ಇವುಗಳ ಜೊತೆಗೆ ಇಂದು ಚುನಾವಣೆಗಳು ಸಹ ಕೋಮು ಮತ್ತು ಜಾತಿಯ ಹೆಸರಿನಲ್ಲಿ ನಡೆಯುತ್ತಿರುವುದು ನಿಜವಾಗಲೂ ಖಂಡನೀಯ.
ಅಸಿಫಾಳ ಅತ್ಯಾಚಾರ ಮತ್ತು ಪ್ರತಿಭಟನೆಗಳು
ಕಠುವಾದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಬಗ್ಗೆ ನಮಗೆ ಗೊತ್ತಿದೆ. ಈ ಪೈಶಾಚಿಕ ಘಟನೆಯನ್ನು ವಿರೋಧಿಸಿ ಹಲವಾರು ಕಡೆ ಪ್ರತಿಭಟನೆಗಳು ನಡೆದವು. ಚಿತ್ರ ಕಲಾವಿದೆ ದುರ್ಗಾ ಮಾಲತಿ ತಮ್ಮ ಕಲಾಕೃತಿಗಳ ಮೂಲಕ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ದುಃಖಕರ ವಿಷಯವೆಂದರೆ, ಅವರು ಪ್ರತಿಭಟನೆಯ ಅಸ್ತ್ರವಾಗಿ ಬಳಸಿದ ಅವರ ಕಲಾಕೃತಿಗಳನ್ನು ವಿರೋಧಿಸಿ, ದುಷ್ಕರ್ಮಿಗಳು ಅವರ ಮನೆಯ ಮೇಲೆ ರಾತ್ರಿಯಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ. ಮನೆಯ ಮುಂದೆ ನಿಲ್ಲಿಸಿದ ಜೀಪ್ ಕೂಡ ದುಷ್ಕರ್ಮಿಗಳಿಂದ ಜಖಂಗೊಂಡಿದೆ ಎಂದು ಪ್ರತಿಕೆಯ ವರದಿಯಲ್ಲಿ ತಿಳಿಸಲಾಗಿದೆ. ಏತನ್ಮಧ್ಯೆ ಕೇಸು ವಾದಿಸುತ್ತಿರುವ ವಕೀಲೆ ದೀಪಿಕಾ ಸಿಂಗ್ ರಜಾವತ್ "ನನಗೆ ಜೀವ ಬೆದರಿಕೆ ಇದೆ" ಎಂದು ಹೇಳಿದ್ದಾರೆ. "ಸಂತ್ರಸ್ತ ಬಾಲಕಿಯ ಹೆಸರನ್ನೇ ನನ್ನ ಮಗಳಿಗೂ ಇಡುವೆ" ಎಂದು ಪ್ರತಿಭಾ ಕುಳಾಯಿ ಹೇಳಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯ ಬಂಧನ ವಿರೋಧಿಸಿ ಹಿಂದೂ ಏಕತಾ ಮಂಚ್ ಎಂಬ ಸಂಘಟನೆ ರ್‌ಯಾಲಿ ನಡೆಸಿದರೆ, ಜಮ್ಮು ಮತ್ತು ಕಾಶ್ಮೀರದ ಇಬ್ಬರು ಬಿಜೆಪಿ ಸಚಿವರು ಆ ಸಂಘಟನೆಗೆ ಬೆಂಬಲ ಸೂಚಿಸಿದ್ದಾರೆ. ಕೊನೆಗೆ, ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ದಾರೆ. ಇನ್ನೊಂದು ಘಟನೆಯಲ್ಲಿ ಬಿಜೆಪಿಗರಿಗೆ ಪ್ರವೇಶವಿಲ್ಲ, ಇಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳಿದ್ದಾರೆ. ವೋಟ್ ಕೇಳಲು ಬರುವವರು ಪ್ರಚಾರ ಪತ್ರಗಳನ್ನು ಗೇಟಿನ ಮುಂದೆಯೇ ಹಾಕಿ ಹೊರಡಿ ಎಂದು ಬರೆದಿರುವ ಪತ್ರಗಳನ್ನು ಕೇರಳದಲ್ಲಿ ಕೆಲ ಮನೆಗಳ ಮುಂದೆ ಅಂಟಿಸಲಾಗಿದೆ. ಸಮಾಜಿಕ ತಾಣಗಳಲ್ಲಂತೂ ಅತ್ಯಾಚಾರದ ವಿರುದ್ಧ ನಾನಾ ರೀತಿಯ ಪೋಸ್ಟುಗಳು ಮತ್ತು ಪೋಸ್ಟರುಗಳು ಕಾಣಿಸಿಕೊಂಡವು. ಹಲವಾರು ಕಡೆ ಮೌನ ಪ್ರತಿಭಟನೆಗಳು, ಮೇಣದಬತ್ತಿ ಪ್ರತಿಭಟನೆಗಳು, ರಸ್ತೆತಡೆ ಹೀಗೆ ಪ್ರತಿಭಟನೆಗಳು ನಡೆದಿದೆ. ಈ ಪ್ರತಿಭಟನೆಗಳಲ್ಲಿ ಅನೇಕ ಶಾಲಾಕಾಲೇಜುಗಳ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ಪಾಲುಗೊಂಡು ತಮ್ಮ ಅಸಮಾಧಾನವನ್ನು ತೋರ್ಪಡಿಸಿ, ಆರೋಪಿಗಳ ವಿರುದ್ಧ ಮತ್ತು ಅರೋಪಿಗಳ ಪೈಶಾಚಿಕ ಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತಿರುವವರನ್ನು ಖಂಡಿಸಿ, ಹೆಣ್ಣು ಮಕ್ಕಳ ಸುರಕ್ಷತೆಗೆ ಸರ್ಕಾರಗಳು ತಮ್ಮ ಸಂಕಲ್ಪವನ್ನು ತೋರಿಸಬೇಕೆಂದು ಒತ್ತಾಯಿಸಿದ್ದಾರೆ. ಕಾಶ್ಮೀರದ ಕಠುವಾದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯ ಸಿಗುವ ಭರವಸೆ ಇದೆ ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹನ್ನೆರಡು ವರ್ಷದೊಳಗಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂಬ ಕೂಗು ಕೂಡ ಕೇಳಿಬರುತ್ತಿದೆ. `ಭೇಟಿ ಬಚಾವೋ' ಘೋಷಣೆಯು ಜನರಿಗೆ ಬಿಜೆಪಿ ನೀಡಿರುವ ಎಚ್ಚರಿಕೆಯಂತೆ ಭಾಸವಾಗುತ್ತಿದೆ ಎಂದು ಕೆಲವರು ಸರ್ಕಾರದ ಘೋಷಣೆಯನ್ನು ಉಲ್ಲೇಖಿಸಿ ಸರ್ಕಾರದ ನಿಲುವನ್ನು ಖಂಡಿಸಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಖಂಡನೆ' ಎಂಬ ಶೀರ್ಷಿಕೆ ಅಡಿ ಬಾಲಕಿ ಕಣ್ಣಿರಿಡುತ್ತಿರುವ ಚಿತ್ರವನ್ನು ಝರಾ ಆಂಖೋ ಮೇ ಭರ್ಲೋ ಪಾನಿ' ಎಂಬ ಶೀರ್ಷಿಕೆಯ ಆಡಿಯಲ್ಲಿ ಅಮುಲ್ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸಲಾಗಿದೆ. ಇದನ್ನು ಅಸಂಖ್ಯಾತ ಮಂದಿ ಶೇರ್ ಮಾಡಿದ್ದು, ಅನೇಕ ಜನ ಪ್ರತಿಕ್ರಿಯಿಸಿದ್ದಾರೆ., ಬರಹಗಾರರು ಕೂಡ ಈ ಅನಾಗರಿಕ ಕೃತ್ಯವನ್ನು ಸೃಜನಾತ್ಮಕವಾಗಿ ಖಂಡಿಸಿದ್ದಾರೆ. ದ್ವೇಷಕ್ಕಾಗಿ ನಡೆದ ಈ ಪೈಶಾಚಿಕ ಕೃತ್ಯವನ್ನು ಕವಿಯಿತ್ರಿ ಸಂಧ್ಯಾದೇವಿ ಖಂಡಿಸಿ ತಮ್ಮ ಆಕ್ರೋಶವನ್ನು ಈ ರೀತಿಯಾಗಿ ವ್ಯಕ್ತಪಡಿಸುತ್ತಾರೆ...

ಇನ್ನಿಲ್ಲದಂತೆ ಇನ್ನೆಂದೂ ನಿಲ್ಲದಂತೆ
ಅಳುತ್ತಿದ್ದಾಳೆ
ಚೀರಾಡುತ್ತಿದ್ದಾಳೆ. ಹೀಗೆ ಪ್ರಾರಂಭವಾಗುವ ಕವಿತೆ ಕೊನೆಗೆ
ಹಾ.ಮಗು ಪ್ರಜ್ಞೆ ತಪ್ಪುತ್ತಿದೆ
ಅಳುವುದನು ನಿಲ್ಲಿಸುತ್ತಿದೆ
ನೋವಿನಿಂದ ಕಳಚಿಕೊಳ್ಳುತ್ತಿದೆಯೇ?
ಇದೇನು? ಇದೇನು
ಅಸಹಾಯಕ ದೇವರು  ಮಗುವಿಗೆ ಮಾಡುತ್ತಿರುವ ಏಕೈಕ ಸಹಾಯವೇ
ಅಯ್ಯೊ ದೇವರೇ
ಆರ್ತರು ಕರೆಯುವುದನ್ನು ಯಾರನ್ನು?
ಹೀಗೆ ಅಸಹಾಯಕತೆಯ ದನಿಯಲ್ಲಿ ಅವರ ಕವಿತೆ ಕೊನೆಗೊಳ್ಳುತ್ತದೆ. ಇದು ಇಡೀ ದೇಶದ ಹೆಣ್ಣು ಮಕ್ಕಳ ಅಸಹಾಯಕತೆಯ ಕೂಗೇ ಇರಬೇಕು!!
ಅಸಿಫಾಳ ಅತ್ಯಾಚಾರ ಮತ್ತು ಪ್ರತಿಕ್ರಿಯೆ
ಅತ್ಯಾಚಾರಪೀಡಿತೆ ಮುಸ್ಲಿಂ ಆಗಿರುವುದರಿಂದ ದೇಶದೆಲ್ಲೆಡೆ ಹೋರಾಟ ಪ್ರತಿಭಟನೆಗಳು ನಡೆಯುತ್ತಿದ್ದು ನಮ್ಮ ಪ್ರತಿಭಟನೆಗಳು ಹೋರಾಟಗಳು ಅತ್ಯಾಚಾರದ ವಿರುದ್ಧ ಇರಬೇಕೇ ಹೊರತು ಅತ್ಯಾಚಾರಿಗಳ ಅಥವಾ ಪೀಡಿತರ ಧರ್ಮ ಜಾತಿ ಮುಖ್ಯವಾಗಬಾರದೆಂದು ಕೆಲವರು ಹೇಳುತ್ತಿದ್ದಾರೆ. ನಮ್ಮ ಹೆಣ್ಣು ಮಕ್ಕಳ ಮೇಲೂ ಮುಸ್ಲಿಂ ಕೋಮಿನವರು ಅತ್ಯಾಚಾರ ಮಾಡಿದ್ದಾರೆ. ಅದನ್ನು ಸಹ ವಿರೋಧಿಸಿ ಬುದ್ಧಿಜೀವಿಗಳೇ ಎಂದು ಅತ್ಯಾಚಾರದ ಪ್ರಕರಣಗಳನ್ನು ಧರ್ಮವನ್ನು ಆಧಾರಿಸಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಬೇರೆ ಬೇರೆ ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಿಜೆಪಿಯ ಕೆಲ ಮಹಾನುಭಾವರ ಹೆಸರಿರುವ ಪಟ್ಟಿಯು ಸಹ ಅಡೆತಡೆಯಿಲ್ಲದೆ ಹರಿದಾಡುತ್ತಿರುವ ಸಂದರ್ಭದಲ್ಲಿ ಇದೊಂದು ಕಾಸಿಗಾಗಿ ಸುದ್ದಿಯ ಒಳ್ಳೆಯ ಉದಾಹರಣೆ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನೂ ಕೆಲವರು ಇದು ರಾಜಕೀಯ ಪ್ರೇರಿತ, ಕೀಳು ರಾಜಕೀಯಕ್ಕೆ ಇಳಿದಿರುವ ರಾಜಕೀಯ ಪಕ್ಷಗಳ ಷಡ್ಯಂತ್ರ ಎಂದು ವಿರೋಧ ಪಕ್ಷಗಳನ್ನು ಟೀಕಿಸುತ್ತಿದ್ದಾರೆ. ಅಭಿವೃದ್ಧಿ ಪರವಾದ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಆ ಪಾರ್ಟಿಗೆ ಮುಜುಗರ ಉಂಟುಮಾಡಲು ನಡೆದ ಯೋಜಿತ ಪಿತೂರಿಯೆಂದು ಕೆಲವರು ದೋಷಾರೋಪಣೆ ಮಾಡಿದ್ದಾರೆ. ಇನ್ನೂ ಕೆಲವರು ನಮ್ಮ ದೇಶದಲ್ಲಿ ಮಾಮೂಲಾಗಿ ನಡೆಯುವ ಘಟನೆಯಿದು, ಅದಕ್ಕೆ ಇಷ್ಟೊಂದು ಪ್ರಾಮುಖ್ಯತೆಯನ್ನು ಕೊಡುವುದು ಅನಗತ್ಯವೆಂದು ಹೇಳಿದ್ದಾರೆ. ಈ ಕೇಸಿಗೆ ಸಂಬಂಧಿಸಿದಂತೆ ಅರೋಪಿಗಳ ಚಾರ್ಜ್ ಶೀಟಿನಲ್ಲಿ, ತಮ್ಮ ಪ್ರದೇಶದಿಂದ ಮುಸ್ಮಿಂ ಬುಡಕಟ್ಟಿನ ಜನಾಂಗವನ್ನು ಓಡಿಸಲು ಈ ಹುಡುಗಿಯನ್ನು ರೇಪ್ ಮಾಡಿ ಕೊಲ್ಲಲಾಯಿತು ಎಂದು ಆರೋಪಿಗಳು ಹೇಳಿರುವುದಾಗಿ ತಿಳಿಸಿಲಾಗಿದೆ.

ತಲೆ ತಗ್ಗಿಸುವ ಈ ಕೃತ್ಯವನ್ನು ವಿರೋಧಿಸುತ್ತಾ ವಿಶ್ವಮಾನವರಾಗೋಣ.
ಹೌದು ಈ ಪ್ರಕರಣವನ್ನು ನಾನಾ ರೀತಿಯಲ್ಲಿ ನೋಡಿ ವಿಶ್ಲೇಷಣೆ ಮಾಡಬಹುದು. ಧರ್ಮ ರಾಜಕೀಯ, ಓಟ್‍ಬ್ಯಾಂಕ್, ಜಾತಿ, ಸ್ಥಳ ಸಂದರ್ಭ, ಕಾನೂನ ಶಿಕ್ಷೆ, ಮನುಷ್ಯನ ನಡವಳಿಕೆ ಮತ್ತು ಮನಸ್ಠಿತಿ, ಸಮಾಜಿಕ ಸ್ಥಿತಿಗತಿ ಆಧಾರಿತ ಹೀಗೆ ಹಲವಾರು ವಿಭಿನ್ನ ಕೋನಗಳಿಂದ ಆ ಎಂಟು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರವನ್ನು ವಿಶ್ಲೇಷಿಸಬಹುದು. ನಮ್ಮ ವಿಶ್ಲೇಷಣೆ ಯಾವುದೇ ಅಧಾರದಲ್ಲಿರಲಿ ಒಟ್ಟಾರೆ ನಮ್ಮ ನಿಲುವು ನ್ಯಾಯಪರವಾಗಿರಬೇಕು, ಜೀವಪರವಾಗಿರಬೇಕು, ಅಶಕ್ತರ ಪರವಾಗಿರಬೇಕು. ಕೊನೆಗೆ ಜಾತಿ ಮತಗಳ ಎಲ್ಲೆ ಮೀರಬೇಕು. ಒಂದು ಸಮುದಾಯವನ್ನು ತೊಡೆದುಹಾಕಲು ಅಥವಾ ಓಡಿಸಲು ಅತ್ಯಾಚಾರವನ್ನು ಆಯುಧವಾಗಿ ಬಳಸುವುದೇ? ಅತ್ಯಾಚಾರವನ್ನು ಅಸ್ತ್ರವಾಗಿ ಬಳಸಿರುವ ಸುಳಿವು ನಮ್ಮಲ್ಲಿ ಬಲಗೊಳ್ಳಲು ಇನ್ನೊಂದು ಕಾರಣವೂ ಇದೆ. ಅರೋಪಿಗಳ ಬೆಂಬಲವಾಗಿ ಹಿಂದೂ ಏಕ್ತಾ ಮಂಚ್ ಎಂಬ ಸಂಘಟನೆ ಪ್ರತಿಭಟನೆಯನ್ನು ಆಯೋಜಿಸಿ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು ಇಂತಹ ರಾಷ್ಟ್ರ ಮತ್ತು ಜೀವ ವಿರೋಧಿ ಕೃತ್ಯಕ್ಕೆ ರಾಷ್ಟ್ರೀಯತೆಯ ಸ್ಪರ್ಶವನ್ನು ನೀಡಲು ಪ್ರಯತ್ನಿಸಿದ್ದಾರೆ. ಈ ಸಂಘಟನೆಯನ್ನು ಬೆಂಬಲಿಸಿ ಸಂವಿಧಾನವನ್ನು ಮತ್ತು ಅದರ ಮೌಲ್ಯಗಳನ್ನು ಕಾಪಾಡಬೇಕಾದವರೇ ಅರೋಪಿಗಳ ಪರ ನಿಂತಿರುವುದು ದೇಶವೇ ತಲೆತಗ್ಗಿಸುವ ಸಂಗತಿಯಾಗಿದೆ. ತಪ್ಪನ್ನು ‌ಸರಿ ಎಂದೂ ಸರಿಯನ್ನು ತಪ್ಪು ಎಂದು ಹೇಳುವ, ಅನ್ಯಾಯವನ್ನು ಸಮರ್ಥಿಸಿಕೊಳ್ಳುವ, ಹಿಂಸೆ ಅನ್ಯಾಯದ ವಿರುದ್ಧ ಇರಬೇಕಾದವರು ಹಿಂಸೆಯಲ್ಲಿ ಪಾಲ್ಗೊಂಡವರ ಪರ ನಿಲ್ಲುವುದು ಇತ್ಯಾದಿ ರಾಜಕೀಯ ಪ್ರೇರಣೆಯಿಂದ ಆದ ವಿವಶತೆ ಅಥವಾ Political compulsion. ಸಮಾಜ, ರಾಜಕೀಯ ಧರ್ಮ, ಜಾತಿ ಇತ್ಯಾದಿಗಳ ಪ್ರಲೋಭನೆಯಿಂದ ಹೊರಬಂದು ನ್ಯಾಯದಪರ ನಿಲ್ಲೋಣ. ಧರ್ಮ, ರಾಜಕೀಯ ಪಕ್ಷಗಳ ಹಿತದೃಷ್ಟಿ ಇಟ್ಟುಕೊಂಡು ನಮ್ಮ ಮಧ್ಯೆ ಅಗುತ್ತಿರುವ ವಿದ್ಯಮಾನಗಳನ್ನು ವಿಶ್ಲೇಷಣೆ ಮಾಡುವುದನ್ನು ಬಿಟ್ಟು ವಸ್ತುಸ್ಥಿತಿಗೆ ಬದ್ಧರಾಗೋಣ. ಜತೆಗೆ ಇಂತಹ ದುಷ್ಟಕೃತ್ಯಗಳನ್ನು ತಡೆಯಲು ಸರ್ಕಾರಗಳು ಎಚ್ಚರವಹಿಸಲೆಂದು ಒಕ್ಕೊರಲಿನಿಂದ ಒತ್ತಾಯಿಸೋಣ. ಅತ್ಯಾಚಾರಿಗಳ ಬೆಂಬಲಕ್ಕೆ ನಿಂತಿರುವ ರಾಜಕೀಯದವರನ್ನು ಮತ್ತು ಸಂಘಟನೆಗಳ ವಿರುದ್ಧ ನಾವು ಧೈರ್ಯದಿಂದ ಮಾತನಾಡೋಣ. ಬನ್ನಿ ಇಂತಹ ಪೈಶಾಚಿಕ ಘಟನೆಗಳನ್ನು ವಿರೋಧಿಸುತ್ತಾ ವಿಶ್ವಮಾನವರಾಗೋಣ.
ಈ ಸಂದರ್ಭಕ್ಕೆ ನನ್ನ ಗೆಳೆಯ ಕಳುಹಿಸಿದ ಮೆಸೇಜನ್ನು ಅನುವಾದಿಸುತ್ತಿದ್ದೇನೆ:

ಅತ್ಯಾಚಾರ ಸಂತ್ರಸ್ತೆಗೆ ನ್ಯಾಯಬೇಕು – ರಾಜಕೀಯ ಮಾಡಬೇಡಿ
ಏರುತ್ತಿರುವ ಪೆಟ್ರೋಲ್ ಬೆಲೆ ಇಳಿಸಿ – ರಾಜಕೀಯ ಮಾಡಬೇಡಿ
ಎಟಿಎಂಗಳಲ್ಲಿ ನಗದು ಇಲ್ಲ – ರಾಜಕೀಯ ಮಾಡಬೇಡಿ
ಮತಯಂತ್ರ ಸರಿಯಾಗಿ ಕೆಲಸ ಮಾಡುತ್ತಿಲ್ಲ – ರಾಜಕೀಯ ಮಾಡಬೇಡಿ
ನೋಟು ರದ್ದತಿಯಿಂದಾದ ಪ್ರಯೋಜನವಾದರೂ ಏನು? – ರಾಜಕೀಯ ಮಾಡಬೇಡಿ
ಉದ್ಯೋಗಗಳು ಏಕೆ ಸೃಷ್ಟಿಯಾಗುತ್ತಿಲ್ಲ? - ರಾಜಕೀಯ ಮಾಡಬೇಡಿ
ರೈತರು ಏಕೆ ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ - ರಾಜಕೀಯ ಮಾಡಬೇಡಿ
ದೇಶದ ಅರ್ಥಿಕ ವ್ಯವಸ್ಥೆ ಏಕೆ ಕುಸಿಯುತ್ತಿದೆ ?- ರಾಜಕೀಯ ಮಾಡಬೇಡಿ  
ಹೀಗೆ ಏನು ಕೇಳಿದರೂ ರಾಜಕೀಯ ಮಾಡಬೇಡಿ ಎಂದು ಹೇಳಿದರೆ
ರಾಜಕೀಯ ಎಂದರೇನು? ಯಾಕಾಗಿ ಈ ರಾಜಕಾರಣಿಗಳು?


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...