Wednesday, 9 May 2018

ಬ್ರಹ್ಮಚರ್ಯ ಮತ್ತು ಯಾಜಕತ್ವ: ಒಂದು ಚರ್ಚೆ

`ತಾಯಿಯ ಉದರದಿಂದಲೇ ನಪುಂಸಕರಾಗಿ ಹುಟ್ಟಿದವರಿದ್ದಾರೆ; ಜನರಿಂದ ನಪುಂಸಕರಾದವರೂ ಕೂಡ ಇದ್ದಾರೆ; ಸ್ವರ್ಗಸಾಮ್ರಾಜ್ಯದ ನಿಮಿತ್ತ ಅವಿವಾಹಿತರಾಗಿ ಇರುವವರೂ ಇದ್ದಾರೆ; ಇದನ್ನು ಅಂಗೀಕರಿಸಬಲ್ಲವನು ಅಂಗೀಕರಿಸಲಿ.' (ಮತ್ತಾಯ ೧೯:೧೨)
ಕೆಲವು ನಿಷ್ಠಾವಂತ, ಧರ್ಮಸಭೆಯ ಬೇರುಮಟ್ಟದ ಮೂಲ ಆಶಯಗಳಿಗೆ ಬದ್ಧರಾಗಿರುವ ಪಾದ್ರಿಗಳ ಗುಂಪುಗಳಲ್ಲಿ ಕೆಲವೊಮ್ಮೆ, ಪಾದ್ರಿತನಕ್ಕೆ ಬ್ರಹ್ಮಚರ್ಯ ಅನಿವಾರ್ಯವೇ? ಎಂಬ ಪ್ರಶ್ನೆಯನ್ನು ಎತ್ತಿ ಚರ್ಚಿಸುವ ಪರಿಪಾಠ ನಡೆಯುತ್ತಲೇ ಇರುತ್ತದೆ. ಈಚೆಗಿನ ಪ್ರಗತಿಯ ನಾಗಾಲೋಟ, ಬದಲಾಗುತ್ತಿರುವ ಜೀವನ ಪದ್ಧತಿ, ಈ ಚರ್ಚೆಗಳಿಗೆ ಹೊಸ ಆಯಾಮಗಳನ್ನು ಒದಗಿಸುತ್ತಿದೆ. ಆಗಾಗ ಪಾದ್ರಿಗಳಿಂದ ನಡೆಯುವ ಮಕ್ಕಳ ದುರ್ಬಳಕೆಯಂಥ ಸುದ್ದಿಗಳು, ಈ ವಿಷಯದ ಚರ್ಚೆ ಮತ್ತೆ ಮುನ್ನೆಲೆಗೆ ಬರುವಂತೆ ಮಾಡುತ್ತದೆ. ಇದಲ್ಲದೇ, ಪಾದ್ರಿಗಳಾಗುವ ಅಭ್ಯರ್ಥಿಗಳ ಸಂಖ್ಯೆಯು ಕಡಿಮೆಯಾಗುತ್ತಿರುವುದು ಆತಂಕದ ಸಂಗತಿಯಾಗಿ ಕಾಡುತ್ತಿದೆ.
ಈ ಗುಂಪುಗಳ ಪಾದ್ರಿಗಳು, ಕಥೋಲಿಕ ಧರ್ಮಸಭೆಯು ಪಾದ್ರಿಗಳಿಗೆ ಬ್ರಹ್ಮಚರ್ಯವನ್ನು ಕಡ್ಡಾಯ ಮಾಡದೇ ಅದನ್ನು ಆಯಾ ಪಾದ್ರಿಗಳ ಇಚ್ಛೆಗೆ ಬಿಟ್ಟುಬಿಡಬೇಕು ಎಂಬ ವಾದವನ್ನು ಮುಂದಿಡಲಾಗುತ್ತಿದೆ.
ಸದ್ಯದ ಮಾಹಿತಿ ಸ್ಫೋಟದ ಜಗತ್ತಿನಲ್ಲಿ, ಬ್ರಹ್ಮಚರ್ಯ ಒಂದು ದೊಡ್ಡ ಹೊರೆಯಾಗಿ ಕಾಡುತ್ತಿದೆ. ಬ್ರಹ್ಮಚರ್ಯ ಜೀವನ ಕಷ್ಟಸಾಧ್ಯವಾಗುವ ಜೀವನ. ಹೀಗಾಗಿ ಬಹಳಷ್ಟು ಜನ ಪಾದ್ರಿಗಳಾಗಲು ಹಿಂದೇಟು ಹಾಕುತ್ತಿದ್ದಾರೆ. ಇಂದಿನ ವ್ಯಾವಹಾರಿಕ ಜೀವನದಲ್ಲಿ, ಪಾದ್ರಿ ಜೀವನವೂ ಒಂದು ಉದ್ಯೋಗವೋ ಎಂಬ ಭಾವನೆಗಳೂ ಮೂಡುತ್ತಿವೆ. ಏನೇ ಇರಲಿ, ಈ ಜೀವನಕ್ಕೆ ಅಧಿಕ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ಆಕರ್ಷಿಸಲು ಬ್ರಹ್ಮಚರ್ಯವನ್ನು ಐಚ್ಛಿಕವೆಂದು ಪಾದ್ರಿಗಳ ವಿವೇಚನೆಗೆ ಬಿಟ್ಟುಬಿಡಬೇಕು ಎಂಬ ಮಾತನ್ನು ತೇಲಿ ಬಿಡಲಾಗುತ್ತಿದೆ.
ಇತ್ತೀಚೆಗೆ ಪಾದ್ರಿಗಳಾಗಲು ಬರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಅಜ್ಜ ನೆಟ್ಟ ಆಲದ ಮರಕ್ಕೆ ನೇತುಕೊಂಡಂತೆ ಬ್ರಹ್ಮಚರ್ಯಕ್ಕೆ ಅಂಟಿಕೊಂಡರೆ ಹೊಸ ತಲೆಮಾರಿನ ಜನತೆಯನ್ನು ಧರ್ಮಸಭೆಯ ಸೇವೆಗೆ ಸಜ್ಜುಗೊಳಿಸುವುದು ಕಷ್ಟವಾಗುತ್ತದೆ ಎಂಬುದು ಅವರ ವಾದ.
ಈಗಲಂತೂ ಪಾದ್ರಿಗಳ ಸಂಖ್ಯೆಯಲ್ಲಿ ಗಣಿನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಇಟಲಿಯಲ್ಲಿ ಈಚೆಗೆ ಹನ್ನೊಂದು ಜನರಿಗೆ ಯಾಜಕ ದೀಕ್ಷೆ ನೀಡಲಾಯಿತು. ಆ ಹನ್ನೊಂದು ಜನರಲ್ಲಿ ಐವರು ಮಾತ್ರ ಇಟಲಿ ಮೂಲದವರಾಗಿದ್ದರು. ಅಮೆರಿಕ ಸೇರಿದಂತೆ ಹಲವಾರು ದೇಶಗಳಲ್ಲಿ ಪಾದ್ರಿಗಳಾಗುವವರ ಸಂಖ್ಯೆ ಇಳಿಮುಖವಾಗಿದ್ದು, ಏಷ್ಯ ಮೂಲದ ಕೇರಳ ಮೊದಲಾದ ಪ್ರದೇಶಗಳಿಂದ ಪಾದ್ರಿಗಳನ್ನು ಆಮದು ಮಾಡಿಕೊಳ್ಳುವ ಸಂಗತಿ ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.
ಆರಂಭದ ಕ್ರೈಸ್ತರ ಇತಿಹಾಸ ಕಾಲದಿಂದಲೂ ಪಾದ್ರಿಗಳಿಗೆ, ಬ್ರಹ್ಮಚರ್ಯ ಕಡ್ಡಾಯವಾಗಿರಲಿಲ್ಲ ಎಂದು ಹೇಳುವ ಅವರು, ಮೊದಲನೇ ಶತಮಾನದಲ್ಲಿನ ಬಹುತೇಕ ಪಾದ್ರಿಗಳು ಮತ್ತು ಬಿಷಪ್ಪರು ಮದುವೆಯಾಗಿದ್ದರು ಎಂಬುದನ್ನು ನೆನಪಿಸಲಾಗುತ್ತಿದೆ.
ಕಳೆದ ೧೨ನೇ ಶತಮಾನದಲ್ಲಿ ಕಥೋಲಿಕ ಧರ್ಮಸಭೆಯು ಪಾದ್ರಿಗಳು ಅವಿವಾಹಿತರಾಗಿರಬೇಕು ಎಂಬ ನಿಯಮವನ್ನು ಜಾರಿಗೆ ತಂದಿತು ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಯುರೋಪಿನ ಪುನರುತ್ಥಾನದ ಕಾಲದಲ್ಲಿ, ಪೋಪರ ಏಕಸ್ವಾಮ್ಯವನ್ನು ವಿರೋಧಿಸಿ ಅಸ್ತಿತ್ವಕ್ಕೆ ಬಂದ ಪ್ರೊಟೆಸ್ಟಂಟ್ ಕ್ರೈಸ್ತ ಧರ್ಮಸಭೆಗಳಲ್ಲಿ ಬ್ರಹ್ಮಚರ್ಯಕ್ಕೆ ವಿದಾಯ ಹೇಳಿ ಪಾದ್ರಿಗಳು ಮದುವೆಯಾಗುವ ಸಂಪ್ರದಾಯ ಆರಂಭವಾಗಿತ್ತು.
ಮುಂದೆ ಎರಡನೇ ವ್ಯಾಟಿಕನ್‌ನ ಸಮಾವೇಶದ ಸಂದರ್ಭದಲ್ಲಿ, ಧರ್ಮಸಭೆ ಈ ಕುರಿತಂತೆ ತನ್ನ ನಿಲುವನ್ನು ಬದಲಿಸೀತು ಎಂಬ ನಿರೀಕ್ಷೆಗಳು ಗರಿಗೆದರಿದ್ದವು. ಆದರೆ, ಕಥೋಲಿಕ ಧರ್ಮಸಭೆ ಪಾದ್ರಿಗಳ ಬ್ರಹ್ಮಚರ್ಯ ಕುರಿತಂತೆ ತನ್ನ ನಿಲುವನ್ನು ಬದಲಿಸಲಿಲ್ಲ. ಇಷ್ಟಿದ್ದರೂ, ಕಥೋಲಿಕ ಧರ್ಮಸಭೆಯೊಂದಿಗೆ ಗುರುತಿಸಿಕೊಳ್ಳುವ ಪೌರ್ವಾತ್ಯ ಕ್ರೈಸ್ತಸಭೆಗಳೂ ಸೇರಿದಂತೆ ಕೆಲವು ಕ್ರೈಸ್ತಸಭೆಗಳಲ್ಲಿನ ಪಾದ್ರಿಗಳಿಗೆ ವಿನಾಯಿತಿ ನೀಡಿ, ಮದುವೆಯಾಗುವ ಅವಕಾಶ ಕಲ್ಪಿಸಿದೆ.
ಸಾಮಾನ್ಯ ತಿಳುವಳಿಕೆಯಂತೆ, ದೇವಸುತ ಪ್ರಭು ಯೇಸುಸ್ವಾಮಿ ಮದುವೆಯಾಗಿರಲಿಲ್ಲ ಹೀಗಾಗಿ ಪಾದ್ರಿಗಳು ಮದುವೆಯಾಗಬಾರದು ಎಂಬ ನಿಲುವನ್ನು ಕಥೋಲಿಕ ಧರ್ಮಸಭೆ ತಳಿದಿರುವುದು ಸಹಜ ಬೆಳವಣಿಗೆ ಎಂದು ಗರುತಿಸಲಾಗುತ್ತಿದೆ.
ಪ್ರಭು ಯೇಸುಸ್ವಾಮಿ ಅವರ ಕಾಲದ ಅವರ ಪರಿಸರದಲ್ಲಿನ ಯೆಹೂದ್ಯರ ಲೋಕರೂಢಿಯಂತೆ, ಒಬ್ಬ ಜವಾಬ್ದಾರಿಯುತ ಯೆಹೂದ್ಯನಾಗಿ ಮದುವೆಯಾಗಿ ಮಕ್ಕಳುಮರಿಗಳನ್ನು ಪಡೆಯಬೇಕಿತ್ತು, ಆದರೆ, ಯೇಸುಸ್ವಾಮಿ ಅಂದಿನ ಯೆಹೂದ್ಯರ ಸಾಮಾಜಿಕ ಪದ್ಧತಿಗೆ ವ್ಯತರಿಕ್ತವಾಗಿ ನಡೆದುಕೊಂಡಿದ್ದಾರೆ. ಅವರ ಕಾಲದಲ್ಲಿ, ದೇವಸ್ಥಾನಗಳಲ್ಲಿದ್ದ ಯಾಜಕರು ಅಂದರೆ ಪೂಜಾರಿಗಳು ಮದುವೆಯಾಗಿರುತ್ತಿದ್ದರು.
ಇಂಥ ಪರಿಸ್ಥಿತಿಯಲ್ಲಿ ಪ್ರಭು ಯೇಸುಸ್ವಾಮಿ ಯಾತಕ್ಕಾಗಿ ಮದುವೆಯಾಗದೇ ಬ್ರಹ್ಮಚರ್ಯವನ್ನು ಪಾಲಿಸಿದರು? ಅಂದು ಸ್ವರ್ಗಸಾಮ್ರಾಜ್ಯದ ಸ್ಥಾಪನೆಗಾಗಿ ಯೇಸು ಬ್ರಹ್ಮಚರ್ಯವನ್ನು ಆಚರಿಸಿದ್ದರು. `ಸ್ವರ್ಗಸಾಮ್ರಾಜ್ಯದ ನಿಮಿತ್ತ ಅವಿವಾಹಿತರಾಗಿ ಇರುವವರೂ ಇದ್ದಾರೆ; ಇದನ್ನು ಅಂಗೀಕರಿಸಬಲ್ಲವನು ಅಂಗೀಕರಿಸಲಿ' ಎಂಬ ಯೇಸುಸ್ವಾಮಿಯ ಮಾತುಗಳನ್ನು ಮತ್ತಾಯ ತನ್ನ ಶುಭಸಂದೇಶದಲ್ಲಿ ದಾಖಲಿಸಿದ್ದಾರೆ.
ತಾವು ಘೋಷಿಸಿದ ಸ್ವರ್ಗಸಾಮ್ರಾಜ್ಯದ ಸ್ಥಾಪನೆಗಾಗಿ, ಯೇಸುಸ್ವಾಮಿ ತಮ್ಮ ಸಂಪೂರ್ಣ ಗಮನವನ್ನು, ಸಮಯವನ್ನು ಹಾಗೂ ತಮ್ಮ ಧೀಶಕ್ತಿಯನ್ನು ಕೇಂದ್ರೀಕರಿಸಿದ್ದರು. ತಮ್ಮ ಬದುಕನ್ನು ದೇವರ ಸಾಮ್ರಾಜ್ಯದ ಸ್ಥಾಪನೆಯ ಕಾರ್ಯದಲ್ಲಿ ತೊಡಿಗಿಸಿಕೊಂಡಿದ್ದರು, ಅದೊಂದು ಅವರ ಮೂಲಭೂತ ಅಭಿವ್ಯಕ್ತಿಯಾಗಿತ್ತು. ಆಧ್ಯಾತ್ಮಿಕವಾಗಿ ಒಂದು ಸಮುದಾಯವನ್ನು ಅವರು ಕಟ್ಟಬೇಕಿತ್ತು. ಅದು ಸಮುದಾಯವಲ್ಲ ಕುಟುಂಬ, ದೈವದತ್ತ ಕುಟುಂಬ. ಆ ಸ್ವರ್ಗಸಾಮ್ರಾಜ್ಯದ ಕೌಟುಂಬಿಕ ಜಗತ್ತಿನಲ್ಲಿ ರಕ್ತಸಂಬಂಧದಿಂದಲ್ಲ, ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ ಎಲ್ಲರೂ ಸಹೋದರ ಸಹೋದರಿಯರು. ಇವರೆಲ್ಲಾ ವಾಗ್ದತ್ತ ದೇವರ ದತ್ತು ಸಂತಾನ. ಆ ಸರ್ವೇಶ್ವರ ದೇವರು ಬರಿ ದೇವರಲ್ಲ, ಎಲ್ಲರಿಗೂ ತಂದೆಯಾದ ಪ್ರೀತಿಯ ದೇವರು,
ಪ್ರಭು ಯೇಸುಸ್ವಾಮಿ ದೇವರ ಸಾಮ್ರಾಜ್ಯದ ಸ್ಥಾಪನೆಗೆ, ತಮ್ಮನ್ನೇ ತಾವು ನಪುಂಸಕರಂತೆ ಮಾಡಿಕೊಂಡರು. ಸ್ವರ್ಗಸಾಮ್ರಾಜ್ಯದ ಸ್ಥಾಪನೆಗೆ ತಮ್ಮೊಂದಿಗೆ ಕೈ ಜೋಡಿಸಲು ಮುಂದಾದವರೂ ತಮ್ಮನ್ನು ಅನುಸರಿಸುವಂತೆ ಮಾಡಿದರು. ಪ್ರಭು ಯೇಸುಸ್ವಾಮಿ, ತನ್ನನ್ನು ಹಿಂಬಾಲಿಸುವವರೂ ಬ್ರಹ್ಮಚರ್ಯ ಪಾಲಿಸಬೇಕು ಎಂದು ಆಗ್ರಹಿಸಿರಲಿಲ್ಲ, ಹನ್ನೆರಡು ಜನ ಪ್ರೇಷಿತ ಶಿಷ್ಯರಲ್ಲಿ ಬಹುತೇಕರು ಮದುವೆಯಾದವರೇ ಇದ್ದರು. ಅವರು, ಯೇಸುವಿನ ಸಂದೇಶವನ್ನು ಸಾರಲು ಮನೆಮಠ ಬಿಟ್ಟು ಹೊರಟುಬಿಟ್ಟಿದ್ದರು ಅಷ್ಟೆ.
ಮಕ್ಕಳನ್ನು ನನ್ನಲ್ಲಿಗೆ ಬಿಡಿ ಎನ್ನುತ್ತಿದ್ದ ಪ್ರಭು ಯೇಸುಸ್ವಾಮಿಗೆ, ಬ್ರಹ್ಮಚರ್ಯ ಎನ್ನುವುದು ನಿಷೇಧದ ಸಂಗತಿಯಾಗಿರಲಿಲ್ಲ. ಅವರೆಂದೂ ಮದುವೆ, ಲೈಂಗಿಕತೆ, ಕುಟುಂಬ ಜೀವನದ ವಿರೋಧಿಯಾಗಿರಲಿಲ್ಲ ಎನ್ನುವುದನ್ನು ಶುಭಸಂದೇಶಗಳಲ್ಲಿ ಕಾಣುತ್ತೇವೆ. ದೇವರ ಸಾಮ್ರಾಜ್ಯ ಸ್ಥಾಪನೆ ಅವರ ಏಕೈಕ ಗುರಿಯಾಗಿತ್ತು. ಅವರ ಪ್ರೀತಿ, ಸಕಲರನ್ನು ಪ್ರೀತಿಸುವ ವಿಶ್ವಮಾನ್ಯ ಪ್ರೀತಿಯಾಗಿತ್ತು. ಆದರೆ, ಆದಿ ಶತಮಾನಗಳ ಅವಧಿಯಲ್ಲಿ ಧರ್ಮಸಭೆಯು ಒಂದು ಸಾಂಸ್ಥಿತ ರೂಪತಳೆಯುವ ಸಂದರ್ಭದಲ್ಲಿ ಯಾಜಕರುಗಳ ಬ್ರಹ್ಮಚರ್ಯೆ ಮುನ್ನೆಲೆಗೆ ಬಂದಿರಬೇಕು.
ಬ್ರಹ್ಮಚಾರಿಯಾದ ಪಾದ್ರಿ ಅಥವಾ ಯಾಜಕ ಶುಭಸಂದೇಶವನ್ನು ಸಾರುವಲ್ಲಿ ತನ್ನ ಜೀವನ ಮುಡಿಪಾಗಿಡಬಹುದು. ಪೂಜಾ ಕೈಂಕರ್ಯಗಳನ್ನು ನಡೆಸುತ್ತಾ, ದೈವಭೀರು ಕ್ರೈಸ್ತ ಸಮುದಾಯವನ್ನು ರಚಿಸಿ ತಂದೆ ದೇವರ ಸಾಮ್ರಾಜ್ಯದತ್ತ ಮುನ್ನಡೆಸುತ್ತಾ, ಅವರನ್ನು ಸತ್ಯ, ನ್ಯಾಯ, ಧರ್ಮದ ಮಾರ್ಗದಲ್ಲಿ ನಡೆಯುವಂತೆ ಮಾಡಬಹುದು. ಬಡವರಿಗೆ ದಯಾಪರನಾಗಿದ್ದು ಅವರ ಏಳಿಗೆಗೆ ಶ್ರಮಿಸುವಂಥವನು ಆಗಿರಬಹುದು. ಏಕೆಂದರೆ, ಅವನಿಗೆ ಹೆಂಡತಿ ಮಕ್ಕಳ ಚಿಂತೆ ಇರುವುದಿಲ್ಲ. ಇದೆಲ್ಲಾ ಸಾಧ್ಯವಿದ್ದಾಗ ಬ್ರಹ್ಮಚರ್ಯ ಪಾಲಿಸಿದ್ದಕ್ಕೂ ಒಂದು ಅರ್ಥ ಬರುತ್ತದೆ. ಬ್ರಹ್ಮಚರ್ಯ ಪಾಲಿಸಿದವನಿಗೂ ತನ್ನ ಜೀವನದ ಸಾರ್ಥಕತೆಯ ಹೆಮ್ಮೆ ಇರುತ್ತದೆ.
ಆದರೆ, ಇಂದಿನ ಆಧುನಿಕ ಜಗತ್ತಿನಲ್ಲಿ, ತಾವಿದ್ದ ಚರ್ಚುಗಳನ್ನು ಕೆಡವುತ್ತಾ ಹೊಸದನ್ನು ಕಟ್ಟಲು ಮುಂದಾಗುವ, ಇರುವ ಚರ್ಚನ್ನು ಮತ್ತಷ್ಟು ಸುಂದರಗೊಳಿಸುವಲ್ಲಿ, ಬೇರೆಲ್ಲೋ ಕಂಡ ಚರ್ಚುಗಳ ಮುಂದಿರುವ ಭಾರಿ ವೆಚ್ಚದ ಲೋಹದ ಧ್ವಜ ಕಂಬಗಳ ಮಾದರಿಯಲ್ಲಿ ತಾವಿರುವ ಚರ್ಚಿನ ಮುಂದೆ ಅಂಥವನ್ನು ಕೂಡಿಸುವಲ್ಲಿ, ತಮ್ಮ ನಿವಾಸಗಳನ್ನು ಮತ್ತಷ್ಟು ಅಂದಗೊಳಿಸುವಲ್ಲಿ ತಮ್ಮ ಸಮಯವನ್ನು ಕಳೆಯುವ ಪಾದ್ರಿಗಳ ಬ್ಮಹ್ಮಚರ್ಯಕ್ಕೆ ಯಾವ ಅರ್ಥವೂ ಇರುವುದಿಲ್ಲ. ಪೂಜಾ ಅವಧಿಯ ಸಮಯವನ್ನು ಹೊರತುಪಡಿಸಿ, ಉಳಿದ ಸಮಯವನ್ನು ಟಿವಿ ನೋಡುತ್ತಾ ಕೂಡುವ, ನೆಟ್ ಹುಡುಕಾಟದಲ್ಲಿ ಮುಳುಗಿರುವ, ಸ್ನೇಹಿತರೊಂದಿಗೆ ಕುಡಿತ, ಮೋಜುಮಸ್ತಿಗೆ ಮುಂದಾಗುವ, ತಮ್ಮದೇ ಸ್ವಂತ ವ್ಯಾಪಾರ ವ್ಯವಹಾರಗಳನ್ನು ಹೊಂದಿರುವ ಪಾದ್ರಿಗಳ ಬ್ಮಹ್ಮಚರ್ಯಕ್ಕೆ ಯಾವ ಅರ್ಥವಿರುತ್ತದೆ?
ಕೆಲವು ಯಾಜಕರು ಧರ್ಮಸಭೆಯ ಕಣ್ಗಾವಲಿನಲ್ಲಿದ್ದರೂ ಸ್ವಂತ ಶಾಲೆಕಾಲೇಜುಗಳನ್ನು ನಡೆಸುವುದು, ಬಗೆಬಗೆಯ ವ್ಯವಹಾರಗಳಲ್ಲಿ ತೊಡಗಿರುವ ಸಂಗತಿಗಳು ಗೊತ್ತಿರದ ಸಂಗತಿಯೇನಲ್ಲ. ಶತಮಾನಗಳಿಂದ ಧರ್ಮಸಭೆಗಳೇ ಮುಂದೆ ನಿಂತು ಸಾರ್ವಜನಿಕ ಸೇವೆಯ ಹೆಸರಿನಲ್ಲಿ ಶಾಲೆಕಾಲೇಜುಗಳನ್ನು, ಆಸ್ಪತ್ರೆಗಳನ್ನು ನಡೆಸುತ್ತಿವೆ. ಅತಿಯಾದ ಸಮಯವನ್ನು ಬಯಸುವ ಅವುಗಳ ಜವಾಬ್ದಾರಿ ಹೊತ್ತ ಪಾದ್ರಿಗಳಿಗೆ ಕ್ರೈಸ್ತ ಸಮುದಾಯದ ಮೇಷಪಾಲಕ ನಿಲುವಿನ ಚಿಂತನೆಗಿಂತ ಉಳಿದ ಚಿಂತನೆಗಳೇ ಮನದಲ್ಲಿ ತುಂಬುತ್ತವೆ. ದೈನಂದಿನ ಈ ಲೌಕಿಕ ಜಂಜಾಟಗಳೊಂದಿಗಿನ ಹೋರಾಟಗಳಲ್ಲಿ, ಅವರುಗಳಿಗೆ ಪೂರ್ಣಪ್ರಮಾಣದಲ್ಲಿ ದೇವರೊಂದಿಗೆ ಪ್ರಾರ್ಥನೆಯ ಅನುಸಂಧಾನ ನಡೆಸುವುದೂ ಕಷ್ಟವಾಗುತ್ತದೆ. ಬ್ರಹ್ಮಚರ್ಯ ಅವರಿಗೆ ವ್ಯರ್ಥವೆನಿಸುತ್ತದೆ, ಏಕಾಂಗಿ ಜೀವನ ಶಾಪವಾಗಿಯೂ ಕಾಡತೊಡಗಬಹುದು.

 - ಫ್ರಾನ್ಸಿಸ್.ಎಂ.ಎನ್.

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...