Wednesday, 9 May 2018

ಸುದ್ದಿ, ಚೂರು ಪಾರು ಸುದ್ದಿ

ಮಾವೋವಾದಿ ನಕ್ಸಲರಿಂದ ಪಾದ್ರಿಯ ಹತ್ಯೆ:
ರಾಂಚಿ : ಜಾರ್ಖಂಡ್ ರಾಜ್ಯದ ಗುಡ್ಡಗಾಡು ಪ್ರದೇಶದ ರಾಂಚಿ ಜಿಲ್ಲೆಯ, ತಾಮರ ವಲಯಕ್ಕೆ ಸೇರಿದ ಜಾರ್ಗೊ ಪಂಚಾಯಿತಿ ವ್ಯಾಪ್ತಿಗೆ ಬರುವ ಕುಬಸಾಲ್ ಗ್ರಾಮದಲ್ಲಿನ ಪಾದ್ರಿಯೊಬ್ಬರನ್ನು ಮಾವೋವಾದಿ ನಕ್ಸಲರ ಗುಂಪೊಂದು ಭೀಕರವಾಗಿ ಹತ್ಯೆ ನಡೆಸಿದ ಘಟನೆ ವರದಿಯಾಗಿದೆ.
ಪೋಲಿಸ್ ಬಾತ್ಮಿದಾರರೆಂದು ಬಗೆದು, ನಕ್ಸಲರು ಪಾದ್ರಿ ಅಬ್ರಹಾಂ ಟೊಪ್ನೊ (೪೬) ಅವರನ್ನು ಭೀಕರವಾಗಿ ಹತ್ಯೆ ನಡೆಸಿದ್ದಾರೆ. ಗ್ರಾಮದ ಹತ್ತಿರದ ಕಾಡಿನಲ್ಲಿ ಅವರ ಮುಂಡ ಮತ್ತು ರುಂಡಗಳು ಪತ್ತೆಯಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಮನೆಗೆ ಬಂದಿದ್ದ ಹತ್ತಿರದ ಗ್ರಾಮಸ್ಥರನ್ನು ಬಿಟ್ಟು ಬರುವಾಗ, ಮಾರ್ಗ ಮಧ್ಯದಲ್ಲಿ ವಾಹನವನ್ನು ತಡೆದು ಪಾದ್ರಿಯನ್ನು ನಕ್ಸಲರು ಕೊಂಡೊಯ್ದಿದ್ದರು. ಚಾಲಕನಿಗೆ ಕಣ್ಣುಕಟ್ಟಿ ಕರೆದುಕೊಂಡು ಹೋದವರು ನಂತರ ಆತನನ್ನು ಬಿಡುಗಡೆ ಮಾಡಿದ್ದರು. ಮರುದಿನ ಗ್ರಾಮದ ಹತ್ತಿರದ ಕಾಡಿನಲ್ಲಿ ರುಂಡ ಮುಂಡ ಪ್ರತೇಕಿಸಿದ ಪಾದ್ರಿಯ ಶವ ಪತ್ತೆಯಾಗಿದೆ. ಪಾದ್ರಿ ಅಬ್ರಾಹಂ ಟೊಪ್ನೋ ಯಾರೊಂದಿಗೂ ವೈರತ್ವ ಹೊಂದಿರಲಿಲ್ಲ ಎಂದು ಮೃತನ ಕುಟುಂಬದವರು ತಿಳಿಸಿದ್ದಾರೆ.


ಕ್ರೈಸ್ತರ ಮೇಲಿನ ದೌರ್ಜನ್ಯ ಖಂಡಿಸಿ ತಮಿಳುನಾಡು ರಾಜ್ಯದಾದ್ಯಂತ ಪ್ರತಿಭಟನೆ:
ಚೆನ್ನೈ : ಹೆಚ್ಚುತ್ತಿರುವ ಕ್ರೈಸ್ತರ ಮೇಲಿನ ದೌರ್ಜನ್ಯ ಮತ್ತು ಹಿಂಸಾಚಾರಗಳನ್ನು ಖಂಡಿಸಿ, ಈ ಬಗೆಯ ಅತ್ಯಾಚಾರಗಳಿಗೆ ಸರ್ಕಾರ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಸಹಸ್ರಾರು ಸಂಖ್ಯೆಯಲ್ಲಿ ಸ್ಥಳೀಯ ಕ್ರೈಸ್ತರು ತಮಿಳುನಾಡಿನಾದ್ಯಂತ ಏಪ್ರಿಲ್ ೧೭ ರಂದು ಪ್ರತಿಭಟನಾ ರ್‍ಯಾಲಿ ನಡೆಸಿದ್ದಾರೆ.
ವಿವಿಧ ಕ್ರೈಸ್ತ ಪಂಗಡಗಳಿಗೆ ಸೇರಿದ್ದ ಸುಮಾರು ಇಪ್ಪತ್ತು ಸಾವಿರಕ್ಕೂ ಅಧಿಕ ಪ್ರತಿಭಟನಾಕಾರರು, ಅಂದು ರಾಜ್ಯದ ೧೬ಕ್ಕೂ ಅಧಿಕ ಪಟ್ಟಣಗಳಲ್ಲಿ ಬೀದಿಗಿಳಿದು, ಮೇಲ್ಜಾತಿಯ ಹಿಂದು ಸಮುದಾಯದವರು ಕ್ರೈಸ್ತರ ಮೇಲೆ ನಡೆಸುತ್ತಿರುವ ದೌರ್ಜನ್ಯಗಳ ಕುರಿತು ಪ್ರತಿಭಟಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು, ಮೇಲ್ಜಾತಿ ಜನಗಳ ದೌರ್ಜನ್ಯಗಳಿಂದ ಬಳಲುತ್ತಿರುವ ಅಸಹಾಯಕ ಕ್ರೈಸ್ತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. 
`ಈಚೆಗೆ ಪಾದ್ರಿಯೊಬ್ಬರು ಕಟ್ಟಾ ಹಿಂದುತ್ವವಾದಿಯ ಕಿರಕುಳವನ್ನು ತಾಳದೇ ಪೋಲಿಸರಿಗೆ ದೂರು ನೀಡಿದ್ದರು. ಪೋಲಿಸರಿಗೆ ದೂರು ನೀಡಿದ ಒಂದು ವಾರದೊಳಗೆ ಅವರು ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದಾರೆ' ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ, ಹಾಡುಹಗಲೇ ಬೈಬಲ್ಲುಗುಳನ್ನು ಸುಡಲಾಗುತ್ತಿದೆ. ಚರ್ಚುಗಳ ಮೇಲೆ ದಾಳಿಗಳು ನಡೆಯುತ್ತಿವೆ, ಕೆಲವೊಮ್ಮೆ ಚರ್ಚ ಕಟ್ಟಡಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಪಾದ್ರಿಗಳು ಜೀವ ಕೈಯಲ್ಲಿ ಹಿಡಿದುಕೊಂದು ಓಡಾಡುವ ಸ್ಥಿತಿ ಬಂದಿದೆ. ಆದರೂ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇಂಥ ಘಟನೆಗಳನ್ನು ತಡೆಯಲು ಮನಸ್ಸು ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕಳೆದ ವರ್ಷ ೨೦೧೭ರಲ್ಲಿ ಕ್ರೈಸ್ತರ ಮೇಲೆ ನಡೆದ ಹಲ್ಲೆಗಳ ಸಂಖ್ಯೆ ೭೩೬. ಆದರೆ, ಅದರ ಹಿಂದಿನ ವರ್ಷ, ೨೦೧೬ರಲ್ಲಿ ತಮಿಳುನಾಡಿನಲ್ಲಿ, ಕ್ರೈಸ್ತರ ಮೇಲೆ ನಡೆದ ದೌರ್ಜನ್ಯದ ೩೪೮ ಪ್ರಕರಣಗಳು ವರದಿಯಾಗಿದ್ದವು.


ಮೈನ್ಮಾರ್‌ನ ಅಲ್ಪಸಂಖ್ಯಾತ ತಮಿಳರಿಗೆ ತಮಿಳು ಭಾಷೆ ಕಲಿಸುವಿಕೆ ಆರಂಭ
ಯಂಗೂನ್ : ಮೈನ್ಮಾರ ಹಿಂದಿನ ಬರ್ಮಾದೇಶದಲ್ಲಿನ ಅಲ್ಪಸಂಖ್ಯಾತ ತಮಿಳು ಕಥೋಲಿಕ ಕ್ರೈಸ್ತರ ಮಕ್ಕಳು, ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದ ತಮಿಳು ಭಾಷೆಯ ಕಲಿಕೆಗೆ ಮುಂದಾಗಿದ್ದಾರೆ. 
ಮೈನ್ಮಾರ್ ನ ಪ್ರಮುಖ ವಾಣಿಜ್ಯ ನಗರಿ ಯಂಗೂನ್ ನದಿಯ ದಡದ ಯಂಗೂನ್ ಪಟ್ಟಣದ ಆಚೆ ಇರುವ ಸಂತ ಮೈಕಲ್ ಚರ್ಚಿನಲ್ಲಿ ಬೇಸಿಗೆಯ ಶಿಬಿರದ ಮಾದರಿಯಲ್ಲಿ, ಇಬ್ಬರು ಕನ್ಯಾಸ್ತೀಯರು ಮಕ್ಕಳಿಗೆ ತಮಿಳು ಕಲಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.
ಸೋಮವಾರದಿಂದ ಶುಕ್ರವಾರದವರೆಗೆ ಒಂದು ತಿಂಗಳು ಕಾಲ ನಡೆಯುತ್ತಿರುವ ಈ ಶಿಬಿರದಲ್ಲಿ ಮಕ್ಕಳು, ತಮಿಳು ಭಾಷೆಯನ್ನು ಕಲಿಯುತ್ತಿದ್ದಾರೆ,ಬ್ರಿಟೀಷರ ಕಾಲದಿಂದಲೂ ಇಲ್ಲಿ ನೆಲೆಸಿರುವ ತಮಿಳು ಭಾಷಿಕ ಕಥೋಲಿಕ ಕ್ರೈಸ್ತರ ಮಕ್ಕಳಲ್ಲಿ ತಮ್ಮ ಮನೆಮಾತಿನ ಬಗ್ಗೆ ಸ್ವಾಭಿಮಾನ ಮೂಡಿಸಿ, ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮರೆಯದಂತೆ ಮಾಡುವ ಉದ್ದೇಶದಿಂದ ಕಳೆದ ಐದು ವರ್ಷಗಳಿಂದ ಇಂಥ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದೆ.
ನೆರಹೊರೆಯಲ್ಲಿ ಮೈನ್ಮಾರ್ ದೇಶದ ನಿವಾಸಿಗಳೇ ಇದ್ದು, ಇಂದು ಬಹುತೇಕ ತಮಿಳರು ತಮ್ಮ ಮನೆಯಲ್ಲಿ ದೇಶ ಭಾಷೆ ಬರ್ಮಿ ಭಾಷೆಯನ್ನೇ ಆಡತೊಡಗಿದ್ದಾರೆ. ಅಷ್ಟಲ್ಲದೇ ಬರ್ಮಿ ಹೆಸರುಗಳನ್ನೇ ಇರಿಸಿಕೊಳ್ಳುತ್ತಿದ್ದಾರೆ. ತಂದೆ ತಾಯಿಗಳು ತಮಿಳಿನಲ್ಲಿ ಸಂಭಾಷಣೆ ನಡೆಸುವರು. ಅವರಿಗೆ ಓದು ಬರೆಯಲು ಬರುತ್ತದೆ. ಆದರೆ, ಮಕ್ಕಳಿಗೆ ತಮಿಳಿನ ಗಂಧಗಾಳಿಯೂ ಇಲ್ಲ.
ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ, ಅಲ್ಪಸಂಖ್ಯಾತ ತಮಿಳು ಭಾಷಿಕರ ಬಗ್ಗೆ ಆಸಕ್ತಿ ತಳೆದಿರುವ ಸ್ಥಳೀಯ ಕಥೋಲಿಕ ಧರ್ಮಸಭೆಯು, ತಮಿಳು ಭಾಷಿಕ ಮಕ್ಕಳಿಗೆ ತಮಿಳು ಕಲಿಸಲು ಮುಂದಾಗಿದೆ. ತಮಿಳಿನಲ್ಲಿ ಜಪತಪಗಳನ್ನು ಕಲಿಸಿ ತಮಿಳು ಭಾಷೆಯಲ್ಲಿನ ಪೂಜಾವಿಧಿಗಳಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲು ಶ್ರಮಿಸುತ್ತಿದೆ.*

----
 * ಕರ್ನಾಟಕ ರಾಜ್ಯದಲ್ಲಿ ಕನ್ನಡ ಅಧಿಕೃತ ಭಾಷೆ. ಆದರೆ, ಇಲ್ಲಿನ ಚರ್ಚುಗಳಲ್ಲಿ ಕನ್ನಡ ಭಾಷೆಯ ಪೂಜೆಗಳಿಗೆ ಸಂಚಕಾರ ತರುವ ಹುನ್ನಾರಗಳು, ಈ ನಾಡು ಕರ್ನಾಟಕದಲ್ಲಿ ಹುಟ್ಟಿ ಬೆಳೆದವರಿಂದಲೇ ನಡೆಯುತ್ತಿರುವುದು ನಾಡಿನ ದುರಂತ.

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...