ಸುಖಾ ಸುಮ್ಮನೆ ಬೈದಾಡಿ ಬಿಟ್ಟೆ
ಈ ಎಲೆಕ್ಷನ್ ಯಾಕಾರು ಬರುತ್ತವೋ
ಅಲ್ಲಿರುವುದು ಬರಿಯ ಬಿಸಿಲು,
ಸುರಿವ ಕೊಳೆ ಮೊಸರು..!
ಹಾರುವ ಕಾರುವ ವಿಷ ಸರ್ಪಗಳು
ಎರಚುವ ಅರಚುವ ಕತ್ತೆಕಿರುಬಗಳು
ಹೂಳಿಡುವ ಗೊಳಾಡುವ ನರಿ ನಾಯಿಗಳು
ನರರ ನಾಡಿನಲ್ಲಿ ಹರಿದಾಡುವ ಕೊಳಚೆ ಕಾಲುವೆಗಳು
ನರನರರ ನಡುವೆ ನೆರೆತನ ಮರೆತ ಮತಾಂಧರು
ಜಾತಿ ಜವರಾಯನ ಜೋಡಿ ಎತ್ತುಗಳು
ತೇರು ಹೊತ್ತ ಹೋರಿ ಹೋತಗಳು
ಧಿಕ್ಕಾರದ ದೆವ್ವಗಳು
ಧರ್ಮದ ಬಿಡಾರಗಳ ಹೊಕ್ಕಾವೋ ರಕ್ತಪಿಪಾಸುಗಳು
ಎಂದವರನ್ನು ಜರಿದಿದ್ದೆ
ಕ್ಷಮಿಸಬೇಕು ದಮ್ಮಯ್ಯ
ಪಾಪ ಇವರು ಒಳ್ಳೆಯವರು
ಅಷ್ಟು ಬೈದರೂ ಇಷ್ಟು ಕೋಪಗೊಳ್ಳದೆ
ಒಂದಷ್ಟು ನೋಟು ಮತ್ತಷ್ಟು ಸಾರಾಯಿ ಘಾಟು ಇಟ್ಟು
ನನ್ನ ಓಟನಷ್ಟೆ ಕೇಳಿ ಹೋದರು..!
ಮತ್ತೆ ಐದು ವರ್ಷಕ್ಕೆ ಬರುತ್ತೇವೆಂದು.
¨ ಸಂತೋಷ್ ಇಗ್ನೇಷಿಯಸ್ ಎಸ್
No comments:
Post a Comment