Wednesday, 9 May 2018

ಐಕಮತ್ಯ


ಇದು ಹಿಂದೆಂದೋ ನಡೆದ ಘಟನೆ. ಅಮೆರಿಕದ ಒಂದು ಆಸ್ಪತ್ರೆಯಲ್ಲಿ ನರ್ಸ್ ಒಬ್ಬಳು, ವೃದ್ಧ ಸ್ತ್ರೀರೋಗಿಯನ್ನು ವೀಲ್ ಚೇರ್ ಮೇಲೆ ಕರೆದೊಯ್ಯುತ್ತಿದ್ದಳು. ಲಿಫ್ಟ್ ಮೂಲಕ ಸಾಗುವಾಗ ಯಾವುದೋ ಒಂದು ಮಹಡಿಯಲ್ಲಿ ಮತ್ತೊಬ್ಬ ನರ್ಸ್ ಜೊತೆಯಾದಳು. ಇಂಡಿಯಾದವರಾದ ಇಬ್ಬರೂ ನರ್ಸುಗಳು ತಮ್ಮದೇ ಭಾಷೆಯಲ್ಲಿ ಗಲಗಲಗಲ ಮಾತಾಡಿಕೊಂಡರು. ಮನಸಾರೆ ಕಿಲಕಿಲ ನಕ್ಕರು. ಆಗೊಮ್ಮೆ ಈಗೊಮ್ಮೆ ಪೇಶೆಂಟ್ ಕಡೆ ನೋಡಿದರು.

ಬಂದಾಕೆಯಾದರೂ ರೋಗಿಹೆಂಗಸಿಗೆ ಹೇಗಿದ್ದೀರಾ, ಬೇಗ ಗುಣಹೊಂದಿ ಅಂತೇನೂ ಹಾರೈಸಲಿಲ್ಲ. ರೋಗಿಗೆ ತಳಮಳವೆನಿಸಿತು. ನರ್ಸುಗಳು ತನಗೆ ತಿಳಿಯದ ಭಾಷೆಯಲ್ಲಿ ಮಾತಾಡಿಕೊಂಡದ್ದು ತನ್ನ ಬಗ್ಗೆಯೇ ಇರಬಹುದು ಎಂದುಕೊಂಡಳು. ಮಾನಸಿಕವಾಗಿ ಆಕೆ ನೊಂದಳು. ದೇಹಾರೋಗ್ಯ ಹದಗೆಟ್ಟಿತು. ಆಕೆ ಕೋರ್ಟಿಗೆ ಅಪೀಲು ಮಾಡಿ ನರ್ಸುಗಳು ತನಗೆ ಅಪಮಾನ ಮಾಡಿದರೆಂದು ನಷ್ಟ ಪರಿಹಾರ ಕೋರಿದಳು. ಕೋರ್ಟು ಆಕೆಯ ವಾದವನ್ನು ಎತ್ತಿ ಹಿಡಿಯಿತು. ರೋಗಿಯ ದುರ್ಬಲ ಮನೋಸ್ಥಿತಿಯ ಸಂದರ್ಭದಲ್ಲಿ ಅವಳೆದುರು ಅರ್ಥವಾಗದಂತೆ ಸಂವಾದಿಸುವುದು ರೋಗಿಗೆ ಅಭದ್ರತೆಯ ಭಾವಮೂಡಿಸುತ್ತದೆ ಎಂದು ಹೇಳಿತು.

ಇನ್ನೊಂದು ಘಟನೆ. ರೇಲ್ವೇ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ನನ್ನ ಹಿರಿಯ ಗೆಳೆಯರೊಬ್ಬರು ಒಮ್ಮೆ ಆತ್ಮೀಯವಾಗಿ ಮಾತಾಡುತ್ತಾ ರೇಲ್ವೇಗೆ ಸೇರಿದ ಜಾಗವೊಂದರಲ್ಲಿ ಸ್ಥಳೀಯರು ಒಂದು ಗುಡಿ ಕಟ್ಟಿಕೊಂಡು ಧಾರ್ಮಿಕ ಕ್ರಿಯೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ತಮ್ಮ ವಿವೇಚನೆ ಬಳಸಿ ಮುಸ್ಲಿಮರಿಗೂ ಕ್ರೈಸ್ತರಿಗೂ ಧಾರ್ಮಿಕ ಚಟುವಟಿಕೆಗಳಿಗಾಗಿ ಸ್ಥಳ ನೀಡುವ ಅಧಿಕಾರ ತಮಗಿದೆಯೆಂದೂ, ಚರ್ಚಿನ ಮುಖ್ಯಾಧಿಕಾರಿಗಳ ಪರವಾಗಿ ತಮಗೊಂದು ಪತ್ರ ಬಂದರೆ ಅದರ ಕುರಿತು ಮುಂದುವರಿಯುವುದಾಗಿಯೂ ತಿಳಿಸಿದರು. ಹೀಗೇ ಒಂದು ಸುಮುಹೂರ್ತದಲ್ಲಿ ಆ ಅಧಿಕಾರಿಗೆ ನಮ್ಮಬಿಷಪರನ್ನು ಭೇಟಿ ಮಾಡಿಸಲು ಸಮಯ ಗೊತ್ತು ಮಾಡಲಾಯಿತು. ಸರಿಯಾದ ಸಮಯಕ್ಕೆ ನಾವಲ್ಲಿದ್ದೆವಾದರೂ ನಮಗೆ ಮೊದಲಿದ್ದವರು ಬಿಷಪರ ಬಳಿ ಹತ್ತು ನಿಮಿಷ ಹೆಚ್ಚು ಸಮಯ ತೆಗೆದುಕೊಂಡರು. ಆಮೇಲೆ ನಾವು ಒಳಹೊಕ್ಕು ನಮ್ಮ ಪರಿಚಯ ಹಾಗೂ ಬಂದ ಕಾರಣವನ್ನು ವಿವರಿಸುತ್ತಿದ್ದ ಹಾಗೇ ಬಿಷಪರ ಒಳಬಾಗಿಲಿಂದ ಕನ್ಯಾಸ್ತ್ರೀಯೊಬ್ಬರು ಹಣಕಿ ನೋಡಿ ತಾವು ದೂರದಿಂದ ಬಂದಿರುವುದಾಗಿ ಅವರ ಭಾಷೆಯಲ್ಲಿ ಹೇಳಿಕೊಂಡರು. ಕೂಡಲೇ ನಮ್ಮ ಬಿಷಪರು ಅವರ ಭಾಷೆಯಲ್ಲಿ ತುಂಬಾ ಗೆಲುವಾಗಿ ಆಕೆಯೊಂದಿಗೆ ಮಾತಾಡುತ್ತಾ ಒಳಕೋಣೆಗೆ ಹೊರಟರು. ನಾವಿತ್ತ ಸುಮಾರು ಹೊತ್ತು ಕಾದಿದ್ದೇ ಬಂತು. ಅಷ್ಟರಲ್ಲಿ ಬಿಷಪರ ಆಪ್ತಸಹಾಯಕರಾಗಿದ್ದ ಪಾದ್ರಿಯವರು ಬಂದು ನಿಮ್ಮ ಸಮಯ ಮುಗಿದಿದೆ, ಹೊರಗೆ ಬೇರೆಯವರು ಕಾಯುತ್ತಿದ್ದಾರೆ. ನೀವಿನ್ನು ಹೊರಡಬಹುದು ಎಂದರು. ನಮ್ಮ ಯಾವ ವಿವರಣೆಗೂ ಅವಕಾಶ ಸಿಗಲಿಲ್ಲ. ರೇಲ್ವೇಯ ಆ ಜಾಗವನ್ನು ಪ್ರೋಟೆಸ್ಟೆಂಟ್ ಕ್ರೈಸ್ತರು ಪಡೆದುಕೊಂಡರು.

ವೈಯಕ್ತಿಕ ಹಿತಾಸಕ್ತಿಗಳು ಹೇಗೆ ನಮಗೂ ನಮ್ಮ ಸಂಸ್ಥೆಗೂ ನಷ್ಟವುಂಟುಮಾಡುತ್ತವೆ ಎಂಬುದಕ್ಕೆ ಜ್ವಲಂತ ಉದಾಹರಣೆಗಳಿವು. ಸಂಸ್ಥೆಯೊಂದನ್ನು ಪ್ರತಿನಿಧಿಸುವಾಗ ವೈಯಕ್ತಿಕ ವಾಂಛೆಗಳಿಂದ ದೂರವಿರಬೇಕೆಂಬ ಸಂದೇಶ ಸಾರ್ವತ್ರಿಕ ಮತ್ತು ಸಾರ್ವಕಾಲಿಕ, ಆದರೂ ನಾವು ಕೆಲವೊಮ್ಮೆ ನಮಗರಿವಿಲ್ಲದೇ ಪರಿಸ್ಥಿತಿಯ ಬಲಿಪಶುಗಳಾಗುತ್ತೇವೆ.

ವೈಯಕ್ತಿಕ ವಾಂಛೆಗಳು ದೇವಾಲಯಗಳಂತಹ ಸಾರ್ವತ್ರಿಕ ತಾಣಗಳನ್ನೂ ವಿರೂಪಗೊಳಿಸುತ್ತವೆ, ಇದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ಬೆಂಗಳೂರಿನ ವೈಟ್ ಫೀಲ್ಡ್ ಎಂಬ ಹೊರವಲಯದಲ್ಲಿ ಕಳೆದ ನೂರು ವರ್ಷಗಳಿಂದಲೂ ಒಂದು ಪುರಾತನ ಲೂರ್ದುಮಾತೆಯ ದೇವಾಲಯ ಅಲ್ಲಿನಭಕ್ತಾದಿಗಳಿಗೆ ಆಧ್ಯಾತ್ಮಿಕ ನೆಲೆಯಾಗಿದೆ. ಒಂದಾನೊಂದು ಕಾಲದಲ್ಲಿ ಬೆಂಗಳೂರು ದಂಡು ಪ್ರದೇಶದ ಆಂಗ್ಲೋ ಇಂಡಿಯನ್ನರು ತಮಗಾಗಿಯೇ ಒಂದು ಜನವಸತಿ ಪ್ರದೇಶ ಬೇಕೆಂಬ ಬೇಡಿಕೆಯನ್ನು ಮಹಾರಾಜರಲ್ಲಿ ಮುಂದಿಟ್ಟಾಗ ಅವರಿಗೆ ದೊರಕಿದ ವಿಶಾಲ ಭೂಭಾಗವೇ ವೈಟ್ ಫೀಲ್ಡ್. ಅದರಲ್ಲಿ ಅವರು ಕಟ್ಟಿದ ಲೂರ್ದುಮಾತೆಯ ಆಲಯಕ್ಕೆ ಸುತ್ತಮುತ್ತಲಿನ ಕನ್ನಡದ ಒಕ್ಕಲಿನ ಜನರೂ ಬಂದು ಭಾಗವಹಿಸುತ್ತಿದ್ದರು, ಕ್ರಮೇಣ ಆಂಗ್ಲೋಇಂಡಿಯನ್ನರು ಬೇರೆ ದೇಶಗಳಿಗೆ ಗುಳೇ ಎದ್ದ ಮೇಲೆ ಅದೊಂದು ಸಂಪೂರ್ಣ ಕನ್ನಡಮಯ ಗುಡಿಯಾಯಿತು. ಬೆಂಗಳೂರು ಬೆಳೆದ ಹಾಗೆಯೇ ಅದರ ವಸತಿ ನಕ್ಷೆಯೂ ಬದಲಾಗಿ ಹೊಲಗದ್ದೆ ತೋಟಕಾಡುಗಳ ವೈಟ್ ಫೀಲ್ಟ್ ಎಂಬುದು ಕಾಂಕ್ರೀಟು ಕಾಡಾಯಿತು. ಭಕ್ತಾದಿಗಳ ಸಂಖ್ಯೆ ಜಾಸ್ತಿಯಾದ ಹಾಗೆ ಮೊನ್ನೆ ಮೊನ್ನೆ ಪುಟ್ಟ ದೇವಾಲಯದ ಬದಿಯಲ್ಲಿ ದಿವ್ಯವೂ ಭವ್ಯವೂ ಆದ ಬೃಹತ್ ದೇವಾಲಯ ತಲೆಯೆತ್ತಿತು. ದೇವಾಲಯವನ್ನು ಉದ್ಘಾಟಿಸಿದ ಬಿಷಪರು ಖರ್ಚುವೆಚ್ಚಗಳ ಪಟ್ಟಿನೀಡುತ್ತಾ, ಈ ಪ್ರದೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ಸಿರೋಮಲಬಾರ್ ಪಂಥದ ಕಥೋಲಿಕರೂ ಇದ್ದು ದೇವಾಲಯ ನಿರ್ಮಾಣವೆಚ್ಚದಲ್ಲಿ ಅವರ ಪಾಲೂ ಇದೆ. ಅವರಿಗೆ ಪ್ರತ್ಯೇಕ ದೇವಾಲಯ ಇಲ್ಲದ ಕಾರಣ ಒಂದು ವೇಳಾವಧಿಯನ್ನು ಅವರ ಪೂಜಾರ್ಪಣೆಗೆ ಮುಕ್ತಗೊಳಿಸಬೇಕೆಂದು ಕೇಳಿಕೊಂಡರು. ಅಲ್ಲದೆ ದೇವಾಲಯದ ಮುಂದೆ ಎಲ್ಲರಿಗೂ ಕಾಣುವ ಹಾಗೆ ಸರ್ಕಾರದ ಆಣತಿಯಂತೆ ಮಾತ್ರವಲ್ಲ ಮಹಾಧರ್ಮಪ್ರಾಂತ್ಯದ ಆಶಯದಂತೆ ಕನ್ನಡ ಮತ್ತು ಇಂಗ್ಲಿಷಿನ ಬೋರ್ಡು ಹಾಕಿದ್ದೀರಿ, ಇವುಗಳ ಹೊರತು ಇನ್ಯಾವುದೂ ಬೇಡ ಎಂದು ತಾಕೀತು ಮಾಡಿದರು, ಆದರೆ ಬಿಷಪರು ಹೋದ ಮೇಲೆ ನಡೆದಿದ್ದೇ ಬೇರೆ. ದೇವಾಲಯದ ಮುಂಬಾಗಿಲ ಮೇಲೆ ಕನ್ನಡ, ಇಂಗ್ಲಿಷುಗಳ ಸಾಲಿನಲ್ಲೇ ಅದೇ ಗಾತ್ರದಲ್ಲಿ ತಮಿಳು ಅಕ್ಷರಗಳೂ ಕಾಣಿಸಿಕೊಂಡವು. ಧರ್ಮಕೇಂದ್ರದ ಗುರುಗಳು ಈ ವಿದ್ಯಮಾನವನ್ನು ಪೆಚ್ಚಾಗಿ ವೀಕ್ಷಿಸಿದರೇ ಹೊರತು ಏನೂ ಮಾಡಲಾಗಲಿಲ್ಲ. ಈ ಕೃತ್ಯದ ಹಿಂದೆ ಧರ್ಮಪ್ರಾಂತ್ಯದ ಕೆಲ ಗುರುಗಳ ಒತ್ತಾಸೆಯೂ ಇತ್ತು. 

ಹಾಗೆ ನೋಡಿದರೆ ಬೆಂಗಳೂರಿನ ದೇವಾಲಯಗಳಲ್ಲಿ ಭಕ್ತಿಪೂರ್ವಕ ಆರಾಧನೆ ಮತ್ತು ಪಾಲುಗೊಳ್ಳುವಿಕೆಗಳಿಗಿಂತ ಭಾಷೆಗಳನ್ನು ಸ್ಪರ್ಧೆ ಎಂಬಂತೆ ಮೆರೆಸುವುದೇ ಒಂದು ಚಟವಾಗಿದೆ. ಹೆಸರಿನ ಹಂಬಲದ ವ್ಯಕ್ತಿಗಳು ಕಟೌಟುಗಳ ಫ್ಲೆಕ್ಸ್ ಬೋರ್ಡುಗಳ ಭರಾಟೆಯನ್ನು ತೋರುವ ತೆರದಲ್ಲಿ ಭಕ್ತಾದಿಗಳು, ಚರ್ಚುಗಳ ಮೇಲೆ ತಮಿಳು ಬ್ಯಾನರುಗಳನ್ನೂ, ಬೋರ್ಡುಗಳನ್ನೂಬರೆಸುವ ಉಮೇದಿನಲ್ಲಿದ್ದಾರೆ. ಸ್ಪರ್ಧೆಯ ಹಾಗೆ ಪೂಜಾ ವೇಳಾಪಟ್ಟಿಯಲ್ಲಿ ಮುಖ್ಯವಾದ ಸ್ಥಾನ ಪಡೆಯುತ್ತಾ, ಪೂಜೆಯನ್ನು ಅಗತ್ಯಕ್ಕಿಂತ ಉದ್ದಗೊಳಿಸುತ್ತಾ, ಉಳಿದ ಪೂಜೆಗಳು ನಡೆವಾಗ ಹೊರಗೆ ನಿಂತು ಕೇಕೆ ಹಾಕಿ ನಗುತ್ತಾ, ಹರಟುತ್ತಾ ಗದ್ದಲವೆಬ್ಬಿಸುತ್ತಾ ಇರುವುದನ್ನು ಕಾಣುವಾಗ ಕ್ರಿಸ್ತಮನಸುಗಳು ಎತ್ತ ಸಾಗುತ್ತಿವೆ ಎಂಬ ಗೊಂದಲ ಕಾಡುತ್ತದೆ.

ಮೂವರು ಒಂದೆಡೆ ಸೇರಿದಾಗ ಅದರಲ್ಲಿ ಇಬ್ಬರು ವ್ಯಕ್ತಿಗಳು ಮೂರನೆಯವನಿಗೆ ಗೊತ್ತಿಲ್ಲದ ಭಾಷೆಯಲ್ಲಿ ಮಾತಾಡಿದರೆ ಹೇಗೆ ಎಂಬುದನ್ನು ಮೊದಲೇ ಹೇಳಿದ್ದೇನೆ. ಅದೇ ಸಂದಿಗ್ಧ ಪರಿಸ್ಥಿತಿಯನ್ನು ಇಲ್ಲಿಯೂ ಕಾಣಬಹುದು. ಎಲ್ಲರೂ ಸಮಾನರು ಎಂದು ಸಾರಿದ ಕ್ರಿಸ್ತ ಇಲ್ಲಿ ಮೂಕನಾಗುತ್ತಾನೆ. ಕ್ರಿಸ್ತನಲ್ಲಿ ನೆಮ್ಮದಿ ಅರಸಿ ಬಂದವನು ಗೊಂದಲಕ್ಕೀಡಾಗುತ್ತಾನೆ.


ದೇವರ ದಿನದಂದು ಕ್ರಿಸ್ತುವರೆಲ್ಲರೂ ಒಂದೇ ಬಲಿಪೀಠದ ಸುತ್ತ ಒಟ್ಟುಗೂಡಿ ಒಂದೇ ರೊಟ್ಟಿಯನ್ನು ಮುರಿದು ಒಟ್ಟಿಗೆ ಭುಜಿಸುವ ಪ್ರೀತಿಮಯ ವಾತಾವರಣವನ್ನು ಉತ್ತರ ಇಂಡಿಯಾದ ಅದರಲ್ಲೂ ಈಶಾನ್ಯ ರಾಜ್ಯಗಳ ಕ್ರೈಸ್ತ ಸಮುದಾಯಗಳಲ್ಲಿ ನಿಚ್ಚಳವಾಗಿ ಕಾಣಬಹುದು. ಅದನ್ನು ಅವರು ಪ್ಯಾರಿಶ್ ಮಾಸ್ ಎನ್ನುತ್ತಾರೆ. ಆ ಪ್ಯಾರಿಶ್ ಮಾಸ್ ಗಾಗಿ ಅವರು ಇಪ್ಪತ್ತು ಮೂವತ್ತು ಕಿಲೋಮೀಟರುಗಳಷ್ಟು ದೂರವನ್ನು ಕ್ರಮಿಸಿ ಬಂದಿರುತ್ತಾರೆ.

ಆದರೆ ಬೆಂಗಳೂರಿನಲ್ಲಿ ಹಲವು ಭಾಷಾಪೂಜೆಗಳು ಇರುವುದರಿಂದ ಯಾವುದನ್ನೂ ಪ್ಯಾರಿಶ್ ಮಾಸ್ ಎಂದು ಗುರುತಿಸುವುದಿಲ್ಲ. ಅದಕ್ಕೆ ಕೆಲವರು ಉಡಾಫೆಯಿಂದ ಬೆಂಗಳೂರಿನಂತ ಕಾಸ್ಮೊಪಾಲಿಟನ್ ನಗರದಲ್ಲಿ ಅದು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ. ನನ್ನ ವೃತ್ತಿಕಾರಣದಿಂದ ನಾನು ಬೊಂಬಾಯಿ ನವದೆಹಲಿ ಮುಂತಾದ ನಗರಗಳಿಗೆ ಆಗಿಂದಾಗ್ಗೆ ಪ್ರಯಾಣ ಮಾಡುತ್ತಿರುತ್ತೇನೆ. ಅಲ್ಲೆಲ್ಲ ಭಾನುವಾರದ ಬೆಳಗಿನ ವೇಳೆ ಆರು ಆರೂವರೆ ಗಂಟೆಗೆ ತುರ್ತು ಅಗತ್ಯಗಳಿಗೆ ತೆರಳುವವರಿಗಾಗಿ ಒಂದು ಸಾಧಾರಣ ಪೂಜೆ ಇರುತ್ತದೆ. ಆಮೇಲೆ ಎಂಟು ಎಂಟೂವರೆ ಗಂಟೆಗೆ ಮಕ್ಕಳು ಮುದಕರಾದಿಯಾಗಿ ಧರ್ಮಕೇಂದ್ರದ ಎಲ್ಲರೂ ಪಾಲುಗೊಳ್ಳುವ ಪ್ಯಾರಿಶ್ ಮಾಸ್ ಎಂಬ ಸಾಂಭ್ರಮಿಕ ಪೂಜೆ ನೆರವೇರುತ್ತದೆ. ವಿಪರ್ಯಾಸವೆಂದರೆ ಬೊಂಬಾಯಿ ದೆಹಲಿಗಳೆರಡೂ ಬೆಂಗಳೂರಿಗಿಂತ ದೊಡ್ಡ ಊರುಗಳು. ಅಲ್ಲಿ ಸಾಧ್ಯವಾಗುವುದು ಬೆಂಗಳೂರಿಗೇಕೆ ಸಾಧ್ಯವಾಗುವುದಿಲ್ಲ?

ಈ ಒಂದು ಪ್ಯಾರಿಶ್ ಮಾಸ್ ಅಥವಾ ಸಮುದಾಯ ಒಗ್ಗೂಡುವಿಕೆಗೆ ಅನುವು ಮಾಡಿಕೊಡುವ ಸಲುವಾಗಿ ಆಯಾ ಧರ್ಮಕೇಂದ್ರದ ವ್ಯಾಪ್ತಿಯಲ್ಲಿನ ಕಾನ್ವೆಂಟುಗಳ ಮಠಗಳ ಹಾಗೂ ಉಪಕೇಂದ್ರಗಳ ಪೂಜೆಗಳನ್ನು ರದ್ದುಪಡಿಸಿ ಎಲ್ಲರನ್ನೂ ಒಂದೇ ಬಲಿಪೀಠದತ್ತ ಬರಮಾಡಬೇಕೆಂದು ದ್ವಿತೀಯ ವ್ಯಾಟಿಕನ್ ಸುಧಾರಣಾ ನಿರ್ಣಯಗಳು ಒತ್ತಿ ಹೇಳುತ್ತವೆ. ಆದರೆ ದೇವಾಲಯದ ಬದಿಯಲ್ಲೇ ಇರುವ ಬೆಂಗಳೂರಿನ ಕೆಲ ಕಾನ್ವೆಂಟುಗಳು ತಮ್ಮ ಸಂನ್ಯಾಸಿನಿಯರನ್ನು ಜನರ ಜೊತೆ ಬೆರೆಯಲು ಬಿಡುವುದೇ ಇಲ್ಲ. ಅವುಗಳ ಮೇಲೆ ಸ್ಥಳೀಯ ಧರ್ಮಗುರುಗಳಿರಲಿ ಸ್ವತಃ ಬಿಷಪರೂ ಅಧಿಕಾರ ಚಲಾಯಿಸಲಾಗುವುದಿಲ್ಲ. ಕೇಳಿದರೆ ಆ ಕಾನ್ವೆಂಟಿನವರು ತಮ್ಮದು ಪೊಂಟಿಫಿಕಲ್ ಕಾನ್ವೆಂಟು ಅಂದರೆ ಪೋಪರ ಅಧೀನದ್ದು, ಆದ್ದರಿಂದ ಬಿಷಪರ ಮಾತು ನಮಗೆ ಅನ್ವಯಿಸುವುದಿಲ್ಲ ಎನ್ನುತ್ತಾರೆ.

ಬೆಂಗಳೂರಿನ ರಾಜಾಜಿನಗರದಲ್ಲಿ ಸಂನ್ಯಾಸಿಗಳ ಮಠವೊಂದರ ಮುಖ್ಯಪೀಠವಿದೆ. ಆ ಮಠವು ಮಲ್ಲೇಶ್ವರದ ಕ್ರಿಸ್ತರಾಜರ ದೇವಾಲಯ ಹಾಗೂ ರಾಜಾಜಿನಗರದ ಸ್ವರ್ಗಸ್ವೀಕೃತ ಮಾತೆಯಾಲಯಕ್ಕೆ ಸಮಾನ ದೂರದಲ್ಲಿದೆ. ಆದರೂ ಆ ಮಠದವರು ತಮ್ಮ ಮಠದಲ್ಲಿಯೇ ಪೂಜೆ ಏರ್ಪಡಿಸಿಕೊಳ್ಳುತ್ತಾರೆ. ಹೊರಗಿನ ಸಮಾಜದಲ್ಲಿ ಅವರು ಗುರುತಿಸಿಕೊಳ್ಳುವುದೂ ಇಲ್ಲ, ಆಧ್ಯಾತ್ಮಿಕ ಪೋಷಣೆ ನೀಡುವುದೂ ಇಲ್ಲ. ಅಚ್ಚರಿಯೆಂದರೆ ಅವರು ಈ ಎರಡೂ ಧರ್ಮಕೇಂದ್ರಗಳಿಗೆ ಸೇರಿದ ಕೆಲ ಕೊಂಕಣಿ ಭಾಷಿಕ ಹೆಂಗಸರನ್ನು ಆಹ್ವಾನಿಸಿ ಕೊಂಕಣಿಯಲ್ಲಿ ಪೂಜೆ ಅರ್ಪಿಸುತ್ತಾರೆ. ಇದನ್ನು ಧರ್ಮಪೋಷಣೆ ಎನ್ನಬೇಕೋ, ತೀಟೆ ತೆವಲು ಎನ್ನಬೇಕೋ?

ಕ್ರಿಸ್ತನಲ್ಲಿ ಎಲ್ಲರೂ ಒಂದಾಗಬೇಕು ಎಂಬ ಆಶಯ ಇಂದು ಮರೆಯಾಗಿ ನಾವೆಲ್ಲ ಕ್ರಿಸ್ತನನ್ನು ಮರೆತು ವಿವಿಧ ಭಾಷೆಗಳ ಪೂಜೆಗಳಾಗಿ ವಿಂಗಡಿಸಿಕೊಂಡು ವಿಘಟನೆಯಲ್ಲಿ ವಿಕೃತಾನಂದ ಕಾಣುತ್ತಿದ್ದೇವಾ?


ಸಿ ಮರಿಜೋಸೆಫ್ - 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...