ಎಲ್ ಸಾಲ್ವಡಾರ್ ಮಧ್ಯಪ್ರಾಚ್ಯ ಅಮೆರಿಕಾ ಭಾಗದ ಒಂದು ದೇಶ. ಇಂದಿಗೂ ಕಿತ್ತು ತಿನ್ನುವ ಬಡತನ, ಅಸಮಾನತೆ ಹಾಗೂ ಅಪರಾಧ- ಕ್ರೌರ್ಯಗಳಿಂದ ಬಳಲುತ್ತಿರುವ ಈ ದೇಶ ೧೯ ಹಾಗು ೨೦ನೇ ಶತಮಾನದ ಉದ್ದಕ್ಕೂ ರಾಜಕೀಯ ಹಾಗೂ ಸಾಮಾಜಿಕ ಅತಂತ್ರ ಸ್ಥಿತಿಯಲ್ಲೇ ಬಳಲುತ್ತಲೇ ನಲುಗಿದ ದೇಶ. ಇದರ ಉಚ್ಛ್ರಾಯ ಸ್ಥಿತಿ ತಲುಪಿದ್ದು ೧೯೭೯ರಿಂದ ೧೯೯೨ರ ತನಕ ನಡೆದ ಆಂತರಿಕ ಯುದ್ಧದ ಸಮಯದಲ್ಲಿ.
ಆ ಸಮಯದಲ್ಲಿ ದೇಶವನ್ನು ಆಳುತ್ತಿದ್ದ ಸೇನಾಡಳಿತಕ್ಕೂ, ಅದರ ವಿರುದ್ಧ ದಂಗೆ ಎದ್ದ ದಂಗೆಕೋರ ಗುಂಪಿನಿಂದ ಸದಾ ಕಲಹದ ಸ್ಥಿತಿಯೇ. ಲೂಟಿ, ಕೊಲೆ, ಮಾರಣಹೋಮಗಳಿಂದ ಬೆಂದು ನಲುಗಿ ಹೋದ ಸ್ಥಿತಿಯಲ್ಲಿ ಅಲ್ಲಿನ ಕ್ರೈಸ್ತಧರ್ಮಸಭೆ ತನ್ನ ಸ್ಪಷ್ಟ ನಿಲುವುಗಳನ್ನು ತಿಳಿಸಲು ಹಿಂಜರಿಯುತ್ತಿತ್ತು. ದೇಶವನ್ನು ಆಳುತ್ತಿದ್ದ ಸೈನ್ಯಸರ್ಕಾರ ಹಾಗೂ ಅದರ ಬೆಂಬಲಕ್ಕೆ ನಿಂತ ಶ್ರೀಮಂತರ ಪಡೆ ಒಂದು ಕಡೆಯಾದರೆ, ಸರ್ಕಾರವನ್ನು ಹಿಂಸಾತ್ಮಕವಾದ ಮಾರ್ಗದಿಂದಲೇ ಎದುರಿಸಲು ನಿಂತ ಎಡಪಂಥಿಯ ದಂಗೆಕೋರರು ಇನ್ನೊಂದೆಡೆ. ಇವೆರಡರ ನಡುವೆ ಬಳಲುವ ಶಾಂತಿಪ್ರಿಯ, ಬಡ ಸಾಮಾನ್ಯ ಜನ.
ಕುರುಬನಿಲ್ಲದ ಕುರಿಗಳಂತಿಹ ಜನರ ನಡುವೆ ತನ್ನ ನಿಲುವು ಹೇಳಿಕೊಳ್ಳಲಾಗದೆ ವ್ಯಾಟಿಕನ್ನಿಗೆ ಬದ್ಧವಾದ ಯಾಜಕವರ್ಗ. ಈ ಯಾಜಕರಲ್ಲೂ ಕೆಲವರು ಸರ್ಕಾರದ ಪರ. ಈ ಎಲ್ಲಾ ಗೊಂದಲಗಳ ನಡುವೆ ತಟಸ್ಥವಾಗಿ ನಿಂತ ಆಸ್ಕರ್ ರೊಮೇರೊ ಎಂಬ ಪಾದ್ರಿ ಗಲಭೆಪೀಡಿತ ಸ್ಯಾನ್ ಸಾಲ್ವಡೊರ್ ನಗರಕ್ಕೆ ಧರ್ಮಾಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ನಂತರ ಜನಪರ ಕಾಳಜಿಯಿಂದ ಸರ್ಕಾರದ ವಿರುದ್ಧವಾಗಿ ನಿಂತು ಇಡೀ ವಿಶ್ವದ ಗಮನ ಸೆಳೆದು ನಂತರ ಅದೇ ಕಾರಣಕ್ಕೆ ಪ್ರಾಣಬಿಟ್ಟ ರೊಮೇರೊರವರ ಜೀವನಾಧಾರಿತ ಚಿತ್ರವೇ 'ರೊಮೇರೊ'.
೧೯೮೯ರಲ್ಲಿ ಬಿಡುಗಡೆಗೊಂಡ ಈ ಚಿತ್ರ ಎಲ್ ಸಾಲ್ವಡೊರ್ ಅಂದಿನ ರಾಜಕೀಯ, ಸಾಮಾಜಿಕ ಸ್ಥಿತಿಯನ್ನೂ, ಅದರ ಹಿನ್ನಲೆಯಲ್ಲಿ ಬಿಷಪ್ ಆಸ್ಕರ್ ರೊಮೇರೊ ತೋರಿದ ದಿಟ್ಟತನವನ್ನು ಬಹಳ ಸಂಯಮ, ಸೂಕ್ಷ್ಮವಾಗಿ ತಿಳಿಸಲು ಯಶಸ್ವಿಯಾಗಿದೆ .
ಆರ್ಥಿಕ ದೃಷ್ಟಿಯಿಂದ ಅಷ್ಟೇನೂ ಯಶಸ್ವಿಯಲ್ಲದ ಈ ಚಿತ್ರ ವಿಮರ್ಶಕರ ಹಾಗೂ ಜನಮನವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು ಎಂದೇ ಹೇಳಬೇಕು. ಅಷ್ಟು ಮಾತ್ರವಲ್ಲದೆ ಆ ದೇಶದ ವಸ್ತುಸ್ಥಿತಿಯ ಬಗ್ಗೆ ಇಡೀ ಜಗತ್ತಿಗೆ ಕನ್ನಡಿ ಹಿಡಿಯುವಂಥ ಮಾಧ್ಯಮವಾಯಿತು. ಚಿತ್ರ ಬಂದು ಮೂರು ವರ್ಷಕ್ಕೆ ಅಲ್ಲಿನ ಆಂತರಿಕ ಯುದ್ಧ ಕೊನೆಗೊಂಡಿತು ಎಂಬುದು ಸಹಾ ಗಮನಾರ್ಹ ವಿಷಯ. ಅದರಲ್ಲಿ ಚಿತ್ರದ ಅಳಿಲುಸೇವೆಯು ಇದ್ದಿರಬಹುದು.
ಚಿತ್ರದ ಆರಂಭದಲ್ಲೇ ಚುನಾವಣೆಗೆ ಹೊರಟ ಜನರನ್ನು ಅಲ್ಲಿನ ಸೈನ್ಯ ತಡೆಯುವುದು ಹಾಗೂ ಆ ಜನರನ್ನು ಅಲ್ಲಿ ಸೇವೆ ಮಾಡುತ್ತಿದ್ದ ರೊಮೇರೊ ಹಾಗು ಇತರ ಗುರುಗಳು ಮತ ಚಲಾಯಿಸುವತ್ತ ಮುನ್ನಡೆಸುವುದನ್ನು ತೋರಿಸಲಾಗಿದೆ. ಇಲ್ಲಿನ ಇತರ ಗುರುಗಳು ಹಾಗೂ ಧರ್ಮಾಧಿಕಾರಿಗಳ ಸಣ್ಣ ವಿರೋಧ, ಅಸಹನೆಯ ನಡುವೆಯೇ ಆಸ್ಕರ್ ರೊಮೇರೊ ಧರ್ಮಾಧ್ಯಕ್ಷರಾಗಿ ಆಯ್ಕೆಯಾಗಿ, ಮೊದಲು ಧರ್ಮಸಭೆಯ ತಟಸ್ಥ ನಿಲುವಿಗೆ ಅಂಟಿಕೊಂಡು ನಂತರ ಹಂತ ಹಂತವಾಗಿ ಜನರಪರವಾಗಿ ದಿಟ್ಟವಾಗಿ ನಿಲ್ಲುವ ಪರಿಯನ್ನು ಚಿತ್ರದಲ್ಲಿ ಅದ್ಭುತವಾಗಿ ಮೂಡಿಸಲಾಗಿದೆ.
ಎಲ್ಸೆಲ್ವಾಡರ್ ದೇಶದ ಪರಿಸ್ಥಿತಿ ಹಾಗೂ ದಾರುಣತೆಯನ್ನು ಚಿತ್ರದಲ್ಲಿ ಸಮರ್ಥವಾಗಿ ತೋರಿಸಲಾಗಿದೆ. ಅಲ್ಲಿನ ಸೇನೆಯ ಕಠೋರತೆ, ಬಂಡುಕೋರರ ಹಿಂಸಾಪ್ರವೃತ್ತಿ, ಧರ್ಮಗುರುಗಳ ಗೊಂದಲ, ಧರ್ಮಾಧಿಕಾರಿಗಳ ಸೋಗಲಾಡಿತನ, ಜನರ ನೋವು, ಬಡತನ, ಶ್ರೀಮಂತರ ಭಂಡತನವನ್ನು ಚಿತ್ರ ನಿಧಾನವಾಗಿ ತೆರೆದಿಡುತ್ತಾ ಹೋಗುತ್ತದೆ.
ಚಿತ್ರದ ಅನೇಕ ದೃಶ್ಯಗಳು ಹೃದಯಸ್ಪರ್ಶಿಯಾಗಿದೆ. ಆಸ್ಕರ್ ರೊಮೇರೊ ಸ್ಯಾನ್ಸಾಲ್ವೆಡಾರ್ ಧರ್ಮಾಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಶ್ರೀಮಂತರ ದೊಡ್ಡಸಾಲು ಬೆಲೆಬಾಳುವ ಉಡುಗೊರೆಗಳೊಂದಿಗೆ ನಿಂತಿರುವ ಸಂದರ್ಭವೊಂದು ಬರುತ್ತದೆ. ಎಲ್ಲರಿಗೂ ಧರ್ಮಾಧ್ಯಕ್ಷರನ್ನು ತಮ್ಮತ್ತ ಸೆಳೆದುಕೊಳ್ಳುವ ಕಾತುರ. ಈ ಬೆಲೆ ಬಾಳುವ ಉಡುಗೊರೆಗಳ ನಡುವೆ ಧರ್ಮಾಧ್ಯಕ್ಷರು ತಮ್ಮ ಗೆಳೆಯ ಗುರುಗಳು ತಂದುಕೊಡುವ ಹೊಸ ಶೂಗಳನ್ನು ಹಾಕಿಕೊಂಡು ಸಂಭ್ರಮಿಸುವ ಕುಣಿದು ಕುಪ್ಪಳಿಸುವ ದೃಶ್ಯ ಮನಮೋಹಕವಾಗಿದೆ. ಮುಂದೆ ತಾವು ಸವೆಸಬೇಕಾದ ಕಠಿಣ ಹಾದಿಗೆ ಅರ್ಥಮಾಡಿಕೊಳ್ಳುವ ಸ್ನೇಹಪರ ಮನಸ್ಸುಗಳು ಬೇಕು ಎಂಬ ಅರ್ಥ ಇಲ್ಲಿದೆಯೇನೋ!
ಮತ್ತೊಂದು ದೃಶ್ಯದಲ್ಲಿ ಕೊಲೆಯಾದ ತಮ್ಮ ಸ್ನೇಹಿತ ಗುರುಗಳ ಬಗ್ಗೆ ಮಾತಾಡಲು ಆಸ್ಕರ್ ಸೈನ್ಯಾಧಿಕಾರಿಯನ್ನು ಭೇಟಿಯಾಗಲು ಬರುತ್ತಾರೆ. ಆಗ ಸೈನ್ಯಯ ಜನರಲ್ ಕೊಲೆಯಾದ ಆ ಗುರುಗಳು ಜನರನ್ನು ದಂಗೆಯೇಳಲು ಪ್ರೇರೇಪಿಸುತ್ತಿದ್ದರು, ಸಾಯುವ ದಿನ ಸಹಾ ಜನರನ್ನು ಸರ್ಕಾರದ ವಿರುದ್ಧ ಒಟ್ಟುಗೂಡಿಸುತ್ತಿದ್ದರು ಎಂದು ಹೇಳುತ್ತಾನೆ. ಅದಕ್ಕೆ ಆಸ್ಕರ್ ಅವರು "ಆ ದಿನ ನನ್ನ ಗುರು ಸ್ನಾನದೀಕ್ಷೆ ನೀಡುತ್ತಿದ್ದರು, ನೀನು ದೊಡ್ಡ ಸುಳ್ಳುಗಾರ" ಎಂದು ನೇರವಾಗಿ ಹೇಳಿ ಅಲ್ಲಿದ್ದವರನ್ನೆಲ್ಲಾ ದಂಗುಪಡಿಸುತ್ತಾರೆ.
ಈ ರೀತಿಯ ಅನೇಕ ದೃಶ್ಯಗಳಲ್ಲಿ ಮತ್ತೊಂದು ಹೃದಯ ತಟ್ಟುವ ದೃಶ್ಯವೆಂದರೆ ಸೈನ್ಯ ಆಕ್ರಮಿಸಿಕೊಂಡ ದೇವಾಲಯದಲ್ಲಿ ಪವಿತ್ರ ಪ್ರಸಾದವನ್ನು ತೆಗದುಕೊಂಡು ಹೊರಟ ಆಸ್ಕರ್ ನವರು ಜನರತ್ತ ಒಮ್ಮೆ ನೋಡಿ ಮತ್ತೆ ಪೂಜಾಬಟ್ಟೆಯೊಂದಿಗೆ ಬಂದು ಅದೇ ದೇವಾಲಯದಲ್ಲಿ ಪೂಜೆ ಅರ್ಪಿಸುವ ದೃಶ್ಯ ಮೈನವಿರೇಳಿಸುತ್ತದೆ.
ಒಂದು ಜೀವನಾಧಾರಿತ ಚಿತ್ರವನ್ನು ನಿರ್ದೇಶಿಸುವಾಗ ತೋರಬೇಕಾದ ಸಂಯಮ, ನಿಷ್ಠುರತೆಯನ್ನು ನಿರ್ದೇಶಕ ಜಾನ್ ಡೇಗನ್ ತೋರುತ್ತಾರೆ. ಎಲ್ಸೆಲ್ವಡಾರ್ ಆತಂತ್ರ ಪರಿಸ್ಥಿತಿಗೆ ಪರೋಕ್ಷವಾಗಿ ಬೆಂಬಲ ನೀಡುವ ಅಮೆರಿಕಾದ ರಾಜಕೀಯ ನೀತಿಯ ಬಗ್ಗೆ ಚಿತ್ರ ಮಾತನಾಡುವುದಿಲ್ಲ ಎಂಬ ಅಪಸ್ವರ ಇದೆ. ಆದರೆ ತಮ್ಮದೇ ಆದ ಬಜೆಟ್ ಮಿತಿ ಹಾಗೂ ಸೆನ್ಸಾರಿನ ಇತಿಮಿತಿಯಲ್ಲಿ ಚಿತ್ರ ಉತ್ತಮವಾಗಿಯೇ ಮೂಡಿಬಂದಿದೆ.
ರೋಮನ್ ಕ್ಯಾಥಲಿಕ್ ಸಭೆಯಾದ ಪೌಲಿಸ್ಟ್ ಫಾದರ್ಸ್ ನಿರ್ಮಿಸಿದ ಈ ಚಿತ್ರವನ್ನು ಜಾನ್ ಡೆಯಿಗನ್ ನಿರ್ದೇಶಿಸಿದರು. ಮೆಕ್ಸಿಕೋದವರಾದ ಅಲಫೋನ್ಸ್ ಕ್ಯೂರನ್ ಈ ಚಿತ್ರದ ಸಹಾಯಕ ನಿರ್ದೇಶಕರಾಗಿದ್ದರಿಂದ ಸ್ಥಳೀಯತೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಚಿತ್ರ ಯಶಸ್ವಿಯಾಗಿದೆ.
ಅನ್ಯಾಯದ ವಿರುದ್ಧವಾಗಿ ಹೋರಾಡುವಾಗಲೂ ಹಿಂಸೆಯಿಂದ ಪರಿಹಾರ ಸಾಧ್ಯವಿಲ್ಲ ಎಂಬುದನ್ನು ಬಲವಾಗಿ ನಂಬಿ, ಕ್ರಿಸ್ತನ ಪರಸ್ಪರ ಪ್ರೀತಿಯ ಸಂದೇಶವೇ ಎಲ್ಲವನ್ನೂ ಸರಿದೂಗಿಸಬಲ್ಲ ಶಕ್ತಿ ಎಂಬ ಆಸ್ಕರ್ ಅವರ ಸಂದೇಶವೇ ಚಿತ್ರದ ಜೀವಾಳ.
ಆಸ್ಕರ್ ರೊಮೇರೊರವರ ಪಾತ್ರವನ್ನು ನಿರ್ವಹಿಸಿರುವ ರೋಲ್ ಜೂಲಿಯಾರವರು ಚಿತ್ರವನ್ನು ಮಾತ್ರವಲ್ಲದೆ ನೋಡುಗರ ಮನಸ್ಸನ್ನು ಆವರಿಸಿಕೊಳ್ಳುತ್ತಾರೆ. ಎತ್ತರದ ಗಂಭೀರ ನಿಲುವು, ಮೌನದ ನಡುವಿನ ಆಸ್ಫೋಟ, ದಿಟ್ಟ ನಡೆ ಹಾಗು ಮಾನವೀಯತೆ ಸ್ಪುರಿಸುವ ಕಣ್ಣು, ಮುಗುಳ್ನಗೆಯಿಂದಾಗಿ ನಮ್ಮ ನಡುವಿನ ಕೆಲವು ಹಿರಿಯ ಗುರುಗಳನ್ನು ಜೂಲಿಯಾ ನೆನಪಿಸುತ್ತಾರೆ.
ರಾಜಕೀಯ, ಸಾಮಾಜಿಕ ಹಾಗು ಆಧ್ಯಾತ್ಮಿಕ ಗೊಂದಲಗಳು ಯಾವುದೇ ಕಾಲದಲ್ಲೂ ಇರುವಂಥದ್ದೇ. ಈ ಗೊಂದಲಗಳ ನಡುವೆ ಒಂದು ಧರ್ಮ, ಧರ್ಮದ ನಾಯಕರು ಹಾಗು ಧಾರ್ಮಿಕ ಸಂಸ್ಥೆ ವಹಿಸಬಹುದಾದ ಪಾತ್ರ, ತಾಳಬೇಕಾದ ನಿಲುವು, ಅದರ ಮಾರ್ಗ ಹಾಗೂ ಅದಕ್ಕಾಗಿ ತೆರಬೇಕಾಗಬಹುದಾದ ಬೆಲೆಗೆ ಬಿಷಪ್ ಆಸ್ಕರ್ ರೊಮೇರೊ ಸಾಕ್ಷಿಯಾಗಿ ನಿಲ್ಲುತ್ತಾರೆ. ಈ ಚಿತ್ರ ಅವರ ಭಾವಗಳನ್ನು, ಅವರನ್ನು ಹಿಡಿಯಾಗಿ ತೆರೆದಿಡುವಲ್ಲಿ ಯಶಸ್ವಿಯಾಗಿದೆ.
ಸದ್ಯದ ತಳಮಳದ ಪರಿಸ್ಥಿತಿಯಲ್ಲಿ ಈ ಚಿತ್ರ ಅನೇಕ ಒಳ ಅರ್ಥಗಳನ್ನು ನೀಡುತ್ತಾ ನೋಡಲೇಬೇಕಾದ ಚಿತ್ರಗಳ ಸಾಲಿನಲ್ಲಿ ನಿಲ್ಲುತ್ತದೆ.
No comments:
Post a Comment