Wednesday, 9 May 2018

ಪುಸ್ತಕ ಪ್ರೀತಿ


ವಿಶ್ವ ಪುಸ್ತಕ ದಿನ ಅಂದ್ರೆ ಪುಸ್ತಕಗಳ ಹಬ್ಬ, ಲೇಖಕ/ಕಿಯರ ಸಂಭ್ರಮ ಮುಖ್ಯವಾಗಿ ಓದಿನ ಸಂಭ್ರಮ. ಹೌದು ಓದು ಎಂದರೇನು? ಇದು ಒಂದು ಮೂರ್ಖತನದ ಪ್ರಶ್ನೆ ಎನ್ನಿಸಬಹುದು. ಎಷ್ಟೋ ಜನರಿಗೆ ಓದುಗಾರಿಕೆ ಅಥವಾ ಓದುವಿಕೆ ಎಂದರೆ ಏನು ಎಂಬ ಪ್ರಶ್ನೆಗೆ ಉತ್ತರವೇ ಗೊತ್ತಿರುವುದಿಲ್ಲ. ಓದು ಅಂದ್ರೆ ಒಂದು ಜ್ಞಾನೇಂದ್ರಿಯಗಳ ಹಾಗೂ ಮಾನಸಿಕ ಪ್ರಕ್ರಿಯೆ. ಮನುಷ್ಯನನ್ನು ಚೈತನ್ಯಗೊಳಿಸುವ ಭಾವನೆ, ಗಾಢ ಯೋಚನೆಗೆ ಹಚ್ಚುವ ಪ್ರಕ್ರಿಯೆ. ಅದ್ದರಿಂದ ಓದುವುದು ಒಂದು ಯೋಚನಾ ಹಾಗು ಕಲಿಕಾ ಕ್ರಿಯೆ. ಓದು ಒಬ್ಬನನ್ನು ಸ್ವ-ಜ್ಞಾನಕ್ಕೆ ಅನುವು ಮಾಡಿಕೊಡುವುದರ ಮೂಲಕ ಜ್ಞಾನಿಯಾಗಿಸುತ್ತದೆ. ನಾವು ಓದುವುದಿಲ್ಲವೆಂದರೆ ನಾವು ಯೋಚಿಸುವುದಿಲ್ಲ, ನಗಾಡುವುದಿಲ್ಲ ಕೊನೆಗೆ ಬದುಕುತ್ತಿಲ್ಲವೆಂದೇ ಅರ್ಥ. ಓಟ್ಟಾರೆ ಓದು ಅರ್ಥಗ್ರಹಿಕೆ ಹಾಗೂ ಸಂವೇದನಾ ಮತ್ತು ಸಂವಹನ ಕ್ರಿಯೆ.
ಪುಸ್ತಕವು ಜ್ಞಾನ ಸಂಪಾದನೆಯ ಮಾಧ್ಯಮ. ಮಾಹಿತಿಗಳ ಭಂಡಾರ. ಐತಿಹಾಸಿಕ ದಿನಚರಿ. ಒಬ್ಬನನ್ನು ಯೋಚಿಸಲು, ಭಾವಿಸಲು, ಅನುಭವಿಸಲು, ಕಲ್ಪಿಸಿಕೊಳ್ಳಲು ಸಹಾಯ ಮಾಡುವುದೇ ಈ ಪುಸ್ತಕಗಳು. ಒಂದು ಪುಸ್ತಕವನ್ನು ಕೈಯಲ್ಲಿ ಇಟ್ಟುಕೊಂಡು ಅದನ್ನು ಓದುತ್ತಾ ಕೂತಲ್ಲೇ ಸಾವಿರಾರು ಮೈಲಿಗಳ ದೂರ ಕ್ರಮಿಸಬಿಡಬಹುದು. ಹೌದು ಪುಸ್ತಕಕ್ಕೆ ಕಲಿಸುವ, ಮಾರ್ಗದರ್ಶನ ಮಾಡುವ, ನಗಿಸುವ, ಅಳಿಸುವ, ಪರಿವರ್ತಿಸುವ, ಬದಲಾಯಿಸುವ, ಕಲ್ಪಿಸುವ ಶಕ್ತಿ ಇದೆ. ಈ ಸಾರಿ ವಿಶ್ವ ಪುಸ್ತಕದಿನದ ಅಂಗವಾಗಿ ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋ ಕಾದಂಬರಿಯನ್ನು ಕೈಯಲ್ಲಿಡಿದು ಓದಲಾರಂಭಿಸಿ, ಪೂರ್ತಿಯಾಗಿ ಓದಿ ಮುಗಿಸುವ ತನಕ ಆ ಪುಸ್ತಕ ನನ್ನ ಕೈಗಳ ಬಿಡಲಿಲ್ಲ. ಅಂತಹ ಕುತೂಹಲಕಾರಿ ಪುಸ್ತಕ ಅದು. ಓದಿದ ನಂತರ ಆ ಪುಸ್ತಕವನ್ನು ಓದಿದ ಇತರರ ಅನುಭವಗಳೇನು ಎಂಬ ಪ್ರಶ್ನೆಯೊಂದಿಗೆ ಗೂಗಲು ಮಾಡಿದಾಗ ಆ ಕಾದಂಬರಿಯ ಬಗ್ಗೆ ಬರೆದ ಅನೇಕ ಲೇಖನಗಳು ಕಂಡು ಬಂದವು. ಅವುಗಳಲ್ಲಿ ಪ್ರಶಾಂತ್ ಇಗ್ನೇಶಿಯಸ್ ಹೊನಲು‍ಗೆ ಬರೆದ ಒಂದು ಲೇಖನವು ನನ್ನ ಕಣ್ಣಿಗೆ ಬಿತ್ತು. ಆ ಲೇಖನವನ್ನು ಓದುತ್ತಿದ್ದಂತೆ ಕೆಲವೊಂದು ಅವರ ಅಭಿಪ್ರಾಯಗಳು, ಅನಿಸಿಕೆಗಳು, ಹೊಳಹುಗಳು ನನ್ನ ಅನುಭವಗಳಷ್ಟೇ ತಾಜಾವಾಗಿದವು. ಅದಕ್ಕಾಗಿ ಆ ಲೇಖನವನ್ನು ನಿಮ್ಮ ಓದಿಗೆ ಇಲ್ಲಿ ಕೊಡುತ್ತಿದ್ದೇನೆ. ಓದಿ ಆನಂದಿಸಿ ಮೂಲ ಪುಸ್ತಕವನ್ನು ಓದಲು ಮರೆಯಬೇಡಿ. ಬನ್ನಿ ಪುಸ್ತಕಗಳನ್ನು ನಮ್ಮ ಸಂಗಾತಿಯಾಗಿಸಿಕೊಳ್ಳೋಣ.
ಕರ್ವಾಲೊ ಒಂದು ಸೀಳುನೋಟ (ಹೊನಲು·-09-2013)
ನಾನುಮೂಡುಗೆರೆಜೇನು ಸೊಸಯ್ಟಿಯ ಬಾಗಿಲುಗಳನ್ನು ತಳ್ಳಿ ಒಳಗೆ ಪ್ರವೇಶಿಸಿದಾಗ.." ಎಂದು ಪ್ರಾರಂಭವಾಗುವ ತೇಜಸ್ವಿಯವರಕರ್ವಾಲೊಕಾದಂಬರಿಯ ಮೊದಲ ಸಾಲುಗಳಲ್ಲೇ ಒಂದು ರೀತಿಯ ಗೊಂದಲ ಮೂಡುತ್ತಿತ್ತು. ಹಾಗೇ ನೋಡಿದರೆತೇಜಸ್ವಿಯವರ ಕಾದಂಬರಿ, ಕತೆಗಳನ್ನು ಅದರ ಮೊದಲ ಸಾಲು, ಪುಟ ಅತವಾ ಅಧ್ಯಾಯದಿಂದ ಅಳೆಯಲಾಗದು. ಎಲ್ಲಿಯೋ ಅರಂಭವಾಗಿ ಯಾವುದೇ ಅನಗತ್ಯ ತಿರುವುಗಳಿಲ್ಲದೆ, ಹಂತ ಹಂತವಾಗಿ ಅಚ್ಚರಿಗೊಳಿಸುತ್ತ ಮತ್ತೆಲ್ಲಿಯೋ ಹೋಗಿ ಮುಟ್ಟುವ ಪರಿ ಅವರ ಓದುಗರಿಗೆ ಪರಿಚಿತವೇ. ಆದರೂ ಹಾರುವ ಓತಿಯ ಹುಡುಕಾಟದ ಬಗೆಗಿನ ಕಾದಂಬರಿ ಎಂದು ಗೊತ್ತಿತ್ತಾದರಿಂದ, ಕರ್ವಾಲೊ ಎಂಬ ವಿಚಿತ್ರ ಹೆಸರು ಯಾರದು? ಇದ್ಯಾವುದೋ ಕ್ರಾಂತಿಕಾರಿ ವ್ಯಕ್ತಿಯ ಹೆಸರಿರಬಹುದೇ, ಹಾರುವ ಓತಿಗೂ ಮೂಡುಗೆರೆಗೂ ಎಲ್ಲಿಯ ಸಂಬಂಧ, ಅದು ಕಾಡಿನ ಸಾಹಸ ಕತೆಯಾದರೆ ಅದಕ್ಕೂ ಮೂಡುಗೆರೆ ಜೇನು ಸೊಸಯ್ಟಿಗೂ ಯಾವ ನಂಟು ಎಂಬುದರಲ್ಲೇ ಕರ್ವಾಲೋ ಓದುವುದನ್ನು ಬೇಕಂತಲೇ ಮುಂದೂಡತ್ತಲೇ ಬಂದಿದ್ದೆ.
ಪೂರ್ಣ ಚಂದ್ರ ತೇಜಸ್ವಿಯವರುಕುವೆಂಪುರವರ ಮಗ ಎಂದು ತಿಳಿದಿತ್ತಾದರೂ ಅವರ ಬರಹಗಳ ಪರಿಚಯ ಆಗಿದ್ದುಲಂಕೇಶ್ ಪತ್ರಿಕೆಯಲ್ಲಿನ 'ಆಣ್ಣನ ನೆನಪು' ಅಂಕಣದಿಂದಾಗಿಯೇ. ಆಗ ಲಂಕೇಶ್ ಪತ್ರಿಕೆ ಬಹಳ ಜನಪ್ರಿಯವಾಗಿದ್ದರೂ ಅದರಲ್ಲಿ ನನ್ನಂತವನಿಗೆ ಅರ್ಥವಾಗುತ್ತಿದ್ದದ್ದು, ನೀಲು ಚುಟುಕುಗಳು, ಸಿನಿಮಾ, ಅನಂತ್ ನಾಗ್‍ರ 'ನನ್ನ ತಮ್ಮ ಶಂಕರ', ಅಣ್ಣನ ನೆನಪು ಇಂತ ಅಂಕಣಗಳು ಮಾತ್ರವೇ. ಅಲ್ಲಿಂದಲೇ ತೇಜಸ್ವಿಯವರ ಬರಹಗಳ ಬಗ್ಗೆಯೂ ಒಂದು ಕುತೂಹಲ ಮೂಡಿತು. ಕುತೂಹಲದಿಂದಾಗಿ ಮುಂದೆ ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಕಿರುಗೂರಿನ ಗಯ್ಯಾಳಿಗಳು ಮುಂತಾದ ಪುಸ್ತಕಗಳು ಓದುವಂತೆಯೂ ಆಯಿತು. ಮತ್ತೊಂದು ಪುಸ್ತಕದಲ್ಲಿ ತಮ್ಮ ಮನೆಯ ಬಳಿ ಹಾವೊಂದು ಕಪ್ಪೆಯನ್ನು ನುಂಗಿ, ಅದರ ಭಾರಕ್ಕೆ ಮುಂದೆ ಸಾಗಲಾರದೆ ಸಣ್ಣ ಪಕ್ಷಿಯೊಂದಕ್ಕೆ ಆಹಾರವಾಗುವ ಪ್ರಸಂಗವನ್ನು ತೇಜಸ್ವಿ ಎಷ್ಟು ಅದ್ಭುತವಾಗಿ ವರ್ಣಿಸಿದ್ದಾರೆಂದರೆ ಅವರ ಎಲ್ಲಾ ಬರಹಗಳನ್ನೂ ಓದಬೇಕೆಂಬ ಆಸೆ ಬೆಳೆಯಿತು. ಅದರೂ ಎಲ್ಲರೂ ಕ್ಲಾಸಿಕ್ ಎಂದೇ ಕರೆಯುತ್ತಿದ್ದ 'ಕರ್ವಾಲೊ' ಓದಲು ಮನಸ್ಸಾಗಿರಲಿಲ್ಲ.
ಒಂದಷ್ಟು ಪುಟಗಳನ್ನು ಓದಿ ಬಿಟ್ಟಿದ್ದ ಅದನ್ನು ಓದಲು ಮತ್ತೆ ಶುರು ಮಾಡಿದ್ದೊಂದೆ ನೆನಪು. ಹೇಗೆ ಮುಗಿಯಿತೋ ಕಾಣೆ. ಕರ್ವಾಲೊ ಒಂದು ಹೊಸ ಜಗತ್ತನ್ನೆ ತೆರೆದಿಟ್ಟಂತೆ ಆಯಿತು ಎಂಬುದು ನಿಜವಾದರೂ, ಅದಕ್ಕಿಂತ ಮುಖ್ಯವಾಗಿ ಕಾದಂಬರಿಯಲ್ಲಿ ಅಷ್ಟೇನೂ ಮುಖ್ಯವಲ್ಲದ   ಎಷ್ಟೋ ಸಣ್ಣ ಸಣ್ಣ ಪ್ರಶ್ನೆಗಳಿಗೆ ಉತ್ತರ ದೊರಕುತ್ತಾ ಹೋಯಿತು. ಇನ್ನು ಕಾದಂಬರಿಗೆ ಕರ್ವಾಲೊ ಎಂಬ ಹೆಸರು ಇದೆಯಾದರೂ ಅಲ್ಲಿನ ಯಾವ ಪಾತ್ರದ ಹೆಸರನ್ನು ಇಟ್ಟರೂ ಸರಿಯೇ ಎಂಬಷ್ಟು ಎಲ್ಲಾ ಪಾತ್ರಗಳೂ ಲೀಲಾಜಾಲವಾಗಿ ನಮ್ಮನ್ನು ಅವರಿಸಿಕೊಳ್ಳುತ್ತವೆ. ಜಗತ್ತಿನ ವಿಕಸನದ ರಹಸ್ಯದ ಅಧ್ಯಾಯವೊಂದನ್ನು ತನ್ನಲ್ಲೇ ಇಟ್ಟುಕೊಂಡು ಅದರ ಬಗ್ಗೆ ಯಾವುದೇ ಅರಿವಿಲ್ಲದಂತೆ ಬಾಳುತ್ತಿರುವ ಓತಿ, ಅದನ್ನು ಹುಡುಕಿಕೊಂಡು ಹೊರಟವರಲ್ಲಿನ ಅದೇ ನಿರ್ಭಾವ, ಕರ್ವಾಲೊಗೆ ಮಾತ್ರ ತಿಳಿದಿರುವ ಅದರ ಮಹತ್ವ, ಆದರೂ ಅವರು ತೋರುವ ಸಂಯಮ,ಮಂದಣ್ಣ ಬೇಜವಾಬ್ದಾರಿ, ಬಿರಿಯಾನಿ ಕರಿಯಪ್ಪನ ರಸಿಕತನ, ನಾಯಿ 'ಕಿವಿ' ನಾಯ್ತನ(?), ಸ್ವತಃ ತೇಜಸ್ವಿಯವರ ಉತ್ಸಾಹ, ಹಾಸ್ಯ, ಹತಾಶೆ, ಬೇಸರ, ಪ್ರಭಾಕರನ ಪ್ರಜ್ಞೆ, ಕೆಲಸದಾಳುಪೀರ ಮುಗ್ಧತೆ, ಮೂಡುಗೆರೆಯಂತ ಊರುಗಳಲ್ಲಿನ, ಕಾಡುಗಳಲ್ಲಿನ ಭಾರತ, ಎಲ್ಲವೂ ಓದುಗನ ಭಾವಪ್ರಪಂಚದಲ್ಲಿ ಲೀನವಾಗುತ್ತಾ ಹೋಗುವ ಪರಿಯಿಂದಾಗಿಯೇ ಕರ್ವಾಲೋ ಏಕೆ ಕನ್ನಡ ಸಾಹಿತ್ಯದಲ್ಲಿ ಒಂದು ಆಪ್ತ ಹೆಸರು ಎಂಬ ಸತ್ಯ ಅರಿವಾಗುತ್ತದೆ. ಹುಡುಕುವ ಪಯಣದ ರೋಮಾಂಚನದಲ್ಲಿ ಮುಳುಗಿ ಏಳುವ ಓದುಗನಿಗೆ ಓತಿ ಸಿಕ್ಕರೂ ಸಿಕ್ಕದಿದ್ದರೂ ನಿರಾಸೆಯಂತೂ ಆಗುವುದಿಲ್ಲ.
ಕಾದಂಬರಿಯಲ್ಲಿ ಮೂಡುಗೆರೆಯಂತ ಊರುಗಳ, ಜನರ ಬವಣೆಗಳ ವಿವರಗಳ ಜೊತೆಗೆ ಕಾಡಿನ ಅಗಾಧತೆ, ಅನಂತತೆಯ ಬಗೆಗಿನ ವಿವರಗಳು ಆಶ್ಚರ್, ಭಯ, ರೋಮಾಂಚನ ಎಲ್ಲವನ್ನೂ ಉಂಟು ಮಾಡುತ್ತದೆ. ತೇಜಸ್ವಿಯವರು ಮೂಡುಗೆರೆಗೆ ಬಂದು ಮನೆಗೆ ಇನ್ನೂ ವಿದ್ಯುತ್ ಶಕ್ತಿ ಸಂಪರ್ಕ ಹಾಕಿಸಕೊಳ್ಳದ ದಿನಗಳಲ್ಲಿ ಕಾದಂಬರಿಯನ್ನು ಬರೆದರು ಎಂಬ ತೇಜಸ್ವಿಯವರ ಪತ್ನಿ ರಾಜೇಶ್ವರಿ ನೀಡುವ ಮಾಹಿತಿಯೊಂದಾಗಿ 'ಕರ್ವಾಲೊ' ಕತ್ತಲ್ಲಲ್ಲಿ ಹೊಳೆಯುವ ದಿವ್ಯ ತಾರೆಯಂತೆ ಆಪ್ತವಾಗಿ ಕಾಣುತ್ತದೆ.
ಜೋವಿ 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...