Friday, 13 July 2018

ದುಃಖದ ಪರಿ: ಬೌದ್ಧ ಹಾಗೂ ಕ್ರೈಸ್ತಧರ್ಮದಲ್ಲಿ


          ದುಃಖದ ಪರಿಕಲ್ಪನೆ ಅರ್ಥೈಸಿಕೊಳ್ಳಲು ಅಥವಾ ವಿಶ್ಲೇಷಿಸಲು ಬಹಳ ಕಷ್ಟಕರ. ದೈನಂದಿನ ಜೀವನದಲ್ಲಿ ದುಃಖವು ತೀವ್ರಗೊಂಡಾಗ ಹಾಗೂ ವ್ಯಾಪಕಗೊಂಡಾಗ ನಮಗೆ ಇಂತಹ ಸನ್ನಿವೇಶಗಳಲ್ಲಿ ದೇವರ ಅಸ್ತಿತ್ವವನ್ನೇ ಪ್ರಶ್ನಿಸುವಂತಾಗುತ್ತದೆ. ಮಾನವ ಈ ಜಗತ್ತಿನಲ್ಲಿ ಹುಟ್ಟಿನಿಂದ ಸಾವಿನವರೆಗೆ ದುಃಖವನ್ನು ಹೊತ್ತು ನಡೆಯುತ್ತಲೇ ಇರುತ್ತಾನೆ. ದುಃಖವು ಸಹಜರೀತಿಯಲ್ಲಿ ಅವನನ್ನು ಆವರಿಸುತ್ತಲಿರುತ್ತದೆ. ಪ್ರತಿಯೊಬ್ಬ ಮಾನವನು ಮುಗ್ಧ ಜೀವಿಯಾಗಿ ಹುಟ್ಟುತ್ತಾನೆ. ಯಾರೊಬ್ಬನೂ ಹುಟ್ಟುವಾಗಲೇ ದಾಯಾದಿಯಾಗಿ ಕ್ರೂರಿಯಾಗಿ ಹುಟ್ಟುವುದಿಲ್ಲ ಅವನು ಬೆಳೆಯುವ ವಾತಾವರಣ ಅವನನ್ನು ಆವರಿಸಿ ಪಾಪಗ್ರಸ್ತನಾಗಿಸುತ್ತದೆ.
          ಈ ಪಾಪ ಎಲ್ಲಿಂದ ಬಂದಿದೆ? ದುಃಖವು ಪಾಪಕ್ಕೆ ಮೂಲವೆ? ದುಃಖಕ್ಕೆ ಅಂತ್ಯವಿಲ್ಲವೆ? ಈ ರೀತಿಯ ಪ್ರಶ್ನೆಗಳು ಜೀವನ ಪರಿಯಂತ ನಮ್ಮನ್ನು ದುಃಖಕ್ಕೀಡಾದಾಗಲೆಲ್ಲ ಕಾಡುತ್ತಲೇ ಇರುತ್ತವೆ. ದುಃಖವು ನಮ್ಮನ್ನು ಉಸಿರಾಡಲು ಬಿಡದೆ ಕೊರಳಿನಲ್ಲಿ ಹಗ್ಗವಾಗಿ ಪ್ರಾಣ ಹಿಂಡುತ್ತಿರುತ್ತದೆ.
          ನಮ್ಮನ್ನು ಪ್ರಶ್ನೆಗಳು ಕಾಡಿದಂತೆಲ್ಲಾ ನಾವು ಅತೃಪ್ತರಾಗುತ್ತ ಹೋಗುತ್ತಿರುತ್ತೇವೆ. ಅಂತವುಗಳನ್ನು ಎದುರಿಸಿ ಬಾಳಿದವರೇ ಸಂತರುಗಳು ಹಾಗೂ ಅಧ್ಯಾತ್ಮ ಜೀವಿಗಳು. ಈ ಸಂತ ಶ್ರೇಷ್ಠರುಗಳ ಜೀವನವನ್ನು ಅನುಸರಿಸಿ ನೋಡಿದಾಗ ನಮಗೆ ನಮ್ಮಜೀವನದಲ್ಲೂ ಸಹ ಒಂದು ರೀತಿಯ ಸ್ಪಷ್ಟತೆಯನ್ನು ಕಂಡುಕೊಳ್ಳುತ್ತೇವೆ. ಬುದ್ಧನ ಹಾಗೂ ಯೇಸುಕ್ರಿಸ್ತನ ಚಿಂತನೆಗಳನ್ನು ಮನಗಾಣಿಸಿಕೊಂಡಾಗ ದುಃಖದ ಬಗೆಗಿನ ತಿಳುವಳಿಕೆಗಳು ವೃದ್ಧಿಗೊಳ್ಳುತ್ತವೆ.
          ಬುದ್ಧ ತನ್ನದ್ದೇ ಆದ ಅನುಚಿತ್ತಗಳೊಂದಿಗೆ ದುಃಖವನ್ನು ಪ್ರತ್ಯೇಕೀಕರಣದ ಮೂಲಕ ಹಾಗೂ ತನ್ನ ಮೂಲ ಅಷ್ಟನಿಯೋಗಗಳಿಂದ ಎದುರಿಸಲು ಮುಂದಾದನು. ಯೇಸುಕ್ರಿಸ್ತನ ಬದುಕು ಮತ್ತು ಆಚಾರ ವಿಚಾರಗಳು ಇದಕ್ಕಿಂತ ಇನ್ನು ಮಿಗಿಲಾದವುಗಳು.
          ದುಃಖ ಎಂಬುದು ಜೀವನದ ಜಂಜಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ. ಇದನ್ನು ಹೇಗೆ ಎರಡೂ ಧರ್ಮಗಳು ವಿಧಿವತ್ತಾಗಿ, ಕ್ರಮಬದ್ಧವಾಗಿ, ವಿಂಗಡಿಸಿವೆ ಮತ್ತು ಬುದ್ಧನ ಹಾಗೂ ಕ್ರಿಸ್ತನ ಪರ-ವಿರುದ್ಧ ಚಿಂತನೆಗಳು ಈ ವಿಚಾರ ಮಂಡಣೆಯಲ್ಲಿ ಒಳಗೊಂಡಿವೆ.
"ಮನೋಪುಬ್ಬಂಗಮಾಧಮ್ಮಾ ಮನೋಸೆಟ್ಠಾ ಮನೋಮಯಾ
ಮನಸಾ ಚೇ ಪದುಟ್ಠೀನ ಭಾಸತಿ ವಾ ಕರೋತಿವಾ,
ತತೋ ನಙದುಕ್ಖಙಅನ್ವೇತಿ ಚಕ್ಕಂ ವ ವಹತೋ ಪದಙ" - ಯಮಕವರ್ಗ
          ಈ ಮಾತುಗಳು ಬುದ್ಧನೇ ಹೇಳಿರುವಂತದ್ದು. ಧರ್ಮಗಳಿಗೆ ಮನಸ್ಸು ಮುಂದಾಳು ಅವುಗಳಿಗೆ ಮನಸ್ಸೇ ಒಡೆಯ, ಅವು ಮನೋಮಯ. ಕಲಕಿರುವ (ಬಗ್ಗಡ) ಮನಸಿನಿಂದ ಇರುವ ಮಾನವನಿಗೆ ದುಃಖವು ಆವರಿಸುವುದು. ಆತನಿಗೆ ದುಃಖವು ಬಂಡಿಯನ್ನು ಹೊತ್ತೆಳೆಯುವ ಪ್ರಾಣಿಯ ಹೆಜ್ಜೆಯನ್ನು ಚಕ್ರಗಾಲಿಯು ಹಿಂಬಾಲಿಸುವ ಹಾಗೆ ಹಿಂಬಾಲಿಸುವುದು.
          ಬುದ್ಧ ನಿರ್ವಾಣದ ನಂತರ ನಾಲ್ಕು ಉದಾತ್ತ ಸತ್ಯಗಳನ್ನು ತನ್ನ ಐದು ಮಂದಿ ಹಿಂಬಾಲಕರಿಗೆ ವಾರಾಣಸಿಯಲ್ಲಿ ಭೋಧಿಸಿದ್ದಾನೆ. ಈ ಉದಾತ್ತ ಬೋಧನೆ ಬೌದ್ದಧರ್ಮದ ಮೂಲ ಸ್ಥಾವರಗಳಾಗಿವೆ. ಈ ನಾಲ್ಕು ಸತ್ಯಾನ್ವೇಷಣೆಗಳಿಗೆ "ಧರ್ಮಚಕ್ರ ಪ್ರವರ್ತನ ಸೂತ್ರ" ಎಂದು ಕರೆಯತ್ತಾರೆ. ಇವುಗಳನ್ನು ಬುದ್ಧನ ಪ್ರವಚನಗಳು ಎಂದು ಪರಿಗಣಿಸಲಾಗಿವೆ. ಬುದ್ಧನು ತನ್ನ ಎಲ್ಲಾ ತತ್ವಗಳನ್ನು ಒಂದೇ ವಾಕ್ಯದಲ್ಲಿ ಹೀಗೆಂದು ಹೇಳ್ದಾನೆ "ನಾನು ಭೋಧಿಸುವುದು ಒಂದೇ, ದುಃಖ ಹಾಗೂ ದುಃಖದಿಂದ ಮುಕ್ತಿ" ಈ ವಾಕ್ಯದಲ್ಲಿ ಬುದ್ಧನ ನಾಲ್ಕು ಸತ್ಯಾನ್ವೇಷಣೆಗಳ ವಿಸ್ತರಣೆ ಹಾಗೂ ಸಾರಾಂಶವು ಅಡಗಿದೆ. ಈ ವಾಕ್ಯಗಳು ಅಗಾಧ ಆಧ್ಯಾತ್ಮಿಕ ಕಾಯ ಹಾಗೂ ತತ್ವ ಸಿದ್ಧಾಂತಗಳನ್ನು ಹೊಂದಿದೆ. ವಿವಿಧ ರೀತಿಯ ವ್ಯಾಖ್ಯಾನಗಳು ಇದರ ಮೇರೆಗೆ ಹುಟ್ಟಿಕೊಂಡಿವೆ.
          "ನನ್ನಿಂದ ನಿಮಗೆ ಸಮಾಧಾನ ದೊರಕುವುದು. . . ಲೋಕದಲ್ಲಿ ನಿಮಗೆ ಸಂಕಟ ಇರುವುದು ನಿಜ, ಆದರೆ ಧೈರ್ಯದಿಂದಿರಿ, ನಾನು ಲೋಕವನ್ನು ಜಯಿಸಿದ್ದೇನೆ" (ಯೊವಾನ್ನ ೧೬:೩೩). ಈ ಮಾತು ಬೈಬಲಿನದ್ದು ಯೇಸುಕ್ರಿಸ್ತನ ದುಃಖದ ಕುರಿತ ಮಾತುಗಳು.
          ದುಃಖ ಮಾನವನ ಆಗುಹೋಗುಗಳ ಮೇಲೆ ಪರಿಣಾಮ ಬೀರುತ್ತದೆ. ದುಃಖ ಅಸ್ವಸ್ಥತೆಯನ್ನು ಮಾತ್ರ ತರುವುದಲ್ಲದೆ ಅನುಮಾನ ಮತ್ತು ಸಂಶಯಗಳನ್ನು ಜೀವನದಲ್ಲಿ ಹುಟ್ಟುಹಾಕುತ್ತದೆ. ದುಃಖ ನೋವನ್ನು ಮಾತ್ರ ನೀಡುವುದಲ್ಲದೆ ಸಮಸ್ಯೆಗಳನ್ನು ಸಹ ಹುಟ್ಟು ಹಾಕುತ್ತೆ. ಯೇಸುಕ್ರಿಸ್ತನ ಪ್ರಕಾರ ನೋವು, ದುಃಖ ಇವು ಅಸ್ವಾಭಾವಿಕವಾದವುಗಳು. ನೋವು ಕದ್ದು ಬರುವಂತದ್ದು, ಪಾಪ ಅನಧಿಕೃತವಾಗಿ ನುಸುಳುವಂತದ್ದು, ಇಂತಹವು ದೇವರ ಮಾನವನ ಸಂಬಂಧವನ್ನು ಒಡೆದು ಹಾಕಿವೆ.
          ಈ ದುಃಖವು ಮಾನವನು ದೇವರ ಬಗೆಗೆ ಕೆಟ್ಟ ಅಭಿಪ್ರಾಯವನ್ನು ಕಲ್ಪಿಸಿಕೊಳ್ಳುವಂತೆ ಮಾಡಿದೆ. ಅದ್ದರಿಂದಲೇ ಯೇಸು ದುಃಖವು ದೇವರಿಂದ ಉಗಮವಾಗಿಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತಾರೆ. ಸೃಷ್ಟಿಕರ್ತ ಎಂದಿಗೂ ತನ್ನ ಸೃಷ್ಟಿಯು ದುಃಖದಲ್ಲಿ ಬಳಲಲು ಇಚ್ಚಿಸುವುದಿಲ್ಲ. ಈ ದುಃಖಕ್ಕೆ ಪ್ರತ್ಯತ್ತರವಾಗಿ ಯೇಸುವು ಪ್ರೀತಿ ಮತ್ತು ಕರುಣೆಯ ಬದುಕನ್ನು ಬದುಕಲು ಕರೆ ನೀಡುತ್ತಾರೆ.
* * * *
          ಯೇಸುಕ್ರಿಸ್ತ ಹಾಗೂ ಬುದ್ಧ ಇಬ್ಬರನ್ನು ಹೋಲಿಸಬಹುದಾದ ಅಂಶಗಳು ಹಾಗೂ ಹೋಲಿಕೆಗಳು ಬಹಳಷ್ಟು ಇವೆ. ಈ ವ್ಯಕ್ತಿಗಳ ಬಾಲ್ಯದ ನಿರೂಪಣೆಗಳು, ಬದುಕು, ಬೋಧನೆಗಳು, ಸಾವು ಎಲ್ಲವೂ ಮಾನವನ ನಿಲುವಿಗೆ ಅಸ್ತಿತ್ವಗಳಾಗಿವೆ. ಇವರುಗಳ ಜೀವನ ಬೋಧನೆಗಳು ಪ್ರತ್ಯೇಕವಾಗಿ ಆಯಾ ಸಮುದಾಯಗಳಿಗೆ ಪಂಗಡಗಳಿಗೆ ಮೀಸಲಾಗಿವೆ. ಇವರ ಮಾತು ನಡೆ ನುಡಿ ಆಯಾ ಸಮುದಾಯಗಳಿಗೆ ಅಸ್ತಿತ್ವವಾಗಿದೆ. ಈ ಇಬ್ಬರು ದೈವೀ ಮಾನವರು ಇಡೀ ಮಾನವಕುಲಕ್ಕೆ ಮಾದರಿಗಳಾಗಿ ಬದುಕುವ ಸನ್ಮಾರ್ಗವಾಗಿದ್ದಾರೆ. ಇವರ ಹಿಂಬಾಲಕರು ಸ್ನೇಹಿತರು ಇದನ್ನೇ ಧರ್ಮವೆಂದು ಅನುಷ್ಠಾನಗೊಳಿಸಿದ್ದಾರೆ. ಯೇಸುಕ್ರಿಸ್ತ ಸಾವನ್ನು ಜಯಿಸಿದ ಪ್ರಪ್ರಥಮ ವ್ಯಕ್ತಿ. ಬುದ್ಧನು ಬದುಕಿನ ಮಾರ್ಗ ಕಲ್ಪಿಸುವ ಸಂಶೋದಕನಾಗಿ ಧರ್ಮ ಹಾಗೂ ಬಿಡುಗಡೆಯ ಬದುಕನ್ನು ಬದುಕಲು ಪ್ರಚಾರ ಮಾಡಿದನು. ಬುದ್ಧನು ಎಲ್ಲರೂ ಈ ಮಾರ್ಗ ಹಿಡಿಯಲು ಬುದ್ಧರಾಗಬೇಕು ಎಂದು ಆಹ್ವಾನ ನೀಡುತ್ತಾನೆ. ಆದರೆ ಯೇಸು ನಾನೇ ಮಾರ್ಗ ನನ್ನಿಂದಲೆ ಮೋಕ್ಷವೆನ್ನುತ್ತಾನೆ. ವ್ಯತ್ಯಾಸವೇನೆಂದರೆ ಬುದ್ಧ ಸಾಮಾನ್ಯ ವ್ಯಕ್ತಿಯಾಗಿ ದಾರಿ ತೋರಿಸಲು ಹೊರಟ, ಕ್ರಿಸ್ತ ದೇವಾರಾಗಿದ್ದು ತನ್ನ ಜನತೆಗೆ ದಾರಿ ತೋರಿಸಲು ಹೊರಟ. ಬುದ್ಧ ತನ್ನಂತೆಯೇ ಜ್ಞಾನೋದಯವನ್ನು ಪಡೆದು ಬುದ್ಧರಾಗಿರಿ ಎಂದು ಕರೆ ನೀಡುತ್ತಾನೆ, ಯೇಸು ನನ್ನಂತೆಯೆ ಶಿಲುಬೆ ಹೊತ್ತು ನಡೆಯಿರಿ ಎಂದು ಕರೆ ನೀಡುತ್ತಾನೆ. ಯೇಸುವಿನ ಪಾತ್ರ ಇನ್ನೂ ಮಿಗಿಲಾದದ್ದು ತನ್ನ ಆಧ್ಯಾತ್ಮಿಕ ಜೀವನದಲ್ಲಿ ಭಾಗಿಯಾಗಲು ಅವಕಾಶವಿದೆ. ಬುದ್ಧನ ಜೀವನದಲ್ಲಿ ಭ್ರಮೆಯಿಂದ ಜ್ಞಾನೋದಯಕ್ಕೆ ತಿರುಗುವ ಸನ್ನಿವೇಶವಿದೆ, ಆದರೆ ಕ್ರಿಸ್ತನ ಜೀವನದಲ್ಲಿಇಂತಹ ಸಂಗತಿಗಳು ಕಡಿಮೆ. ಯೇಸುಕ್ರಿಸ್ತನಿಂದ ಪಾಪ ಅಪರಾಧಗಳು ಬಂದಿರಲಿಲ್ಲ, ಅವುಗಳು ಧೋರಣೆಗಳು ಮಾತ್ರ ಬದಲಿಗೆ ಇನ್ನೊಬ್ಬರ ಪಾಪ ವಿಮೋಚನೆಗೆ ತನ್ನ ಪ್ರಾಣ ಹರಣವಾಗುವುದು.
          ಪಾಪ ಮತ್ತುದುಃಖ: ಎರಡೂ ಧರ್ಮದಲ್ಲಿ ಮಾನವನ ಅಸ್ತಿತ್ವದ ಬಗ್ಗೆ ಅರ್ಥ ಮಾಡಿಕೊಂಡರೆ ಹೆಚ್ಚು ವ್ಯತ್ಯಾಸಗಳಿವೆ. ಬೌದ್ಧಧರ್ಮದ ಮೂಲ ವಾದಾತ್ಮಕ ವಿಷಯವೆಂದರೆ ದುಃಖ, ಈ ದುಃಖವು ಉಂಟಾಗುವುದು ಅಜ್ಞಾನ ಹಾಗೂ ಭ್ರಮೆಗಳಿಂದ ಮಾತ್ರವೆಂದು ಬುದ್ಧ ಹೇಳುತ್ತಾನೆ. ಕ್ರೈಸ್ತ ಧರ್ಮದಲ್ಲಿ ಮೂಲ ವಾದಾತ್ಮಕ ವಿಷಯ ವೆಂದರೆ ಮಾನವನ ಅನಂತತೆ ಹಾಗೂ ದುಃಖ ಪಾಪದ ಮೂಲವೆಂದು. ಈ ದುಃಖದ ಪ್ರಸಂಗ ನಮಗೆ ಮಾನವನ ಅಸ್ತಿತ್ವದ ಬಗ್ಗೆ ಪ್ರಶ್ನೆ ಹುಟ್ಟಿಸುತ್ತದೆ.
          ಪ್ರತ್ಯೇಕತೆ ಮತ್ತು ದುಃಖ: ಬುದ್ಧ ಪ್ರಾರಂಭದಲ್ಲಿ ತನ್ನದೆಂಬುದನ್ನು ತ್ಯಜಿಸಲು ಪ್ರಯತ್ನಿಸಿದ. ಆತನ ಜ್ಞಾನೋದಯಕ್ಕೆ ಇದೇ ಮೊದಲ ಹೆಜ್ಜೆಯಾಗಿರಬೇಕು. ಈ ಲೌಕಿಕತನದ ಅನಿವಾರ್ಯತೆಗಳನ್ನು ಎದುರಿಸಲು ಬುದ್ಧ ಆರಿಸಿಕೊಂಡಂತಹ ವಿಧಿ ಪ್ರತ್ಯೇಕೀಕರಣ. ಯೇಸುಕ್ರಿಸ್ತನು ಸಹ ತನ್ನ ಶಿಷ್ಯರಿಗೆ ಮನೆಯಿಂದ, ವಾಸ್ತವತೆಯಿಂದ, ಕೆಲಸಕಾರ್ಯಗಳಿಂದ, ಬಂಧು ಬಳಗದಿಂದ ಪ್ರತ್ಯೇಕೀಕರಣ ಬೇಡಿಕೆಗಳನ್ನು ಮುಂದಿಡುತ್ತಾರೆ.

          ಅವಶ್ಯಕತೆ ಮತ್ತುದುಃಖ: ಯೇಸುವಿನ ಶಿಲುಬೆ ದೇವರ ಪ್ರೀತಿಯ ಸಂಕೇತವಾಗಿದೆ. ಆ ಪ್ರೀತಿ ದಮನಿತರ ಶೋಷಿತರ ಕೂಗಿಗೆ ಆಧಾರವಾಗಿತ್ತು. ಆ ಪ್ರೀತಿ ಕ್ಷಮೆಯ ಚಿಹ್ನೆಯಾಗಿತ್ತು. ಶಿಲುಬೆ ಮರಣದ ಸಂಕೇತವಲ್ಲ ಶಿಲುಬೆ ದುಃಖ ವಿರುದ್ದ ಜಯದ ಚಿನ್ಹೆಯಾಗಿದೆ. ಕ್ರೈಸ್ತಧರ್ಮದ ಪ್ರಕಾರ ಆದಾಮನ ಆಸೆ ಬಯಕೆಗಳಿಂದ ದುಃಖವು ಮೂಡಿತು. ಎರಡೂ ಧರ್ಮಗಳು ಈ ಆಸೆ ಬಯಕೆಗಳನ್ನು ದುಃಖದ ಪ್ರಾರಂಬಿಕ ಎಂದು ತಿಳಿಸುತ್ತವೆ. ದುಃಖಕ್ಕೆ ಕಾರಣ ಮಾನವನೇ ಬೇರಾರೂ ಅಲ್ಲ.

          ದುಃಖದಿಂದ ಹೊರಬರುವುದು (ಬಿಡುಗಡೆ): ನಾವೆಲ್ಲರೂ ಈಸ್ಟರ್ ಹಬ್ಬವನ್ನು ಆಚರಿಸಿದ್ದೇವೆ, ಈ ಹಬ್ಬ ಕಾಲದಿಂದ ಕಾಲಕ್ಕೆ ರೂಢಿಯಲ್ಲಿ ಬಂದಂತಹ ಹಬ್ಬವಾಗಿದೆ. ಈ ಹಬ್ಬದ ವೈಶಿಷ್ಟ್ಯತೆ ಏನೆಂದರೆ ದುಃಖದಿಂದ ಸಂತೋಷದೆಡೆಗೆ, ಕಾರ್ಗತ್ತಲಿನಿಂದ ಬೆಳಕಿನೆಡೆಗೆ, ನೋವಿನಿಂದ ಹೊಸಬಾಳ್ವೆಗೆ ಸಾಗುವಂತಹ ಹಬ್ಬವಾಗಿದೆ. ಕ್ರಿಸ್ತನ ಪುನರುತ್ಥಾನವು ಧರ್ಮಸಭೆಗೆ ಹಾಗೂ ಪ್ರತಿ ಕ್ರೈಸ್ತನಿಗೆ ನವ ಬದುಕನ್ನು ಕಲ್ಪಿಸಿ ಕೊಡುತ್ತದೆ. "ಆತನೊಂದಿಗೆ ನಮ್ಮ ದೇಹವು ಸಹ ಪಾವನಗೊಳ್ಳುವುದು" (ಫಿಲಿ ೩:೨೧). ಹೊಸ ಒಡಂಬಡಿಕೆಯ ಪ್ರಕಾರ ದುಃಖ ಅಂತ್ಯವಲ್ಲ, ಧರ್ಮಸಭೆ ಇದರ ಬಗ್ಗೆ ಇನ್ನೂ ವಿಭಿನ್ನ ರೀತಿಯಲ್ಲಿ ದುಃಖಕ್ಕಿಂತ ಮಿಗಿಲು ಮೃತ್ಯಂಜಯ ಬದುಕು ಎಂದು ವಿಶ್ಲೇಷಿಸುತ್ತದೆ. ನಾವು ಕ್ರಿಸ್ತನ ಅನುಯಾಯಿಗಳಾಗಿರುವುದರಿಂದ ಆತನ ನೋವು ನಲಿವಿನಲ್ಲಿ ಪಾಲುಗೊಳ್ಳುವ ಕರೆಯಿದೆ.
          ಬುದ್ಧನ ಹೇಳಿಕೆಯಂತೆ ಅಪನಂಬಿಕೆ ಆಗುವುದು ಅಹಂನಿಂದ, ಈ ಅಹಂನಿಂದ ಕೋಪ, ಆವೇಶ, ಅವಘಡಗಳು ಹುಟ್ಟಿಕೊಳ್ಳುತ್ತವೆ. ಬುದ್ಧನಿಗೆ ದುಃಖವು ಅನಿವಾರ್ಯವಾಗಿರುವಂತದ್ದು. ಅದನ್ನು ಎದುರಿಸಲು ನಾವು ನಮ್ಮನ್ನು ಸಂಪೂರ್ಣವಾಗಿ ಅರಿಯಬೇಕು, ಅದರಿಂದ ಜ್ಞಾನೋದಯವನ್ನು ಪಡೆಯಬೇಕು. ತನ್ನನ್ನು ಅರಿಯುವುದು ಅಹಮಿಕೆಯ ಮಾತಲ್ಲ ಬದಲಿಗೆ ಲೋಕಸಂದೇಶ. ಆಸೆಗಳ ಮೂಲ ಅಹಂ ಆದ್ದರಿಂದ ಅವುಗಳನ್ನು ವರ್ಜಿಸಿ ನಾನು ಯಾರು ಎಂಬುದನ್ನು ಅರಿಯಬೇಕು. ಇದು ಆಸೆಗಳನ್ನು ವರ್ಜಿಸುವುದರ ಬಗ್ಗೆ ಎರಡೂ ಧರ್ಮಗಳು ಒಪ್ಪಿಕೊಳ್ಳುವಂತಹ ಮಾತಾಗಿದೆ.
* * * *
          ಈ ದುಃಖದ ಪರಿಕಲ್ಪನೆಗಳನ್ನು ಆಲೋಚಿಸಿ ನೋಡಿದಾಗ ಬೌದ್ಧ ಧರ್ಮದಲ್ಲಿ ದುಃಖ ಎಂಬುದು ವಾಸ್ತವಿಕ, ಈ ವಾಸ್ತವವನ್ನು ನಾವು ಒಪ್ಪಿಕೊಂಡು ಅದನ್ನು ಎದುರಿಸಿ ಬದುಕಬೇಕು. ಇದನ್ನು ಎದುರಿಸಲು ಎಂಟು ಪಟ್ಟು ನಿಯೋಗಗಳನ್ನು ಪಾಲಿಸಬೇಕು. ಕ್ರೈಸ್ತ ಧರ್ಮದಲ್ಲಿ ದೇವರ ಅನುಗ್ರಹದಿಂದ ಹಾಗೂ ಯೇಸುವಿನ ಆಜ್ಞೆಗಳನ್ನು ಸ್ವೀಕರಿಸಿ ಅದನ್ನು ಬದುಕುವಲ್ಲಿ ದುಃಖವನ್ನು ಎದುರಿಸಬಹುದು.
          ಈ ಧರ್ಮಗಳಲ್ಲಿ ಸಾಮಾನ್ಯಗುರಿ ಎಂದರೆ ಮಾನವನಿಗೆ ದುಃಖದ ವಾಸ್ತವತೆಯನ್ನು ತಿಳಿಸುವುದು, ಹಾಗೂ ಅದರಿಂದ ಹೇಗೆ ಹೊರ ಬರುವುದು ಎಂಬುದು. ಬೌದ್ಧ ಧರ್ಮದಲ್ಲಿ ಇದನ್ನು ನಿರ್ವಾಣ ಹಾಗೂ ಕ್ರೈಸ್ತ ಧರ್ಮದಲ್ಲಿ ಇದನ್ನು ದೇವರ ರಾಜ್ಯಭಾರ (ಮೋಕ್ಷ) ಎಂದು ಕರೆಯತ್ತಾರೆ. ಕ್ರೈಸ್ತಧರ್ಮ ವಿಮೋಚನೆಯೆಡೆಗೆ ಗಮನ ಹರಿಸಿದರೆ ಬೌದ್ಧಧರ್ಮ ವಾಸ್ತವಿಕ ಮನೋವೃತ್ತಿಯೆಡೆಗೆ ಗಮನ ಹರಿಸುತ್ತದೆ. ಬೌದ್ಧದರ್ಮವು ವಸ್ತುನಿಷ್ಠವಾಗಿ ಎಲ್ಲವನ್ನು ಪರಿಗಣಿಸುತ್ತದೆ ಈ ವಸ್ತುನಿಷ್ಠತೆಗೆ 'ಯಾತಭೂತಮ್' ಎನ್ನುತ್ತಾರೆ. ಇದು ಯಾವುದೇ ತಪ್ಪಾದ ಮೋಸದ ನುಡಿಯಲ್ಲ ಹಾಗೂ ಯಾವ ಬೆದರಿಕೆಯ ಹಿಂಸೆಯ ಚಿತ್ರಣಗಳನ್ನು ಮುಂದಿಡುತ್ತಿಲ್ಲ. ಪ್ರತ್ಯೇಕ ರೀತಿಯಲ್ಲಿ ನಿನ್ನ ಮತ್ತು ನಿನ್ನ ಸುತ್ತಲಿನ ಜಗತ್ತಿನ ಬಗೆಗೆ ಎಚ್ಚರ ವಹಿಸುತ್ತದೆ. ಈ ಮಾರ್ಗದರ್ಶನದಿಂದ ಸ್ವಾತಂತ್ರ್ಯ, ಸಂತಸ, ಯುದ್ಧವಿರಾಮ ಸ್ಥಿತಿ, ಹಾಗೂ ಶಾಂತಿಯನ್ನು ಪಡೆಯಬಹುದು. ಕ್ರೈಸ್ತಧರ್ಮದಲ್ಲಿ ಪಾಪ ವಿಮೋಚನೆ ಪರಿಕಲ್ಪನೆಯಾದರೆ, ಬೌದ್ಧ ಧರ್ಮದಲ್ಲಿ ದುಃಖವನ್ನು ಎದುರಿಸುವುದು ಮತ್ತು ನಿರ್ವಾಣವನ್ನು ಪಡೆಯುವುದು. ಕ್ರೈಸ್ತ ಧರ್ಮದಲ್ಲಿ ಕಟ್ಟಕಡೆಯ ಗುರಿ ಎಂದರೆ ಒರ್ವನು ದೇವರಲ್ಲಿ ಲೀನನಾಗುವುದು. ಬೌದ್ಧ ಧರ್ಮದಲ್ಲಿ ಬುದ್ಧನ ತತ್ವಗಳಲ್ಲಿ ದೇವರೆಂಬ ಪರಿಕಲ್ಪನೆಯೇ ಇಲ್ಲ. ಇದೇ ಬೌದ್ಧ ಹಾಗೂ ಕ್ರೈಸ್ತಧರ್ಮದ ಭಿನ್ನವನ್ನು ಸೂಚಿಸುತ್ತದೆ. ಆದರೆ ಎಲ್ಲೋ ಕೆಲವು ಸಾಮಾನ್ಯ ಹೊಂದಾಣಿಕೆಗಳನ್ನು ನಾವು ಎರಡೂ ಧರ್ಮದಲ್ಲೂ ಕಾಣಬಹುದು, ಹೇಗಿದ್ದರೂ ಎರಡೂ ಧರ್ಮವು ಮಾನವಧರ್ಮ ಮತ್ತು ಮಾನವೀಯತೆಯನ್ನು ಬೆಳಗಲು ನಿಂತಿರುವಂತದ್ದು ಮೂಲ ಹೊಂದಾಣಿಕೆಯಾಗಿದೆ.
          ಬೌದ್ಧ ಹಾಗೂ ಕ್ರೈಸ್ತ ಧರ್ಮಗಳು ಸೇರಿದರೆ ಮಾನವಧರ್ಮ ಉದ್ಧಾರವಾಗುವುದು - ಥಾಮಸ್ ಮ್ಯಾಥ್ಯು.
          ವಿಶ್ವ ಮಾನವ ಬುದ್ಧನ ಹಾಗೂ ಏಕತೆಯ ಪ್ರತಿಪಾದಕ ಕ್ರಿಸ್ತನ ಬೋಧನೆಗಳು ಇಡೀ ಮಾನವ ಕುಲವನ್ನೆ ಐಕ್ಯವಾಗಿಸುತ್ತದೆ. ಮಾನವನ ಮಧ್ಯೆ ಪ್ರೀತಿಯಕರೆ, ಪರರ ದುಃಖದಲ್ಲಿ ಭಾಗಿಯಾಗುವುದು ಇಂತಹ ಅಂಶಗಳೂ ಎರಡೂ ಧರ್ಮವನ್ನು ಒಗ್ಗೂಡಿಸುತ್ತದೆ. ಎರಡೂ ಧರ್ಮಗಳು ತಮ್ಮಿಂದ ತಮಗೆ ಕಲೆತುಕೊಳ್ಳಲು ಬಹಳಷ್ಟು ಇವೆ. ಇದು ವಿಮರ್ಶೆಯ ಮಾತಲ್ಲ ಬದಲಿಗೆ ಏಕಮುಖವಾದ ಧರ್ಮಗಳ ಬಗೆಯ ಹೋಲಿಕೆ. ಒಟ್ಟಾರೆ ಎರಡೂ ಧರ್ಮಗಳ ಮೂಲ ಗುರಿಯೇನೆಂದರೇ ದುಃಖವನ್ನು ಹೋಗಲಾಡಿಸಿ ವಿಮೋಚನೆ ಪಡೆಯುವುದು.

ನವೀನ್ ಮಿತ್ರ

ದನಿ ರೂಪಕ


“ಅವುಗಳನ್ನು ಮಾಡಿ”
ಬರಹಗಾರ, ವಾಗ್ಮಿ ಮತ್ತು ಮ್ಯಾನೆಜ್‌ಮೆಂಟ್ ಗುರು ಟಾಮ್ ಪೀಟರ‍್ಸ್ ತನ್ನ ಹೊಸ ಪುಸ್ತಕದಲ್ಲಿ ಈ ಕಥೆಯನ್ನು ಹೇಳುತ್ತಾನೆ:

ಒಬ್ಬ ವ್ಯಕ್ತಿ ಜೆ. ಪಿ ಮಾರ್ಗನ್ ಅವರ ಬಳಿ ಬಂದು ತನ್ನ ಕೈಯಲ್ಲಿದ್ದ ಕಾಗದದ ಕವರನ್ನು ತೋರಿಸಿ ಹೇಳಿದನಂತೆ “ಸರ್ ನನ್ನ ಕೈಯಲ್ಲಿರುವ ಕವರಿನೊಳಗೆ ಯಶಸ್ಸಿನ ಖಾತ್ರಿ ಸೂತ್ರವನ್ನು ಹೊಂದಿದ್ದೇನೆ, ಅದು ನಿಮಗೆ ಬೇಕೆನಿಸಿದರೆ ೨೫ ಸಾವಿರ ಡಾಲರ್ ಕೊಟ್ಟರೆ ಸಂತೋಷದಿಂದ ಅದನ್ನು ನಿಮಗೆ ಒಪ್ಪಿಸಿ ಬಿಡುತ್ತೇನೆ”

“ಸರ್” ಜೆ ಪಿ ಮಾರ್ಗನ್ ಉತ್ತರಿಸುತ್ತಾ “ನಿಮ್ಮ ಕೈಯಲ್ಲಿರುವ ಕಾಗದದ ಕವರಿನಲ್ಲಿ ಏನಿದೆ ಅಂತ ನನಗೆ ಗೊತ್ತಿಲ್ಲ . . . ಅದರೊಳಗೆ ಏನಿದೆ ಎಂದು ತೋರಿಸಿದರೆ ಮತ್ತು ಅದನ್ನು ನಾನು ಇಷ್ಟಪಟ್ಟರೆ ಕಂಡಿತ ನೀವೂ ಕೇಳುತ್ತಿರುವ ಹಣದ ಮೊತ್ತವನ್ನು ಪಾವತಿಸುತ್ತೇನೆ”

ಆ ವ್ಯಕ್ತಿಯು ಜೆ ಪಿ ಮಾರ್ಗನ್ ಅವರ ಮಾತನ್ನು ಒಪ್ಪಿ ಕಾಗದದ ಕವರನ್ನು ಜೆ ಪಿ ಮಾರ್ಗನ್ ಅವರಿಗೆ ಹಸ್ತಾಂತರಿಸಿದನು. ಜೆ ಪಿ ಮಾರ್ಗನ್ ಅವರು ಕಾಗದದ ಕವರಲ್ಲಿದ್ದ ಪತ್ರವನ್ನು ಹೊರ ತೆಗೆದು, ಓದಿ ಆ ವ್ಯಕ್ತಿ ಹಿಂದುರುಗಿಸಿ ೨೫ ಸಾವಿರ ಡಾಲರನ್ನು ಅವನಿಗೆ ಕೊಟ್ಟನಂತೆ.

ಆ ಹಾಳೆಯ ಮೇಲೆ ಈ ರೀತಿಯಾಗಿ ಬರೆದಿತ್ತಂತೆ:

“ಪ್ರತಿದಿನ ಬೆಳಿಗ್ಗೆ ಆ ದಿನ ಮಾಡಬೇಕಾದ ಕೆಲಸ ಕಾರ್ಯಗಳ ಪಟ್ಟಿ ಮಾಡಿ . .”

“ಅವುಗಳನ್ನು ಮಾಡಿ”

---------------------------------------------------

ಲೇಖಕ ಪೆಗ್ಗಿ ವಾಲ್‍ಸ್ಟೀಟ್ ಜರ್ನಲ್‍ನಲ್ಲಿ ಈ ರೀತಿ ಬರೆಯುತ್ತಾರೆ:

ಈ ಜಗತ್ತು ಒಂದು ರೀತಿ ದೊಡ್ಡ ಸುಳ್ಳುಗಾರನಂತೆ. ಅದು ಹಣ ಸಂಪತ್ತನ್ನು ಆರಾಧಿಸಿ ಅವುಗಳಿಗೆ ಒಲಿಯುವಂತೆ ತೋರಿಸುತ್ತದೆ. ಆದರೆ ದಿನದ ಕೊನೆಯಲ್ಲಿ ಅದು ಒಲಿಯುವುದು ಮತ್ಯಾವುದಕ್ಕೊ.

ಇನ್ನೊಂದು ಕಡೆ ಖ್ಯಾತಿಯು, celebrity ಗಳನ್ನು ಗೌರವಿಸಿ ಮನ್ನಣೆ ಕೊಡುವಂತೆ ಕಂಡರೂ ಅದು ಗೌರವಿಸುವುದು ಮತ್ತೆಯೇನೋ.

ಹೌದು. . . ಜಗತ್ತು ಮೆಚ್ಚಿ ಆರಾಧಿಸಿ ಒಲಿಸಿಕೊಳ್ಳುವುದು ಮತ್ತು ಕಳೆದುಕೊಳ್ಳದಂತೆ ಬಯಸುವುದು ಒಳ್ಳೆತನವನ್ನು.

ಅದು ಒಳ್ಳೆತನವನ್ನು ಮೆಚ್ಚುತ್ತದೆ. ಕೊನೆಗೆ ಉದಾರತೆ, ಪ್ರಾಮಾಣಿಕತೆ, ಧೈರ್ಯ, ಅನುಕಂಪ, ಮತ್ತು ಲೋಕದ ಕಲ್ಯಾಣಕ್ಕೆ, ಉದ್ದಾರಕ್ಕೆ ಉಪಯೋಗಿಸಿಕೊಂಡ ಪ್ರತಿಭೆಗಳನ್ನು ಗೌರವಿಸುತ್ತದೆ.

ನಾವು ಜೋ ಬಗ್ಗೆ ಮಾತನಾಡುವಾಗ ಜೋ ಒಬ್ಬ ಶ್ರೀಮಂತನಾಗಿದ್ದ ಎಂದು ಹೊಗಳುವುದಿಲ್ಲ. . . ಸಾಧ್ಯವಾದಾದರೆ ಜೋ ಜನರನ್ನು ಚೆನ್ನಾಗಿ ನೋಡಿಕೊಂಡ ಅಂತ ಹೇಳುತ್ತೇವೆ.

ಇದು ಒಂದು ಎಚ್ಚರಿಕೆ. . .

ನಮ್ಮ ಶ್ರೀಮಂತಿಕೆಯಿಂದಾಗಲೀ, ಪದವಿ ಪುರಸ್ಕಾರಗಳಿಂದಾಗಲೀ ಅಥವಾ ಬೃಹತ್ ಮನೆಯ ಕಟ್ಟಡದಿಂದಾಗಲೀ ಈ ಜಗತ್ತಿನ ಮೇಲೆ ಪರಿಣಾಮ ಬೀರಲಾಗುವುದಿಲ್ಲ. . . ನಮ್ಮ ಸುತ್ತಮುತ್ತಲಿರುವ ಜನರ ಮೇಲೆ ನಾವು ಬೀರುವ ಧನಾತ್ಮಕವಾದ ಪ್ರಭಾವದಿಂದ ನಾವು ಈ ಜಗತ್ತಿನ ಮೇಲೆ ಪರಿಣಾಮ ಬೀರಬಹುದು…
-------------------------------------

ನಿನ್ನ ಅನುಕಂಪವನ್ನು
ದೌರ್ಬಲ್ಯವೆಂದು ಮೂದಲಿಸಬಹುದು
ಆದರೂ ನೀನು ಕರಣೆಯ ಮಡಿಲಾಗು
ನೀನು ಚಾಚುವ ಸಹಾಯ ಹಸ್ತವು
ಬೇಕಿಲ್ಲದಿರಬಹುದು
ಇತರರ ಗಮನಕ್ಕೆಬರದಿರಬಹುದು
ಆದರೂ ನೀನು ಸಹಾಯಮಾಡು
ನೀನು ಪ್ರಾಮಾಣಿಕನಾಗಿರುವುದರಿಂದ
ಜನರು ನಿನಗೆ ಮೋಸ ಮಾಡುವರು
ಅದರೂ ನೀನು ಪ್ರಾಮಾಣಿಕತೆಯಿಂದ ಬಾಳು
ನೀನು ಈ ದಿನ ಮಾಡಿದ ಸಹಾಯ
ನಾಳೆ ಮರೆತುಹೋಗಬಹುದು
ಆದರೂ ಯಾವಗಲೂ ಒಳ್ಳೆಯದನ್ನು ಮಾಡು
ಯಾಕೆಂದರೆ ಬದುಕಿನ ಲೆಕ್ಕಾಚಾರ ನಡೆಯುವುದು ನಿನ್ನ ಮತ್ತು ಇತರರ ನಡುವೆಯಲ್ಲ..ನಿನ್ನ ಮತ್ತು ದೇವರ ಮಧ್ಯೆ

- ಅನು

ಪ್ರೀತಿಯ ಗುಣಾಕಾರ



ಕೂಡು ಕಳೆಯುವ ಬದುಕಿನಲ್ಲಿ
ನೀನು ಕಲಿಸಿದ್ದು
ಪ್ರೀತಿಯ ಗುಣಾಕಾರ ಮಾತ್ರ
----
ನೋವಿನಲ್ಲಿ ಒಲಿಯುವಷ್ಟು
ನಾವಿಬ್ಬರು
ಸಂತೋಷದಲ್ಲಿ ಒಲಿಯುವುದಿಲ್ಲವೇಕೆ?
----

ಬದುಕಿನ ಪುಸ್ತಕ ಓದಲು
ಕುಳಿತಿರುವೆ
ತೆರೆಯಿಸು ನನ್ನ ಮನಸ್ಸ ಕಣ್ಣ
ಅನುಭವ ವಾಕ್ಯಗಳ ಓದುವುದಕಲ್ಲ
ವಾಕ್ಯಗಳ ನಡುವೆ ಇರುವ
ಮೌನವ ಕಣ್ದುಂಬಿಕೊಳ್ಳಲು. .
-------

ದುಃಖವು ಮಡುಗಟ್ಟಿದೆ
ಅದು ಕೇಸರಿಯೋ
ಹಸಿರೋ ಕೆಂಪೋ
ತಿಳಿಯದಾಗಿದೆ.
----------

ನನ್ನ ಮನದ ಮನೆಯಲ್ಲಿ ನಾನು
ಇಲ್ಲದಿದ್ದಾಗ
ಬಾಡಿಗೆಯವರದೇ ರಾಜ್ಯಭಾರ
--------

ಮೌನದ ಸವಿಹೀರಿದ ಮನಸ್ಸು
ಮಾತುಗಳನ್ನು ಧಿಕ್ಕರಿಸುತ್ತಿದೆ
---------

ನಿನ್ನ ನೂರಾರು ಕೃತಿಗಳ ಲೆಕ್ಕ
ಬೇಡ ನನಗೆ
ಅವುಗಳಲ್ಲಿ ಪ್ರೀತಿ ಎಷ್ಟಿತ್ತೆಂಬುವುದೇ
ಪ್ರಶ್ನೆ!!

ಜೀವಸೆಲೆ

ಕೊನೇ ಮಾತು



ನಮ್ಮ ಊರು ಶುರುವಾಗುವಾಗ ಒಂದು ಬದಿಯಲ್ಲಿ ಶಿಲುಬೆಗಲ್ಲು ಇರುವಂತೆ ಇನ್ನೊಂದು ಬದಿಯಲ್ಲಿ ವೆಲಾಂಗಣಿ ಮಾತೆಯ ಪುಟ್ಟ ಗುಡಿಯೊಂದಿದೆ. ಅಸ್ಸಿಸಿಯ ಸಂತ ಫ್ರಾನ್ಸಿಸ್ ಸಭೆಯ ಗುರುಗಳು ತಮ್ಮ ಶಾಲಾ ಕಾಲೇಜುಗಳ ಜೊತೆಯಲ್ಲಿ ಗುಡಿಯ ನಿರ್ವಹಣೆಯನ್ನೂ ಮಾಡುತ್ತಾರೆ. ನಗರದ ಕೆಲಸ ಕಾರ್ಯಗಳಿಗೆ ಹೊರಡುವ ಜನ ಅರೆಘಳಿಗೆ ಕಣ್ಣುಮುಚ್ಚಿ ದೈವವನ್ನು ನೆನೆದು ಕೈಮುಗಿದು ಹೊರಡುತ್ತಾರೆ. ಒಂದಷ್ಟು ವರ್ಷಗಳ ಹಿಂದೆ - ಪ್ರಾಯಶಃ ಕಾಲೇಜಿಗೆ ಸೇರಿದ ಹೊಸತು - ನಾನಲ್ಲಿಗೆ ಹೋಗಿ ಎಂದಿನಂತೆ ಕೈಮುಗಿದು ಅರಿಕೆಯೊಪ್ಪಿಸಿ, ಅರೆಘಳಿಗೆ ಕಣ್ಣುಮುಚ್ಚಿ ತೆರೆದರೆ ಕಣ್ಣಮುಂದೆ ಬಿಳಿಯ ಬಣ್ಣದ ಒಂದಷ್ಟು ಕಾಗದಗಳಿದ್ದುವು. ಕುತೂಹಲದಿಂದ ತೆರೆದು ಓದಿದಾಗ ದಿಗ್ಭ್ರಮೆಯಾಯಿತು.
ವೆಲಾಂಗಣಿ ಮಾತೆಯು ಇಂತಿಂಥ ಊರಲ್ಲಿ, ಇಂತಿಂಥ ಜನರಿಗೆ ರೀತಿಯಲ್ಲಿ ಕಾಣಿಸಿಕೊಂಡು ಪವಾಡವೆಸಗಿದ್ದಾರೆ. ನೀವೂ ಕೂಡ ಇದರ ಪ್ರತಿ ಮಾಡಿ ಹಂಚಿದರೆ ನಿಮಗೆ ಶುಭವಾಗುತ್ತದೆ, ಇಲ್ಲವಾದರೆ ಕೇಡು ಕಾದಿದೆ ಎಂದು ಯಾರ್ಯಾರು ಇದನ್ನು ಓದಿ ನಿರ್ಲಕ್ಷ್ಯ ಮಾಡಿದರೋ ಅವರಿಗಾದ ಗತಿಯನ್ನು ಉದಾಹರಣೆ ಸಮೇತ ವಿವರಿಸಲಾಗಿತ್ತು. ನನಗೆ ಓದಿ ಬೆವರತೊಡಗಿತು. ಕೂಡಲೇ ಕಾಗದವನ್ನು ಮಡಿಚಿ ಅಂಗಿಯ ಜೇಬಿನೊಳಗಿಟ್ಟುಕೊಂಡು ಝೆರಾಕ್ಸ್ ಅಂಗಡಿಗೆ ಓಡಿ, ಹತ್ತಿಪ್ಪತ್ತು ಪ್ರತಿ ಮಾಡಿ ಪುನಃ ಅಲ್ಲಿಯೇ ಇಟ್ಟು ಬಂದಿದ್ದೆ. ನನ್ನ ಕೆಲಸವಾಯಿತಲ್ಲಾ! ಇನ್ನು ಅದೇನು ಒಳ್ಳೆಯದಾಗುವುದೋ ಎಂದು ಕಾಯುತ್ತಾ ಕೂತೆ. ಕೆಟ್ಟದ್ದೇನೂ ಆಗಲಿಲ್ಲ. ಒಳ್ಳೆಯದಾಯಿತೇ ? ಗೊತ್ತಿಲ್ಲ. ಆದರೆ ನಾನಿನ್ನೂ ಬದುಕಿದ್ದೆ! ಬದುಕಿರುವುದಕ್ಕಿಂತ ಒಳ್ಳೆಯದು ಏನಿದೆ? ಅದೇ ಕೊನೆ, ಅಮೇಲೆ ಮತ್ತೆ ಅಂಥ ಸಾಹಸಕ್ಕೆ ಕೈ ಹಾಕಲಿಲ್ಲ. ಅಮೇಲಾಮೇಲೆ ತರಹದ ಕಾಗದಗಳೇನಾದರೂ ಕಂಡರೆ ನೋಡಿಯೂ ನೋಡದಂತಿದ್ದುಬಿಡುತ್ತೇನೆ. ನಾನು ನೋಡದೆ ಉಳಿದಿದ್ದು ಕಾಗದಗಳಿಗೆ ಗೊತ್ತಾಯಿತೇನೊ, ಕಾಗದಗಳ ಬಳಕೆ ಕಡಿಮೆಯಾಗಿ, ಮೊಬೈಲುಗಳು ವಕ್ಕರಿಸಿದಾಗ, ಇದೇ ಸಂದೇಶಗಳು ಬೆಳಗ್ಗೆ ರಾತ್ರಿ ಟ್ರಿನ್ ಎನ್ನತೊಡಗಿದುವು. ಈಗ ಫೇಸ್ ಬುಕ್ಕು, ವಾಟ್ಸಾಪು, ಮೆಸೆಂಜರು, -ಮೇಲುಗಳ ತುಂಬೆಲ್ಲಾ ಇವುಗಳದೇ ಕಾರುಬಾರು. ಇವುಗಳನ್ನೆಲ್ಲಾ ಯಾರು ಹರಿಯಬಿಡುತ್ತಾರೆ? ಅವರಿಗೆ ಇದರಿಂದ ಆಗುವ ಪ್ರಯೋಜನವೇನು? ಮುಗ್ಧಜನ ಇದನ್ನು ನಂಬಿ ಯಾಮಾರಿದರೆ ಹೊಣೆ ಯಾರು?ಇಂಥವೇ ಪ್ರಶ್ನೆಗಳನ್ನು ಕೇಳಿಕೊಂಡು ಕುಳಿತಿದ್ದೆ. ಮೊಬೈಲು ಟ್ರಿನ್ ಎಂದಿತು. ನೋಡಿದರೆ 'ದನಿ' ಪತ್ರಿಕೆಯ ಪಿಡಿಎಫ್ ಪ್ರತಿ! ಅದೇ ಉಪಾಯವನ್ನು ಪತ್ರಿಕೆಗೆ ಆರೋಪಿಸಿದರೆ ಹೇಗೆ ಎಂದು ಯೋಚಿಸಿದಾಗ ಮುಗುಳುನಗು!
ಸಮೀಶಾ

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...