ನೋವಿಗೆ, ಸಂಕಟಕೆ ಗೆರೆ ಬೇಲಿಗಳುಂಟೇ? ಗಡಿಗಳುಂಟೇ? ಆಚೆ ಈಚೆ ಉಂಟೇ? ಧರ್ಮ ಜಾತಿಗಳುಂಟೇ? ಯಾರ ಎದೆಯಲ್ಲಿ ನೋವಿದ್ದರೂ ಅದು ನೋವೇ? ಕನ್ನಡಿಗರ ನೋವಾಗಲೀ, ಮಲಯಾಳಿಗಳ ನೋವಾಗಲೀ ಅದು ನೋವೇ. ಈ ಕಾರಣದಿಂದ ನೋವಿಗೆ ಗಡಿಮೀರಿ ಮಿಡಿಯುವ ಹೃದಯಗಳಿವೆ, ಸಹಾಯಹಸ್ತ ಚಾಚುವ ಉದಾತ್ತ ಕೈಗಳಿವೆ, ಆರೈಕೆ ಮಾಡುವ ಕರುಣ ಒಡಲುಗಳಿವೆ. ಇನ್ನೊಂದು ಕಡೆ ಈ ನೋವು ಸಂಕಟಗಳು ಎಂಬುವುವು ಕೇಳಿಕೊಂಡು ಬರುವುದಿಲ್ಲ, ಬಡವ, ಬಲ್ಲಿದ, ಮೇಲು, ಕೀಳು ಎಂಬ ಭೇದಭಾವಗಳ ಲೆಕ್ಕಾಚಾರಗಳ ಆಧರಿಸಿ ಕೂಡ ಬರುವುದಿಲ್ಲ. ಹೇಳಿ ಕೇಳದೆ ವಕ್ಕರಿಸಿಕೊಳ್ಳುವ ಆಘಾತಗಳು, ಅತಿವೃಷ್ಟಿಗಳು, ಅವು ತರುವ ನೋವು ಸಂಕಟಗಳು ದೂರದಲ್ಲಿದ್ದವರನ್ನು ಹತ್ತಿರವಾಗಿಸಿ, ಹತ್ತಿರದವರನ್ನು ದೂರವಾಗಿಸಿ ಬಿಡುತ್ತವೆ; ಮಿತ್ರರನ್ನು ಶತ್ರುಗಳಾಗಿ, ಶತ್ರುಗಳನ್ನು ಮಿತ್ರರನ್ನಾಗಿಸುತ್ತವೆ; ಕ್ರೂರಿಯನ್ನು ಮನುಷ್ಯನಾಗಿ, ಮನುಷ್ಯನನ್ನು ಕ್ರೂರಿಯಾಗಿಸುತ್ತವೆ. ಕ್ರೂರಿಗಳನ್ನು ಅತೀ ಕ್ರೂರಿಗಳಾಗಿಸುವುದನ್ನು ಸಹ ಕಂಡಿದ್ದೇವೆ. ಆದರೆ ನೋವುಂಡ ಮನುಷ್ಯ ಬದಲಾಗಿರುತ್ತಾನೆ ಎಂಬುವುದು ಮಾತ್ರ ದಿಟ. ಬದಲಾವಣೆ ಧನಾತ್ಮಕದ್ದೋ ಋಣಾತ್ಮಕದ್ದೋ ಕಾಲವೇ ನಿರ್ಧರಿಸುತ್ತದೆ.
ಇಲ್ಲಿ ಇನ್ನೊಂದು ಗಮನಿಸಬೇಕಾದುದ್ದು ಮನುಷ್ಯನ ಸ್ವಾರ್ಥತನ. ಇಂತಹ ಸಂಕಟ ಸಂದರ್ಭಗಳನ್ನು ತನ್ನ ಒಳಿತಿಗೆ, ಲಾಭಕ್ಕೆ ಬಳಸಿಕೊಳ್ಳುವ ಹೀನತನ ಕೆಲವರಲ್ಲಿ ಎದ್ದು ಕಾಣುತ್ತದೆ. ಇದನ್ನೇ ತಾಯಿ ಹೃದಯವಂತಿಕೆ ಇರೋ, ಜೀವಪರ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ಈ ರೀತಿ ಹೇಳುತ್ತಾರೆ: ನಾವು ಎಷ್ಟು ಕೆಟ್ಟ ರಾಜಕಾರಣಿಗಳನ್ನು, ಅಧಿಕಾರ ಶಾಹಿಯನ್ನು ನಿರ್ಮಾಣ ಮಾಡಿದ್ದೇವೆಂದರೆ, ಅತಿವೃಷ್ಟಿ, ಅನಾವೃಷ್ಟಿ, ಬರ, ಭೂಕಂಪ, ಯುದ್ಧ ಮೊದಲಾದ ಯಾವುದೇ ವಿಪತ್ತು ಬಂದರೂ ಅವರು ಅದನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೆ.
ಹೌದು, ಎಂದೂ ಕಾಣದ ಭೀಕರ ಮಳೆಗೆ ಕೇರಳ ಮತ್ತು ಕೊಡಗಿನ ಜನರು ತತ್ತರಿಸಿ ಹೋಗಿದ್ದಾರೆ. ಪ್ರವಾಹ, ಭೂಕುಸಿತದಿಂದ ಮನೆಮಠಗಳನ್ನು ಕಳೆದುಕೊಂಡು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಹಳ್ಳಿಗಳು ಪಟ್ಟಣಗಳನ್ನೆದೆ ಎಲ್ಲವೂ ಜಲಾವೃತಗೊಂಡಿವೆ. ರಸ್ತೆಗಳು ಕೊಚ್ಚಿ ಹೋಗಿವೆ. ನೂರಾರು ಜನರು ಸಾವನ್ನಪ್ಪಿದ್ದಾರೆ. ಜನರು ನಿರಾಶ್ರಿತರಾಗಿದ್ದಾರೆ. ಕೆಲವೊಂದು ಪ್ರಕಟಿತ ಸುದ್ದಿಗಳ ಪ್ರಕಾರ ಸುಮಾರು ೫೪ ಸಾವಿರಕ್ಕೂ ಹೆಚ್ಚು ಜನರು ಈ ಮಹಾಮಳೆಯಿಂದ ತೊಂದರೆಗೆ ಈಡಾಗಿದ್ದಾರೆ. ಈ ಪ್ರವಾಹದಿಂದ ಉಂಟಾದ ಒಟ್ಟು ನಷ್ಟ ಸುಮಾರು ೩,೦೦೦ ಕೋಟಿಯೆಂದು ಅಂದಾಜಿಸಲಾಗಿದೆ. ಈ ನಷ್ಟ ಕಷ್ಟ ಏನೇ ಇರಲಿ, ಮನುಷ್ಯ ಮತ್ತೆ ಎದ್ದು ಬರುತ್ತಾನೆ. ಮಹಾ ಅತಿವೃಷ್ಟಿಗಳು ಬಂದು ಎಲ್ಲವನ್ನೂ ನಾಶ ಮಾಡಿ ಹೋದರೂ ಮನುಷ್ಯ ಚೆಂಡಿನಂತೆ ಪುಟಿದೇಳುತ್ತಾನೆ. ಈ ಅತಿರೇಕಗಳು ಮನುಷ್ಯನಲ್ಲಿ ಅಂತಹ ದೃಢತೆ, ಛಲ ಮೂಡಿಸುವುದರಲ್ಲಿ ಎರಡು ಮಾತಿಲ್ಲ. ಅಂತಹ ಮನೋಭಾವವನ್ನು ನಮ್ಮ ಜನರಲ್ಲಿ ವಿಶೇಷವಾಗಿ ಕೇರಳ ಮತ್ತು ಕೊಡಗಿನ ಜನರಲ್ಲಿ ನಾವು ಕಾಣುತ್ತಿದ್ದೇವೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲೇಬೇಕು. ಅಷ್ಟು ಮಾತ್ರವಲ್ಲ, ಸಂಕಷ್ಟದಲ್ಲಿ ಸಿಲುಕಿರುವ ಜನರ ಕೈಹಿಡಿದು ಎಬ್ಬಿಸುವಲ್ಲಿ ಹಿಂದು ಮುಂದು ನೋಡದೆ, ಸಹಾಯದ ಹಸ್ತ ಚಾಚಿ ನಿಂತಿರುವ ಸಾವಿರಾರು ಉದಾರಿಗಳು ಸಹ ನಿಜವಾಗಲೂ ಸ್ತುತ್ಯರ್ಹ.
ಈ ಎಲ್ಲದರ ನಡುವೆ ಈ ಒಂದು ಪಕೃತಿಯ ವಿಕೋಪಕ್ಕೆ ಜನರು ಸ್ಪಂದಿಸಿದ ರೀತಿ ನಿಜವಾಗಲೂ ಒಂದು ಸಂಶೋಧನೆಗೆ ಆಸಕ್ತಿಕರ ವಿಷಯವೆಂದೇ ಹೇಳಬಹುದು. ಒಂದು ಗುಂಪಿನ ಜನರು ವಿಕೋಪಕ್ಕೆ ಗುರಿಯಾದ ಜನರ ರಕ್ಷಣೆಗೆ ಮುನ್ನುಗ್ಗಿ ಸಹಾಯಹಸ್ತವನ್ನು ಚಾಚಿದರೆ ಇನ್ನೂ ಹಲವರು ದೂರದಲ್ಲೇ ಇದ್ದು, ತಮ್ಮ ಕೈಲಾಗುವ ಸಹಾಯವನ್ನು ಮಾಡಿದ್ದು ನಿಜವಾಗಲೂ ಉಲ್ಲೇಖಾರ್ಹ. ನಿರಾಶ್ರಿತರ ಸಹಾಯಕ್ಕಾಗಿ ಹಣ ಸಂಗ್ರಹಿಸುವಂತಹ ಸಂದರ್ಭದಲ್ಲಿ ಒಬ್ಬ ಹೆಣ್ಣು ಮಗಳು ತಾನು ಹಾಕಿಕೊಂಡಿದ್ದ ಒಡವೆಗಳನ್ನು ಬಿಚ್ಚಿಕೊಟ್ಟ ಘಟನೆಯನ್ನು ಕೇಳಿದ್ದೇವೆ. ಇನ್ನೊಂದು ಹೆಣ್ಣು ಮಗು ತಾನು ಸೈಕಲ್ ಕೊಳ್ಳಲು ಕೂಡಿ ಇಟ್ಟಿದ ಹಣವನ್ನೇ ಸಂತ್ತಸ್ರರ ನೆರವಿಗೆ ದಾನ ಮಾಡಿದ್ದು ಕೂಡ ನಮಗೆ ತಿಳಿದಿದೆ. ನಿರಾಶ್ರಿತರ ಪುನರ್ವಸತಿಗೆ ಹಣ ಸಹಾಯಕ್ಕಾಗಿ ಬಟ್ಟೆ ವ್ಯಾಪಾರಿಯ ಹತ್ತಿರ ಹೋದಾಗ, ಆತ ತನ್ನ ಇಡೀ ಅಂಗಡಿಯನ್ನೇ ಬಿಟ್ಟುಕೊಟ್ಟ ಉದಾಹರಣೆ ಕೂಡ ನಮ್ಮ ಮುಂದಿದೆ. ನವ ವಿವಾಹಿತ ಜೋಡಿ ತಮ್ಮ ಬಂಗಾರದ ಒಡವೆಗಳನ್ನೇ ನೆರೆ ಸಂತ್ರಸ್ತರ ನೆರವಿಗೆ ಕೊಡುಗೆಯಾಗಿ ನೀಡಿದ್ದಾರೆ. ಚರ್ಚ್, ದೇವಸ್ಥಾನ, ಮಸೀದಿ ಶಾಲೆಗಳು ನಿರಾಶ್ರಿತರ ಆಶ್ರಯ ತಾಣಗಳಾಗಿವೆ. ಪ್ರವಾಹ ಸಂತ್ರಸ್ತರ ನೆರವಿನ ಕಾರ್ಯದಲ್ಲಿ ಸಿನಿಮಾ, ರಾಜಕೀಯ, ಸಾಮಾಜಿಕ ಸಂಘಗಳ ಸದಸ್ಯರು ಕೂಡ ಹಿಂದೆ ಬಿದ್ದಿಲ್ಲ. ಅನೇಕರು ತಮ್ಮ ಟ್ವೀಟ್‍ಗಳ ಮೂಲಕ ಕೇರಳದ ಪ್ರವಾಹ ಪೀಡಿತರ ಸುರಕ್ಷತೆಗಾಗಿ ಪ್ರಾರ್ಥಿಸಿದ್ದಾರೆ. ಜತೆಗೆ ಸಹಾಯವಾಣಿಗಳ ಸಂಖ್ಯೆಯನ್ನೂ ಪ್ರಕಟಿಸುವ ಮೂಲಕ ತಮ್ಮ ಕೈಲಾದ ರೀತಿಯಲ್ಲಿ ನೆರವಾಗಲು ಪ್ರಯತ್ನಿಸಿದ್ದಾರೆ. ಸಂತ್ರಸ್ತರ ಕಷ್ಟಕ್ಕೆ ಮನ ಮಿಡಿದ ಕೆಲ ಚಿತ್ರನಟ, ನಟಿಯರು, ಕ್ರೀಡಾಪಟುಗಳು ತಂತಮ್ಮ ಸಂಭಾವನೆಯ ಹಣವನ್ನು ಸಂತ್ರಸ್ಥರಿಗೆ ಕೊಡಲು ನಿರ್ಧರಿಸಿರುವುದು ಮಾತ್ರವಲ್ಲ, ಅಭಿಮಾನಿಗಳಿಗೂ ನೆರವಾಗುವಂತೆ ಮನವಿ ಮಾಡುತ್ತಿದ್ದಾರೆ.
ಇಷ್ಟೆಲ್ಲಾ ಒಳ್ಳೆತನದಲ್ಲೂ ಕೆಲ ರಾಜಕೀಯ ಪುಡಾರಿಗಳು, ಪ್ರಕೃತಿಯ ವಿಕೋಪಕ್ಕೆ ಅವೈಜ್ಞಾನಿಕ ಕಾರಣಗಳನ್ನು ನೀಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ದನದ ಮಾಂಸವನ್ನು ನಡು ರಸ್ತೆಯಲ್ಲಿ ತಿಂದುದಕ್ಕಾಗಿ, ಶಬರಿಮಲೆ ಅಯ್ಯಪ್ಪನ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶವನ್ನು ಅನುಮೋದಿಸಿದಕ್ಕಾಗಿ, ಪಾಪ ನಿವೇದನೆಯ ಸಂಸ್ಕಾರವನ್ನು ನಿಷೇಧಿಸಲು ಮಾಡಿದ ಹೋರಾಟದ ಪ್ರತಿಫಲವಾಗಿ ಈ ಪ್ರವಾಹವೆಂದು ಹೇಳಿ ತಮ್ಮ ದಡ್ಡತನವನ್ನು ಪ್ರದರ್ಶಿಸಿದ್ದಾರೆ. ಕೆಲ ಧರ್ಮಾಂಧರು, ಕೇರಳದಲ್ಲಿ ಬಹು ಜನರು ಮುಸ್ಲಿಂ ಮತ್ತು ಕ್ರೈಸ್ತ ಧರ್ಮಗಳಿಗೆ ಸೇರಿದವರಾಗಿರುವುದರಿಂದ ಯಾವುದೇ ರೀತಿಯ ಸಹಾಯವನ್ನು ನೀಡಬಾರದೆಂದು ಕರೆಕೊಟ್ಟಿದ್ದಾರೆ. ಕೆಲವೊಂದು ಸಂಘಸಂಸ್ಥೆಗಳು ಕೇರಳ ಪ್ರವಾಹ ಸಂತ್ರಸ್ತರಿಗೆ ಸಂಸ್ಥೆಯ ಸಹಾಯ ಎಂದು ಹೇಳಿ ಗುಜರಾತ್ ಪ್ರವಾಹದ ಪೋಟೋಗಳನ್ನು ಎಡಿಟ್ ಮಾಡಿ ಶೇರ್ ಮಾಡಿದ್ದಾರೆ. ಪರಿಹಾರ ಹಣವನ್ನು ಬಿಡುಗಡೆ ಮಾಡಲು ಮಲತಾಯಿ ಧೋರಣೆ ಅನುಸರಿಸುತ್ತಿರುವ ಸರ್ಕಾರ, ಕೇರಳ ಹಾಗು ಕೊಡಗಿಗೆ ನ್ಯಾಯಯುತವಾಗಿ ನೀಡಬೇಕಾದ ಅರ್ಥಿಕ ಸಹಾಯ ನೀಡದೆ ಮತ್ತು ಆರ್ಥಿಕ ಸಹಾಯ ಮಾಡಲು ಮುಂದೆ ಬಂದವರನ್ನು ಸಹ ಉತ್ತೇಜಿಸದೆ ಕೀಳು ರಾಜಕೀಯದಲ್ಲಿ ಮಗ್ನವಾಗಿದೆ.
ಕೊನೆಗೆ ಮಳೆ ಬಂದರೂ ಶಾಪ, ಬಾರದಿದ್ದರೂ ಶಾಪ ಎನ್ನುವಂತಹ ಪರಿಸ್ಥಿತಿ ಏಕೆ ಉಂಟಾಗಿದೆ ಎನ್ನುವುದರ ಬಗ್ಗೆ ಸರ್ಕಾರ ಮತ್ತು ಜನರು ಆಲೋಚಿಸಬೇಕಾಗಿದೆ. ಕೇರಳದ ಮಹಾ ಪ್ರವಾಹ ನಮಗೆ ಎಚ್ಚರಿಕೆಯ ಘಂಟೆಯಾಗಬೇಕಿದೆ. ಪ್ರಕೃತಿಯ ಜತೆಗೆ ಹೊಂದಾಣಿಕೆಯ ಜೀವನವನ್ನು ನಡೆಸದೆ, ಪ್ರಕೃತಿಯನ್ನು ನಮ್ಮ ಲಾಭಕ್ಕಾಗಿ ನಾಶ ಮಾಡುತ್ತಿದ್ದೇವೆ. ಪ್ರಕೃತಿಯ ಬಗ್ಗೆ ಕಾಳಜಿ ವಹಿಸುವಂತಹ ಅಭಿವೃದ್ಧಿಯ ಸೂತ್ರಗಳನ್ನು ನಾವು ಜಾರಿಗೊಳಿಸದೆ ಪ್ರಕೃತಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದೇವೆ. ಇನ್ನೊಂದು ಕಡೆ ಹವಾಮಾನ ವೈಪರೀತ್ಯದ ಮುನ್ನೆಚ್ಚರಿಕೆಗಳಿಗೆ ಸೂಕ್ತ ಗಮನ ಕೊಡದೇ ಇರುವುದು ಈ ರೀತಿಯ ಅನಾವೃಷ್ಟಿ ಮತ್ತು ಅತಿವೃಷ್ಟಿಗೆ ಮತ್ತೊಂದು ಕಾರಣ. ಪ್ರವಾಹಕ್ಕೆ ಪರಿಸರ ತಜ್ಞರು ಪಟ್ಟಿ ಮಾಡಿರುವ ಕಾರಣಗಳೆಂದರೆ: ನದಿ ಪಕ್ಕ ಮರಳು ಗಣಿಗಾರಿಕೆ, ಅರಣ್ಯ ಮತ್ತು ಹುಲ್ಲುಗಾವಲುಗಳ ನಾಶ, ನಗರ ಪಟ್ಟಣ ಮತ್ತು ಹಳ್ಳಿಗಳನ್ನದೆ ಎಲ್ಲೆಡೆ ಮನಬಂದಂತೆ ಏಳುತ್ತಿರುವ ವಸತಿ ಮತ್ತು ವಾಣಿಜ್ಯ ಕಟ್ಟಡಗಳು, ಅಣೆಕಟ್ಟೆಗಳಲ್ಲಿ ಹೂಳು ತೆಗೆಯದಿರುವುದು, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳು ಇತ್ಯಾದಿ. ಪರಿಸರ ತಜ್ಞ ಮಾಧವ್ ಗಾಡ್ಗೀಲ್ ಅವರು "ವ್ಯಾಪಕ ಪ್ರಮಾಣದಲ್ಲಿ ಕಲ್ಲುಗಳನ್ನು ಕೊರೆದಿರುವುದು ಮತ್ತು ತಗ್ಗುಗಳನ್ನು ತೋಡಿರುವುದು ಭೂಕುಸಿತಕ್ಕೆ ಕಾರಣವಾಗಿ ಕೇರಳದ ಪ್ರವಾಹವನ್ನು ಹದಗೆಡುವಂತೆ ಮಾಡಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೊನೆಗೆ, ಮೊನ್ನೆ ಫೇಸ್ಬುಕ್ಕಿನಲ್ಲಿ ತೇಲಿ ಬಂದ ವಿಡಿಯೋ ತುಣುಕೊಂದನ್ನು ನೋಡಿದೆ. ಧರ್ಮಾಂಧನಾಗಿ, ಒಂದು ಕೋಮಿಗೆ ಸೇರಿದ ಜನರನ್ನು ದ್ವೇಷಿಸುತ್ತಿದ್ದ ಮನುಷ್ಯನೊಬ್ಬ, ನಾನು ಇನ್ನು ಮುಂದೆ ಮಾನವೀಯತೆಯ ಪ್ರವರ್ತಕನಾಗಿ ಬಾಳುತ್ತೇನೆ ಎಂದು ಸಾಕ್ಷಿ ನೀಡುವ ವಿಡಿಯೋ ಅದು. ಆಗಿದ್ದು ಇಷ್ಟು. ಪ್ರವಾಹದ ಸಂದರ್ಭದಲ್ಲಿ ನಿರಾಶ್ರಿತನಾಗಿದ್ದಾಗ ಮುಸ್ಲಿಂ ಕೋಮಿಗೆ ಸೇರಿದ ಕುಟುಂಬವೊಂದು ಅವನ ನೆರವಿಗೆ ಧಾವಿಸಿ ಆಶ್ರಯವನ್ನು ನೀಡಿದ್ದಲ್ಲದೆ, ಊಟ ಉಪಚಾರಗಳನ್ನು ನೀಡಿ ಸತ್ಕರಿಸಿ ಅವನ ಜೀವ ಉಳಿಸಿತ್ತು. ಈ ಅನುಭವ ಅವನ ಪರಿವರ್ತನೆಗೆ ಕಾರಣವಾಯಿತು. ಕೊನೆಗೆ, ಕೇಳಿಕೊಳ್ಳಬೇಕಾದ ಪ್ರಶ್ನೆಯಿದು: ನಾವೆಲ್ಲರೂ ಮನುಷ್ಯರು ಎಂಬ ಅರಿವು ನಮಗೆ ಮೂಡಲು ಇಂತಹ ಪಕೃತಿ ವಿಕೋಪಗಳೇ ಕಾರಣವಾಗಬೇಕೇ?