Thursday, 27 December 2018

ತೇವ ಕಾಯುವ ಬೀಜ

ನಿನ್ನ ಪ್ರೀತಿಯಲ್ಲಿ
ನಾನು ಸುಟ್ಟುಕೊಂಡ ಮೇಲಷ್ಟೆ
ಪ್ರೀತಿ
ರುಜುವಾತಾಗುವುದು
ಕಳವಳಕ್ಕೆ ಕಾರಣಗಳಿಲ್ಲ
ಸುಡದ ಸುರಕ್ಷಿತ ದಾರಿಯಲ್ಲಿ
ಪ್ರೇಮ ದೊರಕದು
—————
ಕನಸು ಅರಳಿಸುವ ಶಕ್ತಿ
ಮಾತಿಗಿರುವ ಹಾಗೆ
ಮೌನಕ್ಕೂ ಇದೆ..
ಸುಮ್ಮನೆ ಸುಡುವ ತಾಕತ್ತು
ಮಾತಿಗಿರುವ ಹಾಗೆ ಮೌನಕ್ಕೂ ಇದೆ..
ಮಾತಿಗೆ ಮೌನವನ್ನು ತೂಕಕ್ಕೆ ಹಚ್ಚಲಾರೆ
ನೀನಲ್ಲ, ಯಾರಾದರೂ ಸರಿಯೆ
ಮಾತನ್ನು ಕಸಿಯಬಹುದು
ಮೌನವನ್ನಲ್ಲ...

----
ನಿನಗೆ
ಬೆಳಕಿನ ಅನುಭವವಾಗುವುದು
ನೀನು ಹಣತೆಯಾದರಷ್ಟೇ
ಉರಿವ ಹಣತೆ
ಹೇಳುವುದು ಇದನ್ನೇ
ಸುಟ್ಟುಕೊಂಡರಷ್ಟೇ ಬೆಳಕು..
——-
ಮೂರು ದಿನ
ಒಂದು ಕತ್ತಲು ಒಂದು ಬೆಳಕು
ಇನ್ನೊಂದು ?
ಸುಮ್ಮನೆ ಹುಡುಕು
ಅಲೆವ ಗಾಳಿಯಲಿ
ಎಲೆ ಬೀಳುವ ಸದ್ದು
——
ಅಕ್ಷರಕ್ಕಾಗಿ ಚಾಚುವ ಬೊಗಸೆಯೇ
ನನ್ನಲ್ಲೇನಿದೆ?
ನನ್ನೆಲ್ಲಾ ಅಕ್ಷರಗಳು
ಹುಟ್ಟುವುದೇ ನಿನ್ನೊಡಲಿನಿಂದ
ಏನೂ ಬರೆಯಲಿಲ್ಲವೆಂದು
ದೂರಬೇಡ
ಹೇಳು
ಬೇರಿಗೆ ನೀರಾಗದೆ
ಯಾವ ಮರ ಹೂ ಬಿಟ್ಟೀತು?
——-
ಸಸಿ ಕಾಯಲು
ಬೇಲಿ ಕಟ್ಟಬಹುದು
ಸಸಿ ಚಿಗುರದ ಹಾಗೆ ಕಟ್ಟಲಾಗದು
ನಿನ್ನ ಪ್ರೇಮಿಸಿದ ಮೇಲಷ್ಟೇ ಅರಿವಾಯಿತು
ಪಂಜರವೆಂಬುದು ಹಾರುವ ರೆಕ್ಕೆಗೇ
ಹೊರತು ಹಾಡುವ ಕೊರಳಿಗಲ್ಲ
————
ಬಣ್ಣದ ಚಿಟ್ಟೆ
ಕನಸಿನ ರೆಪ್ಪೆ ಪಿಳುಕಿಸುವುದು
ಹಗಲಿನಲ್ಲಲ್ಲ
———
- ಬಸೂ


ಮೂರ್ಛಾವಸ್ಥೆಯಲ್ಲಿ ಕಾರುಣ್ಯ


ಬುದ್ಧನ ಕಾರುಣ್ಯ ನನ್ನ ಮನದೊಳಗೆ ಕೂತ ಬಗೆಯನ್ನು ಒಂದು ಉದಾಹರಣೆಯಿಂದ ಹೇಳಲು ಪ್ರಯತ್ನಿಸುವೆ.
ಇತ್ತೀಚೆಗೆ ಶಿವಮೊಗ್ಗದ ಡಾ. ಅಶೋಕ ಪೈ ಅವರು ಮೈಸೂರಿಗೆ ಬಂದಿದ್ದರು. ಅವರು ಮನಸ್ಸಿನ ಬಗ್ಗೆ ನಡೆದಿರುವ ಒಂದು ಸಂಶೋಧನಾ ಸತ್ಯವನ್ನು ಹೇಳಿದರು. ಏನೆಂದರೆ- ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿದ್ದಾರೆ ಎಂದಿಟ್ಟುಕೊಳ್ಳೋಣ. ಇನ್ನೊಂದಿಷ್ಟು ಜನ ಇದರ ಅರಿವಿಲ್ಲದೆ ಇನ್ನೊಂದು ಪಕ್ಕದ ಕೊಠಡಿಯಲ್ಲಿ ಇಸ್ಪೀಟ್ ಆಡುತ್ತಲೊ, ಏನೊ ಮಾತುಕತೆಯಾಡುತ್ತಲೊ ಅಲ್ಲಿ ತಮ್ಮಷ್ಟಕ್ಕೆ ತಾವಿರುವರು ಎಂದಿಟ್ಟುಕೊಳ್ಳೋಣ. ಆಗ ಟೆಲಿವಿಷನ್‌ನಲ್ಲಿ ಯಾವುದಾದರೂ ಕೊಲೆ ದೃಶ್ಯ ಬಂದಾಗ ಇಲ್ಲಿ ಇದನ್ನು ನೋಡುತ್ತಿದ್ದವರ ದುಃಖದ ಭಾವನೆಯು ಇದನ್ನು ನೋಡದೆ ಇರುವ ಪಕ್ಕದ ಕೊಠಡಿಯಲ್ಲಿ ತಮ್ಮಷ್ಟಕ್ಕೆ ತಾವೇ ಇಸ್ಪೀಟು ಆಡುತ್ತಿರುವವರ ಮನಸ್ಸಿಗೂ ಮುಟ್ಟಿ ಅವರ ಮನಸ್ಸು ಸ್ವಲ್ಪಮಟ್ಟಿಗೆ ದುಗುಡಗೊಳ್ಳುತ್ತದಂತೆ. ಅದೇ ಟೆಲಿವಿಷನ್‌ನಲ್ಲಿ ಯಾವುದಾದರೂ ನೃತ್ಯ ದೃಶ್ಯ ಬಂದಾಗ ಅದನ್ನು ನೋಡುತ್ತಿದ್ದವರ ಖುಷಿ ಭಾವನೆಯು ಪಕ್ಕದ ಕೊಠಡಿಯಲ್ಲಿ ಇದನ್ನು ನೋಡದ ತಮ್ಮಷ್ಟಕ್ಕೆ ತಾವೇ ಇಸ್ಪೀಟು ಆಡುವವರ ಮನಸ್ಸಿನ ಮೇಲೂ ಪರಿಣಾಮ ಮಾಡಿ ಸ್ವಲ್ಪ ಮಟ್ಟಿಗೆ ಸಂತೋಷದ ಭಾವನೆ ಉಂಟಾಗುವುದಂತೆ. ಈ ನಿಜ ಏನನ್ನು ಹೇಳುತ್ತದೆ? ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ ಎಂದು ಹೇಳುತ್ತದೆ. ಯಾವುದೇ ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಎಲ್ಲಾ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತಿರುತ್ತದೇನೊ. ಈ ಅನುಕಂಪನ ನಿಜವು ಇಡೀ ಜೀವಸಂಕುಲವನ್ನೆ ಒಂದು ಎಂದು ಹೇಳುತ್ತದೆ. ಬುದ್ಧನ ಕಾರುಣ್ಯ ಇಲ್ಲಿಂದಲೇ ಮೂಡಿರಬಹುದು. ಕೊಲೆ ಸುಲಿಗೆ ದ್ವೇಷ ಅಸೂಯೆಗಳಿಂದ ಕ್ಷೋಭೆಗೊಂಡು ನರಳುತ್ತಿರುವ ಜಗತ್ತು- ಅದು ಘಾಸಿಗೊಳಿಸುವುದು- ತನ್ನ ಆಳದ ಒಳ ಸಮಷ್ಟಿ ಮನಸ್ಸನ್ನೆ. ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ. ನಾವು ಮನುಷ್ಯರು ಗುಣವಾಗಬೇಕಾಗಿದೆ. ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ. ಈ ಎಳೆ ಹಿಡಿದು ಜಾಗತೀಕರಣವನ್ನೂ ರೂಪಿಸಬೇಕಾಗಿದೆ. ಆಗ ಮಾತ್ರವೇ ಅದು ಜಾಗತೀಕರಣ.

ದೇವನೂರ ಮಹಾದೇವ/ ಎದೆಗೆ ಬಿದ್ದ ಅಕ್ಷರ / ೧೦


ವೈದ್ಯನು ಬರೆದ ಸುಸಂದೇಶ


¨ ಕೆ ಜೆ ಜಾರ್ಜ್



ಯೇಸು ಶಿಲುಬೆಯ ಮರಣವನಪ್ಪುವವರೆಗೂ ಯೇಸುವಿನ ಬಗ್ಗೆ ಲೂಕನಿಗೆ ಅರಿವಿರುವ ಸಾಧ್ಯತೆಯೇ ಇರಲಿಲ್ಲವೆನಿಸುತ್ತೆ! ಅನಂತರದ ದಿನಗಳಲ್ಲಷ್ಟೆ ಈತ ಅನ್ಯಮತವನ್ನು ತೊರೆದು ಕ್ರೈಸ್ತಮತವನ್ನಪ್ಪಿರಬಹುದು. ಏಕೆಂದರೆ ಲೂಕನು ಯೇಸುವನ್ನು ಅರಿತದ್ದೂ ಮತ್ತು ಅವರೇ ತನ್ನ ರಕ್ಷಕನೆಂದು ತಿಳಿಯಲು ಕಾರಣವಾದದ್ದೂ, ಮತ್ತೂ ಅದಕ್ಕೆ ಪ್ರೇರೇಪಣೆ ದೊರೆಕಿದ್ದೂ ಸ್ವಯಂ ಪೌಲನಿಂದಲೇ.


ಪ್ರಾಯಶಃ ಆ ಕಾಲದಲ್ಲಿ ಯೇಸುವಿನ ಶುಭಸಂದೇಶವನ್ನು ಸಾರಲು ಕಂಕಣಬದ್ಧರಾಗಿ ಹೊರಟವರಲ್ಲಿ ವೃತ್ತಛೇದನ ಮಾಡಿಸಿಕೊಳ್ಳದ, ಯೆಹೂದ್ಯನೂ ಅಲ್ಲದ ಮತ್ತು ಯೇಸುವಿನ ಪ್ರೇಷಿತಗಣಕ್ಕೆ ನೇರವಾಗಿ ಸಂಬಂಧಿಸದ ಲೂಕನೊಬ್ಬನೇ ಆಗಿರಬೇಕು ಎಂದೆನಿಸುತ್ತದೆ.
ಯೇಸುವಿನ ಜನನದಿಂದ ಮರಣ ಪುನರುತ್ಥಾನದವರೆಗಿನ 'ಸುಸಂದೇಶ'ವೆಂಬ ಕೃತಿಯನ್ನೂ ಅನಂತರ ಪ್ರೇಷಿತರು ಸುಸಂದೇಶವನ್ನು ಸಾರುವ ಕೈಂಕೈರ್ಯವನ್ನು ಮಾಡಿ ಅನುಭವಿಸಿದಂತಹ ಅನೇಕ ಕಷ್ಟಕಾರ್ಪಣ್ಯಗಳನ್ನು ಎತ್ತಿ ತೋರಿಸುವ ಕೃತಿಯಾದ 'ಪ್ರೇಷಿತರ ಕ್ರಿಯಾಕಲಾಪಗಳು' ಎಂಬ ಎರಡು ಕೃತಿಗಳ ರಚನಕಾರನಾದ 'ಲೂಕ'ನ ಆ ಹೆಸರು, ಗ್ರೀಕ್ ಪದವಾದ 'ಲೂಕಸಸ್' ಅಥವಾ 'ಲೂಕಾಸ್'ನ ಸಂಕ್ಷಿಪ್ತ ರೂಪ. ಸಿರಿಯಾದ 'ಅಂತಿಯೋಕ'ದವನಾದ ಲೂಕ, ಮೂಲತಃ ಓರ್ವ ಗ್ರೀಕ್‌ ವೈದ್ಯ. ಈತ ಸಂತ ಪೌಲನ ಗೆಳೆಯನಾಗಿದ್ದ. ಫಿಲೆಮೋನನಿಗೆ ಬರೆದ ಪತ್ರದ ಕೊನೆಯ ಸಾಲುಗಳಲ್ಲಿ ಹೀಗೆಂದು ಪೌಲನು ತಿಳಿಸಿದ್ದಾನೆ. ಲೂಕನು ವೈದ್ಯನಾಗಿದ್ದ ಎಂಬುದಕ್ಕೆ ಪುರಾವೆಯನ್ನೂ ಪೌಲನು ಕೊಲೊಸ್ಸೆಯರಿಗೆ ಬರೆದ ಪತ್ರ (4:14 (ದಲ್ಲಿ ದಾಖಲಿಸಿದ್ದಾನೆ. ತನ್ನ ಜೊತೆ ಇದ್ದವರು ತನ್ನಿಂದ ದೂರ ಸರಿದರೂ ಲೂಕನು ಮಾತ್ರ ತನ್ನೊಂದಿಗೆ ಇದ್ದಾನೆ ಎಂದು ಪೌಲನು ತಿಮೋಥಿಯನಿಗೆ ಬರೆದ ದ್ವಿತೀಯ ಪತ್ರ (4:11 ( ದ ಮುಖಾಂತರ ಲೂಕನ ಗೆಳೆತನದ ನಿಷ್ಕಳಂಕತೆಯನ್ನೂ ಸಾರಿದ್ದಾನೆ.
ತಾವು ನಂಬಿ ವಿಶ್ವಾಸಿಸಿದ ಕರ್ತ ಯೇಸುವಿನ ಧಾರ್ಮಿಕ ಸೇವೆಯ ವಿವರಗಳನ್ನು ಇತರರಿಗೂ ತಲುಪುವ ಹಾಗೆ 'ಶುಭಸಂದೇಶ'ವೆಂಬ ಸಾಂಕೇತಿಕ ನಾಮದಲ್ಲಿ ಕೃತಿಗಳನ್ನು ರಚಿಸಿದ ನಾಲ್ವರು ಸುಸಂದೇಶಕರ್ತರಲ್ಲಿ ಲೂಕನೂ ಒಬ್ಬ. ಆ ನಾಲ್ವರಲ್ಲಿ ಯೊವಾನ್ನನು ಯೇಸುವಿನ ಮೂವರು ಆಪ್ತಶಿಷ್ಯರಲ್ಲಿ ಒಬ್ಬನಾಗಿದ್ದ. ಯೇಸುವಿನ ಆಂತರ್ಯವನ್ನು ಚೆನ್ನಾಗಿ ಬಲ್ಲವನಾಗಿದ್ದ.
ಸುಂಕದವನಾದ ಮತ್ತಾಯ ಯೇಸುವಿನ ಕರುಣೆಗೆ ಒಳಗಾಗಿ ಅವರ ಅಹ್ವಾನದ ಮೇರೆಗೆ ಶಿಷ್ಯನಾಗಿದ್ದ; ಈತನಿಗೆ ಯೇಸುವಿನ ಮೇಲೆ ಅಪಾರವಾದ ವಿಶ್ವಾಸ ಹಾಗೂ ಕೃತಾರ್ಥತೆ ಇತ್ತು ಎಂಬುದನ್ನು ಅವನ ಕೃತಿಯು ಎತ್ತಿ ತೋರಿಸುತ್ತದೆ.
ಇನ್ನು ಮಾರ್ಕನ ಬಗ್ಗೆ ಹೇಳುವುದಾದರೆ ಆತ ಯೇಸುವಿನ ಶಿಷ್ಯನಲ್ಲದಿದ್ದರೂ ಅವನ ಸಾಕು ತಂದೆಯಾದ ಪೇತ್ರನು ಯೇಸುವಿನ ಆಪ್ತಶಿಷ್ಯರುಗಳಲ್ಲಿ ಒಬ್ಬನಾಗಿದ್ದ; ಸಹಜವಾಗಿಯೇ ಯೇಸುವಿನೊಂದಿಗಿನ ಒಡನಾಟ ಮಾರ್ಕನಿಗಿತ್ತು ಎನ್ನಬಹುದು.
ಆದರೆ ಲೂಕನು ಯೇಸುವಿನ ಶಿಷ್ಯನಲ್ಲ; ಪ್ರಾಯಶಃ ಯೇಸುವನ್ನು ಕಂಡವನೂ ಅಲ್ಲ. ಇನ್ನು ಅವರೊಂದಿಗಿನ ಒಡನಾಟದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಯೇಸುವೂ ಸೇರಿದಂತೆ ಅವರ ಹನ್ನೆರಡು ಮಂದಿ ಶಿಷ್ಯಂದಿರು ಯೆಹೂದ್ಯರಾಗಿದ್ದರು ಎಂಬುದಿಲ್ಲಿ ಗಮನಾರ್ಹವಾದ ಸಂಗತಿ. ಅಷ್ಟೇ ಅಲ್ಲ ಫರಿಸಾಯನಾಗಿದ್ದೂ ಯೇಸುವಿನ ಶಿಷ್ಯರನ್ನೂ ಅನುಯಾಯಿಗಳನ್ನೂ ಹಿಂಸಿಸುತ್ತಿದ್ದ ಪೌಲನೂ ಸಹ ಯೆಹೂದ್ಯನಾಗಿದ್ದ. ಆದರೆ ಲೂಕ ಯೆಹೂದ್ಯನಲ್ಲ. ಅವನೋರ್ವ ಗ್ರೀಕನಾಗಿದ್ದ ಎಂಬುದನ್ನು ಬೈಬಲ್ ಪಂಡಿತರು ಹೇಳುತ್ತಾರೆ. ಬಹುಶಃ ಯೇಸು ಶಿಲುಬೆಯ ಮರಣವಪ್ಪುವವರೆಗೂ ಯೇಸುವಿನ ಬಗ್ಗೆ ಲೂಕನಿಗೆ ಅರಿವಿರುವ ಸಾಧ್ಯತೆಯೇ ಇರಲಿಲ್ಲವೆನಿಸುತ್ತೆ! ಅನಂತರದ ದಿನಗಳಲ್ಲಷ್ಟೆ ಈತ ಅನ್ಯಮತವನ್ನು ತೊರೆದು ಕ್ರೈಸ್ತಮತವನ್ನಪ್ಪಿರಬೇಕು. ಏಕೆಂದರೆ ಲೂಕನು ಯೇಸುವನ್ನು ಅರಿತದ್ದೂ ಮತ್ತು ಅವರೇ ತನ್ನ ರಕ್ಷಕನೆಂದು ತಿಳಿಯಲು ಕಾರಣವಾದದ್ದೂ, ಅದಕ್ಕೆ ಪ್ರೇರೇಪಣೆ ದೊರೆತಿದ್ದೂ ಸ್ವಯಂ ಪೌಲನಿಂದಲೇ. ಯೇಸು ಶಿಲುಬೆಯಲ್ಲಿ ಮರಣಿಸಿ, ಪುನರುತ್ಥಾನರಾಗಿ ಸ್ವರ್ಗಾರೋಹಣ ಹೊಂದಿದ ಬಳಿಕವಷ್ಟೆ ಪೌಲನು ಯೇಸುವಿನ ಅನುಯಾಯಿಯಾದದ್ದು. ಬಹುಶಃ ಆ ಬಳಿಕವಷ್ಟೇ ಪೌಲನಿಂದ ಲೂಕನು ಯೇಸುವಿನ ಬಗ್ಗೆ ತಿಳಿದಿರಬೇಕು ಎಂದೆನಿಸುತ್ತದೆ.
ಲೂಕನು ತನ್ನ ಕೃತಿಯನ್ನು ರಚಿಸುವ ಮೊದಲು ಪೌಲನ ಮುಖೇನ ಪರಿಚಿತನಾದ ಮಾರ್ಕನ ಮತ್ತು ಯೊವಾನ್ನನ ಸಹೋದರ ಯಕೋಬನ ಟಿಪ್ಪಣಿಗಳನ್ನು ಓದಿರುವ ಸಾಧ್ಯತೆಯಿದೆ. ಅವು ಲೂಕನ ಕೃತಿರಚನೆಗೆ ಪ್ರೇಣೆಯಾಗಿರಬೇಕು. ಕಾರಣ ಅವುಗಳಲ್ಲಿರುವ ಕೆಲವು ಸಂಗತಿಗಳು ಲೂಕನ ಕೃತಿಯಲ್ಲೂ ಇವೆ. ಜೊತೆಗೆ ಗೆಳೆಯ ಪೌಲನ ಪ್ರೇಣೆಯೂ ಇದ್ದಿರುವ ಸಾಧ್ಯತೆಯಿದೆ; ಉದಾಹರಣೆಗೆ ಲೂಕನ ಸುಸಂದೇಶದ ಕೆಲವು ವಾಕ್ಯಗಳಿಗೂ ಪೌಲನ ಪತ್ರದಲ್ಲಿನ ಕೆಲವು ವಾಕ್ಯಗಳಿಗೂ ಸಾಮ್ಯತೆ ಇದೆ ( (ಲೂಕ 22:19 ಮತ್ತು 1ಕೊರಿಂಥ. 11:23-25 (. ಅಲ್ಲದೆ ಮೊತ್ತಮೊದಲ ಸುಸಂದೇಶವಾದ ಮತ್ತಾಯನ ಕೃತಿಯು ಲೂಕನ ಕೃತಿಗೂ ಮೊದಲೇ ಹೊರಬಂದಿದ್ದು ಅದರ ಹಸ್ತಪ್ರತಿ ಲೂಕನ ಕೈಸೇರಿರಬೇಕು. ಏಕೆಂದರೆ ಮಾರ್ಕ ಮತ್ತು ಯೊವಾನ್ನನ ಕೃತಿಗಳಲ್ಲಿ ಕಾಣದ ಹಲವು ಸಂಗತಿಗಳು ಮತ್ತಾಯನ ಕೃತಿಯಲ್ಲಿದ್ದು ಅವು ಲೂಕನ ಕೃತಿಯಲ್ಲೂ ಕಂಡುಬಂದಿವೆ. ಲೂಕನು ಅವುಗಳನ್ನು ಅಭ್ಯಸಿಸಿ, ಅವುಗಳಿಗೆ ಪೂರಕವಾಗುವ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಅನಂತರ ತನ್ನ ಕೃತಿರಚನೆಯನ್ನು ಮಾಡಿದ್ದಾನೆ ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಮಾತ್ರವಲ್ಲ ತನ್ನ ಕೃತಿಯ ಆರಂಭದ ಸಾಲುಗಳಲ್ಲಿ ಅದನ್ನವನು ಪ್ರಕಟಪಡಿಸಿದ್ದಾನೆ. ತನ್ನ ಕೃತಿಯನ್ನು ಲೂಕನು ಕ್ರಮಬದ್ಧವಾಗಿ ರಚಿಸಿರುವುದೂ ಸಹ ಮೇಲಿನ ವಾಕ್ಯಗಳಿಗೆ ಪುಷ್ಟಿಯನ್ನು ನೀಡುತ್ತದೆ.
ಲೂಕನ ಸುಸಂದೇಶ ರಚನೆಯಾದದ್ದು ಕ್ರಿಸ್ತಶಕ ಸುಮಾರು 56-58ರ ನಡುವಿನಲ್ಲಿ; ರಚಿಸಿದ ಸ್ಥಳ ಸೆಜ಼ಾರಿಯಾ. ಪೌಲನು ಲೂಕನ ಸಂಗಡ ಫಿಲಿಪಿಯಾದಿಂದ ಹಿಂದಿರುಗಿದ ಬಳಿಕ ಸೆಜಾ಼ರಿಯಾದಲ್ಲಿ ಬಂಧನಕ್ಕೀಡಾಗುತ್ತಾನೆ. ಆಗ ಚಕ್ರವರ್ತಿ ಸೀಜ಼ರನಿಗೆ ಅಪೀಲುಹೋದ ಪೌಲನು ಎರಡು ವರ್ಷ ರೋಂನಲ್ಲಿ ಕಾಯಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಆ ಅವಧಿಯಲ್ಲಿ ಲೂಕನು ತನ್ನ ಕೃತಿಯ ರಚನೆಯಲ್ಲಿ ತೊಡಗಿದ್ದಾನೆ.
ಸುಸಂದೇಶಗಳಲ್ಲೇ ಕ್ರಿಸ್ತ ಯೇಸುವಿನ ಬಗೆಗಿನ ಹೆಚ್ಚಿನ ವಿವರಗಳು ಸಿಗುವ ದೊಡ್ಡ ಕೃತಿ ಲೂಕನ ಕೃತಿಯಾಗಿದೆ. ಮತ್ತಾಯನ ಕೃತಿ (28 ಅಧ್ಯಾಯಗಳು) ಗೆ ಹೋಲಿಸಿದಲ್ಲಿ ಲೂಕನ ಕೃತಿಯಲ್ಲಿರುವ ಅಧ್ಯಾಯಗಳು ಕಡಿಮೆ. ಆದರೆ ವಾಕ್ಯಗಳ ಸಂಖ್ಯೆ ಹೆಚ್ಚು. ಲೂಕನ ಕೃತಿಯಲ್ಲಿ ಒಟ್ಟು 24 ಅಧ್ಯಾಯಗಳು ಇದ್ದು, 1147 ಸಂಖ್ಯಾಧಾರಿತ ವಾಕ್ಯಗಳು ಇವೆ. ಅತ್ಯಂತ ದೊಡ್ಡ ಅಧ್ಯಾಯ ಮೊದಲ ಅಧ್ಯಾಯ. ಅತ್ಯಂತ ಸಣ್ಣದು 16ನೇ ಅಧ್ಯಾಯ.
ಮಾರ್ಕನ ಕೃತಿ ಹೊರಬಂದದ್ದು ಲೂಕನ ಕೃತಿಯ ಅನಂತರವೇ ಎನ್ನುವುದು ಗಮನಾರ್ಹ; ಅಂದರೆ ಕ್ರಿಸ್ತಶಕ ಸುಮಾರು 60-65ರ ನಡುವೆ. ಮತ್ತಾಯ ಮತ್ತು ಮಾರ್ಕನ ಕೃತಿಗಳ ನೆರಳು ಲೂಕನ ಕೃತಿಯ ಮೇಲಿದ್ದರೂ ಯೊವಾನ್ನನ ಕೃತಿಯೂ ಸೇರಿದಂತೆ ಈ ಮೂವರ ಕೃತಿಗಳಲ್ಲಿ ಕಾಣಿಸದ ನಿಖರತೆ ಮತ್ತು ಚಾರಿತ್ರಿಕ ಅಂಶಗಳು ಲೂಕನ ಕೃತಿಯಲ್ಲಿ ಮಾತ್ರವೇ ಕಾಣಲು ಸಿಗುತ್ತವೆ ಎಂಬುದು ಗಮನಾರ್ಹ. ಇದೇ ಲೂಕನ ಹೆಗ್ಗಳಿಕೆ! ಸ್ವಯಂ ವೈದ್ಯನೂ, ಚಿತ್ರಕಲಾವಿದನೂ (ಬಾಲ ಯೇಸುವನ್ನು ಕೈಯಲ್ಲಿ ಹಿಡಿದಿರುವ ಮೇರಿ ಮಾತೆಯ ತೈಲವರ್ಣಚಿತ್ರವನ್ನು ರಚಿಸಿದ್ದಾನೆಂಬುದು ಅನೇಕರಿಗೆ ತಿಳಿದಿಲ್ಲ) ಆಗಿರುವ ಲೂಕ 'ಸುಸಂದೇಶ' ಮತ್ತು 'ಪ್ರೇಷಿತರ ಕ್ರಿಯಾಕಲಾಪಗಳು' ಎಂಬ ಎರಡು ಕೃತಿಗಳ ಮೂಲಕ ತಾನೊಬ್ಬ ‘ಪ್ರಬುದ್ಧ ಲೇಖಕ' ಮಾತ್ರವಲ್ಲ ಬಹುಮುಖ ಪ್ರತಿಭಾಶಾಲಿ ಎಂಬುದನ್ನೂ ಸಾಬೀತು ಪಡಿಸಿದ್ದಾನೆ.
ಲೂಕನು ತನ್ನ ಸುಸಂದೇಶದಲ್ಲಿ ಕ್ರಿಸ್ತಪೂರ್ವ 3ರಿಂದ ಕ್ರಿಸ್ತಶಕ 33ರ ಕಾಲಘಟ್ಟದಲ್ಲಿ ನಡೆದ ಘಟನೆಗಳನ್ನು ಅಳವಡಿಸಿದ್ದಾನೆ. ಇವನ ಕೃತಿಯಲ್ಲಿ ಯೇಸುವಿನ ಜನನಕ್ಕೂ ಮುಂಚಿನ ವಿವರಗಳಿವೆ. ಮುಂದುವರಿದು ಉಳಿದ ಸುಸಂದೇಶಗಳಲ್ಲಿರುವಂತೆಯೇ ಸಾಮತಿಗಳ ಮೂಲಕ ದೇವರ ಸಾಮ್ರಾಜ್ಯವನ್ನು ಶಿಷ್ಯರಿಗೆ ಬೋಧಿಸುತ್ತಾ ಗಲಿಲೇಯದಿಂದ ಜೆರುಸಲೇಮಿಗೆ ಬಂದು, ಬಂಧಿತರಾಗಿ, ಶಿಲುಬೆಯ ಮರಣವನಪ್ಪಿ, ಪುನರುತ್ಥಾನರಾಗಿ, ಸ್ವರ್ಗಾರೋಹಣವಾಗುವವರೆಗಿನ ಘಟನೆಗಳನ್ನು ಕ್ರಮಬದ್ಧವಾಗಿ ತನ್ನ ಸುಸಂದೇಶವೆಂಬ ಕೃತಿಯಲ್ಲಿ ಅಳವಡಿಸಿದರೆ, ಯೇಸುವಿನ ಸ್ವರ್ಗಾರೋಹಣದ ನಂತರ ಪವಿತ್ರಾತ್ಮಭರಿತರಾದ ಪ್ರೇಷಿತರು ಮೈಕೊಡವಿ ಎದ್ದು ಯೇಸುಕ್ರಿಸ್ತರ ಸಂದೇಶವನ್ನು ಸುತ್ತಮುತ್ತಲ ಪ್ರಾಂತಗಳಿಗೆ ಸಾರುವ ಸಂದರ್ಭದಲ್ಲಿ ಅವರಿಗೆ ಆಗುವಂತಹ ಅನುಭವಗಳನ್ನು ತಿಳಿಸುವ, ಮತ್ತು ಅನೇಕ ಕಷ್ಟನಷ್ಟಗಳು ಎದುರಾದರೂ ಅಂಜದೆ, ಅಳುಕದೆ ತಮ್ಮ ಮಹತ್ಕಾರ್ಯಗಳನ್ನು ಮಾಡಿ ಮುಗಿಸುವ ಛಲದಿಂದ ಅವರು ಮನ್ನುಗ್ಗುವುದನ್ನು ಇನ್ನೊಂದು ಕೃತಿ, ‘ಪ್ರೇಷಿತರ ಕ್ರಿಯಾಕಲಾಪ‘ ಗಳಲ್ಲಿ ಕಾಣಬಹುದಾಗಿದೆ. ಕಣ್ಣಾರೆ ನೋಡದ ಅನೇಕ ವಿವರಗಳನ್ನು ಮೊದಲ ಕೃತಿಯಲ್ಲಿ ಲೂಕನು ಕಲೆಹಾಕಿದ್ದರೆ; ಪೇತ್ರನ ಧರ್ಮಪ್ರಸಾರ ಕಾರ್ಯಾಚರಣೆಯೊಂದಿಗೆ ಪೌಲ, ಬಾರ್ನಬ, ಮಾರ್ಕ ಮುಂತಾದವರೊಡನೆ ಸ್ವಯಂ ತಾನೂ ಸಹ ಸೇರಿ ಶುಭಸಂದೇಶ ಸಾರಿದ ವಿವರಗಳನ್ನು ಲೂಕನು ಪ್ರಸ್ತುತಪಡಿಸಿದ್ದಾನೆ.
ತನ್ನ ಸುಸಂದೇಶವನ್ನು ಉಳಿದವರ ಸುಸಂದೇಶಗಳಿಗಿಂತ ಭಿನ್ನವಾಗಿ ರಚಿಸಿರುವ ಲೂಕನು ಅದರಲ್ಲಿನ ಅನೇಕ ಘಟನೆಗಳ ಬಗ್ಗೆ ಸಂಶೋಧನೆ ನಡೆಸಲು ಅನುಕೂಲವಾಗುವಂತೆ ಹಲವು ವಿವರಗಳನ್ನು ಸಂಗ್ರಹಿಸಿಕೊಟ್ಟಿದ್ದಾನೆ. ತುಂಬು ಗರ್ಭಿಣಿಯಾಗಿದ್ದ ಮೇರಿಯನ್ನು ಕರೆದುಕೊಂಡು ಜೋಸೆಫ್ 'ಜನಗಣತಿ'ಯ ಸಲುವಾಗಿ ಬೆತ್ಲೆಹೆಮ್‌ಗೆ ಪ್ರಯಾಣಿಸುತ್ತಾನೆ. ಆದರೆ ಅದಕ್ಕಾಗಿ ಆಜ್ಞೆ ಹೊರಡಿಸಿದ್ದು ಆಗಿನ ಚಕ್ರವರ್ತಿ ‘ಗುಸ್ತಸ್ ಸೀಜ಼ರ್’ಎಂಬುದನ್ನು ಕೃತಿಯಲ್ಲಿ ಸೂಚಿಸಿ ಕೃತಿಗೆ ಚಾರಿತ್ರಿಕ ಮೌಲ್ಯವನ್ನು ತಂದಿತ್ತಿದ್ದಾನೆ. ಮುಂದುವರಿದು 'ಮೊತ್ತಮೊದಲನೆಯ ಆ ಜನಗಣತಿ, ಕುರೇನ್ಯನು ಸಿರಿಯ ನಾಡಿಗೆ ರಾಜ್ಯಪಾಲನಾಗಿದ್ದಾಗ...' (2:2) ಎಂದು ಕುರೇನ್ಯನ ಹೆಸರನ್ನೂ ಸೂಚಿಸಿ, ಅದು ಮೊತ್ತಮೊದಲನೆಯ ‘ಜನಗಣತಿ’ಎಂಬುದನ್ನೂ ಸ್ಪಷ್ಟಪಡಿಸಿ ಕೃತಿಗೆ ಇನ್ನಷ್ಟು ನಿಖರತೆಯನ್ನು ತಂದುಕೊಟ್ಟಿದ್ದಾನೆ. ಅಲ್ಲದೆ ಯೇಸುವು ಜನಿಸಿದ್ದು ಈ ಮೊತ್ತಮೊದಲ ಜನಗಣತಿಯ ವೇಳೆಯಲ್ಲಿ ಎಂಬುದನ್ನು ಓದುಗರಿಗೆ ತಿಳಿಯಪಡಿಸಿ ಯಾವ ದಿನ, ಯಾವ ಘಳಿಗೆಯಲ್ಲಿ ಯೇಸು ಜನಿಸಿರಬಹುದು ಎಂಬ ಸುಳಿವನ್ನೂ ನೀಡಿದ್ದಾನೆ. ಅದೇ ರೀತಿಯಲ್ಲಿ ಮುಂದೆ ಸ್ನಾನಿಕ ಯೊವಾನ್ನನ ತಾರುಣ್ಯದ ಸಮಯದಲ್ಲಿ, 'ಆಗ ಬೆಂಗಾಡಿನಲ್ಲಿ ಜಕರೀಯನ ಮಗ ಸ್ನಾನಿಕ ಯೊವಾನ್ನನಿಗೆ ದೇವರ ಸಂದೇಶದ ಬೋಧೆಯಾಯಿತು', ಎಂದು ತನ್ನ ಕೃತಿಯಲ್ಲಿ ನಿರೂಪಿಸುತ್ತಾ, ಅದಕ್ಕೂ ಮೊದಲೇ, 'ಅದು ತಿಬೇರಿಯಸ್ ಚಕ್ರವರ್ತಿಯ ಆಡಳಿತದ ಹದಿನೈದನೆಯ ವರ್ಷ. ಆ ಕಾಲದಲ್ಲಿ ಜುದೇಯ ಪ್ರಾಂತಕ್ಕೆ ಪೊನ್ಸೆಯುಸ್ (ಪೊಂತಿಯ) ಪಿಲಾತನು ರಾಜ್ಯಪಾಲನಾಗಿದ್ದನು. ಗಲಿಲೇಯ ಪ್ರಾಂತಕ್ಕೆ ಹೆರೋದನೂ ಇತುರೆಯ ಮತ್ತು ತ್ರಕೋನಿತಿ ಪ್ರಾಂತಗಳಿಗೆ ಇವನ ತಮ್ಮನಾದ ಫಿಲಿಪ್ಪನೂ ಮತ್ತು ಅಭಿಲೇನ ಪ್ರಾಂತಕ್ಕೆ ಲುಸಾನಿಯನೂ ಸಾಮಂತರಾಗಿದ್ದರು,' ಎಂದು ಆಗಿನ ಚಕ್ರವರ್ತಿ, ರಾಜ್ಯಪಾಲ ಮತ್ತು ಸಾಮಂತರ ಹೆಸರುಗಳನ್ನು ಉಲ್ಲೇಖಿಸಿದ್ದಾನೆ. ಅಲ್ಲದೆ 'ಆನ್ನನು ಮತ್ತು ಕಾಯಿಫನು ಅಂದಿನ ಪ್ರಧಾನ ಯಾಜಕರು' ಎಂಬದನ್ನೂ ತನ್ನ ಕೃತಿಯಲ್ಲಿ ಉಲ್ಲೇಖಿಸಿದ್ದಾನೆ.
'ಪಿಲಾತ', 'ಹೆರೋದ', 'ಫಿಲಿಪ್ಪ', ಮತ್ತು 'ಆನ್ನ', 'ಕಾಯಿಫ'ರ ಹೆಸರುಗಳನ್ನು ಉಳಿದ ಸುಸಂದೇಶಗಳಲ್ಲೂ ಕಾಣಬಹುದಾದರೂ ಆ ಕೃತಿಗಳಲ್ಲಿ ಅವುಗಳನ್ನು ಸೂಚಿಸಿರುವ ಸಂದರ್ಭಗಳೇ ಬೇರೆ ಎಂಬುದನ್ನು ಗಮನಿಸಬೇಕಾಗಿದೆ. ಈ ಏಳು ಅಧಿಕಾರಿಗಳ ಉಲ್ಲೇಖದಿಂದಾಗಿ ಮತ್ತು 'ತಿಬೇರಿಯಸ್ ಚಕ್ರವರ್ತಿಯ ಹದಿನೈದನೆಯ ವರ್ಷದಲ್ಲಿ...' ಎಂಬ ಸುಳಿವಿನಿಂದಾಗ ಸ್ನಾನಿಕ ಯೊವಾನ್ನನ ಬೋಧನೆಯ ಆರಂಭಕಾಲ ಯಾವುದೆಂಬುದನ್ನು ನಿಖರವಾಗಿ ತಿಳಿಸಲು ಲೂಕನು ಪ್ರಯತ್ನಿಸಿದ್ದಾನೆ. ಈ ನಿಖರತೆ ಉಳಿದ ಯಾವ ಸುಸಂದೇಶಗಳಲ್ಲೂ ಕಂಡು ಬರುವುದಿಲ್ಲ. ಲೂಕನು ನೀಡಿದ ಉಲ್ಲೇಖಗಳಿಂದಲೇ ಸ್ನಾನಿಕ ಯೊವಾನ್ನನ ಸೇವಾವೃತ್ತಿಯ ಆರಂಭ ಕಾಲದಲ್ಲಿ ಆತನ ವಯಸ್ಸೆಷ್ಟಿರಬಹುದು ಎಂಬುದನ್ನು ಲೆಕ್ಕಹಾಕಲು ಸಾಧ್ಯವಾಗುತ್ತದೆ. ಹೆಚ್ಚೂ ಕಡಿಮೆ ಇದೇ ಸಮಯದಲ್ಲೇ ಯೇಸುವೂ ಸಹ ತಮ್ಮ ಸೇವಾಕಾರ್ಯವನ್ನು ಆರಂಭಿಸುವುದು. ಆಗ ಅವರಿಬ್ಬರ ವಯಸ್ಸೂ ಹೆಚ್ಚೂ ಕಡಿಮೆ ಮೂವತ್ತು ವರ್ಷಗಳಾಗಿರಬಹುದು ಎಂಬುದನ್ನು ತಿಳಿಯಲು ಇದು ಸಹಕಾರಿಯಾಗುತ್ತದೆ. ಮಾರ್ಕ ಮತ್ತು ಯೊವಾನ್ನನ ಕೃತಿಗಳು ಆರಂಭಗೊಳ್ಳುವುದೇ ಸ್ನಾನಿಕ ಯೊವಾನ್ನನ ಪರಿಚಯದೊಂದಿಗೆ. ಆದರೆ ಮತ್ತಾಯ ಮತ್ತು ಲೂಕರು ತಮ್ಮ ಕೃತಿಗಳಲ್ಲಿ ಯೇಸುವಿನ ಜನನ ಕಾಲಕ್ಕೂ ಮುಂಚಿನ ವಿವರಗಳನ್ನು ಕಲೆಹಾಕುವ ಪ್ರಯತ್ನ ನಡೆಸಿದ್ದಾರೆ. ಲೂಕನಂತೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಇನ್ನೂ ಹೆಚ್ಚಿನ ವಿವರಗಳನ್ನು ಕಲೆಹಾಕಿದ್ದಾನಲ್ಲದೆ ಅವುಗಳ ಸತ್ಯಾಸತ್ಯತೆಯನ್ನು ಅರಿಯುವ ಪ್ರಯತ್ನವನ್ನೂ ನಡೆಸಿದ್ದಾನೆ ಎಂಬುದು ಆತನ ಕೃತಿಯಿಂದ ಸ್ಪಷ್ಟವಾಗುತ್ತದೆ.
ಮರಿಯಳನ್ನು ಜೋಸೆಫನು ವರಿಸುವ ಮೊದಲೇ ಆಕೆ ಪವಿತ್ರಾತ್ಮರಿಂದ ಗರ್ಭಿಣಿಯಾದಳು ಎಂಬ ವಿಚಾರ ಮತ್ತಾಯನ ಕೃತಿಯಿಂದ ತಿಳಿದುಬರುತ್ತದೆ. ಮತ್ತಾಯನನ್ನು ಹೊರತುಪಡಿಸಿದರೆ ಆ ಘಟನೆಯ ಬಗ್ಗೆ ವಿವರಗಳು ದೊರಕುವುದು ಲೂಕನ ಕೃತಿಯಲ್ಲೇ. ಈ ಘಟನೆಗೆ ಸುಸಂದೇಶಕರ್ತರು ಮಾತ್ರವಲ್ಲ ಯೇಸುವಿನ ಶಿಷ್ಯಂದಿರೂ ಸಾಕ್ಷಿಗಳಲ್ಲ. ಅದೇ ಕಾರಣಕ್ಕೆ ಮಾರ್ಕ ಮತ್ತು ಯೊವಾನ್ನರು ಈ ಬಗ್ಗೆ ತಮ್ಮ ಕೃತಿಗಳಲ್ಲಿ ಏನನ್ನೂ ತಿಳಿಸುವುದಿಲ್ಲ. ಆದರೆ ಲೂಕನು ತನ್ನ ಕೃತಿಯಲ್ಲಿ, ಗಾಬ್ರಿಯಲ್ ದೂತನು ಮರಿಯಳಿಗಿತ್ತ ಸಂದೇಶವನ್ನು ಹೆಚ್ಚುವರಿಯಾಗಿ ಸೇರಿಸಿದ್ದಾನಲ್ಲದೇ ಇನ್ನಷ್ಟು ಹಿಂದಕ್ಕೆ ಹೋಗಿ ಸ್ನಾನಿಕ ಯೊವಾನ್ನನ ಮಾತಾಪಿತೃಗಳನ್ನೂ ಹೆಸರಿಸಿ, ದೂತನು ಅವರಿಗೂ ನೀಡಿದ ಸಂದೇಶವನ್ನೂ ವಿವರಿಸಿದ್ದಾನೆ. ಮೊದಲು ನಂಬದೇ ಹೋದ ಜಕರೀಯನಿಗೆ ಶಾಪವು ತಟ್ಟಿ, ಯೊವಾನ್ನನ ಜನನ ಮತ್ತು ಅವನಿಗೆ ಹೆಸರನ್ನಿಡುವ ದಿನಗಳವರೆಗೆ ಆತ ಮೂಕನಾಗಿಯೇ ಉಳಿಯುತ್ತಾನೆ ಎಂಬುದನ್ನು ತಿಳಿಸಿಕೊಟ್ಟಿದ್ದಾನೆ.
ಪ್ರಾಯಶಃ ಲೂಕನು ತನ್ನ ಕೃತಿಯ ರಚನೆಯ ಸಂದರ್ಭದಲ್ಲಿ, ಎಲಿಜಬೆತಳನ್ನೂ ಮಾತೆ ಮೇರಿಯನ್ನೂ ಭೇಟಿಯಾಗುವ ಘಟನೆಯೂ ಸೇರಿದಂತೆ ಮೇಲಿನ ಎಲ್ಲಾ ಘಟನೆಗಳ ವಿವರಗಳನ್ನು ಯೇಸುವಿನ ಮಾತೆ ಮರಿಯಳಿಂದ ಮತ್ತು ನಜರೇತಿನ ಸುತ್ತಮುತ್ತಲಿನ ಪ್ರದೇಶದ ಜನರಿಂದ ತಿಳಿದು ಮಾಹಿತಿಗಳನ್ನು ಕಲೆಹಾಕಿರಬಹುದಾದ ಸಾಧ್ಯತೆಗಳಿವೆ. ಲೂಕನು ಮರಿಯಳನ್ನು ಸಂದರ್ಶಿಸಿದ್ದಾನೆ ಎನ್ನುವುದಕ್ಕೆ ಪೂರಕವಾಗುವ ಎರಡು ವಾಕ್ಯಗಳನ್ನು ಲೂಕನ ಕೃತಿಯಲ್ಲಿ ಗಮನಿಸಬಹುದಾಗಿದೆ. ದೇವದೂತರು ಕುರಿಗಾಹಿಗಳಿಗೆ ನೀಡಿದ ಸಂದೇಶದ ಮೇರೆಗೆ ಅವರು ಜಗದ್ರಕ್ಷಕ ಶಿಶುವನ್ನು ಕಾಣಲು ಬರುತ್ತಾರೆ. ಬಂದವರು ತಮಗೆ ದೂತ ಪರಿವಾರವು ಕಾಣಿಸಿಕೊಂಡ ಬಗ್ಗೆ ಮರಿಯ ಮತ್ತು ಜೋಸೆಫರಿಗೆ ತಿಳಿಯಪಡಿಸುತ್ತಾರೆ. ಆಗ, 'ಮರಿಯಳು ಈ ವಿಷಯಗಳನ್ನೆಲ್ಲಾ ಮನಸ್ಸಿನಲ್ಲಿಯೇ ಇಟ್ಟುಕೊಂಡು ಆಲೋಚಿಸುತ್ತಾ ಬಂದಳು' (2:19) ಎಂಬ ವಾಕ್ಯವನ್ನು ಉದ್ದೇಶಪೂರ್ವಕವಾಗಿ ಲೂಕನು ತನ್ನ ಕೃತಿಯಲ್ಲಿ ಸೇರಿಸಿದ್ದಾನೆ. ಇದೇ ರೀತಿಯಲ್ಲಿ, ಯೇಸುವು ಹನ್ನೆರಡನೆಯ ವಯಸ್ಸಿನಲ್ಲಿ ದೇವಾಲಯದಲ್ಲಿ ಕಳೆದುಹೋದಾಗ ಅವರನ್ನು ಹುಡುಕಿಕೊಂಡು ಬಂದ ಮಾತಾಪಿತೃಗಳಿಗೆ, ಅವರು ದೇವಾಲಯದ ಬೋಧಕರ ಮಧ್ಯೆ ಕುಳಿತು ಚರ್ಚಿಸುತ್ತಿರುವುದು ಕಂಡುಬರುತ್ತದೆ. ಆ ಘಟನೆಯ ವೇಳೆಯಲ್ಲೂ, 'ಈ ವಿಷಯಗಳನ್ನೆಲ್ಲಾ ತಾಯಿ ಮರಿಯಳು ತನ್ನ ಮನಸ್ಸಿನಲ್ಲಿ ಗ್ರಹಿಸಿಟ್ಟುಕೊಂಡಳು' (2:51) ಎಂದು ಲೂಕನು ತಿಳಿಸಿದ್ದಾನೆ. ಈ ಎರಡೂ ಸಂದರ್ಭಗಳಲ್ಲಿ ಕಾಣಬರುವ, 'ಆಲೋಚಿಸುತ್ತಾ ಬಂದಳು' ಮತ್ತು 'ಗ್ರಹಿಸಿಟ್ಟುಕೊಂಡಳು' ಎಂಬ ಪದಗಳು ಸ್ವಯಂ ಲೇಖಕನೇ ಮರಿಯಳನ್ನು ಕಂಡು ಆಕೆಯ ಮನದಾಳದಲ್ಲಿದ್ದ ವಿಷಯಗಳನ್ನು ಸಂಗ್ರಹಿಸಿ ಬರೆದಿದ್ದಾನೆ ಎಂಬುದಕ್ಕೆ ಸ್ಪಷ್ಟ ಸೂಚನೆಗಳಾಗಿವೆ.
 ಇದೇ ರೀತಿಯಲ್ಲಿ ಲೂಕನು ಇನ್ನೂ ಅನೇಕರನ್ನು ಸಂದರ್ಶಿಸಿ ಅನೇಕ ವಿವರಗಳನ್ನು ಪಡೆದು ತನ್ನ ಕೃತಿಯಲ್ಲಿ ಅಡಕಗೊಳಿಸಿದ್ದಾನೆ. ಸ್ನಾನಿಕ ಯೊವಾನ್ನನ ಕುರಿತೂ ಅನೇಕ ವಿವರಗಳನ್ನು ಸಂಗ್ರಹಿಸಿದ್ದಾನೆ. ಲೂಕನ ಜನನದ ಸಂದರ್ಭದಲ್ಲಿ ಮಗುವಿಗೆ ಹೆಸರನ್ನಿಡುವಾಗ ಏನು ಹೆಸರಿಡಬೇಕೆಂದು ಜಕರೀಯನ ಬಳಿ ಕೇಳಲಾಗಿ, ಮಾತನ್ನಾಡಲಾಗದ ಜಕರೀಯನು ಹಲಗೆಯೊಂದನ್ನು ತರಿಸಿಕೊಂಡು ಅದರ ಮೇಲೆ 'ಯೊವಾನ್ನ' ಎಂದು ಬರೆಯುತ್ತಾನೆ. ಅದೇ ಘಳಿಗೆಯಲ್ಲಿ ಅವನ ನಾಲಿಗೆಯು ಸಡಿಲವಾಗಿ ಅವನು ಮಾತನಾಡಲು ಆರಂಭಿಸುತ್ತಾನಲ್ಲದೆ, ಮೊದಲು ದೇವರಿಗೆ ಸ್ತುತಿಯನ್ನು ಸಲ್ಲಿಸುತ್ತಾನೆ. ಈ ವಿವರಗಳನ್ನು ತನ್ನ ಕೃತಿಯಲ್ಲಿ ಸೇರಿಸಿದ ಲೂಕನು, 'ಕೇಳಿದವರೆಲ್ಲರೂ ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, 'ಈ ಮಗು ಮುಂದೆ ಎಂಥವನಾಗುವನೋ!' ಎಂದುಕೊಂಡರು' (1:66 ( ಎಂಬುದಾಗಿ ಬರೆದಿದ್ದಾನೆ. ಇಲ್ಲಿಯೂ 'ಕೇಳಿದವರೆಲ್ಲರೂ...ಮನಸ್ಸಿನಲ್ಲಿಟ್ಟು ಕೊಂಡು' ಎಂಬ ಪದಪ್ರಯೋಗ ಮಾಡಿ, ಅವರ ಅಂತರಾಳದಲ್ಲಿ ದಾಖಲೆಯಾದ ವಿಷಯಗಳನ್ನು ತಾನು ಸಂಗ್ರಹಿಸಿದ್ದೇನೆ ಎಂಬ ಸೂಚನೆಯನ್ನು ನೀಡಿದ್ದಾನೆ.
ಪ್ರತಿ ಸುಸಂದೇಶದ ಕೃತಿಗಳಲ್ಲೂ ಇತರ ಕೃತಿಗಳಲ್ಲಿರದ ಮಾಹಿತಿಗಳು ಇರುವಂತೆಯೇ, ಲೂಕನ ಕೃತಿಯಲ್ಲೂ ಹೊಸ ಮಾಹಿತಿಗಳು ಕಾಣಸಿಗುತ್ತವೆಯಾದರೂ ಲೂಕನ ಗ್ರಂಥದಲ್ಲಂತೂ ಹೊಸ ಮಾಹಿತಿಗಳು ಹೇರಳವಾಗಿವೆ. ಅವು: ಸ್ನಾನಿಕ ಯೊವಾನ್ನನ ಜನನದ ಕುರಿತು ಜಕರೀಯನಿಗೆ ಗಾಬ್ರಿಯೆಲ್ ದೂತನಿಂದ ದೊರೆತ ಮುನ್ಸೂಚನೆ, ಗಾಬ್ರಿಯೆಲ್ ದೂತನು ಮರಿಯಳಿಗೆ ಸಂದೇಶವಿತ್ತದ್ದು, ಎಲಿಜ಼ಬೆತಳು ಮರಿಯಳನ್ನು ಸಂಧಿಸಿದ್ದು, ಮರಿಯಳ ಸ್ತುತಿ, ಸ್ನಾನಿಕ ಯೊವಾನ್ನನ ಜನನ, ಜಕರೀಯನ ಪ್ರವಾದನೆ, ಕುರಿಗಾಹಿಗಳಿಗೆ ದೇವದೂತರು ನೀಡಿದ ಸಂದೇಶ, ಯೇಸುವಿನ ನಾಮಕರಣ, ದೇವಾಲಯದಲ್ಲಿ ಯೇಸುಬಾಲರ ಸಮರ್ಪಣೆ, ನಜರೇತಿಗೆ ಮರಳಿದ್ದು, ದೇವಾಲಯದಲ್ಲಿ ಯೇಸು ಕಾಣೆಯಾದದ್ದು, ಸುಖಪುರುಷರನ್ನು ಧಿಕ್ಕರಿಸಿದ್ದು, ವಿಧವೆಯ ಮಗನಿಗೆ ನೀಡಿದ ಜೀವದಾನ, ಲೋಕನೀತಿಯ ಹೋಲಿಕೆ, ಯೇಸುವಿನ ಕಾಲನ್ನು ತೊಳೆದ ಪತಿತೆ, ಯೇಸುವಿನ ಭಕ್ತೆಯರು, ಜೀವದ ಅಳಿವು ಉಳಿವಿನ ಬಗ್ಗೆ, ಯೇಸುವನ್ನು ಬರಗೊಳಿಸದ ಸಮಾರಿಯದವರು, ಎಪ್ಪತ್ತೆರಡು ಮಂದಿಯ ನಿಯೋಗ ಮತ್ತು ಅವರ ವರದಿ, ಸಹೃದಯವಂತ ಸಮಾರಿತನ ಸಾಮತಿ, ಮಾರ್ತಾ ಮತ್ತು ಮರಿಯಳು, ಪ್ರಾರ್ಥನೆಯ ಫಲ, ಮಾತೆಗಿಂತ ಮಿಗಿಲಾದವರು, ದಡ್ಡ ಧನಿಕನ ಸಾಮತಿ, ಸದಾ ಸಿದ್ಧರಾಗಿರಲು ಸೂಚನೆ, ಪಾಪಕ್ಕೆ ವಿಮುಖರಾಗಿರಲು ಸೂಚನೆ, ಹಣ್ಣುಬಿಡದ ಅಂಜೂರದ ಸಾಮತಿ, ಗೂನಿಯನ್ನು ಗುಣಪಡಿಸಿದ್ದು, ಆರೋಗ್ಯ ಪಡೆದ ಜಲೋದರ ರೋಗಿ, ದೀನ ಸ್ಥಾನಮಾನ, ಧನ್ಯವಾದ ದಾನ, ಕಳೆದುಹೋದ ನಾಣ್ಯ, ದುಂದುಗಾರ ಮಗನ ಸಾಮತಿ, ಕುಯುಕ್ತಿಯುಳ್ಳ ಮೇಸ್ತ್ರಿಯ ಸಾಮತಿ, ಧನಿಕ ಮತ್ತು ಲಾಜ಼ರ್, ವಿಶ್ವಾಸದ ಶಕ್ತಿ, ದೇವರ ಸೇವಕರು, ಕುಷ್ಟರೋಗಿಯ ಕೃತಜ್ಞತೆ, ನಿರಂತರ ಪ್ರಾರ್ಥನೆಗೆ ಉಪಮೆ, ಫರಿಸಾಯ ಮತ್ತು ಸುಂಕದವನ ಪ್ರಾರ್ಥನೆ, ಮರವೇರಿದ ಜಕ್ಕಾಯ, ಜೆರುಸಲೇಮಿಗಾಗಿ ಕಂಬನಿ, ಕಲ್ಲಿನ ಮೇಲೆ ಕಲ್ಲು ಉಳಿಯದು, ಮುಂಜಾಗರೂಕತೆ, ನಾಯಕನು ಸೇವಕನಾಗಲಿ, ಆಪ್ತಶಿಷ್ಯರಿಗೆ ಸೂಕ್ತ ಸಂಭಾವನೆ, ಪಾತಕರಲ್ಲಿ ಒಬ್ಬನಂತೆ ಪರಿಗಣಿತರಾದ ಯೇಸು, ಹೆರೋದನ ಮುಂದೆ ಯೇಸು, ಇವರನ್ನು ಕ್ಷಮಿಸು ತಂದೆ, ಯೇಸುವಿನ ಶವಸಂಸ್ಕಾರ, ಮತ್ತು ಬೆಥಾನಿಯದಲ್ಲಿ ಸ್ವರ್ಗಾರೋಹಣ ಮುಂತಾದ ಘಟನೆಗಳು ಮತ್ತು ಸಾಮತಿಗಳು ಇತರರ ಸುಸಂದೇಶಗಳಲ್ಲಿ ಓದಲು ಸಿಗುವುದಿಲ್ಲ.
ಯೇಸುವನ್ನು ಬಂಧಿಸಲು ಬಂದವರಲ್ಲಿ ಒಬ್ಬನ ಕಿವಿಯನ್ನು ಶಿಷ್ಯರಲ್ಲೊಬ್ಬನು ಕತ್ತರಿಸಿ ಹಾಕಿದ ಬಗ್ಗೆ ಉಳಿದ ಸುಸಂದೇಶಗಳಲ್ಲಿ ಮಾಹಿತಿಯಿರುವಂತೆಯೇ ಲೂಕನ ಕೃತಿಯಲ್ಲೂ ಇದೆ. ಆದರೆ, 'ಯೇಸುವು, "ಸಾಕು ನಿಲ್ಲಿಸಿ," ಎಂದು ಹೇಳಿ ಅವನ ಕಿವಿಯನ್ನು ಮುಟ್ಟಿ ಗುಣಪಡಿಸಿದರು,' ಎಂಬ ಯೇಸುವಿನ ಸಹೃದಯತೆಯನ್ನು ಬಿಂಬಿಸುವ ವಾಕ್ಯವೊಂದನ್ನು ಲೂಕನು ತನ್ನ ಕೃತಿಯಲ್ಲಿ ಸೇರಿಸಿಕೊಂಡಿದ್ದಾನೆ. ಇಂತಹ ಅನೇಕ ಸಂಗತಿಗಳಿಂದ ಕೂಡಿದ ಲೂಕನ ಸುಸಂದೇಶ ಒಂದು ರೀತಿಯ ಪರಿಪೂರ್ಣ ಸುಸಂದೇಶವೆಂದು ಹೇಳಬಹುದಾದ ಕೃತಿಯಾಗಿದೆ.
ಯೊವಾನ್ನನ 'ಸುಸಂದೇಶ` ರಚನೆಗೆ ಮುನ್ನ ಸುಮಾರು ನಲ್ವತ್ತು ವರ್ಷಗಳ ಹಿಂದೆಯೇ ಲೂಕನ ಕೃತಿ ಸೃಷ್ಟಿಯಾಗಿದ್ದು ಇತರ ಸುಸಂದೇಶಗಳಲ್ಲಿರುವ ಮಾಹಿತಿಗಳ ಜೊತೆಗೆ ಅನೇಕ ಹೊಸ ಮಾಹಿತಿಗಳೂ ಸೇರ್ಪಡೆಗೊಂಡಿದ್ದು ಅದು ಆಗಿನ ಸಂದರ್ಭಕ್ಕೆ ತಕ್ಕಂತೆ ಪರಿಪೂರ್ಣ ಕೃತಿಯೆನಿಸುತ್ತದೆ. ಆದರೆ ತನ್ನ ಕೃತಿಯ ರಚನೆಗೂ ಮೊದಲು ಮತ್ತಾಯನ ಕೃತಿಯನ್ನು ಅಭ್ಯಸಿಸಿರಬಹುದಾದ ಲೂಕನು ಅದರಲ್ಲಿನ-ಜ್ಯೋತಿಶ್ಯಾಸ್ತ್ರಜ್ಞರು ಯೇಸುವನ್ನು ಕಾಣಲು ಬಂದದ್ದು, ಜೋಸೆಫ್ ಮತ್ತು ಮೇರಿಯು ಹೆರೋದನಿಗೆ ಹೆದರಿ ಈಜಿಪ್ತಿಗೆ ಪಲಾಯನ ಮಾಡಿದ್ದು, ಕೂಸುಗಳ ಕಗ್ಗೊಲೆ, ಹೆರೋದನ ಮರಣಾನಂತರ ನಜರೇತಿಗೆ ಹಿಂತಿರುಗಿದ್ದು, ಇತ್ಯಾದಿ ವಿವರಗಳನ್ನು ಏಕೆ ಕೈಬಿಟ್ಟಿದ್ದಾನೆ ಎಂಬುದು ರಹಸ್ಯವಾಗುಳಿಯುತದೆ. ಇದಕ್ಕೆ ಕಾರಣವೇನೆಂದು ತಿಳಿಯಬೇಕಾದರೆ ಅವನ ಕೃತಿಯಲ್ಲಿನ ಪೀಠಿಕೆಯನ್ನು ಮೊದಲು ಓದಬೇಕು: 'ಸನ್ಮಾನ್ಯ ಥಿಯೊಫಿಲನೇ, ನಮ್ಮ ಮಧ್ಯೆ ನೆರವೇರಿರುವ ಘಟನೆಗಳ ವರದಿಯನ್ನು ಬರೆದಿಡಲು ಹಲವರು ಪ್ರಯತ್ನಿಸಿದ್ದಾರೆ. ಪ್ರಾರಂಭದಿಂದ ಕಣ್ಣಾರೆ ಕಂಡು ಶುಭಸಂದೇಶವನ್ನು ಸಾರಿದವರಿಂದಲೇ ನಾವು ಕೇಳಿದ ಘಟನೆಗಳಿವು. ನಾನು ಆಮೂಲಾಗ್ರವಾಗಿ ವಿಚಾರಿಸಿದ ಅವೆಲ್ಲವನ್ನು ನಿನಗೋಸ್ಕರ ಕ್ರಮಬದ್ಧವಾಗಿ ಬರೆಯುವುದು ಉಚಿತವೆಂದು ನನಗೂ ತೋರಿತು. ನಿನಗೆ ಉಪದೇಶಿಸಲಾಗಿರುವ ವಿಷಯಗಳು ಸತ್ಯವಾದುವೆಂದು ಇದರಿಂದ ನಿನಗೆ ಮನದಟ್ಟಾಗುವುದು'. ಎಂದು ಕೃತಿಯ ಆರಂಭದಲ್ಲಿ ತಿಳಿಸಿದ್ದಾನೆ. 'ಸನ್ಮಾನ್ಯ' ಎಂಬ ಪದವು ಪ್ರಾಯಶಃ ಲೂಕನ ಮುಖಾಂತರ ಕ್ರೈಸ್ತಧರ್ಮ ಸ್ವೀಕರಿಸಿದ 'ಥಿಯೋಫಿಲ' ಎಂಬ ವ್ಯಕ್ತಿಯು ಅತ್ಯಂತ ಗಣ್ಯನಾದ ವ್ಯಕ್ತಿಯಿರಬೇಕು ಎಂಬುದನ್ನುಸೂಚಿಸುತ್ತದೆ. ಆತನಿಗಾಗಿ ಅಥವಾ ಆತನ ಕೋರಿಕೆಯ ಮೇರೆಗೆ ಲೂಕನು ಈ ಸುಸಂದೇಶವನ್ನು ರಚಿಸಿರಬೇಕು ಎಂಬುದು ಮೇಲ್ನೋಟಕ್ಕೆ ಅನಿಸುತ್ತದೆ. ಆತನಿಗಾಗಿ ಅತ್ಯಂತ ಶ್ರದ್ಧೆಯಿಂದ ಕೃತಿಯಲ್ಲಿನ ಘಟನೆಗಳು ನಿಜಕ್ಕೂ ಸಂಭವಿಸಿರಬಹುದಾದ ಪ್ರದೇಶಕ್ಕೆ ತೆರಳಿ ಅಲ್ಲಿನ ಜನರನ್ನು ಕಂಡು ಅವರಿಂದ (ಅವರಲ್ಲಿ ಪ್ರೇಷಿತರೂ ಇರಬಹುದು) ಕೇಳಿತಿಳಿದ ವಿಷಯಗಳ ಆಧಾರದ ಮೇಲೆ ಸುಸಂದೇಶ ಕೃತಿಯನ್ನು ರಚನೆ ಮಾಡಿದ್ದಾನೆ. ಕೃತಿಯ ಪೀಠಿಕೆಯಲ್ಲೇ ಸೂಚಿಸಿರುವಂತೆ 'ಆಮೂಲಾಗ್ರವಾಗಿ ವಿಚಾರಿಸಿ', ಅರ್ಥಾತ್ ಆಳವಾಗಿ ಮತ್ತು ಆಧಾರಸಹಿತವಾಗಿ ತಿಳಿದ ಬಂದ ಸತ್ಯಗಳನ್ನು ಕೃತಿಯಲ್ಲಿ ಅಡಕಗೊಳಿಸಿರುವುದಾಗಿ ಲೂಕನು ತಿಳಿಸಿದ್ದಾನೆ. ಬಹುಶಃ ಸರಿಯಾದ ಆಧಾರಗಳು ದೊರಕದ ಕಾರಣ ಲೂಕನು ಕೆಲವನ್ನು ಕೈಬಿಟ್ಟಿದ್ದಾನೆ. ಈ ರೀತಿಯಲ್ಲಿ ಲೂಕನು ವಸ್ತುನಿಷ್ಟನಾಗಿ ತನ್ನ ಕೃತಿಯನ್ನು ರಚಿಸಿದ್ದಾನೆ ಎನ್ನಬಹುದು.
ಮತ್ತಾಯ, ಮಾರ್ಕ, ಯೊವಾನ್ನರಂತೆಯೇ ಲೂಕನೂ ಸಹ ತನ್ನಕೃತಿಯಲ್ಲಿ ಇದು ತನ್ನದೇ ಕೃತಿಯೆಂಬುದನ್ನು ಎಲ್ಲಿಯೂ ಪ್ರತಿಪಾದಿಸಲು ಹೋಗಿಲ್ಲ. ಆದರೆ ಎಲ್ಲರ ಕೃತಿಗಳಲ್ಲೂ ಕಂಡುಬರುವ ಆಂತರಿಕ ಸಾಕ್ಷ್ಯಗಳೇ ಕೃತಿಯ ಲೇಖಕರು ಇಂತಹವರಿರಬಹುದು ಎಂದು ಊಹಿಸಲು ಸಾಧ್ಯವಾಗುವಂತದ್ದು. ಉಳಿದವರ ಸುಸಂದೇಶಗಳಲ್ಲಿ ಇಲ್ಲದ; ಲೂಕನ ಕೃತಿಯಲ್ಲಿ ಮಾತ್ರವೇ ಕಾಣಲು ಸಿಗುವ ಅನೇಕ ವೈದ್ಯಕೀಯ ಪದಗಳ ಬಳಕೆ, ಗಿಡಮೂಲಿಕೆಗಳ ಹೆಸರು ಹಾಗೂ ಕೃತಿಯಲ್ಲಿ ಬರುವ ರೋಗಿಗಳ ರೋಗಲಕ್ಷಣಗಳ ವಿವರಗಳು ಸದರಿ ಕೃತಿಯನ್ನು ರಚಿಸಿದಾತ ಓರ್ವ ವೈದ್ಯ ಎನ್ನುವುದನ್ನು ಪುಷ್ಟೀಕರಿಸುತ್ತದೆ. ಸಹೃದಯವಂತ ಸಮಾರಿತನು ಗಾಯಗೊಂಡ ವ್ಯಕ್ತಿಯ ಗಾಯಗಳಿಗೆ ಎಣ್ಣೆಯನ್ನೂ ದ್ರಾಕ್ಷಾರಸವನ್ನು ಹಚ್ಚಿ ಅವುಗಳಿಗೆ ಬಟ್ಟೆ ಕಟ್ಟಿದ (10:34), ಎಂಬ ವಿವರವಿದೆ. ಅಂತೆಯೇ ಯೇಸು ಸಿಮೋನ ಮತ್ತು ಅಂದ್ರೆಯನ ಮನೆಗೆ ಹೋದಾಗ ಸಿಮೋನ ಪೇತ್ರನ ಅತ್ತೆ ಜ್ವರದಿಂದ ಮಲಗಿದ್ದು, ಯೇಸು ಆಕೆಯ ಕೈಹಿಡಿದು ಎಬ್ಬಿಸಿದಾಗ ಆಕೆಯ ಜ್ವರವು ಬಿಟ್ಟುಹೋಯಿತು, ಎಂಬ ವಿವರವನ್ನು ಮತ್ತಾಯ (8:14) ಮತ್ತು ಮಾರ್ಕ (1:30)ನ ಸುಸಂದೇಶಗಳಲ್ಲಿ ಕಾಣಬಹುದು. ಅವರಿಬ್ಬರಿಗೂ ಆಕೆಯ ಜ್ವರವು ಕೇವಲ ಜ್ವರವಾಗಿ ಕಾಣಿಸುತ್ತದೆ. ಆದರೆ ಲೂಕನ ಕೃತಿ (4:38)ಯಲ್ಲಿ ಆಕೆ 'ವಿಷಮ ಜ್ವರ'ದಿಂದ ನರಳುತ್ತಿದ್ದಳು ಎಂಬ ವಿವರವಿದೆ. ಸಮಾರಿತನು ಗಾಯಗೊಂಡು ಬಿದ್ದಿದ್ದವನ ಗಾಯಗಳಿಗೆ ತತಕ್ಷಣದ ವೈದ್ಯೋಪಚಾರಕ್ಕೆ ಸಿಗುವ ವಸ್ತುಗಳಾದ ಎಣ್ಣೆ ಮತ್ತು ದ್ರಾಕ್ಷಾರಸವನ್ನು ಬಳಸಿದನೆಂಬುದನ್ನೂ ಮತ್ತು ಜ್ವರದಿಂದ ನರಳುತ್ತಿರುವವರ (ಇತರರ ಸುಸಂದೇಶಗಳಲ್ಲಿ ಕೇವಲ ಜ್ವರವಾಗಿದ್ದ) ಜ್ವರದ ಲಕ್ಷಣವನ್ನು ತಿಳಿದು ಅದೇನೆಂಬುದನ್ನು ಸ್ಪಷ್ಟವಾಗಿ ತಿಳಿಸಲು ಓರ್ವ ವೈದ್ಯನಿಗೆ ಮಾತ್ರವೇ ಸಾಧ್ಯ! ಇವೆಲ್ಲವೂ ಆ ಕೃತಿಯ ಕರ್ತೃ ಲೂಕನೆಂಬುದನ್ನು ಸೂಚಿಸುತ್ತವೆ.
ವಿಶಿಷ್ಟಗಳಲ್ಲಿ ವಿಶಿಷ್ಟವಾದ ‘ಸುಸಂದೇಶ’ವೆಂಬ ಕೃತಿಯನ್ನೂ ಮತ್ತು ‘ಪ್ರೇಷಿತರ ಕ್ರಿಯಾ ಕಲಾಪ’ ಎಂಬ ಕೃತಿಯನ್ನೂ ನೀಡಿದ ಲೂಕನು ತನ್ನ 84ನೆಯ ವಯಸ್ಸಿನಲ್ಲಿ 'ಬೊಯೊಶಿಯ' ಎಂಬಲ್ಲಿ ದೈವಸಾನಿಧ್ಯವನ್ನು ಸೇರಿದನೆಂದು ಅಧಿಕೃತ ಮೂಲಗಳು ತಿಳಿಸುತ್ತವೆ. ಗ್ರೀಸ್‌ನ ಥೀಬ್ಸ್ ಎಂಬಲ್ಲಿ ಪತ್ತೆಯಾದ ಸಮಾಧಿಯಿಂದ ಲೂಕನ ಅವಶೇಷಗಳನ್ನು ತೆಗೆದು ಕ್ರಿಸ್ತಶಕ 357ರಲ್ಲಿ ಕಾನ್‌ಸ್ಟಂಟಿನೋಪಲ್‌ಗೆ ವರ್ಗಾಯಿಸಲಾಯಿತೆಂದು ಕೆಲವು ಮೂಲಗಳು ತಿಳಿಸುತ್ತವೆ. ಅಂತೆಯೇ ಅವರ ದೇಹವನ್ನು ಪಾದ್ವ (ಇಟಲಿ)ದ ಸಂತ ಜಿಯಸ್ಟಿನಾ ಅಬ್ಬೆಯಲ್ಲಿಯೂ, ತಲೆಯನ್ನು ಪ್ರಾಗ್ (ಜೆಕ್ ಗಣರಾಜ್ಯ)ನ ಸಂತ ವೈಟಸ್ ಪ್ರಧಾನಾಲಯದಲ್ಲೂ, ಎದೆಯ ಮೂಳೆಯೊಂದನ್ನು ಥೀಬ್ಸ್ (ಗ್ರೀಸ್)ನ ಸಮಾಧಿಯಲ್ಲೂ ಇರಿಸಲಾಗಿದೆಯೆಂಬ ವಿವರಗಳೂ ದೊರಕುತ್ತವೆ.

ಹಸುವಿನಂತೆ ನಿರ್ಮಲ ಮನಸ್ಸೂ ಹೃದಯವನ್ನೂ ಹೊಂದಿರುವ ಲೂಕನ ಚಿಹ್ನೆಯು 'ಹಸು'ವೇ ಆಗಿದ್ದು, ಇವರನ್ನು ‘ಕಲಾವಿದರ, ‘ಭೌತಶಾಸ್ತ್ರಜ್ಞರ’, ‘ಶಸ್ತ್ರಚಿಕಿತ್ಸಕರ’, ವಿದ್ಯಾರ್ಥಿಗಳ’ ಪಾಲಕ ಸಂತರನ್ನಾಗಿ ಮಾಡಲಾಗಿದೆ. ಅಕ್ಟೋಬರ್‌ 28ರಂದು ಇವರ ಹಬ್ಬವನ್ನು ಆಚರಿಸಲಾಗುತ್ತದೆ. ಇಟಲಿಯ ಪಾದ್ವಾದಲ್ಲಿ ಇವರ ಹೆಸರಿನ ಪ್ರಧಾನ ದೇವಾಲಯವಿದೆ.                                                     ***

Thursday, 13 December 2018

ಕಟ್ಟದಿರಿ ಗೋದಲಿಗಳ



ಕಟ್ಟದಿರಿ ಗೋದಲಿಗಳ 
ಹಾಡದಿರಿ ಭಜನೆಗಳ,
ತುತ್ತೂರಿ, ವಿಜೃಂಭಣೆಗಳ,
ಬಡಗಿಯ ಬಡಕೂಸಿಗೆ 
ಒಡವೆ ಕಾಸಿನ ಗೊಡವೆಯೇಕೆ?

ಊರದಿರಿ ಮಂಡಿಗಳ
ಉರಿಸದಿರಿ ಧೂಪಗಳ,
ಆಚಾರವಿಲ್ಲದ ಭಕುತಿ
ಹಿಡಿಕೆಇಲ್ಲದಸುತ್ತಿಗೆಯಂತೆ
ನಗುತಲಿಹನು ನನ್ನಪ್ಪ ಬಡಗಿ !

ಮರಳುಗಾಡಿನ ಕ್ರಾಂತಿ ನಾನು
ಗುಡಿಕಟ್ಟಿ ಬಚ್ಚಿಡಬೇಡಿ
ಬೀದಿ ಬದಿಯ ಬಂಡಾಯ ನಾನು
ಬಂಧಿಸಬೇಡಿ ಪೀಠ, ಪೆಟ್ಟಿಗೆಯಲಿ
ದೈವೀಕರಿಸಿ ದೂರವಿರಿಸದಿರಿ !

ಹೆರೋದ, ಪಿಲಾತ
ಫರಿಸಾಯ, ಸದ್ದುಕಾಯರ
ಸದ್ದಡಗಿಸಿ ತೊಡೆತಟ್ಟಿ
ಸತ್ಯವನು ಸಾರಲೆನಗೆ
ಶಿಲುಬೆಯಲಿ ಸಾವಿನ ಪಾಠ

ವೇಶ್ಯೆ, ಪಾಪಿ’  ಹಣೆಪಟ್ಟಿಯವರ
ರೊಟ್ಟಿಕಾಣದ ಕೇರಿ ಮಕ್ಕಳ
ಬಸವಳಿದು, ದಣಿವುಗೊಂಡವರ  
ತನುವು ತಣಿಯುವತನಕ
ಕಟ್ಟದಿರಿ ಗೋದಲಿಗಳ !

¨ ಡೇವಿಡ್ ಕುಮಾರ್.


ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...