ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸುಸ್ವಾಮಿಯ ಪಾಡುಗಳನ್ನು ಸ್ಮರಿಸುವ ಶಿಲುಬೆಹಾದಿಯ ತಿರುಜಾತ್ರೆ ಬೆಂಗಳೂರು ಮತ್ತು ಸುತ್ತಮುತ್ತಲ ಕಥೋಲಿಕ ಕ್ರೈಸ್ತರ ಆಧ್ಯಾತ್ಮಿಕ ತಾಣವಾಗಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ.
ಈ ಉತ್ತರಹಳ್ಳಿಯ ಅನ್ನಮ್ಮನ ದೆಸೆಯಿಂದ 'ಅನ್ನಮ್ಮ' ಎಂಬ ಎಂಬ ಹೆಸರು, ಅಮ್ಮ ಪ್ರತ್ಯಯ ಹಚ್ಚಿಕೊಂಡು ಆಗ್ನೆಸ್ ಆಗ್ನೇಸಮ್ಮ, ತೆರೇಸಾ ತೆರೇಸಮ್ಮ ಆಗಿ ಭಾರತೀಯ ಮೂಲದ ಜಾಡಿನ ಹೆಸರುಗಳೇ ಆಗಿ ಕನ್ನಡ ಕ್ರೈಸ್ತ ಮಹಿಳೆಯರ ಹೆಸರುಗಳಂತೆ ಈಗ ಕ್ರೈಸ್ತರ ಹೆಸರೇ ಆಗಿಬಿಟ್ಟಿದೆ.
ಅನ್ನಮ್ಮ ಹೆಸರಿನ ಮೂಲ ಅನ್ನ ಇದ್ದೀತು. ಅನ್ನ ಎನ್ನುವುದು ನಾಮಪದವಾದಾಗ, ಅದರ ಅರ್ಥ ಆಹಾರ, ಬೇಯಿಸಿದ ಅಕ್ಕಿ, ವಿಷ್ಣು, ಸೂರ‍್ಯ ಮತ್ತು ನೀರು ಎಂದಾಗುತ್ತದೆ. ಅದು ಗುಣವಾಚಕ ಪದವಾದಾಗ, ಆ ಪ್ರಕಾರವಾದ, ಅಂಥ ಎಂಬ ಅರ್ಥ ಮೂಡುತ್ತದೆ. ಅದು ಅನ್ನಶುದ್ಧಿಯಾದಾಗ ಅದರ ಅರ್ಥ ತುಪ್ಪ ಎಂದಾಗುತ್ತದೆ ಎಂದು ಶಬ್ದಾರ್ಥಕೋಶಗಳು ಹೇಳುತ್ತವೆ.
ಅನ್ನಮ್ಮ ಎಂಬ ಹೆಸರು ಅನ್ನಪೂರ್ಣೆ ಹೆಸರಿನ ಹ್ರಸ್ವಸ್ವರೂಪ ಎಂಬ ಮಾತು ಇದೆ. ಈ ಅನ್ನಪೂರ್ಣೆ- (ಅನ್ನದಿಂದ ತುಂಬಿದ, ಅನ್ನದಿಂದ ಪೂರ್ಣಗೊಂಡ) ಅನ್ನದೇವತೆ, ಆಹಾರದ ದೇವತೆ, ಧಾನ್ಯದೇವತೆ- ಸೃಷ್ಟಿ, ಅದರ ಚಾಲನೆ ಮತ್ತು ಲಯಗಳ ಪ್ರತೀಕವಾದ ತ್ರಿಮೂರ್ತಿ ದೇವರುಗಳಾದ ಬ್ರಹ್ಮ ವಿಷ್ಣು, ಮಹೇಶ್ವರರಲ್ಲಿ ಕೊನೆಯವ ಮಹೇಶ್ವರನ ಅಂದರೆ ಶಿವನ ಹೆಂಡತಿ ಪಾರ್ವತಿಯ ಇನ್ನೊಂದು ಹೆಸರೂ ಹೌದು. ಅವಳು ಪಾರ್ವತಿಯ ಒಂದು ಅವತಾರ.
ಪೌರಾಣಿಕ ಕತೆಯೊಂದರ ಪ್ರಕಾರ, ಒಂದು ಬಾರಿ ಪತ್ನಿ ಪಾರ್ವತಿಯೊಂದಿಗೆ ಮಾತನಾಡುವ ಸಂದರ್ಭದಲ್ಲಿ, ಪರಶಿವ 'ಆಹಾರ ಪದಾರ್ಥಗಳು ಸೇರಿದಂತೆ ವಿಶ್ವವೆಲ್ಲಾ ಕಣ್ಕಟ್ಟು, ಭ್ರಮೆ, ಮಾಯೆ' ಎಂದಾಗ ಸಕಲ ಚರಾಚರಗಳ, ಜಗತ್ತಿನ ಸಕಲ ವಸ್ತುಗಳ ದೈವಿಕ ತಾಯಿ ಎಂದು ಪೂಜೆಗೊಳ್ಳುವ ತಾಯಿ ಪಾರ್ವತಿಗೆ ಸಿಟ್ಟು ಬಂದು ಅವಳು ಯಾರ ಕಣ್ಣಿಗೂ ಗೋಚರಿಸದೇ ಮಾಯವಾಗುತ್ತಾಳೆ.
ತಾಯಿಯ ಅನುಪಸ್ಥಿತಿಯಲ್ಲಿ ಕಾಲವು ಸ್ತಬ್ಧವಾದಾಗ ಜಗತ್ತು ಸಂಚಲನೆ ಇಲ್ಲದೇ ಸ್ಥಿರವಾಗಿ ನಿಲ್ಲುತ್ತದೆ. ಬರಡಾದ ಜಗತ್ತಿನಲ್ಲಿ ಮಾನವನೂ ಸೇರಿದಂತೆ ಸಕಲ ಪ್ರಾಣಿಪಕ್ಷಿಗಳು ಆಹಾರವನ್ನು ಕಾಣದೇ ಕಂಗಾಲಾಗುತ್ತಾರೆ. ಜಗತ್ತಿನ ಈ ಬವಣೆಯನ್ನು ಕಂಡು ಮನಕರಗಿದ ಮಹಾತಾಯಿ ಪಾರ್ವತಿ ಕಾಶಿಯಲ್ಲಿ ಕಾಣಿಸಿಕೊಳ್ಳುತ್ತಾಳೆ. ಅಡುಗೆ ಮನೆ ಸಿದ್ಧವಾಗುತ್ತದೆ. ವಿಷಯ ತಿಳಿದ ಶಿವ ಅಲ್ಲಿಗೆ ಧಾವಿಸಿ ಬರುತ್ತಾನೆ. ಕಪಾಲವನ್ನು ಮುಂದೆ ಮಾಡಿ ಭಿಕ್ಷೆ ಬೇಡುತ್ತಾನೆ. ಲೌಕಿಕ ಜಗತ್ತು ಮಾಯೆಯಲ್ಲ ಎಂದು ಒಪ್ಪಿಕೊಳ್ಳುತ್ತಾನೆ. ಸಮಾಧಾನಗೊಂಡ ಪಾರ್ವತಿ ಪತಿ ಶಿವನಿಗೆ ತನ್ನ ಕೈಯಾರೆ ಉಣಬಡಿಸುತ್ತಾಳೆ. ಅಂದಿನಿಂದ ಪಾರ್ವತಿಗೆ ಅನ್ನಪೂರ್ಣೆ ಎಂಬ ಹೆಸರು ಪ್ರಾಪ್ತವಾಗುತ್ತದೆ.
ಭಾರತೀಯ ಮೂಲದ ಅನ್ನಮ್ಮ (ಅನ್ನದ ತಾಯಿ- ಅನ್ನವನ್ನು ಕೊಡುವ ತಾಯಿ) ಎಂಬ ಹೆಸರು, ಯೇಸುಸ್ವಾಮಿಯ ಅಜ್ಜಿಯ ಹೆಸರು ಆನ್ ಅದು ಭಾರತೀಕರಣಗೊಂಡು ಕ್ರೈಸ್ತ ಜನಸಮುದಾಯಗಳಲ್ಲಿ ಅನ್ನಮ್ಮ ಆಗಿದೆ. ಈ ಹೆಸರು ಕ್ರೈಸ್ತರ ಅದರಲ್ಲೂ ಮುಖ್ಯವಾಗಿ ಕಥೋಲಿಕ ಕ್ರೈಸ್ತರಲ್ಲಿ ಪ್ರಮುಖ ಹೆಸರಾಗಿ ರೂಪತಾಳಿರುವ ಅದಕ್ಕೆ ಈಗ ಸುಮಾರು 250 ವರ್ಷಗಳ ಸಂಭ್ರಮ ಎಂದರೆ ತಪ್ಪಾಗದು.
ಆಂಧ್ರಪ್ರದೇಶದ ಕ್ರೈಸ್ತರ ಆದಿ ತಾಯಿ ಅನ್ನಮ್ಮ:
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಹಳ್ಳಿಯೊಂದರ ಯುವತಿಯೊಬ್ಬಳು 'ಆನ್' ಎಂಬ ಹೆಸರು ತಳೆದು ಕ್ರೈಸ್ತಳಾಗಿ ಜ್ಞಾನಸ್ನಾನ ಪಡೆಯುತ್ತಾಳೆ. ಗುಂಟೂರು, ನೆಲ್ಲೂರು, ಚೆಂಗಲ್ ಪೇಟ್ ಜಿಲ್ಲೆಗಳಲ್ಲಿನ ಕಮ್ಮ ಜನಸಮುದಾಯದ ಬಹತೇಕ ಜನ ಕಥೋಲಿಕ ಕ್ರೈಸ್ತ ಧರ್ಮವನ್ನು ತಮ್ಮದನ್ನಾಗಿ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುವ ಈ ಮಹಿಳೆಯ ಜ್ಞಾನಸ್ನಾನದ ಪ್ರಕರಣದ ನಂತರದ ಮುಂದಿನ ದಾಖಲೆಗಳಲ್ಲಿ, ಅವಳನ್ನು ಅನ್ನಮ್ಮ ಎಂದು ಹೆಸರಿಸಲಾಗಿದೆ!
ಆ ಅನ್ನಮ್ಮಳ ಕುರಿತ ಈ ಪ್ರಕರಣದ ಮಾಹಿತಿ, ಸಿಕಂದರಾಬಾದ್‍ನಲ್ಲಿರುವ 'ದಿ ಜೆಸುಯಿಟ್ ಕರ್ನಾಟಕ್ ಮಿಷನ್ನಿನ ಆಂಧ್ರ ಜೆಸುಯಿಟರ ಪತ್ರಾಗಾರ (ಜೆಸುಯಿಟ್ ಆರ್ಕೈವಸ್ ಆಫ್ ಆಂಧ್ರ) ದಲ್ಲಿರುವ 'ಲೆಟರ್ಸ್ ಆಂಡ್ ಅದರ್ ರೈಟಿಂಗ್ಸ್ ಆಫ್ ದಿ ಮಿಷನರಿಸ್ ಹೂ ವರ್ಕಡ್ ಇನ್ ದಿ ಕರ್ನಾಟಕ್ ಕಿಂಗಡಂ' ಹೆಸರಿನಲ್ಲಿರುವ, ಪತ್ರದ ಸಂಖ್ಯೆ 296ರಲ್ಲಿ ದಾಖಲಾಗಿದೆ.
ಕ್ರಿಸ್ತಶಕ 1445ರ ಸುಮಾರು, ಸಂಗಮ ಮನೆತನಕ್ಕೆ ಸೇರಿದ್ದ ಇಮ್ಮಡಿ ದೇವರಾಯ ವಿಜಯನಗರ ಸಾಮ್ರಾಜ್ಯದ ಅಧಿಪತಿಯಾಗಿದ್ದ ಸಮಯದಲ್ಲಿ, ಅವನ ಆಸ್ಥಾನದಲ್ಲಿ ಒಬ್ಬ ಕ್ರೈಸ್ತ ಮಂತ್ರಿ (ದಿವಾನ) ಇದ್ದ ಎಂಬ ಲಿಖಿತ ಮಾಹಿತಿಗಳು ಲಭ್ಯವಿವೆ. ಆ ಮಂತ್ರಿಯನ್ನು ನಿಮೆಫೆಜಿರ್ ಎಂದು ಗುರುತಿಸಲಾಗುತ್ತದೆ. ಏಪ್ರಿಲ್‍ನಿಂದ ನವೆಂಬರ್‍ವರೆಗೂ ವಿಜಯನಗರ (ಹಂಪೆ)ದಲ್ಲಿ ತಂಗಿದ್ದ ಅಬಿರ್ ರಜಾಕ್ ಎಂಬ ಪ್ರವಾಸಿ ಈ ಮಾಹಿತಿಯನ್ನು ದಾಖಲಿಸಿದ್ದಾನೆಂದು ಜೆಸುಯಿಟ್ ಪಾದ್ರಿ ಎಚ್. ಹ್ಯೂಸ್ಟೆನ್ ಅವರ ಬರಹಗಳನ್ನು ಆಧರಿಸಿ ಫಾದರ್ ಐ ಅಂತಪ್ಪ ಅವರು, 2001ರಲ್ಲಿ ಪ್ರಕಟಗೊಂಡ ತಮ್ಮ ಉತ್ತರ ಕರ್ನಾಟಕದಲ್ಲಿ ಕ್ರೈಸ್ತ ಧರ್ಮದ ಉಗಮ (1800ಕ್ಕೂ ಹಿಂದೆ) ಪುಸ್ತಕದಲ್ಲಿ ಸ್ಪಷ್ಟಪಡಿಸಿದ್ದಾರೆ.
ಇದಾದ 60 ವರ್ಷಗಳ ನಂತರ 1505ರಲ್ಲಿ ಫ್ರಾನ್ಸಿಸ್ಕನ್ ಪಾದ್ರಿ, ಫಾದರ್ ಲೂಯಿ ದೆ ಸಾಲ್ವೆಡಾರ್ ಅವರು ಪೋರ್ಚುಗಲ್ ಅರಸನ ರಾಯಭಾರಿಯಾಗಿ ವಿಜಯನಗರಕ್ಕೆ ಭೇಟಿಕೊಟ್ಟ ನಂತರದಲ್ಲಿ ಕ್ರೈಸ್ತರ ಅಸ್ತಿತ್ವದ ಬಗ್ಗೆ ಅಧಿಕೃತ ಮಾಹಿತಿ ಸಿಗತೊಡಗುತ್ತದೆ. ಮುಂದೆ 1530ರಲ್ಲಿ ಭಾರತದ ನೆಲದಲ್ಲಿ ಕಾಲಿರಿಸಿದ ಇನ್ನೊಬ್ಬ ಫ್ರಾನ್ಸಿಸ್ಕನ್ ಪಾದ್ರಿ ಫಾದರ್ ಅಂತೋನಿಯೊ ಡಿ ಪಡ್ರೊ ಅವರ ಶ್ರಮದ ಫಲವಾಗಿ ವಿಜಯನಗರ ಅರಸರ ಆಡಳಿತದ ವ್ಯಾಪ್ತಿಗೆ ಸೇರಿದ್ದ ಪ್ರದೇಶಗಳಲ್ಲಿ ಹಾಗೂ ವಿಜಾಪುರದ ಇಬ್ರಾಹಿಂ ಆದಿಲ್ ಶಾಹಿಯ ( 1535-37) ಕಾಲದಲ್ಲಿ ಮುದಗಲ್ ಮತ್ತು ರಾಯಚೂರುಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕ್ರೈಸ್ತ ಧರ್ಮವನ್ನು ಅಪ್ಪಿಕೊಳ್ಳುತ್ತಾರೆ. ನಂತರ, 1542ರಲ್ಲಿ ಜೆಸುಯಿಟ್ ಸಭೆಯ ಪಾದ್ರಿಗಳು ವಿಜಯನಗರ ಅರಸರ ಆಡಳಿತದ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಾರೆ. 1652ರ ಹೊತ್ತಿಗೆ ಹೈದರಾಬಾದ್, ಗೊಲ್ಕೊಂಡ, ಮಚಲಿಪಟ್ನಂ, ನರಸಾಪುರ, ಬಿಮಲಿಪಟ್ಟಣಂ, ಶ್ರೀಕಾಕುಳಂಗಳಲ್ಲಿ ಚರ್ಚುಗಳನ್ನು ಕಟ್ಟಲಾಗುತ್ತದೆ.
ಆಂಧ್ರಪ್ರದೇಶದ ಕ್ರೈಸ್ತರ ಆದಿ ತಾಯಿ 'ಅನ್ನಮ್ಮ'ಳ ಪ್ರಭಾವ:
ಕಳೆದ ಶತಮಾನದ 1929ರಲ್ಲಿ ಪ್ರಕಟಗೊಂಡ, ತಮ್ಮ 'ಹಿಸ್ಟರಿ ಆಫ್ ತೆಲುಗು ಕ್ರಿಶ್ಚಿಯನ್ಸ್' ಹೊತ್ತಿಗೆಯಲ್ಲಿ ಆರ್.ಸಿ.ಪೌಲ್ ಅವರು, ಜೆಸುಯಿಟ್ ಪಾದ್ರಿ ಕಾಲ್ಮೆಟ್ ಅವರು 1735ರ ಸಾಲಿನ ಸೆಪ್ಟೆಂಬರ್ ತಿಂಗಳ 17ನೇ ದಿನದಂದು ರೋಮ್‍ನಲ್ಲಿನ ತಮ್ಮ ಕೇಂದ್ರ ಕಚೇರಿಗೆ ಕಳುಹಿಸಿದ ವರದಿ ಪತ್ರಗಳನ್ನು ಆಧರಿಸಿ ಅನ್ನಮ್ಮಳ ಪ್ರಕರಣವನ್ನು ದಾಖಲಿಸಿದ್ದಾರೆ.
ಅದರ ಸಾರಾಂಶ ಹೀಗಿದೆ: ಇದು ಕಮ್ಮ ಸಮುದಾಯದ ವ್ಯಕಿಯೊಬ್ಬರು ಕ್ರೈಸ್ತ ಧರ್ಮವನ್ನು ಅಪ್ಪಿಕೊಂಡ ಮೊದಲ ಪ್ರಕರಣ. ಕಾಕತೀಯ ಅರಸರ ಕಾಲದಿಂದಲೂ ತೆಲುಗು ಭಾಷಿಕ ಆಂಧ್ರಪ್ರದೇಶದಲ್ಲಿ ಕಮ್ಮ ಮತ್ತು ರೆಡ್ಡಿ ಸಮುದಾಯಗಳು ಬಹು ಪ್ರಭಾವಶಾಲಿಯಾದ ಸಮುದಾಯಗಳೆಂದು ಹೆಸರು ಮಾಡಿವೆ. ಗುಂಟೂರು ಜಿಲ್ಲೆಯ ಹಳ್ಳಿಯೊಂದರ ನಿವಾಸಿಯಾಗಿದ್ದ ಯುವತಿಯೊಬ್ಬಳು ಮಾಟದ ಪ್ರಭಾವಕ್ಕೆ ಒಳಗಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಳು. ಅವಳನ್ನು ಮದುವೆಯಾಗ ಬಯಸಿ ವಿಫಲನಾಗಿದ್ದ ಯುವಕನೊಬ್ಬ, ಅವಳು ಇನ್ನೊಬ್ಬರಿಗೆ ದಕ್ಕಬಾರದೆಂಬ ಉದ್ದೇಶದಿಂದ ಅವಳ ಮೇಲೆ ಮಾಟ ಮಾಡಿಸಿದ್ದನೆಂದು ಹೇಳಲಾಗುತ್ತದೆ. ಅವಳು ಪ್ರತಿ ರಾತ್ರಿಯನ್ನು ಮಾನಸಿಕ ಆಘಾತದಲ್ಲೇ ಕಳೆಯುತ್ತಿದ್ದಳು. ಅವಳ ಬದುಕು ಅತಂತ್ರವಾಗಿತ್ತು. ಅವಳ ಸಂಬಂಧಿಕರು, ತಮಗೆ ಪರಚಿತರಾದ ಮಾಟಗಾರರನ್ನು ಹುಡುಕಿ ಚಿಕಿತ್ಸೆ ಕೊಡಿಸಿದರು. ಅವಳ ಸಂಕಟ ಕಡಿಮೆಯಾಗಲಿಲ್ಲ. ಊರಲ್ಲಿನ ಪುರೋಹಿತರಲ್ಲಿ ಕಣಿ ಕೇಳಿಸಿದರೂ, ತಾಯಿತ ಕಟ್ಟಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಅವಳು ಸುಮಾರು ಆರು ತಿಂಗಳು ಕಾಲ ನೋವು ಅನುಭವಿಸಿ ಬಸವಳಿದಿದ್ದಳು. ನಂತರ ಊರಿಗೆ ಬಂದ ಜೆಸುಯಿಟ್ ಪಾದ್ರಿಯ ಮುಂದೆ ತಂದು ನಿಲ್ಲಿಸಿದಾಗ, ಆ ಪಾದ್ರಿ ಅವಳನ್ನು ಸ್ವಸ್ಥಗೊಳಿಸುವ ಭರವಸೆ ಕೊಟ್ಟರು. ಅವಳು ಪೂರ್ಣ ಮನಸ್ಸಿನಿಂದ ಯೇಸುಸ್ವಾಮಿಯ ಧ್ಯಾನ ಮಾಡಿದಾಗ ಸ್ವಸ್ಥಳಾದಳು. ನಂತರ ಜ್ಞಾನಸ್ನಾನ ಪಡೆದು ಕ್ರೈಸ್ತಳಾದಾಗ, ಅವಳಿಗೆ ಯೇಸುಸ್ವಾಮಿಯ ಅಜ್ಜಿಯ ಹೆಸರನ್ನು ನೆನೆದು ಆನ್ ಎಂದು ನಾಮಕರಣ ಮಾಡಲಾಯಿತು. (ಸ್ಥಳೀಯರ ಬಾಯಲ್ಲಿ ಅದು ಅನ್ನ ಆಗಿ, ಈ ಮೊದಲೆ ಜನಪದರಲ್ಲಿದ್ದ ಅನ್ನಪೂರ್ಣೆ ಹೆಸರಿಗೆ ಹತ್ತಿರದ ಅನ್ನಮ್ಮ, ಕ್ರೈಸ್ತ ಜನಪದರ ಬಾಯಲ್ಲಿ 'ಅನ್ನಮ್ಮ' ಎಂದಾಗಿಬಿಟ್ಟಿರಬೇಕು.)
ಅನ್ನಮ್ಮ ಮಾಟದಿಂದ ಮುಕ್ತಳಾದ ಸಂಗತಿ ಕಾಳ್ಗಿಚ್ಚಿನಂತೆ ಸುತ್ತಲ ಊರುಗಳಲ್ಲಿ ಹರಡಿತು. ಕಮ್ಮ ಸಮುದಾಯವೇ ಪ್ರಧಾನವಾಗಿರುವ ಗುಂಟೂರು, ನೆಲ್ಲೂರು ಮತ್ತು ಚೆಂಗಲ್ ಪೇಟ್ ಜಿಲ್ಲೆಗಳಲ್ಲಿ ಕಮ್ಮ ಜನರು ಸಾರಾಸಗಟಾಗಿ ಕ್ರೈಸ್ತರಾಗಿ ಮತಾಂತರಗೊಂಡರು. ಈ ಜಿಲ್ಲೆಗಳಲ್ಲಿನ ಬಹುತೇಕ ಕ್ರೈಸ್ತ ಜನರು ತಮ್ಮ ಮೂಲವನ್ನು ಅನ್ನಮ್ಮಳ ಹೆಸರಿನೊಂದಿಗೆ ಜೋಡಿಸಿಕೊಳ್ಳುತ್ತಾರೆ. ಮತ್ತು ಅನ್ನಮ್ಮ ಎಂಬ ಹೆಸರು ಅಲ್ಲಿನ ಕ್ರೈಸ್ತರಲ್ಲಿ ಬಹು ಮೆಚ್ಚುಗೆಯ ಹೆಸರಾಗಿ ಬಳಕೆಗೆ ಬಂದಿತು. ಹದಿನೆಂಟನೇ ಶತಮಾನದಲ್ಲಿ ಕಮ್ಮ ಸಮುದಾಯದ ಬಹಳಷ್ಟು ಜನರು ಕ್ರೈಸ್ತ ಧರ್ಮವನ್ನು ಅಪ್ಪಿಕೊಳ್ಳಲು ಈ ಅನ್ನಮ್ಮಳ ಪ್ರಕರಣ ಕಾರಣವಾಗಿದೆ.
ಬ್ರಿಟಿಷರ ಕಾಲದ ಮದ್ರಾಸ್ ಪ್ರೆಸಿಡೆನ್ಸಿ ಇದ್ದಾಗ ಇದ್ದ ಗುಂಟೂರು ಮತ್ತು ನೆಲ್ಲೂರು ಜಿಲ್ಲೆಗಳು ಇಂದು ಆಂಧ್ರಪ್ರದೇಶಕ್ಕೆ ಸೇರಿದ್ದರೆ, ಹಿಂದಿನ ಮದ್ರಾಸ್ ಪ್ರೆಸಿಡೆನ್ಸಿ ಕಾಲದಲ್ಲಿ ಜಿಲ್ಲಾಕೇಂದ್ರವಾಗಿದ್ದ ಚೆಂಗಲ್ ಪೇಟ್ ಇಂದು ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿದೆ.
ಬೆಂಗಳೂರಿನ ಗ್ರಾಮದೇವತೆ ಅಣ್ಣಮ್ಮ:
ಬೃಹತ್ ಬೆಂಗಳೂರಿನ ಭಾಗವಾಗಿರುವ ಬೇಗೂರಿನಲ್ಲಿ ದೊರೆತ ಶಾಸನವೊಂದರಲ್ಲಿ 9ನೇ ಶತಮಾನದ ಹೊತ್ತಿಗೆ ಬೆಂಗಳೂರು ಎಂಬ ಹೆಸರಿನ ಊರಿನ ಪ್ರಸ್ತಾಪವಿದೆ. ಮೊರಸುಗೌಡ ಸಮುದಾಯಕ್ಕೆ ಸೇರಿದ ಎಲಹಂಕ ಪ್ರದೇಶದಲ್ಲಿ ನೆಲೆಗೊಂಡು ಆಡಳಿತ ನಡೆಸುತ್ತಿದ್ದ ನೆಲಹಂಕ ನಾಡಪ್ರಭು ಕೆಂಪೇಗೌಡ ಎಂಬ ಪಾಳೆಗಾರ ಕ್ರಿಸ್ತಶಕ 1537ರಲ್ಲಿ ಬೆಂಗಳೂರು ಕೋಟೆ ಮತ್ತು ಬೆಂಗಳೂರು ಪೇಟೆಯನ್ನು ಕಟ್ಟಿಸಿದ. ವಿಜಯನಗರದ ಅರಸರ ಮಾಂಡಲೀಕನಾಗಿದ್ದ ಆತ ಯಲಹಂಕದಿಂದ ತನ್ನ ರಾಜಧಾನಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಿದ. ಅವನ ಮಗನನ್ನು ಇಮ್ಮಡಿ ಕೆಂಪೇಗೌಡ ಎಂದು ಹೆಸರಿಸಲಾಗಿದೆ. ಈ ಪಾಳೆಗಾರರು ತಮ್ಮ ರಾಜಧಾನಿಯನ್ನು ಮುಂದೆ ಮಾಗಡಿಗೆ ಸ್ಥಳಾಂತರಿಸಿದರು. 1728ರಲ್ಲಿ ಮೈಸೂರು ಸಂಸ್ಥಾನದ ದಳವಾಯಿಗಳು ಅವರನ್ನು ಸೋಲಿಸಿ ಅವರ ವಶದಲ್ಲಿದ್ದ ಪ್ರದೇಶವನ್ನು ತಮ್ಮ ಸಂಸ್ಥಾನಕ್ಕೆ ಸೇರಿಸಿಕೊಳ್ಳುತ್ತಾರೆ. ಈ ನಡುವೆ ಸ್ವಲ್ಪ ಸಮಯ ಈ ಬೆಂಗಳೂರು ಪೇಟೆ ಮರಾಠರ ವಶದಲ್ಲೂ ಇತ್ತು. ಸಹಾಯಕ ಸೈನ್ಯ ಪದ್ಧತಿಯ ಅಡಿಯಲ್ಲಿ ಮೈಸೂರು ಸಂಸ್ಥಾನವನ್ನು ತಮ್ಮ ಹಿಡಿತದಲ್ಲಿರಿಸಿಕೊಂಡಿದ್ದ ಬ್ರಿಟಿಷರು ಇಲ್ಲಿ ತಮ್ಮ ಸೇನಾ ನೆಲೆಯನ್ನು ಹೊಂದಿದ್ದರು. ಹಿಂದಿನ ಬೆಂಗಳೂರು ಪೇಟೆ ಇಂದು ಸುತ್ತಮುತ್ತಲ ನೂರಾರು ಹಳ್ಳಿಗಳನ್ನು ಆಪೋಷಣೆ ಮಾಡಿಕೊಂಡು ಬೃಹತ್ ನಗರವಾಗಿ ಬೆಳೆದುನಿಂತಿದೆ. ಕೃಷಿ ಕಸಬು ಇನ್ನಿಲ್ಲವಾದರೂ, ಹಳ್ಳಿಗಾಡಿನ ಗ್ರಾಮೀಣ ಜನಪದರ ನೆಲೆಗಳು ಇನ್ನೂ ಜೀವಂತವಾಗಿದ್ದು, ಗ್ರಾಮ ದೇವತೆಗಳೂ ಇನ್ನೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ.
ಬೆಂಗಳೂರಿನ ತುಂಬ ವಿವಿಧ ಪ್ರದೇಶಗಳಲ್ಲಿ ಅಣ್ಣಮ್ಮ ಹೆಸರಿನ ದೇವಸ್ಥಾನಗಳಿವೆ. ಆಯಾ ಗ್ರಾಮಗಳ ಜನ ಜಾನುವಾರುಗಳ ರಕ್ಷಣೆಯ ಭಾರ ಹೊತ್ತ ಗ್ರಾಮದೇವತೆಗಳು ಎಲ್ಲಾ ಗ್ರಾಮಗಳಲ್ಲೂ ಕಂಡು ಬರುತ್ತವೆ. ಕೆಲವು ಊರುಗಳು ಆಯಾ ಊರಲ್ಲಿನ ಗ್ರಾಮದೇವತೆಗಳ ಹೆಸರನ್ನು ಹೊತ್ತುಕೊಂಡಿರುವುದನ್ನು ಗಮನಿಸಬಹುದು. ಆದರೆ, ಬೆಂಗಳೂರಿಗೆ ಅಣ್ಣಮ್ಮ ಎಂಬ ಗ್ರಾಮದೇವತೆಗ ನಂಟು ಬೆಸೆದುಕೊಂಡಿದೆ. ಬೆಂಗಳೂರು ನಗರದ ಕೇಂದ್ರ ಪ್ರದೇಶ ಎಂದು ಗುರುತಿಸಲಾಗುವ ಕೆಂಪೇಗೌಡ ವೃತ್ತದ ಹತ್ತಿರ ಗ್ರಾಮದೇವತೆ ಅಣ್ಣಮ್ಮಳ ಪ್ರಧಾನ ಗುಡಿ ಇದೆ. ಆ ದೇವತೆ ಇಂದು ನಗರ ದೇವತೆಯಾಗಿ ಇಡೀ ನಗರವನ್ನು ಆವರಿಸಿಕೊಂಡಿದ್ದಾಳೆ. ಪ್ರತಿ ಬಡಾವಣೆಯಲ್ಲೂ ಅಣ್ಣಮ್ಮ ದೇವಿಯ ಉತ್ಸವ ನಡೆಯುತ್ತದೆ.
ಈ ಅಣ್ಣಮ್ಮ ದೇವಿಯ ಉಗಮದ ಕತೆ ಸ್ವಾರಸ್ಯಕರವಾಗಿದೆ. ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದ ಗಾಣಿಗ ಕುಟುಂಬವೊಂದರ ತಾತ ಮುತ್ತಾತನೊಬ್ಬ ಈ ಹಿಂದೆ ಕಾಡು ಪ್ರದೇಶವಾಗಿದ್ದ ಈ ಜಾಗದಲ್ಲಿ ಸಾಗುವಾಗ ಮಗುವೊಂದು ಅಳುವ ಶಬ್ದ ಕೇಳಿಸಿತು. ದೆವ್ವ ಇರಬಹುದೆಂದು ಮಾರ್ಗ ಬದಲಿಸಿ ಹೊರಟಾಗ ಕನಸಲ್ಲಿ ಕಾಣಿಸಿಕೊಂಡ ದೇವಿ 'ನಾನು ದೆವ್ವವಲ್ಲ. ನಾನು ಮಣ್ಣಲ್ಲಿ ಹೂತು ಹೋಗಿರುವೆ. ನನ್ನನ್ನು ಹೊರ ತೆಗೆದು ಪೂಜೆ ಮಾಡು' ಎಂದಳಂತೆ. ದೇವಿ ಸೂಚಿಸಿದ ಜಾಗದಲ್ಲಿ ಅಗೆದಾಗ ದೇವಿಯ ಮೂರ್ತಿ ಕಾಣಿಸಿತು. ಅದನ್ನು ಅಲ್ಲಿಯೇ ಬೇವಿನ ಮರದ ಕೆಳಗೆ ಪ್ರತಿಷ್ಠಾಪಿಸಿ ಪೂಜೆ ಮಾಡಲು ಆರಂಭಿಸಿದರಂತೆ. ಮುಂದೆ ಕೆಂಪೇಗೌಡರ ಕಾಲದಲ್ಲಿ ಈಗಿನ ಸ್ಥಳಕ್ಕೆ ಗುಡಿ ಸ್ಥಳಾಂತರಗೊಂಡಿತಂತೆ. ಇನ್ನೊಂದು ಐತಿಹ್ಯದ ಪ್ರಕಾರ, ಒಂದು ಅಜ್ಜಿ ಈ ಮೊದಲು ಈ ದೇವಸ್ಥಾನದ ಜಾಗದ ಮುಂದಿದ್ದ ಬೇವಿನ ಮರದ ಬುಡದಲ್ಲಿ ಒಂದು ಕಲ್ಲನ್ನಿಟ್ಟು ಪೂಜೆ ಮಾಡುತ್ತಿದ್ದಳಂತೆ. ನಿಧಾನವಾಗಿ ಅದಕ್ಕೆ ಅಣ್ಣಮ್ಮ ಎಂಬ ಹೆಸರು ಬಂದಿತು. ಅಜ್ಜಿ ಕಾಲವಾದ ಮೇಲೆ ಒಂದು ಗಾಣಿಗರ ಕುಟುಂಬವೊಂದು ಬಂದು ಅದನ್ನು ತಮ್ಮ ದೇವತೆ ಎಂದು ಪೂಜಿಸಲಾರಂಭಿಸಿದರಂತೆ. ನಂತರ ಅಲ್ಲಿಂದ ಈಗಿನ ಸ್ಥಳಕ್ಕೆ ಅದು ಸ್ಥಳಾಂತರಗೊಂಡಿತು. ಮುಂದೆ ಕೆಂಪೇಗೌಡರ ಕಾಲಕ್ಕೆ ದೇವಸ್ಥಾನ ಅಸ್ತಿತ್ವಕ್ಕೆ ಬಂದಿತು. ಇಂದಿಗೂ ಆ ಗಾಣಿಗರ ಕುಟುಂಬದವರು ತಲೆಮಾರಿನಿಂದ ಈ ದೇವತೆಯ ಪೂಜಾರಿಗಳಾಗುತ್ತಾ, ದೇವಾಲಯದ ಆಡಳಿತವನ್ನು ನೋಡಿಕೊಂಡು ಬರುತ್ತಿದ್ದಾರೆ.
ಈ ಉಗಮದ ಐತಿಹ್ಯದಲ್ಲಿರುವ ಸತ್ಯಾಸತ್ಯತೆಗಳನ್ನು ಕಂಡು ಹಿಡಿಯುವುದು ಕಷ್ಟವಾದರೂ, ಅಣ್ಣಮ್ಮನ ದೇವಸ್ಥಾನ ಮೊದಲಿಂದ ವ್ಯಾಪಾರ ಅಥವಾ ಇನ್ನಾವುದೋ ತಿರುಗಾಟದಲ್ಲಿದ್ದ ಕುಟುಂಬವೊಂದರ ಆಸಕ್ತಿಯ ಪರಿಣಾಮವಾಗಿ ಸ್ಥಾಪಿಸಲ್ಪಟ್ಟು ಆ ಕುಟುಂಬವು ಅಲ್ಲೇ ನೆಲೆ ನಿಲ್ಲಲು ಕಾರಣವಾಯಿತು ಎಂದಷ್ಟನ್ನಂತೂ ತಿಳಿಯಬಹುದು. ಒಟ್ಟಾರೆ ಖಾಸಗಿ ಆಡಳಿತದಲ್ಲೇ ಇರುವ ಈ ದೇವಸ್ಥಾನಕ್ಕೆ ದೇಶದ ಎಲ್ಲೆಡೆಯಿಂದ ಜನ ಬರುತ್ತಾರೆ. ಈ ದೇವತೆಯ ಕುರಿತು ಜನರಲ್ಲಿ ಒಂದು ರೀತಿಯ ಭಯವೇ ಇದೆಯಂತೆ. ಏಕೆಂದರೆ, ಇದು ಶಕ್ತಿ ದೇವತೆ. ಈಕೆಯ ಮಹಿಮೆಯ ಸ್ವರೂಪ ಹೀಗಿದೆ: ಈ ದೇವತೆ 'ತಂದು ಹಾಕುವ' ಕೆಲಸವನ್ನು ಮಾಡುತ್ತದೆ. ಅಂದರೆ, ಮಕ್ಕಳಿಗೆ ಸಿಡುಬು, ಅಮ್ಮ- ಇಂಥವನ್ನು ತರುವುದ ಈ ದೇವತೆಯೇ. ಆಗ ಜನ ಅಣ್ಣಮ್ಮನ ಬಳಿ ಬರುತ್ತಾರೆ. ಹರಕೆ ಮಾಡಿಕೊಳ್ಳುತ್ತಾರೆ. ಕಾಯಿಲೆ ವಾಸಿಯಾಗುತ್ತದೆ. ಜನ ಭಕ್ತಿಯಿಂದ ಹರಕೆ ತೀರಿಸುತ್ತಾರೆ ಎಂದು ಆರ್. ಎ. ಪುಷ್ಪಭಾರತಿ ಅವರು ತಮ್ಮ 'ನಗರ ಹಳ್ಳಿಗಳ ನಡುವೆ ಬೆಂಗಳೂರು' (2006) ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಬೆಂಗಳೂರಿನ ಗ್ರಾಮ ದೇವತೆ ಎಂದು ಗುರುತಿಸುವ ದೇವತೆಯ ಹೆಸರು ಅಣ್ಣಮ್ಮ. ಈ ಅಣ್ಣಮ್ಮಳ ಹೆಸರಿನ ಮೂಲ ಏನಿರಬಹುದು? 'ಅಣ್ಣ' ಎಂದರೆ ಹಿರಿಯ ಸಹೋದರ, ಗಂಡಸರನ್ನು ಪ್ರೀತಿಯಿಂದ ಅಥವಾ ಗೌರವದಿಂದ ಸಂಬೋಧಿಸುವ ಪದ ಎಂಬುದು ಶಬ್ದಕೋಶಗಳು ಕೊಡುವ ವಿವರಣೆ. 'ಅಣ್ಣ' ಎಂಬ ನಾಮಪದವಿದ್ದಂತೆ 'ಅಣ್ಣಿ' ಎಂಬ ನಾಮಪದವೂ ಉಂಟು. 'ಅಣ್ಣಿ' ಎಂದರೆ, ಹೆಂಗಸರನ್ನು ಪ್ರೀತಿಯಿಂದ ಕರೆಯುವಾಗ ಉಪಯೋಗಿಸುವ ಮಾತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ಕನ್ನಡ ನಿಘಂಟು ವಿವರಿಸಿದೆ.
ಇವಲ್ಲದೇ, 'ಅಣ್ಣಲೇ' ಎಂದರೆ ಅರಸ, ರಾಜ, ದೊರೆ ಎಂಬ ಅರ್ಥವಿದೆ. ಮತ್ತು 'ಅಣ್ಣನೆ' ಪದಕ್ಕೆ ಹಿತವಾಗಿ, ಬಹಳವಾಗಿ ಎಂಬ ಅರ್ಥಗಳಿವೆ. ಈ ಹಿನ್ನೆಲೆಯಲ್ಲಿ, ಹಿತವನ್ನು ತರುವ ದೇವತೆ, ನಮ್ಮ ರಾಣಿ, ದೊರೆಸಾನಿ ಎಂಬುದನ್ನು ಹೇಳಲು ಬೆಂಗಳೂರಿನ ಜನಪದರು ತಮ್ಮ ಜನಪದ ದೈವಕ್ಕೆ 'ಅಣ್ಣಮ್ಮ' ಎಂಬ ಹೆಸರನ್ನಿಟ್ಟಿರಬಹುದು. ಪುಷ್ಪಭಾರತಿ ಅವರು, 'ಮಕ್ಕಳಿಗೆ ಸಿಡುಬು, ಅಮ್ಮ ಮುಂತಾದವನ್ನು ತಂದು ಹಾಕುವ ದೇವತೆ ಅಣ್ಣಮ್ಮ ಹರಕೆ ಹೊತ್ತ ನಂತರ ಅವನ್ನು ನಿವಾರಿಸುವಳು' ಎಂದು ದಾಖಲಿಸಿದ್ದಾರೆ. ಹರಕೆ ಹೊತ್ತ ಜನಪದರ ಆಸೆಯಂತೆ ಮಕ್ಕಳ ಕಾಯಿಲೆಗಳನ್ನು ಗುಣಪಡಿಸುವ ಈ ದೇವತೆ ಶರಣು ಬರುವ ಭಕ್ತರಿಗೆ ಹಿತವನ್ನೇ ತರುವ ದೇವತೆಯಲ್ಲವೆ? ಹೀಗಾಗಿ ಜನಪದರು ಈ ದೈವಕ್ಕೆ ಅಣ್ಣಮ್ಮ ಎಂದು ಹೆಸರಿಸಿದ್ದಾರೆ.
ಬೆಂಗಳೂರಿನ ಉತ್ತರಹಳ್ಳಿ ಬೆಟ್ಟದ ಅನ್ನಮ್ಮ:
ಈಗ ಅನ್ನಮ್ಮ ಕ್ರೈಸ್ತ ಜನಪದರಲ್ಲಿ ಧಾರಾಳವಾಗಿ ಬಳಕೆಯಲ್ಲಿರುವ ಹೆಸರು. ಸಂತ ಪದವಿ ಪಡೆದ ಯೇಸುಸ್ವಾಮಿಯ ಅಜ್ಜಿ, ಮಾತೆ ಮರಿಯಳ ತಾಯಿ 'ಸೆಂಟ್ ಆನ್', ಭಾರತೀಯ ಜಾಯಮಾನಕ್ಕೆ ಒಗ್ಗಿಕೊಂಡು ಕ್ರೆಸ್ತ ಜನಪದರ ಬಾಯಲ್ಲಿ ಸಂತ ಅನ್ನಮ್ಮ ಆಗಿದ್ದಾರೆ. ಬೆಂಗಳೂರಿನ ಒಡಲು ಸೇರಿರುವ ಉತ್ತರಹಳ್ಳಿಯ ಅನ್ನಮ್ಮ ದುರಂತದ ಸಾವು ಕಂಡ ಒಬ್ಬ ಸಾಧ್ವಿ ಕ್ರೈಸ್ತ ಮಹಿಳೆ. ಅವಳು ಸಾವಿಗೆ ಕಾರಣವಾಗುವ, ನಂತರ ಆಕೆ ಸ್ಥಳೀಯ ಕ್ರೈಸ್ತ ಜನಪದರ ಸಂತಳಾಗುವ ಪರಿಯನ್ನು ವಿವರಿಸುವ ಹಲವು ಐತಿಹ್ಯಗಳು ಸಿಗುತ್ತವೆ.
ಬೆಂಗಳೂರಿನ ಉತ್ತರಹಳ್ಳಿ ಬೆಟ್ಟದ ಅನ್ನಮ್ಮ ಒಂದೊಂದು ಐತಿಹ್ಯಗಳಲ್ಲಿ ಒಂದೊಂದು ಬಗೆಯಲ್ಲಿ ಸೈನಿಕರನ್ನು ಗುರುತಿಸಲಾಗಿದೆ. ಒಂದರಲ್ಲಿ, ಸಾಧ್ವಿ ಅನ್ನಮ್ಮಳ ಮೇಲೆ ಅತ್ಯಾಚಾರ ಎಸಗಲು ಮುಂದಾದವರು ಮೈಸೂರು ಸಂಸ್ಥಾನದ ಸುಬೇದಾರ ನಂತರ ಮೈಸೂರು ಅರಸರನ್ನು ಸೆರೆಮೆನೆಯಲ್ಲಿಟ್ಟು ಹೈದರ್ ಅಲಿ ಸೇನೆಯ ಸೈನಿಕರು ಎಂದು ಬಣ್ಣಿಸಲಾಗಿದೆ. ಇನ್ನೊಂದರಲ್ಲಿ ಹೈದರ್ ಅಲಿಯ ಮಗ ಟಿಪ್ಪು ಸುಲ್ತಾನನ ಸೈನಿಕರು ಸಾಧ್ವಿ ಅನ್ನಮ್ಮಳ ಮೇಲೆರಗಲು ಹವಣಿಸಿದ್ದರು ಎಂದು ಹೇಳಲಾಗುತ್ತದೆ. ಮಗದೊಂದು ಐತಿಹ್ಯದಲ್ಲಿ, ಮೋಜಿಗಾಗಿ ಬೆಟ್ಟಕ್ಕೆ ಬಂದಿದ್ದ ಬ್ರಿಟಿಷ್ ಸೇನಾಪಡೆಯ ಸೈನಿಕರು ಸಾಧ್ವಿ ಅನ್ನಮ್ಮಳ ಮೇಲೆ ಕಣ್ಣುಹಾಕಿ ಬೆನ್ನಟ್ಟಿದ್ದರು ಎಂದು ವಿವರಿಸಲಾಗುತ್ತದೆ. ತನ್ನ ಶೀಲ ರಕ್ಷಣೆಗಾಗಿ, ಸಾಧ್ವಿ ಅನ್ನಮ್ಮ ಈ ಸೈನಿಕರಿಂದ ತಪ್ಪಸಿಕೊಳ್ಳುವ ಸಲುವಾಗಿ ಬೆಟ್ಟ ಹತ್ತಿ ಮೇಲಿನಿಂದ ಕೆಳಗೆ ಹಾರಿ ಪ್ರಾಣಬಿಟ್ಟಳು ಎಂದು ಈ ಐತಿಹ್ಯಗಳು ಸಾರುತ್ತವೆ. ಹೈದರ್ ಅಲಿಯು 1749 ರಿಂದ 1782ರವರಗೆ ಮೈಸೂರು ಸಂಸ್ಥಾನದ ಚುಕ್ಕಾಣಿ ಹಿಡಿದಿದ್ದರೆ, ಅವನ ಮಗ ಟಿಪ್ಪು ಸುಲ್ತಾನ 1782ರಿಂದ 1799ರವರೆಗೆ ಮೈಸೂರು ಸಂಸ್ಥಾನದ ಸುಲ್ತಾನನಾಗಿ ಮೆರೆದಿದ್ದ. ಬ್ರಿಟಿಷರು ಟಿಪ್ಪು ಸುಲ್ತಾನನ ಕಾಲದಲ್ಲಿಯೇ ಬೆಂಗಳೂರು ಮತ್ತು ಆಸುಪಾಸಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ವಿದ್ಯಮಾನದ ಹಿನ್ನೆಲೆಯಲ್ಲಿ ನೋಡುವುದಾದರೆ, ಆ ಸಮಯದಲ್ಲಿ 'ಅನ್ನಮ್ಮ' ಎಂಬ ಹೆಸರು ಕ್ರೈಸ್ತ ಜನಪದರಲ್ಲಿ ಬಳಕೆಗೆ ಬಂದು ಸಾಕಷ್ಟು ಸಮಯ ಸಂದಿರಬೇಕು.
ಈ ಉತ್ತರಹಳ್ಳಿ ಬೆಟ್ಟದ ಅನ್ನಮ್ಮ ಬೆಂಗಳೂರು ಕ್ರೈಸ್ತರ ಗ್ರಾಮದೈವವೆಂದು ಹೇಳಬಹುದು. ಈ ದೈವದ ಪ್ರಭಾವವನ್ನು ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲೂ ಗುರುತಿಸಬಹುದು. ಉತ್ತರಹಳ್ಳಿ ಬೆಟ್ಟದ ಅನ್ನಮ್ಮಳ ಕುರಿತು ಇಲ್ಲಿನ ಜನಪದರು ಹಾಡುಗಳನ್ನು ಕಟ್ಟಿದ್ದಾರೆ. ಮದುವೆ ಮನೆಯ ಹಸೆಮಣೆಯ ಕಾರ‍್ಯ ಇತ್ಯಾದಿ ವಿಧಿಯಾಚರಣೆಗಳ ಸಂದರ್ಭಗಳಲ್ಲಿ ಉತ್ತರಹಳ್ಳಿ ಬೆಟ್ಟದ ಅನ್ನಮ್ಮಳನ್ನು ಸ್ಮರಿಸಲಾಗುತ್ತದೆ. ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ಆ ಬೆಟ್ಟದಲ್ಲಿ ಶಿಲುಬೆಯಾತ್ರೆ ನಡೆದಾಗ ನೆರೆಯುವ ಜನರಿಂದ ಅಲ್ಲಿ ಜಾತ್ರೆಯ ಸಂಭ್ರಮ ಕಳೆಗಟ್ಟಿರುತ್ತದೆ.
ಅನ್ನಮ್ಮ ಎಂಬಾಕೆ ಒಬ್ಬಳು ಪುಣ್ಯ ಸ್ತ್ರೀ ಎಂದೂ, ಉತ್ತರಹಳ್ಳಿ ಬುಡದಲ್ಲಿ ಒಂದು ಚಿಕ್ಕ ಮಂಟಪ ಕಟ್ಟಿಕೊಂಡು ತ್ಯಾಗದ ಜೀವನ ಮಾಡಿ ಅಲ್ಲಿಯೇ ಸತ್ತು ಸಮಾಧಿಯಾಗಿ ಕ್ರೈಸ್ತ ಭಕ್ತರ ಹರಕೆಗಳನ್ನು ಕೇಳಿ ವರದಾನ ಮಾಡುತ್ತಾ ಬಂದಿರುವಳೆಂದು ಚರಿತ್ರೆ ತಿಳಿಸುತ್ತದೆ ಎಂಬಿತ್ಯಾದಿ... ಹೇಳಿಕೆಗಳನ್ನು ಇತ್ತೀಚೆಗೆ ಕರಪತ್ರಗಳಲ್ಲಿ ಪ್ರಕಟಿಸಿ ಹಂಚುವುದುಂಟು. ಆ ಕಾಲದ ಜನ ಈಕೆಯ ಬಳಿಗೆ ಬಂದು ಮಳೆಗೋಸ್ಕರ ದೇವರಲ್ಲಿ ಪ್ರಾರ್ಥಿಸುತ್ತಿದ್ದರೆಂದು ಹೇಳುತ್ತಾರೆ. ಈ ಒಂದು ಕಾರಣದಿಂದ ಬೆಂಗಳೂರು ನಗರದ ಅಧಿದೇವತೆ 'ಅನ್ನಮ್ಮ ದೇವಿ'ಯ ಪ್ರತಿರೂಪವನ್ನು ಇವಳಲ್ಲಿ ಕಂಡ ಕ್ರೈಸ್ತರು ಅನ್ನಮ್ಮ ಬೆಟ್ಟದಲ್ಲಿ ಜಾತ್ರೆ ನಡೆಸಿ ಕ್ರಿಸ್ತೀಯ ಅಂಶಗಳನ್ನು ಅಳವಡಿಸಿಕೊಂಡಿರಬಹುದೆಂಬ ವಿಚಾರವನನ್ನು ಸುಲಭವಾಗಿ ಅಲ್ಲ ಗಳೆಯುವಂತಿಲ್ಲ. ಏಕೆಂದರೆ, ಬೆಂಗಳೂರಿನ ನಾಗರಿಕರು ಮಳೆಗಾಗಿ ಪ್ರತಿಯೊಂದು ಮೊಹಲ್ಲಾಗಳಲ್ಲೂ 'ಅನ್ನಮ್ಮ ದೇವಿ'ಯನ್ನು ಪೂಜಿಸುವ ರೂಢಿ ಇಂದಿಗೂ ಪ್ರಚಲಿತದಲ್ಲಿದೆ. ಈ ನಾಡಿನ ನೆಲದ ಸಂಸ್ಕೃತಿ ಹೇಗೆ ಕ್ರೈಸ್ತರಲ್ಲಿ ಸುಸಂಸ್ಕೃತೀಕರಣ (Inculturation)ವಾಗಿ ಮಾರ್ಪಡುತ್ತದೆ ಎಂಬುದಕ್ಕೆ ಪ್ರಾಯಶಃ ಇದೊಂದು ಒಳ್ಳೆಯ ಉದಾಹರಣೆಯಾಗಬಹುದು ಎಂಬುದು 'ಕನ್ನಡ ಕ್ರೈಸ್ತರು ಮತ್ತು ಜಾತ್ರೆಗಳು' ಪುಸ್ತಕದಲ್ಲಿ ಕ್ರೈಸ್ತ ಲೇಖಕ, ಜಾನಪದ ವಿದ್ವಾಂಸ ಡಾ.ಬಿ.ಎಸ್.ತಲ್ವಾಡಿ ಅವರು ವ್ಯಕ್ತಪಡಿಸಿದ ಅಭಿಪ್ರಾಯ.
ಬೆಂಗಳೂರು ಮಹಾಧರ್ಮಕ್ಷೇತ್ರದ ಆಂಧ್ರದ ನಂಟು:
ಬೆಂಗಳೂರು ಧರ್ಮಕ್ಷೇತ್ರದ ಇತಿಹಾಸ ಕ್ರಿಸ್ತಶಕ 1886 ರಿಂದ ಆರಂಭವಾಗುತ್ತದೆ. ಇಂದು ಪುದುಚೇರಿ ಎಂದು ಕರೆಯಲಾಗುವ ಪಾಂಡಿಚೆರಿಯಲ್ಲಿ ಪ್ರಧಾನ ಕಚೇರಿ ಹೊಂದಿದ್ದ ಫ್ರೆಂಚ್ ಪಾದ್ರಿಗಳ ಪ್ಯಾರಿಸ್ ಫಾರಿನ್ ಮಿಷನ್ ಸೊಸೈಟಿಯು, 1773ರಲ್ಲಿ ಯೇಸುಸಭೆಯನ್ನು ಸ್ಥಗಿತಗೊಳಿಸಿದ ನಂತರದಲ್ಲಿ ಬಹುತೇಕ ದಕ್ಷಿಣ ಭಾರತದ ಕಥೋಲಿಕ ಕ್ರೈಸ್ತರ ಆಧ್ಯಾತ್ಮಿಕ ಆಗುಹೋಗುಗಳ ನಿರ್ವಹಣೆ ಮಾಡುತ್ತಿತ್ತು. ವಿಜಯನಗರ ಸಾಮ್ರಾಜ್ಯದ ವ್ಯಾಪ್ತಿಯ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಬಹುತೇಕ ಭಾಗವನ್ನು ಕರ್ನಾಟಕ ಮಿಷನ್ ಎಂಬ ಹೆಸರಿನಲ್ಲಿಯೇ ಗುರುತಿಸಲಾಗುತ್ತಿತ್ತು. ಹಳೆಯ ಮದ್ರಾಸ್ ಪ್ರಾಂತ್ಯದ ಮಧುರೈ ಸುತ್ತಮುತ್ತಲ ಪ್ರದೇಶವನ್ನು ಮಧುರೈ ಮಿಷನ್ ನೋಡಿಕೊಳ್ಳುತ್ತಿತ್ತು. ಕೇರಳದಲ್ಲಿನ ಮಿಷನ್ ಅನ್ನು ಮಲಬಾರ್ ಮಿಷನ್ ಎಂದು ಕರೆಯಲಾಗುತ್ತಿತ್ತು.
ಮುಂದೆ 1854ರಲ್ಲಿ ಮೈಸೂರು ಮಿಷನ್‍ಅನ್ನು ರಚಿಸಲಾಯಿತು. ಮೈಸೂರು ಸಂಸ್ಥಾನದ ದೆಸೆಯಿಂದ ಮೈಸೂರು ಮಿಷನ್ ಎಂದು ಕರೆಯಲಾಗುತ್ತಿತ್ತು. ಆದರೆ, ಆಗ ಈ ಮಿಷನ್‍ನ ಪ್ರಧಾನ ಕಚೇರಿ ಬೆಂಗಳೂರಿನಲ್ಲಿಯೇ ಇತ್ತು. ಮುಂದೆ 1886ರಲ್ಲಿ ಕನ್ನಡ ಮನೆಮಾತಿನ ಪ್ರದೇಶಗಳಾದ ಬೆಂಗಳೂರು, ಮೈಸೂರು, ಮಂಗಳೂರು, ಬಳ್ಳಾರಿ, ಊಟಿ ಮೊದಲಾದ ಪ್ರದೇಶಗಳ ವ್ಯಾಪ್ತಿಯ ಮೈಸೂರು ಮಿಷನ್ ಅನ್ನು ಮೈಸೂರು ಧರ್ಮಕ್ಷೇತ್ರವೆಂದು ಘೋಷಿಸಲಾಯಿತು. ನಂತರ 1940ರಲ್ಲಿ, ಮೈಸೂರು ಧರ್ಮಕ್ಷೇತ್ರದಿಂದ ಬೆಂಗಳೂರನ್ನು ಬಿಡಿಸಿ ಬೆಂಗಳೂರು ಧರ್ಮಕ್ಷೇತ್ರವನ್ನು ರಚಿಸಲಾಯಿತು. ಇಷ್ಟಾದ ನಂತರ 1942ರಲ್ಲಿ ಬೆಂಗಳೂರು ಧರ್ಮಕ್ಷೇತ್ರದ ಇತಿಹಾಸಲ್ಲಿ ಪ್ರಥಮ ಬಾರಿ ಭಾರತೀಯರೊಬ್ಬರು ಮೇತ್ರಾಣಿಗಳಾಗಿ (ಬಿಷಪ್) ಅಭಿಷಿಕ್ತರಾಗುತ್ತಾರೆ. ಹೀಗೆ ಬೆಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ (ಬಿಷಪ್) ಪೀಠವನ್ನು ಅಲಂಕರಿಸಿದವರ ಹೆಸರು ಅತಿ.ವಂ.ಡಾ.ತೋಮಸ್ ಪೊತ್ತಕಮೂರಿ. ಈ ಪೊತ್ತಕಮೂರಿ ಎಂಬುದು ಅವರ ಮನೆತನದ ಹೆಸರು. ಅವರ ಹುಟ್ಟೂರು ಗುಂಟೂರು ಜಿಲ್ಲೆಯ ರಾವಿಪದವು. ಈ ಗುಂಟೂರು ಜಿಲ್ಲೆ, ಆಂಧ್ರಪ್ರದೇಶದ ಕ್ರೈಸ್ತರ ಆದಿ ತಾಯಿ ಅನ್ನಮ್ಮಳ ಪ್ರಭಾವ ವಲಯಕ್ಕೆ ಸೇರಿದ ಜಿಲ್ಲೆ ಎಂಬುದನ್ನು ಮರೆಯಲಾಗದು.
ಅತಿ. ವಂ. ಡಾ. ತೋಮಸ್ ಪೊತ್ತಕಮೂರಿ ಅವರ ಜೀವನ ಗಾಥೆ:
ಗುಂಟೂರು ಜಿಲ್ಲೆಯ ರಾವಿಪದವು ಗ್ರಾಮದಲ್ಲಿನ ಪರಮ ದೈವಭಕ್ತ ಕಥೋಲಿಕ ಕ್ರೈಸ್ತರ ತುಂಬು ಕುಟುಂಬವೊಂದರಲ್ಲಿ 1889ರ ಸಾಲಿನ ಸೆಪ್ಟೆಂಬರ್ 2 ರಂದು ತೋಮಾಸ್ ಪೊತ್ತಕಮೂರಿ ಅವರ ಜನನವಾಯಿತು. ಅವರು, ತಮ್ಮ ಪ್ರಾಥಮಿಕ ಹಂತದ ಶಿಕ್ಷಣದ ನಂತರ, ದೈವ ಕರೆಯಂತೆ ಗುರುಗಳಾಗಲು ಬಯಸಿ ಆ ಕಾಲದಲ್ಲಿ ಬರ್ಮಾ, ಭಾರತ ಉಪಖಂಡ ಮತ್ತು ಶ್ರೀಲಂಕಾದ ವ್ಯಾಪ್ತಿ ಹೊಂದಿದ್ದ ಮಧ್ಯ ಶ್ರೀಲಂಕಾದ ಕ್ಯಾಂಡಿ ಸಮೀಪದ ಅಂಪಿತಿಯ ಎಂಬ ಸ್ಥಳದಲ್ಲಿ 1893ರಲ್ಲಿ ಸ್ಥಾಪಿತವಾಗಿದ್ದ ಪೋಪರ ಗುರುಮಠ (ಪೇಪಲ್ ಸೆಮಿನರಿ)ವನ್ನು ಸೇರಿದರು. ಮುಂದೆ ಸ್ವಾತಂತ್ರ್ಯದ ನಂತರ, ಕ್ಯಾಂಡಿಯಲ್ಲಿನ ಗುರುಮಠವನ್ನು ವಿಭಜಿಸಿ, ಭಾರತೀಯ ಮೂಲದ ಗುರು ತರಬೇತಿ (ಸೆಮಿನರಿ)ಮಠವನ್ನು 1955ರಲ್ಲಿ ಮಹಾರಾಷ್ಟ್ರದ ಪುಣೆ ಪಟ್ಟಣಕ್ಕೆ ಸ್ಥಳಾಂತರಿಸಲಾಯಿತು.
ದೈವಶಾಸ್ತರದ ಓದು ಹಾಗೂ ಯಾಜಕ ತರಬೇತಿಯ ನಂತರ ಪೊತ್ತಕಮೂರಿ ಅವರು, 1916ರ ಸಾಲಿನ ಡಿಸೆಂಬರ್ ತಿಂಗಳ 17ರಂದು ಯಾಜಕ ದೀಕ್ಷೆ (ಗುರುದೀಕ್ಷೆ) ಪಡೆದರು. ಸುಮಾರು 24 ವರ್ಷಗಳ ಕಾಲ ವಿವಿಧ ಕಡೆಗಳಲ್ಲಿ ಯಾಜಕರಾಗಿ ಸಮರ್ಥ ಸೇವೆ ಸಲ್ಲಿಸಿ, ಜನಮನ್ನಣೆ ಗಳಿಸಿದ ಅವರು, 1940ರ ಸೆಪ್ಟೆಂಬರ್ 19ರಂದು, ನೂತನವಾಗಿ ಅಸ್ತಿತ್ವಕ್ಕೆ ಬಂದ ಗುಂಟೂರು ಧರ್ಮಕ್ಷೇತ್ರದ (ಡಯಾಸೆಸ್) ಮೇತ್ರಾಣಿ (ಧರ್ಮಾಧ್ಯಕ್ಷ)ಯಾಗಿ ಅಭಿಷಿಕ್ತರಾದರು. ನಂತರ ಎರಡು ವರ್ಷಗಳು ಕಳೆಯುವಷ್ಟರಲ್ಲಿ 1942ರ ಅಕ್ಟೋಬರ್ 15ರಂದು ಅವರನ್ನು ಬೆಂಗಳೂರು ಧರ್ಮಕ್ಷೇತ್ರದ ಮೇತ್ರಾಣಿಗಳಾಗಿ ನೇಮಕ ಮಾಡಲಾಯಿತು. 1943ರ ಜನವರಿ 31ರಂದು ಅವರು ಬೆಂಗಳೂರು ಧರ್ಮಕ್ಷೇತ್ರದ ಮೇತ್ರಾಣಿಗಳಾಗಿ ಅಭಿಷಿಕ್ತರಾದರು.
ಇಂದಿನಂತೆ ಭಾಷಾವಾರು ಪ್ರಾಂತ್ಯಗಳಿಲ್ಲದ ಸ್ವಾತಂತ್ರ್ಯ ಪೂರ್ವದ ಆ ಕಾಲದಲ್ಲಿ ಮೇತ್ರಾಣಿಗಳಿಗೆ ಇಂತಹ ರಾಜ್ಯ, ಪ್ರಾಂತ್ಯಗಳಲ್ಲಿಯೇ ಸೇವೆ ಸಲ್ಲಿಸಬೇಕೆಂಬ ಕಟ್ಟುಪಾಡುಗಳಿರಲಿಲ್ಲ. ಶ್ರೀಲಂಕಾದ ಗುರು ಕೋಲ್ಕತ್ತಾ ಧರ್ಮಕ್ಷೇತ್ರದ ಮೇತ್ರಾಣಿ ಆಗಬಹುದಿತ್ತು. ಮೈಸೂರು ಮತ್ತು ಕರ್ನಾಟಿಕ್ ಮಿಷನ್ ಪ್ರದೇಶಗಳಲ್ಲಿ ಸಕಲ ಪೂಜಾವಿಧಿಗಳು ಧರ್ಮಸಭೆಯ ಅಧಿಕೃತ ಭಾಷೆಯಾದ ಲ್ಯಾಟಿನ್‍ನಲ್ಲಿ ನಡೆಯುತ್ತಿದ್ದವು. ಪೂಜಾವಿಧಿಗಳಲ್ಲಿ ಹಾಡುವ ಹಾಡುಗಳನ್ನು ಎಂ.ಇ.ಪಿ. ಫ್ರೆಂಚ್ ಗುರುಗಳ ಪ್ರಭಾವದ ದೆಸೆಯಿಂದ ಫ್ರೆಂಚ್ ರಾಗಗಳಲ್ಲಿ ಹಾಡಲಾಗುತ್ತಿತ್ತು.
ಮುಂದೆ, 1952 ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲಿನ ವಿವಿಧ ಧರ್ಮಕ್ಷೇತ್ರಗಳನ್ನು ವಿಂಗಡಿಸಿ ಹೊಸ ಧರ್ಮಕ್ಷೇತ್ರಗಳನ್ನು ರಚಿಸಲಾಯಿತು. ಆಗ ಬೆಂಗಳೂರು ಧರ್ಮಕ್ಷೇತ್ರವನ್ನು ಮಹಾಧರ್ಮಕ್ಷೇತ್ರವೆಂದು (ಆರ್ಚ ಡಯಾಸೆಸ್) ಮೇಲ್ದರ್ಜೆಗೆ ಏರಿಸಲಾಯಿತು. ಈ ಹಿನ್ನೆಲೆಯಲ್ಲಿ, ಅತಿ.ವಂ.ಡಾ. ತೋಮಾಸ್ ಪೊತ್ತಕಮೂರಿ ಅವರ ಸ್ಥಾನವೂ ಧರ್ಮಾಧ್ಯಕ್ಷ ಪದವಿಯಿಂದ ಮಹಾಧರ್ಮಾಧ್ಯಕ್ಷ ಪದವಿಗೆ ಉನ್ನತೀಕರಣಗೊಂಡಿತು. ಪೊತ್ತಕಮೂರಿ ಅವರು, 1953ರ ಸೆಪ್ಟೆಂಬರ್ 19ರಂದು ಬೆಂಗಳೂರು ಮಹಾಧರ್ಮಕ್ಷೇತ್ರದ ಮೊದಲ ಮಹಾಧರ್ಮಾಧ್ಯಕ್ಷರೆಂಬ ಮನ್ನಣೆಗೂ ಪಾತ್ರರಾದರು.
ಅಂದಿನ ಮೈಸೂರು, ಮಂಗಳೂರು, ಬಳ್ಳಾರಿ ಮತ್ತು ಊಟಿ ಮೊದಲಾದ ಪ್ರದೇಶಗಳು ಬೆಂಗಳೂರು ಮಹಾಧರ್ಮಕ್ಷೇತ್ರದ ಅಧಿಕಾರ ವ್ಯಾಪ್ತಿಗೆ ಸೇರಿದ್ದವು. ಇಂದು ಕರ್ನಾಟಕ ರಾಜ್ಯದಲ್ಲಿ ಹಲವಾರು ಕಥೋಲಿಕ ಕ್ರೈಸ್ತ ಧರ್ಮಕ್ಷೇತ್ರಗಳು ಅಸ್ತಿತ್ವದಲ್ಲಿದ್ದು, ಬೆಂಗಳೂರು ಮಹಾಧರ್ಮಾಧ್ಯಕ್ಷರ ಮಹಾಧರ್ಮಕ್ಷೇತ್ರದ ವ್ಯಾಪ್ತಿಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳು ಸೇರಿವೆ.
ಐವತ್ತು ವರ್ಷದ ಸಾರ್ಥಕ ಸ್ಮರಣೆಯ ಕಾರ‍್ಯಗಳು ನಡೆಯಬೇಕಿವೆ:
ಅತಿ.ವಂ.ಡಾ. ತೋಮಾಸ್ ಪೊತ್ತಕಮೂರಿ ಅವರು ಸುಮಾರು 27 ವರ್ಷಗಳ ಕಾಲ ಬೆಂಗಳೂರು ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾಗಿದ್ದರು. ಇಷ್ಟು ಸುದೀರ್ಘವಾದ ಅವರ ಅಧಿಕಾರದ ಕಾಲದಲ್ಲಿ, ಅವರ ಅಪಾರ ಆಸಕ್ತಿ ಮತ್ತು ಶ್ರಮದ ಫಲವಾಗಿ, ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು, ಶಾಲೆ ಕಾಲೇಜುಗಳು, ಬಡವರಿಗೆ ಉಚಿತ ವಸತಿ ನಿಲಯಗಳು, ಕನ್ಯಾಮಠ (ಕಾನ್ವೆಂಟ್)ಗಳು, ಧಾರ್ಮಿಕ ಸೋದರ-ಸೋದರಿಯರ ಸಭೆಗಳು, ಗುರುಮಠಗಳು ನೆಲೆಗೊಂಡವು. ಆಸ್ಪತ್ರೆಗಳು ಆರಂಭಗೊಂಡು ಕ್ರೈಸ್ತ ಪರಿಸರವನ್ನು ಅಭಿವೃದ್ಧಿಪಡಿಸಿದವು. ಒಟ್ಟು ಸಮಾಜದಲ್ಲಿ ಕ್ರೈಸ್ತರ ಇರುವನ್ನು ಸಾರ್ಥಕವಾಗಿ ನೆಲೆಗೊಳಿಸಿದರು.
ಬೆಂಗಳೂರಿನ ಪ್ರತಿಷ್ಠಿತ ಸೆಂಟ್ ಜಾನ್ ವೈದ್ಯಕೀಯ ಕಾಲೇಜು ಸ್ಥಾಪನೆಯಲ್ಲಿ ಅವರು ಕೈಗೊಂಡ ಕ್ರಮಗಳು ಇಂದಿಗೂ ಸ್ಮರಣೀಯ. ಅವರು ಅನೇಕ ಚರ್ಚು ಕಟ್ಟಡಗಳನ್ನು ಕಟ್ಟಿಸಿದರು. ಅವರ ಅವಧಿಯಲ್ಲಿಯೇ ಸುಂದರವಾದ ಕಲ್ಲುಕಟ್ಟಡದ ಸಂತ ಫ್ರಾನ್ಸಿಸ್ ಜೇವಿಯರ್ ಪ್ರಧಾನಾಲಯವು 1948ರ ಜನವರಿ 24 ರಂದು ಲೋಕಾರ್ಪಣೆಗೊಂಡಿತು.
ಕಳೆದ ಶತಮಾನದಲ್ಲಿ ಅಂದರೆ 1944ರ ಸೆಪ್ಟೆಂಬರ್ ತಿಂಗಳಲ್ಲಿ ಮದ್ರಾಸಿನಲ್ಲಿ ಅಂದರೆ ಇಂದಿನ ಚೆನೈ ಪಟ್ಟಣದಲ್ಲಿ ಭಾರತೀಯ ಕಥೋಲಿಕ ಧರ್ಮಾಧ್ಯಕ್ಷ(ಬಿಷಪ್)ರ ಸಮ್ಮೇಳನವು (ಸಿಬಿಸಿಐ) ರಚನೆಗೊಂಡಿತು. ಬೆಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅತಿ.ವಂ.ಡಾ. ತೋಮಾಸ್ ಪೊತ್ತಕಮೂರಿ ಅವರು ಅದರ ಮೊತ್ತ ಮೊದಲ ಚುನಾಯಿತ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದರು. ಅವರ ನಾಯಕತ್ವದ ಗುಣದ ಕಾರಣ, ಮುಂದೆ 1950 ಮತ್ತು 1954ರಲ್ಲೂ ಮತ್ತೆ ಅವರು ಚುನಾಯಿತಗೊಂಡಿದ್ದರು. ಈ ಸಿಬಿಸಿಐ ಕಚೇರಿಯು 1962ರವರೆಗೂ ಬೆಂಗಳೂರಿನಲ್ಲಿಯೇ ಇತ್ತು. ನಂತರ ಕಾರಣಾಂತರಗಳಿಂದ ಅದನ್ನು ನವದೆಹಲಿಗೆ ಸ್ಥಳಾಂತರಿಸಲಾಯಿತು.
ಅತಿ.ವಂ.ಡಾ. ತೋಮಾಸ್ ಪೊತ್ತಕಮೂರಿ ಅವರಿಂದ ಪತ್ರಿಕಾ ಕ್ಷೇತ್ರಕ್ಕೂ ಸಾಕಷ್ಟು ಸೇವೆ ಸಂದಿದೆ. ಮದ್ರಾಸ್ ನಿಂದ ಈಗಲೂ ಬೆಳಕು ಕಾಣುತ್ತಿರುವ 'ನ್ಯೂ ಲೀಡರ್' ಪತ್ರಿಕೆಯ ಸಂಪಾದಕರಾಗಿ ಕಾರ‍್ಯನಿರ್ವಹಿಸಿದ್ದಾರೆ. ಕಾಲಕಾಲಕ್ಕೆ ಆ ಪತ್ರಿಕೆಯಲ್ಲಿ ಸಾಮಾಜಿಕ, ಧಾರ್ಮಿಕ ವಿಚಾರಗಳ ಕುರಿತು ಪ್ರಬುದ್ಧ ಲೇಖನಗಳನ್ನು ಬರೆದು ತಾವೊಬ್ಬ ಪ್ರಮುಖ ಕ್ರೈಸ್ತ ಲೇಖಕ ಎಂಬುದನ್ನು ತೋರಿಸಿಕೊಟ್ಟಿದ್ದರು. ಸ್ವತಂತ್ರ ಭಾರತದಲ್ಲಿ ಧರ್ಮಸಭೆ (ದಿ ಚರ್ಚ್ ಇನ್ ಇಂಡಿಪೆಂಡೆಂಟ್ ಇಂಡಿಯಾ) ಎಂಬ ಕೃತಿಯೊಂದನ್ನು ಅವರು ರಚಿಸಿದ್ದಾರೆ.
ಅತಿ.ವಂ.ಡಾ. ತೋಮಾಸ್ ಪೊತ್ತಕಮೂರಿ ಅವರು 1967ರಲ್ಲಿ ಅತಿ.ವಂ.ಲೂರ್ದುಸಾಮಿ ಅವರಿಗೆ ಅಧಿಕಾರ ವಹಿಸಿಕೊಟ್ಟು ನಿವೃತ್ತರಾದರು. ನಿವೃತ್ತರಾದ ಮರುವರ್ಷವೇ 1968ರ ಜನವರಿ 11ರಂದು ಯೇಸುಪಾದ ಸೇರಿದರು ಎಂದು ಆಂಧ್ರಪ್ರದೇಶದ ಮೂಲದ ಮಾಹಿತಿಗಳು ತಿಳಿಸುತ್ತವೆ. ಆದರೆ ಬೆಂಗಳೂರು ಧರ್ಮಕ್ಷೇತ್ರದ ಮಾಹಿತಿಗಳಲ್ಲಿ ಈ ದಿನಾಂಕವನ್ನು 18-5-1968 ಎಂದು ದಾಖಲಿಸಲಾಗಿದೆ. ಅವರ ಪಾರ್ಥಿವ ಶರೀರವನ್ನು ಬೆಂಗಳೂರು ಮಹಾಧರ್ಮಕ್ಷೇತ್ರದ ಪಾಲಕ ಸಂತ, ಸಂತ ಫ್ರಾನ್ಸಿಸ್ ಜೇವಿಯರ್ ಅವರ ಹೆಸರಿನ ಪ್ರಧಾನಾಲಯದಲ್ಲಿ ಭೂಸ್ಥಾಪನೆ ಮಾಡಲಾಗಿದೆ. ಪ್ರಸಕ್ತ 2019ನೇ ವರ್ಷ ಅತಿ.ವಂ.ಡಾ. ತೋಮಾಸ್ ಪೊತ್ತಕಮೂರಿ ಅವರು, ತೀರಿಕೊಂಡ ನಂತರದ ಐವತ್ತು ವಸಂತಗಳನ್ನು ಗುರುತಿಸುವ ವರ್ಷ. ಈ ವರ್ಷ ಅವರ ಸಾರ್ಥಕ ಸೇವೆಯ ಸ್ಮರಣೆಯಲ್ಲಿ ಹತ್ತುಹಲವು ಸಂಭ್ರಮಾಚರಣೆಗಳು ನಡೆಯಬೇಕಿವೆ
ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳ ನಿಲ್ಲದ ನಂಟು:
ಬೆಂಗಳೂರು ಮಹಾಧರ್ಮಕ್ಷೇತ್ರ ಮತ್ತು ಆಂಧ್ರ ಪ್ರದೇಶದ ನಂಟು, ಬೆಂಗಳೂರು ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಅತಿ.ವಂ.ಡಾ. ತೋಮಾಸ್ ಪೊತ್ತಕಮೂರಿ ಅವರೊಂದಿಗೆ ಆರಂಭವಾಗಿ ಅವರೊಂದಿಗೆಯೇ ಕೊನೆಗೊಳ್ಳುವುದಿಲ್ಲ. 1945ರ ಡಿಸೆಂಬರ್ 20ರಂದು ಪೊತ್ತಕಮೂರಿ ಅವರಿಂದ ಯಾಜಕಾಭಿಷೇಕ ಪಟ್ಟವನ್ನು ಪಡೆದ ಬೆಂಗಳೂರು ಜಿಲ್ಲೆಯ ಆನೆಕಲ್ಲಿನ ವಂದನೀಯ ಗುರು ಜೋಸೆಫ್ ರಾಜಪ್ಪ ಅವರು, 1967ರಲ್ಲಿ ಕರ್ನೂಲಿನ ಧರ್ಮಾಧ್ಯಕ್ಷರಾಗಿ ನೇಮಕಗೊಳ್ಳುತ್ತಾರೆ. ಸುಮಾರು ಇಪ್ಪತ್ತು ವರ್ಷಗಳ ಕಾಲ ಅಲ್ಲಿದ್ದ ಅವರನ್ನು ಅವರ 70ರ ವಯಸ್ಸಿನಲ್ಲಿ (1988ರಲ್ಲಿ) ಕಮ್ಮಂ ಧರ್ಮಕ್ಷೇತ್ರಕ್ಕೆ ವರ್ಗಾಯಿಸಲಾಗುತ್ತದೆ. ಅಲ್ಲಿ ಅವರು 1989ರ ಡಿಸೆಂಬರ್ 27ರಂದು ನಿಧನರಾಗಿ ಕ್ರಿಸ್ತಲೋಕ ಸೇರುತ್ತಾರೆ.
ಇಂದಿಗೂ ಕರ್ನಾಟಕ ಮತ್ತು ಆಂಧ್ರದ ನಂಟು ಮುಂದುವರಿದಿದ್ದು ಸಾಕಷ್ಟು ಸಂಖ್ಯೆಯ ಕನ್ನಡದ ಗುರುಗಳು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮತ್ತೆ ಅದೇ ಬಗೆಯಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣದ ಗುರುಗಳು ಕರ್ನಾಟಕದ ವಿವಿಧ ಧರ್ಮಕ್ಷೇತ್ರಗಳಲ್ಲಿ ಕಾರ‍್ಯನಿರ್ವಹಿಸುತ್ತಿರುವುದನ್ನು ಕಾಣಬಹುದು.
●●●