Saturday, 2 February 2019

ಪರೀಕ್ಷೆಗಳೇ ಹೊರತು ಕೆಡುಕೇನಿಲ್ಲ


ಸೃಷ್ಟಿಗೆ ದೇವರ ಕೃಪೆಯು ಹೇರಳವಾಗಿ ದೊರಕಿರುವ ಅನುಗ್ರಹ ಹಾಗೂ ಆದಿಯಿಂದಲೂ ಅಂತ್ಯದವರೆಗೂ ಉಡುಗೊರೆಯಾಗಿ ಸಿಕ್ಕ ವರ. ಭಕ್ತಿ, ಸಂತೋಷ, ತಾಳ್ಮೆ, ಸಹನೆ, ಸಹಾನುಭೂತಿ, ಶಕ್ತಿ, ಯುಕ್ತಿ, ಆರೋಗ್ಯ ಮತ್ತು ಭಾಗ್ಯ ದೇವರ ಕೃಪೆಗಳು. ದೇವರು ನಮ್ಮಲ್ಲಿ ನೆಲಸಿ ನಮ್ಮೊಂದಿಗಿದ್ದು ನಮ್ಮನ್ನು ಮುನ್ನಡೆಸುತ್ತಿದ್ದಾರೆ. ನಮ್ಮ ಕಷ್ಟದಲ್ಲೂ ಸುಖದಲ್ಲೂ ನೋವಿನಲ್ಲೂ ನಲಿವಿನಲ್ಲೂ ಪೂರ್ಣವಾಗಿ ಭಾಗಿಯಾಗಿದ್ದಾರೆ ಮತ್ತು ಕೈ ಬಿಡದೇ ಮುನ್ನಡೆಸುತ್ತಾ ಯಥೇಚ್ಛವಾಗಿ ಪ್ರೀತಿಸಿ ಬಾಳನ್ನು ಅರಸಿ ನಮ್ಮ ಕಣಕಣದಲ್ಲೂ ಅಗೋಚರವಾಗಿದ್ದಾರೆ. ಹೀಗಿರುವಾಗ ಮಾನವ ದೇವನನ್ನು ತೆಗಳಿ ಪ್ರಶ್ನಿಸುವಂತಾಗಿದ್ದಾನೆ. ಸ್ವತಂತ್ರವಾಗಿ ಕೊಟ್ಟ ವರಕೃಪೆಗಳನ್ನು ಉಪಯೋಗಿಸುವ ರೀತಿಯನ್ನು ಅರಿಯದೆ ಸ್ವಾರ್ಥಕ್ಕಾಗಿ ಬಳಸುತ್ತಾ ತೊಂದರೆಗೀಡಾಗಿದ್ದಾನೆ. ಇಂತಿರಲು ದೇವರನ್ನು ಅವರ ನಾಮವನು ತೆಗಳಿ ಪ್ರಶ್ನಿಸುತ್ತಾನೆ. ದೇವನದು ನಿಸ್ವಾರ್ಥ ಪ್ರೀತಿ. ಸ್ನೇಹ ಹಾಗೂ ಸೇವೆ ಅವನಲ್ಲಿರುವಾಗ ಕೇಡೊಂದೂ ಬಾರದು. ಹೀಗಿರುವಾಗ ಪ್ರಶ್ನೆಗಳೇಕೆ ತೆಗಳಿಕೆ ಏಕೆ?

ಅವನಿಂದ ಪರೀಕ್ಷೆಗಳೇ ಹೊರತು ಕೆಡುಕೇನೂ ಆಗದು.

ಇಷ್ಟೆಲ್ಲ ಕೊಟ್ಟ ಆತನಿಗೆ ಪರೀಕ್ಷಿಸಲು ಸ್ವಾತಂತ್ರ್ಯವಿಲ್ಲವೇ?

ಯೋಬನ ಗ್ರಂಥದಲ್ಲಿ ಯೋಬನಿಗೆ ಬಂದ ಕಷ್ಟಗಳನ್ನು ನೆನೆಸಿಕೊಂಡಾಗ,ನಮಗೆ ತಿಳಿಯುತ್ತದೆ; ಯೋಬನಿಗೆ ಬಂದ ಕಷ್ಟಗಳು ಮತ್ತು ಪರೀಕ್ಷೆಗಳು ಕಠೋರವಾದವುಗಳು. ಇಂತಿರಲು ಹೇಗೆ ಯೋಬನು ಪರೀಕ್ಷೆಯಲ್ಲಿ ಉತ್ತೀರ್ಣನಾದನೋ ಹಾಗೆಯೇ ನಾವು ಕೂಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಇದೇ ದೇವರಿಗೆ ನಾವು ತೋರಿಸುವ ನಿಜವಾದ ಪ್ರೀತಿ ಹಾಗೂ ನಿಜವಾದ ಒಡನಾಟ. ಪರೀಕ್ಷೆಯಲ್ಲಿ ಸಾವು ಸಂಭವಿಸಬಹುದು ಆದರೂ ಗೆದ್ದು ಬರಬೇಕು.

ಒಂದೊಮ್ಮೆ ಒಂದು ಪತ್ರಿಕೆಯನ್ನು ಓದುತ್ತಿದ್ದೆ.

ಒಬ್ಬ ಭಕ್ತ ದೇವರನ್ನು ಪರೀಕ್ಷಿಸುತ್ತಾನೆ: 'ಹೇ ದೇವಾ ನಾನು ನಿನ್ನನ್ನು ಎಷ್ಟು ಪ್ರೀತಿಸಿದರೂ ನೀನು ನನ್ನಲ್ಲಿ ಇಲ್ಲ' ಎಂದು ಪ್ರಶ್ನಿಸಿದಾಗ ದೇವರು 'ಭಕ್ತ ನಾನು ಇಂದಿಗೂ ನಿನ್ನಲ್ಲಿ ಇದ್ದೇನೆ' ಎಂದು ಉತ್ತರ ನೀಡಿದರು.

ಆಗ ಆ ಭಕ್ತ"ನಾನು ಹೇಗೆ ನಂಬುವುದು?' ಎಂದು ಕೇಳಿದನು ಆಗ ದೇವರು 'ನೀನು ಆ ಕಡಲ ತೀರದ ಮರಳಿನಲ್ಲಿ ಎರಡೆಜ್ಜೆ ಇಡು ಆಗ ನಿನ್ನೊಂದಿಗೆ ನಾನು ಎರಡೆಜ್ಜೆ ಇಡುವುದನ್ನು ನೋಡುವೆ' ಎಂದರು ಹಾಗೆಯೇ ಭಕ್ತನು ಮರಳಿನಲ್ಲಿ ನಡೆಯುವಾಗ ಅವನ ಹೆಜ್ಜೆಯೊಂದಿಗೆ ಮತ್ತೆರಡು ಹೆಜ್ಜೆಗಳು ಕಾಣತೊಡಗಿದವು ಹೀಗೆ ಕಾಲಗಳು ಉರುಳಿದವು ಭಕ್ತನ ಬಂಧು-ಬಳಗದವರ ಎಲ್ಲರೂ ದೂರ ಆದರು. ಭಕ್ತನಿಗೆ ಸಂಕಷ್ಟಗಳು ಬಂದವು.

ಹೀಗೆ ಬಂಧು ಬಳಗದವರು ದೂರ ಆಗಲು ಭಕ್ತನು ಬೇಸರದಿಂದ ಇದ್ದನು. ಹೀಗೆ ಇರುವಾಗ ಮತ್ತೊಮ್ಮೆ ಆಲೋಚನೆ ಬಂದಿತು. ಬಂಧು ಬಳಗದವರು ದೂರವಾದರು, ಆದರೆ ದೇವರು ದೂರಾದರೋ ಎಂದು ಪ್ರಶ್ನೆ ಮನಸ್ಸಿನಲ್ಲಿ ಬಂದಿತ್ತು. ಹೀಗಾಗಿ ಅವನು ಮತ್ತೊಮ್ಮೆ ದೇವರನ್ನು ಪರೀಕ್ಷಿಸಿದನು. ಈ ಬಾರಿಯೂ ಸಮುದ್ರದ ಕಡಲ ತೀರದ ಮರಳಿನಲ್ಲಿ ಎರಡು ಹೆಜ್ಜೆ ಇಟ್ಟನು. ಆದರೆ ದೇವರ ಮತ್ತೆರಡು ಹೆಜ್ಜೆಗಳು ಕಾಣಸಿಗಲಿಲ್ಲ. ಇದನ್ನು ನೋಡಿದ ಭಕ್ತ ನೊಂದು ದೇವರನ್ನು ಪ್ರಶ್ನಿಸಿದನು 'ಹೇ ದೇವಾ ಬಳಗದವರು ದೂರ ಆದರು ಸರಿ, ಆದರೆ ನೀನು ದೂರ ಆಗೋದು ಸರಿಯೇ?' ಎಂದು. ಆಗ ದೇವರು 'ಮಗೂ, ನಾನು ದೂರ ಆಗಲಿಲ್ಲ ಬದಲಾಗಿ ನಿನ್ನೊಂದಿಗೆ ಇದ್ದೆ, ನೀನು ಕಡಲ ತೀರದಲ್ಲಿ ಹೆಜ್ಜೆಯನ್ನು ಇಡುವಾಗ ಅದು ನನ್ನ ಹೆಜ್ಜೆಗಳೇ ಆಗಿದ್ದವು, ಅವು ನಿನ್ನ ಹೆಜ್ಜೆಗಳಲ್ಲ, ಆಗ ನೀನು ನನ್ನ ಮಡಿಲಲ್ಲಿ ಇದ್ದೆ, ನಾನು ನಿನಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದೆ. ನಿನಗೆ ಕಾಲ ಕೂಡಿ ಬಂದು ಸಮರ್ಥನು ಆಗುವವರೆಗೂ ನಾನು ನಿನ್ನನ್ನು ಕೆಳಗೆ ಬಿಡಲಿಲ್ಲ. ಸಮರ್ಥನಾದ ಮೇಲೆ ಕೆಳಗೆ ಬಿಟ್ಟೆ' ಎಂದು ಉತ್ತರವಿತ್ತರು. 

ಹೀಗೆ ಅವನು ಸಮರ್ಥನಾದ ಮೇಲೆ ದೇವರು ಕೆಳಗೆ ಬಿಟ್ಟು ಅವನು ಸುಧಾರಿಸಿಕೊಂಡು ಸಂಕಷ್ಟಗಳು ದೂರಾದವು. ಬಂದು ಬಳಗದವರು ಸೇರಿದರು. ಇದೇ ಆ ದೇವರ ಪ್ರೀತಿ ಹಾಗೂ ದೇವರ ಕೃಪೆ. ಪರಮನ ಮಕ್ಕಳಾದ ನಾವು ಎಂದೆಂದಿಗೂ ದೇವರ ಕೃಪೆಗೆ ಪಾತ್ರ. ಮಕ್ಕಳಾದ ನಾವು ಎಂದಿಗೂ ದೇವರನ್ನು ಪ್ರಶ್ನಿಸಬಾರದು ಹಾಗೂ ಪರೀಕ್ಷಿಸಬಾರದು. ಇತರ ಜೀವಿಗಳೇ ನಂಬಿ ಬದುಕಿ ಗೆದ್ದು ಜೀವನ ಸಾಗಿಸುವಾಗ ಎಲ್ಲದರಲ್ಲೂ ಸಾಮರ್ಥ್ಯವುಳ್ಳ ಹಾಗೂ ಯೋಗ್ಯತೆಯುಳ್ಳ ನಾವು ದೇವರನ್ನು ಪ್ರಶ್ನಿಸಿ ಅವರನ್ನು ಪರೀಕ್ಷಿಸುವುದು ಸರಿಯಲ್ಲ ಎಂಬುದು ನನ್ನ ವಾದ. 

ದೇವರನ್ನು ಪ್ರೀತಿಸಿ ಎಲ್ಲಾ ಪರೀಕ್ಷೆಗಳನ್ನು ಗೆದ್ದು ಅವನ ಕೃಪೆಗೆ ಪಾತ್ರರಾಗಲು ಅವನಲ್ಲಿ ಮುಗ್ಧ ಮನಸ್ಸಿನಿಂದ ಪ್ರಾರ್ಥಿಸುವುದು ಬೇಡಿಕೊಳ್ಳುವುದು ಸೂಕ್ತ. ಕ್ರಿಸ್ತನು ಹೇಳಿದ ಪ್ರಕಾರ 'ಕೇಳಿರಿ ಕೊಡಲಾಗುವುದು, ತಟ್ಟಿರಿ ತೆರೆಯಲಾಗುವುದು, ಹುಡುಕಿರಿ ಸಿಗುವುದು' ಎನ್ನುವಾಗ ದಾರಿ ಹುಡುಕುವುದು ಕೇಳುವುದು ತಟ್ಟುವುದು ತಪ್ಪಲ್ಲ. ಆದ್ದರಿಂದ ನಾವು ಅವನ ಪರಮ ಮಕ್ಕಳಾಗಿ ಕೇಳುವುದು ತಟ್ಟುವುದು ಹಾಗೂ ಹುಡುಕುವುದು ನಮ್ಮ ಹಕ್ಕು. ಹೀಗಾಗಿ ಪ್ರಾರ್ಥಿಸಿರಿ, ಅವನು ಎಂದಿಗೂ ಇಲ್ಲ ಎನ್ನುವುದಿಲ್ಲ. ಕೊಡುವನು ಪ್ರೀತಿಸುವನು ಕರುಣಿಸುವನು ಹಾಗೂ ಸ್ನೇಹಿಸುವನು, ಅಂತಹ ದೇವನು ನಮ್ಮ ಪ್ರಭು ಕ್ರಿಸ್ತನು. 

¨ ಇನ್ಫೆಂಟ್  ಕಿಶೋರ್


●●●





No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...