
ಶಿವಶರಣರ, ಲಿಂಗಾಯತ ಧರ್ಮದ ಪ್ರಾಥಮಿಕ ಅಗತ್ಯವಾದ ದಾಸೋಹವನ್ನು ಅವರು ಅಕ್ಷರಶಃ ಪಾಲಿಸಿ ತೋರಿಸಿದ್ದರು. ಅದರಲ್ಲೂ ತ್ರಿವಿಧ ದಾಸೋಹ, ಎಂದರೆ ಅನ್ನ, ಅಕ್ಷರ ಮತ್ತು ಅರಿವನ್ನು ಸೇವಾ ಮನೋಭಾವದಿಂದ ಹಂಚುವುದು. ಹಸಿದವರಿಗೆ ಅನ್ನ ನೀಡದೆ ತಾವು ಉಣ್ಣಬಾರದೆಂಬುದು ಬಸವಾದಿ ಪ್ರಮಥರ ಪರಮಧ್ಯೇಯವಾಗಿತ್ತು.
ಕಾಲಾಂತರದಲ್ಲಿ ಸಮಾಜೋದ್ಧಾರದ ಆಯಾಮವನ್ನು ಪಡೆದುಕೊಂಡ ಈ ದಾಸೋಹ ಕ್ರಿಯೆಯು ಎಲ್ಲರಿಗೂ ಶಿಕ್ಷಣವನ್ನು ನೀಡುವ ಮಣಿಹಕ್ಕೆ ಆತುಕೊಂಡಿತು. ಹೀಗೆ ಹಳ್ಳಿಹಳ್ಳಿಗಳಲ್ಲಿ ಅಯ್ಯಗಳ ಮಠ ಅಂದರೆ ವೀರಶೈವ ಸ್ವಾಮಿಗಳು ನಡೆಸುತ್ತಿದ್ದ ಪಾಠಶಾಲೆಗಳು ಸ್ಥಾಪಿತವಾದವು. ಶಿವಕುಮಾರ ಸ್ವಾಮಿಗಳ ನಿಸ್ಪೃಹ ಮಾರ್ಗದರ್ಶನದಲ್ಲಿ ಸಿದ್ದಗಂಗಾ ಮಠವು ಅಂಥ ತ್ರಿವಿಧ ದಾಸೋಹವೆಂಬ ಕಾಯಕದಲ್ಲಿ ತೊಡಗಿಕೊಂಡು ಸಮಾಜದ ಎಲ್ಲರಿಗೂ ಜ್ಞಾನಬೋಧೆ ನೀಡುವ ಪುಣ್ಯಕಾರ್ಯದಲ್ಲಿ ನಿರತವಾಯಿತು. ಮಠವು ತಮ್ಮ ಧರ್ಮದವರಿಗಲ್ಲದೆ ಇನ್ನಿತರರಿಗೂ ಶಿಸ್ತುಬದ್ಧ ಮತ್ತು ನೀತಿಯುತ ವಿದ್ಯೆಯನ್ನು ಧಾರೆಯೆರೆಯಿತು. ಸ್ವಾಮಿಗಳು ಮತ್ತು ಮಠವು ರಾಜಕೀಯದಿಂದ ಹೊರತಾಗಿದ್ದರೂ ಕಳೆದೊಂದು ದಶಕದಲ್ಲಿ ರಾಜಕಾರಣಿಗಳು ಮಠವನ್ನು ತಮ್ಮ ತೆವಲುಗಳಿಗೆ ಬಳಸಿಕೊಂಡಿದ್ದರು ಎಂಬುದಂತೂ ಸತ್ಯ. ಅದೇನೇ ಇದ್ದರೂ ಸ್ವಾಮಿಗಳ ಸಾವಿನಲ್ಲಿ ಸಮಾಜದ ಎಲ್ಲ ಧರ್ಮಗಳ ಜನರು ಕಂಬನಿ ಮಿಡಿದರು. ಕನ್ನಡನಾಡಿನ ಕಥೋಲಿಕ ಬಿಷಪರು ನಮ್ಮ ಕ್ರೈಸ್ತಧರ್ಮದ ಆಶಯಗಳನ್ನೇ ಹೊತ್ತಿದ್ದ ಸ್ವಾಮಿಗಳ ಸಾವನ್ನು ಅಪ್ರತಿಮ ಕ್ರೈಸ್ತನ ಸಾವೆಂದು ಬಣ್ಣಿಸಿ ಸಂತಾಪ ವ್ಯಕ್ತಪಡಿಸಿದರು. ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘದ ವತಿಯಿಂದ ಬೆಂಗಳೂರಿನ ಪುರಭವನದ ಮುಂದೆ ಮೇಣದಬತ್ತಿ ಹಿಡಿದು ಪ್ರಾರ್ಥನೆಯ ಮೂಲಕ ಮೃತರಿಗೆ ಗೌರವ ಸಲ್ಲಿಸುವ ಸುಕಾರ್ಯ ನೆರವೇರಿತು.
ಸಮಾಜದ ಯಾವುದೇ ಆಗುಹೋಗಗಳನ್ನು ತಮ್ಮ ಗುಪ್ತ ಕಾರ್ಯಸೂಚಿಗೆ ಬಳಸಿಕೊಳ್ಳುವ ಕುತ್ಸಿತ ಮನೋಭಾವದ ಸಂಘಿಗಳು ಇದೇ ಸಂದರ್ಭದಲ್ಲಿ ಒಂದು ಸಂದೇಶವನ್ನು ವಾಟ್ಸಾಪಿನಲ್ಲಿ ಹರಿಬಿಟ್ಟಿದ್ದರು. ಮೃತ ಶಿವಕುಮಾರ ಸ್ವಾಮಿಗಳು ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜದ ಎಲ್ಲವರ್ಗದವರಿಗೆ ಶಿಕ್ಷಣ ನೀಡಿ ಮೇಲೆತ್ತಿದರು. ಅದೇ ಮದರ್ ತೆರೇಸಾರವರು ನತದೃಷ್ಟರ ಆರೈಕೆ ಮಾಡುವುದರ ಜೊತೆಗೆ ಅವರನ್ನು ಕ್ರೈಸ್ತಧರ್ಮಕ್ಕೆ ಮತಾಂತರಿಸಿದರು. ಶಿವಕುಮಾರ ಸ್ವಾಮಿಗಳು ಯಾರೆಂದು ಎಷ್ಟೋ ಜನಕ್ಕೆ ಗೊತ್ತಿಲ್ಲ ಆದರೆ ಮದರ್ ತೆರೇಸಾರವರು ಹೊಂದಿದ್ದ ನೆಟ್ವರ್ಕ್ ಅವರಿಗೆ ಭಾರತರತ್ನ ಮತ್ತು ನೊಬೆಲ್ ಪ್ರಶಸ್ತಿ ಹಾಗೂ ಅಸಂಖ್ಯಾತ ಪುರಸ್ಕಾರಗಳನ್ನು ಪಡೆದುಕೊಡುವಲ್ಲಿ ಸಫಲವಾಯಿತು ಎಂಬುದೇ ಆ ವಾಟ್ಸಾಪ್ ಸಂದೇಶದ ಸಾರ. ಶಿವಕುಮಾರಸ್ವಾಮಿಗಳ ಸತ್ಕಾರ್ಯಗಳನ್ನು ಹೊಗಳುವ ಭರದಲ್ಲಿ ಮದರ್ ತೆರೇಸಾರನ್ನು ತೆಗಳುವ ಹುನ್ನಾರವಾಗಿತ್ತು. ಇಂತಹ ಕೃತ್ಯಗಳು ಇಂದು ನಿನ್ನೆಯದಲ್ಲ. ಕ್ರೈಸ್ತ ಮಿಷನರಿಗಳನ್ನು, ಕ್ರೈಸ್ತ ಸಾಹಿತ್ಯವನ್ನು, ಕ್ರಿಸ್ತ ಧರ್ಮಾವಲಂಬಿಗಳನ್ನು ಕಂಡರೆ ಹಲ್ಲುಕಡಿಯುವ ಒಂದು ಜನವರ್ಗವೇ ನಮ್ಮ ದೇಶದಲ್ಲಿದೆ. ಸರ್ವರಿಗೂ ಸಮಪಾಲು ಸಮಬಾಳು ಎಂದ ಶರಣಸಂದೇಶವಾಗಲೀ, ಪ್ರತಿ ಮನುಷ್ಯನನ್ನೂ ನಿನ್ನಂತೆಯೇ ಪರಿಭಾವಿಸು ಎಂದ ಕ್ರಿಸ್ತಸಂದೇಶವಾಗಲೀ ಈ ಜನವರ್ಗಕ್ಕೆ ರುಚಿಸುವುದಿಲ್ಲ.
ಅಯ್ಯಪ್ಪ ದೇಗುಲಕ್ಕೆ ಋತುವಯಸ್ಕ ಮಹಿಳೆಯರಿಗೂ ಪ್ರವೇಶ ಕಲ್ಪಿಸಬೇಕೆಂದು ಕೆಲ ಪ್ರಗತಿಪರರು ಅಖಾಡಕ್ಕಿಳಿದಿದ್ದು ಆನಂತರ ಅದು ರಾಷ್ಟ್ರೀಯ ಸುದ್ದಿಯಾದದ್ದೂ ಈ ದಿನಗಳ ಪ್ರಚಲಿತ ವಿದ್ಯಮಾನವಾಯಿತು. ಈ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ವಾಮಮಾರ್ಗ ಅನುಸರಿಸಿದ ಕ್ರಾಂತಿಕಾರಿಗಳ ನಡೆಯ ಬಗ್ಗೆ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಒಂದೆಡೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ವಿರುದ್ಧ ಒಂದುವರ್ಗ ಭಾರೀ ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಲಿಂಗ ಸಮಾನತೆಗೆ ಆಗ್ರಹಿಸಿ ವನಿತೆಯರು ಆಂದೋಲನ ಕೈಗೊಂಡಿದ್ದೂ ಕುತೂಹಲಕಾರಿ ಸಂಗತಿ. ಏನೇ ಆಗಲಿ ಸಧ್ಯಕ್ಕೆ ಈ ರಾದ್ಧಾಂತ ತಣ್ಣಗಾಗಿದೆ, ಮತ್ತೆ ಮುಂದಿನ ಸಂಕ್ರಾಂತಿಗೆ ಇದು ಗರಿಗೆದರುವುದೇನೋ ನೋಡೋಣ.
ಅಂತಿಮ ದನಿ: ಅಮೆರಿಕದ ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್‌ಮೆಂಟ್ ಪ್ರೊಫೆಸರ್ ಆಗಿರುವ ಫಿಲಿಪ್ ಕೋಟ್ಲರ್ ಎಂಬುವವರು ತಮ್ಮ ಹೆಸರಿನಲ್ಲಿ ಪ್ರಾರಂಭಿಸಿರುವ ನಾಯಕತ್ವ ಪ್ರಶಸ್ತಿಯನ್ನು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪ್ರದಾನ ಮಾಡಿದರು. ಈ ಕುರಿತು ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿಯವರು "ಜೂರಿಗಳೇ ಇಲ್ಲದ ಒಂದು ಏಕವ್ಯಕ್ತಿಯ ಕಾಗದದ ಸಂಸ್ಥೆ ನೀಡಿದ ಒಂದು ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಕ್ಕಾಗಿ ನಿಮ್ಮನ್ನು ಅಭಿನಂದಿಸಲೇಬೇಕು" ಎಂದು ನುಡಿದದ್ದು ಮಾರ್ಮಿಕವಾಗಿತ್ತು.
●●●
No comments:
Post a Comment