Sunday, 3 February 2019

ನಡೆದಾಡಿದ ದೇವರಿಗೆ 111 ನಮನ

ತುಮಕೂರಿನ ಪೂಜ್ಯ ಸಿದ್ಧಗಂಗಾ ಮಠದಲ್ಲಿ ದೀನದಲಿತರ ಸೇವೆಗೈದು 21 ಜನವರಿ 2019ರಂದು 'ನಡೆದಾಡುವ ದೇವರು' ಎಂದೇ ಹೆಸರಾಗಿದ್ದ ಶ್ರೀಗಳಾದ ಡಾ.ಶಿವಕುಮಾರ ಮಹಾಸ್ವಾಮಿಗಳು 111 ವರ್ಷಗಳ ಸಾರ್ಥಕ ಬದುಕನ್ನು ಬಾಳಿ ಲಿಂಗೈಕ್ಯರಾದರು.
ಶತಮಾನದ ಸಂತ ಪೂಜ್ಯನೀಯ ಶ್ರೀ ಶಿವಕುಮಾರ ಸ್ವಾಮಿಯವರ ನಿಧನದ ಸುದ್ದಿ ಕೇಳಿದಾಗ ನನ್ನ ಮನಸ್ಸಿಗೆ ತಟ್ಟನೆ ಬಂದವನು ನಮ್ಮೂರಿನ ನನ್ನ ಬಾಲ್ಯದ ಗೆಳೆಯ ದಿನೇಶ ಹಾಗೂ ನಾನು ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡುವಾಗ ಬಾಯಿಪಾಠ ಮಾಡಿದ ಕವಿ ಜಿ ಎಸ್ ಶಿವರುದ್ರಪ್ಪನವರು ಬರೆದ ಕವನ. ಹಲವಾರು ಬಡ ಮಕ್ಕಳಿಗೆ ಶಿವಕುಮಾರ ಮಹಾಸ್ವಾಮಿಗಳು ಅನ್ನ, ಅಕ್ಷರ ಹಾಗೂ ಅಶ್ರಯ ನೀಡಿ ತ್ರಿವಿಧ ದಾಸೋಹಿಯಾಗಿದ್ದರು. ಮಿತ್ರ ದಿನೇಶ ಸ್ವಾಮೀಜಿಯ ಸೇವೆಯ ಫಲಾನುಭವಿಗಳಲ್ಲೊಬ್ಬ. ಬಡ-ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೋಸ್ಕರವೇ ಸುಮಾರು 125 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬೆಳೆಸಿದ ಶ್ರೀಗಳು ಲಕ್ಷಾಂತರ ವಿದ್ಯಾರ್ಥಿಗಳ ಜೀವನವನ್ನು ಬೆಳಗಿಸಿದ್ದಾರೆ.

ಕವಿ ಜಿ ಎಸ್ ಶಿವರುದ್ರಪ್ಪ ತನ್ನ ಕವನವೊಂದರಲ್ಲಿ ಬರೆಯುತ್ತಾರೆ:

ಏಲ್ಲೋ ಹುಡುಕಿದೆ ಇಲ್ಲದ ದೇವರ

ಕಲ್ಲು ಮಣ್ಣಿನ ಗುಡಿಯೊಳಗೆ

ಇಲ್ಲೇ ಇರುವ ಪ್ರೀತಿ ಸ್ನೇಹಗಳ

ಗುರುತಿಸದಾದೆನು ನಮ್ಮೊಳಗೆ.

ಸಮಾಜ ಸುಧಾರಕ ಬಸವಣ್ಣರವರ ಅನುಯಾಯಿ, ಕಾಯಕದ ಕರ್ಮಯೋಗಿಯಾದ ಪೂಜ್ಯರು ಬಡವರ ಸೇವೆ ಗೈಯುತ್ತಾ ಸಮಾಜದ ದಮನಿತ ದನಿಗಳ ಪ್ರೀತಿ ಮತ್ತು ಸ್ನೇಹದಲ್ಲಿ ದೇವರನ್ನು ನಿರಂತರ ಹುಡುಕಿದರು. ದೇವರ ಪೂಜೆಗಿಂತಲೂ ಅನ್ನ-ಅರಿವು ನೀಡುವುದೇ ಮಹಾಕಾರ್ಯ ಎಂದು ಪರಿಗಣಿಸಿದ್ದರು. 

'ತುಂಬಿದ ಕೊಡ ತುಳುಕುವುದಿಲ್ಲ' ಎಂಬ ನಾಣ್ಣುಡಿಯಂತೆ ಶತಾಯು: ಪುರುಷ ಶ್ರೀ ಶಿವಕುಮಾರ ಸ್ವಾಮಿಗಳದ್ದು ನಮ್ರ ಸ್ವಭಾವ. ಸರಳತೆಯನ್ನು ಮೈಗೂಡಿಸಿಕೊಂಡಿದ್ದರು. ಯಾವುದೇ ಭೇದ-ಭಾವ ಮಾಡದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. ಅದ್ದರಿಂದ ಶ್ರೀಗಳ 112ಜನ್ಮ ದಿನದ ಸಂದರ್ಭದಲ್ಲಿ ಕವಿ ಜಿ.ಎಸ್ ಶಿವರುದ್ರಪ್ಪನವರು ತಾವು ವಿದ್ಯೆ ಪಡೆದ ಸಿದ್ಧಗಂಗೆಯ ಶ್ರೀಗಳ ಗುಣಗಾನವನ್ನು ಈ ಕೆಳಗಿನಂತೆ ಮಾಡಿದ್ದರು.

ಸದ್ದು ಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆಯೇರಿದೆ

ಕಾಯಕವೆ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ

ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ

ಎಲ್ಲ ನನ್ನವರೆನ್ನುವ ಭಾವದ ಕರುಣೆಯೇ ಕಣ್ತೆರೆದಿದೆ
ಪೂಜ್ಯರ ಮರಣದ ನಂತರ ಕರ್ನಾಟಕದ ಎಲ್ಲೆಡೆ ಸದ್ದುಗದ್ದಲ. ಭಾರತ ಸರ್ಕಾರ ಶ್ರೀಗಳಿಗೆ 'ಭಾರತರತ್ನ' ನೀಡದ್ದಕ್ಕೆ ಎಲ್ಲೆಡೆ ಆಕ್ರೋಶ ಹಾಗೂ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಡಾ. ಶಿವಕುಮಾರ ಮಹಾಸ್ವಾಮಿಯವರ ಬದುಕಿನಿಂದ ಪ್ರೇರಣೆಗೊಂಡು ಅವರ ಮೌಲ್ಯಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಪಾಲಿಸಿ ನಡೆದರೆ ಆದೇ ಅವರಿಗೆ ನಾವು ಸಲ್ಲಿಸುವ ಶೇಷ್ಠ ಸನ್ಮಾನವಲ್ಲವೇ?
¨ ಫಾ. ಜಾನ್ ಪ್ರದೀಪ್ ಯೇ.ಸ


●●●



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...