Saturday, 2 February 2019

ಕ್ರೈಸ್ತ ಐಕ್ಯತಾ ಸಪ್ತಾಹ

----------------------------------------------------------
ಏನಿದು ಕ್ರೈಸ್ತ ಐಕ್ಯತೆಯ ಸಪ್ತಾಹ? ನನ್ನ ಗೆಳೆಯನೊಬ್ಬ ಒಂದು ಸಂದೇಶ ಹೀಗೆಂದು ಬರೆದು ಕಳುಹಿಸಿದ. ನೀನು ಮಾಡಿದ ಪೂಜಾ ಪಂಚಾಂಗದಲ್ಲಿ ಈ ವಾರ ಕ್ರೈಸ್ತ ಐಕ್ಯತೆಯ ಸಪ್ತಾಹ ಎಂದು ಬರೆದಿದೆ, ಏನದು? ಇದಕ್ಕೆ ಕಾರಣ ನಮ್ಮಲ್ಲಿ ಐಕ್ಯತೆ ಇಲ್ಲದಿರುವುದೇ ಅಥವಾ ಎಲ್ಲಾದರೂ ಚರ್ಚುಗಳಲ್ಲಿ ಗಲಾಟೆ ಏನಾದರೂ ನಡೆದಿದೆಯೇ? ಎಂಬ ಪ್ರಶ್ನೆಯನ್ನು ಕಳುಹಿಸಿದ. ಇದನ್ನು ಯಾಕೆ ಲೇಖನದ ಮೂಲಕ ದನಿಗೆ ಬರೆಯಬಾರದು ಎಂದುಕೊಂಡು ಇಲ್ಲಿ ಬರೆಯುತ್ತಿದ್ದೇನೆ. 
------------------------------------------------------
ಏನಿದು ಕ್ರೈಸ್ತ ಐಕ್ಯತೆಯ ಸಪ್ತಾಹ? ನನ್ನ ಗೆಳೆಯನೊಬ್ಬ ಒಂದು ಸಂದೇಶ ಬರೆದು ಕಳುಹಿಸಿದ. “ನೀನು ಮಾಡಿದ ಪೂಜಾ ಪಂಚಾಂಗದಲ್ಲಿ ಈ ವಾರ ಕ್ರೈಸ್ತ ಐಕ್ಯತೆಯ ಸಪ್ತಾಹ ಎಂದು ಬರೆದಿದೆ, ಏನದು, ಇದಕ್ಕೆ ಕಾರಣ ನಮ್ಮಲ್ಲಿ ಐಕ್ಯತೆ ಇಲ್ಲದಿರುವುದೋ ಅಥವಾ ಎಲ್ಲಾದರೂ ಚರ್ಚುಗಳಲ್ಲಿ ಗಲಾಟೆ ಏನಾದರೂ ನಡೆದಿದೆಯೋ? “

ಇದನ್ನು ಯಾಕೆ ಲೇಖನದ ಮೂಲಕ ದನಿಗೆ ಬರೆಯಬಾರದು ಎಂದುಕೊಂಡು ಇಲ್ಲಿ ಬರೆಯುತ್ತಿದ್ದೇನೆ. ಕಥೋಲಿಕ ಕ್ರೈಸ್ತರಾದ ನಮಗೆ ಕ್ರೈಸ್ತ ಐಕ್ಯತೆಯ ಸಪ್ತಾಹದ ಬಗ್ಗೆ ಅಷ್ಟು ಪರಿಚಯವಿಲ್ಲ. ಇದರ ಅರ್ಥ ನನಗೂ ಕೂಡಾ ತಿಳಿದಿರಲಿಲ್ಲ. ಮೊನ್ನೆ ನಮ್ಮ ಗುರುಮಠದ ಬೋಧಕರಾದ ವಂದನೀಯ ಸ್ವಾಮಿ ಜೆ.ಬಿ ಸಲ್ಡಾನ ರವರು ನಮಗೆ ನೀಡಿದ ಬೋಧನೆಯ ಸಾರಾಂಶವೇ ಈ ನನ್ನ ಲೇಖನ. 

ಫಾದರ್ ಜೆ.ಬಿ ಒಬ್ಬ ದಕ್ಷ , ಧೀಮಂತ ಆಡಳಿತಗಾರ ಮತ್ತು ಒಬ್ಬ ಒಳ್ಳೆಯ ಬೋಧಕ. ಅವರು ಐಕ್ಯತೆ ಬಗ್ಗೆ ನಮ್ಮೆಲ್ಲರಿಗೂ ಒಂದು ಪ್ರಶ್ನೆಯನ್ನು ಹಾಕಿದರು. ಕ್ರೈಸ್ತ ಐಕ್ಯತೆ ಎನ್ನುವುದು ದೊಡ್ಡ ಸಂಗತಿ. ಕ್ರೈಸ್ತ ಐಕ್ಯತೆಗಾಗಿ ಪ್ರಾರ್ಥಿಸುತ್ತಿರುವ ನೀವು ಗುರುವಾಗಿ ಮುಂದೆ ಇದಕ್ಕಾಗಿ ಶ್ರಮಿಸಬೇಕು. ಗುರುಮಠದಲ್ಲಿರುವ ಈಗ ನೀವು ಅದನ್ನು ಹೇಗೆ ಪ್ರಾರಂಭಿಸಬೇಕು ಎಂದರೆ ಮೊದಲು ನಮ್ಮ ಕಥೋಲಿಕ ಕ್ರೈಸ್ತ ವ್ಯಕ್ತಿಯನ್ನು ಬಿಟ್ಟು ಬೇರೆ ಪಂಗಡದ ಒಬ್ಬ ವ್ಯಕ್ತಿಯೊಂದಿಗೆ ಗೆಳೆತನ ಮಾಡಬೇಕು. ಆಗ ನೀವು ಪ್ರಾರ್ಥಿಸಿದ ಪ್ರಾರ್ಥನೆಗೆ ಒಂದು ಅರ್ಥ ಎಂದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನಾನು ಕ್ರೈಸ್ತ ಐಕ್ಯತೆಯ ಪ್ರಾರ್ಥನೆಗೆಂದು ಬಂದ ಒಬ್ಬ ಸಿ.ಎಸ್.ಐ ಚರ್ಚಿನ ದೈವಶಾಸ್ತ್ರದ ವಿದ್ಯಾರ್ಥಿಯೊಂದಿಗೆ ಸ್ನೇಹ ಬೆಳೆಸಿದೆ. ಆಗ ನನಗೆ ಎಷ್ಟೋ ವಿಷಯಗಳು; ಅವರ ಬಗ್ಗೆ, ಅವರು ನಮ್ಮನ್ನು ಹೇಗೆ ನೋಡುತ್ತಾರೆ ಎನ್ನುವ ವಿಷಯದ ಬಗ್ಗೆ ತಿಳಿಯಿತು.

ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಪ್ರಭು ಯೇಸುಕ್ರಿಸ್ತರು ಕ್ರೈಸ್ತ ಧರ್ಮಸಭೆಯನ್ನು ಸ್ಥಾಪಿಸಿದರು, ಅದು ಇಂದು ಪ್ರಪಂಚದ ಮೂಲೆಮೂಲೆಗಳಿಗೆ ವಿಶಾಲವಾಗಿ ಬೆಳೆದು ನಿಂತಿದೆ. ಈ ಒಂದು ಕ್ರಿಸ್ತನ ಪರಿಚಯ ಕಾರ್ಯ ಹಲವಾರು ಕ್ರೈಸ್ತ ಮಿಶನರಿಗಳ ಮುಖಾಂತರ ಪ್ರಚಾರಗೊಂಡಿತ್ತು. ’ಹೋಗಿರಿ ಸಕಲ ದೇಶಗಳ ಜನರನ್ನೂ ನನ್ನ ಶಿಷ್ಯರನ್ನಾಗಿ ಮಾಡಿರಿ’ (ಮತ್ತಾಯ 28:19) ಎಂಬ ಪ್ರಭು ಯೇಸುಕ್ರಿಸ್ತರ ಆಜ್ಞೆಯನ್ನು ಅವರ ಶಿಷ್ಯರು ಮತ್ತು ಹಿಂಬಾಲಕರು ಕಾರ್ಯರೂಪಕ್ಕೆ ತಂದಿದ್ದಾರೆ. ಯೇಸುಕ್ರಿಸ್ತರು ಈ ಲೋಕಕ್ಕೆ ಬಂದಿದ್ದು ನಮ್ಮೆಲ್ಲರನ್ನೂ ಪಿತದೇವರಲ್ಲಿ ಒಂದು ಮಾಡಲು. ತಂದೆಯೇ, ನಾವು ಒಂದಾದಂತೆ, ಇವರೆಲ್ಲರೂ ಒಂದಾಗಲಿ. ಹೇಗೆ ಪಿತ, ಸುತ, ಮತ್ತು ಪವಿತ್ರಾತ್ಮಾರು ಒಂದಾಗಿ ತ್ರೈಯಕ ದೇವರಾಗಿ ಜೀವಿಸುತ್ತಾರೋ, ಅಂತೆಯೇ ನಾವೂ ಕೂಡಾ ಒಂದಾಗಿ ಜೀವಿಸಬೇಕೆಂದು ಪ್ರಭು ಯೇಸುಕ್ರಿಸ್ತರು ಅಪೇಕ್ಷಿಸಿದರು. 

ಆದರೆ ವಿವಿಧ ಕಾರಣಗಳಿಗೆ ಕ್ರೈಸ್ತ ಧರ್ಮವು ವಿಭಜನೆಯಾಗಿ ಹಲವಾರು ಪಂಗಡಗಳಾಗಿದ್ದು ಮಾತ್ರ ದುಃಖಕರ ವಿಚಾರವಾಗಿದೆ. 15ನೇ ಮತ್ತು 16ನೇ ಶತಮಾನದಲ್ಲಿ ಕಥೋಲಿಕ ಧರ್ಮಸಭೆಯಲ್ಲಿ ನಡೆಯುತ್ತಿದ್ದ ಅಕ್ರಮಗಳ ವಿರುದ್ದ ದಂಗೆಯೆದ್ದ ಮಾರ್ಟಿನ್ ಲೂಥರ್ ಪ್ರೊಟೆಸ್ಟೆಂಟ್ ಪಂಗಡದ ಉಗಮಕ್ಕೆ ಕಾರಣಕರ್ತರಾದರು. ಅಂದಿನಿಂದ ಇಂದಿನವರೆಗೂ ಕ್ರೈಸ್ತ ಸಭೆಯಲ್ಲಿ ಬಿರುಕು ಇನ್ನೂ ಹೆಚ್ಚಾಗಿ ಪ್ರಪಂಚದಾದ್ಯಂತ ಹಲವಾರು ಪಂಗಡಗಳಾಗಿ ಚಿಗುರಿದವು ಹಾಗೂ ಇಂದಿಗೂ ವಿಭಿನ್ನವಾದ ನೂತನ ಪಂಗಡಗಳು ಉದ್ಭವಿಸುತ್ತಿವೆ. 

ಈ ಅನೇಕ ಕ್ರೈಸ್ತ ಪಂಗಡಗಳ ನಡುವೆ, ಶುಭಸಂದೇಶ ಪ್ರಚಾರ ಕಾರ್ಯದಲ್ಲಿ ಸ್ಪರ್ಧೆ, ಭಿನ್ನಾಭಿಪ್ರಾಯಗಳು ಏರ್ಪಟ್ಟಿವೆ. ಕೆಲವೊಮ್ಮೆ ಕ್ರೈಸ್ತ ವಿಸ್ವಾಸಿಗಳ ಮನಪರಿರ್ವತನೆಯ ಸಂದರ್ಭದಲ್ಲಿ ಒಂದು ಪಂಗಡದ ಕ್ರೈಸ್ತರು ಮತ್ತೊಂದು ಪಂಗಡದವರನ್ನು ಆಪಾದಿಸುವುದು ಸಹಜವಾಗಿದೆ. ಇಂತಹ ಸಂದರ್ಭದಲ್ಲಿ ಈ ಎಲ್ಲಾ ವಿವಿಧ ಪಂಗಡಗಳ ಐಕ್ಯತೆ ಪ್ರಶ್ನಾರ್ಹ ಅಂಶವಾಗಿದೆ. 

ಆದರೆ ಇಂದು ಈ ರೀತಿಯ ಮನೋಭಾವ ಹಾಗೆಯೇ ನಮ್ಮಲ್ಲಿ ಉಳಿದಿಲ್ಲ. ಬದಲಾಗಿ ವಿವಿಧ ಕ್ರೈಸ್ತ ಪಂಗಡಗಳ ನಡುವೆ ಐಕ್ಯತೆ, ಪರಸ್ಪರ ಒಳ್ಳೆಯ ಮನೋಭಾವ, ಸಂಬಂಧಗಳು ಬಲವಾಗುತ್ತಿದೆ. ಹೀಗೆ ವಿವಿಧ ಕ್ರೈಸ್ತ ಪಂಗಡಗಳ ನಡುವೆ ಐಕ್ಯತೆಯನ್ನೂ ತಂದ ಕೀರ್ತಿ ಕ್ರೈಸ್ತ ಪಂಗಡಗಳ ಐಕ್ಯತೆಯ ವಾರದ ಪ್ರಾರ್ಥನಾ ವಿಧಿ (week for Christian unity)ಗೆ ಸಲ್ಲುತ್ತದೆ. ಕ್ರಿಸ್ತರ ಹೆಸರಲ್ಲಿ ವಿಭಜನೆಗೊಂಡ ವಿವಿಧ ಕ್ರೈಸ್ತ ಪಂಗಡಗಳನ್ನು ಮಗದೊಮ್ಮೆ ಒಂದಾಗಿಸಲು, ಮುರಿದು ಹೋದ ಸಂಬಂಧವನ್ನು ಸರಿಪಡಿಸಲು ಮಾಡುವ ಒಂದು ಸಂಚಲನಕ್ಕೆ ಸರ್ವ ’ಕ್ರೈಸ್ತರ ಐಕ್ಯತೆ’ ಎಂದು ಕರೆಯುತ್ತಾರೆ. ಸರ್ವ ಕ್ರೈಸ್ತ ಪಂಗಡಗಳು ಒಟ್ಟಾಗಿ ಬಂದು ಪ್ರತಿ ವರ್ಷ ಜನವರಿ 18 ರಿಂದ 25ರ ತನಕ ಒಂದು ವಾರದ ಪ್ರಾರ್ಥನಾವಿಧಿ (Unity Octave) ಆಚರಿಸುತ್ತಾರೆ.

ಒಂದು ಕಾಲದಲ್ಲಿ ಪರಸ್ಪರ ಶತ್ರುಗಳಂತೆ ಜೀವಿಸುತ್ತಿದ್ದ ವಿವಿಧ ಕ್ರೈಸ್ತ ಪಂಗಡಗಳು ಇಂದು ನಾವೆಲ್ಲರೂ ಪ್ರಭು ಯೇಸುಕ್ರಿಸ್ತರಲ್ಲಿ ಸಹೋದರ-ಸಹೋದರಿಯರು ಎಂಬ ಭಾವನೆಯನ್ನು ವ್ಯಕ್ತಪಡಿಸಲು ನಾನಾ ಕಾರಣಗಳಿವೆ. ದ್ವಿತೀಯ ವ್ಯಾಟಿಕನ್ ವಿಶ್ವಸಭೆಯು ಕ್ರೈಸ್ತ ಐಕ್ಯತೆಯ ಬಗ್ಗೆ ಒಂದು ಆದೇಶ ನೀಡಿ ಪ್ರತಿಯೊಬ್ಬ ಕ್ರೈಸ್ತನು ಒಮ್ಮನಸ್ಸಿನಿಂದ ಕ್ರೈಸ್ತ ಐಕ್ಯತೆಗೋಸ್ಕರ ಶ್ರಮಿಸಬೇಕೆಂದು ಕಥೋಲಿಕ ಧರ್ಮಸಭೆ ಕರೆ ನೀಡುತ್ತದೆ. ಹೀಗೆ ಕ್ರೈಸ್ತ ವಿವಿಧ ಪಂಗಡಗಳ ಐಕ್ಯತೆಗೋಸ್ಕರ ಶ್ರಮಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ನಮಗೆ ಮನದಟ್ಟು ಮಾಡಿಕೊಟ್ಟಿದೆ. ಈ ಐಕ್ಯತೆಗಾಗಿ ಕೇವಲ ಒಂದು ವಾರದ ಪ್ರಾರ್ಥನಾವಿಧಿಯ ಸಮಯದಲ್ಲಿ ಮಾತ್ರ ಪ್ರಾರ್ಥಿಸದೆ, ನಮ್ಮ ದಿನನಿತ್ಯ ಜೀವನದಲ್ಲಿ, ನಮ್ಮ ವೈಯಕ್ತಿಕ ಪ್ರಾರ್ಥನೆ ಸಮಯದಲ್ಲಿ ಪ್ರಾರ್ಥಿಸಬೇಕಿದೆ. ಇದಕ್ಕೆ ಪವಿತ್ರಾತ್ಮರ ಕೃಪೆ ಅತ್ಯಗತ್ಯವಾಗಿದೆ. ಈ ಮೂಲಕ ನಾವು ನಮ್ಮದೇ ಆದ ಧೋರಣೆಯನ್ನು ಬಿಟ್ಟು ’ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾರೆ, ಅದನ್ನು ಮಾಡಲು' ನಾವೆಲ್ಲರೂ ಪ್ರಯತ್ನಿಸುತ್ತೇವೆ. ಇದರಿಂದ ಪ್ರತಿಯೊಂದು ಪಂಗಡಗಳು ತಮ್ಮ ಧೋರಣೆ ಬಿಟ್ಟು ಪ್ರತಿಯೊಂದು ವಿಷಯದಲ್ಲಿ ಕಥೋಲಿಕ ಧರ್ಮಸಭೆಗೆ ಒಂದಾಗುತ್ತಾರೆ ಎಂದು ಚಿಂತಿಸುವುದು ತಪ್ಪು. ಪ್ರತಿಯೊಂದು ಕ್ರೈಸ್ತ ಪಂಗಡಗಳು ತಮ್ಮ-ತಮ್ಮ ನೀತಿ, ಧೋರಣೆ, ತತ್ವಗಳನ್ನು ಬಿಡುವುದು ಅಷ್ಟೊಂದು ಸುಲಭದ ಮಾತಲ್ಲ. ಈ ಐಕ್ಯತೆಯನ್ನು ಕೈಗೊಳ್ಳುವುದು ನಮ್ಮ ಜೀವನದ ರೀತಿಯಲ್ಲಿ. ಪರಸ್ಪರರೊಂದಿಗಿರುವ ಒಳ್ಳೆಯ ಸಂಬಂಧದಿಂದ. ಐಕ್ಯತೆ ಮತ್ತು ಪ್ರೀತಿ ಒಟ್ಟಾದಾಗ ನಾವು ಪ್ರಭು ಯೇಸುಕ್ರಿಸ್ತರ ಒಂದೇ ಶರೀರವಾಗುತ್ತೇವೆ. ಅದನ್ನು ನೆರವೇರಿಸಲು ಈ ವರ್ಷದ ಪ್ರಾರ್ಥನಾವಿಧಿಯು ಕ್ರೈಸ್ತರ ಮೂಲ ಬುನಾದಿಯಾಗಬೇಕು.



ಸರ್ವ ಕ್ರೈಸ್ತರ ಐಕ್ಯತಾ ಪ್ರಾರ್ಥನಾ ವಾರ-2019



ಈ ವರ್ಷ ಕ್ರೈಸ್ತ ಐಕ್ಯತೆಯ ಪ್ರಾರ್ಥನೆಗೆ ಆರಿಸಿಕೊಂಡ ವಾಚನ ( ಧರ್ಮೋ 16: 2) “ನೀವು ನ್ಯಾಯವನ್ನು ಮಾತ್ರ ಅನುಸರಿಸಬೇಕು” ಈ ವಾಚನದ ಹಿನ್ನೆಲೆ ನೋಡಿದರೆ ನ್ಯಾಯಾಧಿಪತಿಗಳು ನೇಮಕಗೊಂಡಾಗ ಸರ್ವೇಶ್ವರಸ್ವಾಮಿ ಅವರಿಗೆ ಹೀಗೆ ತಿಳಿಸುತ್ತಾರೆ. ಕ್ರೈಸ್ತ ಐಕ್ಯತೆಗೆ ಶ್ರಮಿಸುತ್ತಿರುವ ನಮಗೆ ನ್ಯಾಯದ ಅಗತ್ಯವಿದೆ. ಈ ಕುರಿತು ಕೆಲ ಚಿಂತನೆಗಳು. ಕ್ರೈಸ್ತರಾದ ನಾವು ಯೇಸುಸ್ವಾಮಿ ಹೇಳಿದಂತೆ 'ನಾನೇ ದ್ರಾಕ್ಷಿ ಬಳ್ಳಿ ನೀವೇ ಅದರ ಕವಲು ಬಳ್ಳಿಗಳು’ (ಯೊವಾನ್ನ 15:5) ಕ್ರೈಸ್ತರಾದ ನಾವು ಯೇಸುಸ್ವಾಮಿಯೊಡನೆ ಒಂದಾಗಿ ನಾವು ಅದರ ಕವಲು ಬಳ್ಳಿಗಳಾಗಿ ಫಲ ಕೊಡಬೇಕು. ಆಗ ಮಾತ್ರ ಅವರು ತೋರಿಸಿದ ಹಾದಿಯಲ್ಲಿ ನಾವು ನಡೆಯಲು ಸಾಧ್ಯ. ಈ ನಮ್ಮ ಬಾಂಧವ್ಯದಿಂದಲೇ ಕ್ರಿಸ್ತನನ್ನು ನಾವು ಇತರರಿಗೆ ಪರಿಚಯಿಸಬೇಕು. ಸಮಾಜದಲ್ಲಿ ನ್ಯಾಯ, ನೀತಿ, ಶಾಂತಿ ಸ್ಥಾಪಿತವಾಗುವುದು. ಕ್ರಿಸ್ತ ಕೂಡಾ ಬಯಸುವುದು ಇದನ್ನೇ. ಕ್ರಿಸ್ತರು ಹೇಳಿದ್ದು ಒಂದೇ ದ್ರಾಕ್ಷಿ ಬಳ್ಳಿ ಆದರೆ ಇಂದು ಆ ದ್ರಾಕ್ಷಾ ಬಳ್ಳಿಯಿಂದ ಅನೇಕ ಕವಲೊಡೆದು ಬಳ್ಳಿಗಳಾಗಿದೆ. ನಮ್ಮೆಲ್ಲರನ್ನೂ ಸೇರಿಸುವ ಬುಡ ಕ್ರಿಸ್ತರಾಗಿದ್ದಾರೆ. ನಮ್ಮ ಭಿನ್ನತೆ ಭೇದಗಳು ಏನೇ ಇರಬಹುದು ಆದರೆ ನಾವೆಲ್ಲರೂ ಕ್ರಿಸ್ತನಲ್ಲಿ ಒಂದಾಗಬೇಕು. ಆಗ ಮಾತ್ರ ನಾವು ನಮ್ಮ ಕ್ರೈಸ್ತ ಕರೆಗೆ ನ್ಯಾಯವನ್ನು ಒದಗಿಸಲು ಸಾಧ್ಯ. ಮತ್ತಾಯ 12: 28 ರಲ್ಲಿ ಯೇಸುಸ್ವಾಮಿಯ ಬಗ್ಗೆ ಹೀಗಿದೆ - 'ನ್ಯಾಯ ನೀತಿಗೆ ಜಯ ದೊರಕಿಸದೆ ಬಿಡನಿವನು', ಇದು ಖಂಡಿತವಾಗಿಯೂ ಸತ್ಯ. ಅವರು ಜೀವನದುದ್ದಕ್ಕೂ ನ್ಯಾಯ ನೀತಿಗಾಗಿ ಬದುಕಿದವರು ಬಾಳಿದವರು. 

ಕ್ರೈಸ್ತ ಐಕ್ಯತೆಗೆ ಶ್ರಮಿಸುವವರು ಇದು ಸಾಧ್ಯವಿಲ್ಲ ಇದು ಆಗದ ಕೆಲಸ ಎನ್ನಬಹುದು. ಆದರೆ ಲೂಕನು ಶುಭ ಸಂದೇಶದಲ್ಲಿ 18:1ರಲ್ಲಿ ನಾವು ಕಾಣುತ್ತೇವೆ, ಹೇಗೆ ಬಡ ವಿಧವೆ ತನ್ನ ನಿರಂತರ ಕೋರಿಕೆಯಿಂದ ನ್ಯಾಯವನ್ನು ನ್ಯಾಯಾಧಿಪತಿಯಿಂದ ದಕ್ಕಿಸಿಕೊಂಡಳೋ ಆ ರೀತಿ ನಮ್ಮ ಪ್ರಯತ್ನವಾಗಬೇಕು. ಈ ನಿರಂತರತೆಯ ಪ್ರಯತ್ನ ನಮ್ಮದಾಗಲಿ. ನಾವು ಒಂದೇ ಕುಟುಂಬದಂತೆ ಬಾಳಲು, ಎಲ್ಲಾ ಕ್ರೈಸ್ತ ಪಂಗಡಗಳು ಒಂದಾಗಲು ಶ್ರಮಿಸಬೇಕು. ಅಂದು ಕ್ರಿಸ್ತರು ಕಂಡ ಒಂದೇ ಧರ್ಮಸಭೆಯನ್ನು ನಾವು ಕಾಣುವಂತಾಗಲಿ ಎಂದು ಪ್ರಾರ್ಥಿಸೋಣ ಅದಕ್ಕಾಗಿ ಪ್ರಯತ್ನಿಸೋಣ. ಇನ್ನು ಮೇಲಾದರೂ ಕ್ರೈಸ್ತ ಐಕ್ಯತೆಯ ಸಪ್ತಾಹ ಬಂದಾಗ ಮರೆಯದೆ ಪ್ರಾರ್ಥನೆ ಮಾಡೋಣ. ನಮ್ಮ ಫಾದರ್ ಜೆ.ಬಿ ಹೇಳಿದ ಹಾಗೆ ಬೇರೆ ಪಂಗಡದವರಲ್ಲಿ ಒಬ್ಬರನ್ನಾದರೂ ಸ್ನೇಹಿತರನ್ನಾಗಿ ಮಾಡಿಕೊಳ್ಳೋಣ ಅವರ ಬಗ್ಗೆ ತಿಳಿಯೋಣ. 



●●●



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...