1969ಕ್ಕೂ ಹಿಂದೆ, ನಾನಾಗ ಐದನೆಯ ತರಗತಿಯಲ್ಲಿ ಕಲಿಯುತ್ತಿದ್ದೆ. ಆಗ ನಮ್ಮೂರಿನಲ್ಲಿ ಚರ್ಚ್ ಇರಲಿಲ್ಲ. ಪಕ್ಕದ ಊರಿನಿಂದ ಪಾದ್ರಿಗಳು ಬಂದು ನಮ್ಮ ಊರಿನ ಪ್ರವಾಸಿ ಮಂದಿರದಲ್ಲೋ ಅಥವಾ ಸ್ಕೂಲಿನ ಕೊಠಡಿಯಲ್ಲೋ ಬಲಿಪೂಜೆಯನ್ನು ನಡೆಸಿ ಹೋಗುತ್ತಿದ್ದರು. ಅದೇ ವರ್ಷ ನಮ್ಮೂರಿನ ಮಕ್ಕಳಿಗೆ ಪ್ರಥಮ ಪರಮಪ್ರಸಾದವನ್ನು ನೀಡಲು ಅಗತ್ಯವಾದ ಏರ್ಪಾಡುಗಳು ನಡೆದಿದ್ದವು. ನಮಗೆ ಧರ್ಮೋಪದೇಶವನ್ನು ಕಲಿಸಿಕೊಡಲು ಸನಿಹದ ಪಟ್ಟಣದ ಚರ್ಚಿನ ಓರ್ವ ಬ್ರದರ್ ಅನ್ನು ಕರೆಸಲಾಗಿತ್ತು. ನಾವು ಒಟ್ಟು ಆರು ಮಂದಿ ಇದ್ದೆವು; ಮೂವರು ಹುಡುಗರು ಮತ್ತು ಮೂವರು ಹುಡುಗಿಯರು.
ಒಮ್ಮೆ ಬಾಯಿಪಾಠ ಮಾಡಿ ಒಪ್ಪಿಸಲು ನಮಗೊಂದು ಪ್ರಾರ್ಥನೆಯನ್ನು ಕೊಟ್ಟಿದ್ದರು. ಆದರೆ ನಾವದನ್ನು ಕಲಿತಿರಲಿಲ್ಲ. ಬ್ರದರ್ ಕೇಳಿದಾಗ ಹುಡುಗಿಯರು ಹೇಗೋ ಮಾಡಿ ಒಪ್ಪಿಸಿಬಿಟ್ಟಿದ್ದರು. ಹುಡುಗರು ಮಾತ್ರ ಬ್ರದರ್ ಮುಂದೆ ತಲೆ ತಗ್ಗಿಸಿ ನಿಲ್ಲಬೇಕಾಯಿತು. ಅದೃಷ್ಟವಶಾತ್ ಬ್ರದರ್ ನಮ್ಮ ಮೇಲೆ ಕೋಪಗೊಳ್ಳಲಿಲ್ಲ ಬದಲಾಗಿ ಹಿರಿಯರ, ಗುರುಗಳ ಮತ್ತು ತಂದೆತಾಯಿಯರ ಮಾತನ್ನು ಪಾಲಿಸದಿದ್ದರೆ ಏನಾಗುತ್ತೆ ಎಂಬುದಕ್ಕೆ ಉದಾಹರಣೆಯಾಗಿ 'ಆದಂ ಮತ್ತು ಏವ'ರ ಕತೆ ಹೇಳಲು ತೊಡಗಿದರು. ಜಗತ್ತನ್ನು ಸೃಷ್ಟಿಸಿದ ದೇವರು ಬಳಿಕ ಆದಂ ಮತ್ತು ಏವರನ್ನು ಸೃಷ್ಟಿಸಿ 'ಈಡನ್' ಎಂಬ ತೋಟದಲ್ಲಿ ಅವರನ್ನು ಇರಿಸಿದ್ದರು; ಆ ತೋಟದಲ್ಲಿ ನಾನಾ ಬಗೆಯ ಹಣ್ಣುಗಳಿದ್ದವು; ಒಂದು ಹಣ್ಣಿನ ಹೊರತಾಗಿ ಉಳಿದವುಗಳನ್ನೆಲ್ಲಾ ಅವರು ಇಷ್ಟ ಬಂದಂತೆ ತಿನ್ನಬಹುದಿತ್ತು, ಎಂದು ನಮ್ಮಲ್ಲಿ ಆಸೆಯನ್ನೂ ಕುತೂಹಲವನ್ನೂ ಹುಟ್ಟಿಸುವಂತೆ ಅವರು ವಿವರಿಸಿ ಹೇಳಿದರು. ಮುಂದೆ ಸೈತಾನನ ಕುತಂತ್ರಕ್ಕೆ ಬಲಿಯಾಗುವ ಆ ದಂಪತಿಗಳು ತಿನ್ನಬಾರದ ಹಣ್ಣನ್ನು ತಿಂದು ದೇವರ ಮಾತನ್ನು ಮೀರಿದ್ದಕ್ಕಾಗಿ ಆ ತೋಟದಿಂದ ಹೊರನಡೆಯಬೇಕಾಗಿ ಬರುತ್ತದೆ ಎಂದು ಹೇಳಿ, ನಮ್ಮತ್ತ ತಿರುಗಿ, ಸೈತಾನನ ಪ್ರಲೋಭನೆಗೆ ನಾವು ಬಹುಬೇಗನೇ ಒಳಗಾಗಿ ಬಿಡುತ್ತೇವೆ. ಅದರ ಮಾತನ್ನು ಕೇಳಿ ತಂದೆತಾಯಿಯ, ಗುರುಹಿರಿಯರ ಮತ್ತು ದೇವರ ಮಾತನ್ನು ನಾವು ಮಿರಿ ನಡೆಯುತ್ತೇವೆ. ಹಾಗೆ ಮಾಡಿದಾಗ ದೇವರಿಂದ ನಮಗೆ ಶಿಕ್ಷೆ ದೊರೆಯುತ್ತದೆ ಎಂದು ನಮಗೆಲ್ಲಾ ಬುದ್ದಿಮಾತುಗಳನ್ನು ಹೇಳಿದ್ದರು.
ಧರ್ಮೋಪದೇಶ ಪಾಠ ಮುಗಿದ ಬಳಿಕ ಆದಂ ಮತ್ತು ಏವರ ಬಗ್ಗೆಯಾಗಲಿ, ಅವರು ಗೈದ ಪಾಪಗಳ ಬಗ್ಗೆಯಾಗಲಿ ನಾವು ತಲೆಕೆಡಿಸಿಕೊಂಡಿರಲಿಲ್ಲ. ಇನ್ನು ಅವರನ್ನು ಶಿಕ್ಷಿಸಿದ ದೇವರ ಬಗ್ಗೆ ಯೋಚಿಸುವುದೆಲ್ಲಿಂದ ಬಂತು? ನಮ್ಮ ತಲೆಯಲ್ಲಿ ಉಳಿದದ್ದು ಒಂದೇ; 'ಈಡೆನ್ ತೋಟ!'. ವಿವಿಧ ಬಗೆಯ ಹಣ್ಣುಗಳು ಲಭ್ಯವಿರುವ ಆ ತೋಟ ಎಲ್ಲಿದೆಯೆಂಬ ಕುತೂಹಲ! ಬ್ರದರ್ ಅತ್ತ ಹೋಗುತ್ತಲೇ ಈಡನ್ ತೋಟದ ಅನ್ವೇಷಣೆಯಲ್ಲಿ ನಾವು ಮೂವರೂ ನಿರತರಾದೆವು. ನಮಗೆ ಆಗ ಲಭ್ಯವಿದ್ದುದು 'ಶಾರದಾ ಅಟ್ಲಾಸ್' ಎಂಬ ಒಂದು ಭೂಪಟಗಳ ಪುಸ್ತಕ. ಸಂಜೆಯಿಡೀ ಹುಡುಕಾಡಿದ ಬಳಿಕ ನಮಗೆ ಸಿಕ್ಕಿತ್ತು' ಭೂಪಟದಲ್ಲಿ 'ಅಡೇನ್' ಎಂಬ ಹೆಸರು. ಆ ಹೆಸರು ಸೌದಿ ಅರೇಬಿಯಾದ ದಕ್ಷಿಣಕ್ಕಿರುವ ಯೆಮೆನ್‌ನ ಕೆಳತುದಿಯ ಬಳಿ ಇತ್ತು. ಅದನ್ನು ಕಂಡು ನಮಗಂತೂ ಏನನ್ನೋ ಸಾಧಿಸಿದೆವೆಂಬ ಸಂಭ್ರಮ.
● ● ●
ಪ್ರಥಮ ಮಾನವರಾದ ಆದಂ ಮತ್ತು ಏವಳನ್ನು ಸೃಷ್ಟಿಸಿದ ದೇವರು ಅವರಿಗೆ ನೆಲೆ ನಿಲ್ಲಲು ಈಡೆನ್ ತೋಟದಲ್ಲಿ ಅವಕಾಶ ನೀಡಿದ್ದರು. ಬಳಿಕ ಅಪ್ರಾಮಾಣಿಕರಾದ ಅವರನ್ನು ಈಡನ್ ತೋಟದಿಂದ ಹೊರತಳ್ಳಿದರು ಎಂಬುದು ಯೆಹೂದ್ಯ, ಕ್ರೈಸ್ತಧರ್ಮ್ತು ಮುಸ್ಲಿಂ ಜನಾಂಗವು ನಂಬಿರುವ ಸಂಗತಿ. ಆದರೆ ನಿಜಕ್ಕೂ ಈಡೆನ್ ತೋಟ ಭುವಿಯಲ್ಲಿತ್ತೇ? ಇದ್ದುದೇ ಆದರೆ ಅದು ಎಲ್ಲಿತ್ತು? ಈಗದರ ಸ್ಥಿತಿ ಏನಾಗಿದೆ? ಎಂಬ ಹಲವಾರು ಪ್ರಶ್ನೆಗಳು ನಮ್ಮನ್ನು ಈಗಲೂ ಸಹ ಮುತ್ತಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ.
'ಈಡೆನ್ ತೋಟ'ದ ಬಗ್ಗೆ ಹಲವಾರು ವರ್ಷಗಳಿಂದ ಚರ್ಚೆಗಳು, ನಡೆಯುತ್ತಾ ಬಂದಿವೆ; ಹಲವು ಪುರಾತತ್ವ ಶಾಸ್ತ್ರಜ್ಞರಿಂದ ಸಂಶೋಧನೆಗಳೂ ನಡೆದಿವೆ. ಆದರೆ ಈವರೆಗೂ ಅವರುಗಳಿಂದ ' ಈಡೆನ್ ತೋಟ'ವಿರುವ ಸ್ಥಳದ ಬಗ್ಗೆ ಯಾವುದೇ ನಿರ್ಣಯಾತ್ಮಕ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಆದರೆ ಅಗೊಮ್ಮೆ ಈಗೊಮ್ಮೆ ಈ ತೋಟದ ಬಗ್ಗೆ ಅನೇಕ ಊಹಾಪೋಹಗಳು ಹರಡುವುದುಂಟು. ಆ ತೋಟವು ಭಾರತದಲ್ಲಿ ಇತ್ತು ಎಂದು ಕೆಲವರು ಹೇಳಿದರೆ. ಟಿಬೆಟ್‌ನ 'ಶಾಂಗ್ರಿಲಾ' ಎಂದು ಕರೆಯಲ್ಪಡುವ ಅಗೋಚರ ರಹಸ್ಯ ತಾಣವೇ ಅದೆಂದು ನಂಬಿದ ಅನೇಕರು ಇದ್ದಾರೆ. ಟರ್ಕಿಯ `ಅರಾರತ್' ಪರ್ವತಗಳ ಬಳಿ ಇತ್ತೆಂದೂ ವಾದಿಸುವವರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಟೈಗ್ರಿಸ್ ಮತ್ತು ಯೂಪ್ರೆಟೀಸ್ ನದಿಗಳ ಸಂಗಮ ಸ್ಥಳದ ಬಳಿಯಯಲ್ಲೇ ಇತ್ತು, ಅದೀಗ ಪರ್ಷಿಯನ್ ಕೊಲ್ಲಿಯಲ್ಲಿ ಮುಳುಗಿ ಹೋಗಿದೆಯೆಂದು ಸಾಕ್ಷ್ಯ ನೀಡುವ ಪ್ರಾಚ್ಯವಸ್ತು ಸಂಶೋಧಕರೂ ಇದ್ದಾರೆ. ಇದೆಲ್ಲವನ್ನೂ ಮೀರಿ ಅದೊಂದು ಕಾಲ್ಪನಿಕ ಸ್ಥಳ, ಭುವಿಯಲ್ಲಿ ನಿಜಕ್ಕೂ ಅದು ಇರಲೇ ಇಲ್ಲ ಎನ್ನುವವರ ಕೊರತೆಯೇನೂ ಕಡಿಮೆ ಇಲ್ಲ
ಪ್ರಸ್ತುತ 'ಈಡೆನ್' ಪದವು, ಮೆಸೊಪೊಟೇಮಿಯಾ (ಈಗಿನ ಇರಾಕ್)ದ ದಕ್ಷಿಣದಲ್ಲಿ ನೆಲೆಗೊಂಡಿದ್ದ ಒಂದು ಜನಾಂಗದ ಭಾಷೆಯಾದ ಅಕ್ಕಾಡಿಯನ್‌ನ 'ಎಡಿನ್ನು' (ಮೂಲಪದ ಸುಮೇರಿಯನ್‌ನ -'ಎಡಿನ್') ಎಂಬ ಪದದಿಂದ ಉದ್ಭವಗೊಂಡ ಪದವಾಗಿದೆ. ಆ ಭಾಷೆಯಲ್ಲಿ ಈ ಪದದ ಅರ್ಥ, 'ಬಯಲು' 'ಮರಳುಗಾಡು' ಅಥವಾ 'ಹುಲ್ಲುಗಾವಲು' ಎಂದಾಗುತ್ತದೆ. ಬೈಬಲ್‌ನ ಬಹುತೇಕ ಭಾಗ ಬರೆಯಲ್ಪಟ್ಟದ್ದು ಹಿಬ್ರೂ ಭಾಷೆಯಲ್ಲಿ. 'ಈಡೆನ್' ಎಂಬುದು ಹೀಬ್ರೂ ಪದ. ಇದರ ಅರ್ಥ 'ನಂದನವನ' ಅಥವಾ 'ಸ್ವರ್ಗ' ಎಂದಾಗುತ್ತದೆ. ಹಾಗಾದರೆ ಈ ಸ್ವರ್ಗೀಯ ತೋಟದ ಬಗ್ಗೆ ಬೈಬಲ್ ಏನನ್ನು ಹೇಳುತ್ತದೆಯೆಂದು ನೋಡೋಣ.
ಈಡೆನ್ ಸೀಮೆಯಲ್ಲಿ ಒಂದು ನದಿಯು ಹುಟ್ಟಿ ಆ ವನವನ್ನು ತೋಯಿಸುತ್ತಿತು. ಅದು ಅಲ್ಲಿಂದ ನಾಲ್ಕು ಉಪನದಿಗಳಾಗಿ ಕವಲೊಡೆದಿತ್ತು. ಮೊದಲನೆಯದರ ಹೆಸರು ಪೀಶೋನ್, ಅದು ಬಂಗಾರ ದೊರೆಯುವ ಹವೀಲ ದೇಶವನ್ನೆಲ್ಲಾ ಸುತ್ತಿ ಹರಿಯುತ್ತದೆ. ಆ ಪ್ರದೇಶದ ಬಂಗಾರವು ಅಮೂಲ್ಯವಾದದ್ದು. ಅಲ್ಲಿ ಬದೋಲಖ ಧೂಪವೂ, ಗೋಮೇಧಿಕದ ಅಮೂಲ್ಯ ರತ್ನವು ಸಿಕ್ಕುತ್ತದೆ. ಎರಡನೆಯ ನದಿಯ ಹೆಸರು ಗೀಹೋನ್, ಅದು ಕೂಷ್ ದೇಶವನ್ನೆಲ್ಲಾ ಸುತ್ತಿ ಹರಿಯುತ್ತದೆ. ಮೂರನೆಯ ನದಿಯ ಹೆಸರು ಟೈಗ್ರೀಸ್; ಅದು ಅಶ್ಯೂರ್ ದೇಶದ ಪೂರ್ವಕ್ಕೆ ಹರಿಯುವುದು. ನಾಲ್ಕನೆಯದು ಯೂಫ್ರೇಟೀಸ್ ನದಿ
'ಈಡೆನ್ ಅನ್ನುವ ದೇಶ ಅಥವಾ ಪ್ರದೇಶದಲ್ಲಿ ಹುಟ್ಟಿದ ನದಿಯೊಂದು ಅಲ್ಲಿರುವ ತೋಟವನ್ನು ತೋಯಿಸುತ್ತಿತ್ತು' ಎನ್ನುತ್ತದೆ ಬೈಬಲ್. ಅದು ದೇಶ ಅಥವಾ ಪ್ರದೇಶವಾಗಿದ್ದಲ್ಲಿ ಸಾಕಷ್ಟು ವಿಶಾಲವಾಗಿರಬೇಕು. ಈಡೆನ್ ಸೀಮೆಯಲ್ಲಿ ಹುಟ್ಟಿದ ನದಿಯು ಆ ವನವನ್ನು ತೋಯಿಸುವುದಾದರೆ ಆ ನದಿಯ ಹೆಸರೇನು? ಅಥವಾ ಅದು ಯಾವ ನದಿ ಎಂಬುದು ಬೈಬಲ್‌ನಿಂದ ತಿಳಿದು ಬರುವುದಿಲ್ಲ. ಮುಂದುವರಿದು ಆ ವನದಿಂದ ಅಥವಾ ತೋಟದಿಂದ ಆ ನದಿಯು ನಾಲ್ಕು ನದಿಗಳಾಗಿ ಕವಲೊಡೆದಿತ್ತು ಎನ್ನುತ್ತದೆ. ಆ ನಾಲ್ಕು ಉಪನದಿಗಳ ಹೆಸರು 'ಪೀಶೋನ್, ಗೀಹೋನ್, ಟೈಗ್ರಿಸ್ ಮತ್ತು ಯೂಪ್ರಟೀಸ್' ಎನ್ನುತ್ತದೆ ಬೈಬಲ್.
ಪ್ರಸ್ತುತ, ಈ ನಾಲ್ಕು ನದಿಗಳಲ್ಲಿ ಯೂಪ್ರಟೀಸ್ ಮತ್ತು ಟೈಗ್ರಿಸ್ ನದಿಗಳು ಟರ್ಕಿಯ ಈಶಾನ್ಯ ಭಾಗದ ಪರ್ವತ ಶ್ರೇಣಿಗಳಲ್ಲಿ ಹುಟ್ಟುತ್ತವೆ. ಈ ಪರ್ವತಗಳ ಸಮೀಪವೇ ಜಲಪ್ರಳಯದ ನೀರು ತಗ್ಗಿದ ಬಳಿಕ ನೋಹನು ಸೃಷ್ಟಿಸಿದ ಬೃಹತ್ ನೌಕೆಯು ತಂಗಿದ್ದ ಸ್ಥಳ 'ಅರಾರತ್' ಪರ್ವತವಿರುವುದು. ಇಲ್ಲಿ ಹುಟ್ಟಿದ ಎರಡು ನದಿಗಳೂ ಸಿರಿಯಾದ ಮೂಲಕ ಮೆಸೊಪೊಟೇಮಿಯಾ (ಈಗಿನ ಇರಾಕ್)ವನ್ನು ಪ್ರವೇಶಿಸಿ ಹರಿದು ಪರ್ಷಿಯನ್ ಕೊಲ್ಲಿಯಲ್ಲಿ ವಿಸರ್ಜಿತಗೊಳ್ಳುತ್ತವೆ. ಟೈಗ್ರಿಸ್ ನದಿಗೆ 'ಹಿದೆಕ್ಕಲ್' ಎಂಬ ಹೆಸರೂ ಸಹ ಇದ್ದು ಈ ಹೆಸರೂ ಸಹ ಬೈಬಲ್‌ನಲ್ಲಿ ಲಿಖಿತವಾಗಿದೆ. ಈ ಎರಡೂ ನದಿಗಳು ಹುಟ್ಟುವ ಸ್ಥಳದಿಂದ ಎರಡೂ ನದಿಗಳ ನಡುವಿನ ಅಂತರ ಕೇವಲ 30ಕಿ.ಮೀ. ಅಂದರೆ ಈ ನದಿಗಳು ಹುಟ್ಟುವ ಸ್ಥಳಗಳ ಬಳಿಯೇ ಈಡೆನ್ ತೋಟವಿದ್ದಿರಬೇಕು ಅಥವಾ ಆ ಪ್ರದೇಶವೇ ಈಡೆನ್ ಆಗಿರಬೇಕು ಎಂದಾಯಿತಲ್ಲವೇ? ಹಾಗಾದರೆ ಉಳಿದ ನದಿಗಳಾದ ಪೀಶೋನ್ ಮತ್ತು ಗೀಹೋನ್ ನದಿಗಳು ಎಲ್ಲಿವೆ? ಅವುಗಳು ಇಲ್ಲವಾದರೆ ಏನಾದವು? ಅಲ್ಲದೇ ಆ ವನವನ್ನು ತೋಯಿಸುತ್ತಿದ್ದ ನದಿ ಎಲ್ಲಿದೆ? ಎಂಬ ಪ್ರಶ್ನೆಗಳು ಹಾಗೆಯೇ ಉಳಿದು ಹೋಗುತ್ತವೆ.
ಅದಿರಲಿ, 'ಪೀಶೋನ್' ಮತ್ತು 'ಗೀಹೋನ್' ನದಿಗಳು ಆಫ್ರಿಕಾದ ನೈಲ್ ನದಿ ಮತ್ತು ಭಾರತದ 'ಗಂಗಾ' ನದಿ ಎಂಬ ವಾದವನ್ನು ಕೆಲವು ಪಂಡಿತರು ಮಂಡಿಸಿದ್ದಾರೆ. 'ಏನಕೇನ ಸಂಬಂಧ' ಎನ್ನುವಂತೆ, ಗಂಗಾ ನದಿ ಹುಟ್ಟುವುದು ಹಿಮಾಲಯ ಪರ್ವತಗಳ ಶ್ರೇಣಿಗಳಲ್ಲಿ, ಅರ್ಥಾತ್ ಏಷ್ಯಾ ಖಂಡದಲ್ಲಿ, ನೈಲ್ ನದಿಯ ಉಗಮ ದಟ್ಟವಾದ ಕಾನನಗಳ ನಡುವಿನ ಸರೋವರದಿಂದ, ಇರುವುದು ಆಫ್ರಿಕಾ ಖಂಡದಲ್ಲಿ ಯೂಪ್ರಟೀಸ್ ಮತ್ತು ಟೈಗ್ರಿಸ್ ನದಿಗಳ ಹುಟ್ಟು ಟರ್ಕಿಯ ಪರ್ವತಗಳಲ್ಲಿ ಅಂದರೆ ಮಧ್ಯ ಪ್ರಾಚ್ಯದಲ್ಲಿ ಹಾಗಿದ್ದಾಗ ಈಡೆನ್ ತೋಟ ಆ ನದಿಗಳಿಗೆ ಸಂಪರ್ಕಕ್ಕೆ ಬರುವುದಾದರೂ ಹೇಗೆ? ಈಡೆನ್ ತೋಟದ ಈ ಕ್ಲಿಷ್ಟಕರ ಸಮಸ್ಯೆಯನ್ನು ಅರಿತು ಕೆಲವರು ಇದೊಂದು ಕಾಲ್ಪನಿಕ ತೋಟ ಎಂದರು.
ಇದೇ ಸಮಯದಲ್ಲಿ, ಪುರಾತತ್ವಶಾಸ್ತ್ರಜ್ಞ ಡಾ. ಜೂರಿಸ್, ಈಡೆನ್ ತೋಟವನ್ನು ತಾನು ಕಂಡು ಹಿಡಿದಿರುವುದಾಗಿ ಪ್ರಕಟಿಸಿದರು. ಟೈಗ್ರಿಸ್ ಮತ್ತು ಯೂಪ್ರೇಟೀಸ್ ನದಿಗಳು ಸಂಗಮಿಸಿ ಪರ್ಷಿಯನ್ ಕೊಲ್ಲಿಗೆ ಸೇರುವಲ್ಲಿ ಅಂದರೆ ಕುವೈತ್‌ನ ಬಳಿ ಇತ್ತೆಂದೂ ಪ್ರಸ್ತುತ ಅದು ಪರ್ಷಿಯನ್ ಕೊಲ್ಲಿಯಲ್ಲಿ ಮುಳುಗಡೆಯಾಗಿದೆ ಎಂದೂ ಪ್ರಚುರಪಡಿಸಿದರು. ಆತನು ಹೇಳುವ ಪ್ರಕಾರ ಇರಾನ್‌ನಿಂದ ಹರಿದು ಬಂದು ಪರ್ಷಿಯನ್ ಕೊಲ್ಲಿಗೆ ಸೇರುವ 'ಕಾರುನ್' ಎಂಬ ನದಿಯೇ ಬೈಬಲ್‌ನಲ್ಲಿ ಸೂಚಿಸಿರುವ 'ಗೀಹೋನ್' ನದಿಯಾಗಿದ್ದು ಇನ್ನೊಂದು ನದಿಯಾದ 'ಪಿಶೋನ್' ಪ್ರಸ್ತುತ ಒಣಗಿ ಹೋಗಿದೆ. 'ಬಂಗಾರ ದೊರೆಯುವ ಹವಿಲ ದೇಶವನ್ನು ಈ ನದಿ ಸುತ್ತಿ ಹರಿಯುತ್ತದೆ', ಎಂದು ಬೈಬಲ್‌ನಲ್ಲಿ ಸೂಚಿಸಿರುವಂತೆ; 'ಹವಿಲ' ಎಂದು ಕರೆಯಲ್ಪಡುವ ಸೌದಿ ಅರೇಬಿಯಾದ ಒಂದು ಭಾಗದಲ್ಲಿ ಈ ನದಿ ಹರಿಯುತ್ತಿತ್ತು ಎಂಬುದರ ಸುಳಿವು ಉಪಗ್ರಹಗಳಿಂದ ದೊರೆತಿರುವುದಾಗಿ ಆತ ಹೇಳಿಕೊಂಡಿದ್ದಾನೆ. ಈ ನದಿಯು ಹರಿದು ಬಂದು ಪರ್ಷಿಯನ್ ಕೊಲ್ಲಿಯನ್ನು ಸೇರುತ್ತಿತ್ತು ಎಂಬುದಕ್ಕೆ ಸಂಬಂಧಿಸಿದಂತೆ ಈಗಿರುವ 'ವಾದಿ ರಿಮಾಹ್' ಮತ್ತು 'ವಾದಿ ಬಾತಿನ್' ಎಂಬ ಕೊರಕಲುಗಳು ಪೀಶೋನ್ ನದಿಯ ಪಳೆಯುಳಿಕೆಗಳಗಿವೆ ಎಂಬುದಾಗಿ ಡಾ. ಜೂರಿಸ್ ಹೇಳಿಕೊಂಡಿದ್ದಾನೆ.
ಈ ಪುರಾತತ್ವ ಶಾಸ್ತ್ರಜ್ಞನ ಮಾತು ನಿಜವೇ ಆಗಿದ್ದರೆ, ಬೈಬಲ್ ವಾಕ್ಯಗಳನ್ನು ಪರಿಷ್ಕರಿಸಬೇಕಾಗುತ್ತೆ. ಏಕೆಂದರೆ ಬೈಬಲ್‌ನಲ್ಲಿ ಹೇಳಿದ ಪ್ರಕಾರ, '...ನದಿಯೊಂದು ಹುಟ್ಟಿ ಆ ತೋಟವನ್ನು ತೋಯಿಸುತ್ತಿತ್ತು. ಅದು ಅಲ್ಲಿಂದ ನಾಲ್ಕು ಉಪನದಿಗಳಾಗಿ ಕವಲೊಡೆದಿತ್ತು...' ಎಂಬ ವಾಕ್ಯಗಳನ್ನು ಡಾ. ಜೂರಿಸ್‌ನ ತತ್ವಗಳು ಸಮರ್ಥಿಸುವುದಿಲ್ಲ. ಆದರೆ ಈ ವಾಕ್ಯಗಳಿಗೆ ಅನುಗುಣವಾದ ತಾಣವೊಂದಿದೆ. ಅದುವೇ ನೈಲ್ ನದಿಯ ಉಗಮ ಸ್ಥಳ ಎಂಬುದಾಗಿ ಇನ್ನೋರ್ವ ಪುರಾತತ್ವ ಶಾಸ್ತ್ರಜ್ಞ ಹೇಳಿಕೊಂಡಿದ್ದಾನೆ.
ನೈಲ್ ನದಿಯು ಜನ್ಮ ತಾಳುವುದು ಆಫ್ರಿಕಾದ ರುವಾಂಡ ಬಳಿಯ ದಟ್ಟ ಕಾನನಗಳ ನಡುವೆ. 'ವಿಕ್ಟೋರಿಯ ಸರೋವರ'ವೆಂಬ ವಿಶಾಲವಾದ ಸರೋವರವು ಆಫ್ರಿಕಾದಲ್ಲಿದ್ದು ಅದರಿಂದ ಹೊರಕ್ಕೆ ಹರಿಯು ನದಿಯೇ ಜಗತ್ತಿನ ಅತಿ ಉದ್ದದ ನದಿ, 'ನೈಲ್'. ಈ ಸರೋವರಕ್ಕೆ ನೀರುಣಿಸುವುದು 'ಕಗೇರಾ' ಎಂಬ ನದಿಯೊಂದಿಗೆ ಇನ್ನಿತರ ಸಣ್ಣಪುಟ್ಟ ನದಿಗಳು. ಹಾಗಾಗಿ ವಿಕ್ಟೋರಿಯಾ ಸರೋವರದ ಸಮೀಪದಲ್ಲೇ ಎಲ್ಲೋ 'ಈಡೆನ್ ತೋಟ'ವಿರಬೇಕೆಂದು ಆತ ಹೇಳಿಕೊಂಡಿದ್ದಾನೆ. ಚೋದ್ಯದ ಸಂಗತಿಯೆಂದರೆ ವಿಕ್ಟೋರಿಯಾ ಸರೋವರದಿಂದ ಹುಟ್ಟವ ಕವಲು ಒಂದೇ ಆಗಿದ್ದು ಅದು ನೈಲ್ ನದಿ ಮಾತ್ರವೇ. ಹಾಗಾಗಿ ಅಲ್ಲಿ 'ಈಡೆನ್ ತೋಟ' ಇತ್ತು ಎಂಬ ಕಲ್ಪನೆಯೇ ಅಸಂಗತವೆನಿಸುತ್ತದೆ.
ಗಂಗಾ ನದಿಯ ಮೂಲವಿರುವುದು ಹಿಮಾಲಯದಲ್ಲಿ ಹಾಗಾಗಿ ಹಿಮಾಲಯದಲ್ಲಿರುವ 'ಶಾಂಗ್ರಿ-ಲಾ' ಎಂಬ ಅತೀಂದ್ರಿಯಕ್ಕೆ ಮಾತ್ರವೇ ಕಾಣಿಸುವ ಆಜ್ಞಾತಸ್ಥಳವೇ 'ಏಡೆನ್' ಆಗಿರಬೇಕೆಂದೂ ಹೇಳುವವರಿದ್ದಾರೆ. ಅದೇ ರೀತಿಯಲ್ಲಿ ಭಾರತ, ಇಥಿಯೋಪಿಯಾ, ಯು.ಎಸ್.ಎ., ಸೌದಿ ಅರೇಬಿಯಾ ಮುಂತಾದ ಸ್ಥಳಗಳನ್ನು ಉಲ್ಲೇಖಿಸುವ ಧರ್ಮಶಾಸ್ತ್ರಜ್ಞರೂ ಸಾಕಷ್ಟು ಮಂದಿ ಇದ್ದಾರೆ. ಆದರೆ ಅವರು ನೀಡುವ ಪುರಾವೆಗಳು ಅಸಮಂಜಸ.
ಅಂತಿಮವಾಗಿ ಈಡೆನ್ ತೋಟವನ್ನು ಕಂಡು ಹಿಡಿಯುವ ಸಲುವಾಗಿ ಒಂದು ಹೊಸ ತಂತ್ರವನ್ನು ಪ್ರಯೋಗಿಸಲಾಯಿತು; ಆದರೆ ಈ ಪ್ರಯೋಗವನ್ನು ಯಾವ ಆಧಾರದ ಮೇಲೆ ಮಾಡಲಾಯಿತು ಎಂಬುದು ಮಾತ್ರ ತಿಳಿದುಬಂದಿಲ್ಲ.
ಜೆರುಸಲೇಂನಿಂದ ಪಿತಾಮಹ ಅಬ್ರಹಾಮನ ನಾಡಾದ 'ಉರ್'ನ ನಡುವೆ ಒಂದು ಸರಳ ರೇಖೆಯನ್ನು ಎಳೆದು ಅಂತರವನ್ನು ಅಳೆದರೆ ಸಿಗುವುದು ಒಂಬೈನೂರಾ ನಲವತ್ತೈದು ಕಿಲೋಮೀಟರ್‌ಗಳು. ಅವೆರಡು ಕೇಂದ್ರ ಬಿಂದುಗಳಿಂದ ಅದೇ ಅಂತರವಿರುವಂತೆ ಉತ್ತರಾಭಿಮುಖವಾಗಿ ಒಂದು ಬಿಂದುವನ್ನು ಸಂಧಿಸುವಂತೆ ಸರಳರೇಖೆಗಳನ್ನು ಎಳೆದು ಸಮಭಾಹು ತ್ರಿಕೋನವನ್ನು ಸೃಷ್ಟಿಸಿದರೆ ಹೊಸತಾಗಿ ಸೃಷ್ಟಿಯಾದ ಮೂರನೆಯ ಕೇಂದ್ರ ಬಿಂದುವೇ 'ಈಡೆನ್' ಇರುವ ಸ್ಥಳ ಎಂಬ ಒಂದು ವಾದವಿದೆ.
ಸೋಜಿಗದ ಸಂಗತಿಯೆಂದರೆ ಈ ಮೂರನೆಯ ಕೇಂದ್ರ ಬಿಂದು ಸೃಷ್ಟಿಯಾಗುವ ಸ್ಥಳ ಬಹುತೇಕ ಟೈಗ್ರಿಸ್ ಮತ್ತು ಯೂಪ್ರಟೀಸ್ ನದಿಗಳ ಉಗಮ ಸ್ಥಳವೇ ಆಗುತ್ತದೆ. ಅಲ್ಲಿಗೆ ನಾವು ಮೊದಲನೆಯ ವಾದದ ಬಳಿಗೆ ಮತ್ತೆ ಬಂದು ತಲುಪಿದಂತಾಗುತ್ತದೆ. ಆದರೆ ಅಲ್ಲಿ ಉದ್ಭವವಾಗಿದ್ದ ಆ ಮೂರು ಪ್ರಶ್ನೆಗಳಿಗೆ ಉತ್ತರ?
ಅದಕ್ಕೆ ಉತ್ತರವೊಂದೇ 'ಜಲಪ್ರಳಯ'!
ಬಹುತೇಕರು ಇದನ್ನು ಪುಷ್ಟೀಕರಿಸುತ್ತಾರೆ. ನೋಹನ ಕಾಲದಲ್ಲಿ ಉಂಟಾದ ಜಲಪ್ರಳಯದಿಂದಾಗಿ ಭೂಮಿಯಲ್ಲಿ ಅನೇಕ ಬದಲಾವಣೆಗಳು ಆಗಿರಬಹುದಾದ ಸಾಧ್ಯತೆ ಇದೆ. ಇದ್ದ ನದಿಗಳಲ್ಲಿ ಕೆಲವು ಮಾಯವಾಗಿ ಅನೇಕ ಹೊಸ ನದಿಗಳು ಹುಟ್ಟಿರಬಹುದು. ಅಥವಾ ನದಿಗಳು ತಮ್ಮ ಪಾತ್ರವನ್ನೇ ಬದಲಾಯಿಸಿರಬಹುದು. ಇಂತಹ ಅನೇಕ ಘಟನೆಗಳು ಜಗತ್ತಿನಲ್ಲಿ ಈಗಾಗಲೇ ನಡೆದುಹೋಗಿವೆ. ಆದರೆ ಇದು ಬರಿ ನದಿಗಳಿಗೆ ಮಾತ್ರ ಅನ್ವಯಿಸುವ ವಿಷಯವಲ್ಲ. ಅನೇಕ ಕಾಡುಗಳು ಸಹ ನಾಶವಾಗಿರಬಹುದಾದ ಸಾಧ್ಯತೆಗಳಿವೆ. ಬೆಟ್ಟಗಳು ಕುಸಿದು ಹೋಗಿರಬಹುದು. ಸಮುದ್ರ ಸಾಗರಗಳಲ್ಲೂ ಅನೇಕ ವ್ಯತ್ಯಾಸಗಳಾಗಿರಬಹುದು; ಹೀಗೆಂದು ಹೇಳುತ್ತದೆ ಭೂಶಾಸ್ತ್ರ ವಿಭಾಗ. ಹಾಗಿದ್ದಲ್ಲಿ 'ಈಡೆನ್ ತೋಟ'ವೂ ಪ್ರಳಯಕ್ಕೆ ಸಿಲುಕಿ ನಾಶವಾಗಿರಬೇಕು. ಮನುಷ್ಯ ಉಳಿಸಿಕೊಳ್ಳದೆ ದೇವರಿಗೆ ಅವಿಧೇಯನಾಗಿ ತೋಟದಿಂದ ಹೊರದೂಡಲ್ಪಟ್ಟ ಮೇಲೆ ಆ ತೋಟದ ಇರುವಿಕೆಯ ಅವಶ್ಯಕತೆಯಾದರೂ ಏನು?
¨ ಕೆ ಜೆ ಜಾರ್ಜ್
●●●
No comments:
Post a Comment