ಈ ಶುಭಸಂದೇಶದ ಕರ್ತೃವಿನ ಮೂಲ ಉದ್ದೇಶ ಕ್ರೈಸ್ತ ವಿಶ್ವಾಸವನ್ನು ವ್ಯಕ್ತಪಡಿಸುವುದು ಅದರಲ್ಲೂ ಗ್ರೀಕ್ ಪ್ರ
ಪಂಚದ, ಗ್ರೀಕ್ ಜನರ ಕ್ರೈಸ್ತ ವಿಶ್ವಾಸವನ್ನು ಹೆಚ್ಚಿಸುವುದಾಗಿದೆ. ಇನ್ನೂ ಹೇಳಬೇಕೆಂದರೆ, ಪಾಷಂಡ ವಾದಗಳನ್ನು ಅಡಗಿಸುವುದು ಹಾಗೂ ಕ್ರೈಸ್ತ ಸಮುದಾಯದ ಮಧ್ಯೆ ಇರುವ ಗೊಂದಲ ಮತ್ತು ಗಲಿಬಿಲಿಯನ್ನು ನಿವಾರಣೆ ಮಾಡುವುದಾಗಿದೆ. ಈಗ ನಮ್ಮ ಪ್ರಶ್ನೆ ಈ ಶುಭಸಂದೇಶದ ಮೂಲ ಕರ್ತೃ ಯಾರು? ಸಂತ ಯೊವಾನ್ನ ಎಂದು ತೋರುತ್ತದೆಯಾದರೂ ಅವರ ಬಗ್ಗೆ ಪರಿಪೂರ್ಣ ಮಾಹಿತಿ, ಹಿನ್ನೆಲೆ, ಹಾಗೂ ಪರಿಚಯದ ಅಗತ್ಯವಿದೆ.
ಒಂದು ಕೃತಿಯು ಆ ಕೃತಿಯ ಕರ್ತೃವಿನ ಚಿಂತನೆ, ಹಿನ್ನೆಲೆ, ಕನಸು, ಆಲೋಚನೆಗಳ ಮತ್ತು ಭಾವನೆಗಳ ಅಭಿವ್ಯಕ್ತಿಯಾಗಿರುತ್ತದೆ. ಇಲ್ಲಿಯೂ ಹಾಗೆ ಶುಭಸಂದೇಶದ ಅಂತರಾಳದಲ್ಲಿ ಕರ್ತೃವಿನ ಭಾವನೆಗಳ ಅನಾವರಣ ಆಗುವುದನ್ನು ನಾವು ಕಾಣುತ್ತೇವೆ. ಈ ಶುಭಸಂದೇಶವನ್ನು ಅರ್ಥೈಸಿಕೊಳ್ಳುವವರಿಗೆ ಶುಭಸಂದೇಶದ ಕರ್ತೃವಿನ ಅಧ್ಯಯನದ ಅಗತ್ಯ ಕಂಡು ಬರುತ್ತದೆ. ಈ ಶುಭಸಂದೇಶವನ್ನು ಬರೆದವರು ಸಂತ ಯೊವಾನ್ನರು. ಇವರು ಯೇಸುಸ್ವಾಮಿಯ ಆಪ್ತ ಶಿಷ್ಯ ಎಂದು ತಿಳಿದು ಬರುತ್ತದೆ. ಯೇಸುಸ್ವಾಮಿ ಆರಿಸಿಕೊಂಡ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬರು. ಇವರು ಜಬೆದಾಯನ ಮಕ್ಕಳಲ್ಲಿ ಒಬ್ಬರು, ಯಾಕೋಬನ ಸಹೋದರ ಎಂದು ತಿಳಿಯುತ್ತದೆ. ಈ ಇಬ್ಬರು ಸಹೋದರರ ಬಗ್ಗೆ ನಾವು ಶುಭಸಂದೇಶದಲ್ಲಿ ಕಾಣುತ್ತೇವೆ. ಇಬ್ಬರೂ ವೃತ್ತಿಯಲ್ಲಿ ಮೀನು ಹಿಡಿಯುವವರು. ಇವರ ಬಳಿ ಒಂದು ಮೀನು ಹಿಡಿಯುವ ದೋಣಿ ಇರುತ್ತದೆ. ಮತ್ತು ಅನೇಕ ಕೆಲಸದ ಆಳುಗಳು ಇವರೊಡನೆ ಕೆಲಸ ಮಾಡುತ್ತಿರುತ್ತಾರೆ (ಮಾರ್ಕ 1:19-20). ಅಂದಿನ ಕಾಲದಲ್ಲಿ ದೋಣಿ ಮತ್ತು ಕೆಲಸದವರನ್ನು ಇಟ್ಟುಕೊಳ್ಳುವುದು ಎಂದರೆ ಅದೊಂದು ದೊಡ್ಡ ವಿಷಯವಾಗಿತ್ತು. ಆ ವ್ಯಕ್ತಿಯನ್ನು ತುಂಬಾ ಘನತೆ ಗೌರವದಿಂದ ಕಾಣುತ್ತಿದ್ದರು. ಸಮಾಜದಲ್ಲಿ ಅವರಿಗೆ ಒಳ್ಳೆಯ ಸ್ಥಾನಮಾನವಿತ್ತು.
ಈ ಶುಭಸಂದೇಶದ ಕರ್ತೃ ಪ್ರಕಟಣಾ ಗ್ರಂಥವನ್ನು ಮತ್ತು ಮೂರು ಪತ್ರಗಳನ್ನು ಸಹಾ ಬರೆದಿದ್ದಾರೆ. ಈ ಕರ್ತೃವಿನ ಬಗ್ಗೆ ತಿಳಿಯಲು ನಾವು ಅಭಿಪ್ರಾಯಗಳನ್ನು ವಿಂಗಡಿಸಿ ನೋಡಬಹುದು. 1) ಆಂತರಿಕ ಸಾಕ್ಷಿಗಳು 2) ಬಾಹ್ಯ ಸಾಕ್ಷಿಗಳು. ಮೊದಲನೆಯದಾಗಿ ನಾವು ಆಂತರಿಕ ಸಾಕ್ಷಿಗಳ ಬಗ್ಗೆ ಗಮನ ಕೊಡೋಣ. ಆಂತರಿಕ ಸಾಕ್ಷಿಗಳು ಎಂದರೆ ಬೈಬಲ್ ಒಳಗೆ ಅಡಗಿರುವ ಮಾಹಿತಿಗಳ ಮೂಲಕ ಕರ್ತೃವಿನ ಬಗ್ಗೆ ತಿಳಿಯುವುದು. ಯೊವಾನ್ನ ಯಾರು ಎನ್ನುವ ಪ್ರಶ್ನೆಯನ್ನು ಹುಡುಕುತ್ತಿರುವ ನಮಗೆ ಮೊದಲ ಮೂರು ಶುಭಸಂದೇಶಗಳು ಈ ರೀತಿ ತಿಳಿಸುತ್ತವೆ. ಯೊವಾನ್ನ ಜಬೆದಾಯನ ಮಗ, ಅವರ ತಾಯಿ ಸಲೋಮಿ, ಆಕೆ ಯೇಸುಸ್ವಾಮಿಯ ತಾಯಿ ಮರಿಯಳ ಸಹೋದರಿ ಎಂದು ತಿಳಿದು ಬರುತ್ತದೆ (ಮತ್ತಾಯ 27:26, ಮಾರ್ಕ 9 16:1) ತನ್ನ ಸಹೋದರ ಯಾಕೋಬನೊಂದಿಗೆ ಯೇಸುಸ್ವಾಮಿಯ ಕರೆಗೆ ಕಿವಿಗೊಟ್ಟವ (ಮಾರ್ಕ 9 1:20). ಪೇತ್ರ ಮತ್ತು ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೊವಾನ್ನರು ವ್ಯವಹಾರದ ಸ್ನೇಹಿತರಾಗಿದ್ದರು ಎನಿಸುತ್ತದೆ (ಲೂಕ 5:7-40) ಆತನೊಬ್ಬ ಯೇಸುಸ್ವಾಮಿಯ ಆಪ್ತವಲಯದ, ಒಳ ಗುಂಪಿನ ಮತ್ತು ಆಂತರಿಕ ಆತ್ಮೀಯ ಶಿಷ್ಯರುಗಳಲ್ಲಿ ಒಬ್ಬ. ಯೇಸುಸ್ವಾಮಿ ಯಾವುದೇ ಮಹತ್ತರವಾದ ಕೆಲಸ ಮಾಡಿದಾಗೆಲ್ಲಾ ಈ ಮೂವರು ಆತ್ಮೀಯ ಶಿಷ್ಯರು ಇರುತ್ತಿದ್ದರು, ಅವರು ಯಾರೆಂದರೆ ಪೇತ್ರ, ಯಾಕೋಬ ಮತ್ತು ಯೊವಾನ್ನ - ಇವರನ್ನು ಯೇಸುಸ್ವಾಮಿ ತುಂಬಾ ಪ್ರೀತಿಸುತ್ತಿದ್ದರು (ಮಾರ್ಕ 3:17, 5:37, 9:2, 14:33). ಗುಣದಲ್ಲಿ ಆತನೊಬ್ಬ ಪ್ರಬುದ್ಧ, ಛಲವಾದಿ, ಹಾಗೂ ಮಹತ್ವಾಕಾಂಕ್ಷೆಯ ವ್ಯಕ್ತಿ. ಯೇಸುಸ್ವಾಮಿ ಈ ಇಬ್ಬರೂ ಸಹೋದರರಿಗೆ ಸಿಡಿಲಿನ ಮರಿಗಳು ಎಂದು ಕರೆಯುತ್ತಾರೆ. ಇಬ್ಬರೂ ತುಂಬಾ ಬೇಗನೇ ಕೋಪಗೊಳ್ಳುವಂತಹ ಸ್ವಭಾವದವರಾಗಿದ್ದರು. ಇವರಿಬ್ಬರೂ ಯೇಸುಸ್ವಾಮಿಯ ಸಾಮ್ರಾಜ್ಯದಲ್ಲಿ ಎಡಬಲಗಳಲ್ಲಿ ಇರಬೇಕು ಎನ್ನುವುದು ಅವರ ತಾಯಿ ಸಲೋಮಿಯ ಮಹತ್ವಾಕಾಂಕ್ಷೆಯಾಗಿತ್ತು. (ಮಾರ್ಕ 9 10:35, ಮತ್ತಾಯ 20:20) ಮೊದಲ ಮೂರು ಶುಭಸಂದೇಶದಲ್ಲಿ ಯೊವಾನ್ನ ಒಬ್ಬ ಧೀಮಂತ ನಾಯಕನಾಗಿ, ಆಪ್ತ ವಲಯದ ಶಿಷ್ಯನಾಗಿ, ಮಹತ್ವಾಕಾಂಕ್ಷೆ ಹಾಗೂ ಅಸಹಿಷ್ಣತೆ ಇರುವ ವ್ಯಕ್ತಿಯಾಗಿ ಗೋಚರಿಸುತ್ತಾನೆ.
ಮುಂದುವರಿಯುವುದು
¨ ಸಹೋ. ವಿನಯ್ ಕುಮಾರ್
●●●
No comments:
Post a Comment