….ಧರ್ಮ ದ್ವೇಷ ಸಾಧಿಸುವ ಕೋಮುವಾದದ ಬಗ್ಗೆ ಸಂವಿಧಾನ ಸ್ಪಷ್ಟ ನೀತಿಯನ್ನು ನಿರೂಪಿಸಿದೆ. ಭಾರತವು ಎಲ್ಲಾ ಧರ್ಮಗಳ ದೇಶ ಎಂದು ಸಾರಿದೆ. ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಬಹುಸಂಖ್ಯಾತರು ಸವಾರಿ ಮಾಡದಿರಲಿ ಎಂಬ ಸಮ ಸಾಮರಸ್ಯದ ಕಾರಣಕ್ಕೆ ಧಾರ್ಮಿಕ ಅಲ್ಪಸಂಖ್ಯಾತರಿಗೆ ಕೆಲವು ವಿಶೇಷ ಅವಕಾಶಗಳನ್ನು ಕಲ್ಪಿಸಿದೆ. ಇದನ್ನು ಬಹುಸಂಖ್ಯಾತರ ವಿರೋಧಿ ನೀತಿಯೆಂದು ತಪ್ಪಾಗಿ ಅರ್ಥೈಸುವ ಶಕ್ತಿಗಳು ಅಸಹನೆಯನ್ನು ಬಿತ್ತುತ್ತಿವೆ. ಇಂತಹ ಕೆಲವು ಕಾರಣಗಳನ್ನು ಮೈದುಂಬಿಕೊಂಡ ಗೂಳಿಗುಣ ಗುಂಪು ಸಂವಿಧಾನವನ್ನು ಸುಡುವ ಮಟ್ಟಕ್ಕೂ ಹೋಗಿ ಮೆರೆಯುವಂತಾಗಿದೆ. ಆದರೆ ಸಂವಿಧಾನವು ಪ್ರತಿಪಾದಿಸಿದ ಬಹುಧರ್ಮೀಯ ಭಾರತದ ಕಲ್ಪನೆಯನ್ನು ಹಿಂದೂ ನಿಷ್ಠ ನೇತಾರರೂ ಒಪ್ಪಿದ್ದಾರೆಂಬುದನ್ನು ಇಂಥವರು ಅರಿಯಬೇಕು. ಅಷ್ಟೇ ಅಲ್ಲ, ಸಂವಿಧಾವನ್ನು ಸುಡುವುದೆಂದರೆ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಸೋದರತೆ ಮತ್ತು ಸಮಾನತೆಯ ಸಿದ್ಧಾಂತಗಳನ್ನು ಸುಟ್ಟಂತೆ ಎಂಬುದನ್ನು ತಿಳಿಯಬೇಕು. ಸಂವಿಧಾನ ರಚನಾ ಸಭೆಯ ಚರ್ಚೆಯಲ್ಲಿ ಭಾಗವಹಿಸಿದ ಹಿಂದೂ ಧರ್ಮನಿಷ್ಠರಾದ ಡಾ. ರಾಧಾಕೃಷನ್ ಅವರು `ನಮ್ಮ ದೇಶವು ಯಾವುದೇ ಒಂದು ಧರ್ಮಕ್ಕೆ ಸೇರಿದ್ದಲ್ಲ. ಒಂದೇ ಧರ್ಮದ ಪ್ರಾಬಲ್ಯ ಸಲ್ಲ. ನಮ್ಮದು ಸರ್ವಧರ್ಮಗಳ ದೇಶವಾಗಿರಬೇಕು' ಎಂಬರ್ಥದ ಮಾತುಗಳನ್ನು ಸ್ವಷ್ಟವಾಗಿ ಹೇಳಿದ್ದರು. ಹಿಂದೂ ಧರ್ಮ ನಿಷ್ಠರಲ್ಲದ ಡಾ. ಅಂಬೇಡ್ಕರ್ ಅವರೂ ಇದೇ ವಿಚಾರವನ್ನು ಪ್ರತಿಪಾದಿಸಿದರು ಮತ್ತು ಸಂವಿಧಾನದಲ್ಲಿ ಅಳವಡಿಸಿದರು. ಗಾಂಧೀಜಿಯವರು ಸ್ವಾತಂತ್ರ್ಯ ಪೂರ್ವದಲ್ಲೇ ಹಿಂದೂ ರಾಷ್ಟದ ಕಲ್ಪನೆಯನ್ನು ವಿರೋಧಿಸಿದ್ದರು. ಬಹುಧರ್ಮೀಯ ಸಾಮರಸ್ಯವನ್ನು ಪ್ರತಿಪಾದಿಸಿದ ಹಿಂದೂ ಧರ್ಮನಿಷ್ಠರಾಗಿ ಬದುಕಿದವರು. ವಾಜಪೇಯಿಯವರು ಜಾತ್ಯತೀತತೆಯನ್ನು ಸರ್ವಧರ್ಮ ಸಮಭಾವ ಎಂದು ವ್ಯಾಖ್ಯಾನಿಸಿದರು. ಆದ್ದರಿಂದ ಸರ್ವಧರ್ಮ ಸಹಿಷ್ಣುತೆ ಮತ್ತು ಸಮತೆಯು ಸಂವಿಧಾನದ ಆಶಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಆಶಯವನ್ನೇ ಒಪ್ಪದಿರುವವರು ನೈಜ ಭಾರತೀಯರಾಗಲು ಅರ್ಹರಲ್ಲ......
(ಸಂವಿಧಾನ ಓದು ಎಂಬ ಪುಸ್ತಕಕ್ಕೆ ಬರಗೂರು ರಾಮಚಂದ್ರಪ್ಪನವರು ಬರೆದ `ಮುನ್ನುಡಿ'ಯಿಂದ)
No comments:
Post a Comment