ಹೆಗಲು ಆಪ್ತರ ಸ್ವರ್ಗ
ಆಪತ್ಕಾಲದ ಅರಮನೆ !
ಇರುಳ ನೋವುಂಡವರಿಗೆ
ಹೆಗಲು ನಿಶ್ಚಯ ಹಗಲಿನಂತೆ!
ಅಮ್ಮನ ಮಡಿಲು ಗೂಡಾದರೆ
ಅಪ್ಪನ ಹೆಗಲು ಸಿಂಹಾಸನವು
ಅಕ್ಕನ ಹೆಗಲು ಅಕ್ಕರೆಯು
ಅಣ್ಣನ ಹೆಗಲು ಸಕ್ಕರೆಯು
ಗೆಳೆಯನ ಹೆಗಲ ಬಂಡಿಯಲಿ
ಮೊತ್ತಮೊದಲ ಸವಾರಿಯು !
ಹೃದಯದೊಳಗಡಗಿವೆ ಅಹಂ ಮೂಳೆಗಳು
ಹೆಗಲಿನಲಿರಲಿ ಹೃದಯಗಳು
ದಣಿದ ಆಪ್ತನ ತಲೆಭಾರಕೆ
ಹೆಗಲಾಗಲಿ ಮೃದು ಹಾಸಿಗೆಯು
ಜೋಡಿ ಎತ್ತಿನ ಹೆಗಲಿನ ಶ್ರಮಕೆ
ಊಟದ ಅನ್ನವು ಒಡಮೂಡುವುದು
ಹೆಗಲಿದು ನೋಡಾ ಲಘುವಾಹನವು
ಧನಿಕನೇ ಸಾಯಲಿ ಬಡವನೇ ಸಾಯಲಿ
ಕಟ್ಟಕಡೆಯ ಸವಾರಿಯು!
- ಎ. ಡೇವಿಡ್ ಕುಮಾರ್
●●●
No comments:
Post a Comment