ಪರಮನ ಶಿಲುಬೆಯಡಿ ಬೆಳಗುತಿದೆ ಮೇಣದಬತ್ತಿ
ಬತ್ತಿಗೋ ಮೇಣದ ಹಂಗು, ಮೇಣಕ್ಕೆ ಏತರ ಹಂಗು?
ಆದರೂ ಮೇಣ, ಬತ್ತಿಗುಣಿಸುತಿದೆ ಬೋನ
ಬತ್ತಿಯಿಲ್ಲದ ಮೇಣ ಬದುಕು ಅರ್ಥಹೀನ
ಬತ್ತಿಯ ಬೇರಿಗೆ ಊಟವನಿಕ್ಕಿ ಸ್ವರ್ಗವ ಕನಸುತಿದೆ ಮೇಣ
ಮೇಣವ ಕುಡಿದ ಬತ್ತಿಯ ಬೆಳಕು ಓಲಾಡುವುದ ಕಾಣಾ
ಮೇಣದೊಳು ಬೆಳಕೋ ಬತ್ತಿಯೊಳು ಬೆಳಕೋ
ಮೇಣ ಬತ್ತಿಗಳೆರಡೂ ಪರಮಾತ್ಮನೊಳಗೋ
ಊದಿ ಆರಿಸದಿರು ಉರಿಯುತಿರಲಿ ಬೆಳಕು
ಆಯುಷ್ಯ ಕೊನೆವರೆಗೂ ಕಳೆದುಬಿಡಲಿ ಬದುಕು
ಬತ್ತಿಯು ಉರಿದು ಮೇಣವು ಸುರಿದು
ಬೆಳಕೆಂಬ ಬೆಳಕಲ್ಲಿ ಸಾಯುಜ್ಯವಡೆದು
ಹಾಲ ಪ್ರೀತಿಯಲಿ ಜೇನ ಶಾಂತಿಯಲಿ
ತುಂಬು ಬೆಳಕಿನಲಿ ಸಾರ್ಥಕ್ಯ ಮೆರೆದು
- ಸಿ ಮರಿಜೋಸೆಫ್
No comments:
Post a Comment