Saturday, 2 February 2019

ಫಲಭರಿತ ಬದುಕು

ಈ ವಿಶ್ವವೆಲ್ಲ ದೈವಮಯ. ಇಲ್ಲಿರುವುದೆಲ್ಲವೂ ಅವರ ಸೃಷ್ಟಿಯೇ. ಸೃಷ್ಟಿಯ ಪ್ರತಿ ಕಣದಲ್ಲೂ ದೇವನಿದ್ದಾನೆ. ದೇವರಿಲ್ಲದ ತಾಣ ಇರುವುದುಂಟೆ! ಭಕ್ತ ಕನಕದಾಸ ಒಮ್ಮೆ ತನ್ನ ಗುರು ಕೊಟ್ಟ ಬಾಳೆಹಣ್ಣನ್ನು ತಿನ್ನಲು ದೇವರಿಲ್ಲದ ಸ್ಥಳವನ್ನು ಹುಡುಕಿ ಎಲ್ಲೂ ಸಿಗದೆ ಹಿಂದಿರುಗಿದ. ಆತ ಎಲ್ಲೆಲ್ಲೂ ದೇವರ ಪ್ರಸನ್ನತೆಯನ್ನು ಕಂಡು ಪುಳಕಿತನಾದ. ಬೈಬಲ್ ಗ್ರಂಥದ ಕೀರ್ತನೆ 139ರಲ್ಲಿ ಕೀರ್ತನಕಾರನು (ದಾವೀದರಸನು) ದೈವ ಪ್ರಸನ್ನತೆಯನ್ನು ಕುರಿತು

"ನಾನೆಲ್ಲಿಗೆ ಹೋಗಲು ಸಾಧ್ಯ, ನಿನ್ನಾತ್ಮನಿಂದ

ತಪ್ಪಿಸಿಕೊಳ್ಳಲು?

ನಾನೆಲ್ಲಿಗೆ ಓಡಲು ಸಾಧ್ಯ, ನಿನ್ನ ಸನ್ನಿಧಿಯಿಂದ

ಮರೆಯಾಗಲು?

ಆಕಾಶಕ್ಕೆ ನಾನೇರಿದರೂ ನೀನಿರುವೆ ಅಲ್ಲಿ

ಪಾತಾಳದಲಿ ನಾ ನಿದ್ರಿಸಿದರೂ ನೀನಿರುವೆ ಅಲ್ಲಿ

ನಾನರುಣ ರೆಕ್ಕೆಗಳನೇರಿ ಹಾರಿದರೂ.

ಸಮುದ್ರದ ಕಟ್ಟಕಡೆಗಳಲಿ ನಾ ಸೇರಿದರೂ

ಅಲ್ಲೂ ನನ್ನ ನಡೆಸುವುದು ನಿನ್ನ ಕೈ,

ನನ್ನ ಹಿಡಿದಿರುವುದು ನಿನ್ನ ಬಲಗೈ" 

(139:7-10) ಎಂದು ಉದ್ಗರಿಸುತ್ತಾನೆ. 

ಆತನಿಗೆ ದೇವರಲ್ಲಿ ಸಂಪೂರ್ಣ ನಂಬಿಕೆ, ಅಚಲ ವಿಶ್ವಾಸವಿದೆ. ದೇವರೇ ಆತನಿಗೆ ಆಶ್ರಯದಾತರು, ಸಂರಕ್ಷಕರು ಹಾಗೂ ಪರಿಪಾಲಕರೂ ಆಗಿದ್ದಾರೆ. ದೇವರಿಲ್ಲದ ಬದುಕು ಶೂನ್ಯ, ನಿರರರ್ಥಕ ಎಂಬ ಅರಿವು ಆತನಿಗಿದೆ.

ಯಾವ ತಾಯಿಯ ಮಗುವಾದರೇನು? ಎಲ್ಲಿ ಜನಿಸಿ ಬೆಳೆದರೇನು? ಎಷ್ಟು ಓದಿದರೇನು? ಯಾವ ನೌಕರಿ ಗಳಿಸಿದರೇನು? ಯಾವ ಬಿರುದು ಪಡೆದರೇನು? ಎಲ್ಲವೂ ಈ ಲೋಕದಲ್ಲಿ ಅಂತ್ಯವಾಗುತ್ತದೆ. ಆದರೆ ದೇವರನ್ನು ತನ್ನ ಜೀವನದ ಕೇಂದ್ರವಾಗಿ ಉಳ್ಳವರ ಬದುಕು ಬಂಡೆಯ ಮೇಲೆ ಮನೆ ಕಟ್ಟಿಕೊಂಡವನಂತೆ (ಮತ್ತಾಯ 7:24-27; ಲೂಕ 6:46-49). ಅಂತವರು ಜಗದ ಏರಿಳಿತಗಳಿಗೆ ಹಿಗ್ಗದೆ, ಕುಗ್ಗದೆ, ಜಗ್ಗದೆ, ಸ್ಥಿರಚಿತ್ತದಿಂದ ಜೀವನದ ಸವಾಲುಗಳನ್ನು ಹಸನ್ಮುಖಿಯಾಗಿ, ಸಮತೋಲನವಾದ ಮನಸ್ಸಿನಿಂದ ಎದುರಿಸಿ, ದಿಟ್ಟತನದಿಂದ ಮುನ್ನುಗ್ಗಲು ಸಾಧ್ಯ. ಮಾತ್ರವಲ್ಲದೆ ಈ ಲೋಕದ ಯಾತ್ರೆ ಮುಗಿದಾಗ ಸಂತೃಪ್ತಿಯಿಂದ ದೇವನಲ್ಲಿ ನಿರಂತರವೂ ಜೀವಿಸಲು ತಮ್ಮನ್ನು ಸಿದ್ದಗೊಳಿಸಿಕೊಳ್ಳುತ್ತಾರೆ. ಏಕೆಂದರೆ ಅವರು ತಮಗಾಗಿ ಮಾತ್ರ ಜೀವಿಸುವುದಿಲ್ಲ. ಅವರು ಇತರರ ಒಳಿತಿಗಾಗಿ ತಮ್ಮ ಜೀವವನ್ನು ಸವೆಸಿಕೊಳ್ಳುತ್ತಾರೆ. ಇತರರ ಅಭ್ಯುದಯವೇ ಅವರ ಸಂತಸ.
ನಮ್ಮ ಪಿತಾಮಹರು, ಪ್ರವಾದಿಗಳು, ನ್ಯಾಯಸ್ಥಾಪಕರು ಹಾಗೂ ಸಕಲ ಸಂತರು ತ್ರೈಏಕದೇವನನ್ನು ತಮ್ಮ ಜೀವನದ ಕೇಂದ್ರಬಿಂದುವಾಗಿ ಇಟ್ಟುಕೊಂಡಿದ್ದರು. ಜೀವನದಲ್ಲಿ ಅವರಿಗೆ ಬಂದೊದಗಿದ ಕಷ್ಟ-ನಷ್ಟಗಳು, ತೊಂದರೆ-ತೊಡಕುಗಳು ಅಷ್ಟಿಷ್ಟಲ್ಲ. ದೇವರು ಅವರ ವಿಶ್ವಾಸವನ್ನು ಪರಿಪರಿಯಾಗಿ ಪರಿಶೋಧಿಸಿದರೂ ಅವರು ದೃತಿಗೆಡಲಿಲ್ಲ. ಏಕೆಂದರೆ ಅವರ ಅಂತರಾತ್ಮದಲ್ಲಿ ದೈವೀ ಸ್ಪರ್ಶವಾಗಿ ಅವರು ದೇವರಿಗೆ ಸಂಪೂರ್ಣವಾಗಿ ಶರಣಾಗಿದ್ದರು. ಅವರು ಪ್ರವಾದಿ ಯೆರೇಮಿಯ "ಸರ್ವೇಶ್ವರನಲ್ಲೇ ಭರವಸೆಯಿಟ್ಟವನಾದರೋ ಧನ್ಯ, ಅಂಥವನಿಗೆ ಸರ್ವೇಶ್ವರನಲ್ಲೇ ವಿಶ್ವಾಸ ನೀರರುಗಿನಲೆ ನೆಡಲಾದ, ನದಿಯ ಬದಿಯಲೆ ಬೇರು ಹರಡಿದ, ಬಿಸಿಲ ಧಗೆಗೆ ಹೆದರದೆ, ಬರಗಾಲದಲ್ಲೂ ನಿಶ್ಚಿಂತವಾದ ಹಸಿರೆಲೆ ಬಿಡುವ, ಫಲನೀಡುವ ಮರಕ್ಕೆ ಸಮಾನನು ಆತ" (ಯೆರೇಮಿ 17:8) ಎನ್ನುತ್ತಾನೆ.

ದೇವರು ಸದ್ಭಕ್ತರ ವಿಶ್ವಾಸವನ್ನು ಪುಟಕ್ಕಿಟ್ಟ ಚಿನ್ನದಂತೆ ಶುದ್ಧಗೊಳಿಸಿ ಹದಗೊಳಿಸುವರು. ಆ ಪ್ರಕ್ರಿಯೆಯು ಕಂಡಿತವಾಗಿಯೂ ಕಠಿಣವಾಗಿರುತ್ತದೆ. ಆದರೆ ಅದಾದ ನಂತರ ಅವರು ಸಕಲ ಸಂತೃಪ್ತಿಯನ್ನು ಹೊಂದುವರು. ಈ ಕಾರಣ ಪ್ರಸ್ತುತ ಯಾತನೆಯ ಬಗ್ಗೆ ಸಂತ ಪೌಲನು ರೋಮನರಿಗೆ ಬರೆದ ಪತ್ರದಲ್ಲಿ ಹೀಗೆ ಹೇಳುತ್ತಾನೆ "ಇಂದಿನ ಕಾಲದಲ್ಲಿ ನಾವು ಅನುಭವಿಸುತ್ತಿರುವ ಕಷ್ಟ ಸಂಕಷ್ಟಗಳು ಮುಂದೆ ನಮಗೆ ಪ್ರತ್ಯಕ್ಷವಾಗಲಿರುವ ಮಹಿಮೆಯೊಂದಿಗೆ ಹೋಲಿಸುವುದಕ್ಕೂ ಬಾರದವುಗಳೆಂದು ನಾನು ಎಣಿಸುತ್ತೇನೆ" (8:18). ಕಷ್ಟ-ನಷ್ಟ, ದುಃಖ-ದುಮ್ಮಾನಗಳು ಪ್ರತಿ ಮಾನವ ಜೀವಿಯ ಅವಿಭಾಜ್ಯ ಅಂಗ ಅದಕ್ಕಾಗಿ ಕುಗ್ಗುವ ಅವಶ್ಯಕತೆ ಇಲ್ಲ. ನಮ್ಮ ಕಷ್ಟ-ನಷ್ಟಗಳಲ್ಲಿ ದೇವರು ನಮ್ಮೂಂದಿಗೇ ಇರುತ್ತಾರೆ, ಅವರು ನಮ್ಮನ್ನೆಂದೂ ಮರೆಯುವುದಿಲ್ಲ. ಪ್ರವಾದಿ ಯೆಶಾಯ ಅದನ್ನು ಹೀಗೆ ಬಣ್ಣಿಸುತ್ತಾನೆ "ಹೆತ್ತ ತಾಯಿಗೆ ತನ್ನ ಕಂದನ ಪ್ರೀತಿ ಬತ್ತಿಹೋಗುವುದುಂಟೆ? ಆಕೆ ತನ್ನ ಮೊಲೆಗೂಸನ್ನು ಮರೆತುಬಿಡುವುದುಂಟೆ? ಒಂದು ವೇಳೆ ಆಕೆ ಮರೆತರೂ ನಾ ನಿನ್ನನು ಮರೆಯೆ" (ಯೆಶಾಯ 49:15) ಎನ್ನುತ್ತಾನೆ ಸರ್ವೇಶ್ವರ. 
ಈ ಲೋಕದಲ್ಲಿ ನಮ್ಮ ಬದುಕು ಹಾಗೂ ಕೆಲಸ ಕಾರ್ಯಗಳು ಸಫಲವಾಗಬೇಕಾದರೆ ಅದು ದೈವ ಕೇಂದ್ರಿತವಾಗಿರಬೇಕು ಇಲ್ಲದಿದ್ದಲ್ಲಿ ಕೀರ್ತನೆಕಾರ ಹೇಳುವ ಹಾಗೆ

"ಪ್ರಭುವೇ ಮನೆಮಠವನು ಕಟ್ಟದ ಹೊರತು

ಅದನ್ನು ಕಟ್ಟುವವರ ಪ್ರಯಾಸ ವ್ಯರ್ಥ

ಪ್ರಭುವೇ ಪಟ್ಟಣವನು ಕಟ್ಟದ ಹೊರತು

ಕಾವಲುಗಾರನು ಅದನ್ನು ಕಾಯುವುದು ವ್ಯರ್ಥ" 

(127:1). 

ನಮ್ಮನ್ನು ಕಾಯುವ ದೇವರು ಗುಡಿ, ಮಸೀದಿ, ಚರ್ಚುಗಳಲ್ಲಿ ಜೀವಿಸುವುದಿಲ್ಲ ಅವರು ಸದಾ ನಮ್ಮ ಮಧ್ಯದಲ್ಲಿಯೇ ಇದ್ದಾರೆ. ಮಾನವನ ಅಂತರಂಗವೇ ಅವರ ನಿಜತಾಣ. ಅವರು ’ಇಮ್ಮಾನುವೇಲ್’ ಸದಾ ನಮ್ಮೊಡನೆ ಇರಬಯಸುತ್ತಾರೆ. ಅವರು ನಮ್ಮನ್ನು ಕ್ಷಣಕ್ಷಣವು ಅಹ್ವಾನಿಸುತ್ತಿದ್ದಾರೆ "ನೀವು ನನ್ನಲ್ಲಿ ನೆಲೆಗೊಂಡಿರಿ, ಆಗ ನಾನು ನಿಮ್ಮಲ್ಲಿ ನೆಲೆಗೊಂಡಿರುವೆನು. ಕವಲು ಮೂಲಬಳ್ಳಿಯಲ್ಲಿ ಒಂದಾಗಿ ನೆಲಸದಿದ್ದರೆ ತನ್ನಷ್ಟಕ್ಕೆ ತಾನೇ ಫಲಕೊಡಲಾಗದು. ಹಾಗೆಯೇ ನೀವು ಕೂಡ ನನ್ನಲ್ಲಿ ಒಂದಾಗಿ ನೆಲಸದಿದ್ದರೆ ಫಲಕೊಡಲಾರಿರಿ" (ಯೊವಾನ್ನ 15:4). ನಾವು ಈ ಲೋಕದಲ್ಲಿ ಉಪಯುಕ್ತ ಹಾಗೂ ಫಲಭರಿತ ಜೀವನವನ್ನು ನಡೆಸಿ ಸಂತೃಪ್ತರಾಗ ಬೇಕೆಂಬುದು ದೇವರ ಹೆಬ್ಬಯಕೆ. ಆ ಬಯಕೆ ಸಿದ್ದಿಗೆ ಬರಬೇಕಾದರೆ ಅವರು ನಮ್ಮ ಜೀವನದ ಕೇಂದ್ರಬಿಂದುವಾಗಲೇಬೇಕು. ಇಲ್ಲದಿದ್ದಲ್ಲಿ ನಾವು ಉಸಿರಿಲ್ಲದ ಶರೀರಕ್ಕೆ ಸಮನಾಗುತ್ತೇವೆ. 
ಫಾದರ್ ವಿಜಯ್ ಕುಮಾರ್, ಬಳ್ಳಾರಿ


●●●



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...