
ಈ ನಡುವೆ ಹೆರ್ಮಾನ್ ಮುವ್ ಗ್ಲಿಂಗ್ ಎಂಬುವವರು 'ಮಂಗಳೂರ ಸಮಾಚಾರ' ಎಂಬ ಪತ್ರಿಕೆಯನ್ನು ಹುಟ್ಟುಹಾಕಿ ಕನ್ನಡ ಪತ್ರಿಕಾಲೋಕದ ಪಿತಾಮಹ ಎನಿಸಿದರು. ಮುಂದೆ ಅವರು ಬಳ್ಳಾರಿಗೆ ವರ್ಗವಾಗಿ ಅಲ್ಲಿ ಅದನ್ನು 'ಕಂನಡ ಸಮಾಚಾರ' ಎಂದು ಬದಲಿಸಿ ಮುನ್ನಡೆಸಿದರಾದರೂ ಒಂದು ವರ್ಷದಲ್ಲೇ ಅದು ನಿಂತುಹೋಯಿತು. ಕಿಟೆಲರು ಸಂಪಾದಕರಾಗಿದ್ದ ’ಇಂಡಿಯಾ ದೇಶದ ವಾರ್ತಿಕ' ಅನ್ನೋ ಪತ್ರಿಕೆ ಮಂಗಳೂರು ಕೊಡಿಯಾಲಬೈಲ್ ಪ್ರೆಸ್ಸಿನಲ್ಲಿ ಮುದ್ರಿತವಾಗಿ ಹಡಗಿನಲ್ಲಿ ಬೊಂಬಾಯಿ ತಲಪಿ ಅಲ್ಲಿನ ಕನ್ನಡಿಗರಿಗೆ ವಿತರಣೆಯಾಗುತ್ತಿತ್ತು. ಈ ಪತ್ರಿಕೆಗಳು ರಾಜಕೀಯ ವಿಶ್ಲೇಷಣೆ ಮಾಡದೆ ಜಾತ್ಯತೀತವಾಗಿ ಪ್ರಚಲಿತ ವಿದ್ಯಮಾನಗಳನ್ನಷ್ಟೇ ಬಿತ್ತರ ಮಾಡುತ್ತಿದ್ದವು. ಮುಂಬೈನಲ್ಲಿ ಕಾಲೂರಿದ್ದರೂ ತಾಯ್ನಾಡಿನ ಸುದ್ದಿಗಾಗಿ ಹೃದಯ ಮಿಡಿಯುತ್ತಿದ್ದ ಕನ್ನಡಿಗರಿಗೆ ಕನ್ನಡದ ಈ ಪತ್ರಿಕೆಗಳು ನೀಡುತ್ತಿದ್ದ ರೋಚಕ ಸುದ್ದಿಗಳೇ ಅಪ್ಯಾಯಮಾನವಾಗಿದ್ದವು.
ಅಲ್ಲಿಂದೀಚೆಗೆ ಕನ್ನಡದಲ್ಲಿ ಹಲವು ಪತ್ರಿಕೆಗಳು ಬಂದಿವೆ. ಕೆಲವು ಪತ್ರಿಕೆಗಳು ಕೆಲವೇ ದಿನಗಳ ಕಾಲ ಶೋಭಿಸಿ ಮರೆಯಾದರೆ ಮತ್ತೆ ಕೆಲವು ಹಲವು ದಶಕಗಳ ಕಾಲ ಮೆರೆದಿವೆ. ಪಿ. ಆರ್. ರಾಮಯ್ಯ, ಡಿ. ವಿ. ಗುಂಡಪ್ಪ, ರುಮಾಲೆ ಚೆನ್ನಬಸವಯ್ಯ, ಆರ್. ಆರ್. ದಿವಾಕರ, ಬಿ. ಪುಟ್ಟಸ್ವಾಮಿ, ಟಿ. ಎಸ್. ರಾಮಚಂದ್ರರಾವ್, ಖಾದ್ರಿ ಶಾಮಣ್ಣ, ಕಡಿದಾಳು ಮಂಜಪ್ಪ, ಪಾಟೀಲ ಪುಟ್ಟಪ್ಪ, ಕಿಡಿ ಶೇಷಪ್ಪ, ಲಂಕೇಶ್ ಮುಂತಾದವರು ಕನ್ನಡ ಪತ್ರಿಕೋದ್ಯಮಕ್ಕೆ ವಿಭಿನ್ನ ಆಯಾಮಗಳನ್ನು ನೀಡಿದವರು.
ಮೈಸೂರು ಮಹಾರಾಜರನ್ನೇ ಗುರಿಯಾಗಿಸಿ ಬರೆಯುತ್ತಿದ್ದ 'ಸಾಧ್ವಿ ಪತ್ರಿಕೆ'ಯ ಎಂ. ವೆಂಕಟಕೃಷ್ಣಯ್ಯನವರು ಹಳದಿ ಪತ್ರಿಕೋದ್ಯಮಕ್ಕೆ ನಾಂದಿ ಹಾಡಿದರು. ಒಂದೇ ದೃಷ್ಟಿಕೋನದ, ಸಮರ್ಥನೀಯವಲ್ಲದ, ಅಪೂರ್ಣ ಸಂಶೋಧನೆಯ ಹಾಗೂ ತೆಗಳುವುದನ್ನೇ ಉದ್ಯೋಗವಾಗಿಸಿಕೊಂಡ ಆಕರ್ಷಕ ಬಣ್ಣ ಮತ್ತು ಶೀರ್ಷಿಕೆಗಳಿಂದ ಸೆಳೆಯುವ ಪತ್ರಿಕೋದ್ಯಮವೇ ಹಳದಿ ಪತ್ರಿಕೋದ್ಯಮ. ಹಳದಿ ಪತ್ರಿಕೋದ್ಯಮವು ಕಣ್ಣಿಗೆ ರಾಚಿದರೆ ಕೇಸರಿ ಪತ್ರಿಕೋದ್ಯಮವು ನಮ್ಮೆಲ್ಲರ ನಡುವೆಯೇ ಚಾಪೆಯ ಕೆಳಗಿನ ನೀರಿನಂತೆ ಪಸರಿಸುತ್ತಿದೆ. ಸಂಘಪರಿವಾರದ ವಿಚಾರಗಳ ಪ್ರಸರಣಕ್ಕೆಂದೇ ಮೊದಲೆಲ್ಲ ವಿಕ್ರಮ, ಹೊಸದಿಗಂತ ಮುಂತಾದ ಪತ್ರಿಕೆಗಳು ಕದ್ದುಮುಚ್ಚಿ ವಿತರಣೆಯಾಗುತ್ತಿದ್ದವು. ಆದರೆ ಇಂದಿನ ಎಲ್ಲ ಪತ್ರಿಕೆಗಳಲ್ಲೂ ದೃಶ್ಯಮಾಧ್ಯಮಗಳಲ್ಲೂ ಕೇಸರಿಯ ಜನರು ತೂರಿಕೊಂಡು ಪರೋಕ್ಷವಾಗಿ ಸಂಘಪರಿವಾರದ ಧೋರಣೆಗಳನ್ನು ಬಿತ್ತಿ ಬೆಳೆಯುತ್ತಿದ್ದಾರೆ.
ಧಾರ್ಮಿಕ ಪತ್ರಿಕೆಗಳು:
ಕೆಲ ಧಾರ್ಮಿಕ ಸಂಸ್ಥೆಗಳೂ ತಮ್ಮ ವಿಚಾರಗಳನ್ನು ಹರಿಬಿಡಲು ಪತ್ರಿಕೆಗಳನ್ನು ನಡೆಸುವುದಿದೆ. ಧರ್ಮಸ್ಥಳದಿಂದ 'ಮಂಜುವಾಣಿ', ರಾಮಕೃಷ್ಣಾಶ್ರಮದಿಂದ 'ವಿವೇಕ ಸಂಪದ' ಮುಂತಾದ ಪತ್ರಿಕೆಗಳು ಸರ್ವಜನರ ಮೆಚ್ಚುಗೆಗೆ ಪಾತ್ರವಾಗಿ ಅನೇಕರ ಮನೆಮನಗಲಲ್ಲಿ ವಿರಾಜಿಸಿವೆ. ಅಂತೆಯೇ ನಮ್ಮ ಕನ್ನಡ ಕಥೋಲಿಕ ಕ್ರೈಸ್ತ ಪಂಥದ ವಾಹಿನಿಗಳಾಗಿ ಕೆಲ ಪತ್ರಿಕೆಗಳು ಪ್ರಕಟವಾಗುತ್ತಿವೆ. ಈ ಪತ್ರಿಕೆಗಳು ಪವಿತ್ರ ಬೈಬಲಿನ ಸಿದ್ದಾಂತಗಳನ್ನು ಕನ್ನಡದ ನೆಲದ ಸೊಗಡಿನಲ್ಲಿ ಹಾಗೂ ನೆಲದ ಸಂಪ್ರದಾಯಗಳ ಬೆಳಕಿನಲ್ಲಿ ಅರಿಯುವ ಹಾಗೂ ಪಸರಿಸುವ ಪ್ರಯತ್ನವಾಗಿದೆ.
ಮೈಸೂರಿನ ಪ್ರಸಿದ್ಧ ಪುಣ್ಯಕ್ಷೇತ್ರ ದೋರನಹಳ್ಳಿಯಲ್ಲಿ ದೀರ್ಘಕಾಲ ನೆಲೆಗೊಂಡು ಅಲ್ಲೇ ಮಣ್ಣಾದ ಐ. ಎಚ್. ಲೋಬೊ ಸ್ವಾಮಿಗಳು ಹೊರತಂದ 'ಕ್ರಿಸ್ತೇಸುವಿನ ತಿರುಹೃದಯದ ದೂತನು' ಎಂಬ ಮಾಸ ಪತ್ರಿಕೆಯು ಕಾಲಾಂತರದಲ್ಲಿ ಮೈಸೂರಿಗೆ ತನ್ನ ತಾಣ ಬದಲಿಸಿದರೂ ಪುಣ್ಯಕ್ಷೇತ್ರದ ಹಣದಲ್ಲೇ ಹಲವಾರು ದಶಕಗಳ ಕಾಲ ಪ್ರಕಟವಾಗುತ್ತಾ ಬಂದು ಈಗ 'ಪ್ರಧಾನದೂತ' ಎಂಬ ಹೆಸರಿನಲ್ಲಿ ಶತಮಾನ ಪೂರೈಸುತ್ತಿದೆ. ಶತಮಾನದ ದೂತ ಪತ್ರಿಕೆಗೆ ವಂದನೀಯರಾದ ವಲೇರಿಯನ್ ಸೋಜ, ದಯಾನಂದಪ್ರಭು, ಜಿ ಜೋಸೆಫ್, ಎನ್ ಎಸ್ ಮರಿಜೋಸೆಫ್, ಕೆ ಎ ವಿಲಿಯಂ ಮುಂತಾದವರ ಕೊಡುಗೆ ಅನನ್ಯ.
ಅದೇ ರೀತಿ ಚಿಕ್ಕಮಗಳೂರು ಧರ್ಮಪ್ರಾಂತ್ಯದಿಂದ 'ನವಜ್ಯೋತಿ' ಅನ್ನುವ ಮಾಸ ಪತ್ರಿಕೆ ಬರುತ್ತಿತ್ತು. ಅದು ಈಗ ನಿಂತು ಹೋಗಿ, ಕಳೆದ ಹದಿನಾರು ವರ್ಷಗಳಿಂದ 'ಸ್ನೇಹಜ್ಯೋತಿ' ಎಂಬ ಪತ್ರಿಕೆ ಪ್ರಕಟವಾಗುತ್ತಿದೆ. ಕಲಬುರ್ಗಿ ಧರ್ಮಪ್ರಾಂತ್ಯದ 'ಸಿಂಚನ', ಪೋಟ್ಟಾ ಧ್ಯಾನಕೇಂದ್ರದ 'ವಚನೋಲ್ಸವ' ಮುಂತಾದವು ಹಲವಾರು ವರ್ಷಗಳಿಂದ ಅನೇಕ ಕ್ರೈಸ್ತರ ಮನೆ ತಲುಪುತ್ತಾ ಇವೆ. ರಾಜಧಾನಿ ಅದರಲ್ಲೂ ಮಹಾಧರ್ಮಪ್ರಾಂತ್ಯವಾದ ಬೆಂಗಳೂರಿನಿಂದ 'ಸ್ಫೂರ್ತಿ' ಅನ್ನುವ ಪತ್ರಿಕೆ ಮೊದಲು ಶುರುವಾಗಿ ಆನಂತರದಲ್ಲಿ 'ಕರ್ನಾಟಕ ತಾರೆ' ಎಂದು ಬದಲಾಯಿತು. ಸ್ವಾಮಿ ಐ. ಅಂತಪ್ಪ, ಸ್ವಾಮಿ, ಆ. ತೋಮಾಸ್ ಮುಂತಾದವರಿಂದ ಹಲವು ದಶಕಗಳ ಕಾಲ ನಡೆದು ಕಾಲಾಂತರದಲ್ಲಿ ಸ್ವಾಮಿ ಸ್ಟ್ಯಾನಿ ವೇಗಸ್ ನವರ ಕಾಲದಲ್ಲಿ ನಿಂತುಹೋಯಿತು. ಆ ನಂತರ ಕೆಲ ಜನಸಾಮಾನ್ಯರೇ 'ಕನ್ನಡವಾರ್ತೆ', 'ಕನ್ನಡಸಂದೇಶ', 'ಮಾತುಕತೆ’ 'ಸತ್ಯಮಾರ್ಗ' ಮುಂತಾದ ಪತ್ರಿಕೆಗಳನ್ನು ನಡೆಸಿದರು.
ಇದೀಗ ಮಹಾಧರ್ಮಪ್ರಾಂತ್ಯವು 'ತಾಬೋರ್' ಎಂಬ ಹೆಸರಿನಲ್ಲಿ ಹೊಸ ಮಾಸ ಪತ್ರಿಕೆಯೊಂದನ್ನು ಹೊರತರುತ್ತಿದೆಯಾದರೂ ವರಿಷ್ಠರ ಸಹಮತವಿಲ್ಲದ ಕಾರಣ ಕ್ರಮಬದ್ಧವಾಗಿ ಪ್ರಕಟವಾಗುತ್ತಿಲ್ಲ.
ಬಳ್ಳಾರಿ ಧರ್ಮಪ್ರಾಂತ್ಯದಿಂದ 'ಬಾಳಸ್ಫೂರ್ತಿ' ಎಂಬ ಪತ್ರಿಕೆ ೧೯೯೪ರಲ್ಲಿ ಪ್ರಾರಂಭಗೊಂಡು ೨೦೦೯ ಏಪ್ರಿಲ್ ವರೆಗೆ ಫಾದರ್ ಜೈಪ್ರಕಾಶ್ ಫ್ರಾನ್ಸಿಸ್ ಜೋಸೆಫ್ ನವರ ಸಂಪಾದಕತ್ವದಲ್ಲಿ ನಡೆಯಿತು. ಇಂದು ಬಳ್ಳಾರಿ ಧರ್ಮಪ್ರಾಂತ್ಯದಲ್ಲಿ ಪತ್ರಿಕೆಯೇ ಇಲ್ಲ. ಅದೇ ರೀತಿಯಲ್ಲಿ ಡಾನ್ ಬಾಸ್ಕೊ ಸಂಸ್ಥೆಯು ನಡೆಸುತ್ತಿದ್ದ ಸಂಮೃದ್ಧ 'ಬಾಸ್ಕೊಬಾಂಧವ್ಯ' ಕೂಡಾ ನಿಂತುಹೋಗಿದೆ. ಬೆಳಗಾವಿ ಧರ್ಮಪ್ರಾಂತ್ಯದಿಂದ ಇಂಗ್ಲಿಷ್ ಪತ್ರಿಕೆಯೊಂದು ಬರುತ್ತಿದ್ದು ಅದರಲ್ಲಿ ಕನ್ನಡಕ್ಕೆ ಒಂದೇ ಒಂದು ಪುಟ ಮೀಸಲಿಡಲಾಗಿದೆ. ಕರ್ನಾಟಕದಲ್ಲಿ ಬೃಹತ್ ಮಿಷನರಿ ಸಂಸ್ಥೆಗಳಾಗಿ ನೆಲೆಗಂಡ ಯೇಸುಸಭೆ ಮತ್ತು ಕಪುಚಿನ್ ಸಭೆಗಳು ಕನ್ನಡದಲ್ಲಿ ಯಾವುದೇ ಪತ್ರಿಕೆಯನ್ನು ಹೊರತರುತ್ತಿಲ್ಲ .
ಸತ್ವಪೂರ್ಣ ಲೇಖನಗಳ ಕೊರತೆ, ಮುದ್ರಣದೋಷಗಳು, ಹೊಸತನವಿಲ್ಲದ ವಿನ್ಯಾಸ, ಹಂಚಿಕೆಯಲ್ಲಿ ಕ್ರಮತಪ್ಪುವಿಕೆಗಳ ಕಾರಣದಿಂದಾಗಿ ಓದುಗರು ಉತ್ಸಾಹ ಕಳೆದುಕೊಳ್ಳುತ್ತಾರೆ. ಒಮ್ಮೆ ಕಳೆದುಕೊಂಡ ಓದುಗರನ್ನು ಮತ್ತೆ ಪಡೆಯುವುದು ಬಲು ಕಷ್ಟ. ಇವನ್ನು ಮುದ್ರಿತ ಪತ್ರಿಕೆಗಳ ಸೋಲು ಎನ್ನದೆ ಅದನ್ನು ಮುನ್ನಡೆಸುವವರ ಸೋಲು ಎನ್ನಬೇಕಾಗುತ್ತದೆ. ಪ್ರತಿಭೆಗಳೂ ಸಂಪನ್ಮೂಲಗಳೂ ಯಥೇಚ್ಛವಾಗಿದ್ದರೂ ಸೈತಾನನ ಪ್ರಲೋಭನೆಗೊಳಗಾಗಿ ಸರಿಯಾಗಿ ಪತ್ರಿಕೆ ನಡೆಸಲಾಗದ ಈ ವ್ಯವಸ್ಥೆಗಳ ಬಗ್ಗೆ ಅತೀವ ವಿಷಾದವೆನಿಸುತ್ತದೆ.
ಈ ನಡುವೆ ಆಶಾಕಿರಣವೆಂಬಂತೆ ವಿದ್ಯುನ್ಮಾನ ಮಾಧ್ಯಮದಲ್ಲಿ ಹೊರತರಲಾಗುತ್ತಿರುವ 'ದನಿ' ಇ-ಪತ್ರಿಕೆಯು ಎಲ್ಲ ಜನರನ್ನೂ ತಲಪುವ ಸದುದ್ದೇಶದಿಂದ ವಿಶಿಷ್ಟ ರೂಪದಲ್ಲಿ ನಡೆಯುತ್ತಿದೆ. ಸತ್ತ್ವಶಾಲಿ ಲೇಖಕರ ಧ್ವನಿಪೂರ್ಣ ಲೇಖನಗಳ ಹೂರಣವುಳ್ಳ ಹಾಗೂ ಆಕರ್ಷಕ ವರ್ಣಚಿತ್ರಗಳ ಪುಟಸಂಯೋಜನೆ ಮಾಡಲಾದ ಈ ವಿದ್ಯುನ್ಮಾನ ಪತ್ರಿಕೆಯನ್ನು ಮೊಬೈಲಿನಲ್ಲಿ, ಲ್ಯಾಪ್ ಟಾಪಿನಲ್ಲಿ, ಗಣಕಯಂತ್ರದಲ್ಲಿ ನಮ್ಮ ಬೆರಳುಗಳ ಮೂಲಕ ಜಾಲಾಡಬಹುದು. ವಿಶ್ವದೆಲ್ಲೆಡೆಯ ಕನ್ನಡ ಬಲ್ಲ ಕ್ರೈಸ್ತರು ಮಿನ್ನಂಚೆ, ವಾಟ್ಸಾಪು, ಫೇಸುಬುಕ್ಕುಗಳ ಮೂಲಕ ಇದನ್ನು ಪಡೆದುಕೊಂಡು ಕಳೆದ ಎರಡು ವರ್ಷಗಳಿಂದ ಪ್ರೋತ್ಸಾಹಿಸುತ್ತಾ ಬರುತ್ತಿದ್ದಾರೆ.
--------------------------------------------------------------------------------------------------------------------------
'ಮಂಗಳೂರ ಸಮಾಚಾರ' ವಾರ ಪತ್ರಿಕೆ
ಕನ್ನಡ ಪತ್ರಿಕೋದ್ಯಮದ ಚರಿತ್ರೆ ಕರ್ನಾಟಕದಲ್ಲಿ ಆರಂಭವಾಗುವುದು 'ಮಂಗಳೂರ ಸಮಾಚಾರ'ವೆಂಬ ವಾರ ಪತ್ರಿಕೆಯೊಂದಿಗೆ. ಇದರ ಸಂಪಾದಕ 'ಹೆರ್ಮಾನ್ ಮುವ್ ಗ್ಲಿಂಗ್'. ಪ್ರಾರಂಭ ಮಂಗಳೂರಿನಲ್ಲಿ ಬಾಸೆಲ್ ಮಿಶನ್ ಸಂಸ್ಥೆಯಿಂದ. ಜುಲೈ 1, 1843ರಲ್ಲಿ ವಾರಪತ್ರಿಕೆಯ ಮೊದಲ ಪ್ರಕಟಣೆ. 173 ವರ್ಷಗಳ ದೀರ್ಘ ಇತಿಹಾಸ ಹೊಂದಿರುವ ಕನ್ನಡ ಪತ್ರಿಕೋದ್ಯಮವಿದು. ಈ ಸೌಲಭ್ಯವನ್ನು ಒದಗಿಸಿಕೊಟ್ಟವರು ಪಾಶ್ಚಾತ್ಯರು. ಪಾಶ್ಚಾತ್ಯ ಪ್ರಪಂಚದಲ್ಲಿ ಜನಜೀವನದ ಮೇಲೆ ಮುದ್ರಣದ ಪ್ರಭಾವವು ಮೂರು ನಾಲ್ಕು ಶತಮಾನಗಳಿಂದ ಉಂಟಾಗಿದ್ದರೂ ಭಾರತದಲ್ಲಿ ಈ ವ್ಯವಸ್ಥೆ ಒಂದೂವರೆ ಶತಮಾನದ ಈಚಿನದು. ಕ್ರೈಸ್ತಧರ್ಮ ಪ್ರಚಾರಕ್ಕಾಗಿ ಬಂದವರು ಮೊದಲು ಇಲ್ಲಿ ಕಲ್ಲಚ್ಚಿನ ಮುದ್ರಣವನ್ನು ಬಳಕೆಗೆ ತಂದರು. ತದನಂತರ ಅಚ್ಚು ಮೊಳೆಗಳ ಮುದ್ರಣ ಆರಂಭವಾಯಿತು.
-------------------------------------------------------------------------------------------------------------------------
ಡಾಕ್ಟರ್ ಹೆರ್ಮಾನ್ ಮುವ್ ಗ್ಲಿಂಗ್
(1811-1881)
ಜರ್ಮನ್ ದೇಶೀಯನಾದ ರೆವರೆಂಡ್ ಡಾಕ್ಟರ್ ಹೆರ್ಮಾನ್ ಮುವ್ ಗ್ಲಿಂಗ್ (1811-1881) ಕನ್ನಡದಲ್ಲಿ `ಪತ್ರ ಸಾಹಿತ್ಯ'ವನ್ನು ಪ್ರಾರಂಭಿಸಿದ ಮೊದಲಿಗ. ಮುವ್ ಗ್ಲಿಂಗ್ ಹುಟ್ಟಿದ್ದು 1811ರಲ್ಲಿ ಜರ್ಮನಿಯ ಬ್ರಾಕನ್ ಹೀಮ್ ಎಂಬ ಊರಿನಲ್ಲಿ. ಬಡಮಧ್ಯಮ ವರ್ಗದ, ಹೆಚ್ಚು ಓದಿರದ ಮುವ್ ಗ್ಲಿಂಗ್ 19ನೆಯ ಶತಮಾನದಲ್ಲಿ ಕ್ರೈಸ್ತ ಧರ್ಮಪ್ರಚಾರಕ್ಕೆಂದು ಜರ್ಮನಿಯಿಂದ ಭಾರತಕ್ಕೆ ಕಾಲಿರಿಸಿದ. ಬಾಸೆಲ್‌ನಲ್ಲಿ ಅಲ್ಪಾವಧಿ ಮಿಶನರಿ ತರಬೇತಿಯನ್ನು ಮುಗಿಸಿ 1836ರಲ್ಲಿ ಮಂಗಳೂರಿಗೆ ಕಾಲಿರಿಸಿದ.
------------------------------------------------------------------------------------------------------------------------
ಮಂಗಳೂರು ಸಮಾಚಾರದ ಪೀಠಿಕೆ
`ಮಂಗಳೂರಿನವರು ಮೊದಲಾದ ಯೀ ದೇಶಸ್ಥರು ಕಥೆಗಳಂನೂ ವರ್ತಮಾನಗಳಂನೂ ಹೇಳುವುದರಲ್ಲಿಯೂ ಕೇಳುವುದರಲ್ಲಿಯೂ ಯಿಚ್ಛೆಯುಳ್ಳವರಾಗಿರುತ್ತಾರೆ. ಬೆಳಿಗ್ಗೆ ಬಂದ್ರ್ಯದಲ್ಲಾಗಲಿ ಕಚೇರಿ ಹತ್ತರವಾಗಲಿ ಒಬ್ಬನು ಬಾಯಿಗೆ ಬಂದ ಹಾಗೆ ಒಂದು ವರ್ತಮಾನದ ಹಾಗೆ ಮಾತಾಡಿದರೆ ಅದನ್ನು ಬೇರೊಬ್ಬನು ಆಶ್ಚರ್ಯದಿಂದ ಕೇಳಿ ಇನ್ನೊಬ್ಬನಿಗೆ ಹೇಳಿ ಸಾಯಂಕಾಲ ಪರಿಯಂತರ ಸುಳ್ಳು ಸುದ್ದಿಯಿಂದ ಊರೆಲ್ಲ ತುಂಬಿಸುತ್ತಾನೆ. ಮರುದಿವಸ ನಿನ್ನಿನ ವರ್ತಮಾನ ಸುಳ್ಳುಯಂತಾ ಕಾಣುವಷ್ಟರೊಳಗೆ ಎಮ್ಮೆ ಮೊಲೆಯಂತೆ ಮತ್ತೊಂದು ಹುಟ್ಟಿ ಆತು. ಈ ಪ್ರಕಾರವಾಗಿ ಬಹಳ ಜನರು ಕಾಲಕ್ರಮೇಣ ಮಾಡುತ್ತಾರೆಂದು ಕೆಲವು ವರ್ಷದಿಂದ ಇಲ್ಲಿ ವಸ್ತಿಯಾಗಿದ್ದ ಕೆಲವರು ತಿಳುಕೊಂಡು ಇದರಲ್ಲಿ ಪ್ರಯೋಜನವಿಲ್ಲವೆಂದು ಈ ಮನುಷ್ಯರ ಸಮಾಚಾರ ಆಸರಕ್ಕೆ ಯೋಗ್ಯವಾಗಿ ಪೂರೈಸಬೇಕೆಂದು ಆಲೋಚನೆ ಮಾಡಿದ್ದರಿಂದ ಈ ಸಮಾಚಾರದ ಸಂಗ್ರಹವನ್ನು ಕೂಡಿಶಿ ಪಕ್ಷಕ್ಕೆ ಒಂದು ಕಾಗದವನ್ನು ಛಾಪಿಸಿ ಸ್ವಲ್ಪ ಕ್ರಯಕ್ಕೆ ಜನರ ಕೈಯಲ್ಲಿ ಶೇರಿಸಬೇಕೆಂಬುದಾಗಿ ನಿಶ್ಚಯಿಸಿ ... ಯಾಗಿದೆ.
"ಈ ದೇಶವೆಂಬ ಮನೆಯಲ್ಲಿ ವಾಸಿಸುವ ಜನರು ಇಂದಿನ ಪರಿಯಂತರ ಹೊರಗಿನ ದೇಶಸ್ಥರ ಸಮಾಚಾರ ಮಾರ್ಗ ಮರ್ಯಾದೆಗಳನ್ನು ತಿಳಿಯದೇ ಕಿಟಿಕಿಯಿಲ್ಲದ ಬಿಡಾರದಲ್ಲಿ ಉಳಕೊಳ್ಳುವವರ ಹಾಗೆಯಿರುತ್ತಾ ಬಂದರು. ಅದು ಕಾರಣ ಹೊರಗಿನ ಕಾರ್ಯಗಳನ್ನು ಕಾಣುವ ಹಾಗೆಯೂ ಒಳಗೆ ಸ್ವಲ್ಪ ಬೆಳಕು ಬೀರುವ ಹಾಗೆಯೂ ನಾಲ್ಕೂ ದಿಕ್ಕಿಗೆ ಕಿಟಿಕಿಗಳನ್ನು ಮಾಡುವ ಈ ಸಮಾಚಾರ ಕಾಗದವನ್ನು ಪಕ್ಷವೊಂದು ಸಾರಿ ಸಿದ್ದ ಮಾಡಿ ಅದನ್ನು ಓದಬೇಕೆಂದಿರುವೆಲ್ಲರಿಗೆ ಕೊಟ್ಟರೆ ಕಿಟಿಕಿಗಳನ್ನು ನೋಡಿದ ಹಾಗಿರುವುದು," ಇದು ಮಂಗಳೂರು ಸಮಾಚಾರ ಪತ್ರಿಕೆಯ ಆಶಯದ ಮಾತುಗಳು.ಆಗಿನ ವ್ಯಾಕರಣ, ಭಾಷೆಯನ್ನು ಯಥಾವತ್ತಾಗಿಡಲಾಗಿದೆ. ಈ ಮೂಲಕ ತಮ್ಮ ಸುತ್ತಮುತ್ತಲೂ ಏನು ನಡೆಯುತ್ತದೆ ಎಂಬುದನ್ನು ಜನರು ಅರಿತುಕೊಳ್ಳಲಿ ಎಂಬ ಕಾರಣಕ್ಕಾಗಿ ಅವರಲ್ಲಿ ವಾಚನಾಭಿರುಚಿ ಮತ್ತು ಸಮಕಾಲೀನ ವಿಷಯಗಳ ಜ್ಞಾನವನ್ನು ಬಿತ್ತುವ ಸಾಹಿತ್ಯ ಕೃಷಿಗೆ ಕೈ ಹಾಕಿದ್ದ ಕೀರ್ತಿ ಕನ್ನಡ ಪತ್ರಿಕೆಯ ಜನಕ ಹೆರ್ಮಾನ್ ಮುವ್ ಗ್ಲಿಂಗ್ ಅವರಿಗೆ ಸಲ್ಲುತ್ತದೆ.
'ಮಂಗಳೂರ ಪತ್ರಿಕೆ'ಯಲ್ಲಿ ಪ್ರಕಟವಾಗುತ್ತಿದ್ದ ವರ್ತಮಾನಗಳ ಪಟ್ಟಿ (ಪತ್ರಿಕೆಯಲ್ಲಿದ್ದಂತೆ) ಇಂತಿದ್ದವು; 1. ವೂರ ವರ್ತಮಾನ, 2. ಸರಕಾರದವರ ನಿರೂಪಗಳು, 3. ಸರ್ವರಾಜ್ಯ ವರ್ತಮಾನಗಳು, 4. ನೂತನವಾದ ಆಶ್ಚರ್ಯ ಸುದ್ದಿಗಳು, 5. ಅಂನ್ಯರ ನಡೆಗಳು, 6. ಸುಬುದ್ಧಿಗಳು, 7. ಕಥೆಗಳು, 8. ಯಾರಾದರು ವೊಂದು ವರ್ತಮಾನ ಅಥವಾ ವೊಂದು ಮಾತು ಯಿದರಲ್ಲಿ ಶೇರಿಸಿ ಛಾಪಿಸಬೇಕು ಎಂತ ಬರದು ಕಳುಹಿಸಿದರೆ ಆ ಸಂಗತಿ ಸತ್ಯವಾಗಿದ್ದರೆ ಅದು ಸಹಾ ಯೀ ವರ್ತಮಾನ ಕಾಗದ ಸಂಗಡ ಕೂಡಿಸಿ ಛಾಪಿಸಬಹುದಾಗಿರುತ್ತದೆ, 9. ಸಾಮತಿ ಕಥೆ, 11. ಪುರಂದರದಾಸನ ಪದ.
--------------------------------------------------------------------------------------------------------------------------
●●●
No comments:
Post a Comment