ಕಳೆದ ಭಾನುವಾರ ಅಂದರೆ, ಪ್ರಸಕ್ತ ಸಾಲಿನ 2019ರ ಸೆಪ್ಟೆಂಬರ್ 29ರಂದು ಮುಂಜಾನೆ, ಕಥೋಲಿಕ ಕ್ರೈಸ್ತ ಧರ್ಮದ ಪರಮೋಚ್ಚಗುರು, ನಿಜದ ಅರ್ಥದಲ್ಲಿನ ಜಗದ್ಗುರು, ಆಳುವವರಾದ ಶ್ರೀಮತ್ (ಪೋಪ) ಪಾಪು ಸ್ವಾಮಿ ಫ್ರಾನ್ಸಿಸ್ ಅವರು, ತಮ್ಮ ಅಧಿಕೃತ ನಿವಾಸಸ್ಥಳ ರೋಮಾಪುರಿಯಲ್ಲಿನ, ವ್ಯಾಟಿಕನ್ ಪ್ರಧಾನ ಪ್ರದೇಶದಲ್ಲಿರುವ ಸಂತ ಪೇತ್ರರ ಚೌಕಿನಲ್ಲಿ (ಸೆಂಟ್ ಪೀಟರ್ಸ್ ಸ್ಕವೆಯರ್), `ಅರಿವಿಗೆ ಬಾರದ ಸಮ್ಮನಸ್ಸುಗಳು' (ದೇವದೂತರು) (ಏಂಜಿಲ್ಸ್ ಅನವೆಯರ್) ಹೆಸರಿನ ಕಂಚಿನ ಪ್ರತಿಮೆಗಳ ಗುಚ್ಛವನ್ನು ಅನಾವರಣಗೊಳಿಸಿದ ಪ್ರಸಂಗ, ರೋಮಾಪುರಿಯ ಇತಿಹಾಸದಲ್ಲಿ ಒಂದು ಹೊಸ ದಾಖಲೆಗೆ ಕಾರಣವಾಯಿತು.
ರಾಜಕೀಯ ಮತ್ತು ಧರ್ಮದ ದೆಸೆಯಿಂದ ಕಷ್ಟಕೋಟಲೆಗಳನ್ನು ಅನುಭವಿಸಿ ದೇಶಾಂತರವಾಸಿಗಳಾಗಿ ತಮ್ಮ ತಾಯ ನೆಲವನ್ನು ಬಿಟ್ಟು, ಸುರಕ್ಷಿತ ಆಶ್ರಯ ತಾಣಗಳನ್ನು ಅರಸಿಕೊಂಡು ಓಡಿ ಬರುವವರಿಗೆ ಸಾಂತ್ವನ ಹೇಳುವ ಉದ್ದೇಶದ `ವಿಶ್ವ ವಲಸಿಗರು ಮತ್ತು ಸಂತ್ರಸ್ತರ ದಿನ'ದ 105ನೇ ಸಾಲಿನ ದಿನದ ಸ್ಮರಣೆಯಲ್ಲಿ`ವಿಶೇಷ ಕರ್ತರ ಭೋಜನ'ದ (ಸ್ಪೇಷಲ್ ಮಾಸ್) ಪವಿತ್ರ ಪಾಡು ಪೂಜೆಯ ನಂತರ ವಲಸಿಗರ ಸ್ಮಾರಕಾರ್ಥವಾಗಿ ಸಿದ್ಧಪಡಿಸಲಾದ ಅಪೂರ್ವ ಕಲಾಕೃತಿ `ಅರಿವಿಗೆ ಬಾರದ ಸಮ್ಮನಸ್ಸುಗಳು' ಹೆಸರಿನ ಕಂಚಿನ ಪ್ರತಿಮೆಗಳ ಗುಚ್ಛವನ್ನು - ಶ್ರೀಮತ್‌ಪಾಪು ಸ್ವಾಮಿ ಫ್ರಾನ್ಸಿಸ್‌ಅವರು ಅನಾವರಣ ಮಾಡಿದ್ದನ್ನು ನೋಡಿದ ಇಡೀ ವಿಶ್ವವೇ ಆದರದಿಂದ ತಲೆದೂಗಿದ್ದಂತೂ ಹೌದು.
ಪವಿತ್ರ ಶ್ರೀಗ್ರಂಥ `ಪವಿತ್ರ ಬೈಬಲ್'ನ ಹೊಸ ಒಡಂಬಡಿಕೆಯಲ್ಲಿನ `ಹಿಬ್ರಿಯರಿಗೆ ಬರೆದ ಪತ್ರ'ದಲ್ಲಿನ ಹದಿಮೂರನೇ ಅಧ್ಯಾಯದ ಮೊದಲಿನ ಸಾಲುಗಳು ಈ ಅಪೂರ್ವಕಲಾಕೃತಿಗೆ ಪ್ರೇರಣೆಯಾಗಿ ನಿಂತಿವೆ.
ಆ ಸಾಲುಗಳು ಇಂತಿವೆ: `ಸೋದರ ಪ್ರೀತಿಯಲ್ಲಿ ನೆಲೆಯಾಗಿ ನಿಲ್ಲಿರಿ. ಅತಿಥಿ ಸತ್ಕಾರ ಮಾಡುವುದನ್ನು ಮರೆಯದಿರಿ. ಅದನ್ನು ಮಾಡುವಾಗ ಅರಿಯದೇ ಕೆಲವರು ದೇವದೂತರನ್ನೇ ಉಪಚರಿಸಿದ್ದಾರೆ. ಸೆರೆಯಲ್ಲಿರುವವರನ್ನು ಸ್ಮರಿಸಿಕೊಳ್ಳಿ, ಅವರ ಸಂಗಡ ನೀವೂ ಸೆರೆಯಲ್ಲಿರುವಂತೆ ಭಾವಿಸಿಕೊಳ್ಳಿ, ಅನ್ಯಾಯಕ್ಕೆ ಒಳಗಾಗುವವರನ್ನು ಜ್ಞಾಪಕದಲ್ಲಿಟ್ಟುಕೊಳ್ಳಿ, ಅನ್ಯಾಯಕ್ಕೆ ಒಳಗಾಗಬಲ್ಲ ದೇಹವೊಂದು ನಿಮಗೂ ಸಹ ಇದೆಯಲ್ಲವೇ?'
ಈ ಅಪೂರ್ವ ಕಲಾಕೃತಿಯನ್ನು ಅನಾವರಣ ಮಾಡಿದ ಶ್ರೀಮತ್ ಪಾಪು ಸ್ವಾಮಿ ಫ್ರಾನ್ಸಿಸ್‌ಅವರು, ತಮ್ಮ ಆಶೀರ್ವಚನದಲ್ಲಿ `ಸಂತ ಪೇತ್ರರ ಚೌಕಿನಲ್ಲಿ ಸ್ಥಾಪನೆಗೊಂಡಿರುವ ಈ ಕಲಾಕೃತಿ, ಅತಿಥಿ ಸತ್ಕಾರದ ಧರ್ಮಪ್ರಚಾರದ ದೊಡ್ಡ ಸವಾಲನ್ನು ಸದಾ ಸ್ಮರಣೆಗೆ ತರುತ್ತದೆ' ಎಂದು ಹೇಳಿದರು.
ಸ್ವಾಗತ, ರಕ್ಷಣೆ, ಬೆಂಬಲ ಮತ್ತು ಸಮನ್ವಯತೆ:
‘ವಿಶ್ವದಾದ್ಯಂತ ಯುದ್ಧಗಳ ದೆಸೆಯಿಂದ, ಅನ್ಯಾಯ ಅನಾಚಾರಗಳಿಂದ, ಆರ್ಥಿಕ ಮತ್ತು ಸಾಮಾಜಿಕ ತರತಮಗಳಿಂದ ಬಸವಳಿದ ಅಮಾಯಕ ಜನ, ತಮ್ಮದಲ್ಲದ ತಪ್ಪಿಗಾಗಿ ಅದಕ್ಕಾಗಿ ಬೆಲೆ ತೆರಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಇಂಥ ದೇಶಾಂತರ ವಾಸಿಗಳೊಂದಿಗೆ ವಿಶ್ವವ್ಯಾಪಿ ಕಥೋಲಿಕ ಕ್ರೈಸ್ತ ಧರ್ಮಸಭೆ ಮತ್ತು ವಿಶ್ವಾಸಿಗಳು ನಿಲ್ಲಬೇಕಾಗಿದೆ' ಎಂದು ಅವರು ಪ್ರತಿಪಾದಿಸಿದರು.
`ಸ್ವಾಗತ, ರಕ್ಷಣೆ, ಬೆಂಬಲ ಮತ್ತು ಸಮನ್ವಯತೆ ಎಂಬ ನಾಲ್ಕು ಪದಗಳು ಈಗ ನಮಗೆ ದಾರಿದೀಪ. ಅವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಕಲ ಮಾನವರ ಉನ್ನತಿಗಾಗಿ, ಏಳಿಗಾಗಿ ನಾವು ಸಮನ್ವಯತೆಯನ್ನು ಸಾಧಿಸಬೇಕಿದೆ' ಎಂದು ಶ್ರೀಮತ್ ಪಾಪುಸ್ವಾಮಿ ಫ್ರಾನ್ಸಿಸ್‌ಅವರು ಕರೆ ನೀಡಿದ್ದಾರೆ.
ವಿಶೇಷ ಬಲಿಪೂಜೆ - ಪಾಡು ಪೂಜೆಯ ನಂತರ, ಸಂತ ಪೇತ್ರರ ಚೌಕಿನಲ್ಲಿ ನಡೆದ ಈ ಕಾರ್‍ಯಕ್ರಮದಲ್ಲಿ ಸಂತ್ರಸ್ತ ವಲಸಿಗರೂ ಸೇರಿದಂತೆ ಸಹಸ್ರಾರು ಜನರು ಭಾಗವಹಿಸಿದ್ದರು. ಗಂಟೆಗಳ ನಿನಾದದ ನಡುವೆ, ವಿವಿಧ ಭಾಷಿಕ ಮತ್ತು ಸಮುದಾಯಗಳಿಗೆ ಸೇರಿದ ಹಾಡುತಂಡದ ಸದಸ್ಯರ ಮಂಗಳ ಹಾಡಿನ ಮಧ್ಯೆ ಈ ಅಪರೂಪದ ಕಲಾಕೃತಿ `ಅರಿವಿಗೆ ಬಾರದ ಸಮ್ಮನಸ್ಸುಗಳು' ಅನಾವರಣಗೊಂಡ ಸಂದರ್ಭದಲ್ಲಿ, ಸಾವಿರಾರು ಸಂಖ್ಯೆಯಲ್ಲಿ ಸಂತ ಪೇತ್ರರ ಚೌಕಿನಲ್ಲಿ ನೆರೆದಿದ್ದ ಜನರು, ಈ ಅಪರೂಪದ ಐತಿಹಾಸಿಕ ಘಟನೆಗೆ ಸಾಕ್ಷಿಯಾದರು.
ಮಾನವೀಯತೆಗೆ ಸಂಚಕಾರ:
ಇಪ್ಪತ್ತೊಂದನೇ ಶತಮಾನ ಮಾನವನ ನಾಗರಿಕತೆಯ ಉತ್ತಂಗದಲ್ಲಿರುವ ಕಾಲ ಎನ್ನಲಾಗುವ ಈ ಸಮಯದಲ್ಲಿ ಸುರಕ್ಷಿತ ಆಶ್ರಯತಾಣ ಅರಸಿಕೊಂಡು ಬರುವ ವಲಸಿಗರನ್ನು ತಮ್ಮ ನೆಲಕ್ಕೆ ಕಾಲಿಡದಂತೆ ಮಾಡಲು ದೇಶಗಳು ತಮ್ಮ ಗಡಿಗಳಲ್ಲಿ ಬೇಲಿಗಳನ್ನು, ತಪ್ಪಿದರೆ ಎತ್ತರದ ಗಡಿಗೋಡೆಗಳನ್ನು ಕಟ್ಟಲು ಮುಂದಾಗುತ್ತಿರುವುದು, ಮಾನವೀಯ ಮೌಲ್ಯಗಳನ್ನು ಸಂದೂಕಗಳಲ್ಲಿ ಹಿಡಿದಿಟ್ಟು ಬೀಗ ಜಡಿದಂತಾಗಿದೆ.
ಅತ್ತ, ಮಧ್ಯ ಅಮೆರಿಕದ ವಲಸಿಗರನ್ನು ತಡೆಯಲು, ಉತ್ತರ ಅಮೆರಿಕ ಸಂಸ್ಥಾನಗಳ ಒಕ್ಕೂಟವು ದಕ್ಷಿಣದ ತನ್ನ ಗಡಿಯಲ್ಲಿ ಗೋಡೆಯ ನಿರ್ಮಾಣದಲ್ಲಿ ತೊಡಗಿದೆ. ಇತ್ತ ಏಷ್ಯ ಖಂಡದ ಮೈಯನ್ಮಾರ (ಹಿಂದಿನ ಬರ್ಮಾ) ದೇಶದಲ್ಲಿ ಅಲ್ಪಸಂಖ್ಯಾತ ರೊಹಿಂಗ್ಯಾ ಸಮುದಾಯದವರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಕೆಲವು ಅರಬ ರಾಷ್ಟ್ರಗಳಲ್ಲಿನ ಭಯೋತ್ಪಾದಕರ ಹುಚ್ಚಾಟಗಳ ಪರಿಣಾಮದ ಅನಿಶ್ಚಿತತೆಯ ಕಾರಣ ಅಮಾಯಕರು, ತಮ್ಮ ದೇಶ ತೊರೆದು ದೇಶಾಂತರ ಹೋಗುತ್ತಿದ್ದಾರೆ. ವಲಸಿಗರ ಅಂತರ್ರಾಷ್ಟ್ರೀಯ ಸಂಸ್ಥೆಯ ಅಂದಾಜಿನಂತೆ ಕಳೆದ ವರ್ಷ ವಿಶ್ವದಾದ್ಯಂತ ಸುಮಾರು ಎರಡು ಸಾವಿರದ ಮುನ್ನೂರು ಜನ ಅಮಾಯಕ ವಲಸಿಗರು ಜೀವ ಕಳೆದುಕೊಂಡಿದ್ದಾರೆ.
ನಿಜದ ಅರ್ಥದಲ್ಲಿನ ಜಗದ್ಗುರು, ಆಳುವವರಾದ ಶ್ರೀಮತ್ (ಪೋಪ) ಪಾಪುಸ್ವಾಮಿ ಫ್ರಾನ್ಸಿಸ್‌ಅವರು, 2013ರಲ್ಲಿ ಪಾಪುಸ್ವಾಮಿ ಪಟ್ಟಕ್ಕೆ ಚುನಾಯಿತರಾದ ದಿನದಿಂದಲೂ, ವಲಸಿಗರ ಪರವಾಗಿ ವಾದಿಸಿ, ಅವರು ಓಡಿಹೋಗಿ ಸೇರಿರುವ ಆಯಾ ದೇಶಗಳ ಜನ ಮುಕ್ತ ಮನಸ್ಸಿನಿಂದ ಅವರನ್ನು ಸ್ವಾಗತಿಸಿ ತಮ್ಮವರೆಂದು ಒಪ್ಪಿಕೊಳ್ಳುವಂತೆ ಅಲ್ಲಲ್ಲಿನ ದೇಶವಾಸಿಗಳ, ನಾಯಕರ ಮನವೊಲಿಸಲು ಶ್ರಮಿಸುತ್ತಿದ್ದಾರೆ.
ಇಂದಿನ ವಿಪರೀತ ವೈಯಕ್ತಿಕ ಆದ್ಯತೆಗಳು, ಬಳಸಿ ಬಿಸಾಕುವ ಮನೋಭಾವವನ್ನು, ಈ ಜಾಗತೀಕರಣವೆಂಬ ಪಡೆಂಭೂತವೇ ರೂಢಿಸುತ್ತಿರುವುದರ ಬಗೆಗೆ 2015ರಲ್ಲೇ ಶ್ರೀಮತ್ ಪಾಪುಸ್ವಾಮಿ ಫ್ರಾನ್ಸಿಸ್‌ಅವರು ದನಿ ಎತ್ತಿದ್ದರು. ಆಶ್ರಯ ಅರಸಿ ಬಂದವರಿಗೆ ಆಶ್ರಯ ನೀಡಿ ಎಂದು ಕರೆಕೊಟ್ಟಿದ್ದರು.
ಆಫ್ರಿಕಾ ಖಂಡದಲ್ಲಿನ ಕೆಲವು ದೇಶಗಳಲ್ಲಿ ಭುಗಿಲೆದ್ದ ರಾಷ್ಟ್ರೀಯವಾದಿಗಳ ಹುಚ್ಚಾಟಗಳಿಂದಾಗಿ ಆ ವರ್ಷ ಸಹಸ್ರಾರು ಸಂಖ್ಯೆಯಲ್ಲಿ ವಲಸಿಗರು ಯುರೋಪಿನ ವಿವಿಧ ದೇಶಗಳಲ್ಲಿ ನುಗ್ಗಿದ್ದರು.
ನಾಲ್ಕನೂರು ವರ್ಷದ ನಂತರದ ದಾಖಲೆ:
ವ್ಯಾಟಿಕನ್‍ನ ಸಂತ ಪೇತ್ರರ ಚೌಕಿನಲ್ಲಿ ಅನಾವರಣಗೊಳಿಸಿರುವ `ಅರಿವಿಗೆ ಬಾರದ ಸಮ್ಮನಸ್ಸುಗಳು' ಕಂಚಿನ ಪ್ರತಿಮೆಗಳ ಗುಚ್ಛದ ಕಲಾಕೃತಿಯನ್ನು ನಿರ್ಮಸಿದ ಶಿಲ್ಪಿ - ಕಲಾಕಾರನ ಹೆಸರು ತಿಮೋತಿ. ಪಿ. ಸ್ಮಾಲ್ಝ್. ಈತ ಕೆನಡಾ ದೇಶದ ಪುತ್ಥಳಿಗಳನ್ನು ನಿರ್ಮಿಸುವ ಪ್ರಸಿದ್ಧ ಕಲಾಕಾರ. ನಾಲ್ಕುನೂರು ವರ್ಷಗಳ ನಂತರ, ಮೊದಲ ಬಾರಿಗೆ ಭಾರಿ ಗಾತ್ರದ ಕಂಚಿನ ಕಲಾಕೃತಿಯೊಂದು ಸಂತ ಪೇತ್ರರ ಚೌಕಿನಲ್ಲಿ ಅನಾವರಣಗೊಂಡಿದ್ದು ಒಂದು ಪ್ರಮುಖ ದಾಖಲೆಯಾಗಿದೆ. ಅವನ ಈ ಕಲಾಕೃತಿ ಎಷ್ಟು ಕಾಲ ಈ ಸಂತ ಪೇತ್ರರ ಚೌಕಿನಲ್ಲಿ ಇರಬಹುದು ಎಂಬುದನ್ನು ಕಾಲವೇ ನಿರ್ಧರಿಸಲಿದೆ.
ಶ್ರೀಮತ್ (ಪೋಪ) ಪಾಪು ಸ್ವಾಮಿ ಫ್ರಾನ್ಸಿಸ್‌ಅವರ ಆಶಯದಂತೆ, ವ್ಯಾಟಿಕನ್ ನಲ್ಲಿರುವ ವಲಸಿಗರ ಮತ್ತು ಸಂತ್ರಸ್ತರ ಕಚೇರಿಯ ಉಸ್ತುವಾರಿ ವಹಿಸಿದ್ದ ಕಾರ್ಡಿನಲ್ ಮೈಕಲ್‌ಝರ್ನಿ, ಅವರು ಈ ಕಂಚಿನ ಕೃತಿಯ ನಿರ್ಮಾಣದ ಜವಾಬ್ದಾರಿಯನ್ನು ತಿಮೋತಿ ಅವರಿಗೆ ಒಪ್ಪಿಸಿದ್ದರು.
ಒಟ್ಟು ನೂರಾನಲ್ವತ್ತು ಜನ ವಲಸಿಗರು:
ಸುಮಾರು ಮೂರೂವರೆ ಟನ್ ಭಾರದ, ಇಪ್ಪತ್ತು ಅಡಿ ಎತ್ತರದ ಈ ಕಂಚಿನ ಶಿಲ್ಪದ ಪ್ರತಿಮೆಗಳ ಗುಚ್ಛದಲ್ಲಿ, ವಿವಿಧ ಸಂಸ್ಕೃತಿ, ಕಾಲಘಟ್ಟಗಳನ್ನು, ದೇಶಗಳನ್ನು ಪ್ರತಿನಿಧಿಸುವ ಒಟ್ಟು ನೂರಾ ನಲವತ್ತು ವಲಸಿಗರ ನಿಂತ ನಿಲುವಿನ ಪ್ರತಿಮೆಗಳನ್ನು ದೋಣಿಯೊಂದರಲ್ಲಿ ಕಡೆದು ನಿಲ್ಲಿಸಲಾಗಿದೆ.
ಅವುಗಳಲ್ಲಿ ನಾಝಿ ಜನರಿಂದ ಅಪಖ್ಯಾತಿ ಹೊಂದಿದ ಜರ್ಮನಿಯಿಂದ ಪಲಾಯನಗೈದ ಯೆಹೂದಿಗಳಿಂದ ಹಿಡಿದು ಇಂದಿನ ಯುದ್ಧಗಳು ಹಾಗೂ ಬರಗಾಲಗಳಿಂದ ಬಸವಳಿದ ಸಿರಿಯ ಮತ್ತು ಆಫ್ರಿಕಾ ದೇಶಗಳಿಂದ ಬಂದ, ಆತಂಕದಲ್ಲಿರುವ, ದುಃಖದಲ್ಲಿರುವ, ಆಶಾ ಭಾವನೆಯ ಮುಖ ಹೊತ್ತ, ಕೊನೆಗೂ ಸುರಕ್ಷಿತ ತಾಣ ಮುಟ್ಟಿದ ಮುಖಭಾವದ ವಲಸಿಗರನ್ನು ಈ ಕಲಾಕೃತಿಯಲ್ಲಿ ಕಾಣಬಹುದಾಗಿದೆ.
ಸಂತ ಪೇತ್ರರ ಮಹಾದೇವಾಲಯ (ಬೆಸಿಲಿಕಾ)ದ ಎದುರಿಗಿನ, ಆಸಕ್ತರನ್ನು ಎರಡೂ ಅಂಗೈಗಳನ್ನು ತೆರೆದು ಬರಮಾಡಿಕೊಳ್ಳುವ ಭಾವದಲ್ಲಿರುವ, ಅದೇ ಸಂತ ಪೇತ್ರರ ಚೌಕಿನ ಎರಡೂ ಬದಿಯಲ್ಲಿನ ಪ್ರಕಾರದಲ್ಲಿನ ಕಂಬಗಳ ಸಂಖ್ಯೆ ನೂರಾ ನಲವತ್ತು. ಅದನ್ನು ಆಧರಿಸಿಯೇ ಈ ಕಲಾಕೃತಿಯಲ್ಲಿ ಒಟ್ಟು ನೂರಾ ನಲವತ್ತು ಜನರನ್ನು ಕಡೆಯಲಾಗಿದೆ.
ಕಲಾವಿದ ತಿಮೋತಿ, ಯಾವುದೇ ಕಲಾಕೃತಿಯನ್ನು ನಿರ್ಮಿಸಲಿ, ಅದನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸುವ ಮೊದಲು, ಅದರ ಚಿಕ್ಕಗಾತ್ರದ ಕಲಾಕೃತಿಯ ಪ್ರತಿಕೃತಿ ನಿರ್ಮಿಸುವುದು ಅವನ ಜಾಯಮಾನ. ಅದರಂತೆ ಈ ಬಾರಿ ಐದು ಅಡಿ ಎತ್ತರದ `ಅರಿವಿಗೆ ಬಾರದ ಸಮ್ಮನಸ್ಸುಗಳು' ಕೃತಿಯನ್ನು ನಿರ್ಮಿಸಿದ್ದಾನೆ. ಅದೂ ಇನ್ನೊಂದೆಡೆ ಪ್ರದರ್ಶನಗೊಳ್ಳುತ್ತಿದೆ.
ಪ್ರಧಾನ ದೇವದೂತನ ಉಪಸ್ಥಿತಿ ಕಾಕತಾಳೀಯ
ಸಂತ ಪೇತ್ರರ ಮಹಾದೇವಾಲಯ (ಬೆಸಿಲಿಕಾ)ದ ಎದುರಿಗಿನ, ಸಂತ ಪೇತ್ರರ ಚೌಕಿನಲ್ಲಿ ಅಳವಡಿಸಲಾಗಿರುವ ಈ ಅಪರೂಪದ ಕಂಚಿನ ಕಲಾಕೃತಿ (`ಅರಿವಿಗೆ ಬಾರದ ಸಮ್ಮನಸ್ಸುಗಳು') ಮಧ್ಯದಲ್ಲಿ ಪ್ರಧಾನ ಸಮ್ಮನಸ್ಸು ಸಂತ ಮಿಖೇಲಪ್ಪಅವರ ಸ್ವರೂಪವೂ ಇದೆ.
ಈ `ಅರಿವಿಗೆ ಬಾರದ ಸಮ್ಮನಸ್ಸುಗಳು' ಕಲಾಕೃತಿ ಸಂತ ಪೇತ್ರರ ಚೌಕಿನಲ್ಲಿ ಸ್ಥಾಪಿತಗೊಂಡು ಅನಾವರಣಗೊಂಡಿದ್ದು ಸಾಮಾನ್ಯ ಕಾಲದ ಇಪ್ಪತ್ತಾರನೇ ಭಾನುವಾರ. ಅದು, ಪ್ರಧಾನ ದೇವದೂತ ಸಂತ ಮಿಖೇಲಪ್ಪರ ಹಬ್ಬದ ದಿನವೂ ಹೌದು.
ಪ್ರಸಕ್ತ ಸಾಲಿನಲ್ಲಿ ಭಾನುವಾರ ಬಂದ ಸೆಪ್ಟೆಂಬರ್ 29 (29. 9. 2019). ಪ್ರಧಾನ ದೇವದೂತರುಗಳಾದ ಸಂತ ಮಿಖೇಲಪ್ಪ, ಗಬ್ರಿಯೇಲಪ್ಪ ಮತ್ತು ರಫಾಯೇಲಪ್ಪರ ಸ್ಮರಣೆಯ ಹಬ್ಬದ ದಿನ. ಆ ದಿನವೇ ಪಾಪು ಸ್ವಾಮಿಗಳಿಂದ ಸಾರ್ವಜನಿಕ ವೀಕ್ಷಣೆಗೆ ಅನಾವರಣಗೊಂಡ `ಅರಿವಿಗೆ ಬಾರದ ಸಮ್ಮನಸ್ಸುಗಳು' ಕಲಾಕೃತಿಯಲ್ಲಿನ ನೂರಾ ನಲವತ್ತು ವಲಸೆ ವ್ಯಕ್ತಿಗಳ ಗೊಂಬೆಗಳ ಮಧ್ಯ ಭಾಗದಲ್ಲಿ ಇರುವ ಸಂತ ಮಿಖೇಲಪ್ಪರ ಸ್ವರೂಪವು ವಲಸಿಗರಲ್ಲಿ ಭರವಸೆಯ ಭಾವ ಮೂಡಿಸುವಂತಿದೆ.
*******************