...ಮುಂದೆ ದಲಿತ ಸಾಹಿತ್ಯಕ್ಕೆ ಅವರ ಚರ್ಚೆ ಬರುತ್ತದೆ. ದಲಿತರು ಬರೆದರೂ ಸ್ವಲ್ಪ ಕಾಲ ಪ್ರತಿಭಟನೆಗಾಗಿ ಬರೆದು ಆನಂತರ ನಮ್ಮಂತೆಯೇ ಬರೆದಾರು ಎಂಬ ತೀರ್ಮಾನಕ್ಕೆ ಬರುತ್ತಾರೆ. ಇದು ಒಳ್ಳೆಯದೋ ಕೆಟ್ಟದೋ ನನಗೆ ಗೊತ್ತಾಗುತ್ತಿಲ್ಲ ಮತ್ತು ಇನ್ನೊಂದು ವಿಚಾರ- ಬರಹಗಾರರ ಒಕ್ಕೂಟದ ಬಗ್ಗೆ ಯಾರೋ ಈ ಪ್ರಶ್ನೆ ಕೇಳಿದರು- ಒಕ್ಕಲಿಗರು, ಲಿಂಗಾಯಿತರೂ ದಲಿತರನ್ನು ಶೋಷಣೆ ಮಾಡುತ್ತಾ ಇರುವರು, ಇವರೊಟ್ಟಿಗೆ ಸಾಮರಸ್ಯ ಹೆಂಗೆ ಸಾಧ್ಯ? ಅಂತ. ಇಲ್ಲಿ ಶೋಷಣೆ ಸ್ಥೂಲವಾಗಿ ಎರಡು ರೀತಿಯಲ್ಲಿ ಇದೆ. ಒಂದು ಕಾಣೋದು. ಇನ್ನೊಂದು ಕಾಣ್ದೆ ಇರೋದು. ಪ್ರತ್ಯಕ್ಷ ತೆರಿಗೆ, ಪರೋಕ್ಷ ತೆರಿಗೆ ಅಂತಾರಲ್ಲ ಹಂಗೆ. ಇಲ್ಲಿ ಬ್ರಾಹ್ಮಣರು, ಶೂದ್ರರು, ದಲಿತರು ಎಂದು ವಿಂಗಡಿಸಿದರೆ ಅವು ಬುದ್ಧಿ, ಹೃದಯ, ಹೊಟ್ಟೆಯ ಥರ, ರಫ್ ಆಗಿ ಇಲ್ಲಿನ ಸಂಬಂಧ ಎಂದುಕೊಳ್ಳಬಹುದೇನೋ. ಆದರೆ ಬ್ರಾಹ್ಮಣರದು ಕೇವಲ ಒಂದು ಜಾತಿಯಾಗದೆ ಬ್ರಾಹ್ಮಣರೂ ಕೂಡ ಹೇಸುವಂಥ ತಾರತಮ್ಯವನ್ನೇ ಮೌಲ್ಯವಾಗಿಸಿದ ಒಂದು ನೀತಿಯೂ ಆಗಿಬಿಟ್ಟಿದೆ- ಹೀಗೆಂದು ಅವರಿಗೆ ಹೇಳಿದ ನೆನಪು.
ಕೊನೆಗೆ ನನ್ನ ಮಾತನ್ನು- ಊರಾಚೆ ಪರಕೀಯವಾಗಿ ಬಿದ್ದು ನರಳುತ್ತಿರುವ ಅಸ್ಪೃಶ್ಯತೆಯ ಆಕ್ರಂದನ, ಕೋಪ, ತಾಪ ಚೀರುತ್ತಿರುವುದು,ಅದು ಪ್ರೀತಿಗಾಗಿ,ಸಮಾನತೆಗಾಗಿ, ಮಾನವತೆಯ ಸ್ಪರ್ಶಕ್ಕಾಗಿ ಎಂದು ಹೇಳಿ ಮುಗಿಸುತ್ತೇನೆ.
- ದ್ಯಾವನೂರ ಮಹಾದೇವ
ಎದೆಗೆ ಬಿದ್ದ ಅಕ್ಷರ / 256
No comments:
Post a Comment