Tuesday, 14 May 2019

ಚಿಕ್ಕರಸಿನಕೆರೆಯ ಜನಪದರ ದೈವ ರಾಜೇಂದ್ರಸ್ವಾಮಿ


ಎಫ್. ಎಂ. ನಂದಗಾವ್ ಎಂ.ಎ. 

``ನಮಗೆಲ್ಲಾ ಒಳ್ಳೇದೆ ಆಗಿದೆ. ಎರಡು ಹೆಣ್ಮಕ್ಕಳು ನನಗೆ. ಮಗಾ ಇಲ್ಲ ಮಗಾ ಇಲ್ಲ ಅನ್ನೋರು. ಈ ಸ್ವಾಮಿನ್ನ ಬೇಡಿಕೊಂಡ ಮೇಲೆ ನನಗೆ ಗಂಡುಮಗ ಹುಟ್ಟಿದ್ದು. ನನ್ನ ಮಗ ಪಟ್ಟಾಭಿರಾಮ ಹುಟ್ಟಿದ್ದು ಕ್ರಿಸ್ಮಸ್ ದಿನವೇ. ಅವನಿಗೀಗ ಇಪ್ಪತ್ತು ವರ್ಷ''. 

``ದೀಪಾವಳಿ ಆನಂತರದ ಕಾರ್ತಿಕ ಮಾಸದಲ್ಲಿ, ನಾವುಗಳೂ ಸೇರಿದಂಗೆ ಇಲ್ಲಿನ ಪ್ರತಿ ಮನೆಯವರು ಸಕ್ಕರೆ, ಕಡಲೆ, ಯಾಲಕ್ಕಿ, ಕೊಬ್ಬರಿ ಬೆರಸಿ ಈ ಸ್ವಾಮಿಗೆ ಎಡೆ ಹಿಡಿದು ಪೂಜೆ ಮಾಡ್ತಾರೆ. ಕೆಲವರು ಪುರಿ, ಬ್ರೆಡ್ ಮಾಡ್ತಾರೆ. ಹರಕೆ ಹೊತ್ತವರು ವರ್ಷಪೂರ್ತಿ ಬರ್ತಾನೆ ಇರ್ತಾರೆ''. 

``ದೂರದ ಊರುಗಳಿಂದ ಭಕ್ತರು ಬರ್ತಾರೆ. ಇಲ್ಲೇ ಅಡುಗೆ ಮಾಡವ್ರು. ಪಾತ್ರೆ ಕೊಡ್ತಿದ್ವಿ. ನಮ್ಮಲ್ಲೇ ಮಲಗೋರು. ಒಮ್ಮೆ ಮಹಾರಾಷ್ಟ್ರದಿಂದ ಒಂದು ಕುಟುಂಬ ಬಂದಿತ್ತು. ನಮ್ಮ ಮನೆಯಲ್ಲೇ ಇದ್ದದ್ದು. ನಾವೇ ಅವರಿಗೆ ಅನುಕೂಲ ಮಾಡಿಕೊಟ್ಟದ್ದು. ಸ್ವಾಮಿಗೆ ಊರಲ್ಲಿ ಒಳ್ಳೆ ಹೆಸರಿದೆ. ಸ್ವಾಮಿ ಸಮಾಧಿ ಪಕ್ಕದ ಜಾಗವನ್ನ ನಮ್ಮ ಮೈದುನ ಬಿಟ್ಟುಕೊಟ್ಟ. ನಾವೂ ಈ ನಮ್ಮನೇನ ಸಮಾಧಿಗೆ ಬಿಟ್ಟುಕೊಟ್ಟು ಹೋಗ್ತೀವಿ. ರಸ್ತೆ ಪಕ್ಕದಾಗೆ ನಮಗೆ ಸುಮಾರು ಜಮೀನಿದೆ. ಅಲ್ಲೇ ಮನೆ ಕಟ್ಟಿಕೊಳ್ತೀವಿ'' 

ಇವು ಚಿಕ್ಕರಸಿನಕೆರೆ ಪಟೇಲ್ ಸಿದ್ದೇಗೌಡರ ಸೊಸೆ, ಸಿದ್ದರಾಜು ಅವರ ಪತ್ನಿ ಸುಧಾ ಅವರ ಕೃತಜ್ಞತಾಭಾವದ ಮಾತುಗಳು. ಅವರ ಮನೆ, ಸ್ವಾಮಿ ಸಮಾಧಿ ಎದುರಿನ ರಸ್ತೆಯ ಪಕ್ಕದಲ್ಲೇ ಇದೆ. ಮಗನ ಹುಟ್ಟುಹಬ್ಬ ಆಚರಿಸುವ ದಿನ ಮನೆಯಲ್ಲಿ ಕ್ರಿಸ್ಮಸ್ ಸಂಭ್ರಮವೂ ನುಸುಳಿರುತ್ತದೆ. 

``ಈ ಸ್ವಾಮಿ, ಅಮಾಸೆ ಹುಣ್ಣಿಮೆ ತಾವು ಕುದುರೆ ಮೇಲೆ ಸವಾರಿ ಮಾಡ್ತಿದ್ದುದು ಕಾಣಿಸ್ತಿತ್ತು ನಮ್ಮ ತಂದೆಗೆ, ನನಗೂ ಕೆಲವೊಮ್ಮೆ ಹಂಗಾಗಿದೆ. ಆಗ ಏನೋ ಘಮ ಘಮ ಅಂದಂತೆ ಆಗೋದು.'' ಇದು ಚಿಕ್ಕರಸಿನಕೆರೆ ಶೆಟ್ಟರ ಬೀದಿಯ ನೀವಾಸಿ ರಮೇಶ ಅವರ ಅನುಭಾವದ ಮಾತುಗಳು. 

``ಸ್ವಾಮಿ ಸಮಾಧಿಗೆ ಮೇಣಬತ್ತಿ ಹಚ್ಚತೀವಿ. ಕಾರ್ತಿಕ ಮಾಸದಲ್ಲಿ ಸ್ವಾಮಿ ಸಮಾಧಿಗೆ ಬೆಲ್ಲ, ಕೊಬ್ಬರಿ, ಸಕ್ರೆ ಎಡೆ ಮಾಡ್ತೀವಿ. ಕಿರಿದಾದ ಕೊಳ ಇತ್ತು. ಅಲ್ಲೇ ಮುಡಿಕೊಟ್ಟು ಸ್ನಾನ ಮಾಡ್ತಿದ್ದರು. ಕೊಳದಲ್ಲಿ ತುಂಬಕೊಳ್ತು. ಈಗ ಅದನ್ನ ಮುಚ್ಚಿಸಿದ್ದಾರೆ'' ಎನ್ನುವ ಅವರು, ತಮ್ಮ, ತಮ್ಮೂರವರ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಸ್ವಾಮಿಯ ಬಗೆಗೆ ಹೊಂದಿರುವ ಆದರವನ್ನು ಹಂಚಿಕೊಂಡರು. 

ಶ್ರೀ ರಾಜೇಂದ್ರಸ್ವಾಮಿ ಮಠ: 

ಇಲ್ಲಿ ಸ್ವಾಮಿ ಅಂದರೆ, ಶ್ರೀ ರಾಜೇಂದ್ರಸ್ವಾಮಿ, ಚಿಕ್ಕರಸಿನಕೆರೆ ಶ್ರೀ ರಾಜೇಂದ್ರಸ್ವಾಮಿ. ಸರ್ಕಾರದ ಕಂದಾಯ ಇಲಾಖೆಯ ದಾಖಲೆಯ ಪ್ರಕಾರ ಇದು `ಶ್ರೀ ರಾಜೇಂದ್ರಸ್ವಾಮಿ ಮಠ (ಕ್ರಿಶ್ಚಿಯನ್ ಗೋರಿ). ತೆರಿಗೆ ಪಟ್ಟಿಯಲ್ಲಿ ಈ ಸ್ವತ್ತನ್ನು 80 ಅಡಿ 6 ಇಂಚು ಅಗಲ 106 ಅಡಿ ಅಗಲ ಎಂದು ಗುರುತಿಸಲಾಗಿದೆ. ಉತ್ತರ, ದಕ್ಷಿಣ, ಮತ್ತು ಪೂರ್ವದಲ್ಲಿ ರಸ್ತೆ ಇದ್ದು ಪಶ್ಚಿಮಕ್ಕೆ ತಮ್ಮಯ್ಯನ ನಿವೇಶನವಿದೆ ಎಂದು ಚಕಬಂದಿ ಗುರುತಿಸಲಾಗಿದೆ, ಅನುಭವದಾರರ ಹೆಸರಿನ ಕಾಲಮ್ಮಿನಲ್ಲಿ ಅಡ್ಡಗೆರೆ ಎಳೆಯಲಾಗಿದೆ. ವಾರ್ಷಿಕ ತೆರಿಗೆ - ಕಾಲಮ್ಮಿನಲ್ಲಿ `ಮಾಫಿ' ಎಂದು ನಮೂದು ಮಾಡಲಾಗಿದ್ದು 1995 ಮತ್ತು 1996ರ ಕಂದಾಯ ದಾಖಲೆಯಿಂದ ತಿಳಿಯುತ್ತದೆ. ಈ ದಾಖಲೆಗೆ ಚಿಕ್ಕರಸಿನಕೆರೆ ಗ್ರಾಮ ಪಂಚಾಯ್ತಿ ಕಾರ್‍ಯದರ್ಶಿ ಸಹಿ ಮಾಡಿದ್ದಾರೆ. 

ಸರ್ಕಾರಿ ದಾಖಲೆಗಳಲ್ಲಿ ರಾಜೇಂದ್ರಸ್ವಾಮಿ ಸಮಾಧಿಯನ್ನು ಮಠ ಎಂದು ಏಕೆ ದಾಖಲಿಸಿದ್ದಾರು? ಮಂತ್ರಾಲಯದ ರಾಘವೇಂದ್ರಸ್ವಾಮಿ ಬೃಂದಾವನ (ಸಮಾಧಿ)ವನ್ನು ರಾಘವೇಂದ್ರಸ್ವಾಮಿ ಮಠ ಎಂದೇ ಕರೆಯಲಾಗುತ್ತದೆ. ಅದೇ ಜಾಯಮಾನದ ಹಿನ್ನೆಲೆಯಲ್ಲಿ ರಾಜೇಂದ್ರಸ್ವಾಮಿ ಸಮಾಧಿ ಇರುವ ಜಾಗವನ್ನು ಮಠ ಎಂದು ಕರೆದಿರುವ ಎಲ್ಲಾ ಸಾಧ್ಯತೆಗಳು ಇವೆ. ಸಮಾಧಿಯ ಕಾರಣ ಜನ ಬಳಕೆಯಲ್ಲಿ ಈ ಜಾಗವನ್ನು ಶ್ರೀ ರಾಜೇಂದ್ರಸ್ವಾಮಿ ಪುಣ್ಯಕ್ಷೇತ್ರ ಎಂದು ಕರೆಯಲಾಗುತ್ತದೆ. 

ಯಾರು ಈ ರಾಜೇಂದ್ರಸ್ವಾಮಿ? 

ದಕ್ಷಿಣ ಭಾರತದ ಪ್ರಮುಖ ನಗರ, ಧಾರ್ಮಿಕ ಕ್ಷೇತ್ರ ತಮಿಳುನಾಡಿನ ಮಧುರೆಯಲ್ಲಿ ಇದ್ದುಕೊಂಡು ಸುವಾರ್ತಾ ಪ್ರಚಾರದಲ್ಲಿ ವಂದನೀಯ ರಾಬರ್ಟ್ ಡಿ ನೋಬಿಲಿ (1606-1656) ಅವರು ತೊಡಗಿದ್ದರೆ, ಕನ್ನಡ ನಾಡಿನ ಮೈಸೂರು ಸೀಮೆಯಲ್ಲಿ ವಂದನೀಯ ಲಿಯನಾರ್ಡೊ ಚಿನ್ನಮಿ ಅವರು (1648-1676) ಸುವಾರ್ತಾ ಪ್ರಚಾರದಲ್ಲಿ ತೊಡಗಿದ್ದರು. ನೋಬಿಲಿ ಅವರನ್ನು ಮಧುರೆ ಮಿಷನ್ನಿನ ಮತ್ತು ಚಿನ್ನಮಿ ಅವರನ್ನು ಮೈಸೂರು ಮಿಷನ್ನಿನ ಸಂಸ್ಥಾಪಕರೆಂದು ಗುರುತಿಸಲಾಗುತ್ತದೆ. ಇವರಿಬ್ಬರೂ ಗೋವೆಯ ಸಂತ ಫ್ರಾನ್ಸಿಸ್ ಜೇವಿಯರ್ ಅವರಂತೆ ಯೇಸುಸಭೆಯ ಸದಸ್ಯರು. 

ಕನ್ನಡ ನಾಡಿನಲ್ಲಿನ ಯೇಸುಸಭೆಯ ಚಟುವಟಿಕೆಗಳ ವರದಿಯ ಪತ್ರಗಳನ್ನು ಆಧರಿಸಿ ಫಾದರ್ ಐ ಅಂತಪ್ಪ ಅವರು ಬರೆದಿರುವ ಮಂಡ್ಯ ಮತ್ತು ಚನ್ನಪಟ್ಟಣ- ರಾಮನಗರ ಜಿಲೆಗಳಲ್ಲಿ (1650-1754) ಕ್ರೈಸ್ತ ಧರ್ಮದ ಉಗಮ (2010,2014) ಪುಸ್ತಕದಲ್ಲಿ, ಮೈಸೂರಿನ ಕಂಠೀರವ ನರಸರಾಜ ಒಡೆಯರು (1639-1654), ಅಂದಿನ ಕಥೋಲಿಕ ಕ್ರೈಸ್ತರ ಮೈಸೂರು ಮಿಷನ್ನಿನ ನಿರ್ದೇಶಕ ಸ್ವಾಮಿ ಲಿಯನಾರ್ಡೊ ಚಿನ್ನಮಿ (1639-1659) ಅವರಿಗೆ ಗುರುಹಿರಿಯರನ್ನು ಗೌರವಿಸುವ ಅಂದಿನ ವಾಡಿಕೆಯಂತೆ 1656ರ ಭೇಟಿಯ ಸಂದರ್ಭದಲ್ಲಿ ಚಿಕ್ಕರಸಿನಕೆರೆ ಗ್ರಾಮವನ್ನು ಉಂಬಳಿಯಾಗಿ ನೀಡಿದ್ದರೆಂದು ದಾಖಲಿಸಿದ್ದಾರೆ. 

ನೋಬಿಲಿ ಮತ್ತು ಚಿನ್ನಮಿ ಅವರಂತೆಯೇ ಕಥೋಲಿಕ ಕ್ರೈಸ್ತರ ಜಗದ್ಗುರು ಪಾಪುಸ್ವಾಮಿಗಳ ನೆಲೆಯಾದ ರೋಮ್ ಪಟ್ಟಣ ದೇಶವಿರುವ, ಇಟಲಿ ನಾಡಿಗೆ ಸೇರಿದ ವಂದನೀಯ ಅಂತೋನಿಯೊ ಮರಿಯಾ ಪ್ಲಾಟೆ (1709-1719) ಯೇಸುಸಭೆಯ ಮಿಷನರಿ ಸದಸ್ಯರಾಗಿದ್ದರು. ಅವರು 1709ರಲ್ಲಿ ಮೈಸೂರು ಮಿಷನ್ನಿನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. 

ಅಂದಿನ ಪ್ರಮುಖ ಕ್ರೈಸ್ತನೆಲೆ ಚಿಕ್ಕರಸಿನಕೆರೆಯಲ್ಲಿ ನೆಲೆ ನಿಂತ ಅವರು, ನೋಬಿಲಿ ಅವರಂತೆಯೇ ಭಾರತೀಯ ಸನ್ಯಾಸಿಗಳಂತೆ, ಮಠಾಧಿಪತಿಗಳಂತೆ ಕಾವಿ ಬಟ್ಟೆ ತೊಡುತ್ತಿದ್ದರು. ಹಣೆಗೆ ಶಿಲುಬೆ ಆಕಾರದಲ್ಲಿ ವಿಭೂತಿ ಹಚ್ಚಿಕೊಳ್ಳುತ್ತಿದ್ದರು. ಕೈಯಲ್ಲಿ ಸದಾಕಾಲ ಮಾತೆ ಮರಿಯಳ ಜಪಸರ ಹಿಡಿದುಕೊಂಡಿರುತ್ತಿದ್ದರು. ಪೂಜೆ ಪುನಸ್ಕಾರಗಳೊಂದಿಗೆ ಆಧ್ಯಾತ್ಮಿಕ ಚಿಂತನೆ, ಪ್ರವಚನಗಳಲ್ಲಿ ತೊಡಗಿರುತ್ತಿದ್ದ ಅವರು ಸಾತ್ವಿಕ ಆಹಾರವೆಂದು ಕೇವಲ ಅನ್ನ, ರೊಟ್ಟಿ, ಪಲ್ಲೆ, ಮೊಸರು ಮುಂತಾದವನ್ನು ಸ್ವೀಕರಿಸುತ್ತಿದ್ದರು. ಜನಾನುರಾಗಿಯಾಗಿದ್ದ ಅವರ ನಡವಳಿಕೆ ಸಾಕಷ್ಟು ಜನರನ್ನು ಕ್ರೈಸ್ತ ಧರ್ಮದ ತೆಕ್ಕೆಗೆ ತಂದುಕೊಟ್ಟಿತ್ತು. ಅವರಂತೆಯೇ ಯೇಸುಸಭೆಯ ಸ್ವಾಮಿಗಳಾದ ಸೆರಾಫಿನೊ, ಸಿಮಾವೊ, ಬರೆಟ್ಟೊ, ದಕುನ್ನಾ ಮೊದಲಾದವರ ಶ್ರಮದಿಂದ ಚಿಕ್ಕರಸಿನಕೆರೆ ಕಥೋಲಿಕ ಕ್ರೈಸ್ತರ ಪ್ರಮುಖ ನೆಲೆಯಾಗಿತ್ತು. 

ಅವರಲ್ಲಿ ಪ್ರಮುಖರಾದ ಪ್ಲಾಟೆ ಸ್ವಾಮಿ, ಸುವಾರ್ತೆ ಸಾರಲು ಪೂರಕವಾದ ಸಹಾಯ ಪಡೆಯಲು ಆಡಳಿತಾಧಿಕಾರಿಗಳನ್ನು, ಪಾಳೆಪಟ್ಟಿನ ಅರಸರನ್ನು ಆಗಾಗ ಭೇಟಿ ಮಾಡುತ್ತಿದ್ದರು. ಸಮಯ ಸಿಕ್ಕಾಗ ಆಸ್ಥಾನಗಳಲ್ಲಿ, ಧಾರ್ಮಿಕ ಸಮ್ಮೇಳನಗಳಲ್ಲಿ ಧಾರ್ಮಿಕ ವಿಚಾರಗಳ ಚಿಂತನ ಮಂಥನಗಳನ್ನು ನಡೆಸುತ್ತಿದ್ದರು. ಒಂದೊಮ್ಮೆ ಪೆನುಕೊಂಡದ ಅರಸ ಅರಸಿಗೆ ಕ್ರೈಸ್ತ ದೀಕ್ಷಾಸ್ನಾನ ನೀಡಿದ್ದರಂತೆ. ರಾಜಗುರುವಿನಂತಾದ ಅವರ ಇಂಥ ಘನವಾದ ಚಟುವಟಿಕೆಗಳ ದೆಸೆಯಿಂದ ಅವರನ್ನು ಜನರು ಪ್ರೀತಿಯಿಂದ ಗೌರವದಿಂದ ರಾಜರ ಒಡನಾಟದ ಸ್ವಾಮಿ - ರಾಜೇಂದ್ರಸ್ವಾಮಿ ಎಂದು ಕರೆಯತೊಡಗಿದರು. ಜನಮಾನಸದ ಆ ಪ್ರೀತಿ, ಗೌರವದ ಹೆಸರು ಅವರಿಗೆ ಕಾಯಮ್ಮಾಗಿ ಅಂಟಿಕೊಂಡುಬಿಟ್ಟಿತಂತೆ. 

ಚಿಕ್ಕರಸಿನಕೆರೆಯ ಕಾಲಭೈರವ ಮತ್ತು ಬಸವಪ್ಪ 

ಈ ಚಿಕ್ಕರಸಿನಕೆರೆ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಒಂದು ಗ್ರಾಮ. ಶತಮಾನಗಳ ಹಿಂದೆ ಪ್ರಜೆಗಳನ್ನು ಮಕ್ಕಳಂತೆ ಕಾಣುತ್ತಿದ್ದ ಪಾಳೆಪಟ್ಟು ಕುಟುಂಬಕ್ಕೆ ಸೇರಿದ್ದ ಚಿಕ್ಕರಸಿ ಮತ್ತು ದೊಡ್ಡರಸಿ ಹೆಸರಿನ ಇಬ್ಬರು ಅಕ್ಕತಂಗಿಯರಿದ್ದರು. ಅಂದಿನ ಸಂಪ್ರದಾಯದಂತೆ, ಅವರಿಬ್ಬರೂ ತಲಾ ಒಂದೊಂದು ಕೆರೆಗಳನ್ನು ಕಟ್ಟಿಸಿದರು. ಚಿಕ್ಕರಸಿ ಕರೆಯ ಬಳಿಯ ಊರು ಚಿಕ್ಕರಸಿನಕೆರೆ ಎನಿಸಿಕೊಂಡರೆ, ದೊಡ್ಡರಸಿ ಕೆರೆಯ ಹತ್ತಿರದ ಊರನ್ನು ದೊಡ್ಡರಸಿನಕೆರೆ ಎಂದು ಗುರುತಿಸಲಾಯಿತಂತೆ. 

ಇಂದು ಚಿಕ್ಕರಸಿನಕೆರೆ ಅಂದರೆ, ಆ ಸೀಮೆಯ ಆಸ್ತಿಕಭಾವದ ಎಲ್ಲರಿಗೂ, ವಿಶೇಷವಾಗಿ ಚಿಕ್ಕರಸಿನಕೆರೆ ಗ್ರಾಮದ ಪ್ರಧಾನ ದೈವ ಕಾಲಭೈರವನ ಮತ್ತು ಅವನ ಅಪರಾವತಾರ ತಾಳುವ ಸ್ವಾಮಿ ಬಸವಪ್ಪನ ಸ್ಮರಣೆ ಮೂಡುತ್ತದೆ. ಅದರಂತೆಯೇ ವಿಶ್ವಾಸಿಗಳ ಪಾಲಿನ ದೈವಗಳ ಸಾಲಿನಲ್ಲಿ ಶತಮಾನಗಳ ಇತಿಹಾಸ ಪ್ರಸಿದ್ಧ ಪವಾಡ ಪುರುಷ, ಬಗೆಬಗೆಯ ವರಗಳನ್ನು ಪ್ರಾಸಾದಿಸುವ ಪಾದ್ರಿ, ಧರ್ಮಬೋಧಕ ರಾಜೇಂದ್ರಸ್ವಾಮಿ ಅವರೂ ಸೇರಿದ್ದಾರೆ. ಅಲ್ಲೇ ಸಮೀಪದ ದೊಡ್ಡರಸಿನಕೆರೆ ಊರು ಕನ್ನಡದ ಖ್ಯಾತ ನಟ ಅಂಬರೀಷನ ಹುಟ್ಟೂರು ಎಂಬುವುದು ಅಲ್ಲಿನ ನಿವಾಸಿಗಳಿಗೆ ಹೆಮ್ಮೆ ಮೂಡಿಸುತ್ತದೆ. 

ಭಾರತ ಪ್ರಧಾನವಾಗಿ ಹಳ್ಳಿಗಳ ದೇಶ. ಕೃಷಿ ಇಲ್ಲಿನ ಜನರ ಪ್ರಮುಖ ಕಾಯಕ. ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ನಿಲ್ಲುವ ಹಸು, ಎತ್ತುಗಳು ಕೃಷಿಕರ ಆದರಣೆಗೆ ಪಾತ್ರವಾಗುವ ಮೂಕ ಪ್ರಾಣಿಗಳು. ತ್ರಿಮೂರ್ತಿ ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ಒಬ್ಬನಾದ ಶಿವನ ಜತೆಯಲ್ಲಿಯೇ ಇರುವ ನಂದಿ, ಬಸವಣ್ಣ ಎಂದು ಕರೆಯಿಸಿಕೊಳ್ಳುವ ಎತ್ತು, ರೈತರಿಗೆ ಪರಮ ಪೂಜನೀಯವಾದುದು. ಆಯಾ ಊರಿನ ಶಿವ ದೇವಾಲಯಗಳ ಹೆಸರಿನಲ್ಲಿ ಎತ್ತುಗಳನ್ನು (ನಂದಿ) ಬಿಡುವುದು ಒಂದು ಸಂಪ್ರದಾಯ 

ಶಿವನ ಸಂಹಾರಿ ಗುಣಗಳನ್ನು ಆಧರಿಸಿ ಅವನನ್ನು ಅಸಿತಾಂಗ ಭೈರವ, ಸಂಹಾರ ಭೈರವ, ರುರು ಭೈರವ, ಕ್ರೋಧ ಭೈರವ, ಕಪಾಲ ಭೈರವ, ರುದ್ರ ಭೈರವ, ಉನ್ಮತ್ತ ಭೈರವ ಮತ್ತು ಕಾಲ ಭೈರವ ಎಂದು ಕರೆಯಲಾಗುತ್ತದೆ. ಚಿಕ್ಕರಸಿನಕೆರೆ ಊರಲ್ಲಿ ಮಳವಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆಯೇ ಕಾಲಭೈರವೇಶ್ವರನ ದೇವಾಲಯವಿದೆ. ಈ ದೇವರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಅಪಾರ ಭಕ್ತರನ್ನು ಹೊಂದಿದೆ. ಅದು, ಸಹಸ್ರಾರು ಕುಟುಂಬಗಳ ಮನೆದೇವರೂ ಹೌದು. ಈ ದೇವರನ್ನು ಬೋರದೇವರು ಎಂದೂ ಕರೆಯಲಾಗುತ್ತದೆ. 

ಶತಶತಮಾನಗಳ ಹಿಂದೆ, ಬರ ಬಂದು ಕೆರೆ ಕುಂಟೆಗಳು ಬರಿದಾದಾಗ ಚಿಕ್ಕರಸಿನಕೆರೆಯ ಜನ ಶಿವನಲ್ಲಿ ಪ್ರಾರ್ಥನೆ ಸಲ್ಲಿಸಿದಾಗ ಧಾರಾಕಾರವಾಗಿ ಮಳೆ ಸುರಿಯಿತು. ಮಳೆ ನೀರಿನ ಹರಿವಿನಲ್ಲಿ ವಿಗ್ರಹಗಳು ಸಾಗಿಬಂದವು. ಅವುಗಳ ಮೇಲೆ ಹುತ್ತ ಬೆಳೆಯಿತು. ಊರಲ್ಲಿನ ರುದ್ರಪ್ಪಗೌಡನ ಮನೆಯಲ್ಲಿ ಒಂದು ದಿನ ಹಾಲು ಕರೆಯಲು ಹೋದಾಗ, ಹಾಲು ಕರೆಯುತ್ತಿದ್ದ ಹಸುವೊಂದರ ಕೆಚ್ಚಲಿನಿಂದ ಹಾಲಿನ ಬದಲು ರಕ್ತ ಒಸರುತ್ತಿತ್ತು. ಆ ಹಸುವಿನ ಚಲನವಲನ ಗಮನಿಸಿದಾಗ ಅದು ಮೇಯಲು ಹೋದಾಗ ಹುತ್ತಿನ ಮೇಲೆ ಹಾಲು ಕರೆಯುತ್ತಿದ್ದುದು ಕಂಡಿತು. 

ಇನ್ನೊಂದು ಐತಿಹ್ಯದಲ್ಲಿ ಆ ಹಸು ಬ್ರಾಹ್ಮಣ ಮನೆಗೆ ಸೇರಿದ್ದೆಂದು ಹೇಳಲಾಗುತ್ತದೆ. ಊರ ಜನ ಹುತ್ತವನ್ನು ಅಗೆದು ನೋಡಿದಾಗ, ಕಾಲಭೈರವ ಮತ್ತು ನಂದಿಯ ವಿಗ್ರಹಗಳು ಲಭಿಸಿದವು. ಅವನ್ನು ಪ್ರತಿಷ್ಠಾಪಿಸಿ ದೇವಾಲಯವನ್ನು ಕಟ್ಟಲಾಯಿತು. ಈ ದೇವಾಲಯಕ್ಕೆ ಬಿಡುವ ನಂದಿಯನ್ನು ಕಾಲಭೈರವನ ಅಪರಾವತಾರ ಎಂಬುವುದು ಆಸ್ತಿಕರ ನಂಬಿಕೆ. ಅದನ್ನು ಕೇವಲ ನಂದಿ ಎನ್ನದೇ ಬಸವಪ್ಪ ಎಂದು ಗೌರವದಿಂದ ಕಾಣಲಾಗುತ್ತದೆ. 

ಬಸವಪ್ಪನ ಸನ್ನಿಧಾನ 

ಊರಲ್ಲಿ ಏನೇ ಒಳ್ಳೆಯ ಕಾರ್‍ಯಗಳು ಜರುಗಿದರೂ ಅವು ಬಸವಪ್ಪನ ಸನ್ನಿಧಾನದಲ್ಲೇ ನಡೆಯಬೇಕೆನ್ನುವುದು ಊರಲ್ಲಿನ ಅಲಿಖಿತ ಸಂಪ್ರದಾಯ. ನ್ಯಾಯ ದುರಂಧರ ಈ ಕಾಲಭೈರವ ಬಸವಪ್ಪನ ಸನ್ನಿದಿಯಲ್ಲಿ ಹಲವಾರು ಪ್ರಕರಣಗಳ ನ್ಯಾಯ ಪಂಚಾಯಿತಿ ನಡೆಸಿ ತೀರ್ಪು ನೀಡಲಾಗಿದೆ. ಅವನ ದೆಸೆಯಿಂದ ದೇವಸ್ಥಾನಗಳ ಜಮೀನಿನ ಅಕ್ರಮ ಒತ್ತುವರಿಗಳು ತೆರವುಗೊಂಡಿವೆ. ಅವನ ದರ್ಶನ ಭಾಗ್ಯದಿಂದ ಕಳ್ಳತನಗಳು ಪತ್ತೆಯಾಗಿವೆ. ಸಂತಾನಹೀನರಿಗೆ ಸಂತಾನ ಭಾಗ್ಯ ಲಭಿಸಿದೆ. ಆತ ಭಕ್ತರ ಕಷ್ಟಗಳನ್ನು ನಿವಾರಿಸುತ್ತಾನೆ. ಅವನ ಕೃಪೆಯಿಂದ ಬರಗಾಲದಲ್ಲಿ ಮಳೆಯಾಗುತ್ತದೆ ಎಂದು ಜನ ವಿಶ್ವಾಸಿಸುತ್ತಾರೆ. ಈ ಸೀಮೆಯಚಿಕ್ಕರಸಿನಕೆರೆ, ದೊಡ್ಡರಸಿನಕೆರೆ, ಕೆ.ಎಂ.ದೊಡ್ಡಿ, ಆತಗೂರು, ನಡಘಟ್ಟ, ಹೆಮ್ಮನಹಳ್ಳಿ ನಿವಾಸಿಗಳ ಪಾಲಿಗೆ ಅವನು ಶಿವರೂಪಿ ಬಸವಣ್ಣ, ಕಲಿಯುಗದ ಕಾಮಧೇನು. 

ಚಿಕ್ಕರಸಿನಕೆರೆ ಊರಿನ ಪ್ರಮುಖ ದೇವರು ಕಾಲಭೈರವೇಶ್ವರನ ಜಾತ್ರೆ ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಜರಗುತ್ತದೆ. ಕಾರ್ತಿಕ ಮಾಸದಲ್ಲಿ ದೀಪಾವಳಿ ಸಂದರ್ಭದಲ್ಲಿ ಬಸವಪ್ಪನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಊರೂರುಗಳಿಗೆ ಬಸಪ್ಪನ ಭೇಟಿ ಪೂರ್ವ ನಿಗದಿಯಂತೆ ಒಮ್ಮೊಮ್ಮೆ ಹಟಾತ್ತಾಗಿ ನಡೆಯುವುದು ಇದೆ. 

ಜಾತ್ರೆಯ ದಿನದಂದು ಚಿಕ್ಕರಿಸಿನಕೆರೆ, ಹುಣ್ಣನದೊಡ್ಡಿ, ಗುರುದೇವರಹಳ್ಳಿ ಗ್ರಾಮದವರಿಂದ ಕೊಂಡಬಂದಿ ಉತ್ಸವ, ಕಾಳಮ್ಮ, ಕಾರ್ಕಳ್ಳಿ ಬಸವೇಶ್ವರ, ಕಾಲಭೈರವ ಸೇರಿದಂತೆ ದೇವಾನು ದೇವತೆಗಳ ಶಿಂಷಾ ನದಿಯಲ್ಲಿ ಹೂ-ಹೊಂಬಾಳೆ ಕಾರ್‍ಯಕ್ರಮಗಳು ಜರಗುತ್ತವೆ. ಮಹಾಪೂಜೆಯ ಆನಂತರ ಪ್ರಮುಖ ಬೀದಿಯಲ್ಲಿ ಬಸವಪ್ಪನ ಮೆರವಣಿಗೆ, ಆ ಆನಂತರ ದೇವಾಲಯದ ಆವರಣದಲ್ಲಿ ಪುಷ್ಪಾಭಿಷೇಕವಾಗುತ್ತದೆ. ಇಲ್ಲಿನ ವಿಶೇಷವೆಂದರೆ, ಬಸವಪ್ಪನ ಕೊಂಬುಗಳಿಗೆ ಕಟ್ಟಲಾಗಿರುವ ಕಾಣಿಕೆ ದುಡ್ಡನ್ನು ಯಾರೂ ಮುಟ್ಟುವುದಿಲ್ಲ. 

ಸಾಲು ಸಾಲು ದೇವಾಲಯಗಳು 

ಕಾಲಭೈರವ ಚಿಕ್ಕರಸಿನಕೆರೆ ಗ್ರಾಮದ ಪ್ರಧಾನ ದೈವವಾದರೂ, ಈ ಊರಲ್ಲಿ ಸಾಲು ಸಾಲು ದೇವಾಲಯಗಳಿವೆ. ಮದ್ದೂರಿನಿಂದ ದಕ್ಷಿಣಕ್ಕೆ ಮಳವಳ್ಳಿಗೆ ಸಾಗುವ ದಾರಿಯಲ್ಲಿ ಎಂಟು ಕಿ.ಮೀ ದೂರ ಸಾಗಿ ಚಿಕ್ಕರಸಿನಕೆರೆ ಕ್ರಾಸ್ ತಲುಪಿದ ಆನಂತರ ಬಲಕ್ಕೆ ಮತ್ತೆ ಒಂದೂವರೆ ಕಿ.ಮೀ ಸಾಗಿದರೆ ರಸ್ತೆಯ ಎಡಬದಿಗೆ ಪೂಜ್ಯ ಶ್ರೀ ರಾಜೇಂದ್ರ ಸ್ವಾಮಿಗಳ ಪುಣ್ಯಕ್ಷೇತ್ರವು ಸಿಗುತ್ತದೆ. ಅದೇ ದಾರಿಯಲ್ಲಿ ತುಸು ಮುಂದೆ ಸಾಗಿದರೆ ಕೆರೆಯ ಏರಿಯಲ್ಲಿ ಅಗಸ್ತೇಶ್ವರಸ್ವಾಮಿ ದೇವಾಲಯವಿದೆ. 

ಕ್ರೈಸ್ತ ಸಮುದಾಯದ ಕಥೋಲಿಕ ಪಂಗಡಕ್ಕೆ ಸೇರಿರುವ ಪೂಜ್ಯ ಶ್ರೀ ರಾಜೇಂದ್ರ ಸ್ವಾಮಿಗಳ ಪುಣ್ಯಕ್ಷೇತ್ರದ ಮುಂದಿನ ಬೀದಿ ದಾಟಿದರೆ ಮಾರಮ್ಮ ದೇವಿ ಗುಡಿ ಇದೆ. ಅಲ್ಲೇ ಎಡಕ್ಕೆ ಹೊಲದಲ್ಲಿ ಹನುಮಂತರಾಯ (ಆಂಜನೇಯ ಸ್ವಾಮಿ) ನ ಗುಡಿ ಇದೆ. ಊರಲ್ಲಿ ಹೊನ್ನರತಿ, ಹೂಮಾಲಮ್ಮ, ರಾಕಾಸಮ್ಮ, ಮಂಚಮ್ಮ ಮತ್ತು ಯಲ್ಲಮ್ಮ ದೇವಿ ಗುಡಿಗಳಿವೆ. ಆಯಾ ಸಮುದಾಯದವರು ಆರಾಧಿಸುವ ದೈವಗಳಿಗೆ ಆಯಾ ಕುಳ(ಪೂಜಾರಿ)ಗಳೇ ಇದ್ದಾರಂತೆ. 

ಊರಲ್ಲಿ ಆಯಾ ಬೀದಿಗಳ ಶೆಟ್ಟರು, ಬ್ರಾಹ್ಮಣರು, ಒಕ್ಕಲಿಗರು, ವೀರಶೈವ ಲಿಂಗಾಯಿತರು, ಗಾಣಿಗ, ಈಡಿಗ, ಬಜಂತ್ರಿ, ಮಡಿವಾಳ, ಆದಿ ಕರ್ನಾಟಕ ಮೊದಲಾದ ಸಮುದಾಯಗಳಿಗೆ ಸೇರಿದ ಜನ ಇದ್ದಾರೆ. ಒಟ್ಟು ಕುಟುಂಬಗಳು 980 ಇದ್ದರೆ, 2113 ಗಂಡಸರು ಮತ್ತು 2074 ಹೆಂಗಸರೂ ಸೇರಿ ಒಟ್ಟು 4187 ಜನ ಊರಲ್ಲಿ ನೆಲೆಸಿದ್ದಾರೆ. ಆರು ವರ್ಷದ ಒಳಗಿನ ವಯೋಮಾನದ ಮಕ್ಕಳ ಸಂಖ್ಯೆ 345. ಬಹುತೇಕ ಕುಟುಂಬಗಳು ಕೃಷಿಯನ್ನೇ ಅವಲಂಬಿಸಿದರೂ, ಕುಟುಂಬಗಳಲ್ಲಿನ ಕಲಿತವರು ಕಲಿಯದವರು ತಮ್ಮ ಯೋಗ್ಯತೆಗೆ ಅನುಸಾರ ಕೆಲಸ ಹುಡುಕಿಕೊಂಡು ಪಟ್ಟಣಗಳನ್ನು ಸೇರಿದ್ದಾರೆ. 

ಪೂಜ್ಯ ಶ್ರೀ ರಾಜೇಂದ್ರ ಸ್ವಾಮಿಗಳ ಪುಣ್ಯಕ್ಷೇತ್ರದ ನೆಲೆಯಾಗಿರುವ ಚಿಕ್ಕರಸಿನಕರೆ ಊರಲ್ಲಿ ಇಂದು ಹೆಸರಿಗೆ ಹೇಳಲು ಒಂದು ಕ್ರೈಸ್ತ ಕುಟುಂಬವೂ ಇಲ್ಲ. ಇದೇನು ಸೋಜಿಗದ ಸಂಗತಿ ಏನಲ್ಲ. ಈ ಅವಸ್ಥೆಗೆ ಕಾರಣಗಳನ್ನು ಕಂಡುಕೊಳ್ಳಲು ಇತಿಹಾಸದ ಪುಟಗಳನ್ನು ಹುಡುಕಬೇಕಾಗುತ್ತದೆ. 

ದಿಕ್ಕಾಪಾಲಾದ ಕ್ರೈಸ ಜನ : 

ಹದಿನೇಳನೇ ಶತಮಾನದಲ್ಲಿ, ಚಿಕ್ಕರಸಿನಕೆರೆ ಅಲ್ಲದೇ ಶೆಟ್ಟಿಹಳ್ಳಿ, ಕಪ್ಪಿಗನಟ್ಟಿ (ಆನೆಕಲ್ಲು), ಗಾಡೇನಹಳ್ಳಿ, ಕಾಮನಹಳ್ಳಿ, ಶಿರಾ, ಹಾರೋಬೆಲೆ ಮೊದಲಾದ ಊರುಗಳಲ್ಲಿ ಕಥೋಲಿಕ ಕ್ರೈಸ್ತರಿದ್ದರು, ಗುರು ನಿಲಯಗಳಿದ್ದವು. ಚಿಕ್ಕರಸಿನಕೆರೆ ಹೊರತುಪಡಿಸಿದರೆ, ಉಳಿದ ಊರುಗಳು ಈಗಲೂ ಕಥೋಲಿಕ ಕ್ರೈಸ್ತರ ನೆಲೆಗಳೇ ಹೌದು. 

ಹದಿನೆಂಟನೇ ಶತಮಾನದಲ್ಲಿ ಸ್ಥಳೀಯವಾಗಿ ಅಲ್ಲಲ್ಲಿ ಕ್ರೈಸ್ತರ ಸುವಾರ್ತಾ ಪ್ರಸಾರಕ್ಕೆ ಅಡ್ಡಿ ಆತಂಕಗಳಿದ್ದರೂ ಅಂದಿನ ಸಮಾಜದಲ್ಲಿ ಶಾಂತಿ ಸಮಾಧಾನ ನೆಲೆಸಿತ್ತು. 

ಆದರೆ, ನಾಲ್ಕಾರು ದಶಕಗಳ ಆನಂತರದ ಬದಲಾದ ಪರಿಸ್ಥಿತಿಯಲ್ಲಿ ಬ್ರಿಟಿಷರ ಧರ್ಮವಾದ ಕ್ರೈಸ್ತಧರ್ಮ ಪಾಲಿಸುತ್ತಿದ್ದ ಕ್ರೈಸ್ತರ ಕುರಿತು ಅಪನಂಬಿಕೆ, ವೈಮನಸ್ಸು ತಾಳಿದ್ದ ಟಿಪ್ಪುವಿನ ಕಾಲದಲ್ಲಿ ಕ್ರೈಸ್ತರ ಮೇಲಿನ ದೌರ್ಜನ್ಯ ಮಿತಿಮೀರಿತ್ತು. ಕ್ರಿಸ್ತಶಕ 1782 ಸುಮಾರು ಟಿಪ್ಪುವಿನ ದುಂಡಾವರ್ತನೆಗೆ ಹೆದರಿದ, ರಾಜಧಾನಿ ಶ್ರೀರಂಗಪಟ್ಟಣಕ್ಕೆ ತೀರ ಹತ್ತಿರದಲ್ಲಿದ್ದ (52 ಕಿ..ಮೀ) ಚಿಕ್ಕರಸಿನಕೆರೆಯಲ್ಲಿನ ಕ್ರೈಸ್ತ ಜನರು ದಿಕ್ಕಾಪಾಲಾಗಿ ಹೋಗಿದ್ದಾರೆ. ನೋಡಿಕೊಳ್ಳುವವರಿಲ್ಲದೇ, ಅಲ್ಲಿನ ಚರ್ಚು ಹಾಳುಬಿದ್ದು ನೆಲಸಮವಾಗಿಬಿಟ್ಟಿದೆ. 

ಮೃತರಾದ ಸಂದರ್ಭದ ಮಳೆ ತರಸಿದ ಪವಾಡ, ಮೂಡಿಸಿದ ಭಯಭಕ್ತಿ ಹಾಗೂ ಸ್ಥಳೀಯ ದೈವಭೀರು ಜನರ ಆಸ್ಥೆಯ ಕಾರಣ ರಾಜೇಂದ್ರ ಸ್ವಾಮಿಗಳ ಸಮಾಧಿ ಮುಕ್ಕಾಗದೇ ಉಳಿಯುತ್ತದೆ. ಈಗ ಅಲ್ಲಿ ರಾಜೇಂದ್ರಸ್ವಾಮಿ ಸಮಾಧಿ, ಬಲಿಪೀಠ ಮತ್ತು ಎದುರುಗಡೆ ನೀಟಾಗಿ ಮೂಲೆಗಳನ್ನು ಕತ್ತರಿಸಿದ ಮಾಟವಾದ ಶಿಲುಬೆ ಉಳಿದುಕೊಂಡಿವೆ. ಯೇಸುಸಭೆಯ ಸ್ವಾಮಿಗಳ ಸಮಾಧಿ ಮೇಲಿರುವಂಥ, ಆ ಕಾಲದಲ್ಲಿ ಪ್ರಚಲಿತವಿದ್ದ ಶಿಲುಬೆಯ ಆಕಾರವನ್ನು ಹೋಲದ, ನೀಟಾಗಿ ಮೂಲೆಗಳನ್ನು ಕತ್ತರಿಸಲಾಗಿರುವ, ಆ ಮಾಟವಾದ ಲ್ಯಾಟಿನ್ ಶಿಲುಬೆಯ ಪುರಾತತ್ವದ ಬಗ್ಗೆ ಕೆಲವರಲ್ಲಿ ಹತ್ತಾರು ಅನುಮಾನಗಳಿವೆ. 

ಈ ಹಿಂದೆ ದಿಕ್ಕಾಪಾಲಾದ ಕ್ರೈಸ್ತರ ಸಂತತಿಯ ಜನ, ಪರಿಸ್ಥಿತಿ ಸುಧಾರಿಸಿದ ಆನಂತರ ತಮ್ಮ ಪೂರ್ವಜರ ನೆಲೆಯಾಗಿದ್ದ ಮತ್ತು ಪವಾಡ ಪುರುಷರಾದ ರಾಜೇಂದ್ರಸ್ವಾಮಿ ಅವರ ಸಮಾಧಿ ಇರುವ ಚಿಕ್ಕರಸಿನಕೆರೆಗೆ ಬಂದು ಸಮಾಧಿಯನ್ನು ಆದರಿಸುವುದನ್ನು ಮುಂದುವರಿಸಿಕೊಂಡು ಬಂದರು. ರಾಜೇಂದ್ರಸ್ವಾಮಿ ಅವರ ಮಧ್ಯಸ್ಥಿಕೆಯಿಂದ ವರಪ್ರಸಾದಗಳನ್ನು ಅನುಭವಿಸತೊಡಗಿದರು. ಪವಾಡಗಳಿಗೆ ಸಾಕ್ಷಿಯಾಗತೊಡಗಿದರು. 

ಕ್ರೈಸ್ತರು ಊರು ಬಿಟ್ಟು ಹೋದರೂ, ಕ್ರೈಸ್ತರ ಪರಮಪೂಜ್ಯ ಜನಾನುರಾಗಿ ಸ್ವಾಮಿಯನ್ನು ಹತ್ತಿರದಿಂದ ಕಂಡಿದ ಸ್ಥಳೀಯ ಜನರು ತಮಗೆ ತಿಳಿದ ಬಗೆಯಲ್ಲಿ ರಾಜೇಂದ್ರಸ್ವಾಮಿಯ ಸಮಾಧಿ ಮತ್ತು ಚರ್ಚಿನ ಅವಶೇಷವನ್ನು ಆದರದಿಂದ ಕಾಣುತ್ತಾ ಬಂದಿದ್ದರು. ಹರಕೆ ಹೊತ್ತು ಹೂವು, ಹಣ್ಣು ಕಾಯಿ ಮಾಡುವುದನ್ನು, ಸಕ್ಕರೆ ಕೊಬ್ಬರಿ ಕಡಲೆ ಹಂಚುವುದನ್ನು, ಶಿಲುಬೆ ಕ್ರೈಸ್ತರಿಗೆ ಸೇರಿದ್ದು ಎಂಬ ಕಾರಣಕ್ಕೆ ಮೇಣದ ಬತ್ತಿ ಹಚ್ಚುವುದನ್ನು ರೂಢಿಸಿಕೊಂಡು ಬಂದರು ಎಂದು ಕಾಣುತ್ತದೆ. 

ಬಲಿಪೀಠದ ಇಂದಿನ ಚಿತ್ರಣ: 

ಆ ಕಾಲದಲ್ಲಿನ ಚರ್ಚುಗಳಲ್ಲಿನ ಬಲಿಪೀಠ ಗೋಡೆಗೆ ತಾಗಿಕೊಂಡಿರುತ್ತಿತ್ತು. ಈಗ ಪಳೆಯುಳಿಕೆಯಾಗಿ ಉಳಿದಿರುವ ಆ ಬಲಿಪೀಠವನ್ನು ಒಂದಿಷ್ಟು ಅಲಂಕರಿಸಲಾಗಿದೆ. ಆಗ ವಿಶ್ವಾಸಿಕರಿಗೆ ಬೆನ್ನಾಗಿ ನಿಂತು ಪಾದ್ರಿಗಳು ಬಲಿ ಅರ್ಪಿಸುವ ಪದ್ಧತಿ ಇತ್ತು. ಬಲಿಪೀಠದ ಮಧ್ಯದಲ್ಲಿ ಗಾರೆಯಲ್ಲಿ ನಿರ್ಮಿಸಲಾದ ಬಿಳಿ ಬಣ್ಣದ ಪುಟಾಣಿ ಶಿಲುಬೆ ಇದೆ. ಶಿಲುಬೆಯ ಮುಂದೆ ಮಾತೆ ಮರಿಯಳ ಜಪಮಾಲೆ ಸ್ವರೂಪವನ್ನು ಕೂರಿಸಲಾಗಿದೆ. ಶಿಲುಬೆಯ ಎಡಬಲಕ್ಕೆ ಒಂದೊಂದು ಸ್ವಲ್ಪ ದೊಡ್ಡಗಾತ್ರದ ಚೌಕಾಕಾರದ ಗೋಪುರ ಅದರ ಮೇಲೆ ಮೇಲೆ ಚೂಪಾದ ತುದಿಯ ತ್ರಿಕೋಣಾಕಾರದಲ್ಲಿ ಗಾರೆ ಮೆತ್ತಿ ಅದರ ಮೇಲೆ ಕಬ್ಬಿಣದ ಶಿಲುಬೆಗಳನ್ನು ಕೂರಿಸಲಾಗಿದೆ. ಇವಲ್ಲದೇ ಎರಡೂ ಬದಿಗೆ ಇವುಗಳಿಗಿಂತ ಚಿಕ್ಕದಾದ ಒಂದೊಂದು ಪುಟಾಣಿ ಗೋಪುರಗಳಿವೆ. ಎಲ್ಲಾ ಗೋಪುರಗಳ ಮೇಲ್ಮೆಯಲ್ಲಿ ಕೆಂಪು ಪಟ್ಟಿಯಲ್ಲಿ ಕಮಾನುಗಳನ್ನು ಮೂಡಿಸಲಾಗಿದೆ. ಬಲಿಪೀಠ ಎತ್ತರದಲ್ಲಿ ಒಂದು ಸೋಪಾನವನ್ನು ಹೊಂದಿದ್ದು ಅವುಗಳ ಮೇಲೆ ಹೂವುಗಳನ್ನು ಇರಿಸಲಾಗುತ್ತಿದೆ. 

ಈ ಗೋಡೆ ಬಲಿಪೀಠದ ಮುಂದೆ ಎಡಬಲಕ್ಕೆ ಮೇಣದ ಬತ್ತಿಯ ಆಕಾರವನ್ನು ಹೋಲುವ ಒಂದೊಂದು ಗೋಲಾಕಾರದ ಕಟ್ಟೆಗಳನ್ನು ನಿರ್ಮಿಸಲಾಗಿದೆ. ಅವುಗಳ ಮೇಲೂ ಕಬ್ಬಿಣದ ಶಿಲುಬೆಗಳನ್ನು ಕೂರಿಸಲಾಗಿದೆ. ಇದಲ್ಲದೇ ಈ ಗೋಡೆ ಬಲಿಪೀಠದ ಸುತ್ತ ನಾಲ್ಕು ಕಾಂಕ್ರೀಟ್ ಕಂಬಗಳನ್ನು ನಿಲ್ಲಿಸಿ, ಅವುಗಳ ಮೇಲೆ ಬಲಿಪೀಠಕ್ಕೆ ಮಳೆ ಬಿಸಿಲಿನಿಂದ ರಕ್ಷಣೆ ಒದಗಿಸಲು ಕಾಂಕ್ರೀಟಿನ ಛತ್ತನ್ನು ನಿರ್ಮಿಸಲಾಗಿದೆ. 

ಈ ಕಾಲದ ಪದ್ಧತಿಯಂತೆ ಈಗ ಇರುವ ಬಲಿಪೀಠದ ಹಾಸುಗಲ್ಲು ಕಂಬದ ಮೇಲೆ ನಿಂತಿದ್ದು, ಮೂಲ ಬಲಿಪೀಠದ ಮುಂದೆ ಎದುರುಗಡೆ ಕೂಡುವ ವಿಶ್ವಾಸಿಕರ ಅಭಿಮುಖದಲ್ಲಿದೆ. ಪಾದ್ರಿಗಳು ವಿಶ್ವಾಸಿಕರನ್ನು ನೋಡುತ್ತಾ ಬಲಿ ಅರ್ಪಣೆ ಮಾಡುತ್ತಾರೆ. ತೀರ ಇತ್ತೀಚೆಗೆ ಬಲಿಪೀಠದ ಬಲ ಬದಿಗೆ ಪೂಜ್ಯ ರಾಜೇಂದ್ರ ಸ್ವಾಮಿಗಳ ಕರಿಕಲ್ಲಿನ ಸಮಾಧಿಯನ್ನು ಸಜ್ಜುಗೊಳಿಸಲಾಗಿದೆ. ಅದರ ಮಧ್ಯ ಬಿಳಿ ಬಣ್ಣ ಬಳಿದ ಪುಟಾಣಿ ಶಿಲುಬೆ ಇದೆ. ಸಮಾಧಿಯ ತಲೆಯ ಭಾಗದಲ್ಲಿ ರಾಜೇಂದ್ರ ಸ್ವಾಮಿಗಳ ಚಿತ್ರವಿರುವ ಕಪ್ಪು ಬಿಳುಪಿನ ಶಿಲೆಯನ್ನು ಕೂರಿಸಲಾಗಿದೆ, 

ಅಲ್ಲಿನ ಗೋಡೆ ಪೀಠದ ಎಡ ಬದಿಗೆ ಒಂದಿಷ್ಟು ಬರಹವಿರುವ ಕಲ್ಲಿನ ಫಲಕವನ್ನು ನೆಡಲಾಗಿದೆ. ಅದು 2002ರ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆದ ಚಿಕ್ಕರಸಿನಕೆರೆಯ ರಾಜೇಂದ್ರಸ್ವಾಮಿ ಪುಣ್ಯಕ್ಷೇತ್ರದ ಪುನರ್ ಪ್ರತಿಷ್ಠಾಪನೆಯನ್ನು ದಾಖಲಿಸಿದೆ. ಸರ್ಕಾರದ ಆರಾಧನಾ ಯೋಜನೆಯ ಅಡಿ ಈ ಪುಣ್ಯಕ್ಷೇತ್ರವನ್ನು ಗುರುತಿಸಿದ್ದು, ಅದನ್ನು ನವಿಕರಿಸಿ 30-4-2002ರಂದು ಪ್ರತಿಷ್ಠಾಪಿಸಲಾಯಿತೆಂದು ಆ ಫಲಕ ಸಾರುತ್ತಿದೆ. ಈ ಪ್ರತಿಷ್ಠಾಪನೆಯನ್ನು ಮೈಸೂರು ಧರ್ಮಕ್ಷೇತ್ರದ ಅಂದಿನ ಧರ್ಮಾಧ್ಯಕ್ಷ ಅತಿವಂದನೀಯ ಡಾ.ಜೋಸೆಫ್ ರಾಯ್ ಅವರು ಆಶೀರ್ವದಿಸಿದರು, ಈ ಪುಣ್ಯಕ್ಷೇತ್ರದ ಕುರಿತು ಚಾರಿತ್ರಿಕ ಬೆಳಕು ಚೆಲ್ಲಿದ, ರಾಜ್ಯ ಪ್ರಶಸ್ತಿ ಪುರಸ್ಕೃತ ವಂದನೀಯ ಡಾ. ಐ. ಅಂತಪ್ಪ ಅವರು ಹಾಜರಿದ್ದರು. ಮದ್ದೂರು ಧರ್ಮಕೇಂದ್ರದ ಗುರು ವಂದನೀಯ ಗುರು ಜೋಸೆಫ್ ಸಾಲ್ಡಾನ್ಹ ಕಾರ್‍ಯಕ್ರಮವನ್ನು ಆಯೋಜಿಸಿದ್ದರು ಎಂದು ಫಲಕದಲ್ಲಿ ತಿಳಿಸಲಾಗಿದೆ. 

ಬಟಾಬಯಲಿನಲ್ಲಿದ್ದ ಗೋಡೆ ಬಲಿಪೀಠ ಮತ್ತು ರಾಜೇಂದ್ರ ಸ್ವಾಮಿ ಸಮಾಧಿಗೆ ಈಗ ಕಾಂಕ್ರೀಟ್ ಛತ್ತಿನ ಮೂಲಕ ರಕ್ಷಣೆ ಒದಗಿಸಿದಂತಾಗಿದೆ. ಪುಣ್ಯಕ್ಷೇತ್ರದ ಸುತ್ತಲೂ ಕಂಪೌಂಡ ಗೋಡೆ ಕಟ್ಟಲಾಗಿದೆ. ಅಲ್ಲೇ ಇರುವ ಮಾಟವಾದ ಶಿಲುಬೆಯ ಸುತ್ತ ಕಬ್ಬಿಣದ ಜಾಲರಿ ಕಟ್ಟಲಾಗಿದೆ. ಅಲ್ಲೇ ಪಕ್ಕದಲ್ಲಿ ತಗಡಿನ ಛತ್ತಿನ ಮನೆಯಲ್ಲಿ ಪಾದ್ರಿಗಳಿಗೆ ನಿವಾಸ ನಿರ್ಮಿಸಲಾಗಿದೆ. ಅದಕ್ಕೆ ಹೊಂದಿಕೊಂಡಂತೆ ಆಯತಾಕಾರದ ಆಳೆತ್ತರದ ನಾಲ್ಕು ಗೋಡೆ ಕಟ್ಟಿ ಅದಕ್ಕೆ ತಗಡಿನ ಛತ್ತು ಕೂರಿಸಲಾಗಿದೆ. 

ಕನ್ನಡ ನಾಡಿನ ಮೊದಲ ಸಂತ 

ಭಾರತದಲ್ಲಿ ಕ್ರೈಸ್ತರ ಜನಸಂಖ್ಯೆಯ ಪ್ರಮಾಣ ಸುಮಾರು ಶೇಕಡಾ ಎರಡರಷ್ಟಿದೆ. ಕಥೋಲಿಕರ ಕ್ರೈಸ್ತರ ಒಟ್ಟು ಸಂಖ್ಯೆ ಸುಮಾರು 20 ಮಿಲಿಯನ್ ಇದ್ದರೆ, ಪ್ರೊಟೆಸ್ಟೆಂಟ್ ಕ್ರೈಸ್ತರ ಸಂಖ್ಯೆ ಸುಮಾರು 5 ಮಿಲಿಯನ್ ಎಂದು ಅಂದಾಜು ಮಾಡಲಾಗುತ್ತದೆ. ಒಟ್ಟು 30 ರಾಜ್ಯಗಳಲ್ಲಿ 174 ಕಥೋಲಿಕ ಕ್ರೈಸ್ತರ ಧರ್ಮಕ್ಷೇತ್ರಗಳಿದ್ದು, ಅವುಗಳಲ್ಲಿ ಲ್ಯಾಟಿನ್ ಪಂಗಡ 132, ಸಿರೋ ಮಲಬಾರ್ 31 ಮತ್ತು ಸಿರೋ ಮಲಂಕರ 11 ಧರ್ಮಕ್ಷೇತ್ರಗಳನ್ನು ಹೊಂದಿವೆ. ಉತ್ತರ ಮತ್ತು ದಕ್ಷಿಣ ಭಾರತ ಸಭೆಗಳೆಂದು ಗುರುತಿಸಿಕೊಳ್ಳುವ ಪ್ರೊಟೆಸ್ಟೆಂಟರು 49 ಧರ್ಮಕ್ಷೇತ್ರಗಳನ್ನು ಹೊಂದಿದ್ದಾರೆ. ಪ್ರೊಟೆಸ್ಟೆಂಟರು ಕೆಲವೇ ಕೆಲವು ಸಂತರನ್ನು ಆದರಿಸಿದರೆ, ಕಥೋಲಿಕ ಕ್ರೈಸ್ತರಲ್ಲಿ ನೂರಾರು ಸಂತರನ್ನು ಆದರಿಸುವ ಪರಿಪಾಠವಿದೆ. ಆದರೆ ದಿನಚರಿಯಲ್ಲಿ ಆಯಾ ದೇಶಕಾಲಕ್ಕೆ ತಕ್ಕಂತೆ ಕೆಲವೇ ಹಸೆರುಗಳಿರುತ್ತವೆ. 

ನಮ್ಮ ನಾಡಿನ ಜನರು ತಮಗೆ ಆಪ್ತವಾಗಿ ಕಂಡ ಎಲ್ಲಾ ವಿಭೂತಿ ಪುರುಷರನ್ನು ಸಂತರೆಂದೇ ಗುರುತಿಸುತ್ತಾರೆ. ಆದರೆ, ಇಟಲಿಯ ರೋಮ್ ಪಟ್ಟಣ ರಾಜ್ಯದಲ್ಲಿ ನೆಲೆಸಿರುವ ವಿಶ್ವವ್ಯಾಪಿ ಕಥೋಲಿಕ ಕ್ರೈಸ್ತ ಪಂಥದ ಪರಮೋಚ್ಚ ಗುರು ಪಾಪು ಸ್ವಾಮಿಗಳು, ಸತ್ಪುರುಷ ಅಥವಾ ಮಹಿಳೆಯನ್ನು ಅಧಿಕೃತವಾಗಿ ಸಂತರೆಂದು ಘೋಷಿಸಿದರೆ ಮಾತ್ರ ಕಥೋಲಿಕ ಕ್ರೈಸ್ತರು ಅವರನ್ನು ಸಂತರೆಂದು ಆದರಿಸಬಹುದಾಗಿದೆ. ಸಂತರ ಘೋಷಣೆಗೂ ಕೆಲವೊಂದು ವಿಧಿವಿಧಾನಗಳನ್ನು ಪಾಲಿಸಬೇಕಾಗುತ್ತದೆ. 

ಮೋದಲ ಹಂತದಲ್ಲಿ ಸ್ಥಳೀಯ ಹಂತದಲ್ಲಿ ಆಯಾ ವಿಭೂತಿ ಪುರುಷರು `ದೇವರ ಸೇವಕ' (ಸರ್ವಂಟ್ ಆಫ್ ಗಾಡ್) ಎಂಬ ಘೋಷಣೆಯಾಗಬೇಕು. ಆನಂತರ ಮಾನ್ಯವಂತರು/ ಆದರಿಸಲ್ಪಡುವವರು (ವೆನರೆಬಲ್) ಎಂದು ಗುರುತಿಸಲ್ಪಡಬೇಕು. ಆನಂತರ ಆಶೀರ್ವದಿತರು/ ಪುನೀತರು ಆಗಬೇಕು (ಬ್ಲೆಸೆಡ್). ಅಂತಿಮವಾಗಿ ಪಾಪು ಸ್ವಾಮಿಗಳು ಅವರನ್ನು ಸಂತರು (ಸೆಂಟ್) ಎಂದು ಘೋಷಿಸಬೇಕು. ಈ ನಾಲ್ಕು ಹಂತಗಳಲ್ಲಿನ ಭಾರತೀಯ ಮೂಲದ ವಿಭೂತಿ ಪುರುಷ/ ಮಹಿಳೆಯರ ಪಟ್ಟಿಗಳಲ್ಲಿ, ಬಹುತೇಕರು ಗೋವಾ, ಕೇರಳ ಮತ್ತು ತಮಿಳುನಾಡಿಗೆ ಸೇರಿದವರಾಗಿದ್ದಾರೆ. 

ಈ ಪಟ್ಟಿಗಳಲ್ಲಿ ಕನ್ನಡನಾಡಿನ ಮೂಲದ ಒಬ್ಬ ವಿಭೂತಿ ಪುರುಷನೂ ಇಲ್ಲ. ಆದರೆ, ಈಗ ಚಿಕ್ಕರಸಿನಕೆರೆ ಶ್ರೀ ರಾಜೇಂದ್ರ ಸ್ವಾಮಿ ಅವರು ಈ ಕೊರತೆಯನ್ನು ನೀಗಿಸಲಿದ್ದಾರೆ. ಮುನ್ನೂರು ವರ್ಷಗಳಿಂದ, ಸ್ಥಳೀಯವಾಗಿ ಕ್ರೈಸ್ತರ ಅನುಪಸ್ಥಿತಿ ಇದ್ದರೂ, ಅದ್ಭುತಗಳಿಗೆ ಕಾರಣವಾಗುತ್ತಾ, ಪವಿತ್ರ ಹಾಗೂ ನೈಜ ವಿಶ್ವಾಸದ ತಾಣವಾಗಿ, ಚಿಕ್ಕರಸಿನಕೆರೆಯ ರಾಜೇಂದ್ರಸ್ವಾಮಿ ಪುಣ್ಯಕ್ಷೇತ್ರವು ನೂರಾರು ಪವಾಡಗಳಿಗೆ ಸಾಕ್ಷಿಯಾಗುತ್ತಿದ್ದು, ಸ್ಥಳೀಯ ಮೈಸೂರು ಧರ್ಮಕ್ಷೇತ್ರವು ಅವರನ್ನು ಸಂತರ ಪದವಿಗೆ ಏರಿಸಲು ಆಸಕ್ತಿ ತಳೆದು ಕಾರ್‍ಯಪ್ರವೃತ್ತವಾಗಿದೆ. ಈ ನಿಟ್ಟಿನ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ಹಂತದಲ್ಲಿ ಚಿಕ್ಕರಸಿನಕೆರೆ ರಾಜೇಂದ್ರ ಸ್ವಾಮಿ ಅವರನ್ನು, ಈ ಸಾಲಿನ ಏಪ್ರಿಲ್ 11ರಂದು (11-4-2019), ಮೈಸೂರು ಧರ್ಮಕ್ಷೇತ್ರದ ಇಂದಿನ ಧರ್ಮಾಧ್ಯಕ್ಷ ಅತಿ ವಂದನೀಯ ಕೆ.ಎ.ವಿಲಿಯಂ ಅವರು, `ದೇವರ ಸೇವಕ' ಎಂದು ಘೋಷಿಸಿದ್ದಾರೆ. 

ಸುದೀರ್ಘ ವಿಚಾರಣೆ, ಸಾಕ್ಷ್ಯಾಧಾರಗಳ ಸಂಕಲನ, ಚಾರಿತ್ರಿಕ ದಾಖಲಾತಿಗಳ ಪರಿಶಿಲನೆ, ಮಧ್ಯಸ್ಥಿಕೆಯ ಪವಾಡಗಳ ಕ್ರೋಢಿಕರಣ ಮೊದಲಾದವು ನಡೆಯಬೇಕಿದೆ. ಇವೆಲ್ಲವುಗಳ ಆಧಾರದಲ್ಲಿ, ಇನ್ನು ಮುಂದಿನ ಎರಡು ಹಂತಗಳನ್ನು ದಾಟಿದ ಮೇಲೆ ಚಿಕ್ಕರಸಿನಕೆರೆ ಶ್ರೀ ರಾಜೇಂದ್ರಸ್ವಾಮಿ ಅವರು ಪೀಠದ ಗೌರವ, ಸಂತರ ಪಟ್ಟವನ್ನು ಪಡೆಯುತ್ತಾರೆ. 

ವಾರ್ಷಿಕ ಉತ್ಸವ ಮತ್ತು 300ನೇ ಸ್ಮರಣೆ 

ಪ್ರಸಕ್ತ 2019ರ ಸಾಲಿನ ಮೇ ತಿಂಗಳ ಒಂದರಂದು ಬುಧವಾರದಂದು ಈ ಚಿಕ್ಕರಸಿನಕೆರೆ ಊರಿನ ದೇವರ ಸೇವಕ ರಾಜೇಂದ್ರಸ್ವಾಮಿ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವವನ್ನು ಕೊಂಡಾಡಲಾಯಿತು. ಅದೇ ದಿನ ಅವರ 300ನೆಯ ಪುಣ್ಯಸ್ಮರಣೆಯನ್ನೂ ಆಚರಿಸಲಾಯಿತು. 

ಬೆಂಗಳೂರು ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಅತೀ ವಂದನೀಯ ಡಾ. ಪೀಟರ್ ಮಚಾಡೋ, ಅವರು ಮಹಾ ಆಡಂಬರದ ಬಲಿಪೂಜೆಯನ್ನು ನಡೆಸಿಕೊಟ್ಟರು. ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಪರಮಪೂಜ್ಯ ಕೆ.ಎ.ವಿಲಿಯಂ ಅವರು ಪ್ರಬೋಧನೆ ನೀಡಿದರು. 

ಬೆಂಗಳೂರು ಮಹಾಧರ್ಮಕ್ಷೇತ್ರದ ಹಿಂದಿನ ಮಹಾಧರ್ಮಾಧ್ಯಕ್ಷ ಅತೀ ವಂದನೀಯ ಡಾ. ಬರ್ನಾಡ್ ಮೊರಾಸ್, ಹಿರಿಯ ಗುರುಗಳು ಮತ್ತು ಅಧಿಕ ಸಂಖ್ಯೆಯಲ್ಲಿ ವಿವಿಧ ಸಭೆಗಳಿಗೆ ಸೇರಿದ ಕನ್ಯಾಸ್ತ್ರೀಯರು, ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಅಪಾರ ಸಂಖ್ಯೆಯ ಭಕ್ತಾದಿಗಳು, ಕ್ರೈಸ್ತ ವಿಶ್ವಾಸಿಕರು ಪವಿತ್ರ ಪಾಡುಪೂಜೆಯಲ್ಲಿ ಭಾಗವಹಿಸಿ ಪುನೀತರಾದರು. 

ಪೂಜ್ಯ ರಾಜೇಂದ್ರಸ್ವಾಮಿ ಅವರಿಗೆ ಬೇಗನೇ ಪೀಠದ ಗೌರವ ಸಿಗಲಿ ಎಂದು ಪಾಡುಪೂಜೆಯಲ್ಲಿ ಕೋರಿಕೊಳ್ಳಲಾಯಿತು. 

ಪಾಡುಪೂಜೆಯ ಮೊದಲು ಧರ್ಮಾಧ್ಯಕ್ಷರುಗಳನ್ನು ಬಾಜಾಬಜಂತ್ರಿಗಳನ್ನು ಬಾರಿಸುತ್ತಾ, ಛತ್ರಿಗಳನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಚಿಕ್ಕರಸಿನಕೆರೆ ಗ್ರಾಮದಲ್ಲಿನ ದೇವರಸೇವಕ ರಾಜೇಂದ್ರಸ್ವಾಮಿ ಅವರ ಪುಣ್ಯಕ್ಷೇತ್ರಕ್ಕೆ ಕರೆತರಲಾಯಿತು. 

ಎಲ್ಲಾ ಬಿಗಿ ಮಾಡಿ ಬಿಟ್ಟಾರೆ 

``ಇವರೆಲ್ಲಾ ತಗಲಾಕ್ಕೊಂಡ ಹತ್ತು ವರ್ಷ ಆಯಿತು. ಸ್ವಲ್ಪ ಸ್ವಲ್ಪ ಸಮ ಮಾಡಕೊಂಡು ಬಂದ್ರು. ಆ ಸಮಾಧಿ ಇದ್ದು ಶಾನೆ ವರ್ಷ ಆಗಿದೆ. ಎಲ್ಲಾ ಬಿಗಿ ಮಾಡಿ ಬಿಟ್ಟಾರೆ. ಪಂಚಾಯ್ತಿ ಜಾಗದಲ್ಲಿದ್ದ ಕಲ್ಯಾಣಿಗೆ ಮಣ್ಣ ಹೊಡೆಸಿ ಅಮರಿಸಿಕೊಂಡ್ರು''. 

ಇವು, ಅಗಸ್ತೇಶ್ವರ ದೇವಾಲಯದ ಮುಂದಿನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಅರವತ್ತರ ಆಸುಪಾಸಿನ ರಾಮಶೆಟ್ಟಿ ಅವರ ಆತಂಕದ ಮಾತುಗಳು. 

ಮೊದಲೆಲ್ಲಾ ರಾಜೇಂದ್ರಸ್ವಾಮಿ ಪುಣ್ಯಕ್ಷೇತ್ರ ಬಟಾಬಯಲಿನಲ್ಲಿತ್ತು. ಅಲ್ಲಿಗೆ ಹೋಗಿ ಬರುವವರಿಗೆ ಯಾವ ಅಡಚಣೆಗಳೂ ಇರಲಿಲ್ಲ. ಯಾವ ಸಮಯದಲ್ಲಾದರೂ ಸಮಾಧಿಗೆ ಭೇಟಿಕೊಟ್ಟು ಪೂಜೆ, ಹರಕೆ ಸಲ್ಲಿಸಬಹುದಿತ್ತು ಎಂಬ ಭಾವ ಅವರ ಮಾತಿನಲ್ಲಿ ಎದ್ದು ಕಾಣುತ್ತಿತ್ತು. 

ಏಕೆಂದರೆ ಜನಪದರ ದೈವದ ಲಕ್ಷಣವೇ ಅದು. ಅದಕ್ಕೆ ಸೂರಿರುವುದಿಲ್ಲ. ಗೋಡೆಗಳ ಚಕಬಂದಿಯ ಬಂಧನವಿರುವುದಿಲ್ಲ. ಪೂಜಾರಿಗಳ ತಂಟೆಯೇ ಇರುವುದಿಲ್ಲ. ದೈವವನ್ನು ಕಾಣಲು ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿರುವುದಿಲ್ಲ. 

ಅಷ್ಟೆಲ್ಲಾ ದೂರು ನೀಡುವವರಂತೆ ರಾಮಶೆಟ್ಟಿ ಅವರು ಮಾತಾಡಿದರೂ, ಪುಣ್ಯಕ್ಷೇತ್ರದ ಬಗೆಗಿನ ಅವರ ಆದರಕ್ಕೆ ಚ್ಯುತಿ ತಟ್ಟಿದಂತೆ ಕಾಣಲಿಲ್ಲ. ``ಬುದ್ಧಿ, ಹುಡುಗರಾಗಿದ್ದಾಗ ಬೆಲ್ಲ ಕಾಸು ಹಾಕ್ತಿದ್ವಿ. ದೊಡ್ಡೋರು ದುಡ್ಡ ಹಾಕಿದಾಗ ನಾವು ಹುಡುಗ್ರು ಎತ್ತಕೊಂಡು ಹೋಗತಿದ್ದುದು. ಮೇಣಬತ್ತಿ ಎತ್ಕೋತಿದ್ವಿ. ಕೊಬ್ರಿ, ಸಕ್ಕರೆ ಕಡ್ಲೆ ಕೊಡೋರು. ಕಾರ್ತಿಕ ಮಾಸದಲ್ಲಿ ಅಕ್ಟೋಬರ್ ತಿಂಗಳ ಸೋಮವಾರ ಇದೆಲ್ಲಾ ನಡೆಯೋದು'' ಎಂಬ ಅವರ ಮಾತುಗಳು ಅವರ ಪ್ರಾಂಜಲ ಮನಸ್ಸಿನ ಪ್ರತೀಕದಂತೆ ಕಂಡವು. 

ನಿಧಾನವಾಗಿ ರಾಜೇಂದ್ರಸ್ವಾಮಿಯ ವಾರ್ಷಿಕ ಉತ್ಸವ ಜಾತ್ರೆಯ ಸಕಲ ಲಕ್ಷಣಗಳನ್ನು ಆರೋಪಿಸಿಕೊಳ್ಳತೊಡಗಿದೆ. ಅದು ಆಸ್ತಿಕರ ತಾಣ, ಜನ ನೆರೆಯುತ್ತಾರೆ. ಪ್ರಸಾದವೆಂದು ಬೆಂಡು ಬತ್ತಾಸು, ಕಡಲೆಪುರಿ ಕೊಳ್ಳುತ್ತಾರೆ, ಜನ ಎಂದರೆ ಮಕ್ಕಳೂ ಇರುತ್ತಾರೆ, ಅವರಿಗಾಗಿ ಆಟಿಗೆ ಕೊಳ್ಳುತ್ತಾರೆ. ವಾರ್ಷಿಕೋತ್ಸವದ ದಿನ ರಾಜೇಂದ್ರಸ್ವಾಮಿ ಪುಣ್ಯಕ್ಷೇತ್ರದ ಮುಂದಿನ ರಸ್ತೆಯಲ್ಲಿ ಸಾಲುಸಾಲಾಗಿ ಮಿಠಾಯಿ, ಆಟಿಕೆ, ಮನೆವಾರ್ತೆಯ ಸಾಮಾನುಗಳ ಅಂಗಡಿಗಳು ಬಂದಿದ್ದವು. 

ಅಯ್ಯೋ, ಬೇರೆ ಬೇರೆ ಅಡುಗೆ ಮಾಡೋರು 

`ಅಯ್ಯೋ ಬೇರೆ ಬೇರೆ ಅಡುಗೆ ಮಾಡೋರು. ಮರಿ ಕಡಿಯೋರು. ಈ ಸಾರಿ ಒಟ್ಟಾಗಿ ಒಂದೇ ಕಡೆ ಅಡುಗೆ ಮಾಡವ್ರೆ''. ಇವು ಬಿಡುಗಡೆಯ ನಿಟ್ಟುಸುರಿನೊಂದಿಗೆ ಹೊರಬಿದ್ದ ರಾಮಕ್ಕ ಮಾತುಗಳು 

ಇದು, ಬುಧವಾರ, ಪ್ರಸಕ್ತ 2019ರ ಸಾಲಿನ ಏಪ್ರಿಲ್ 1 ರಂದು, ದೇವರ ಸೇವಕ ರಾಜೇಂದ್ರಸ್ವಾಮಿ ಪುಣ್ಯಕ್ಷೇತ್ರದ ವಾರ್ಷಿಕೋತ್ಸವ ಮತ್ತು ಮುನ್ನೂರನೆಯ ಪುಣ್ಯ ಸ್ಮರಣೆಯ ಆಚರಣೆಯ ಸಂದರ್ಭದಲ್ಲಿ ಮಾರಮ್ಮ ದೇವಿ ಗುಡಿಯ ಮುಂದಿನ ರಸ್ತೆಯ ಬಯಲಲ್ಲಿ, ಹನುಮಂತರಾಯನ ಗುಡಿಗೆ ಸಾಗುವ ದಾರಿಯಲ್ಲಿ ಹೂಡಿದ ದಾಸೋಹದ ಮಾಂಸದಡುಗೆಯ ದೊಡ್ಡ ಒಲೆಗಳು ಮತ್ತು ಪಾತ್ರೆಗಳನ್ನು ಕಂಡಾಗ ಹೊರಬಿದ್ದ ಚಿಕ್ಕರಸಿನಕೆರೆಯ ರಾಮಕ್ಕನ ನಿಟ್ಟುಸುರು. 

ರಾಜೇಂದ್ರಸ್ವಾಮಿ ವಾರ್ಷಿಕ ಉತ್ಸವಕ್ಕೆ ಬಂದೋರು ಬೇರೆ ಬೇರೆ ಕಡೆ ಪ್ರತ್ಯೇಕವಾಗಿ ಅಡುಗೆ ಮಾಡುತ್ತಾ ಗಬ್ಬೆಸುತ್ತಿದ್ದರು ಎಂಬುದು ಊರವರ ಆಕ್ಷೇಪವಾಗಿತ್ತು. ಈ ಬಾರಿ ಕಸ ವಿಲೇವಾರಿಗೂ ವ್ಯವಸ್ಥೆ ಮಾಡಿಕೊಂಡಿದ್ದು, ಶೌಚಾಲಯದ ವ್ಯವಸ್ಥೆ ಕಲ್ಪಿಸಿದ್ದು, ಊರವರ ಅಷ್ಟೇ ಅಲ್ಲ ವಾರ್ಷಿಕೋತ್ಸವಕ್ಕೆ ಬಂದ ವಿಶ್ವಾಸಿಕರ ಮೆಚ್ಚುಗೆಗೂ ಪಾತ್ರವಾಗಿತ್ತು. 

ಚಿಕ್ಕರಸಿನಕೆರೆ ಊರಿನ ಪ್ರಧಾನ ದೇವರು ಕಾಲಭೈರವೇಶ್ವರನ ಜಾತ್ರೆ ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಜರುಗುತ್ತದೆ. ಅದೇ ಸಮಯಕ್ಕೆ ಇಲ್ಲೂ ಉತ್ಸವ ನಡೆದರೆ ಸ್ವಲ್ಪ ವ್ಯತ್ಯಾಸಗಳಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. 

``ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ಕಾಲಭೈರವನ ಜಾತ್ರೆ ನಡೆದರೆ, ಜಾತ್ರೆಯ ಹಿಂದೆ ಮತ್ತು ಮುಂದೆ ಒಂದೊಂದು ವಾರಗಳ ಕಾಲ ಊರಲ್ಲಿ ಯಾರೂ ಮಾಂಸದ ಅಡುಗೆ ಮಾಡುವಂತಿಲ್ಲ. ಕಾಲಭೈರವನ ಜಾತ್ರೆಯ ಸಂದರ್ಭದಲ್ಲಿ ಊರವರು ಯಾರೂ ಮಾಂಸ ಮಾಡೊಲ್ಲ. ಆ ಜಾತ್ರೆಯ ಸಮಯ ಮೇ 1ರ ಆಸುಪಾಸಿನಲ್ಲಿ ಬಂದರೆ, ಇಲ್ಲಿ ಸ್ವಾಮಿ ರಾಜೇಂದ್ರ ಸ್ವಾಮಿಗಳ ವಾರ್ಷಿಕೋತ್ಸವ ನಡೆಸುವುದು ಕಷ್ಟದ ಕೆಲಸ. ಕಳೆದ ಬಾರಿ ಹಾಗೆಯೇ ಆಗಿತ್ತು. ಅಂದು ಮಾಂಸದ ಅಡುಗೆ ಮಾಡದೇ ಜಾತ್ರೆ ನಡೆಸಬೇಕಾಯಿತು. ಈ ಬಾರಿ ಕಾಲಭೈರವನ ಜಾತ್ರೆ ಮುಗಿದು ಬಹಳ ದಿನಗಳಾದ ಮೇಲೆ ರಾಜೇಂದ್ರಸ್ವಾಮಿ ಉತ್ಸವ ಬಂದದ್ದು ಒಳ್ಳೆಯದಾಯ್ತು'' ಉತ್ಸವಕ್ಕೆ ಬಂದಿದ್ದ ಅರಸಿಕೆರೆಯ ಕಾಂತರಾಜ್ ಅವರ ನುಡಿ ನೆಮ್ಮದಿಯ ಭಾವ ಹೊಮ್ಮಿಸಿತ್ತು. 

``ಐದು ವರ್ಷಗಳ ಹಿಂದೆ ಬೇರೆ ಬೇರೆ ದಿನ ಜನ ಬಂದು ಹೋಗುವರು. ಈಗ ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ ಮೇ ಒಂದು ರಂದು ಇಲ್ಲಿ ಬಂದು ಜಾತ್ರೆ ನಡೆಸುತ್ತಿದ್ದಾರೆ. ಬೇರೆ ಬೇರೆ ದಿನ ಬಂದ ಹೋಗುವವರಿಂದ, ಜಾತ್ರೆಯ ಒಂದು ದಿನದಿಂದ ತೊಂದರೆ ಏನಿಲ್ಲ. ಆದರೆ ಭಾನುವಾರವೇ ಊರವರಿಗೆ ತೊಂದರೆಯ ದಿನ. ಏಕೆಂದರೆ, ಭಾನುವಾರದ ಪೂಜೆಗೆ ಬರುವ ಸ್ವಲ್ಪ ಜನಕ್ಕೆ ಕೇಳುವಂತೆ ಪೂಜಾ ವಿಧಿಗಳನ್ನು ನಡೆಸಿದರೆ ಆದೀತು. ಆದರೆ, ಮೈಕು ಹಾಕಿಕೊಂಡು ಪೂಜೆ ನಡೆಸುವುದು ನಮಗೆ ಕಿರಕಿರಿ. ಒಂದು ಬಾರಿ ಈ ವಿಷಯವನ್ನು ಅವರ (ಫಾದರ್) ಗಮನಕ್ಕೆ ತಂದಿದೀನಿ. ಯಾಕೋ ಕಿವಿಗೆ ಹಾಕಿಕೊಂಡಂತಿಲ್ಲ'' ಎಂದು ಗ್ರಾಮದ ಸಿದ್ದರಾಜು ಅವರು ಅಲವತ್ತುಕೊಂಡರು. 

ಕಾರ್ತಿಕ ಮಾಸ ಮತ್ತು ರಾಜೇಂದ್ರಸ್ವಾಮಿ: 

ಉತ್ತರ ಗೋಳಾರ್ಧದಲ್ಲಿರುವ ಭಾರತದ ನಿವಾಸಿಗಳಿಗೆ ಸೂರ್ಯ ವೃಶ್ಚಿಕ ರಾಶಿ ಪ್ರವೇಶ ಮಾಡಿದ ಆನಂತರ ದೀಪಾವಳಿ ಹಬ್ಬವಾದ ಮೇಲೆ ಚಳಿಗಾಲದ ಪ್ರಾರಂಭವಾಗುವುದರ ಸಂಕೇತವಾದ ಕಾರ್ತಿಕ ಮಾಸ ಪವಿತ್ರವಾದ ಮಾಸ. ಈ ಮಾಸದ ಸೋಮವಾರಗಳು ಅತ್ಯಂತ ಪವಿತ್ರವಾದವು, ಮಂಗಳಕರವಾದವು ಎಂಬ ವಿಶ್ವಾಸದಿಂದ ಶಿವನನ್ನು ಆರಾಧಿಸಲಾಗುತ್ತದೆ. 

ಆಸ್ತಿಕರು, ಈ ಮಾಸದಲ್ಲಿ ಸೂರ್ಯೋದಯ ಸೂರ್ಯಾಸ್ತರ ಸಮಯಗಳಲ್ಲಿ ದೀಪ ಹಚ್ಚಿದರೆ ಸಂಪತ್ತು ಆರೋಗ್ಯ ವೃದ್ಧಿ ಕಟ್ಟಿಟ್ಟಬುತ್ತಿ ಎಂದು ನಂಬುತ್ತಾರೆ. 

ಪುರಾಣದಲ್ಲಿ ಬರುವ ಕ್ಷೀರಸಾಗರದ ಮಂಥನದಲ್ಲಿ ಹೊರಬಂದ ಲಕ್ಷ್ಮಿಯ ಸಹೋದರಿ ತುಳಸಿ ವಿಷ್ಣುವನ್ನು ವರಿಸಬೇಕೆಂದಿರುತ್ತಾಳೆ, ಶಾಪದ ದೆಸೆಯಿಂದ ಗಿಡವಾಗುತ್ತಾಳೆ. ಅವಳ ಆಸೆಯನ್ನು ಮನ್ನಿಸಿ ತಾನು ಸಾಲಿಗ್ರಾಮದ ರೂಪದಲ್ಲಿರುವಾಗ ತುಳಿಸಿ ತನಗೆ ಪ್ರೀಯ ಎಂದುವಿಷ್ಣು ಹೇಳಿದುದರಿಂದ, ಸಾಲಿಗ್ರಾಮಕ್ಕೆ ತುಳಸಿ ಅರ್ಪಿಸುವುದು ಶ್ರೇಷ್ಠ ಆಚರಣೆಯಾದರೆ, ಕಾರ್ತಿಕ ಮಾಸದ ಶುಕ್ಲ ದ್ವಾದಶಿ ದಿನದಂದು ತುಳಸಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. 

ಇದಲ್ಲದೇ ಆಷಾಡ ಶುಕ್ಲ ಏಕಾದಶಿ ದಿನದಂದು ನಿದ್ರೆಗಿಳಿಯುವ ವಿಷ್ಣು ಕಾರ್ತಿಕ ಶುಕ್ಲ ಏಕಾದಶಿ ದಿನದಂದು ಏಳುತ್ತಾನೆ, ಕಾರ್ತಿಕ ಮಾಸದ ಪೌರ್ಣಿಮೆಯಂದು ಶಿವ ತ್ರಿಪುರಾಸುರನನ್ನು ವಧೆ ಮಾಡಿದ್ದ ಎಂಬುದು ಆಸ್ತಿಕರ ನಂಬುಗೆ. ಈ ಮಾಸದಲ್ಲಿ ಪುರಾಣಗಳ ಪಾರಾಯಣವೂ ನಡೆಯುತ್ತದೆ. 

ಆಕಾರವಿಲ್ಲದ ಕಲ್ಲಿನಲ್ಲೂ ದೇವರನ್ನು ಕಾಣುವ, ಕಾಲಭೈರವ ದೇವಾಲಯದ ನಂದಿ ಬಸವಪ್ಪನನ್ನು ಶಿವನ ಅಪರಾವತಾರವೆಂದು ನಂಬುವ ಆಸ್ತಿಕ ಜನಪದರಿಗೆ ಎಲ್ಲಾ ದೈವಗಳೂ ಒಂದೇ. ಹತ್ತುಹಲವು ದೈವಗಳಿಗೆ ಹರಕೆಹೊರುವ ಹಳ್ಳಿಗಾಡಿನ ಜನಪದರಿಗೆ, ಚಿಕ್ಕರಸಿನಕೆರೆ ಗ್ರಾಮದ ಅಂಚಿನಲ್ಲಿರುವ ರಾಜೇಂದ್ರ ಸ್ವಾಮಿ ಸಮಾಧಿಯೂ ದೈವವಾಗಿ ಕಂಡಿದ್ದರಲ್ಲಿ ಅಚ್ಚರಿ ಏನೂ ಮೂಡದು. ರಾಜೇಂದ್ರಸ್ವಾಮಿ ಅವರಿಗೆ ಹತ್ತರಲ್ಲಿ ಇನ್ನೊಬ್ಬ ದೈವ ಅಷ್ಟೇ. 

ಇಂಥ ಬಗೆಯ ಚಿಂತನೆಯು ಜನಪದರದ್ದು. ಇಂಥ ಪರಿಸ್ಥಿತಿಯಲ್ಲಿ ತಮ್ಮ ಪವಿತ್ರವಾದ ಕಾರ್ತಿಕ ಮಾಸದಲ್ಲಿ ಚಿಕ್ಕರಸಿನಕೆರೆ ಊರವರೆಲ್ಲಾ ರಾಜೇಂದ್ರಸ್ವಾಮಿಗೆ ನಡೆದುಕೊಳ್ಳುವ ವಿದ್ಯಮಾನ ಒಂದು ಸಹಜ ಪ್ರಕ್ರಿಯೆ. ತಾವು ತಮ್ಮ ದೈವಗಳಿಗೆ ಮಾಡುವ ಸಕ್ಕರೆ, ಬೆಲ್ಲ, ಕೊಬ್ಬರಿ ಕೊಡುವುದು, ಪುರಿ ಹಂಚುವುದು, ದೀಪ ಹಚ್ಚುವುದು - ಮುಂತಾದವನ್ನು ರಾಜೇಂದ್ರ ಸ್ವಾಮಿಯ ಸಮಾಧಿ ಪುಣ್ಯಕ್ಷೇತ್ರದಲ್ಲಿ ಮಾಡುವುದನ್ನು ಅನಾಯಾಸವಾಗಿ ರೂಢಿಸಿಕೊಂಡಿರುವರು. ಇನ್ನು ಮುಂದೆ ಹೇಗೋ ಏನೋ ಗೊತ್ತಿಲ್ಲ. 

ಇಂದು, ಚರ್ಚು ಅಂದರೆ ಕಥೋಲಿಕ ಧರ್ಮಸಭೆಯು ರಾಜೇಂದ್ರಸ್ವಾಮಿ ಅವರ ಪುಣ್ಯಕ್ಷೇತ್ರದ ಮೇಲೆ ಹಕ್ಕು ಸಾಧಿಸಿಯಾಗಿದೆ. ಕ್ರೈಸ್ತರೇ ಇಲ್ಲದಿದ್ದರೂ ಕ್ರೈಸ್ತರ ಧಾರ್ಮಿಕ ಹೆಗ್ಗುರುತಾದ ಶಿಲುಬೆ, ಅಲ್ಲಿದ್ದ ಸಮಾಧಿ ಮತ್ತು ಚರ್ಚು ಹಾಳುಬಿದ್ದು ಉಳಿದಿದ್ದ ಪೂಜಾ ಪೀಠವನ್ನು ಕಾಪಾಡಿಕೊಂಡು ಬಂದಿದ್ದ ಚಿಕ್ಕರಸಿನಕೆರೆಯ ಜನಪದರಿಗೆ ಈಗ ಅಲ್ಲಿ ಏನೂ ಉಳಿದಿಲ್ಲ. ಏಕೆಂದರೆ ಅವರು (ಕಥೋಲಿಕ) ಕ್ರೈಸ್ತ ಪಂಥಕ್ಕೆ ಸೇರಿದವರಲ್ಲ. ಇದುವರೆಗೂ ಬಟಾಬಯಲಿನಲ್ಲಿದ್ದ ಸುಲಭವಾಗಿ ಜನಪದರ ಕೈಗೆ ಎಟಕುತ್ತಿದ್ದ ರಾಜೇಂದ್ರಸ್ವಾಮಿ ದೈವ ಈಗ ಅವರ ಪಾಲಿಗೆ ದೂರವಾಗುವನೋ ಎಂಬ ಭಾವ, ಅನಾಥ ಪ್ರಜ್ಞೆ ಕಾಡುತ್ತಿದ್ದರೆ ಅದಕ್ಕೆ ಯಾರನ್ನು ಹೊಣೆ ಮಾಡುವುದು. 

ನಮ್ಮ ನೆರೆಯ ರಾಜ್ಯ ಕೇರಳದಲ್ಲಿ, ಮೊದಲನೇ ಶತಮಾನದಲ್ಲಿಯೇ ಯೇಸುಕ್ರಿಸ್ತನ ಶಿಷ್ಯ ಥಾಮಸ್ ಸ್ವತಃ ಬಂದು ಕ್ರೈಸ್ತ ಧರ್ಮ ಬೋಧಿಸಿದ ಎನ್ನಲಾಗುತ್ತದೆ. ಅಲ್ಲಿನ ಜನಪದರಿಗೆ ಓಣಂ ರಾಜ್ಯದ ಸಕಲ ಜನತೆಯ ಹಬ್ಬ. ಹೀಗಾಗಿ ಅದು ಚರ್ಚಿನ ಅಂಗಳಕ್ಕೂ ಬಂದು ನಿಂತಿದೆ. ಓಣಂ ದಿನ ಕೇರಳದ ಚರ್ಚುಗಳ ಮುಂದೆ ರಂಗೋಲಿ ಬಿಡಿಸಿ ಸಂಭ್ರಮಿಸಲಾಗುತ್ತದೆ. ಸಂತ ಸೆಬೆಸ್ಟಿಯನ್ ಸ್ವಾಮಿ ಅಯ್ಯಪ್ಪನ ಸಹೋದರ ಎಂದು ಅಲ್ಲಿನ ಜನಪದರು ನಂಬುತ್ತಾರೆ! ತಮಿಳರಿಗೆ ಪೊಂಗಲ್ ದೊಡ್ಡ ಹಬ್ಬ. ಕನ್ನಡ ನಾಡಿನ ಸಂಕ್ರಾಂತಿಹಬ್ಬದ ಪ್ರತಿರೂಪವಾಗಿರುವ ಪೊಂಗಲ್ ಹಬ್ಬವನ್ನು ಚರ್ಚಿನಲ್ಲೂ ಆಚರಿಸಲಾಗುತ್ತದೆ. ಚರ್ಚುಗಳ ಅಂಗಳದಲ್ಲಿ ಮೂರು ಕಲ್ಲುಗಳ ಒಲೆಯ ಮೇಲೆ ಪೊಂಗಲ್ ಪಾತ್ರೆ ಇರಿಸಿ, ಕಬ್ಬಿನ ಜಲ್ಲೆಗಳನ್ನು ನಿಲ್ಲಿಸಿ ಸಂಭ್ರಮಿಸುತ್ತಾರೆ. ಯಾಕೋ ಏನೋ? ಕನ್ನಡನಾಡಿನ ಪ್ರಮುಖ ಹಬ್ಬಗಳಾದ ಯುಗಾದಿ ಮತ್ತು ಸಂಕ್ರಾಂತಿಗಳು ಚರ್ಚಿನ ಅಂಗಳಕ್ಕೆ ಬರಲು ಇನ್ನೂ ಸಾಧ್ಯವಾಗಿಲ್ಲ. 

ಕನಿಷ್ಠ ಚಿಕ್ಕರಸಿನಕರೆಯಲ್ಲಿರುವ ಶ್ರೀ ರಾಜೇಂದ್ರಸ್ವಾಮಿ ಪುಣ್ಯಕ್ಷೇತ್ರದಲ್ಲಿ ಅಲ್ಲಿನ ಜನಪದರ ಭಾವನೆಗಳಿಗೆ ಬೆಲೆಕೊಟ್ಟು, ಕಥೋಲಿಕ ಧರ್ಮಸಭೆಯು ಕಾರ್ತಿಕ ಮಾಸದಲ್ಲಿ ಅವರುಗಳ ಪದ್ಧತಿಯಲ್ಲಿ ಸ್ವಾಮಿಯನ್ನು ಮುಕ್ತವಾಗಿ ಆರಾಧಿಸಲು ಅನುವು ಮಾಡಿಕೊಟ್ಟರೆ, ಕ್ರೈಸ್ತರ ಅನುಪಸ್ಥಿತಿಯಲ್ಲಿ ಮುನ್ನೂರು ವರ್ಷಗಳ ಕಾಲ ಸಮಾಧಿ ಸ್ಥಳ ಮತ್ತು ಪೂಜಾಪೀಠವನ್ನು ಕಾಪಾಡಿಕೊಂಡು ಬಂದಿದ್ದ ಜನಪದರಿಗೆ ಕೃತಜ್ಞತೆ ಸಲ್ಲಿಸಿದಂತಾಗುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ಹರಿಹರದ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದಲ್ಲಿ ತೆಂಗಿನ ಕಾಯಿ ಒಡೆಯಲು ಅವಕಾಶ ಕಲ್ಪಿಸಲಾಗಿದೆ. ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಕರೆಗಾರರ ಅಮ್ಮನ ಹಬ್ಬದ ಆಚರಣೆಯನ್ನು ಕಥೋಲಿಕ ಧರ್ಮಸಭೆ ಆದರದಿಂದ ಕಾಣುತ್ತಿರುವ ಉದಾಹರಣೆ ನಮ್ಮ ಮುಂದೆ ಇದೆ. 

ಈಗ, ಈ ಚಿಕ್ಕರಸಿನಕೆರೆಯ ರಾಜೇಂದ್ರಸ್ವಾಮಿ ಕಥೋಲಿಕ ಕ್ರೈಸ್ತರಿಂದ `ದೇವರ ಸೇವಕ ರಾಜೇಂದ್ರಸ್ವಾಮಿ' ಎಂದು ಕರೆಯಿಸಿಕೊಳ್ಳುತ್ತಿದ್ದಾನೆ. ರಾಜೇಂದ್ರಸ್ವಾಮಿ ಮಠ ಎಂದು ಸರ್ಕಾರಿ ದಾಖಲೆ ಗುರುತಿಸಿದ್ದ ಸಮಾಧಿಸ್ಥಳ ಇಂದು ದೇವರ ಸೇವಕ ರಾಜೇಂದ್ರಸ್ವಾಮಿ ಪುಣ್ಯಕ್ಷೇತ್ರ ಎಂಬ ಹೊಸ ಹೆಸರಿನಿಂದ ಗುರುತಿಸಿಕೊಳ್ಳುತ್ತಿದೆ. 




No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...