Sunday, 12 May 2019

ನೀರು ಉಳಿಸಿ....ಪ್ರಕೃತಿ ಬೆಳೆಸಿ - ಡಾ.ಸಿಸ್ಟರ್ ಪ್ರೇಮ (ಎಸ್.ಎಮ್.ಎಮ್.ಐ)


ನೀರು ನಮ್ಮ ಉಸಿರು. ಉಸಿರು ಚಿರಕಾಲ ಉಳಿಯಬೇಕಾದರೆ ಬೇಕಾಗಿದೆ ನೀರು. ನೀರಿಲ್ಲದೆ ಯಾವ ಜೀವಿಯೂ ಜೀವಿಸಲಾರದು. ಆಹಾರ ಇಲ್ಲದೆ ಬದುಕಲು ಪ್ರಯತ್ನಿಸಬಹುದು ಆದರೆ ನೀರು ಇಲ್ಲದೆ ಬದುಕಲು ಸಾಧ್ಯವೇ ಇಲ್ಲ. ಪ್ರತಿನಿತ್ಯ ನಮ್ಮ ಬದುಕಿನಲ್ಲಿ ನೀರಿನ ಅವಶ್ಯಕತೆ ಇದೆ. 

ನೀರು ಭೂಮಿಯ ಮೇಲಿರುವ ದೇವರ ಅಮೂಲ್ಯ ಕೊಡುಗೆಯಾಗಿದೆ. ನೀರಿನ ಲಭ್ಯತೆಯಿಂದಾಗಿ ಭೂಮಿಯ ಮೇಲೆ ಜೀವನವು ಅಸ್ತಿತ್ವದಲ್ಲಿದೆ. ಸ್ವತಃ ಆಕಾರ, ರುಚಿ, ವಾಸನೆಯನ್ನು ಹೊಂದಿರದ ಮತ್ತು ವರ್ಣರಹಿತವಾಗಿರುವ ಈ ನೀರು ಭೂಮಿಯ ಮೇಲೆ ಜೀವಂತ ಜೀವಿಗಳ ಜೀವನದಲ್ಲಿ ರುಚಿ, ಬಣ್ಣ ಮತ್ತು ಉತ್ತಮ ವಾಸನೆಯನ್ನು ಸೇರಿಸುತ್ತದೆ. ನಮ್ಮಿಂದ ಏನನ್ನೂ ಅಪೇಕ್ಷಿಸದ ನೀರು ನಮಗೆ ಜೀವವನ್ನು ಕೊಡುತ್ತದೆ. ಇದು ಸರ್ವಸ್ವದ ಉಳಿವಿಗಾಗಿ ಇರುವ ಅತ್ಯಂತ ಮೇಲ್ಮಟ್ಟದ ಸಂಪನ್ಮೂಲ. 

ದಿನ ಪ್ರಾರಂಭವಾಗುವುದು ನೀರಿನ ಸೇವನೆಯಿಂದಾದರೆ ಆದು ಮುಕ್ತಾಯವಾಗುವುದು ಕೂಡ ಅದರಿಂದಲ್ಲೇ ಎಂಬ ಸತ್ಯವನ್ನು ನಾವು ಯಾರೂ ಮರೆಯಬಾರದು. ಈಗಾಗಲೇ ಬೇಸಿಗೆ ಕಾಲ ಆರಂಭವಾಗಿದ್ದು ಎಲ್ಲಾ ಕಡೆಗಳಲ್ಲೂ ನೀರಿನ ಅಭಾವ ತಲೆದೂರುತ್ತಿರುವುದು ಬಹು ವಿಪರ್ಯಾಸದ ವಿಷಯ. ಮುಂಬರಲಿರುವ ದಿನಗಳಲ್ಲಿ ನಮ್ಮ ದಣಿವನ್ನು ನೀಗಲು ಒಂದು ಲೋಟ ನೀರು ಸಿಗುತ್ತಾ ಎಂಬ ಸಂದೇಹ ನಮ್ಮನೆಲ್ಲ ಕಾಡಬೇಕಾಗಿದೆ, ಏಕೆಂದರೆ ಪರಿಸರಮಾಲಿನ್ಯ, ಗಿಡ-ಮರಗಳ ನೆಲಸಮ, ಇತ್ಯಾದಿಗಳಿಂದ ಕಾಲಕ್ಕೆ ತಕ್ಕಂತೆ ಮಳೆ ಆಗದೆ ಕೆರೆ-ಬಾವಿಗಳು ಬತ್ತಿ ನೀರಿಗಾಗಿ ಎಲ್ಲೆಡೆ ಹಾಹಾಕಾರ ಕೇಳಿ ಬರುತ್ತಿದೆ. ಈ ರೀತಿಯಾಗಿ ಪಕೃತಿ ವಿಕೋಪಕ್ಕೆ ಈಗಾಗಲೇ ನಾವೆಲ್ಲರು ತುತ್ತಾಗಿದ್ದೇವೆ. ಇದಕ್ಕೆ ಕಾರಣಗಳು ಹಲವಾರು. ಉದಾಹರಣೆಗೆ ಗಿಡ-ಮರಗಳ ನೆಲಸಮ, ನಾಯಿಕೊಡೆಗಳೆಂತೆ ತಲೆ ಎತ್ತುತ್ತಿರುವ ಗಗನಚುಂಬಿ ವಸತಿ ಸಂಕೀರ್ಣಗಳು, ಐ.ಟಿ ಪಾರ್ಕ್‌ಗಳು, ಬೃಹತ್ ಮಾಲ್‌ಗಳು ಒಂದೆಡೆಯಾದರೆ, ಮತ್ತೊಂದಡೆ ಕೈತೊಳೆಯಲು ಕೂಡ ನೀರು ಇಲ್ಲದಿರುವಾಗ, ಕೆಲ ಅಪಾರ್ಟ್‌ಮೆಂಟುಗಳಲ್ಲಿ ಜನರು ಈಜುಗೊಳದಲ್ಲಿ ಈಜಾಡುತ್ತಿರುವುದು, ಕುಡಿಯಲು ನೀರಿಗೆ ಹಾಹಾಕಾರವಿರುವಾಗ, ಪೈಪ್ ಬಿಟ್ಟು ಮನೆಮುಂದಿನ ರಸ್ತೆಯನ್ನು ತೊಳೆಯುತ್ತ ನೀರನ್ನು ಪೋಲು ಮಾಡುತ್ತಿರುವುದು ಇತ್ಯಾದಿ. ಹೀಗಿರುವಾಗ ಹೇಗೆ ನಾವು ನೀರಿನ ಸಂರಕ್ಷಣೆ ಮಾಡಲು ಸಾಧ್ಯ? ಒಂದು ವೇಳೆ ಈಗ ನೀರಿನ ಸಂರಕ್ಷಣೆಯಾಗದಿದ್ದಲ್ಲಿ ಮುಂದಿನ ಪೀಳಿಗೆಯ ಗತಿಯೇನು? 

ನಾವೆಲ್ಲರೂ ನಮ್ಮ ಬೇಜವಾಬ್ದಾರಿ ಬಿಟ್ಟು ನೀರಿನ ಮೌಲ್ಯವನ್ನು ಅರಿತು ಅದನ್ನು ಮಿತವಾಗಿ ಉಪಯೋಗಿಸಲು ಪ್ರಯತ್ನಿಸಿದಾಗ ಮಾತ್ರ ನೀರಿನ ಸಂರಕ್ಷಣೆ ಸಾಧ್ಯ. ನೀರು ಕೇವಲ ಏಕ ವ್ಯಕ್ತಿಯ ಸ್ವತ್ತಲ್ಲ ಬದಲಾಗಿ ಸರ್ವರ ಸಂಪತ್ತು, ಸರ್ವರ ಪಾಲು ಹಾಗೂ ಸಕಲ ಸೃಷ್ಟಿಯ ಅದಮ್ಯ ಆಸ್ತಿ ಇದರ ಉಪಯೋಗ ಎಲ್ಲರಿಗೂ ಆಗಬೇಕು. ಬದುಕುವುದಕ್ಕಾಗಿ ನೀರು, ಆರೋಗ್ಯಕ್ಕಾಗಿ ನೀರು, ಅಭಿವೃದ್ಧಿಗಾಗಿ ನೀರು ಹಾಗು ಭವಿಷ್ಯಕ್ಕಾಗಿ ನೀರು ಎಂಬುದನ್ನರಿತು ಈ ಭೂಮಿಯ ಮೇಲಿರುವ ಜೀವ ವೈವಿಧ್ಯವೇ ನನ್ನ, ನನ್ನ ಕುಟುಂಬದ ಮತ್ತು ಪ್ರಪಂಚದಾದ್ಯಂತ ಇರುವ ನನ್ನ ಸಹಪೌರರ ಉಳಿವಿನ ಬುನಾದಿಯೆನ್ನುವುದನ್ನು ಒಪ್ಪಿಕೊಂಡು ನಾವೆಲ್ಲರು ನೀರನ್ನು ಹಿತ-ಮಿತವಾಗಿ ಬಳಕೆ ಮಾಡುತ್ತಾ ನಮ್ಮ ಮುಂದಿನ ಪೀಳಿಗೆಗೆ ಬದುಕಲು ಅನುವು ಮಾಡಿಕೊಡುತ್ತಾ ನೀರನ್ನು ಉಳಿಸಿ, ಪ್ರಕೃತಿಯನ್ನು ಉಳಿಸಲು ಪಣತೊಡೋಣ. 



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...