Sunday, 12 May 2019

ಆಗು ಹೋಗುಗಳ ನಡುವೆ....ಜೋವಿ


ಈ ಬೆಳಕು ಕಣ್ಣು ತೆರಸುತ್ತಲೇ ಇದೆ…. 

ಈಸ್ಟರ್ ಹಬ್ಬದ ಸಂಭ್ರಮದಲ್ಲಿ ಈಸ್ಟರ್ ಬಗ್ಗೆ ಒಂದು ವಿಶೇಷ ಬೆಳಕು ಮೂಡಿತ್ತು. ಈಸ್ಟರ್ ಅಂದ್ರೆ ಕ್ರಿಸ್ತನ ಪ್ರಾಮಾಣಿಕತೆಗೆ ಸಂದ ಅತ್ಯುತ್ತಮ ಗೌರವ ಅಥವಾ ಸಂಭಾವನೆ ಎಂದೇ ಹೇಳಬಹುದು. ಕೊಟ್ಟ ಕಾರ್ಯವನ್ನು ಸಂಕಲ್ಪಹೊತ್ತು ದಿಟ್ಟತನದಿಂದ ಹೋರಾಡಿ ಸಂಪೂರ್ಣಗೊಳಿಸಿದ ಕ್ರಿಸ್ತನಿಗೆ ದೇವರು ಹಾಕಿದ ಋಜು ಅದು. ವಹಿಸಿದ ಕೆಲಸಕ್ಕೆ ಪ್ರಾಮಾಣಿಕವಾಗಿರುವುದು ಸುಲಭದ ಮಾತಲ್ಲ. ಕಾರ್ಯದ ಈಡೇರಿಕೆಯ ಸಂದರ್ಭದಲ್ಲಿ ಅಥವಾ ಪಕ್ರಿಯೆಯಲ್ಲಿ ಲೆಕ್ಕಕ್ಕೆ ಸಿಗದಷ್ಟು ಕಷ್ಟ ಹಿಂಸೆ ನೋವುಗಳು ಸಾಧಕನನ್ನು ಮುತ್ತಿಕೊಳ್ಳುತ್ತಿರುತ್ತವೆ. ಅದರಲ್ಲೂ ಶೋಧನೆಗಳು ಎಂಬುವುದು ಇದೆಯಲ್ಲಾ, ಕಠಿಣ ಪರೀಕ್ಷೆಗಳಿಗೆ ಒಡ್ಡಿ ನಮ್ಮ ಜೀವವನ್ನೇ ಹಿಂಡುಬಿಡುತ್ತವೆ. ಅದಕ್ಕೆ ಕ್ರಿಸ್ತ ಶಿಲುಬೆ ಹೊತ್ತಿಕೊಳ್ಳುವ ಮುಂಚೆ ಗೆತ್ಸೆಮನಿ ತೋಟದಲ್ಲಿ ದೇವರನ್ನು ಅತ್ತು ಕಾಡಿ ಬೇಡಿ ಸಾಧ್ಯವಾದರೆ ನನ್ನಿಂದ ಈ ಕಷ್ಟದ ಪಾತ್ರೆಯನ್ನು ದೂರಮಾಡು ಎಂದು ಹೇಳುತ್ತಲೇ … ಆದರೂ ಇದು ನನ್ನ ಚಿತ್ತವಲ್ಲ ನಿನ್ನ ಚಿತ್ತವೆಂದು ದೇವರಿಗೆ ತನ್ನನ್ನೇ ಸಂಪೂರ್ಣವಾಗಿ ಅರ್ಪಿಸಿಬಿಡುತ್ತಾನೆ. ತನ್ನ ವೇದನೆಯನ್ನೇ ಪ್ರಾರ್ಥನೆಯಾಗಿಸಿ ಬಿಡುತ್ತಾನೆ. 

ಹೌದು ಅವನ ಮಿಷನ್ ಏನಾಗಿತ್ತು? ದೇವರ ಮತ್ತು ಮನುಷ್ಯರ ನಡುವೆ, ಮನುಷ್ಯ ಮನುಷ್ಯರ ನಡುವೆ ಹದಗೆಟ್ಟಿದ್ದ ಸಂಬಂಧವನ್ನು ಪುನರ್ ಸ್ಥಾಪಿಸುವುದು ಅವನ ಗುರಿ ಆಗಿತ್ತು. ಅದ್ದರಿಂದ ದೇವರ, ಮನುಷ್ಯರ ಮತ್ತು ಮನುಷ್ಯರ ನಡುವೆ ಇರಬೇಕಾಗಿದ್ದ ಆತ್ಮೀಯ ಸಂಬಂಧವನ್ನು ಬಿರುಕುಗೊಳಿಸುವ ಎಲ್ಲಾ ವ್ಯವಸ್ಥೆಗಳನ್ನು, ಆಚಾರ ವಿಚಾರಗಳನ್ನು, ಸಿದ್ಧಾಂತಗಳನ್ನು ಮತ್ತು ಅವುಗಳ ಪೋಷಕರನ್ನು, ಪ್ರತಿಪಾದಕರನ್ನು ಧೈರ್ಯವಾಗಿ ಖಂಡಿಸಿದ. ಅಧಿಕಾರಸ್ಥರನ್ನು ಎದುರು ಹಾಕಿಕೊಳ್ಳುವುದು ಸುಲಭ ಮಾತಲ್ಲ. ಈ ಕಾರಣದಿಂದಾಗಿ ಗುರಿ ಕಡೆಗೆ ಅವನಿಟ್ಟ ಪ್ರತಿಯೊಂದು ಹೆಜ್ಜೆಗೂ ಪ್ರತಿರೋಧ ಕಾಣತೊಡಗಿತ್ತು, ಲೆಕ್ಕವಿಲ್ಲದಷ್ಟು ತಕರಾರುಗಳು ಅವನ ಮುತ್ತಿಕೊಂಡಿದ್ದವು. ಆದರೂ ಅವನು ಹಿಂದಿರುಗಿ ನೋಡಲಿಲ್ಲ. ಕೊನೆಗೆ ಅವನ ಕಾರ್ಯಸಾಧನೆಗೆ ಜೀವವನ್ನೇ ಬಲಿ ಕೇಳಿತ್ತು. ಅದನ್ನು ಕೂಡ ನಮ್ರ ಭಾವದಿಂದ ಶಿಲುಬೆ ಎಂಬ ಬಲಿಪೀಠದ ಮೇಲೆ ಅರ್ಪಿಸಿದ. ಆ ಕಾರಣಕ್ಕಾಗಿ ದೇವರು ಕ್ರಿಸ್ತನನ್ನು ಉನ್ನತಿಗೇರಿಸಿದರು. ಕ್ರಿಸ್ತನನ್ನು ಉನ್ನತಿಗೇರಿಸಿದ ಕ್ಷಣವೇ ಈಸ್ಟರ್. 

ಇಂದು ನಾವು ಪುನರುತ್ಥಾನದ ಕ್ರಿಸ್ತನನ್ನು ಭೇಟಿ ಮಾಡಬೇಕಾದರೆ ಸಮಾಧಿಗೆ ಹೋಗಬೇಕಾಗಿಲ್ಲ. ದೂತನು ಹೇಳಿದಂತೆ ಸತ್ತವರ ಮಧ್ಯ ಹುಡುಕಿದರೆ ಕ್ರಿಸ್ತ ನಮಗೆ ಸಿಗುವುದಿಲ್ಲ. ಕ್ರಿಸ್ತ ಎಲ್ಲಿ ಜೀವಿಸಿದನೋ ಅಲ್ಲಿ ಹುಡುಕಿದರೆ ನಮಗೆ ಖಂಡಿತ ಸಿಗುತ್ತಾನೆ. ಅಂದರೆ ಅವನ ಪುನರುತ್ಥಾನದ ಅನುಭವ ನಮಗೆ ಆಗಬೇಕಾದರೆ ಕ್ರಿಸ್ತ ಜೀವಿಸಿದ ಕಡೆ ಹೋಗೋಣ. ಅಲ್ಲಿ ನಿಸ್ಸಂದೇಹವಾಗಿ ನಮಗೆ ಸಿಗುವನು. ಕ್ರಿಸ್ತ ಹೇಳಿದ ಕಥೆಗಳಲ್ಲಿ, ಮಾಡಿದ ಅದ್ಭುತಗಳಲ್ಲಿ, ಕಲಿಸಿದ ಪ್ರಾರ್ಥನೆಗಳಲ್ಲಿ, ಕ್ಷಮಿಸಿದ ಜನರಲ್ಲಿ, ಅವನ ಬೋಧನೆಯಲ್ಲಿ, ಶಿಷ್ಯರಲ್ಲಿ, ರೊಟ್ಟಿಮುರಿದು ಹಂಚುವುದರಲ್ಲಿ, ಪಾದ ತೊಳೆಯುವುದರಲ್ಲಿ, ಸೈತಾನನನ್ನು ಅಟ್ಟಿಸುವುದರಲ್ಲಿ, ಕ್ಷಮಿಸುವುದರಲ್ಲಿ ಖಂಡಿತ ನಮಗೆ ಸಿಗುವನು. ಅಲ್ಲಿ ಅವನನ್ನು ಭೇಟಿ ಮಾಡೋಣ. ಅವನು ನಮ್ಮ ನೋಡಿ ’ನಿಮಗೆ ಶಾಂತಿ’ ಎಂದು ಹೇಳಲು ಮಾತ್ರ ಮರೆಯುವುದಿಲ್ಲ. 



ನಮ್ಮ ಚುನಾವಣೆಯ ಆಟ… 

ಒಬ್ಬನ ನಿಜಗುಣವನ್ನು ತಿಳಿಯಬೇಕಾದರೆ ಅವನನ್ನು ಆಟದ ಮೈದಾನದಲ್ಲಿ ಆಟವಾಡುವಾಗ ಗಮನಿಸಿ ನೋಡು…ಎಂದು ನನ್ನ ಟೀಚರ್ ಯಾವಾಗಲೂ ನನಗೆ ಹೇಳುತ್ತಿದ್ದರು. ಅವನ ಪ್ರಾಮಾಣಿಕತೆ, ಆಕ್ರಮಣ ಸ್ವಭಾವ, ಮೋಸದಾಟ, ವಾದವಿವಾದಗಳು, ಯುಕ್ತಿ, ಗೆಲುವು, ಸೋಲುಗಳನ್ನು ಸ್ವೀಕರಿಸುವ ರೀತಿ, ಉತ್ಸಾಹ, ಹುಮ್ಮಸ್ಸು, ಹಗೆತನ, ಅಹಂ, ಸಾಚಾತನ, ಪಾಲಿಸುವ ತಂತ್ರ ಪ್ರತಿತಂತ್ರಗಳು, ಕೌಶಲ್ಯಗಳು ಹೀಗೆ ಆಟಗಾರನ ಪ್ರತಿಯೊಂದು ವಿಷಯವೂ ಆಟದಲ್ಲಿ ಸಾಕಾರಗೊಳ್ಳುತ್ತವೆ. ಒಳಗಿರುವುದೇ ಹೊರಗೆ ಕಾಣುವುದಲ್ಲವೇ? ಅದರಲ್ಲೂ ಅವನಿಗೆ ಗುಂಪಿನ ನಾಯಕನ ಜವಬ್ದಾರಿ ಕೊಟ್ಟುಬಿಟ್ರೆ ಅವನ ನಿಜರೂಪ ನಿಧಾನವಾಗಿ ನಮಗೆ ಗೋಚರಿಸಲು ಪ್ರಾರಂಭವಾಗುತ್ತದೆ. 

ಹೌದು, ರಾಜಕೀಯ ಪಕ್ಷ ಅಥವಾ ನಮ್ಮ ರಾಜಕೀಯ ನಾಯಕರ ಬಗ್ಗೆ ತಿಳಿದುಕೊಳ್ಳಬೇಕೇ? ಅವರು ಆಡುವ ಚುನಾವಣೆ ಎಂಬ ಆಟವನ್ನು ನಾವು ತದೇಕಚಿತ್ತದಿಂದ ಗಮನಿಸುವುದು ಸೂಕ್ತವೆನ್ನಿಸುತ್ತದೆ. ಚುನಾವಣೆ ಮುಂಚೆ ಅವರು ಬಿಡುಗಡೆಗೊಳಿಸುವ ಪ್ರಣಾಳಿಕೆಗಳು, ನಡೆಸುವ ರ್ಯಾಲಿಗಳು, ಪ್ರಚಾರಸಭೆಗಳು, ಭಾಷಣಗಳು, ಹೇಳಿಕೆಗಳು, ಏರ್ಪಡುವ ಮೈತ್ರಿಗಳು, ದೂರುವ ಪ್ರವೃತ್ತಿಗಳು, ಮತಬೇಟೆಯ ತಂತ್ರಗಳು, ಜಾತಿಲೆಕ್ಕಾಚಾರಗಳು, ಟಿಕೇಟ್ ಕೊಟ್ಟ ಅಭ್ಯರ್ಥಿಗಳು, ಅವರ ಹಿನ್ನೆಲೆಗಳು, ಸ್ಟಾರ್ ಪ್ರಚಾರಕರು ಇತ್ಯಾದಿ ಇವೆಲ್ಲಾ ಪಕ್ಷದ ಬಗ್ಗೆ ನಮಗೆ ಒಮ್ಮೆಲೇ ತಿಳಿಸಿಬಿಡುತ್ತವೆ. ಆದರೆ ಅಷ್ಟು ಸುಲಭವಾಗಿ ಇಂತಹ ಸೂಕ್ಷ್ಮಗಳು ನಮಗೆ ಅರ್ಥವಾಗಿಬಿಡುವುದಿಲ್ಲ. ಎಲ್ಲವನ್ನೂ ಸಮಷ್ಟಿಯಾಗಿ ಗ್ರಹಿಸಿ ಅರ್ಥಮಾಡಿಕೊಳ್ಳಬೇಕಾದ ಬುದ್ಧಿವಂತಿಕೆ ಬೇಕಷ್ಟೆ. 

17ನೇ ಲೋಕಸಭಾ ಚುನಾವಣೆಯ ಕೆಲವೊಂದು ಹಂತಗಳ ಮತದಾನ ಮುಗಿದಿದೆ. ಇನ್ನೂ ಕೆಲವು ಹಂತಗಳ ಮತದಾನ ಬಾಕಿಯಿದ್ದು ಮೇ 23ರೊಳಗೆ ಎಲ್ಲಾ ಹಂತಗಳ ಮತದಾನದ ಪ್ರಕ್ರಿಯೆ ಪೂರ್ಣಗೊಂಡು ಚುನಾವಣೆ ಪಲಿತಾಂಶ ಹೊರಬೀಳುವುದು. ಈಗಾಗಲೇ ನಾನಾ ಸಮೀಕ್ಷೆಗಳು ತಮ್ಮ ಗುಣಕಾರ, ವ್ಯವಕಲನ, ಸಂಕಲನಗಳ ಲೆಕ್ಕಚಾರಗಳಿಂದ ಚುನಾವಣಾ ಪಲಿತಾಂಶದ ಬಗ್ಗೆ ಭವಿಷ್ಯ ನುಡಿಯುತ್ತಿರುವುದು ನಮಗೆ ಗೊತ್ತೇ ಇದೆ. ಆದರೆ ನಾವು ಇಲ್ಲಿ ಗ್ರಹಿಸಿಕೊಳ್ಳಬೇಕಾಗಿರುವುದು ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು, ಆ ಪಕ್ಷಗಳ ವಕ್ತಾರರು ಎಸಗಿದ ಪ್ರಮಾದಗಳನ್ನು. 

ಮೊದಲನೇಯದಾಗಿ ಪ್ರಧಾನ ಮಂತ್ರಿಯ ಭಾಷಣ ವೈಖರಿ. ಅವರೊಬ್ಬ ಪ್ರಖರ ವಾಗ್ಮಿ ಎಂದು ಅವರ ಭಾಷಣಗಳು, ಭಾಷೆ ಪ್ರಯೋಗಗಳು ನಿಸ್ಸಂದೇಹವಾಗಿ ಹೇಳುತ್ತವೆ. ಆದರೆ ಅವರ ಭಾಷಣದ ವಸ್ತುವಿಷಯಗಳನ್ನು ಗಮನವಿಟ್ಟು ಕೇಳಿದ್ದೇ ಆದಲ್ಲಿ ನಮಗೆ ನಿರಾಶೆಯಾಗುವುದರಲ್ಲಿ ಸಂಶಯವೇ ಇಲ್ಲ. ಇತರ ರಾಜಕಾರಣಿಗಳನ್ನು ಮತ್ತು ರಾಜಕೀಯ ಪಕ್ಷಗಳನ್ನು ಮೂದಲಿಸುವುದರಲ್ಲಿ ಕಾಲಕಳೆದರೇ ವಿನಃ ತಾನು ಐದು ವರ್ಷಾವಧಿಯಲ್ಲಿ ಮಾಡಿದ ತಪ್ಪುಒಪ್ಪುಗಳನ್ನು ಹೇಳಲೇ ಇಲ್ಲ. ಕೊನೆಗೆ ಭವಿಷ್ಯದಲ್ಲಿ ಮಾಡಬೇಕೆಂದಿರುವ ಮುಖ್ಯ ಯೋಜನೆಗಳನ್ನು ಸಹ ಪ್ರಸ್ತಾಪ ಮಾಡಲಿಲ್ಲ. ಮಾಡಿದರೂ ಅವುಗಳಿಗೆ ಅಷ್ಟು ಪ್ರಾಮುಖ್ಯತೆಯನ್ನು ಕೊಡಲಿಲ್ಲ. 

ದೇಶದ ಭದ್ರತೆ ಅಪಾಯದಲ್ಲಿದೆ ಸೂಕ್ತ ಭದ್ರತೆಯನ್ನು ಒದಗಿಸಬಲ್ಲ ಸೂಕ್ತ ನಾಯಕ ನಾನೊಬ್ಬನೇ, ನನ್ನನ್ನು ಆರಿಸಿ ಗೆಲ್ಲಿಸಿ ಎಂದು ಬಾಯಿ ಹರಿದೋಗುವಂತೆ ಕಿರುಚಿಕೊಂಡರೇ ವಿನಃ ದೇಶದ ಅಭದ್ರತೆಗೆ ಕಾರಣಗಳೇನು… ಹೇಗೆ ನಮ್ಮ ದೇಶದ ಭದ್ರತೆ ಇದ್ದಕ್ಕಿದ್ದಂತೆ ಅಪಾಯದ ಹಂತಕ್ಕೆ ತಲಪಿದ್ದು? ಎಂಬ ಪ್ರಶ್ನೆಗಳಿಗೆ ಅವರಲ್ಲಿ ಉತ್ತರವಿದ್ದಂತೆ ಕಂಡುಬರಲಿಲ್ಲ. ಕೆಲವೊಂದು ಕಡೆ ತಪ್ಪು ಅಂಕಿ ಅಂಶಗಳನ್ನು ಉಲ್ಲೇಖಿಸಿ ತನ್ನ ತಪ್ಪುಗಳನ್ನು, ವೈಫಲ್ಯಗಳನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದು, ಸುಳ್ಳು ರಾಷ್ಟ್ರವಾದದ ನೆರಳಿನಲ್ಲಿ ಜನರನ್ನು ಪ್ರಚೋದಿಸಿದ್ದು ನಮಗೆ ಗೊತ್ತೇ ಇದೆ. ಒಟ್ಟಾರೆ ಒಬ್ಬ ಗೌರವಾನ್ವಿತ ರಾಜಕಾರಣಿಗೆ ಅಥವಾ ಮುತ್ಸದ್ದಿಗೆ ಇರಬೇಕಾದ ಗಾಂಭೀರ್ಯ, ಪ್ರೌಢಿಮೆ ಇವರಲ್ಲಿ ಕಾಣಲಿಲ್ಲ. 

ಜತೆಗೆ ದೇಶದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿಲ್ಲ. ಸಲೀಸಾಗಿ ನಿರರ್ಗಳ ಮಾತುಗಳನ್ನಾಡುವ ನಮ್ಮ ಪ್ರಧಾನಿ ಮೋದಿಯವರು ಐದು ವರ್ಷಗಳ ಕಾಲ ಪತ್ರಿಕಾ ಸಂದರ್ಶನಗಳನ್ನು ಕೊಡದೆ, ಪತ್ರಕರ್ತರನ್ನು ಮುಖಾಮುಖಿಯಾಗದೆ, ಸಾಂಪ್ರದಾಯಿಕ ಪತಿಕಾಗೋಷ್ಠಿಗಳನ್ನು ನಡೆಸದೆ ಅಂತರ ಕಾಯ್ದುಕೊಂಡಿದ್ದರು. ಆದರೆ ಈಗ ಪ್ರಾಯೋಜಿತ ಸಂದರ್ಶನಗಳನ್ನು ಕೊಡುವುದರಲ್ಲಿ ಬ್ಯುಸಿ ಇದ್ದಾರೆ. 

ಎರಡನೇಯದಾಗಿ ಚುನಾವಣೆಯ ಸಂದರ್ಭದಲ್ಲಿ ನಡೆದ ಐಟಿ ರೇಡ್ ಗಳು. ಕೇವಲ ವಿರೋಧ ಪಕ್ಷದವರನ್ನು ಗುರಿಯಾಗಿಸಿಕೊಂಡು ರೇಡ್ ಗಳು ನಡೆದಿದ್ದು ದುರದೃಷ್ಟಕರ. ಹೌದು, ದುಡ್ಡು ಹಂಚಿ ಮತ ಪಡೆಯುವುದನ್ನು ತಡೆಯಲು ಕೆಲ ಅಭ್ಯರ್ಥಿಗಳ ಮತ್ತು ಅಭ್ಯರ್ಥಿಗಳ ಸಂಬಂಧಿಕರ ಮೇಲೆ ಐಟಿ ದಾಳಿ ಅಗಿದ್ದು ಒಪ್ಪಲೇ ಬೇಕು. ಮತದಾನವು ನ್ಯಾಯಯುತವಾಗಿ ನಡೆಯಲು ಈ ರೀತಿಯ ಕ್ರಮಗಳನ್ನು ನಾವು ಕೈಗೊಳ್ಳಲೇಬೇಕು. ಆದರೆ ತಕರಾರು ಇರುವುದು ಐಟಿ ದಾಳಿಗಳ ಬಗ್ಗೆ ಅಲ್ಲ, ಐಟಿ ಎಂಬ ಸ್ವಾಯತ್ತ ಸಂಸ್ಥೆಯು ಸರ್ಕಾರದ ಕೈಗೊಂಬೆಯಾಗಿ ಕೇವಲ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ದಾಳಿಯಲ್ಲಿ ಪಕ್ಷಪಾತ ತೋರಿದ್ದು. ಐಟಿ ಸಂಸ್ಥೆಯನ್ನು ಸಹ ತನ್ನ ಚುನಾವಣೆಯ ತಂತ್ರವಾಗಿ ಉಪಯೋಗಿಸಿದ ಶ್ರೇಯಸ್ಸು ಮೋದಿ ಮತ್ತು ಅವರ ಟೀಮ್‍ಗೆ ಸಲ್ಲಲೇಬೇಕು 

ಮೂರನೇಯದಾಗಿ ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಜನರು ಮಾಡಿದ ಅರೋಪಗಳು. ಎಲ್ಲರಿಗೂ ತಿಳಿಯುವಂತೆ ರಾಜಾರೋಷವಾಗಿ ಕೆಲ ಪಕ್ಷಗಳು ಚುನಾವಣೆಯ ನೀತಿ ಸಂಹಿತೆಗಳನ್ನು ಉಲ್ಲಂಘಿಸಿದರೂ ಆಯೋಗವು ದಿವ್ಯಮೌನ ವಹಿಸಿದ್ದನ್ನು ಕಂಡು ಜನರು ತಮ್ಮ ಅಸಮಾಧಾನವನ್ನು ಹೊರಗೆಡವಿ ಆ ಸಂಸ್ಥೆಯ ಬಗ್ಗೆ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಕೆಲವೊಂದು ವಿಷಯಗಳಲ್ಲಿ ಕೋರ್ಟ್ ಮಧ್ಯ ಪ್ರವೇಶಿಸಿ ಸ್ವಾಯತ್ತ ಸಂಸ್ಥೆಯನ್ನು ಬಡಿದು ಎಚ್ಚರಿಸಿದ ಉದಾಹರಣೆಗಳೂ ಇವೆ. 

ಈ ವಿವಾದಗಳ ಜತೆಗೆ ಸಾಧ್ವಿ ಪ್ರಗ್ಯಾರನ್ನು ತಮ್ಮ ಪಕ್ಷದ ಅಭ್ಯರ್ಥಿಯಾಗಿ ಘೋಷಿಸಿರುವುದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ಧಿಗಳನ್ನು ಹಬ್ಬಿಸುತ್ತಿರುವುದು, ಸಮಾಜವನ್ನು ಧರ್ಮ ಜಾತಿ ಆಧಾರಗಳ ಮೇಲೆ ಧ್ರುವೀಕರಣಗೊಳಿಸುತ್ತಿರುವುದು, ಅಭ್ಯರ್ಥಿಯ ಜಾತಿಯ ಹೆಸರಲ್ಲಿ ಮತ ಕೇಳುವುದು, ಅಭ್ಯರ್ಥಿಗಳ ಬಗ್ಗೆ ಸುಳ್ಳು ಅಪಾದನೆಗಳನ್ನು ಹರಡುವುದು ಹೀಗೆ ಎಷ್ಟೋ ವಿಷಯಗಳು ನಾವು ಇಲ್ಲಿ ಚರ್ಚಿಸಬಹುದು. ಆದರೆ ಮೇಲೆ ಹೇಳಿದ ಮೊದಲ ಮೂರು ವಿಷಯಗಳಂತೂ ತುಂಬಾ ಅಪಾಯಕಾರಿಯ ಬೆಳೆವಣಿಗೆ ಎಂದೇ ಹೇಳಬಹುದು. ಆದ್ದರಿಂದ ಇಂತಹ ಪ್ರಮಾದವನ್ನು ಪೋಷಿಸುತ್ತಿರುವವರನ್ನು ನಾವು ಖಂಡಿಸುವುದು ಮಾತ್ರವಲ್ಲ ಅವರ ಕೈಯಲ್ಲಿ ಅಧಿಕಾರ ಸಿಗದಂತೆ ನೋಡಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ, ದೇಶದ ಸಂವಿಧಾನವೇ ಬುಡಮೇಲಾಗುವ ಸಾಧ್ಯತೆಯನ್ನು ಸುಲಭವಾಗಿ ತಳ್ಳಿಹಾಕುವುದಕ್ಕೇ ಆಗುವುದಿಲ್ಲ. ಯಾವುದಕ್ಕೂ ನಮ್ಮ ಎಚ್ಚರ ನಮ್ಮ ಕೈಯಲ್ಲಿರಬೇಕು. 

*** 

ನಮ್ಮ ಸಂಸ್ಥೆಯಲ್ಲಿ ಒಂದು ಅಹಿತಕರ ಘಟನೆ ಸಂಭವಿಸಿತ್ತು. ಯಾರೋ ಕೆಲ ಕಿಡಿಕೇಡಿಗಳು ಸಂಸ್ಥೆಯ ಆವರಣದಲ್ಲಿ ನಿಲ್ಲಿಸಿದ್ದ ಬಸ್ಸಿಗೆ ರಾತ್ರೋರಾತ್ರಿಯಲ್ಲಿ ಕಲ್ಲು ತೂರಿ ಜಖಂಗೊಳಿಸಿ ಓಡಿಹೋಗಿದ್ದರು. ಈ ಕಾರಣಕ್ಕಾಗಿ ಇದ್ದ ಒಬ್ಬ ಚೌಕಿದಾರನ ಜತೆಗೆ ಇನ್ನೊಬ್ಬನನ್ನು ನೇಮಿಸಲಾಯಿತು. ಕೆಲವು ತಿಂಗಳು ಕಳೆದ ಆನಂತರ ಹೊಸದಾಗಿ ಸೇರ್ಪಡೆಯಾಗಿದ್ದ ಚೌಕಿದಾರ ಹಳೆಯ ವಾಚಮ್ಯಾನ್ ಬಗ್ಗೆ ದೂರು ಹೇಳಲು ಆರಂಭಿಸಿದ. ಸುಮಾರು 10 ವರ್ಷಗಳಿಂದ ಸಂಸ್ಥೆಗೆ ದುಡಿದಿದ್ದ ಹಳೇ ಚೌಕಿದಾರನ ಕೈಬಾಯಿ ಶುದ್ಧವಾಗಿತ್ತು. ಪ್ರಾಮಾಣಿಕತೆಯಿಂದ ಸಂಸ್ಥೆಯ ವಿಶ್ವಾಸವನ್ನು ಗಳಿಸಿಕೊಂಡಿದ್ದ ಹಳೇ ಚೌಕಿದಾರನ ಬಗ್ಗೆ ಆಪಾದನೆಗಳು ಕೇಳಿ ಮುಖ್ಯಸ್ಥರಿಗೆ ಕಸಿವಿಸಿಯಾಯಿತು. "ಅವನಿಗೆ ವಯಸ್ಸಾಗಿದೆ, ರಾತ್ರಿಯಲ್ಲಿ ಗಸ್ತು ತಿರುಗದೆ ಮಲಗುತ್ತಾನೆ.. ರಾತ್ರಿಯಲ್ಲಿ ಒಬ್ಬನೇ ಓಡಾಡಲು ಭಯ ಪಡುತ್ತಾನೆ… ರಾತ್ರಿಯಲ್ಲಿ ಸಂಸ್ಥೆಗೆ ಸೇರಿದ ವಸ್ತುಗಳನ್ನು ಮನೆಗೆ ಸಾಗಿಸುತ್ತಿದ್ದಾನೆ ... ನನಗೆ ಸರಿಯಾಗಿ ಕೆಲಸ ಮಾಡಲು ಅವನು ಬಿಡುತ್ತಿಲ್ಲ… ಹೀಗೆ ನಾನಾ ದೂರುಗಳು ಹಳೇ ಕಾವಲುಗಾರನ ವಿರುದ್ಧ ಕೇಳಿಬಂದವು. ತನಿಖೆ ಪ್ರಾರಂಭವಾಯಿತು. 

ಕೆಲವು ದಿನಗಳ ಆನಂತರ ಹೊರ ಬಂದ ಸತ್ಯವೇನೆಂದರೆ – ಹೊಸದಾಗಿ ನೇಮಕಗೊಂಡ ಕಾವಲುಗಾರ … ರಾತ್ರಿಯಲ್ಲಿ ಗಸ್ತು ಮಾಡುವುದನ್ನು ಬಿಟ್ಟು ಸಂಸ್ಥೆಯ ಬಸ್ಸಿನಲ್ಲಿ ಮಲಗಲು ಪ್ರಾರಂಭಿಸಿದ್ದಾನೆ, ಕೆಲವು ದಿನಗಳ ಆನಂತರ ಪಕ್ಕದಲ್ಲೇ ಇದ್ದ ತನ್ನ ಮನೆಗೆ ಹೋಗಿ ಮಲಗಲು ಆರಂಭಿಸಿದ್ದಾನೆ.. ಜತೆಗೆ ಸಂಸ್ಥೆಯ ಕೆಲವೊಂದು ಬೆಲೆಬಾಳುವ ವಸ್ತುಗಳನ್ನು ಕಳತನದಿಂದ ರಾತ್ರಿಯಲ್ಲಿ ಮನೆಗೆ ಸಾಗಿಸುವ ಚಾಳಿ ಬೇರೆ ಬೆಳೆಸಿಕೊಂಡು….ಕೊನೆಗೆ ಹಳೇ ಚೌಕಿದಾರ ಕೆಲಸದಿಂದ ವಜಾಗೊಂಡರೆ ತನ್ನ ಕೆಲಸ ಖಾಯಂ ಎಂದು ತಿಳಿದು ಈ ರೀತಿ ಸುಳ್ಳು ಕಥೆಯನ್ನು ಕಟ್ಟಿ ತಾನೇ ಕೆಲಸದಿಂದ ವಜಾಗೊಂಡ. 

ಎಚ್ಚರಿಕೆ - ಚೌಕಿದಾರರೆಂದು ಹೇಳಿಕೊಳ್ಳುವವರೆಲ್ಲಾ ಚೌಕಿದಾರರಲ್ಲ. 





ಕೊನೆಗೆ ಪ್ರಕಾಶ್ ರೈಯವರುಹೇಳಿದ ಮಾತು : 



“ಸತ್ಯವನ್ನು ಹೇಗೆ ಎದುರುಗೊಳ್ಳುವುದು? ಇದು ಎಲ್ಲರ ಮುಂದಿರುವ ದೊಡ್ಡ ಸವಾಲು. ಸುಳ್ಳು ಸರಳವಾಗಿರುತ್ತದೆ. ಸುಂದರವಾಗಿರುತ್ತದೆ. ಜ್ವಲಿಸುವ ಕಿರೀಟದಂತಿರುತ್ತದೆ. ಒಂದು ಸುಳ್ಳನ್ನು ತಮ್ಮ ತಲೆಯ ಮೇಲಿಟ್ಟುಕೊಂಡು ಎಷ್ಟೋ ಜನ ರಾಜರಂತೆ ಮೆರೆಯುತ್ತಾರೆ ಈ ಊರಲ್ಲಿ. ಆದರೆ ಸತ್ಯ ನಗ್ನವಾಗಿಯೇ ನಿಂತಿರುತ್ತದ. ತಲೆಯ ಮೇಲಿಟ್ಟ ಮುಳ್ಳುಕಿರೀಟದಂತೆ ಚುಚ್ಚುತ್ತದೆ. ಆದ್ದರಿಂದಲೇ ಸತ್ಯವನ್ನು ಕಂಡಾಗ ಓಡಿ ಬಚ್ಚಿಟ್ಟುಕೊಳ್ಳುತ್ತೇವೆ. ಸುಳ್ಳು ಅಟ್ಟಿಸಿಕೊಂಡು ಬರುತ್ತಿದ್ದಂತೆ, ಸತ್ಯ ಉಸಿರುಗಟ್ಟಿಸುತ್ತಿದ್ದಂತೆ ಕೆಲವರು ಸ್ವಾಮೀಜಿಗಳಾಗಿ ತಿರುಗುತ್ತಾರೆ. ಹಲವರು ಹುಚ್ಚರಾಗಿ ಅಲೆಯುತ್ತಾರೆ. ನನ್ನನ್ನು ಕೇಳಿದರೆ ಸತ್ಯಕ್ಕೆ ನೇರವಾಗಿ ಮುಖಾಮುಖಿಯಾಗುವ ಧೈರ್ಯವೇ ಬದುಕು. ಅದು ನೋವನ್ನುಂಟುಮಾಡುತ್ತದೆ. ಉಸಿರುಗಟ್ಟಿಸುತ್ತದೆ. ಆದರೆ ಅದುವೇ ಸರಿ" 



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...