ಕೆಲವರು ಹಾಗೆನೇ, ಎಲ್ಲರು ನಡೆಯುವ ದಾರಿಯನ್ನು ಬಿಟ್ಟು, ಅಸ್ಪಷ್ಟ, ಗೊತ್ತುಗುರಿಯಿಲ್ಲದ ಬೇರೆಯೊಂದು ದಾರಿಯನ್ನೇ ಆರಿಸಿಕೊಳ್ಳುತ್ತಾರೆ. ಆ ದಾರಿಯ ಬಗ್ಗೆ ಅವರಿಗೆ ಏನೇನು ಗೊತ್ತಿಲ್ಲದಿದ್ದರೂ, ಆ ದಾರಿಯನ್ನೇ ಆರಿಸಿಕೊಳ್ಳುತ್ತಾರೆ. ಎಲ್ಲರು ನಡೆದ ದಾರಿಯಲ್ಲೇ ನಾನು ಕೂಡ ನಡೆಯಬೇಕು ಎಂಬ ಯಾವ ಕಾನೂನು ಇಲ್ಲವಲ್ಲ ಎಂಬ ಮನೋಭಾವದ ಈ ಜನರು ಜನರ ನೆನಪಿನಲ್ಲಿ ಅಚ್ಚೂತ್ತಿ ನಿಂತುಬಿಡುತ್ತಾರೆ. ಇಂತಹವರು ಸಾಮಾನ್ಯ ಅಥವಾ ಸಾಧಾರಣ ಪರಧಿಯಲ್ಲಿ ಬರುವಂತವರಲ್ಲ. ಸಿಂಪಲ್ ಆಗಿ ಹೇಳಬೇಕೆಂದರೆ ಅವರು ಅಸಾಮಾನ್ಯರು. ಒಂಟಿಯಾದರೂ ಆರಿಸಿಕೊಂಡ ದಾರಿಯಲ್ಲಿ ಒಂಟಿಸಲಗದಂತೆ ಮುನ್ನುಗುತ್ತಾರೆ. ಇಂತಹವರು ಇತರರಿಗೆ ಮೂರ್ಖನಂತೆ ಕಂಡರೂ, ಅವರು ಯಾವುದೂ ಒಂದು ಗುರಿಗೆ ಹಂಬಲಿಸುವವರು. ಇದಕ್ಕೊಂದು ಉದಾಹರಣೆ ಮೊನ್ನೆ ನಾನು ಗೌರಿ ಎಂಬ ಪತ್ರಿಕೆಯಲ್ಲಿ ಓದಿದ ಯೋಗೇಂದ್ರ ಯಾದವ್‍ರವರ ಬದುಕಿನಲ್ಲಿ ನಡೆದ ಒಂದು ಅಘಾತದ ಘಟನೆ.
1936ರ ಸಮಯ. ಈಗಿನ ಹರಿಯಾಣಾದ ಹಿಸಾರ್ ಎನ್ನುವ ಪಟ್ಟಣದಲ್ಲಿ ರಾಮ್ ಸಿಂಗ್ ಒಂದು ಶಾಲೆಯ ಶಿಕ್ಷಕರಾಗಿದ್ದರು. ಸ್ವಾತಂತ್ರಪೂರ್ವದ ಸಮಯ. ಅಲ್ಲಲ್ಲಿ ಕೋಮು ದುಳ್ಳರಿಗಳು ನಡೆಯುತ್ತಿದ್ದವು. ರಾಮ್ ಸಿಂಗ ಅವರು ಶಿಕ್ಷಕರಾಗಿದ್ದ ಶಾಲೆಗೆ ಕೋಮು ಗಲಭೆಯನ್ನೆಬ್ಬಿಸುತ್ತ ಮುಸಲ್ಮಾನರ ಗುಂಪೊಂದು ಬಂದು ಅಲ್ಲಿದ್ದ ಮಕ್ಕಳನ್ನು ತಮ್ಮ ವಶಕ್ಕೆ ನೀಡಬೇಕೆಂದು ಆದೇಶಿಸಿದರು. ಮಕ್ಕಳನ್ನು ಮುಟ್ಟೂಕಿಂತ ಮುಂಚೆ ಮೊದಲು ನನ್ನನ್ನು ನೋಡಿಕೊಳ್ಳಿ ಎಂದು ತಮ್ಮ ಕರ್ತವ್ಯ ಪಾಲಿಸಿದರು ರಾಮ್ ಸಿಂಗ್. ಆಗ ಅವರ ಕುತ್ತಿಗೆಯನ್ನು ಕುಡಗೋಲಿನಿಂದ ಸೀಳಿದರು ಆ ಗಲಭೆಕೋರರು. ಈ ಘಟನೆಯನ್ನು ನೋಡುತ್ತ ನಿಂತವರಲ್ಲಿ ಏಳು ವರ್ಷದ ಒಬ್ಬ ಬಾಲಕ ದೇವೇಂದ್ರ ಸಿಂಗ್, ಕೊಲೆಗೀಡಾದ ಶಿಕ್ಷಕ ರಾಮ್‍ಸಿಂಗ್ ಅವರ ಪುತ್ರ. ತನ್ನ ಕಣ್ಣೆದುರಿಗೆ ಆದ ತನ್ನ ತಂದೆಯ ಕೊಲೆಯಿಂದ ಆ ಬಾಲಕನ ಮೇಲೆ ಏನೆಲ್ಲ ಪರಿಣಾಮ ಬೀರಿತೋ ಏನೋ. ತನ್ನ ತಂದೆಯನ್ನು ತನ್ನ ಕಣ್ಣೆದುರಿಗೇ ಕೊಂದ ಮುಸಲ್ಮಾನರನ್ನು ದ್ವೇಷಿಸಲು ಅವರಿಗೆ ಸಾಕಷ್ಟ ಕಾರಣಗಳಿದ್ದವು. ಆದರೆ ಆ ಬಾಲಕ ಬೆಳೆಯುತ್ತಿರುವ ಸಮಯ ಸ್ವಾತಂತ್ರ ಸಂಗ್ರಾಮದ ಸಮಯ. ಗಾಂಧಿಜೀಯವರ ಸತ್ಯಾಗ್ರಹಗಳ, ಹಿಂದು ಮುಸ್ಲಿಂ ಏಕತೆಗಾಗಿ ಜೀವ ತೇಯುತ್ತಿದ್ದ ಸಮಯ. ನಾನೊಬ್ಬ ಹಿಂದು ಆಗಲಿ, ಮುಸಲ್ಮಾನನಾಗಲಿ ಆಗುವುದಿಲ್ಲ, ನಾನು ಆಗುವುದು ಒಬ್ಬ ಮನುಷ್ಯ ಎನ್ನುವ ಮಾತುಗಳನ್ನು ಕೇಳಿದ ದೇವೇಂದ್ರ ಸಿಂಗ್, ತಮ್ಮ ಜೀವನದಲ್ಲಿ ದ್ವೇಷವು ಪರಿಣಾಮ ಬೀರಲು ಅವಕಾಶ ನೀಡಲಿಲ್ಲ.
ಮುಂದೆ ಬೆಳೆದು ಅರ್ಥಶಾಸ್ತ್ರದ ಪ್ರಾಧ್ಯಪಕರಾದ ದೇವೇಂದ್ರ ಸಿಂಗ್, ತಮ್ಮ ಮಕ್ಕಳಿಗೆ ಮುಸ್ಲಿಂ ಹೆಸರುಗಳನ್ನು ನೀಡಲು ನಿರ್ಧರಿಸಿದರು. ತನ್ನ ತಂದೆಯನ್ನು ತನ್ನೆದುರಿಗೆ ಕೊಂದ ಸಮುದಾಯದವರ ಹೆಸರನ್ನು ನೀಡಲು ನಿರ್ಧರಿಸಿದರು. ಮೊದಲ ಮಗುವಿಗೆ ನಜ್ಮಾ ಎಂದು ಹೆಸರಿಡುವಾಗ ಅವರ ಹೆಂಡತಿ “ಮಗಳಿಗೆ ಬೇಡ ಮುಂದೆ ಗಂಡು ಮಗುವಾದಾಗ ಈ ಪ್ರಯೋಗವನ್ನು ಮಾಡುವ, ಹೆಣ್ಣು ಮಗಳ ಮೇಲೆ ಬೇಡ, ಮುಂದೆ ಮದುವೆಗೆ ಸಮಸ್ಯೆಯಾಗುತ್ತದೆ” ಎಂದರು. ಹಾಗಾಗಿ ಆ ಹೆಣ್ಣು ಮಗುವಿಗೆ ನೀಲ ಎಂದು ನಾಮಕರಣ ಮಾಡಲಾಯಿತು. ಆನಂತರ ಗಂಡು ಮಗುವಾದಾಗ ಸಲೀಂ ಎನ್ನುವ ಹೆಸರನ್ನಿಟ್ಟರು.
ರಾಜಸ್ಥಾನದ ಒಂದು ಹಳ್ಳಿಯಲ್ಲಿ ಶಾಲೆಗೆ ಹೋಗುತ್ತಿದ್ದ ಆ ಬಾಲಕನ ಶಾಲೆಯಲ್ಲಿ ಯಾವ ಮುಸಲ್ಮಾನ ಮಕ್ಕಳೂ ಇರಲಿಲ್ಲ. ಹಾಗಗಿ ಎಲ್ಲ ಮಕ್ಕಳಿಗೂ ಇವನ ಬಗ್ಗೆ ಕುತೂಹಲ. “ನೀನ್ಯಾರು ನಿನ್ನನ್ನು ದತ್ತು ತೆಗೆದುಕೊಂಡಿದ್ದಾರಾ? ಮುಸಲ್ಮಾನರು ಹೇಗಿರುತ್ತಾರೆ?” ಎಂದೆಲ್ಲಾ ಪೀಡಿಸಲಾರಂಭಿಸಿದರು. ತಂದೆ ದೇವೇಂದ್ರ ಜಾತ್ಯತೀತತೆಯ ಬಗ್ಗೆ ಆ ಪುಟ್ಟ ಮಗು ಸಲೀಂನಿಗೆ ಏನೆಲ್ಲಾ ಹೇಳಿದರೂ ಅವನಿಗೆ ತಲೆಬುಡ ಅರ್ಥವಾಗಲಿಲ್ಲ. ಒಂದು ದಿನ ಮನೆಗೆ ಬಂದ ಬಾಲಕ “ಇಲ್ಲ ನನ್ನ ಹೆಸರನ್ನು ಬದಲಾಯಿಸಿ, ಇಲ್ಲವಾದರೆ ಇನ್ನು ಮುಂದೆ ನಾನು ಶಾಲೆಗೆ ಹೋಗೊದಿಲ್ಲ’ ಎಂದು ಘೋಷಿಸಿದರು. ಆಗ ಸಲೀಂ ಅಂತ ಇದ್ದ ಹೆಸರು ಯೋಗೇಂದ್ರ ಯಾದವ್ ಎಂದಾಯಿತು. (ಕೃಪೆ www. Naanugauri.com)
ಕ್ರಿಸ್ತ ತನ್ನ ಶಿಷ್ಯರಿಗೆ ಹೇಳಿದ: ಕಿರಿದಾದ ಬಾಗಿಲಿನಿಂದ ಪ್ರವೇಶಿಸಿರಿ ಎಂದು. ಅವನು ತನ್ನ ಶಿಷ್ಯರಿಗೆ ಬಹುಸಂಖ್ಯಾ ಜನರು ಆರಿಸಿಕೊಳ್ಳಲು ಭಯಪಡುವ, ಹಿಂದೇಟು ಹಾಕುವ ದಾರಿಯನ್ನು ನೀವು ಆರಿಸಿಕೊಳ್ಳಿ ಎಂದು ತಿಳಿ ಹೇಳಿದ.
No comments:
Post a Comment