ಬೈಬಲಿನ ಕೊನೆಯ ಗ್ರಂಥವಾದ ಪ್ರಕಟನಾ ಗ್ರಂಥದಲ್ಲಿ ‘ಅ’ ಕಾರವೂ ‘ಳ’ ಕಾರವೂ ವರ್ತಮಾನಕಾಲದಲ್ಲಿ ಇರುವಾತನೂ, ಭೂತಕಾಲದಲ್ಲಿ ಇದ್ದಾತನೂ, ಭವಿಷ್ಯಕಾಲದಲ್ಲಿ ಬರುವಾತನೂ, ಸರ್ವಶಕ್ತನೂ ನಾನೇ (1:8) ಎಂದು ಪ್ರಭು ನುಡಿದಿರುವುದನ್ನು ನಾವು ಬಹಳ ಸಾರಿ ಕೇಳಿರಬಹುದು, ಓದಿರಬಹುದು, ಬಹುಶಃ ಧ್ಯಾನಿಸಿರಲೂ ಬಹುದು. ಆದರೂ ಹಲವರಿಗೆ ಶಿಲುಬೆಯಲ್ಲಿ ಮಡಿದ ಪ್ರಭು ಕ್ರಿಸ್ತ ಪುನರುತ್ಥಾನವಾಗಿರುವ ಬಗ್ಗೆ ಸಂದೇಹ, ಸಂಶಯ, ಕಳವಳ, ಗೊಂದಲಗಳು ಇವೆ. ಆದರೆ ನಿತ್ಯಸತ್ಯವೆಂದರೆ - ಪ್ರಭು ಯೇಸು ಮಾನವ ಕುಲದ ರಕ್ಷಣಾ ಕಾರ್ಯವನ್ನು ಪರಿಪೂರ್ಣಗೊಳಿಸಿ ಪುನರುತ್ಥಾನರಾಗಿ ಹಲವರಿಗೆ ಕಾಣಿಸಿಕೊಂಡು (1ನೇ ಕೊರಿಂಥ 15:3-8) ತಾವು ಪುನರುತ್ಥಾನವಾಗಿದ್ದು ಸತ್ಯವೆಂದು ಸಾಬೀತು ಪಡಿಸಿದ್ದಾರೆ. ಈಗ ಅವರು ಸ್ವರ್ಗಾರೋಹಣರಾಗಿ ತಂದೆಯ ಬಲಪಾರ್ಶ್ವದಲ್ಲಿ ಕುಳಿತು ನಮ್ಮ ಪರವಾಗಿ ನಿರಂತರವಾಗಿ ಬಿನ್ನವಿಸುತ್ತ ರಾರಾಜಿಸುತ್ತಿದ್ದಾರೆ. ಇನ್ನು ಅವರಿಗೆ ಸಾವಿಲ್ಲ. ಏಕೆಂದರೆ ಅವರು ಕಾಲಾತೀತ, ವರ್ಣನಾತೀತ, ಸರ್ವಾಂತರ್ಯಾಮಿ. ಆದಿಯೂ ಅಂತ್ಯವೂ ಇಲ್ಲದವರು. ಆಲ್ಪಾವೂ ಓಮೇಗವೂ ಅವರೇ ಆಗಿದ್ದಾರೆ. ಇದನ್ನೇ ಪ್ರಕಟನಾ ಗ್ರಂಥದಲ್ಲಿ ತಮ್ಮ ಆಪ್ತ ಶಿಷ್ಯ ಯೊವಾನ್ನನಿಗೆ ’ಭಯಪಡಬೇಡ ನಾನೇ ಮೊದಲನೆಯವನೂ ಕಡೆಯವನೂ ಸದಾ ಜೀವಿಸುವವನೂ ಆಗಿದ್ದೇನೆ. ಮರಣ ಹೊಂದಿದೆ ನಿಜ. ಆದರೆ ಇಗೋ ನೋಡು, ಯುಗಯುಗಾಂತರಕ್ಕೂ ಜೀವಿಸುವವನಾಗಿದ್ದೇನೆ. ಮೃತ್ಯುವಿನ ಮತ್ತು ಮೃತ್ಯುಲೋಕದ ಬೀಗದ ಕೈಗಳು ನನ್ನಲ್ಲಿವೆ’ (1:17-18) ಎಂದು ಪ್ರಭು ಅಭಯವನ್ನೀಯುತ್ತಾರೆ.
ಪ್ರಭು ಯೇಸು ಶಿಲುಬೆಯ ಮೇಲೆ ತಮ್ಮ ಪ್ರಾಣವನ್ನು ಮಾನವಕುಲದ ರಕ್ಷಣೆಗಾಗಿ ಸಮರ್ಪಿಸಿದರು. ’ಆಗ ಸುಮಾರು ನಡುಮಧ್ಯಾಹ್ನ. ಆಗಿನಿಂದ ಮೂರು ಗಂಟೆಯವರೆಗೂ ಸೂರ್ಯನು ಕಾಂತಿಹೀನನಾದನು; ನಾಡಿನಲ್ಲೆಲ್ಲಾ ಕತ್ತಲೆ ಕವಿಯಿತು. ಮಹಾದೇವಾಲಯದ ತೆರೆಯು ಇಬ್ಭಾಗವಾಗಿ ಸೀಳಿಹೋಯಿತು ಯೇಸುಸ್ವಾಮಿ ಪಿತನೇ, ನನ್ನಾತ್ಮವನ್ನು ನಿಮ್ಮ ಕೈಗೊಪ್ಪಿಸುತ್ತೇನೆ ಎಂದು ಗಟ್ಟಿಯಾಗಿ ಕೂಗಿ ಪ್ರಾಣಬಿಟ್ಟರು’ (ಲೂಕ 23:44-46). ಆನಂತರ ಪಿಲಾತನ ಅಪ್ಪಣೆ ಪಡೆದು ಅವರ ಪಾರ್ಥೀವ ಶರೀರವನ್ನು ಶಿಲುಬೆಯಿಂದಿಳಿಸಿ ಅರಿಮತ್ತಾಯ ಊರಿನ ಜೋಸೇಫನು ತನಗಾಗಿ ಸಿದ್ಧ್ಪಡಿಸಿಟ್ಟುಕೊಂಡಿದ್ದ ಸಮಾಧಿಯಲ್ಲಿ ಭೂಸ್ಥಾಪನೆ ಮಾಡಲಾಯಿತು. ಹಾಗೂ ಸಮಾಧಿಯ ದ್ವಾರಕ್ಕೆ ಕಲ್ಲನ್ನು ಮುಚ್ಚಿ ರೋಮ್ ಸರ್ಕಾರದ ಮುದ್ರೆಯನ್ನೊತ್ತಿ ಕಾವಲಾಳುಗಳನ್ನು ನೇಮಿಸಲಾಗಿತ್ತು (ಮತ್ತಾ27:57-66). ಕಾವಲಾಳುಗಳು ರೋಮ್ ಅಧಿಕಾರಿಗಳ ಆಜ್ಞೆಯನ್ನು ಮೀರುವಂತಿಲ್ಲ. ಒಂದುವೇಳೆ ಮೀರಿದರೆ ಕಠಿಣ ಶಿಕ್ಷೆ ಅನುಭವಿಸಬೇಕಾದೀತು. ಹೀಗಿರುವಾಗ ಯಾರು ತಾನೇ ದೈರ್ಯವಾಗಿ ಪ್ರಭು ಯೇಸುವಿನ ಪಾರ್ಥೀವ ಶರೀರವನ್ನು ಕಳ್ಳತನಮಾಡಲು ಸಾಧ್ಯ! ಪ್ರಭುವಿನ ಪ್ರೇಷಿತರೆಲ್ಲರೂ ಭಯದಿಂದ ನಡುಗಿಹೋಗಿದ್ದರು, ಚದುರಿಹೋಗಿದ್ದರು, ಅವರ ನಂಬಿಕೆಗಳೆಲ್ಲ ನುಚ್ಚುನೂರಾಗಿ ಪ್ರಾಣಭಯ ಅವರನ್ನು ಆವರಿಸಿತ್ತು, ಅವರು ಕಳ್ಳತನಮಾಡಲು ಸಾಧ್ಯವೇ!
ವಿಶ್ವದಲ್ಲಿ ಇಂದಿಗೂ ನಾವು ಹಲವು ಧರ್ಮಸ್ಥಾಪಕರ ಸಮಾಧಿಗಳು ಸುರಕ್ಷಿತವಾಗಿರುವುದನ್ನು ನೋಡಬಹುದು. ಉದಾಹರಣೆಗೆ ಚೀನಾದಲ್ಲಿ ಕನ್ಫೂಷಿಯುಸ್, ಭಾರತದಲ್ಲಿ ಬುದ್ಧ ಹಾಗೂ ಮೆಕ್ಕಾದಲ್ಲಿ ಪ್ರವಾದಿ ಮೊಹಮ್ಮದರ ಸಮಾಧಿಗಳು ಇನ್ನೂ ಸುರಕ್ಷಿತವಾಗಿವೆ. ಹಲವರು ಅವುಗಳನ್ನು ಗೌರವದಿಂದ ಸಂದರ್ಶಿಸಿ ತಮ್ಮ ನಮನವನ್ನು ಸಲ್ಲಿಸುತ್ತಾರೆ. ಅವುಗಳೆಲ್ಲವೂ ಇನ್ನೂ ಸಹ ಮುಚ್ಚಿದ ಸ್ಥಿತಿಯಲ್ಲಿಯೇ ಸುರಕ್ಷಿತವಾಗಿವೆ. ಆದರೆ ಕ್ರಿಸ್ತನ ಸಮಾಧಿ ಮಾತ್ರ ತೆರೆದಿದೆ, ಬರಿದಾಗಿದೆ! ಅದನ್ನು ಇಂದಿಗೂ ಸಹ ಕ್ರೈಸ್ತರ ಪುಣ್ಯಭೂಮಿ ಜೆರುಸಲೇಮಿನಲ್ಲಿ ನೋಡಬಹುದು. ಏಕೆಂದರೆ ಅವರು ಪುನರುತ್ಥಾನರಾಗಿದ್ದಾರೆ ಶುಭಸಂದೇಶಕಾರ ಲೂಕನು ’ಸಜೀವವಾಗಿರುವವರನ್ನು ಸತ್ತವರ ಮಧ್ಯೆ ಹುಡುಕುವುದೇನು? ಅವರು ಇಲ್ಲಿಲ್ಲ; ಪುನರುತ್ಥಾನ ಹೊಂದಿದ್ದಾರೆ’ ಎನ್ನುತ್ತಾನೆ (ಲೂಕ24:5).
ಪ್ರಭುವಿನ ಪುನರುತ್ಥಾನ ಅವರ ಶಿಲುಬೆಯ ಮರಣದಷ್ಟೇ ಸತ್ಯಸ್ಯ ಸತ್ಯ!
ಕ್ರೈಸ್ತ ವಿಶ್ವಾಸಕ್ಕೆ ಪ್ರಭು ಕ್ರಿಸ್ತನ ಪುನರುತ್ಥಾನವೇ ಅಡಿಗಲ್ಲು, ಕ್ರೈಸ್ತ ವಿಶ್ವಾಸದ ತಿರುಳು ಹಾಗೂ ಕ್ರೈಸ್ತ ಜೀವನದ ಕೇಂದ್ರಬಿಂದು. ಪ್ರಭು ಕ್ರಿಸ್ತ ಪುನರುತ್ಥಾನ ಹೊಂದದಿದ್ದಲ್ಲಿ ನಮ್ಮ ವಿಶ್ವಾಸ ವ್ಯರ್ಥವೇ ಸರಿ. ಈ ಕಾರಣದಿಂದಲೇ ಪೇತ್ರನು ತನ್ನ ಪ್ರಥಮ ಬೋಧನೆಯಲ್ಲಿಯೇ ಇಸ್ರಯೇಲರನ್ನು ಉದ್ದೇಶಿಸಿ ’ನೀವು ಅವರನ್ನು ಪರಕೀಯರ ಕೈಗೊಪ್ಪಿಸಿ, ಶಿಲುಬೆಗೆ ಹಾಕಿಸಿ ಕೊಲ್ಲಿಸಿದಿರಿ. ಆದರೆ ದೇವರು ಅವರನ್ನು ಮೃತ್ಯುಶೂಲೆಯಿಂದ ಬಿಡಿಸಿ, ಎಬ್ಬಿಸಿದರು. ಕಾರಣ-ಅವರನ್ನು ಬಂಧಿಸಿಡುವುದು ಮೃತ್ಯುವಿಗೆ ಅಸಾಧ್ಯವಾಗಿತ್ತು’ (ಪ್ರೇ ಕಾ 2:23) ಎಂದು ಪ್ರಭು ಯೇಸು ಪುನರುತ್ಥಾನರಾಗಿರುವುದನ್ನು ಖಚಿತಪಡಿಸುತ್ತಾನೆ. ಹಾಗೆಯೇ ಸಂತ ಪೌಲ ಪ್ರಭು ಪುನರುತ್ಥಾವಾಗಿರುವುದು ಸರ್ವರಿಗೂ ಎಂಬುದನ್ನು ರೋಮನರಿಗೆ ಬರೆದ ಪತ್ರದಲ್ಲಿ ಸತ್ತವರಿಗೂ ಬದುಕುವವರಿಗೂ ಪ್ರಭುವಾಗಬೇಕೆಂಬ ಉದ್ದೇಶದಿಂದಲೇ ಕ್ರಿಸ್ತ ಯೇಸು ಜೀವಂತರಾದದ್ದು ಎಂದು ವಿವರಿಸುತ್ತಾನೆ (14:9; 2ನೇ ಕೊರಿಂಥ 5:15; ರೋಮನರಿಗೆ 4:25).
ಪ್ರಭು ಯೇಸು ಪುನರುತ್ಥಾನರಾಗಿ ಮಾನವ ಕುಲಕ್ಕೆ ಹೊಸ ಭರವಸೆಯ ಕಿಚ್ಚನ್ನು ಹಚ್ಚಿದ್ದಾರೆ. ಇನ್ನು ಮುಂದೆ ಮಾನವ ಕುಲಕ್ಕೆ ಸಾವು ಅಂತ್ಯವಲ್ಲ, ಪ್ರಭುವಿನೊಡನೆ ಜೀವಿಸಲು ಆಹ್ವಾನ. ಆದರೆ ಪ್ರಭುವಿನೊಡನೆ ಜೀವಿಸಲು ಮಾನವರೆಲ್ಲರೂ ತಮ್ಮ ದುಮಾರ್ಗವನ್ನು ಬಿಟ್ಟು ಸನ್ಮಾರ್ಗದೆಡೆಗೆ ಅಂದರೆ ಕ್ರಿಸ್ತನ ಮಾರ್ಗಕ್ಕೆ ತಿರುಗಿಕೊಳ್ಳಬೇಕು. ಕ್ರಿಸ್ತನ ಮಾರ್ಗವೆಂದರೆ ಪ್ರಭು ಕ್ರಿಸ್ತ ತಮ್ಮ ಕೊನೆಯ ರಾತ್ರಿಯ ಬೋಜನದಲ್ಲಿ ನೀಡಿದ ಒಬ್ಬರನ್ನೊಬ್ಬರು ಪ್ರೀತಿಸಿರಿ. ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಿರಿ. ನಿಮ್ಮ ಈ ಪರಸ್ಪರ ಪ್ರೀತಿಯನ್ನು ಕಂಡು ನೀವು ನನ್ನ ಶಿಷ್ಯರೆಂದು ಜನರೆಲ್ಲರೂ ಅರಿತುಕೊಳ್ಳುವರು’ (ಯೊವಾನ್ನ 13:34-35) ಎಂಬ ಆಜ್ಞೆಯನ್ನು ಸಾಕಾರಗೊಳಿಸಲು ಪ್ರಾಮಾಣಿಕ ಪ್ರಯತ್ನ ನಿರಂತರ ಸಾಗುತ್ತಿರಬೇಕು. ಆಗ ಮಾನವರ ಸ್ವಾರ್ಥ, ದುರಾಶೆಗಳು ದಮನವಾಗಿ, ಪಾಪವು ಪರಿಹಾರವಾಗಿ, ಸಾವು ಕೊನೆಯಾಗಿ ಪುನರುತ್ಥಾನದೆಡೆಗೆ ಪಯಣ ಆರಂಭವಾಗುತ್ತದೆ. ಈ ಪಯಣ ಕ್ರಿಸ್ತನ ಶಿಲುಬೆಯ ಹಾದಿಯ ಹಾಗೆಯೇ ಕಷ್ಟಕರವಾದುದು, ಆದರೆ ಅಂತ್ಯ ಮಾತ್ರ ಪುನರುತ್ಥಾನವೇ ಸರಿ! ಪ್ರಭು ಕ್ರಿಸ್ತನ ಹಾಗೆ ಧೃತಿಗೆಡದೆ ಭರವಸೆಯಿಂದ, ಹಿಂದೆ ನೋಡದೆ, ಕುಗ್ಗದೆ ದಿಟ್ಟತನದಿಂದ, ಮುನ್ನುಗ್ಗುತ್ತಲೇ ಇರಬೇಕು. ನಮ್ಮ ಜೀವನದ ಶಿಲುಬೆಯ ಹಾದಿಯಲ್ಲಿ ಪುನರುತ್ಥಾನಿ ಪ್ರಭು ಕ್ರಿಸ್ತ ನಮ್ಮೊಳಗಿದ್ದುಕೊಂಡು ನಿರ್ದೇಶಿಸುತ್ತಿರುತ್ತಾರೆ. ಹಾಗಿರುವಾಗ ಭಯವೇಕೆ? ಸಂಶಯ ಬಿಟ್ಟು ಎಮ್ಮಾವು ಗ್ರಾಮಕ್ಕೆ ಪಯಣಿಸುತ್ತಿದ್ದ ಶಿಷ್ಯರು ಪುನರುತ್ಥಾನಿ ಪ್ರಭು ಕ್ರಿಸ್ತನನ್ನು ’ಸಂಜೆಯಾಯಿತು, ಕತ್ತಲಾಗುತ್ತ ಬಂದಿತು; ಬಂದು ನಮ್ಮೊಡನೆ ತಂಗಿರಿ” (ಯೊವಾನ್ನ 24:28) ಎಂದು ಆಹ್ವಾನಿಸಿದ ಹಾಗೇ ನಾವು ಸಹ ಆಹ್ವಾನಿಸಿದರೆ ಪುನರುತ್ಥಾನಿ ಕ್ರಿಸ್ತನ ಬೆಳಕು ನಮ್ಮ ಬದುಕಿಗೆ ಹೊಸ ಭರವಸೆಯನ್ನು ಮೂಡಿಸುತ್ತದೆ. ಜೀವನದ ಭಾರವನ್ನು ಹಗುರವಾಗಿಸುತ್ತದೆ. ಅವರು ಪುನರುತ್ಥಾನವಾಗಿರುವುದು ಸತ್ಯಸ್ಯ ಸತ್ಯ. ಈ ಕಾರಣದಿಂದಲೇ ಅವರು ಸರ್ವರಿಗೂ ’ಇಗೋ, ಲೋಕಾಂತ್ಯದವರೆಗೂ ಸದಾ ನಾನು ನಿಮ್ಮೊಡನೆ ಇರುತ್ತೇನೆ’ ಎಂಬ ಅಭಯವನ್ನೀಯುತ್ತಾರೆ ಯಾಕೆಂದರೆ ಸದಾ ಇರುವಾತನು ಅವರೇ ಆಗಿದ್ದಾರೆ.
No comments:
Post a Comment