ಪೀಠಿಕೆ
ಕ್ರೈಸ್ತ ಧರ್ಮ ವಿಶಾಲವಾದ ಧರ್ಮ, ವಿನೂತನವಾದ ಧರ್ಮ. ಯೇಸುಕ್ರಿಸ್ತ ಈ ಧರ್ಮದ ಸ್ಥಾಪಕ. ಕ್ರಿಸ್ತನಿಲ್ಲದೆ ಕ್ರೈಸ್ತ ಧರ್ಮವಿಲ್ಲ. ಯೇಸು ಕ್ರಿಸ್ತನ ಉಪದೇಶದಂತೆ ನಡೆಯುವವರು ಕ್ರೈಸ್ತರು. ಮಾನವೀಯ ಮೌಲ್ಯಗಳು ಈ ಧರ್ಮದ ದೀಪ ಸ್ಥಂಬಗಳು. ಈತ ದೇವಕುಮಾರನಾಗಿರುವ ಹಾಗೆಯೇ ಮಾನವ ರಕ್ಷಕನೂ ಆಗಿದ್ದಾನೆ. ಆದ್ದರಿಂದ ಈತ ದೇವ-ಮಾನವ ಸಂಧಾನ ಮಾಡಿದ ಕರ್ತನೆಂಬುದು ಕ್ರೈಸ್ತ ಧರ್ಮದ ಮುಖ್ಯತತ್ವ. ಇಂತಹ ತತ್ವಗಳನ್ನು ಸಾರಲು ವಿದೇಶದಿಂದ ಮಿಶನರಿಗಳು ಭಾರತಕ್ಕೆ ಸುಮಾರು 18ನೇ ಶತಮಾನದ ಪೂರ್ವಾರ್ಧದಿಂದ 19ನೇ ಶತಮಾನದ ಉತ್ತರಾರ್ಧಕಾಲದವರೆಗೆ ಆಗಮಿಸಿದ್ದರು. ಅದಕ್ಕೂ ಮುನ್ನ ಕ್ರಿಸ್ತನ ಆಪ್ತ ಶಿಷ್ಯರಲೊಬ್ಬನಾದ ತೋಮಸ್ ಎಂಬುವನು ಕ್ರಿ.ಶ. 52ರ ಸುಮಾರಿಗೆ ಕೊಚ್ಚಿನ್ನಿನ ಉತ್ತರಕ್ಕೆ ಇರುವ ಪೆರಿಯಾರ್ ಸಮುದ್ರದ ಕೊಲ್ಲಿಯಲ್ಲಿನ ಕ್ರಾಂಗನೂರು ಎಂಬಲ್ಲಿಗೆ ಬಂದು ಕ್ರೈಸ್ತ ಧರ್ಮವನ್ನು ಬೋಧಿಸಿದನೆಂಬ ನಂಬಿಕೆ ಸಿರಿಯನ್ ಕ್ರೈಸ್ತರಲ್ಲಿದೆ. ಸಂತ ತೋಮಾಸನ ಕಾಲದಲ್ಲಿ ಕ್ರೈಸ್ತರಾದವರೆಂದು ಹೇಳಿಕೊಳ್ಳುವ ಒಂದು ಗುಂಪು ಕೇರಳದಲ್ಲಿದೆ. ಅವರು ’ತೋಮಸ್ ಕ್ರೈಸ್ತ’ರೆಂದು ಕರೆದುಕೊಳ್ಳುತ್ತಾರೆ. ಭಾರತದ ಗೆಜಿಟಿಯರ್ ನಲ್ಲಿಯೂ ಸಂತ ತೋಮಸನಿಂದ ಕ್ರೈಸ್ತಮತ ಭಾರತಕ್ಕೆ ಬಂದಿತು ಎಂದು ಉಲ್ಲೇಖವಿದೆ.
ಕರ್ನಾಟಕಕ್ಕೆ ಕ್ರೈಸ್ತಧರ್ಮ ಇದೇ ಕಾಲದಲ್ಲಿ ಬಂದಿತು ಎಂದೂ ನಿಖರವಾಗಿ ಹೇಳಿಲ್ಲ. ಕನ್ನಡ ಸಾಹಿತ್ಯ ಎಂಬ ಪ್ರಮುಖ ವಾಹಿನಿಯನ್ನು ಹಲವು ಧರ್ಮಗಳು ನೀರುಣಿಸಿ ಬೆಳೆಸಿವೆ. ಜೈನ, ಬೌದ್ಧ, ವೈದಿಕ ಧರ್ಮಗಳಂತೆ ಕ್ರೈಸ್ತ ಧರ್ಮವೂ ಸಹ ಕನ್ನಡ ಸಾಹಿತ್ಯದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ತನ್ನ ಅಳಿಲು ಸೇವೆಗೈದಿದೆ ಎಂದರೆ ತಪ್ಪಾಗಲಾರದು. ಕನ್ನಡ ಸಾಹಿತ್ಯವನ್ನು ಧಾರ್ಮಿಕ ಹಿನ್ನೆಲೆಯಲ್ಲಿ ಜೈನ, ವೀರಶೈವ ಮತ್ತು ಬ್ರಾಹ್ಮಣ ಯುಗಗಳೆಂದೆಲ್ಲ ವಿಭಜಿಸಿರುವುದಿದೆ. ಹಾಗೆ ವಿಭಜಿಸಿದ್ದೆ ಆದರೆ ಹದಿನೆಂಟನೆಯ ಶತಮಾನದ ಪೂರ್ವಾರ್ಧದಿಂದ ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದ ಕಾಲವನ್ನು ಕ್ರೈಸ್ತಯುಗ ಎಂದು ಕರೆಯುವುದು ಉಚಿತವೂ ಹೌದು, ಖಚಿತವೂ ಹೌದಾಗಿದೆ. ಕಾರಣವಿಷ್ಟೆ ಈ ಅವಧಿಯಲ್ಲಿ ಕ್ರೈಸ್ತ ಮಿಶನರಿಗಳ ಬಹು ದೊಡ್ಡ ಗುಂಪೇ ಭಾರತಕ್ಕೆ ಆಗಮಿಸಿ ಕನ್ನಡ ಭಾಷೆ, ಸಾಹಿತ್ಯ, ಮತ್ತು ಸಂಸ್ಕೃತಿಯ ಪುನರುತ್ಥಾನಕ್ಕೆ ಅಪಾರವಾಗಿ ದುಡಿದು ಅಪೂರ್ವವಾದ ಸೇವೆ ಸಲ್ಲಿಸಿರುವ ಸತ್ಯವನ್ನು ಯಾರು ಅಲ್ಲಗಳೆಯುವಂತಿಲ್ಲ. ಪ್ರಾರಂಭದಲ್ಲಿ ಕರ್ನಾಟಕವನ್ನು ಪ್ರವೇಶಿಸಿದ ವಿವಿಧ ಸಂಘ-ಸಂಸ್ಥೆಗಳಿಗೆ ಸೇರಿದ ಕ್ರೈಸ್ತ ಗುರುಗಳು ತಮ್ಮ ತಮ್ಮಲ್ಲಿ ಭಿನ್ನಾಭಿಪ್ರಾಯ ಉಂಟಾಗದಿರಲೆಂಬ ಉದ್ದೇಶದಿಂದಲೂ ಮತ್ತು ತಮ್ಮ ಆಡಳಿತಕ್ಕೆ ಅನುಕೂಲವಾಗಲೆಂಬತೆಯೂ ಕೆನರ ಮಿಶನ್ 1534, ಮೈಸೂರು ಮಿಶನ್ 1648, ಮತ್ತು ಕರ್ನಾಟಕ ಮಿಶನ್ 1700 ಹೀಗೆ ವಿವಿಧ ಮಿಶನ್‌ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕರ್ನಾಟಕದ ವಿವಿಧ ಸ್ಥಳಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದರು.
ತದನಂತರ ವಿದೇಶದ ಲಂಡನ್, ಮೆಥೋಡಿಸ್ಟ್, ವೆಸ್ಲಿಯನ್ ಮತ್ತು ಬಾಸೆಲ್ ಮಿಶನ್‌ಗಳಿಂದ ಜಾನ್ ಹಾಂಡ್ಸ್, ಥಾಮಸ್ ಹಡ್ಸನ್, ಡಾ.ಫರ್ಡಿನಂಡ್ ಕಿಟೆಲ್, ಹರ್ಮನ್ ಮೋಗ್ಲಿಂಗ್ ಮುಂತಾದವರು ಭಾರತಕ್ಕೆ ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಮತಪ್ರಚಾರ ಕಾರ್ಯದೊಂದಿಗೆ ಭಾಷಾ ಸೇವೆಯನ್ನು ಮಾಡಿದರು. ಇವರು ಕನ್ನಡ ನಾಡಿಗೆ ಮಾಡಿದ ಸೇವೆಯನ್ನು ಯಾರೂ ಮರೆಯುವಂತಿಲ್ಲ. ಹೀಗೆ ಇವರ ಪಾತ್ರ ಸ್ವಾತಂತ್ರ್ಯ ಪೂರ್ವದಲ್ಲಿ ಅಮೋಘವಾಗಿತ್ತು ಎಂಬುದನ್ನು ತಿಳಿಯಲು ಮಾಹಿತಿ ನೀಡುವ ಹತ್ತಾರು ಗ್ರಂಥಾಧಾರಗಳಿವೆ. ಆದರೆ ಈ ಮಿಶನರಿಗಳೊಂದಿಗೆ ಕ್ರೈಸ್ತ ಸಾಹಿತ್ಯದ ಕೊಡುಗೆ ಕಣ್ಮರೆಯಾಗಿಲ್ಲ. ಬದಲಾಗಿ ಅದು ಸ್ವಾತಂತ್ರ್ಯೋತ್ತರದಲ್ಲಿ ಕನ್ನಡ ಸಾಹಿತ್ಯದ ವಿವಿಧ ಮಜಲುಗಳಲ್ಲಿ ತನ್ನ ಛಾಪನ್ನು ವಿಸ್ತರಿಸಿಕೊಂಡು ಎಲೆಮರೆಯ ಕಾಯಿಯಂತೆ ಕನ್ನಡ ಸಾರಸ್ವತ ಲೋಕದಲ್ಲಿ ಮಿಂದು ಬೆಳೆಸುತ್ತಿದೆ. ಸ್ವಾತಂತ್ರ್ಯಪೂರ್ವದಲ್ಲಿ ಕನ್ನಡ ಸಾಹಿತ್ಯವನ್ನು ಬಹು ಹುಲುಸಾಗಿ ಬೆಳೆಸಲು ಮಿಶನರಿಗಳು ಶ್ರಮಿಸಿದ್ದರೆ ಸ್ವಾತಂತ್ರ್ಯೋತ್ತರದಲ್ಲಿ ದೇಶೀಯ ಕ್ರೈಸ್ತರು ತಮ್ಮನ್ನು ಕನ್ನಡ ಸಾಹಿತ್ಯದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ತೊಡಗಿಸಿಕೊಂಡು ಸೇವೆ ಸಲ್ಲಿಸಿರುತ್ತಾರೆ.
’ದೇಶೀಯರು’ ಎಂದರೆ ಭಾರತ ದೇಶದಲ್ಲೇ ಹುಟ್ಟಿ ಬೆಳೆದವರು ಎಂದರ್ಥ. ಅವರ ನಡೆ-ನುಡಿ ದೇಶೀಯವಾದದ್ದು, ಉಡುಗೆ-ತೊಡುಗೆ ಸ್ಥಳೀಯವಾದದ್ದು, ಅವರ ಆಲೋಚನೆ ಮತ್ತು ಭಾವನೆಗಳು ಆತ್ಮೀಯವಾದವುಗಳು. ಅವರಲ್ಲಿ ಕರ್ನಾಟಕದಲ್ಲಿ ಹುಟ್ಟಿ ಬೆಳೆದವರೂ ಇರಬಹುದು ಹಾಗೆಯೇ ಕರ್ನಾಟಕೇತರರು ಇರಬಹುದು. ಒಟ್ಟಿನಲ್ಲಿ ಅವರೆಲ್ಲರೂ ಭಾರತೀಯ ಕ್ರೈಸ್ತರೇ ಆಗಿರುತ್ತಾರೆ. ಸ್ವಾತಂತ್ರ್ಯೋತ್ತರದಲ್ಲಿ ಕನ್ನಡ ಸಾಹಿತ್ಯವನ್ನು ಬೆಳೆಸಲು ಶ್ರಮಿಸಿದವರು ದೇಶೀಯ ಕ್ರೈಸ್ತರಾದ ತಿರುಳ್ಗನ್ನಡ ತಿರುಕ: ಉತ್ತಂಗಿ ಚೆನ್ನಪ್ಪ ಮತ್ತು ಸಾಹಿತ್ಯ ಸಾಧಕ ಎ.ಎಂ.ಜೋಸೆಫ್, ಐ.ಹೆಚ್.ಲೋಬೋ ಮತ್ತು ಇತರರು. ಪ್ರಾರಂಭದಲ್ಲಿ ಕನ್ನಡದಲ್ಲಿ ಧಾರ್ಮಿಕ ಸಾಹಿತ್ಯವನ್ನು ರಚಿಸಿರುವ ಇವರು ಹಿಂದೂ ಧರ್ಮವನ್ನು, ವೇದೋಪನಿಷತ್ತುಗಳನ್ನು ಬಲ್ಲವರಾಗಿದ್ದರು. ಅನೇಕರು ವೀರಶೈವ ಧರ್ಮದ ತಿರುಳನ್ನು ತಿಳಿದವರಾಗಿದ್ದರು. ಇಂಗ್ಲೀಷ್, ಫ್ರೆಂಚ್, ಲ್ಯಾಟಿನ್, ಸಂಸ್ಕೃತ ಮತ್ತು ಹಿಂದಿ ಭಾಷೆಗಳನ್ನು ಬಲ್ಲವರಾಗಿಯೂ ಇದ್ದರು.
ಉತ್ತಂಗಿ ಚೆನ್ನಪ್ಪನವರು ವೀರಶೈವ ಮತದ ತಿರುಳನ್ನು ತಿಳಿದವರಾಗಿದ್ದರು, ಅಲ್ಲದೇ ಅದೇ ಧರ್ಮದ ಮೂಲದಿಂದ ಕ್ರೈಸ್ತರಾದವರು. ಎ.ಎಂ.ಜೋಸೆಫ್ ವೈದಿಕ ಧರ್ಮವನ್ನು ಬಲ್ಲವರು ಮತ್ತು ಬ್ರಾಹ್ಮಣ ಮೂಲದಿಂದ ಕ್ರೈಸ್ತರಾದವರು ಮತ್ತು ಐ.ಎಚ್.ಲೋಬೋ ಅವರು ಫ್ರೆಂಚ್, ಲ್ಯಾಟಿನ್, ತಮಿಳು, ಸಂಸ್ಕೃತ ಮುಂತಾದ ಭಾಷೆಗಳನ್ನು ತಿಳಿದಿದ್ದ ಕೊಂಕಣಿ ಮನೆತನದವರು. ಈ ದೇಶಿಗರು ಪ್ರಾರಂಭದಲ್ಲಿ ಕ್ರೈಸ್ತ ಧಾರ್ಮಿಕ ಸಾಹಿತ್ಯವನ್ನು ಕನ್ನಡದಲ್ಲಿ ಬರೆದು ಪ್ರಚಾರ ಮಾಡಿದರು. ಇವರೊಂದಿಗೆ, ಇವರ ಜೊತೆ-ಜೊತೆಯಲ್ಲಿ ಮತ್ತು ಇವರ ಹಿಂಬಾಲಕರಾಗಿ ಇತರೆ ದೇಶೀ ಕ್ರೈಸ್ತ ಸಾಹಿತಿಗಳಾದ ಡಾ.ನಾ.ಡಿಸೋಜ, ಫಾದರ್ ಐ.ಅಂತಪ್ಪ, ಫಾದರ್ ಸ್ಟ್ಯಾನಿ ಬ್ಯಾಪ್ಟಿಸ್ಟ್, ಜಾರ್ಜ್ ಡಿಸೋಜ, ಫಾದರ್ ದಯಾನಂದಪ್ರಭು, ಡಾ.ಬಿ.ಎಸ್.ತಲ್ವಾಡಿ ಇನ್ನೂ ಮುಂತಾದ ಕ್ರೈಸ್ತ ಸಾಹಿತಿಗಳು ಕನ್ನಡ ಸಾಹಿತ್ಯದ ವಿವಿಧ ಮಜಲುಗಳಲ್ಲಿ ನಿಂತು ಸಾಹಿತ್ಯ ಕೃಷಿ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ.
ಈ ಸಾಹಿತಿಗಳನ್ನು ಗುರುತಿಸುವ ಪ್ರಯತ್ನ ನಡೆದೇ ಇಲ್ಲ. ಜೊತೆಗೆ ಇವರು ಸಲ್ಲಿಸಿದ ಮತ್ತು ಸಲ್ಲಿಸುತ್ತಿರುವ ಸೇವೆಗಳು ಕೇವಲ ಎಲೆ-ಮರೆಯ ಕಾಯಿಯಂತೆ ಅಗೋಚರವಾಗಿವೆ. ಕೇವಲ ವಿದೇಶಿ ಮಿಶನರಿಗಳು ಮಾತ್ರ ಈ ನಿಟ್ಟಿನಲ್ಲಿ ಗುರುತಿಸಲ್ಪಟ್ಟಿದ್ದಾರೆ. ದೇಶೀಯ ಕ್ರೈಸ್ತ ಸಾಹಿತ್ಯ ಸೇವೆಯನ್ನು ಯಾರು ಅಷ್ಟಾಗಿ ಗಮನಕ್ಕೆ ತಂದುಕೊಂಡತೆ ಕಾಣುವುದಿಲ್ಲ. ಪ್ರಾಯಶಃ ಅವರು ಗಮನಾರ್ಹವಾದ ಸಾಹಿತ್ಯಿಕ ಕೃತಿಗಳನ್ನು ತಂದುಕೊಟ್ಟಿಲ್ಲವೆಂಬುದು ಒಂದು ಕಾರಣವಿರಬಹುದು. ಇಲ್ಲವೇ ಅವರ ಕೃತಿಗಳು ಪ್ರಚಾರವಾಗದೇ ಹೋಗಿರಬಹುದು. ಇವೆಲ್ಲಕ್ಕಿಂತ ಹೆಚ್ಚಾಗಿ ಅವರ ಕೃತಿಗಳು ಧರ್ಮವನ್ನೇ ಮುಂದಿಟ್ಟುಕೊಂಡು ರಚಿಸಿದವೆಂಬ ಪೂರ್ವಭಾವಿ ಮನೋಭಾವ ಮುಖ್ಯ ಕಾರಣವಿರಬಹುದು. ಈ ಸಾಹಿತ್ಯ ಕೃತಿಗಳು ಚರ್ಚ್‌ವಲಯದಿಂದ ಆಚೆಗೆ ಹೋಗದೆ ಇರುವುದು ಮತ್ತು ರಚಿಸಿದ ಲೇಖಕರಿಗೆ ಪ್ರಚಾರದ ಹಂಬಲವಿಲ್ಲದೆ ಇರುವುದು ಹೀಗೆ ಹತ್ತಾರು ಕಾರಣಗಳಿರಬಹುದು.
ಇತ್ತೀಚಿನ ದಿನಗಳಲ್ಲಿ ಹಲವಾರು ಅನುವಾದಗಳು, ಕತೆ, ಕಾದಂಬರಿಗಳು, ನಾಟಕಗಳು, ಧಾರ್ಮಿಕ, ಆಧ್ಯಾತ್ಮಿಕ, ಜಾನಪದ, ಲೌಕಿಕ, ವೈದ್ಯಕೀಯ, ಕ್ರೈಸ್ತ ಧರ್ಮದ ಇತಿಹಾಸ, ಭಾಷಾಂತರ, ರೂಪಾಂತರ ಮತ್ತು ಪತ್ರಿಕೋದ್ಯಮ ಹೀಗೆ ಹಲವಾರು ಕ್ಷೇತ್ರಗಳಡಿಯಲ್ಲಿ ಸೇವೆ ಸಾಗುತ್ತಿದೆ. ಜೊತೆಗೆ ದೇಶೀಯ ಕ್ರೈಸ್ತರಾಗಿ ರೆವರೆಂಡ್ ಉತ್ತಂಗಿ ಚೆನ್ನಪ್ಪ ಮತ್ತು ಡಾ. ನಾ.ಡಿಸೋಜರವರು ಕನ್ನಡ ಕಟ್ಟುವ ಕೆಲಸ ಮಾಡಿ ಕನ್ನಡ ಜನತೆಯಿಂದ ಗುರುತಿಸಲ್ಪಟ್ಟಿರುತ್ತಾರೆ. ’ಅಭಿನವ ಸರ್ವಜ್ಞ’, ’ತಿರುಳ್‌ಗನ್ನಡ ತಿರುಕ’ನೆಂದೇ ಖ್ಯಾತರಾದ ಉತ್ತಂಗಿಯವರನ್ನು ಕ್ರಿ.ಶ. 1949ರಲ್ಲಿ ಗುಲ್ಬರ್ಗದಲ್ಲಿ ನಡೆದ 32ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಕನ್ನಡ ನಾಡು ತನ್ನನ್ನು ಗೌರವಿಸಿಕೊಳ್ಳುವುದರೊಂದಿಗೆ ಮತ್ತೋರ್ವ ಕ್ರೈಸ್ತ ಸಾಹಿತಿ ಡಾ. ನಾ. ಡಿಸೋಜ ಅವರನ್ನು 2014 ಮಡಿಕೇರಿಯಲ್ಲಿ ನಡೆದ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಕನ್ನಡ ನಾಡು ತನ್ನ ಗೌರವವನ್ನು ಇಮ್ಮಡಿಗೊಳಿಸಿಕೊಂಡಿತು.
ಹೀಗೆ ಹಲವಾರು ಕ್ರೈಸ್ತ ಸಾಹಿತಿಗಳು ಹವಳ ಮುಚ್ಚಿದ ಕವಚದಂತೆ ಕನ್ನಡ ಸಾಹಿತ್ಯದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕೊಡುಗೆಯನ್ನು ನೀಡಿದ್ದಾರೆ ಮತ್ತು ನೀಡುತ್ತಿದ್ದಾರೆ. ಅವರ ಕೊಡುಗೆಗಳು ಕೇವಲ ಕೊಡುಗೆಯಾಗಿಯೇ ಉಳಿದಿವೆಯೇ ಹೊರತು ಕನ್ನಡ ಸಾರಸ್ವತ ಲೋಕದ ಮುಂದೆ ಬಂದಿರುವುದಿಲ್ಲ. ಏನಿದ್ದರೂ ಅವರದು ಚರ್ಚ್ ಕಾಂಪೌಡಿನ ಒಳಗೆ ಮಾತ್ರ, ಮಾಧ್ಯಮಗಳ ಕಣ್ಣಿಗಂತೂ ಬೀಳುವುದೇ ಇಲ್ಲ. ಇವರ ಕೊಡುಗೆಗಳು ಅಗೋಚರವಾಗಿವೆ.
ಮುಂದಿನ ಸಂಚಿಕೆಯಲ್ಲಿ ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳು ನೀಡಿರುವ ಕೊಡುಗೆಗಳ ಮಹತ್ವವನ್ನು ತಿಳಿಸಲಾಗುವುದು.
No comments:
Post a Comment