
ಈಸ್ಟರ್ ಎಂಬ ಪದವನ್ನು ಕ್ರಿಯಾಪದವಾಗಿ ಪ್ರಯೋಗಿಸಿದ ಕವಿ ಈಸ್ಟರ್ ಬಗೆಗಿನ ಒಂದು ಒಳನೋಟವನ್ನೇ ಅನಾವರಣಗೊಳಿಸುತ್ತಿದ್ದಾನೆ. ಈಸ್ಟರ್ ಎಂದರೆ ಕೇವಲ ಹಬ್ಬ, ಆಚರಣೆಗಳನ್ನು ಸೂಚಿಸುವುದು ಮಾತ್ರವಲ್ಲ. ಜಯಿಸುವುದು, ಜೀವಂತಗೊಳ್ಳುವುದು, ಪರಿಪೂರ್ಣಗೊಳ್ಳುವುದು, ಸಂಭ್ರಮಿಸುವುದು, ಅಪ್ಪಿಕೊಳ್ಳುವುದು, ಸಂತೈಸುವುದು, ಬದಲಾಗುವುದು ಹೀಗೆ ಕ್ರಿಸ್ತನ ಪುನುರುತ್ಥಾನದಿಂದ ಹಿಡಿದು ಸ್ವರ್ಗಾರೋಣವಾಗುವ ತನಕ ಕ್ರಿಸ್ತನು ಮಾಡಿದಂತಹ ಎಲ್ಲಾ ಕಾರ್ಯಗಳನ್ನು ಸೂಚಿಸುವ ಮಹಾಪದ ಈಸ್ಟರ್ ಎಂದು ಹೇಳಬಹುದು.
ಒಂದು ಮಾತಿನಲ್ಲಿ ಹೇಳಬೇಕಾದರೆ ಈಸ್ಟರ್ ಎನ್ನುವುದು ಸಂಮೃದ್ಧ ಬದುಕಿನ ಪ್ರತೀಕ, ಸಂಪೂರ್ಣ ಬದುಕಿನ ಸಂಚಲನ, ಕ್ರಿಯಾತ್ಮಕತೆ. ಸಮಾಧಿಯಲ್ಲಿ ಯೇಸುವಿನ ಪೂಜ್ಯ ಶರೀರವನ್ನು ಕಾಣದೆ ಕಳವಳಗೊಂಡ ಮರಿಯಳಿಗೆ ತಾನೇ ಸಾಕ್ಷಾತ್ತಾಗಿ ಕಾಣಿಸಿಕೊಂಡು 'ಮರಿಯಾ' ಎಂದು ಹೆಸರಿಡಿದು ಕರೆಯುವುದೇ ಈಸ್ಟರ್. ಇಸ್ರಯೇಲರನ್ನು ಬಿಡುಗಡೆ ಮಾಡುವ ಉದ್ಧಾರಕ ಎಂದು ನಾವೆಲ್ಲ ನಂಬಿದ್ದುದು ವ್ಯರ್ಥವಾಯಿತು ಎಂದು ಹತಾಶೆಯಿಂದ ತಮ್ಮ ಸ್ವಂತ ಗ್ರಾಮವಾದ ಎಮ್ಮಾವುಸ್ ಗೆ ಹೊರಟ ಶಿಷ್ಯರ ಬಳಿಗೆ ಹೋಗಿ ರೊಟ್ಟಿ ಮುರಿದು ಊಟಮಾಡಿ ಪವಿತ್ರಗ್ರಂಥಗಳಲ್ಲಿ ಬರೆದಿರುವುದೆಲ್ಲವನ್ನು ಅವರಿಗೆ ಅಮೂಲಾಗ್ರವಾಗಿ ವಿವರಿಸಿ ಅವರ ಹೃದಯಗಳನ್ನು ಕುತೂಹಲದಿಂದ ಮಿಡಿಯುವಂತೆ ಮಾಡಿ ಜೆರುಸಲೇಮಿಗೆ ಅವರು ಹಿಂದಿರುಗುವಂತೆ ಮಾಡಿದ್ದು ಈಸ್ಟರ್. ಭಯದಿಂದ ಅಡಗಿದ್ದ ಶಿಷ್ಯರಿಗೆ “ನಿಮಗೆ ಶಾಂತಿ” ಎಂದು ಹೇಳುತ್ತಾ ಕಾಣಿಸಿಕೊಂಡಿದ್ದು ಈಸ್ಟರ್. ಕ್ರಿಸ್ತನ ಪುನರುತ್ಥಾನವನ್ನು ಅನುಮಾನಿಸಿದ ತೋಮನನ್ನು ಕರೆದು ನಿನ್ನ ಬೆರಳನ್ನು ಇಲ್ಲಿಟ್ಟು ನೋಡು ಎಂದು ಕೈಯನ್ನು ಚಾಚಿ “ನಂಬಿಕೆ ಕಳೆದುಕೊಳ್ಳಬೇಡ, ವಿಶ್ವಾಸಿಯಾಗು” ಎಂದು ಹೇಳಿದ್ದು ಈಸ್ಟರ್. ಮೀನುಗಳಿಗೆ ಬಲೆ ಹಾಕಿ ರಾತ್ರಿಯಿಡೀ ಪ್ರಯತ್ನಿಸಿದರೂ ಮೀನುಗಳು ಸಿಗದೆ ರೋಸಿ ಹೋಗಿದ್ದ ಪ್ರೇತ್ರ ಮತ್ತು ಇತರರನ್ನು “ಸರಿ ಸರಿ ನಿಮ್ಮ ಬಲೆಯನ್ನು ದೋಣಿಯ ಬಲ ಭಾಗದಲ್ಲಿ ಬೀಸಿ ಮೀನು ಸಿಗುವುದು” ಎಂದು ಹೇಳಿ ರಾಶಿ ರಾಶಿ ಮೀನುಗಳು ಸಿಗುವಂತೆ ಮಾಡಿದ್ದು ಈಸ್ಟರ್. ಪ್ರಾಣಭಯದಿಂದ ಗುರುವನ್ನು ಮೂರುಬಾರಿ ನಿರಾಕರಿಸಿ ಓಡಿಹೋಗಿದ್ದ ಪೇತ್ರನನ್ನು “ಯೊವಾನ್ನನ ಮಗನಾದ ಸಿಮೋನನೇ ಇವರಿಗಿಂತಲೂ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತೀಯಾ?” ಎಂದು ಮೂರಾವರ್ತಿ ಕೇಳಿ ಅವನನ್ನು ಧರ್ಮಸಭೆಯ ಅಸ್ಥಿವಾರವಾಗಿಸುವುದು ಈಸ್ಟರ್.
ಮೇಲೆ ಹೇಳಿದ ಕಿಸ್ತನ ಆ ಎಲ್ಲಾ ಕಾರ್ಯಗಳು ನಮ್ಮ ಜೀವನಗಳಲ್ಲಿ ನಡೆದಿವೆ ಮತ್ತು ನಡೆಯುತ್ತಿವೆ. ಅದರೆ ಸಂದರ್ಭ ಸನ್ನಿವೇಶಗಳಲ್ಲಿ ಮಾತ್ರ ವ್ಯತ್ಯಾಸವಿರಬಹುದು. ಕ್ರಿಸ್ತನಿಂದ ಸಾಂತ್ವನಗೊಂಡಿದ್ದೇವೆ, ಉದಾತ್ತ ಕಾರ್ಯಗಳಲ್ಲಿ ಆಶಾಭಂಗವಾಗಿ ಕೈಚೆಲ್ಲಿ ಕುಳಿತಾಗ ಸೇವೆಯ ಕಾರ್ಯಕ್ಕೆ ಹಿಂದಿರುಗುವಂತೆ ಕ್ರಿಸ್ತ ನಮ್ಮನ್ನು ಪ್ರೇರೇಪಿಸಿದ್ದಾನೆ; ಅಪನಂಬಿಕೆಗಳ ಮನಸ್ಸಿನಲ್ಲಿ ವಿಶ್ವಾಸವನ್ನು ಗಟ್ಟಿಗೊಳಿಸಿದ್ದಾನೆ; ಕಳವಳಗೊಂಡ ನಮ್ಮ ಬದುಕಿಗೆ ಶಾಂತಿಯನ್ನು ದಯಪಾಲಿಸಿದ್ದಾನೆ; ನಮ್ಮೆಲ್ಲಾ ಪ್ರಯತ್ನಗಳನ್ನು ಸಫಲಗೊಳಿಸಿದ್ದಾನೆ. ಇವೆಲ್ಲವೂ ನಮ್ಮ ಬದುಕಿನಲ್ಲಿ ಆಗುವಂತಹ ಈಸ್ಟರುಗಳೇ.
ಕ್ರಿಸ್ತನಿಂದ ನಿತ್ಯ ಸಂಭವಿಸುವ ಇಂತಹ ಈಸ್ಟರುಗಳಿಂದ ನಮ್ಮ ಬದುಕು ಕ್ರಿಯಾತ್ಮಕವಾಗಿವೆ. ಅದಕ್ಕಾಗಿ ಕ್ರಿಸ್ತನಿಗ ಕೃತಜ್ಞತೆ ಹೇಳೋಣ. ಜತೆಗೆ ಇಂತಹ ಈಸ್ಟರುಗಳನ್ನು ಇತರರ ಬಾಳಿಗೆ ಮುಖ್ಯವಾಗಿ ನೊಂದರವರ ಬಾಳಿಗೆ ತರುವಂತಹ ಕಾರ್ಯಕ್ಕೆ ನಾವೆಲ್ಲಾ ಈಸ್ಟರಿನಿಂದ ಪ್ರೇರಣೆಗೊಳ್ಳೋಣ.
ಕವಿಯೊಬ್ಬ ಗುರುವಿನ ಬಗ್ಗೆ ಪುಸ್ತಕವೊಂದನ್ನು ಬರೆಯಲು ಮಠಕ್ಕೆ ಬಂದು “ನೀವು ಮಹಾಜ್ಞಾನಿ, ಪ್ರತಿಭಾವಂತರೆಂದು ಜನ ಅಂದುಕೊಳ್ಳುತ್ತಾರೆ. “ನೀವು ಮಹಾಜ್ಞಾನಿಯೇ?” ಎಂದು ಕೇಳುತ್ತಾನೆ.
“ನೀನೂ ಹಾಗೆ ಭಾವಿಸಬಹುದು” ಎಂದು ನಸುನಗುತ್ತಾ ನುಡಿಯುತ್ತಾರೆ ಗುರು.
“ಮತ್ತೆ ಒಬ್ಬ ಮಹಾಜ್ಞಾನಿ, ಹೇಗಾಗುತ್ತಾನೆ?” ಎಂಬುದು ಬರಹಗಾರನ ಸಂದೇಹ.
“ಕಾಣುವ ಸಾಮರ್ಥ್ಯ ಹೊಂದಿದ್ದರೆ ಸಾಕು” ಎಂದುತ್ತರಿಸುತ್ತಾರೆ ಗುರು.
ಕವಿಗೆ ಗೊಂದಲವಾಗುತ್ತದೆ. ತಲೆ ಕೆರೆದುಕೊಳ್ಳುತ್ತಾ ಅವನಂದು ಕೊಳ್ಳುತ್ತಾನೆ “ಕಾಣುವುದಾದರೂ ಏನನ್ನು?”
ಆಗ ಗುರು ಸಾವಕಾಶವಾಗಿ ಅಷ್ಟೇ ಸ್ಪಷ್ಟವಾಗಿ “ಹುಳುವಿನೊಳಗಿನ ಚಿಟ್ಟೆಯನ್ನು, ಮೊಟ್ಟೆಯೊಳಗಿನ ಗಿಡುಗವನ್ನು, ಸ್ವಾರ್ಥಿ ಮನದೊಳಗಿನ ಸಂತನನ್ನು, ಸಾವಿನೊಳಗಿನ ಜೀವವನ್ನು, ಬೇರ್ಪಟ್ಟವುಗಳಲ್ಲಿ ಒಗ್ಗಟ್ಟನ್ನು, ದೈವತ್ವದೊಳಗೆ ಮಾನವತ್ವವನ್ನು ಮತ್ತು ಮನುಷ್ಯನೊಳಗಿನ ದೈವತ್ವವನ್ನು ಕಾಣಬೇಕು” ಎನ್ನುತ್ತಾರೆ.
ಆಚೆನ್ ಬಿಷಪರಾದ ಕ್ಲಾಸ್ ಹೆಮೆರ್ಲೆಯವರು ತಾವು ಸಾಯುವ ಸಮಯ ಸನ್ನಿಹಿತವಾದಾಗ ಉತ್ಥಾನ (Easter) ಕಾಲದ ಪರಿಪತ್ರ (ಈಸ್ಟರ್ ಲೆಟರ್) ವನ್ನು ಬರೆಯುತ್ತಾ “ I wish each of us Easter eyes: ಸಾವಿನಲ್ಲಿ ಬದುಕ ಕಾಣೋಣ, ತಪ್ಪಿನಲ್ಲಿ ಕ್ಷಮೆ ಕಾಣೋಣ, ಒಡೆದು ಹೋದವು ಒಂದಾಗುವುದ ಕಾಣೋಣ, ಪರಿತಾಪದಲ್ಲಿ ಜಯವನ್ನು ಕಾಣೋಣ, ಮನುಜರಲ್ಲಿ ದೇವರ ಕಾಣೋಣ, ದೇವರಲ್ಲಿ ಮನುಷ್ಯನನ್ನು ಕಾಣೋಣ, ಹಾಗೆಯೇ ನಾನು ಎಂಬಲ್ಲಿ ನೀವು ಎಂಬುದ ಕಾಣೋಣ?” ಎಂದಿದ್ದಾರೆ.
ಪುನರುತ್ಥಾನ ಹಬ್ಬದ ಶುಭಾಶಯಗಳು.
No comments:
Post a Comment