ಕ್ರಿಸ್ಚಿಯನ್ ಕೇರಿಯ ನಡುವೆ ಅನ್ನುವ ಹಾಗೆ ಅಕ್ಕಪಕ್ಕದಲ್ಲಿ ಮಚಾದೋ ಮತ್ತು ಮಿರಾಂಡರ ಎರಡು ಮನೆಗಳು. 100 ಅಡಿ ಉದ್ದ 60 ಅಡಿ ಅಗಲದ ನಿವೇಶನದ ನಡುವೆ ಒಂದೊಂದು ಮನೆ. ಈ ಎರಡೂ ಕುಟುಂಬಗಳು ಇಲ್ಲಿ ಬಹಳ ಹಿಂದಿನಿಂದಲೂ ಇವೆ. ಅಕ್ಕಪಕ್ಕದ ಮನೆಗಳು ಅಂದ ಮೇಲೆ ಜಗಳ, ಮನಸ್ಥಾಪ, ಇದ್ದದ್ದೇ. ಆದರೆ ಇಲ್ಲಿ ಇರುವ ಮನಸ್ಥಾಪ ಎಂದರೆ ನೀರಿನದ್ದು. ಈ ಎರಡೂ ನಿವೇಶನಗಳ ನಡುವೆ ಒಂದು ಬಾವಿ ಇದೆ. ಈ ಬಾವಿ ಬೇಸಿಗೆ ಕಾಲದಲ್ಲಿ ಒಣಗಿ ನೀರು ಪಾತಾಳಕ್ಕೆ ಹೋಗಿ ತಲುಪಿದಾಗ ಇಲ್ಲಿ ಈ ಎರಡೂ ಕುಟುಂಬಗಳ ನಡುವೆ ನಿತ್ಯ ಕಲಹ ಪ್ರಾರಂಭವಾಗುತ್ತದೆ. ಇರುವ ಅಲ್ಪ ಸ್ವಲ್ಪ ನೀರನ್ನ ಸೇದಿಕೊಳ್ಳಲು ಹೋರಾಟ. ಪೈಪೋಟಿ ಕೈಕೈ ಮಿಲಾಯಿಸಿ ಜಗಳ. ಹಿಂದೆ ಹೀಗೆ ಇರಲಿಲ್ಲ.
ಅದೇನೋ ಬೇಸಿಗೆಯಲ್ಲಿ ಎಂದೂ ನೀರಿಗೆ ಬರಗಾಲ ಬರುತ್ತಿರಲಿಲ್ಲ. ಸದಾ ಹತ್ತನೇ ಮೆಟ್ಟಿಲವರೆಗೆ ನೀರು ಇರುತ್ತಿತ್ತು. ನಡು ಬೇಸಿಗೆಯಲ್ಲಿ ಕೊಂಚ ಹೊತ್ತು ಬಿಟ್ಟರೆ ನೀರು ತಾನಾಗಿ ತುಂಬಿ ಕೊಳ್ಳುತ್ತಿತ್ತು. ಅಲ್ಲದೆ ಈ ಎರಡೂ ನಿವೇಶನಗಳ ನಡುವೆ ಅನ್ನುವ ಹಾಗೆ ಈ ಬಾವಿಯನ್ನ ತೋಡಿದವರ ಇರಾದೆ ಕೂಡ ಇಬ್ಬರೂ ಈ ಬಾವಿಯ ನೀರನ್ನ ಬಳಸಿ ಕೊಳ್ಳಬೇಕು ಅನ್ನುವುದೇ ಆಗಿತ್ತು. ಬಾವಿ ತೋಡಿಸುವುದು, ಹಣ ನೀಡುವುದು, ಕೆಲಸ ಮಾಡಿಸುವುದು ಕಷ್ಟದ ಕೆಲಸವಾಗಿದ್ದರಿಂದ ಈ ಮನೆಗಳ ಹಿರಿಯರು ಎರಡೂ ಮನೆಗೆ ಒಂದು ಬಾವಿ ಇರಲಿ ಎಂಬ ನಿರ್ಧಾರಕ್ಕೆ ಬಂದಿದ್ದರು. ಇದು ಒಮ್ಮತದ ನಿರ್ಧಾರ. ಇದಕ್ಕೆ ಸಾಕ್ಷಿ ಇತ್ಯಾದಿ ಏನೂ ಇರಲಿಲ್ಲ. ಇಬ್ಬರ ಒಪ್ಪಿಗೆಯೇ ಸಾಕ್ಷಿ. ಇದು ಕೂಡ ಬಹಳ ದಿನ ನಡೆದುಕೊಂಡು ಬಂದಿತ್ತು.
ಆದರೆ ಕ್ರಮೇಣ ಬೇಸಿಗೆ ಬಂದು ನೀರು ಕಡಿಮೆ ಆಯಿತು, ಜಗಳ ಆಡಲು ಮನೆಗಳವರಿಗೆ ಬೇರೆ ಬೇರೆ ಕಾರಣಗಳು ದೊರೆತವು. ಅದರಲ್ಲೂ ಸಮಾಜದಲ್ಲಿ ತುಸು ಭಲಾಢ್ಯನಾದ ಮಚಾದೋ ನಿಧಾನವಾಗಿ ನಡುವಣ ಬೇಲಿಯನ್ನ ವಿಸ್ತರಿಸಿ ಬಾವಿಯನ್ನ ತನ್ನ ಕಬ್ಜೆಗೆ ತೆಗೆದುಕೊಂಡ. ಪ್ರತಿ ವರ್ಷ ಹೊಸ ಬೇಲಿ ಹಾಕಿಸುತ್ತಿದ್ದ ಆತ ಬಾವಿ ತನ್ನ ಜಮೀನಿನೊಳಗೆ ಬರುವಂತೆ ಬೇಲಿ ವಿಸ್ತರಿಸಿಕೊಂಡ. ಇದು ಮನಸ್ತಾಪಕ್ಕೆ ಕಾರಣವಾಯಿತು. ತುಸು ದುರ್ಬಲನಾಗಿದ್ದ ಮಿರಾಂಡ ಪುರಸಭೆಗೆ ದೂರು ನೀಡಿದ, ಅವರು ಬಂದು ಜಾಗ ಅಳೆದು ಮಚಾದೋಗೆ ನೋಟೀಸ ನೀಡಿ ಹೋದರು. ಆದರೂ ಮಚಾದೋ ಬೇಲಿ ತೆಗೆಯಲಿಲ್ಲ. ಇದು ದೊಡ್ಡ ರಂಪಾಟಕ್ಕೆ ಕಾರಣವಾಯಿತು. ಹಳಬರಲ್ಲಿ ಇದ್ದ ಹೊಂದಾಣಿಕೆ, ಕೊಟ್ಟು ತೆಗೆದುಕೊಳ್ಳುವ ಮನೋಭಾವ ಕ್ರಮೇಣ ಮಾಯವಾಯಿತು.
ಮಿರಾಂಡನ ಮಗ ಈ ಬದಿಯಿಂದ ಬಾವಿಯ ಕಟ್ಟೆಯ ಮೇಲೇರಿ ಮಚಾದೋನ ಹಗ್ಗ ತೆಗೆದು ಎಸೆದ. ಮಚಾದೋ ಮಗ ಕೂಡ ಸುಮ್ಮನುಳಿಯಲಿಲ್ಲ. ಅವನು ಇವರ ಹಿತ್ತಲಿಗೆ ನುಗ್ಗಿ ಕೈ ಮಾಡಿದ. ಹೊಡೆದಾಟವಾಯಿತು. ಬಡಿದಾಡಿಕೊಂಡರು. ಅವನು ಇವನಿಗೆ ಇವನು ಅವನಿಗೆ ಹೊಡೆದದ್ದೂ ಆಯಿತು. ಜಗಳ ಪೋಲೀಸರವರೆಗೂ ಹೋಯಿತು. ಪ್ರತಿಷ್ಠೆ, ಅಭಿಮಾನ ಅಡ್ಡ ಬಂದಿತು. ಪುರಸಭೆ, ಪೋಲೀಸರು ಎಂದೆಲ್ಲ ಇಬ್ಬರೂ ಜಬ್ಬಿ ಹೋದರು. ಇದು ವಿಪರೀತಕ್ಕೆ ಹೋಗಲು ಮತ್ತೂ ಒಂದು ಕಾರಣವೆಂದರೆ ಹತ್ತಿರದಲ್ಲಿ ಎಲ್ಲಿಯೂ ಬಾವಿಗಳು ಇಲ್ಲದಿರುವುದು. ಊರಿಗೆ ನಲ್ಲಿ ಬಾರದಿರುವುದು.
ಅಂತು ಬೇಸಿಗೆ ಬಂದರೆ ಇಲ್ಲಿ ಜಗಳ ಪ್ರಾರಂಭ. ಮಚಾದೋ ಮನೆಯವರು ಮಿರಾಂಡನ ಮನೆಗೆ ನೀರು ಕೊಡುತ್ತಿದ್ದರು. ಮಾರ್ಚ ತಿಂಗಳವರೆಗೆ ಅವರು ಇವರಿಗೆ ನೀರನ್ನ ನೀಡುತ್ತಿದ್ದರು ಆನಂತರ "ನಮಗೆ ನೀರು ಸಾಲೋದಿಲ್ಲ, ನೀವು ಬೇರೆ ಕಡೆ ನೋಡಿಕೊಳ್ಳಿ" ಎಂದು ಮಚಾದೋ ಹೆಂಡತಿ ಕತ್ರೀನ ಮಿರಾಂಡನ ಹೆಂಡತಿಯ ಮುಖಕ್ಕೆ ಹೇಳುತ್ತಿದ್ದಳು.
"ಅಯ್ಯೋ ದೇವರೇ ನಾವು ಎಲ್ಲಿಗೆ ಹೋಗೋದು ? ಅಷ್ಟಕ್ಕೂ ಈ ಬಾವಿ ನಮ್ಮದೇ ಅಲ್ವಾ" ಎಂದು ಆಕೆ ಬಾಯಿ ಮಾಡುತ್ತಿದ್ದಳು.
"ಏನು ಬೇಲೀನಾ ಒತ್ತರಿಸಿಕೊಂಡು ಹಾಕಿಕೊಂಡಿರೋದರ ಜೊತೆಗೆ ಬಾವಿ ಜಮೀನು ನಿಮ್ಮದಾಯ್ತ...."
ಮಾತಿಗೆ ಮಾತು ಬೆಳೆದು ಮನೆ ಮಂದಿ ಜಗಳಕ್ಕೆ ನಿಲ್ಲುತ್ತಿದ್ದರು. ಪ್ರತಿ ಬೇಸಿಗೆ ಬಂತೆಂದರೆ ಕೇರಿಯ ಜನರಿಗೆ ಇದೊಂದು ಮನರಂಜನೆ. ವಿಷಯ ಪಾದರಿಗೂ ಹೋಯಿತು. ಅವರು ಇಬ್ಬರನ್ನೂ ಕರೆದು ಸಮಾಧಾನ ಹೇಳಿದರು.
"ಊರ ಜನ ನೋಡುತ್ತಾರೆ. ಇತರೇ ಧರ್ಮೀಯರ ಎದಿರು ಅವಮಾನ, ಇರುವ ನೀರನ್ನ ಇಬ್ಬರೂ ಹಂಚಿಕೊಳ್ಳಿ, ಸುಧಾರಿಸಿಕೊಂಡು ಹೋಗಿ" ಎಂದರು ಪಾದರಿ. ಈ ಮಾತು ಅಲ್ಲಿ ಮಾತ್ರ ಕೇಳಿ ಬಂದಿತು. ಏಪ್ರಿಲ್ ತಿಂಗಳ ಪಾಸ್ಕ ಹಬ್ಬದ ದಿನ ಮಚಾದೋ ಮಗ ಮಿರಾಂಡ ಮಗ ಹಾಕಿದ ಹಗ್ಗ ತೆಗೆದು ಹಾಕಿ, "ಯಾವ ಬೋಸುಡಿ ಮಗ ನಮ್ಮ ಬಾವಿಗೆ ಹಗ್ಗ ಹಾಕಿದ್ದು" ಎಂದು ಗುಟುರು ಹಾಕಿದ. ಮಚಾದೋ ಮಗ ತೋಳೇರಿಸಿಕೊಂಡು ಹೊರ ಬಂದ. ಹಿಂದೆಯೇ ಕೇರಿಯ ಎಲ್ಲ ಮನೆಗಳ ಜಗಲಿಗಳ ಮೇಲೆ ಜನ ಬಂದು ನಿಂತು ಕಾದರು ಪುಕ್ಕಟೆ ಮನರಂಜನೆಗಾಗಿ.
******
ಮೊನ್ನೆ ಒಂದು ಘಟನೆ ನಡೆಯಿತು. ಮೊದಲ ಮಳೆ ಬಿದ್ದು ಮೂರು ದಿನ ಆಗಿರಲಿಲ್ಲ ಬಾವಿ ಒಳಗಿನಿಂದ ಏನೋ ಸದ್ದು ಕೇಳಿಸಿತು. ಕೇರಿಯ ಜನ ನುಗ್ಗಿ ಬಂದು ನೋಡಿದರು. ಒಳಗೆ ಬಾವಿ ಕುಸಿದಿತ್ತು. ಮೆಟ್ಟಿಲು ಮೆಟ್ಟಿಲಾಗಿ ಕಟ್ಟಿದ ಕಲ್ಲುಗಳೆಲ್ಲ ಕೆಳಗೆ ಜಾರಿದ್ದರಿಂದ ಬಾವಿ ಇರುವುದಕ್ಕಿಂತ ಅಗಲವಾಗಿ ಮಣ್ಣು ಒಳಗೆ ಕುಸಿದು ದೊಡ್ಡ ಪಾತಾಳವಾಗಿತ್ತು. ಈಗ ಮಚಾದೋ ಹೆಂಡತಿ ಮತ್ತು ಮಿರಾಂಡನ ಹೆಂಡತಿ ಸೊಂಟಕ್ಕೆ ಒಂದೊಂದು ಕೊಡಪಾನ ಚಚ್ಚಿಕೊಂಡು ತುಸು ದೂರದ ಸರಕಾರಿ ಬಾವಿಗೆ ಹೋಗುತ್ತಾರೆ. ಹಶ್ ಹುಶ್ ಎಂದು ನೀರು ಹೊರುತ್ತಾರೆ.
"ಅಲ್ಲ ಎಷ್ಟ ದಿನ ಹೀಗೆ?" ಎಂದು ಮಚಾದೋ ಹೆಂಡತಿ ಗಂಡನ ಮುಖ ನೋಡುತ್ತಾಳೆ.
"ಅಲ್ಲ ಎಷ್ಟ ದಿನ ಹೀಗೆ” ಎಂದು ಮಿರಾಂಡನ ಹೆಂಡತಿ ಗಂಡನ ಮುಖ ನೋಡುತ್ತಾಳೆ.
"ಜಗಳ ಆಡತಿದ್ರಲ್ಲ....ಆಡಿ" ಅನ್ನುತ್ತಾರೆ ಇಬ್ಬರೂ. ಮಚಾದೋ ಮಿರಾಂಡ ಇಬ್ಬರೂ ತಮ್ಮ ತಮ್ಮ ನಿವೇಶನದಲ್ಲಿ ಒಂದೊಂದು ಬಾವಿ ತೋಡಿಸಲು ಬ್ಯಾಂಕಿನ ಸಾಲಕ್ಕೆ ಅರ್ಜಿ ಹಾಕಿ ಕೊಂಡಿದ್ದಾರೆ. ಹಿಂದೆಯೇ ಮಾಲತಿ ಹೊಳೆಯಿಂದ ಊರಿಗೆ ನೀರು ತರಲು ಪುರಸಭೆ ಹೊರಟಿದೆ. ಇದಕ್ಕೆ ಇನ್ನೆಷ್ಟು ದಿನ ಕಾಯಬೇಕೋ. ಅಲ್ಲಿಯ ವರೆಗೆ ಕೇರಿಯಲ್ಲಿ ಬೇಸಿಗೆಯ ಜಗಳವಿಲ್ಲ ಅನ್ನುವುದೇ ಒಂದು ಸಮಾಧಾನ. ಈ ಇಬ್ಬರೂ ಹೆಂಗಸರಿಗೆ ನೀರು ಹೊರುವುದು ಮಾತ್ರ ತಪ್ಪಿಲ್ಲ ಅನ್ನುವುದೂ ಸತ್ಯವೇ.
No comments:
Post a Comment