ಭಾರತ ಮತ್ತು ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಕ್ರೈಸ್ತರ ಪ್ರಮಾಣ ಶೇಕಡಾ ಮೂರರಷ್ಟು ಇದೆ ಎನ್ನುವುದು ಒಂದು ಅಂದಾಜು. ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ, ಈ ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯದ ಕೊಡುಗೆ ಅಗಣಿತವಾದದ್ದು. ದೇಶದ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರದ ಆನಂತರ, ಕ್ರೈಸ್ತರು ಎರಡನೇ ಸ್ಥಾನದಲ್ಲಿ ಬಂದು ನಿಲ್ಲುತ್ತಾರೆ. ಎರಡು ಲಕ್ಷಕ್ಕೂ ಅಧಿಕ ಶಾಲಾ ಕಾಲೇಜುಗಳನ್ನು, ಸುಮಾರು ಐವತ್ತು ಸಾವಿರಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಕ್ರೈಸ್ತರು, ದೇಶದ ಮೂರನೇ ಒಂದು ಪಾಲಿನಷ್ಟು ವಿದ್ಯಾರ್ಥಿ ಸಮುದಾಯಕ್ಕೆ ಶಿಕ್ಷಣವನ್ನು ಧಾರೆಯೆರೆಯುತ್ತಿದ್ದಾರೆ. ನಗರ ಪ್ರದೇಶಗಳಲ್ಲಷ್ಟೇ ಅಲ್ಲ, ಸರ್ಕಾರ ಇನ್ನೂ ಕಾಲಿಡದ ಪ್ರದೇಶಗಳಲ್ಲೂ ಜನರಿಗೆ ಆರೋಗ್ಯ ಸೇವೆ ನೀಡುತ್ತಿರುವ, ಸಮಾಜ ಸುಧಾರಣೆಯ ವಿವಿಧ ಕಾರ‍್ಯಕ್ರಮಗಳಲ್ಲಿ ಸಮಾಜ ಸುಧಾರಣಾ ಚುಟುವಟಿಕೆಗಳಲ್ಲಿ ನಿಸ್ಪೃಹರಾಗಿ ದುಡಿಯುತ್ತಿರುವ ಕ್ರೈಸ್ತ ಸಮುದಾಯ ದೇಶದ ಸಮಗ್ರ ಆರ್ಥಿಕ ಅಭಿವೃದ್ಧಿಯಲ್ಲಿ ತನ್ನದೇ ಆದ ಪಾಲುದಾರಿಕೆಯನ್ನು ನಿಭಾಯಿಸುತ್ತಾ ಬಂದಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
‘ಮೊದಲಿನಿಂದಲೂ, ಸ್ವಾತಂತ್ರ್ಯದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಪಕ್ಷವನ್ನು ಪೂರ್ಣ ನಿಷ್ಠೆಯಿಂದ ಬೆಂಬಲಿಸುತ್ತಾ ಬಂದಿದೆ ಎಂಬ ಆರೋಪ ಕ್ರೈಸ್ತ ಸಮುದಾಯದ ಮೇಲಿದೆ. ಆ ಪಕ್ಷವು, ಕ್ರೈಸ್ತ ಸಮುದಾಯವು ಸದಾಕಾಲ ತನ್ನೊಂದಿಗೆ ಇದೆ, ಇದ್ದೇ ಇರುತ್ತದೆ ಎಂದು ಭಾವಿಸಿದಂತಿದೆ. ಇದೇ ಕಾರಣವಾಗಿಯೇ ಕ್ರೈಸ್ತ ಸಮುದಾಯ ಉಳಿದ ಪಕ್ಷಗಳಿಂದ ಉಪೇಕ್ಷೆಗೆ, ತುಚ್ಛೀಕರಣಕ್ಕೆ ಒಳಗಾಗುತ್ತಾ ಬಂದಿದೆ’ ಎಂಬ ಭಾವ ಇತ್ತೀಚೆಗೆ ಈ ಸಮುದಾಯದಲ್ಲಿ ಮೂಡತೊಡಗಿದೆ.
ರಾಜ್ಯದಲ್ಲಿ 225 ವಿಧಾನಸಭಾ (ಒಬ್ಬರು ಆಂಗ್ಲೊ ಇಂಡಿಯನ್ ಸಮುದಾಯದ ನಾಮಕರಣ ಸದಸ್ಯರು) ಮತ್ತು 75 ವಿಧಾನ ಪರಿಷತ್ತಿನ ಸ್ಥಾನಗಳಲ್ಲಿ ಸಂಖ್ಯಾ ದೃಷ್ಟಿಯಿಂದ ನ್ಯಾಯವಾಗಿ, 8 ಜನ ವಿಧಾನಸಭಾ ಸದಸ್ಯ ಮತ್ತು ವಿಧಾನ ಪರಿಷತ್ತಿನ 3 ಸದಸ್ಯ ಸ್ಥಾನಗಳು ಕ್ರೈಸ್ತ ಸಮುದಾಯದವರಿಗೆ ಸಿಗಬೇಕು. ಆದರೆ, ಕ್ರೈಸ್ತ ಸಮುದಾಯದವರಿಗೆ ನಿಜವಾಗಿಯೂ ಸಿಕ್ಕಿದ್ದೆಷ್ಟು? ಎರಡು ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಪರಿಷತ್ತಿನ ಸದಸ್ಯ ಸ್ಥಾನ.
‘ಜಾತ್ಯತೀತ ನಿಲುವಿನ ಶತಮಾನದ ಪಕ್ಷವು, ರಾಜ್ಯದಲ್ಲಿ ಕ್ರೈಸ್ತ ಸಮುದಾಯಕ್ಕೊಂದು ಪ್ರತ್ಯೇಕ ಅಭಿವೃದ್ಧಿ ಮಂಡಳಿ ರಚಿಸಲು ಇದುವರೆಗೂ ಮುಂದಾಗಲಿಲ್ಲ. ಹಾಲಿ ಅಸ್ತಿತ್ವದಲ್ಲಿ ಇರುವ ಅಲ್ಪಸಂಖ್ಯಾತರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪದವಿಯನ್ನು ಸರದಿಯ ಮೇಲೆ ಕ್ರೈಸ್ತ ಸಮುದಾಯದ ನಾಯಕರುಗಳಿಗೆ ಕೊಡಲಿಲ್ಲ, ಈಗ, ಬೆಂಗಳೂರು ಸೆಂಟ್ರಲ್, ಮಂಗಳೂರು, ಉಡುಪಿ, ಕಾರವಾರ ಮತ್ತು ಬೀದರ್ ಗಳಲ್ಲಿ ಕ್ರೈಸ್ತರ ಪ್ರಮಾಣ ಗಣನೀಯವಾಗಿದ್ದರೂ, ಶತಮಾನಗಳ ಇತಿಹಾಸದ ಪಕ್ಷ, 28 ಲೋಕಸಭಾ ಕ್ಷೇತ್ರಗಳಲ್ಲಿ, ತನ್ನ ಪಾಲಿಗೆ ಬಂದ 22 ಕ್ಷೇತ್ರಗಳಲ್ಲಿ ಒಬ್ಬ ಕ್ರೈಸ್ತ ಅಭ್ಯರ್ಥಿಗೂ ಅವಕಾಶ ಕಲ್ಪಿಸಲಿಲ್ಲ’ ಎನ್ನುವುದು ಕ್ರೈಸ್ತ ಸಮುದಾಯದ ನಾಯಕರ ಅಸಮಾಧಾನ. ಕ್ರೈಸ್ತ ಸಮುದಾಯಕ್ಕೆ ಸೇರಿದ ಇಬ್ಬರು ಹಿರಿಯ ನಾಯಕರು ರಾಜಿನಾಮೆ ನೀಡಿದ್ದೂ ಆಯಿತು. ಆ ಹಿರಿಯ ನಾಯಕರೋ ಹಣ್ಣಾದ ಎಲೆಗಳು. ಅವರು, ಅವರಂಥವರ ಸ್ಥಾನಗಳನ್ನು ತುಂಬುತ್ತಾ ಹೋಗಲು ಎರಡನೇ ಅಥವಾ ಮೂರನೇ ಹಂತದ ನಾಯಕರ ಸಿದ್ಧಪಡಿಸುವ ಪ್ರಕ್ರಿಯೆ ಸರಿಯಾಗಿ ನಡದೇ ಇಲ್ಲ. ಗೆಲ್ಲುವ ಕುದುರೆಗಳ ಬೆನ್ನು ಹತ್ತುವ ಪಕ್ಷಕ್ಕೆ ಯಾರು ಹಿತವರಾದಾರು?
ಈ ಹಿಂದೆ ಬಲಪಂಥೀಯ ಸಂಘಟನೆಗಳು ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿ ಹಿಂಸಾಚಾರ ನಡೆಸುತ್ತಿರುವುದನ್ನು ಸುಮ್ಮನೇ ಗಮನಿಸುತ್ತಾ, ಮತ್ತೊಂದೆಡೆ ಸಮುದಾಯಕ್ಕೆ ಸಾಂತ್ವನ ಹೇಳಲು ಮುಂದಾಗುತ್ತಿದ್ದ ಯಡಿಯೂರಪ್ಪ ಅವರ ಸರ್ಕಾರ, ಕ್ರೈಸ್ತರ ಅಭಿವೃದ್ಧಿ ಸಮಿತಿ ರಚನೆಗೆ ಪ್ರಾಥಮಿಕ ಹಂತದಲ್ಲಿ 50 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದು ಸೋಮಶೇಖರ ಆಯೋಗದ ವರದಿಯ ಫಲ. ಅದನ್ನೇ ಒಂದು ರಾಜಕೀಯ ನಡೆಯಾಗಿಸಿ ಹಿಂದಿನ ಐದು ವರ್ಷಗಳಲ್ಲಿ ಸಿದ್ದರಾಮಯ್ಯ ಆ ಮಂಜೂರಾತಿಯನ್ನು ಏರಿಸುತ್ತಾ ಬಂದರು. ಆದರೆ ಅವರ ಸರ್ಕಾರವು ಕ್ರೈಸ್ತರ ಅಭಿವೃದ್ಧಿ ಸಮಿತಿಯನ್ನು ಮಂಡಳಿಯಾಗಿ ಪರಿವರ್ತಿಸಲು ಭೂಮಿಕೆಯನ್ನಷ್ಟೇ ಸಿದ್ಧಪಡಿಸಿದ್ದರೆ, ಬದಲಾದ ಪರಿಸ್ಥಿತಿ ಆನಂತರ ಅಸ್ತಿತ್ವದಲ್ಲಿ ಬಂದ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ, ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಕ್ರೈಸ್ತರ ಅಭಿವೃದ್ಧಿ ಮಂಡಲಿ ಸ್ಥಾಪನೆಗೆ ಒಪ್ಪಿಗೆ ಸೂಚಿಸಿದ್ದು ಒಂದು ಸಕಾರಾತ್ಮಕ ಬೆಳವಣಿಗೆ ಎಂಬುದನ್ನು ಗುರುತಿಸದೇ ಇರಲಾಗದು.
ನಿರ್ದಿಷ್ಟ ಆಹಾರ ಸಂಸ್ಕೃತಿಯನ್ನು ಹೇರುತ್ತಿರುವ ಪ್ರಸಕ್ತ ಕೇಂದ್ರದ ಹಾಲಿ ಸರ್ಕಾರದ ಕಾರ‍್ಯಕರ್ತರ ನಡೆ ಕನ್ನಡ ನಾಡಿನ ದಲಿತರು, ಕೊಡವರು, ಒಕ್ಕಲಿಗರು ಹಾಗೂ ಅಲ್ಪಸಂಖ್ಯಾತ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಗಳಲ್ಲಿ ಆತಂಕ ಉಂಟು ಮಾಡಿರುವುದು ಜಗಜ್ಜಾಹೀರಾದ ಸಂಗತಿಯಾಗಿದೆ. ಆಗಾಗ, ಒಂದೇ ದೇಶ, ಒಂದೇ ಜನ ಸಮುದಾಯ, ಒಂದೇ ಭಾಷೆಯ ಒಳಸುಳಿವ ಹರಿವನ್ನು ಹುರಿಗಟ್ಟಿಸಿ ಹರಿಬಿಡಲಾಗುತ್ತಿದೆ. ಈಶಾನ್ಯ ರಾಜ್ಯಗಳು, ಕೇರಳ ಮತ್ತು ಗೋವೆಗಳಲ್ಲಿ ಚುನಾವಣೆಗಳ ಸಂದರ್ಭಗಳಲ್ಲಿ ನಿರ್ಣಾಯಕವಾಗುವ ಗುಂಪಿನ ಕ್ರೈಸ್ತ ಸಮುದಾಯದ ಜನನಾಯಕರು ಹಲವು ವರ್ಷಗಳ ಹಿಂದೆಯೇ ಬಗೆಬಗೆಯ ಚಿಂತನೆಯ ರಾಜಕೀಯ ಪಕ್ಷಗಳಲ್ಲಿ ಹರಿದುಹಂಚಿಹೋಗಿದ್ದಾರೆ. ಈಗ ಕರ್ನಾಟಕದ ಸರದಿ ಬಂದಂತಿದೆ.
‘ಅಧಿಕಾರದ ಚುಕ್ಕಾಣಿ ಸದಾ ತಮ್ಮ ಮನೆಯ ನಾಲ್ಕು ಗೋಡೆಗಳಲ್ಲೇ ಕಾಲು ಮುರಿದುಕೊಂಡು ಬಿದ್ದಿರಬೇಕು’ ಎಂಬ ಆಲೋಚನೆಯಿಂದ ತಂದೆ ಒಂದು ಪಕ್ಷದಲ್ಲಿದ್ದರೆ, ತಮ್ಮ ಇನ್ನೊಂದು ಪಕ್ಷದಲ್ಲಿ, ಮಗ ಮಗದೊಂದು ಪಕ್ಷ ಮತ್ತು ಸೊಸೆ ಮತ್ತೊಂದು ಪಕ್ಷದಲ್ಲಿದ್ದು ಅಧಿಕಾರದ ಸವಿಯನ್ನು ತಪ್ಪದೇ ಸವಿಯುತ್ತಾ ಬಂದಿರುವುದು ನಮ್ಮ ಕಣ್ಣೆದುರಿನಲ್ಲಿಯೇ ಇದೆ. ಜೊತೆಗೆ, ಕರ್ನಾಟಕದಲ್ಲಿ ಸುಮಾರಾಗಿ ಎಲ್ಲಾ ಸಮುದಾಯಗಳು ಒಂದಿಲ್ಲೊಂದು ಬಗೆಯಲ್ಲಿ ಸಂಘಟಿತರಾಗಿ ವಿವಿಧ ರಾಜಕೀಯ ಪಕ್ಷಗಳು ಹಾಗೂ ಅಂದಂದಿನ ಸರ್ಕಾರಗಳ ಮೇಲೆ ಪ್ರಭಾವ ಬೀರುವಲ್ಲಿ ಯಶಸ್ಸು ಕಾಣುತ್ತಿರುವುದು ಇತ್ತೀಚೆಗಿನ ಬೆಳವಣಿಗೆ.
ಆಯಾ ಸಮುದಾಯದ ನಾಯಕರು ವಿವಿಧ ಗುಂಪುಗಳಲ್ಲಿ ಬೇರೆ ಬೇರೆ ಪಕ್ಷಗಳನ್ನು ಬೆಂಬಲಿಸುತ್ತಾ ಬಂದಿದ್ದಾರೆ, ಅವುಗಳ ಈ ನಡೆ ಆಯಾ ಸಮುದಾಯಗಳಿಗೆ ತಕ್ಕಂತೆ ಫಲಕೊಟ್ಟಿದೆ ಎನ್ನುವವರು, ಉದಾಹರಣೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಮೊದಲಾದವರತ್ತ ಬೆರಳು ತೋರುತ್ತಾರೆ. ಅದೇ ಬಗೆಯಲ್ಲಿ ಕ್ರೈಸ್ತ ಸಮುದಾಯವೂ ಹೆಜ್ಚೆ ಇಡಬೇಕು ಎಂಬ ಯೋಚನೆಗಳು ಕ್ರೈಸ್ತ ನಾಯಕರಲ್ಲೂ ಸುಳಿದಾಡತೊಡಗಿವೆ. ಕ್ರೈಸ್ತ ಸಮುದಾಯದವರೂ ಕೂಡ, ವಿವಿಧ ಗುಂಪುಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಒಡನಾಟ ಬೆಳಿಸಿಕೊಂಡಿದ್ದರೆ, ಕ್ರೈಸ್ತರು ಅವುಗಳಿಂದ ಉಪೇಕ್ಷೆಗೆ ಒಳಗಾಗಬೇಕಾದ ಪ್ರಸಂಗ ಬರುತ್ತಿರಲಿಲ್ಲ ಎಂಬುದು ಪ್ರಸಕ್ತ ವಿದ್ಯಮಾನದ ಒಂದು ವಿಶ್ಲೇಷಣೆ.
ದೇಶದಲ್ಲಿ ಲೋಕಸಭೆಯ ಚುನಾವಣೆಯ ನಡೆಯುತ್ತಿರುವ ಸಂದರ್ಭದಲ್ಲಿ, ಕರ್ನಾಟಕದ ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯ ಈಗ ಕವಲು ದಾರಿಯಲ್ಲಿ ಬಂದು ನಿಂತಿದ್ದಂತೂ ಸತ್ಯ.
--------------------------------------
ಕರ್ನಾಟಕದ ಕ್ರೈಸ್ತ ರಾಜಕಾರಣಿಗಳು
ಸಾಮಾಜಿಕ ಕಾರಣಗಳಿಂದ ಪ್ರಜಾಪ್ರಾತಿನಿಧ್ಯದಲ್ಲಿ ನಮ್ಮ ಸಂವಿಧಾನ ಭಾರತದಲ್ಲಿನ ಅಲ್ಪಸಂಖ್ಯಾತ ಕ್ರೈಸ್ತರನ್ನು ಎರಡು ಗುಂಪುಗಳಲ್ಲಿ ಗುರುತಿಸಿದೆ. ಒಂದು, ಭಾರತದ ನೆಲಮೂಲದ ಕ್ರೈಸ್ತರು, ಇನ್ನೊಂದು ಬ್ರಿಟಿಷರು ಮತ್ತು ಸ್ಥಳೀಯ ಸಂಸರ್ಗದಿಂದ ಹುಟ್ಟಿದ ಆಂಗ್ಲೋ ಇಂಡಿಯನ್ ಸಮುದಾಯ. ಅಲ್ಪಸಂಖ್ಯಾತ ಕ್ರೈಸ್ತರಲ್ಲಿ ಮತ್ತಷ್ಟು ಅಲ್ಪಸಂಖ್ಯಾತರಾಗಿರುವ ಇಂಗ್ಲಿಷ್ ಮಾತೃಭಾಷೆ ಹೊಂದಿರುವ ಆಂಗ್ಲೋ ಇಂಡಿಯನ್ ಸಮುದಾಯದವರ ಹಿತಾಸಕ್ತಿಗಳನ್ನು ರಕ್ಷಿಸಲು ಶಾಸನ ಸಭೆಗಳಲ್ಲಿ ಅವರನ್ನು ನಾಮಕರಣ ಮಾಡಲಾಗುತ್ತದೆ. ಹೀಗಾಗಿ, ಲೆಕ್ಕದಲ್ಲಿ ಅವರನ್ನು ಸಮಸ್ತ ಕ್ರೈಸ್ತರ ರಾಜಕೀಯ ಪ್ರತಿನಿಧಿಗಳು ಎಂದು ಪರಿಗಣಿಸುವುದು ಎಷ್ಟು ಸರಿ?
ಕರ್ನಾಟಕದಲ್ಲಿ ಕ್ರೈಸ್ತರನ್ನು ರಾಜಕೀಯವಾಗಿ ಪ್ರತಿನಿಧಿಸುವವರು ಬೆರಳೆಣಿಕೆಯಷ್ಟಿದ್ದರೂ, ಅವರು ಕರಾವಳಿ ಮತ್ತು ಕೊಡಗು ಜಿಲ್ಲೆಯ ಮೂಲದವರು ಎಂಬುದು ವಿಶೇಷ. ಸದ್ಯಕ್ಕೆ ಕರ್ನಾಟಕದ ರಾಜ್ಯ ಸರ್ಕಾರದಲ್ಲಿ ಕ್ರೈಸ್ತ ಪ್ರತಿನಿಧಿ ಎಂದುಕೊಳ್ಳುವ/ ಎಂದುಕೊಳ್ಳಬಹುದಾದ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಜೆ.ಜಾರ್ಜ್ (ಕೇಳಚಂದ ಜೋಸೆಫ್ ಜಾರ್ಜ್) ಕೊಡಗು ಜಿಲ್ಲೆಯ ಮೂಲದವರು, ಏಕೆಂದರೆ ಅವರ ರಾಜಕೀಯ ಜೀವನ ಆರಂಭವಾಗುವುದು ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನಿಂದ. ಈ ಹಿಂದೆ ಕಾಂಗ್ರಸ್ ಪಕ್ಷದಲ್ಲಿ ಕರ್ನಾಟಕ ರಾಜ್ಯ ಸಚಿವ ಸಂಪುಟದಲ್ಲಿ ಕ್ರೈಸ್ತರನ್ನು ಪ್ರತಿನಿಧಿಸುತ್ತಿದ್ದುದು ಟಿ.ಜಾನ್ ಎಂಬುವವರು. ಅವರೂ ಕೊಡಗು ಜಿಲ್ಲೆಯಿಂದಲೇ ರಾಜಕೀಯ ಆರಂಭಿಸಿದವರು. ಅವರ ಮೂಲವೂ ನೆರೆಯ ರಾಜ್ಯ ಕೇರಳ.
ಕೇರಳ ಮೂಲದ ಕರ್ನಾಟಕ ರಾಜ್ಯದ ಕ್ರೈಸ್ತ ನಾಯಕರ (ಶಾಸಕ) ಪಟ್ಟಿಗೆ ಒಬ್ಬ ಪಾದ್ರಿಯೂ ಸೇರಿದ್ದಾರೆ. ಕಳೆದ ಶತಮಾನದ ಎಪ್ಪತ್ತು, ಎಂಬತ್ತರ ದಶಕದಲ್ಲಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಸಮೀಪದ ಕಲಘಟಗಿ ಹತ್ತಿರದ ಕಥೋಲಿಕ ಕ್ರೈಸ್ತ ಒಕ್ಕಲಿರುವ ತುಮರಿಕೊಪ್ಪಕ್ಕೆ ಪಾಲನಾ ಪಾದ್ರಿಯಾಗಿ ಕಾಲಿರಿಸಿದ ಕೇರಳ ಮೂಲದ ಫಾ. ಜಾಕೋಬ್ ಪಲ್ಲಿಪುರತು, ಸ್ಥಳೀಯ ಕ್ರೈಸ್ತರೂ ಸೇರಿದಂತೆ ಸುತ್ತಮುತ್ತಲ ಊರುಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸಮಾಜಸೇವೆ ಕೈಗೊಂಡು ಜನಾನುರಾಗಿಯಾಗಿದ್ದರು. ಆ ಜನಾನುರಾಗದ ಫಸಲಿನ ಕಟಾವು ಎಂಬಂತೆ 1983ರ ಚುನಾಣೆಯಲ್ಲಿ ಚುನಾವಣೆಯಲ್ಲಿ ಗೆದ್ದು ಶಾಸಕರೂ ಆದರು. ಆನಂತರದ ಚುನಾವಣೆಯಲ್ಲಿ ಸೋಲುಂಡರು. ಧರ್ಮಗುರುಗಳಿಗೆ ರಾಜಕೀಯ ಸಲ್ಲದೆಂಬ ನಿಲುವಿನಲ್ಲಿ ಕಥೋಲಿಕ ಧರ್ಮಸಭೆಯು (ಬೆಳಗಾವಿ ಧರ್ಮಪ್ರಾಂತ) ಅವರನ್ನು ಧರ್ಮಸಭೆಯ ಚಟುವಟಿಕೆಗಳಿಂದ ದೂರವಿರಿಸಿದೆ. ಆದರೆ, ಇದಕ್ಕೂ ಹಿಂದಿನ ಮೂರು ಮತ್ತು ನಾಲ್ಕನೆಯ ದಶಕಗಳಲ್ಲಿ, ಕರ್ನಾಟಕದಲ್ಲಿ ಕೆಲವೆಡೆ ಪಾದ್ರಿಗಳು ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದು ಅಧಿಕಾರ ನಡೆಸಿ ತಮ್ಮ ಯಾಜಕತ್ವವನ್ನು ಉಳಿಸಿಕೊಂಡ ಉದಾಹರಣೆಗಳೂ ಉಂಟು.
ಇನ್ನು ಕರಾವಳಿಯ ಕ್ರೈಸ್ತ ರಾಜಕಾರಣಿಗಳು ಎಂದು ನೆನೆಸಿಕೊಂಡರೆ ಮಾರ್ಗರೇಟ್ ಆಳ್ವ, ಆಸ್ಕರ ಫರ್ನಾಂಡಿಸ್, ಐವನ್ ಡಿಸೋಜಾ, ಜಾನ್ ರಿಚರ್ಡ ಲೋಬೊ, ಮೈಕೇಲ್ ಫರ್ನಾಂಡಿಸ್ ..... ಮೊದಲಾದವರು ಕಣ್ಣ ಮುಂದೆ ಸುಳಿಯುತ್ತಾರೆ. ಕರಾವಳಿಯಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ದಕ್ಷಿಣ ಕನ್ನಡದಿಂದ ಹೊರಬಂದು ಪ್ರತ್ಯೇಕ ಜಿಲ್ಲೆಯಾದ ಉಡುಪಿ ಜಿಲ್ಲೆಗಳು ಸೇರುತ್ತವೆ. ಆದರೆ, ಬಹುತೇಕ ಕರಾವಳಿಯ ಕ್ರೈಸ್ತ ರಾಜಕೀಯ ಮುಖಂಡರು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿರುತ್ತಾರೆ. ಉತ್ತರ ಮತ್ತು ದಕ್ಷಿಣದ ಬಯಲು ಸೀಮೆಯಲ್ಲಿ ಕ್ರೈಸ್ತ ನಾಯಕರುಗಳೇ ಇಲ್ಲ. ರಾಜ್ಯದ ಉತ್ತರದ ತುದಿಯ ಗುಲ್ಬರ್ಗದ ಜನನಾಯಕ ಕ್ರೈಸ್ತ ಪಂಗಡಕ್ಕೆ ಸೇರಿದ ಡೇವಿಡ್ ಸಿಮಯೋನ್ ಒಬ್ಬರೇ ಕರಾವಳಿ ಮತ್ತು ಕೊಡಗಿನ ಆಸರೆಯಿಲ್ಲದೇ ರಾಜ್ಯ ರಾಜಕಾರಣದಲ್ಲಿ ಪ್ರವರ್ಧಮಾನಕ್ಕೆ ಬಂದವರು. ಇದುವರೆಗೆ ಪ್ರಸ್ತಾಪಿಸಿದವರೆಲ್ಲಾ ಕ್ರೈಸ್ತರಲ್ಲಿನ ಕಥೋಲಿಕ ಪಂಥಕ್ಕೆ ಸೇರಿದ್ದರೆ, ಈ ಪಟ್ಟಿಯ ಕೊನೆಗೆ ಬಂದ ಡೇವಿಡ್ ಸಿಮಿಯೋನ್ ಒಬ್ಬರು ಮಾತ್ರವೇ ಪ್ರೊಟೆಸ್ಟಂಟ್ ಪಂಥಕ್ಕೆ ಸೇರಿದವರಾಗಿದು ಒಂದು ವಿಶೇಷತೆ.
ಶಾಸನ ಸಭೆಗಳಿಗೆ ನಾಮಕರಣಗೊಳ್ಳುವ ಆಂಗ್ಲೋ ಇಂಡಿಯನ್ ಸಮುದಾಯದ ಜನನಾಯಕರು [(?) ಏಕೆಂದರೆ ಅವರು ಜನರಿಂದ ಆರಿಸಿಬಂದವರಲ್ಲ)] ರಾಜ್ಯದ ಸಮಸ್ತ ಕ್ರೈಸ್ತರ ಹಿತಾಸಕ್ತಿಯನ್ನು ಎಷ್ಟರ ಮಟ್ಟಿಗೆ ಕಾಪಾಡುವರು? ಎಂಬ ಅನುಮಾನ ಕನ್ನಡ ನಾಡಿನ ಕ್ರೈಸ್ತರಲ್ಲಿದೆ. ಅದರಂತೆಯೇ, ಕೇವಲ ಕರಾವಳಿ, ಕೊಡಗು ಮತ್ತು ಗುಲ್ಬರ್ಗ ಮೂಲದ ಕ್ರೈಸ್ತ ರಾಜಕಾರಣಿಗಳು ರಾಜ್ಯದ ಸಮಸ್ತ ಕ್ರೈಸ್ತರ ಪ್ರತಿನಿಧಿಗಳು ಹೇಗಾಗುತ್ತಾರೆ? ರಾಜ್ಯದ ಸಮಸ್ತ ಕ್ರೈಸ್ತರ ಹಿತಾಸಕ್ತಿಗಳನ್ನು ಎಷ್ಟರ ಮಟ್ಟಿಗೆ ಕಾಪಾಡುತ್ತಾರೆ? ಈ ಅನುಮಾನಗಳಲ್ಲಿ ಹುರುಳಿಲ್ಲದೇ ಇಲ್ಲ. ‘ಮಾತೆ ಮರಿಯಳ ಜನನ ದಿನದ ರಜೆ ಕೇವಲ ಕರಾವಳಿಗೆ ಮಾತ್ರ ಬೇಕು’ ಎಂದು ಬೇಡಿಕೆ ಒಡ್ಡುವ ಕರಾವಳಿಯ ಕ್ರೈಸ್ತ ಸಮುದಾಯದ ಜನನಾಯಕರು, ರಾಜ್ಯದ ಉಳಿದ ಪ್ರದೇಶಗಳಲ್ಲಿ ನೆಲೆಸಿರುವ ಕ್ರೈಸ್ತರ ಅಭಿಪ್ರಾಯ, ಆಶೆ ಆಕಾಂಕ್ಷೆಗಳಿಗೆ ಏಕೆ ಸಮರ್ಪಕವಾಗಿ ಸ್ಪಂದಿಸುವುದಿಲ್ಲ?
----------------------------------
No comments:
Post a Comment