ಸುಮಾರು ಹದಿನೇಳು ಹದಿನೆಂಟನೇ ಶತಮಾನಗಳಲ್ಲಿ ಕ್ರೈಸ್ತಧರ್ಮಪ್ರಚಾರದ ಕ್ಷೇತ್ರಕಾರ್ಯಕ್ಕಾಗಿ ಪ್ರಪಂಚದಾದ್ಯಂತ ತೆರಳಿದ್ದ ಯೇಸುಸಭೆ ಅಥವಾ ಜೆಸ್ವಿತ್ ಮಿಷನರಿಗಳು ರೋಮ್ ನಗರದಲ್ಲಿನ ಕೇಂದ್ರಕಚೇರಿಗೆ ತಮ್ಮ ಕಾರ್ಯಕಲಾಪಗಳ ಕುರಿತಂತೆ ವಾರ್ಷಿಕ ವರದಿಗಳನ್ನು ತಪ್ಪದೇ ಕಳಿಸಬೇಕಿತ್ತು. ಜೆಸ್ವಿತ್ ಮಿಷನರಿಗಳು ವಿಶ್ವಿದ್ಯಾಲಯಗಳಲ್ಲಿ ಓದಿದ ಮೇಧಾವಿಗಳಾಗಿದ್ದರು. ಅದರಲ್ಲೂ ಕೆಲವರು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರೂ ಆಗಿದ್ದು ಧರ್ಮಸೇವೆಯತ್ತ ಒಲಿದು ತಮ್ಮ ಐಶಾರಾಮದ ಜೀವನ ತ್ಯಜಿಸಿ ತೃತೀಯ ರಾಷ್ಟ್ರಗಳ ದುರ್ಗಮ ಹಳ್ಳಿಗಾಡುಗಳಲ್ಲಿ ಕಷ್ಟತಮ ಜೀವನ ನಡೆಸುವುದನ್ನು ಆಯ್ಕೆ ಮಾಡಿಕೊಂಡಿದ್ದರು. ಅವರಿಗೆ ಭೂಗೋಳಶಾಸ್ತ್ರ, ಖಗೋಳವಿಜ್ಞಾನ, ಸಮಾಜಶಾಸ್ತ್ರ, ವಾಸ್ತುಶಿಲ್ಪ, ಸಾಮಾನ್ಯ ವಿಜ್ಞಾನಗಳ ಅಪಾರ ಪರಿಚಯವಿದ್ದುದರಿಂದ ತಾವು ನೆಲೆನಿಂತ ನಾಡುಗಳಲ್ಲಿನ ಆಚಾರವಿಚಾರಗಳು, ಜನಜೀವನ, ವೈದ್ಯವೃತ್ತಿ, ಜನಪದ ನಂಬಿಕೆಗಳು ಮುಂತಾದವನ್ನು ಸೂಕ್ಷ್ಮವಾಗಿ ಅರಿತುಕೊಳ್ಳಲು ಅನುವಾಯಿತು. ಈ ಹಿನ್ನೆಲೆಯಲ್ಲಿ ಅವರ ವರದಿಗಳು ಸಮಕಾಲೀನ ಜನಜೀವನದ ಸ್ಥಿತಿಗತಿ, ಆಡಳಿತವ್ಯವಸ್ಥೆಗಳ ಸೋಲುಗೆಲವುಗಳು, ಲೋಪದೋಷಗಳು, ಸಹಿಷ್ಣುತೆ ಅಸಹಿಷ್ಣುತೆಗಳು, ರೋಗನಿದಾನ, ಶಿಕ್ಷಣಕ್ಷೇತ್ರ, ಆಹಾರಪದ್ಧತಿಗಳ ಮೇಲೆ ವಿವಿಧ ಜನವರ್ಗಗಳು ಹೊಂದಿದ್ದ ಹಿಡಿತಗಳು ಮುಂತಾದವುಗಳಿಗೆ ಕನ್ನಡಿ ಹಿಡಿಯುತ್ತವೆ.
ಸಾಮಾನ್ಯವಾಗಿ ರಾಜರ ಚರಿತ್ರೆಗಳು ಅವರ ಆಸ್ಥಾನದಲ್ಲಿ ಉದ್ಯೋಗ ಪಡೆದ ಚರಿತ್ರೆಕಾರರಿಂದ ದಾಖಲಾಗಿದ್ದು ಆ ಚರಿತ್ರಕಾರರಿಗೆ ರಾಜನ ಅನ್ನದ ಋಣ ಇರುವುದುದರಿಂದ ಅವರ ಬರಹಗಳು ರಾಜನಿಗೆ ನಿಷ್ಠವಾಗಿರುತ್ತವೆ. ಅವರು ರಾಜನ ಗೆಲುವನ್ನಷ್ಟೇ ದಾಖಲಿಸುತ್ತಾರೆ ಹೊರತು ಸೋಲುಗಳನ್ನೂ ಬಲಹೀನತೆಗಳನ್ನೂ ತೋರಿಸುವುದಿಲ್ಲ. ಆದರೆ ಜೆಸ್ವಿತ್ ವರದಿಗಳು ವಸ್ತುನಿಷ್ಠವಾಗಿದ್ದು ತಮ್ಮ ದೈನಂದಿನ ಧರ್ಮಪ್ರಚಾರದ ಮಿಷನರಿ ದಿನಚರಿಯ ನಡುವೆ ತಾವು ಕಂಡು ಕೇಳಿದ ಅನಭವಿಸಿದ ವರದಿಗಳನ್ನು ನೀಡುತ್ತಾ ಸ್ಥಳೀಯ ಆಚಾರ ವಿಚಾರಗಳು, ಆಡುನುಡಿಗಳು, ರಾಜರ ಸಾಮಂತರ ಪಾಳೇಗಾರರ ನಡವಳಿಕೆಗಳು, ಮಳೆಬೆಳೆ ಇತ್ಯಾದಿಗಳನ್ನು ದಾಖಲಿಸಿರುವುದರಿಂದ ಅವು ಸಮಕಾಲೀನ ಇತಿಹಾಸದ ಅಧ್ಯಯನಕ್ಕೆ ಪ್ರಮುಖ ಆಕರವಾಗುತ್ತವೆ.
ಜೆಸ್ವಿತ್ ಪತ್ರಗಳು ಅಥವಾ ಜೆಸ್ವಿತ್ ಅನ್ನಲ್ಸ್ ಎಂದು ಕರೆಸಿಕೊಳ್ಳುವ ಈ ವಾರ್ಷಿಕ ವರದಿಗಳೆಲ್ಲ ನಮ್ಮ ದೇಶದಿಂದ ಹೊರಗೆ ಇಟಲಿಯಲ್ಲಿನ ವ್ಯಾಟಿಕನ್ ಪತ್ರಾಗಾರದಲ್ಲೂ ರೋಮ್ ನಗರದ ಜೆಸ್ವಿತ್ ಪತ್ರಾಗಾರದಲ್ಲೂ ಸಂಗ್ರಹವಾಗಿವೆ. ಅಲ್ಲದೆ ಇವನ್ನು ಅಂದಿನ ಚಲಾವಣೆಯ ಭಾಷೆಗಳಾಗಿದ್ದ ಲ್ಯಾಟಿನ್, ಪೋರ್ಚುಗೀಸ್, ಸ್ಪಾನಿಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಬರೆಯಲಾಗಿದೆ.
ಸುಮಾರು 1640ರಲ್ಲಿ ಇಂಡಿಯಾ ದೇಶಕ್ಕೆ ಬಂದ ಜೆಸ್ವಿತರು ಗೋವಾದಲ್ಲಿ ತಮ್ಮ ಪ್ರಧಾನ ಕಚೇರಿ ಹೊಂದಿದ್ದು ಅಲ್ಲಿಂದಲೇ ದಕ್ಷಿಣ ಇಂಡಿಯಾದ ವಿವಿಧ ಪ್ರದೇಶಗಳಿಗೆ ತೆರಳಿ ಧರ್ಮಪ್ರಚಾರ ಕಾರ್ಯಕ್ಕೆ ತೊಡಗಿದರು. ತಮ್ಮ ಅನುಕೂಲಕ್ಕಾಗಿ ಅವರು ದಕ್ಷಿಣ ಇಂಡಿಯಾವನ್ನು ನಾಲ್ಕು ಭಾಷಾ ಪ್ರದೇಶಗಳನ್ನಾಗಿ ವಿಭಜಿಸಿಕೊಂಡರು. ಮಲಯಾಳ ಮಾತನಾಡುವ ಪ್ರದೇಶವಾದ ಮಲಬಾರ್ ಮಿಷನ್, ತಮಿಳು ಭಾಷಿಕ ಪ್ರಾಬಲ್ಯದ ಮಧುರಾ ಮಿಷನ್, ಕನ್ನಡ ಮಾತನಾಡುವ ನಾಡಾದ ಮೈಸೂರು ಮಿಷನ್ ಹಾಗೂ ಕೋಲಾರ ಜಿಲ್ಲೆಯಿಂದ ಪೂರ್ವ ಕರಾವಳಿಯವರೆಗಿನ ತೆಲುಗು ಭಾಷಾ ಪ್ರಾಬಲ್ಯದ ಕರ್ನಾಟಿಕ್ ಮಿಷನ್.
***
ಅದು ಹದಿನೆಂಟನೇ ಶತಮಾನದ ಪ್ರಾರಂಭದ ದಿನಗಳು. ಶ್ರೀರಂಗಪಟ್ಟಣದಲ್ಲಿ ಕ್ರೈಸ್ತಧರ್ಮ ಕಾಲಿಟ್ಟು ಐವತ್ತು ವರ್ಷಗಳೇ ಆಗಿದ್ದವು. ಅಲ್ಲಿಂದ ಮುಂದೆ ಗಾಡೇನಹಳ್ಳಿ, ಮಗ್ಗೆ, ಹಾಸನ, ಕಾಮನಹಳ್ಳಿ ಇತ್ಯಾದಿ ಊರುಗಳಲ್ಲಿ ಮಿಷನ್ ಕೇಂದ್ರಗಳು ಹಾಗೂ ಗುರುನಿವಾಸಗಳು ಸ್ಥಾಪಿತವಾಗಿ ಅಲ್ಲೆಲ್ಲ ಕ್ರೈಸ್ತರ ಜನಸಂಖ್ಯೆ ಗಣನೀಯವಾದ ಗಾತ್ರಕ್ಕೆ ಬೆಳೆದಿತ್ತು. ಗುರುನಿವಾಸಗಳಲ್ಲಿ ಗುರುಸ್ವಾಮಿಯವರು ಪೂಜಾವಸ್ತ್ರಗಳು, ಪೂಜಾಪರಿಕರಗಳು, ರಾಜರಿಗೆ ಅಥವಾ ಸ್ಥಳೀಯ ನಾಯಕರಿಗೆ ಕೊಡಬೇಕಾದ ಕಾಣಿಕೆಗಳು, ಅವರಿಂದ ಪಡೆದ ಉಡುಗೊರೆಗಳು, ಮದುವೆ ದೀಕ್ಷಾಸ್ನಾನದ ದಸ್ತಾವೇಜುಗಳು, ವರದಿ ಪುಸ್ತಕಗಳು ಮುಂತಾದ ಅಮೂಲ್ಯ ವಸ್ತುಗಳನ್ನು ಸಂರಕ್ಷಿಸಿಟ್ಟು ನಂಬಿಗಸ್ಥ ಉಪದೇಶಿಗಳನ್ನು ಅದರ ಕಾವಲಿಗೆ ನೇಮಿಸಿ ತಾವು ಕ್ಷೇತ್ರಕಾರ್ಯಗಳಿಗೆ ತೆರಳುತ್ತಿದ್ದರು.
***
ಮೈಸೂರು ರಾಜ್ಯವನ್ನು ಎರಡನೇ ಕಂಠೀರವ ನರಸರಾಜ ಒಡೆಯ ಮಹಾರಾಜರು ರಾಜಧಾನಿ ಶ್ರೀರಂಗಪಟ್ಟಣದಿಂದ ಆಳುತ್ತಿದ್ದ ಸಮಯ. ಅವರು ಮೂಗರಾಗಿದ್ದುದರಿಂದ ಅವರನ್ನು ಮೂಕರಸ ಎಂದೂ ಕರೆಯಲಾಗುತ್ತಿತ್ತು. ವಾಸ್ತವವಾಗಿ ಮಹಾರಾಜ ಒಡೆಯರ ಪರವಾಗಿ ಅವರ ದಳವಾಯಿ ರಾಜ್ಯಭಾರ ನಡೆಸುತ್ತಿದ್ದ. ಯುದ್ಧಗಳಿಲ್ಲದೆ ರಾಜ್ಯವು ಶಾಂತವಾಗಿತ್ತು. ಆದರೆ ಹಳ್ಳಿಗಳಲ್ಲಿ ಯಥಾಪ್ರಕಾರ ಮಳೆಯ ಕೊರತೆ, ಜಾನುವಾರುಗಳ ರೋಗ, ದಿನನಿತ್ಯದ ಜಗಳಗಳು ಇದ್ದವು. ಸಮಾಧಾನವೆಂದರೆ ಕ್ರೈಸ್ತ ಭಕ್ತರ ನಡವಳಿಕೆ ಮೆಚ್ಚುವಂತದ್ದಾಗಿತ್ತು. ಅವರೆಲ್ಲ ತಪ್ಪದೇ ಬಲಿಪೂಜೆ, ನವೇನ, ಜಪಸರ, ಸಂಸ್ಕಾರಗಳಲ್ಲಿ ಭಾಗವಹಿಸುತ್ತಿದ್ದರು.
ವಿಪರ್ಯಾಸವೆಂದರೆ ರಾಜಧಾನಿ ಶ್ರೀರಂಗಪಟ್ಟಣದಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿತ್ತು. ಅಲ್ಲೊಂದು ಪುಟ್ಟ ಚರ್ಚ್ ಇತ್ತಲ್ಲದೆ ಗುರುಸ್ವಾಮಿಯವರು ತಂಗಲು ಮೊದಲ ಮಿಷನರಿ ಗುರು ಲಿಯೊನಾರ್ಡೊ ಚಿನ್ನಮಿಯವರು ಕಟ್ಟಿಸಿದ್ದ ಒಂದು ಮನೆಯೂ ಇತ್ತು. ಮಿಷನ್ ಯಾತ್ರೆಗಳಲ್ಲಿ ತೊಡಗಿರುತ್ತಿದ್ದ ಗುರುಸ್ವಾಮಿಗಳು ಅಲ್ಲಿ ಅಪರೂಪಕ್ಕೆ ತಂಗುತ್ತಿದ್ದರು. ಉಳಿದಂತೆ ಗುರುಮನೆ ಹಾಗೂ ಗುಡಿಗಳನ್ನು ಕೇಳುವವರಿಲ್ಲದೆ ಪುಂಡು ಪೋಕರಿಗಳ ಆವಾಸವಾಯಿತು. ಪಟ್ಟಣದ ಜನರೂ ಹಳೆಯ ಮೂಢನಂಬಿಕೆಗಳಿಗೆ ಆತುಕೊಂಡು ಕ್ರೈಸ್ತಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರಲಿಲ್ಲ. ಹಾಗಾಗಿ ಗುರುಮನೆ ಹಾಗೂ ದೇವಾಲಯವನ್ನು ರಾಜನು ವಶಕ್ಕೆ ತೆಗೆದುಕೊಂಡ.
ಹೀಗಿರುವಲ್ಲಿ 1709ರಲ್ಲಿ ಫಾದರ್ ಅಂತೊನಿಯೊ ಮರಿಯಾ ಪ್ಲಾಟೆ (Fr Antonio Maria Platei, SJ) ಎಂಬ ಗುರುಸ್ವಾಮಿಯವರು ಪಟ್ಟಣಕ್ಕೆ ಆಗಮಿಸಿದರು. ಪ್ಲಾಟೆ ಸ್ವಾಮಿಯವರು ಹಸನ್ಮುಖಿ ಸ್ಪುರದ್ರೂಪಿ ಯುವಕ. ಎತ್ತರದ ಆಳು, ಗಂಭೀರ ನಡಿಗೆ ಹಾಗೂ ಸದಾ ಮಗುವಿನಂತ ಮುಗ್ದ ನಗು ಚೆಲ್ಲುವ ಸುಂದರ ಮೊಗ. ಎಂಥ ಸಿಡುಕು ಮೋರೆಯ ಕ್ರೂರಮನಸಿನವರನ್ನೂ ಬದಲಿಸಿಬಿಡಬಲ್ಲ ಹೊಳಪು ಅವರ ಕಂಗಳಲ್ಲಿತ್ತು. ರಾಜ್ಯಾಳ್ವಿಕೆ ನಡೆಸುತ್ತಿದ್ದ ದಳವಾಯಿಯವರನ್ನು ಕಂಡು ತಮ್ಮ ಮನೆಯನ್ನು ಬಿಡಿಸಿಕೊಳ್ಳಲು ಅವರು ಅರಮನೆಯತ್ತ ಹೆಜ್ಜೆ ಹಾಕಿದರು. ದಳವಾಯಿಯು ಪ್ಲಾಟೆ ಸ್ವಾಮಿಯವರನ್ನು ರತ್ನಗಂಬಳಿ ಹಾಸಿ ಬಲು ಆಪ್ತವಾಗಿ ಬರಮಾಡಿಕೊಂಡ. ಉಭಯ ಕುಶಲೋಪರಿಯ ಆನಂತರ ಮನೆಯೇನೋ ಮರಳಿ ಬಂತು ಆದರೆ ಗುಡಿ ಸಿಕ್ಕಲಿಲ್ಲ.
ವಿಧಿಯಿಲ್ಲದೆ ಪ್ಲಾಟೆ ಸ್ವಾಮಿಯವರು ಅರಶಿನಕೆರೆಯಲ್ಲಿ ನೆಲೆ ನಿಂತರು. ಅರಶಿನಕೆರೆಯು ಇಂದಿನ ಮಂಡ್ಯ ಜಿಲ್ಲೆ ಮದ್ದೂರು ಮಳವಳ್ಳಿ ರಸ್ತೆಯಲ್ಲಿರುವ ಚಿಕ್ಕರಸಿನಕೆರೆ ಎಂಬ ಊರು. ಸ್ವಾಮಿಯವರ ದಾನ ಧರ್ಮಗಳೂ, ದೀನ ದರಿದ್ರರ ಮೇಲೆ ಅವರು ತೋರುತ್ತಿದ್ದ ಅನುಕಂಪವೂ, ಮರಣಾವಸ್ಥೆಯಲ್ಲಿರುವವರ ಬಗ್ಗೆ ತೋರುತ್ತಿದ್ದ ಕಾಳಜಿಯೂ ಇತರ ಧರ್ಮೀಯರಲ್ಲಿ ಬೆರಗು ಮೂಡಿಸಿದ್ದವು. ಸ್ವಾಮಿಯವರಿಗೆ ಬಿಡುವೆಂಬುದೇ ಇರುತ್ತಿರಲಿಲ್ಲ. ಆದರೂ ಬಿಡುವು ಮಾಡಿಕೊಂಡು ಗ್ರಂಥಗಳನ್ನು ಓದುತ್ತಿದ್ದರು. ದೇಶೀ ತಾಳೆಗರಿಗಳನ್ನೂ ಓದುತ್ತಾ ತಮ್ಮ ವಾಗ್ಝರಿಯನ್ನು ಸರಾಗ ಮಾಡಿಕೊಂಡರು. ಅನೇಕ ಭಾಷೆಗಳನ್ನು ಅವರು ಕರಗತ ಮಾಡಿಕೊಂಡರು. ನೆಲದ ಆಚಾರ ವಿಚಾರ ಸಂಪ್ರದಾಯಗಳನ್ನು ಅರ್ಥ ಮಾಡಿಕೊಂಡರು. ಮಳೆಬೆಳೆ, ಋತುಮಾನ, ಹೂವುಹಣ್ಣುಗಳ ಬಗ್ಗೆ ಆಳವಾಗಿ ತಿಳಿದುಕೊಂಡರು. ಸ್ವಲ್ಪ ಅನ್ನ, ಸ್ವಲ್ಪ ಮೊಸರು ಹಾಗೂ ಕೆಂಡದ ಮೇಲೆ ಸುಟ್ಟ ರೊಟ್ಟಿ ಇವಿಷ್ಟೇ ಅವರ ಊಟವಾಯಿತು. ಎಂಥ ಚಳಿಗಾಲದಲ್ಲೂ ಅವರು ತಣ್ಣೀರು ಸ್ನಾನವನ್ನೇ ಮಾಡುತ್ತಿದ್ದರು. ಹೀಗೆ ತಮ್ಮ ಸರಳ ನಡವಳಿಕೆಯಿಂದ ಜನಮಾನಸಕ್ಕೆ ಹತ್ತಿರವಾದರು. ಕೆಲವೇ ದಿನಗಳಲ್ಲಿ ಅವರು ಅಲ್ಲೆಲ್ಲ ಅತ್ಯಂತ ಜನಾನುರಾಗಿ ಸ್ವಾಮಿಯವರಾದರು. ಜನರು ಅವರನ್ನು ಗೌರವದಿಂದ ರಾಜೇಂದ್ರ ಸ್ವಾಮಿಗಳು ಎಂದು ಕರೆಯುತ್ತಿದ್ದರು. ಸ್ವಾಮಿಯವರ ಪ್ರಯತ್ನದ ಫಲವಾಗಿ ಹಲವರು ಮನತಿರುಗಿ ಪಶ್ಚಾತ್ತಾಪಪಟ್ಟು ಕ್ರೈಸ್ತ ಧರ್ಮವನ್ನು ಅಪ್ಪಿಕೊಂಡರು. ಆ ಒಂದೇ ವರ್ಷದಲ್ಲಿ 1481 ಮಂದಿ ಅವರ ಬಳಿ ಪಾಪವಿಜ್ಞಾಪನೆ ಮಾಡಿ ಪುನೀತರಾದರು ಎಂದು ಜೆಸ್ವಿತ್ ವಾರ್ಷಿಕ ವರದಿಗಳಲ್ಲಿ ದಾಖಲಾಗಿದೆ.
ಘಟನೆ - 1
ಈ ನಡುವೆ ಕೂಟಗಲ್ಲಿಗೆ ತೆರಳಿದ ಪ್ಲಾಟೆ ಸ್ವಾಮಿಯವರು ಕೆಲ ಕಾಲ ಅಲ್ಲಿ ತಂಗಿ, ಅಲ್ಲಿನ ಜನರಿಗೆ ಭಾನುವಾರದ ಮಹತ್ವದ ಬಗ್ಗೆ ಅರಿವು ಮೂಡಿಸಿದರಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿದರು. ಮಗ್ಗೆ ಮತ್ತು ಹಾಸನಗಳ ಜನ ಧಾರ್ಮಿಕ ಕರ್ತವ್ಯಗಳಿಂದ ವಿಮುಖರಾಗಿದ್ದುದನ್ನು ಅರಿತು 1710ರಲ್ಲಿ ಅವರು ಆ ಊರುಗಳಿಗೆ ಭೇಟಿ ನೀಡಿದರು. ಆ ಜನರನ್ನೆಲ್ಲ ಮತ್ತೆ ಕ್ರಿಸ್ತೀಯ ನಡವಳಿಕೆಗೆ ಮರಳಿ ಕರೆತರಬೇಕಿತ್ತು. ಗಾಡೇನಹಳ್ಳಿಯ ಸ್ಥಿತಿಯಂತೂ ಇನ್ನೂ ಅಧ್ವಾನವಾಗಿತ್ತು. ಹಳ್ಳಿಯ ಗೌಡನು ದೇವರನ್ನು ಮರೆತು ಸಂಪತ್ತಿನ ಶೇಖರಣೆಯಲ್ಲಿ ತಲ್ಲೀನನಾಗಿದ್ದನು. ತನ್ನ ಹೆಂಡತಿ ಮಕ್ಕಳಿಗೆ ಅವನು ಕ್ರಿಸ್ತದೀಕ್ಷಾಸ್ನಾನ ಕೊಡಿಸಿರಲಿಲ್ಲ. ಅವರೆಲ್ಲ ಕ್ರೈಸ್ತರಾದರೆ ಪೂರ್ವಾಶ್ರಮದ ವ್ರತ ನೇಮ ನೋಂಪಿ ಹುಣ್ಣಿಮೆ ಅಮಾವಾಸ್ಯೆ ಹಬ್ಬ ಹರಿದಿನ ಮುಂತಾದ ರಿವಾಜುಗಳನ್ನು ಮಾಡಲು ಮೈಲಿಗೆಯಾಗುತ್ತದೆಂದು ಅವನ ಭಾವನೆಯಾಗಿತ್ತು. ಪ್ಲಾಟೆ ಸ್ವಾಮಿಯವರು ತಮ್ಮ ಉದಾತ್ತ ವ್ಯಕ್ತಿತ್ವದಿಂದ ಅವರನ್ನೆಲ್ಲ ಸರಿದಾರಿಗೆ ತಂದರು.
ಘಟನೆ - 2
ಅಲ್ಲಿಂದ ಹಾರೋಬೆಲೆಗೆ ಹೊರಟ ಸ್ವಾಮಿಗಳು ಕ್ರೈಸ್ತಗೊಲ್ಲನೊಬ್ಬ ಬಡ್ಡಿ ವ್ಯವಹಾರ ನಡೆಸುತ್ತಾ ಅಮಾಯಕ ಜನರನ್ನು ವಿಪರೀತವಾಗಿ ಹಿಂಸಿಸುತ್ತಿದ್ದುದನ್ನು ಕಂಡು ಅವನ ಮನತಿರುಗಿಸಿದರು. ಕ್ರೈಸ್ತ ಹೆಂಗಸೊಬ್ಬಳ ನಡವಳಿಗೆ ಮತ್ತು ಜೀವನಶೈಲಿಗಳಿಂದ ಅವಳು ಪ್ರಭಾವಿತಳಾಗಿದ್ದ ಒಬ್ಬ ಗೊಲ್ಲ ವಿಧವೆಯು ಮಾನಸಾಂತರ ಹೊಂದಿ ತಾನೂ ಕ್ರೈಸ್ತಳಾಗಲು ಬಯಸಿದಳು. ಅದೇ ಕ್ರೈಸ್ತ ಹೆಣ್ಣುಮಗಳಿಂದ ಆಕೆ ಅಲ್ಪಸ್ವಲ್ಪ ಜಪತಪಗಳನ್ನೂ ಕಲಿತಿದ್ದಳು. ಅವರಿಬ್ಬರೂ ಹಬ್ಬದ ಸಂದರ್ಭದಲ್ಲಿ ಅರಶಿನಕೆರೆಗೆ ತೆರಳಿ ದೀಕ್ಷಾಸ್ನಾನ ಸ್ವೀಕರಿಸುವುದೆಂದು ಅಂದುಕೊಂಡಿದ್ದರು. ಆದರೆ ಆ ದಿನ ಹತ್ತಿರವಾದಾಗ ಯಾಕೋ ಆ ಕ್ರೈಸ್ತ ಹೆಂಗಸು ಕಾಣಲೇ ಇಲ್ಲ. ಅವಳಿಗಾಗಿ ಕಾದು ಸೋತ ಗೊಲ್ಲ ವಿಧವೆಯು ತಾನೇ ಅರಶಿನಕೆರೆಯತ್ತ ಪಯಣಿಸಿ ನಡುವೆ ದಾರಿ ತಪ್ಪಿಹೋಗಿ ಊಟ ನೀರಿಲ್ಲದೆ ಪರದಾಡಬೇಕಾಯಿತು. ಹೇಗೋ ದೇವರಕೃಪೆಯಿಂದ ಅವಳು ಅರಶಿನಕೆರೆ ತಲಪಿ ದೀಕ್ಷಾಸ್ನಾನ ಪಡೆದಳು.
ಘಟನೆ - 3
ಪಕ್ಕದ ಪೆನುಗೊಂಡೆಯ ರಾಜ್ಯದಲ್ಲಿ ಒಂದು ವಿಚಿತ್ರ ವರ್ತಮಾನ ನಡೆದಿತ್ತು. ಅಲ್ಲಿನ ಸೇನಾಪತಿಯೇ ರಾಜನನ್ನು ಸಿಂಹಾಸನದಿಂದ ಕೆಳಗಿಳಿಸಿ ಗಡೀಪಾರು ಮಾಡಿಬಿಟ್ಟಿದ್ದ. ಎಲ್ಲವನ್ನೂ ಕಳೆದುಕೊಂಡ ರಾಜನು ದಿಕ್ಕುದೆಸೆಯಿಲ್ಲದೆ ಅಲೆದಾಡಿ ಮೈಸೂರು ರಾಜಧಾನಿ ಶ್ರೀರಂಗಪಟ್ಟಣ ತಲಪಿದ್ದ. ಆಸ್ಥಾನದಲ್ಲಿದ್ದ ಕ್ರೈಸ್ತ ಅಧಿಕಾರಿಯೊಬ್ಬನು ಆ ಕುಲೀನ ವ್ಯಕ್ತಿಯನ್ನು ಕಂಡು ಆದರಿಸಿ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್ದ. ಅಲ್ಲದೆ ತನ್ನ ರಾಜನೊಡನೆ ಮಾತನಾಡಿ ಕಳೆದುಹೋದ ರಾಜ್ಯವನ್ನು ಮರಳಿ ಪಡೆಯುವ ಬಗ್ಗೆ ನೆರವು ನೀಡುವುದಾಗಿ ಮಾತನಾಡಿದ್ದ. ಅವರಿಬ್ಬರೂ ಒಮ್ಮೆ ಪ್ಲಾಟೆ ಸ್ವಾಮಿಯವರನ್ನು ಭೇಟಿಯಾದರು. ಮೂರು ದಿನಗಳ ಕಾಲ ಆ ರಾಜನಿಗೆ ಬೋಧನೆ ಮಾಡಿದ ಪ್ಲಾಟೆ ಸ್ವಾಮಿಯವರು ಕ್ರಿಸ್ತದೀಕ್ಷೆಯನ್ನು ಕೊಟ್ಟು ಹರಸಿದರು.
ಘಟನೆ - 4
ಎಂದಿನಂತೆ ಉದಯಕಾಲದ ಪೂಜಾ ಕೈಂಕರ್ಯಗಳಿಗಾಗಿ ನದಿಯತ್ತ ತೆರಳುತ್ತಿದ್ದ ಸಂಪ್ರದಾಯಸ್ಥ ದ್ವಿಜನೊಬ್ಬನು ದಾರಿಯಲ್ಲಿ ಸಿಕ್ಕ ವೃದ್ಧ ಕ್ರೈಸ್ತನೊಬ್ಬನನ್ನು ಮಾತಾಡಿಸುತ್ತಾ ಅವನ ಕೈಯಲ್ಲಿದ್ದ ’ಜಪಸರ’ ವನ್ನು ನೋಡಿ ಅದೇನೆಂದು ಕೇಳಿದ. ಹೀಗೇ ಮಾತಾಡುತ್ತಾ ’ಸರ್ವೇಶ್ವರ ದೇವರು ಅನ್ತೀರಲ್ಲ, ಅವರನ್ನು ಆರಾಧಿಸುವವರು ಇದ್ದಾರೆಯೇ?’ ಎಂದು ಪ್ರಶ್ನಿಸಿದ. ಆದಕ್ಕೆ ಆ ಕ್ರೈಸ್ತನು ಮಗ್ಗೆಗೆ ಹೋದರೆ ಅವರನ್ನು ಆರಾಧಿಸುವ ಹಲವರನ್ನು ಕಾಣಬಹುದು, ಅಲ್ಲದೆ ಆರಾಧನೆಯನ್ನೂ ನೋಡಬಹುದು ಎಂದು ಉತ್ತರಿಸಿದ. ಅದೇ ಮೇರೆಗೆ ಬ್ರಾಹ್ಮಣನು ಮಗ್ಗೆಗೆ ತೆರಳಿ ಕ್ರೈಸ್ತ ದೇವಾಲಯವನ್ನು ದರ್ಶಿಸಿದನಲ್ಲದೆ ಅಲ್ಲಿನ ಗುರುಸ್ವಾಮಿಯವರನ್ನೂ ಮಾತನಾಡಿಸಿ ಬಂದ. ಕೆಲ ತಿಂಗಳ ಆನಂತರ ಆ ಬ್ರಾಹ್ಮಣ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ. ಅವನ ಹತ್ತಿರದವರು ಅವನನ್ನು ಎಷ್ಟು ಹಿಂಸಿಸಿದರೂ ಆತ ಕ್ರೈಸ್ತಧರ್ಮವನ್ನು ಅಚಲವಾಗಿ ಅಪ್ಪಿಕೊಂಡ. ಅಚ್ಚರಿಯೆಂದರೆ ಮೊದಲು ಕಂಡ ಜಪಸರ ಹಿಡಿದಿದ್ದ ಆ ವೃದ್ಧನನ್ನು ಆತ ಮತ್ತೆ ಕಾಣಲೇ ಇಲ್ಲ.
ಘಟನೆ - 5
ಅದೇ ರೀತಿ ಸಕ್ಕರೆಪಟ್ಟಣದಲ್ಲೂ ಕೆಲವರು ಕ್ರೈಸ್ತಧರ್ಮ ಸ್ವೀಕರಿಸಿದರು. ದೆವ್ವಗಳ ಕಾಟದಿಂದ ಬಸವಳಿದಿದ್ದ ಅವರಿಗೆ ತಾಯಿತದಲ್ಲಿ ಕಟ್ಟಿಕೊಳ್ಳಲು ಫಾದರ್ ಅವರು ಶುಭಸಂದೇಶದ ಕೆಲ ಸಾಲುಗಳನ್ನು ಬರೆದುಕೊಟ್ಟಿದ್ದರು. ಕ್ರೈಸ್ತ ಧರ್ಮವು ಕ್ರಮೇಣ ಪ್ರವರ್ಧಮಾನಕ್ಕೆ ಬರುತ್ತಿರುವುದನ್ನು ಕಂಡು ನೆಲದ ಮೂಲಧರ್ಮೀಯರಿಗೆ ಅಸಹನೆಯುಂಟಾಯಿತು. ಅದರಲ್ಲೂ ದಾಸ ಜನಾಂಗದವರು ತುಂಬಾ ರೊಚ್ಚಿಗೆದ್ದರು. ತಮ್ಮ ನಡುವೆಯೇ ಇದ್ದ ಗೆಳೆಯರು ಬಂಧುಬಾಂಧವರು ತಮ್ಮನ್ನು ತೊರೆದು ಅನ್ಯಧರ್ಮವನ್ನು ಸ್ವೀಕರಿಸಿದ್ದು ಅವರಿಗೆ ನುಂಗಲಾರದ ತುತ್ತಾಗಿತ್ತು. ಮಿಷನರಿ ಕೆಲಸಗಳಲ್ಲಿ ತೊಡಗಿದ್ದ ಸ್ವಾಮಿಯವರನ್ನು ನೊಣೆದು ಬಿಟ್ಟರೆ ಎಲ್ಲವೂ ಸರಿಹೋಗುತ್ತದೆಂದು ಅವರು ಅಭಿಪ್ರಾಯಪಟ್ಟರು.
ಅಂದು ಮೊಘಲ್ ಸಾಮ್ರಾಜ್ಯಕ್ಕೆ ಸೇರಿದ್ದ ತುಮಕೂರಿನ ಬಳಿ ಅನಂತಪುರ ಜಿಲ್ಲೆಗೆ ಹೊಂದಿಕೊಂಡಿದ್ದ ಕಲಮುಕೋಟ ಎಂಬಲ್ಲಿ ಪ್ಲಾಟೆ ಸ್ವಾಮಿಯವರು ಕೆಲವರಿಗೆ ಕ್ರಿಸ್ತದೀಕ್ಷೆ ಪ್ರದಾನ ಮಾಡಲು ತೆರಳಿದ್ದರು. ಆ ಪ್ರದೇಶದಲ್ಲಿ ನೇಕಾರರು ಹೆಚ್ಚಾಗಿದ್ದರು. ಅವರು ತಮ್ಮನ್ನು ದಾಸರಿ ಎಂದು ಕರೆದುಕೊಳ್ಳುತ್ತಿದ್ದರು. ಕ್ರೈಸ್ತಧರ್ಮದ ಪ್ರವೇಶದಿಂದ ತಮ್ಮ ಹೊಟ್ಟೆಪಾಡಿಗೆ ಧಕ್ಕೆಯಾಗುವುದೆಂದು ಅವರು ಭಾವಿಸಿ ಆಕ್ರೋಶದಿಂದ ಪ್ಲಾಟೆ ಸ್ವಾಮಿಗಳ ಮೇಲೆ ಮುಗಿಬಿದ್ದು ಬಂದ ದಾರಿಯಲ್ಲೇ ಹಿಂದಿರುಗಿ ಹೋಗುವಂತೆ ಅವರನ್ನು ಬೆದರಿಸಿದರು. ದೊಂಬಿಯನ್ನು ಹತ್ತಿಕ್ಕಲು ಬಂದ ಮುಸಲ್ಮಾನ ದಿವಾನನು ಒಂದು ಚರ್ಚಾಗೋಷ್ಠಿಯನ್ನು ಏರ್ಪಡಿಸಿ ಎರಡೂ ತಂಡಗಳು ತಮ್ಮ ಧರ್ಮದ ಶ್ರೇಷ್ಠತೆಯನ್ನು ಪ್ರಶ್ನೋತ್ತರಗಳ ಮೂಲಕ ಸಾಧಿಸುವಂತೆ ಸೂಚಿಸಿದ. ವಾದದಲ್ಲಿ ಸೋತವರು ದಿವಾನರ ಸೇವೆ ಮಾಡಬೇಕಾಗುತ್ತದೆ ಎಂದು ಷರತ್ತು ವಿಧಿಸಿದ. ಸ್ಫರ್ಧೆಯನ್ನು ಗಂಭೀರವಾಗಿ ಸ್ವೀಕರಿಸಿದ ಎರಡೂ ಕಡೆಯ ಗುರುಗಳು ವಾದ ಪ್ರತಿವಾದಗಳನ್ನು ಮುಂದಿಡುತ್ತಾ ಬಂದರು. ಕ್ರಮೇಣ ಪ್ಲಾಟೆ ಸ್ವಾಮಿಯವರ ಪ್ರಶ್ನಾಬಾಣಗಳನ್ನು ವಿರೋಧಿ ಬಣದವರು ಎದುರಿಸಲಾಗದೆ ಸೋಲುವ ಸ್ಥಿತಿ ಉಂಟಾಯಿತು. ಆದರೆ ದಿವಾನನು ಸ್ವಾಮಿಯವರ ಗೆಲುವನ್ನು ಘೋಷಿಸದೆ ತಟಸ್ಥನಾದ. ಸೋಲುತ್ತಿದ್ದ ತಂಡದ ಮುಖಂಡರು ಗಂಭೀರ ಚರ್ಚೆಯನ್ನು ಹದಗೆಡಿಸಿ ಅವಾಚ್ಯ ಪದಗಳಿಂದ ಪ್ಲಾಟೆ ಸ್ವಾಮಿಯವರನ್ನು ನಿಂದಿಸತೊಡಗಿದರು. ಸಹನೆ ಕಳೆದುಕೊಳ್ಳದ ಸ್ವಾಮಿಯವರು ಪ್ರಶಾಂತರಾಗಿ ಉತ್ತರಿಸುತ್ತಿದ್ದರು. ಚರ್ಚೆಯಲ್ಲದ ಆ ಚರ್ಚೆ ಮುಗಿಯುವ ಸೂಚನೆ ಕಾಣಲಿಲ್ಲ. ಕೊನೆಗೆ ಗೆದ್ದರೂ ಗೆಲುವಿನ ಸಿಹಿಯುಣ್ಣದೇ ಸ್ವಾಮಿಯವರು ದಣಿದು ಹಿಂದಿರುಗಿದರು. ಆದರೆ ಅವರಿಗೆ ತೃಪ್ತಿ ನೀಡಿದ ಮತ್ತೊಂದು ಘಟನೆ ನಡೆಯಿತು. ಅನೇಕ ಸೈನಿಕರು ತಮ್ಮ ತಪ್ಪುಗಳಿಗೆ ಪ್ರಾಯಶ್ಚಿತ್ತ ವ್ಯಕ್ತಪಡಿಸಿ ಪಾಪನಿವೇದನೆ ಮಾಡಿದರು.
ಕೆಲ ದಿನಗಳಲ್ಲಿ ಎಲ್ಲವೂ ಸರಿಹೋಯಿತು ಅಂದುಕೊಳ್ಳುತ್ತಿದ್ದ ಹಾಗೇ ಪ್ಲಾಟೆ ಸ್ವಾಮಿಯವರನ್ನು ಶ್ರೀರಂಗಪಟ್ಟಣದಿಂದ ಹೊರದೂಡಲಾಯಿತು. ಅಲ್ಲಿದ್ದ ಕಿರುದೇವಾಲಯವನ್ನು ಕೆಡವಲಾಯಿತು. ಯಾರಿಗೂ ಏನೂ ಬೋಧಿಸದೆ ತಮ್ಮ ಪಾಡಿಗೆ ಇದ್ದರೆ ಮಾತ್ರ ಪಟ್ಟಣಕ್ಕೆ ಪ್ರವೇಶ ಹಾಗೂ ಚರ್ಚನ್ನು ಮರುನಿರ್ಮಿಸುವ ಆಶ್ವಾಸನೆ ನೀಡಲಾಯಿತು. ಕ್ರೈಸ್ತಧರ್ಮದ ಮುಖ್ಯ ತಿರುಳೇ ಶುಭಸಂದೇಶವನ್ನು ಇತರರಿಗೆ ಸಾರುವುದು, ಹಾಗಿರುವಾಗ ಬೋಧಿಸಲೇಬೇಡ ಎಂದು ಹೇಳಿದರೆ, ಅದರಲ್ಲೂ ಅದಕ್ಕೆಂದೇ ಮಿಷನರಿ ಕೆಲಸದಲ್ಲಿ ತೊಡಗಿರುವವರನ್ನು ನಿರ್ಬಂಧಿಸಿದರೆ ಅಂಥಾ ಆದೇಶವನ್ನು ಪಾಲಿಸುವುದಾದರೂ ಹೇಗೆ?
ಹೀಗೆ ಪಟ್ಟಣದಲ್ಲಿ ಒಂದು ವರ್ಷ ಹಾಗೂ ಹಳ್ಳಿಗಾಡಿನಲ್ಲಿ ನಾಲ್ಕುವರ್ಷ ಅವರು ಧರ್ಮಪ್ರಚಾರದ ಸೇವೆಯಲ್ಲಿ ತೊಡಗಿಸಿಕೊಂಡರು. ಸುಮಾರು ನಾನೂರು ಚದರ ಕಿಲೋಮೀಟರುಗಳ ನಾಡನ್ನು ಬರಿಗಾಲಲ್ಲೇ ಅಡ್ಡಾಡಿ ಅಪಾರ ಆತ್ಮಗಳನ್ನು ಪರಿವರ್ತಿಸಿದರು.
ಗೋವಾದಲ್ಲಿನ ಯೇಸುಸಭೆಯ ವರಿಷ್ಠರು ಪ್ಲಾಟೆ ಸ್ವಾಮಿಯವರನ್ನು ತಮ್ಮಲ್ಲಿಗೆ ಕರೆಸಿಕೊಂಡು ಧರ್ಮಶಾಸ್ತ್ರವನ್ನು ಬೋಧಿಸಲು ನಿಯೋಜಿಸಿದರು. ಬರಿಗಾಲಲ್ಲೇ ಗೋವಾಕ್ಕೆ ತೆರಳಿದ ಸ್ವಾಮಿಯವರು ಬೋಧನೆಯ ಜೊತೆಗೆ ಅಲ್ಲಿನ ಸುತ್ತಮುತ್ತಲ ಹಳ್ಳಿಗಳಲ್ಲಿ ಸಂಚರಿಗೆ ಸುವಾರ್ತಾ ಬೋಧನೆ ಮಾಡಿ ಜನ ಮೆಚ್ಚಿದ ಗುರುವಾದರು. ಆದರೂ ಅವರ ಹೃದಯ ಮೈಸೂರು ಸಾಮ್ರಾಜ್ಯದತ್ತಲೇ ತುಡಿಯುತ್ತಿತ್ತು. ಕೆಲದಿನಗಳಲ್ಲೇ ಅವರು ಮೈಸೂರು ಸೀಮೆಗೆ ಹಿಂದಿರುಗಿದರು.
ಈ ನಡುವೆ ಮತ್ತೊಂದು ಸಮಸ್ಯೆಯೂ ತಲೆದೋರಿತು. ಅಂದು ಕನ್ನಡನಾಡಿನ ಭಾಗವೇ ಆಗಿದ್ದ ಕೊಯಮತ್ತೂರಿನಲ್ಲಿ ಅಲ್ಲಿನ ಪಾಳೇಗಾರನು ದ್ವೇಷ ಕಾರುತ್ತಿದ್ದ. ಪೆನ್ನಾಗರ ಜಿಲ್ಲೆಯ ಕ್ರೈಸ್ತರ ಪರವಾಗಿ ರಾಜನಿಂದ ಒಂದು ರಾಯಸ ಹೊರಡಿಸಿ ಎಂದು ಅಲ್ಲಿನ ಕ್ರೈಸ್ತರು ಪ್ಲಾಟೆ ಸ್ವಾಮಿಯವರಿಗೆ ಪತ್ರ ಬರೆದರು. ಸ್ವಾಮಿಯವರು ರಾಜನನ್ನು ಭೇಟಿಯಾಗಿ ತಮ್ಮ ಜನರನ್ನು ಮುಟ್ಟದಂತೆ ಪಾಳೆಗಾರನಿಗೆ ಬುದ್ದಿ ಹೇಳಲು ಕೇಳಿಕೊಂಡರು. ಪೆನ್ನಾಗರ ಕ್ರೈಸ್ತರ ಪರವಾಗಿ ಒಂದು ರಾಜಾಜ್ಞೆ ಹೊರಟಿತು. ಆದರೆ ಪಾಳೇಗಾರನು ದುರಹಂಕಾರದಿಂದ ವರ್ತಿಸಿ ಕ್ರೈಸ್ತರನ್ನು ನಾನು ಮುಟ್ಟುವುದಿಲ್ಲ ಆದರೆ ಅವರ ಆಸ್ತಿಪಾಸ್ತಿಗಳನ್ನು ಮುಟ್ಟುತ್ತೇನೆ ಎಂದು ಅಬ್ಬರಿಸಿದ. ಇದಕ್ಕೆ ಹೆದರಿದ ಕ್ರೈಸ್ತರು ತಮ್ಮ ಸ್ಥಿರಾಸ್ತಿಗಳನ್ನು ಸಿಕ್ಕ ಬೆಲೆಗೆ ಮಾರಿಕೊಂಡು ತಿರುಪತ್ತೂರಿಗೆ ಗುಳೇ ಎದ್ದರು. ಕೆಲವರು ಅಲ್ಲೇ ಇದ್ದು ದಂಗೆಯೇಳುವ ಹುನ್ನಾರ ನಡೆಸಿದರು.
ಇದರ ಫಲವಾಗಿ ಸ್ವಾಮಿಯವರು ಐದು ತಿಂಗಳ ಕಾಲ ಭೂಗತರಾಗಿ ಆಧ್ಯಾತ್ಮಿಕ ಸೇವೆಗಳನ್ನು ರಾತ್ರಿಯ ಸಮಯದಲ್ಲೇ ನೀಡಬೇಕಾಯಿತು. ಧಾರ್ಮಿಕ ವಿಶ್ವಾಸವು ಬಲಗುಂದದಂತೆ ಅದನ್ನು ಕಾಪಿಡಲು ಅವರನ್ನು ಮತ್ತೊಮ್ಮೆ ಶ್ರೀರಂಗಪಟ್ಟಣಕ್ಕೆ ನಿಯೋಜಿಸಲಾಯಿತು. ಅದೊಂದು ಅಪಾಯಕಾರೀ ನಿಯೋಜನೆಯಾಗಿತ್ತು. ರಾಜಾಜ್ಞೆಯನ್ನು ಮೀರಿ ಅವರು ಪಟ್ಟಣದೊಳಕ್ಕೆ ಪ್ರವೇಶಿಸಿದ್ದಲ್ಲದೆ ಅರಮನೆಗೆ ಸಂಬಂಧಿಸಿದ ಅರುವತ್ತು ಮಂದಿಗೆ ಕ್ರಿಸ್ತದೀಕ್ಷೆ ನೀಡಿದರು. ಅದು ಆಸ್ಥಾನದವರ ಮತ್ತು ರಾಜನ ಕಣ್ಣು ಕೆಂಪಾಗಿಸಿತು. ಆ ಸಂದರ್ಭದಲ್ಲೇ ಆನೆಕಲ್ಲು ಬಳಿಯ ಕಂಗೊಂದಿಯಲ್ಲಿ ಫಾದರ್ ಮನುವೆಲ್ ದಕುನ್ಹ ನವರು ಹುತಾತ್ಮರಾದುದರಿಂದ ಪ್ಲಾಟೆ ಸ್ವಾಮಿಯವರನ್ನು ಅಲ್ಲಿಗೆ ನಿಯೋಜಿಸಲಾಯಿತು. ಆದರೆ ಅವರು ಅಲ್ಲಿ ತಲಪುತ್ತಿದ್ದಂತೆಯೇ ಮುಸಲ್ಮಾನ ಕೊತ್ವಾಲನು ಅವರನ್ನು ಬಂಧಿಸಿ ಒಂದು ತಿಂಗಳ ಕಾಲ ಸೆರೆಯಲ್ಲಿಟ್ಟನು.
ಇತ್ತ ಶ್ರೀರಂಗಪಟ್ಟಣದಲ್ಲಿ ಒಂದು ವಿಷಾದಕರ ಸಂಗತಿ ನಡೆಯಿತು. ಹಾಸಿಗೆ ಹಿಡಿದಿದ್ದ ಒಬ್ಬ ನಂಬಿಗಸ್ಥ ಉಪದೇಶಕನಿಗೆ ಅಂತಿಮ ಅಭ್ಯಂಗ ನೀಡಲು ಸ್ವಾಮಿಯವರು ಅಲ್ಲಿಗೆ ತೆರಳಿದ್ದರು. ಆ ರಾತ್ರಿ ಅವರು ಕಾವೇರಿ ನದೀತಟದ ಒಂದು ಗುಡಿಸಲಿನಲ್ಲಿ ಮಲಗಿದ್ದರು. ಕೆಲ ಹೊತ್ತಿನಲ್ಲೇ ವಿಪರೀತ ಜ್ವರ ಅವರನ್ನು ಬಾಧಿಸಿತು. ಆದರೂ ಅದನ್ನು ಲೆಕ್ಕಿಸದೆ ಅವರು ವ್ಯಾದಿಸ್ಥರನ್ನು ಕಾಣಲು ಹೋದರು.
ಆಮೇಲೆ ಜ್ವರ ಉಲ್ಬಣಗೊಂಡುದರಿಂದ ಕ್ರೈಸ್ತ ವರ್ತಕನೊಬ್ಬನು ಅವರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಆರೈಕೆ ಮಾಡಿದನು. 43 ದಿನಗಳ ಕಾಲ ಅವರು ಹಾಸಿಗೆಯಲ್ಲೇ ಕಳೆದರು. ಫಾದರ್ ಸ್ಕೆರೆಟ್ ಎಂಬ ಐರಿಶ್ ಪಾದ್ರಿಯೊಬ್ಬರು ಸ್ವಾಮಿಯವರಿಗೆ ಸತ್ಪ್ರಸಾದ ನೀಡಿ ಸಂತೈಸಿದರು. ಸ್ವಲ್ಪ ಗೆಲುವಾದ ಸ್ವಾಮಿಯವರು ತಮ್ಮನ್ನು ಕಾಣಲೆಂದು ಬಂದಿದ್ದ ಅಸಂಖ್ಯಾತ ಜನರೊಂದಿಗೆ ಮನಸಾರೆ ಮಾತನಾಡಿದರು. ಮಕ್ಕಳು ಮುದುಕರೆನ್ನದೆ ಆ ಜನ ಹಣ್ಣು ಹಂಪಲುಗಳನ್ನು ಹೊತ್ತು ತಂದು ಸ್ವಾಮಿಯವರನ್ನು ಪ್ರೀತಿಯಕ್ಕರೆಗಳಿಂದ ಉಪಚರಿಸಿದರು. ಸ್ವಾಮಿಯವರು ಅವರನ್ನು ಸಂತೈಸಿದರು, ಉಪದೇಶ ನೀಡಿದರು, ಇನ್ನು ಮಾತನಾಡಲಾಗದು ಎನಿಸಿದಾಗ ನಗುನಗುತ್ತಾ ಆಶೀರ್ವಸಿದರು. ತಮ್ಮ ಸ್ವಾಮಿಯವರನ್ನು ಉಳಿಸಿಕೊಳ್ಳಲು ಆ ಜನ ಏನು ತ್ಯಾಗ ಮಾಡಲೂ ಸಿದ್ದರಿದ್ದರು. ಆದರೆ ಸ್ವಾಮಿಯವರು ತೀರಾ ನಿತ್ರಾಣರಾಗಿದ್ದರು.
ತಾನು ಶ್ರೀರಂಗಪಟ್ಟಣದಲ್ಲಿ ಸಾಯಲಿಚ್ಛಿಸುವುದಿಲ್ಲ, ತನ್ನನ್ನು ಅರಶಿನಕೆರೆಗೆ ಕೊಂಡುಹೋಗಿ ಎಂದು ಅಲವತ್ತುಕೊಂಡರು. ಏಕೆಂದರೆ ಶ್ರೀರಂಗಪಟ್ಟಣದಲ್ಲಿ ಸಮಾಧಿಭೂಮಿ ಇರಲಿಲ್ಲ, ಹಾಗೂ ತಮ್ಮ ಸಾವಿನಿಂದ ಅಲ್ಲಿನ ಕ್ರೈಸ್ತಧರ್ಮೀಯರಿಗೆ ಸಮಸ್ಯೆ ಎದುರಾಗಬಾರೆಂದು ಅವರು ಭಾವಿಸಿದರು.
ಜಪಮಾಲೆಯ ಹಬ್ಬ ಸಮೀಪಿಸುತ್ತಿತ್ತು. ತಮ್ಮ ಕೋಣೆಯ ಕಿರು ಕಿಟಕಿಯಿಂದಲೇ ಅವರು ಜನರೊಂದಿಗೆ ಮಾತನಾಡುತ್ತಿದ್ದರು. ಸ್ವಾಮಿಯವರು ಪವಿತ್ರ ಜಪಸರದ ಹಬ್ಬದ ಸಿದ್ಧತೆ ಹೇಗೆ ನಡೆದಿದೆಯೆಂದು ಜನರನ್ನು ವಿಚಾರಿಸಿದರು. ಯಾಕೆ ಏನೂ ಸಂಗೀತ ಕೇಳಿಬರುತ್ತಿಲ್ಲವಲ್ಲಾ ಎಂದು ಅಲವತ್ತುಕೊಂಡರು. ಪೂರ್ಣ ಮನಸ್ಸಿನಿಂದ ದೇವರನ್ನು ಪ್ರೀತಿಸಿ ಮಾತೆ ಮರಿಯಮ್ಮನವರನ್ನು ಗೌರವಿಸಿ ಎಂದು ಹೇಳುತ್ತಿದ್ದರು. ದಾನಧರ್ಮಗಳಲ್ಲಿ ನಿರತರಾಗಿ, ಗುರುಹಿರಿಯರಿಗೆ ವಿಧೇಯರಾಗಿರಿ ಹಾಗೂ ಧಾರ್ಮಿಕ ನಂಬಿಕೆಯನ್ನು ಕಳೆದುಕೊಳ್ಳಬೇಡಿ ಎನ್ನುತ್ತಿದ್ದರು. ಜನರೆಲ್ಲ ಗೊಳೋ ಎಂದು ಅತ್ತರು. ಇನ್ನೂ ಕೆಲವರು ಪಾಪನಿವೇದನೆ ಮಾಡಿ ಮನ ಹಗುರಾಗಿಸಿಕೊಂಡರು. ಸ್ವಾಮಿಯವರ ಆರೋಗ್ಯಕ್ಕಾಗಿ ಹಲವರು ಹರಕೆ ಹೊತ್ತರು. ಆದರೆ ಸ್ವಾಮಿಯವರು ತಮಗೆ ಒಳ್ಳೆಯ ಸಾವು ಬರಲಿ ಎಂದು ಬೇಡಿಕೊಳ್ಳುವಂತೆ ಹೇಳಿ ಅವರನ್ನೆಲ್ಲ ಮನೆಗೆ ಕಳುಹಿಸಿದರು.
ಹಾಸಿಗೆಯನ್ನು ತೊರೆದು ನೆಲದ ಮೇಲೆ ಚಾಪೆ ಹಾಸಿ ಮಲಗಿದರು. ತಮ್ಮ ಸಾವು ನೆಲದ ಮೇಲೆಯೇ ಆಗಬೇಕೆಂದು ಅವರು ಬಯಸಿದ್ದರು. ಚಾಪೆಯ ಮೇಲೆ ಮಲಗಿಯೇ ಅಂತಿಮ ಅಭ್ಯಂಗ ಸ್ವೀಕರಿಸಿದರು. ಆಗಾಗ್ಗೆ ಅವರ ಬಾಯಿಂದ ತೊದಲು ನುಡಿಗಳಲ್ಲಿ “ಕ್ವಾಂದೊ ವೇನಿಯಮ್ ಎತ್ ಅಪ್ಪಾನೋ ಅನ್ತೆ ಫೇಸಿಯೆಮ್ ದೊಮಿನಿ” (ಪ್ರಭುವೇ ಯಾವಾಗ ನಿನ್ನ ಸನ್ನಿಧಿಗೆ ಬಂದು ನಿನ್ನ ಮುಖದರ್ಶನ ಮಾಡುವೆನೋ?) ಎಂಬ ಉದ್ಗಾರ ಹೊರಡುತ್ತಿತ್ತು. ಪದೇ ಪದೇ ನಿಡಿದಾದ ಉಸಿರು ಬಿಡುತ್ತಿದ್ದರು.
ಕೊನಗೆ ವಿಶ್ವಾಸದ, ಭರವಸೆಯ, ತ್ಯಾಗದ ಮಂತ್ರಗಳನ್ನು ಜಪಿಸಿದರು. ಅಲ್ಲಿದ್ದ ಎಲ್ಲರನ್ನೂ ಆಶೀರ್ವದಿಸಿದರು. ಕೊನೆಯದಾಗಿ ಯೇಸುವೇ ಮರಿಯೇ ಜೋಸೆಫರೇ ಎಂದು ಹೇಳುತ್ತಾ ಕೊನೆಯುಸಿರೆಳೆದರು. ಅಂದು 1719 ಅಕ್ಟೋಬರ್ 8, ಜಪಮಾಲೆಯ ಸಪ್ತಾಹದ ಮೊದಲ ದಿನ. ಜಪಮಾಲೆಯನ್ನು ಎಡಬಿಡದೆ ಪ್ರಾರ್ಥಿಸುತ್ತಿದ್ದ, ಜಪಮಾಲೆಯ ಮಹತ್ವದ ಬಗ್ಗೆ ಅನೂಚಾನವಾಗಿ ಉಪನ್ಯಾಸ ನೀಡುತ್ತಿದ್ದ, ಜಪಮಾಲೆಯ ಒಡಪುಗಳ ಬಗ್ಗೆ ಕನ್ನಡ, ತಮಿಳು ಮತ್ತು ಬಡಗ ಭಾಷೆಗಳಲ್ಲಿ ಪುಸ್ತಕಗಳನ್ನು ಬರೆದಿದ್ದ ಪ್ಲಾಟೆ ಸ್ವಾಮಿಯವರು ಜಪಮಾಲೆಯ ಹಬ್ಬದ ಮರುದಿನವೇ ಸ್ವರ್ಗ ಸೇರಿದ್ದು ಜಪಮಾಲೆಯ ಬಗ್ಗೆ ಅವರು ಇರಿಸಿದ್ದ ವಿಶ್ವಾಸದ ಫಲವೇ ಆಗಿದೆ.
ಕಷ್ಟದ ದಿನಗಳಲ್ಲಿ ಸಂತೈಸಿದ, ದಾರಿ ತಪ್ಪಿದಾಗ ಕೈಹಿಡಿದು ಮುನ್ನಡೆಸಿದ, ಒಡೆದ ಮನಗಳನ್ನು ಒಂದುಗೂಡಿಸಿದ, ಪ್ರತಿನಿತ್ಯ ಒಳ್ಳೆಯ ಮಾತುಗಳಿಂದ ಪ್ರೀತಿಯ ಸಿಂಚನಗೈದ ತಮ್ಮ ಆತ್ಮೀಯ ಸ್ವಾಮಿಯವರ ಮರಣವಾರ್ತೆಯನ್ನು ಕೇಳಿ ಎಲ್ಲೆಡೆಯಿಂದ ಧಾವಿಸಿ ಬಂದ ಜನ ಎದೆ ಬಡಿದುಕೊಂಡು ಅತ್ತು ಕರೆದು ಗೋಳಾಡಿದರು. ಅವರ ಪ್ರೀತಿಯ ರಾಜೇಂದ್ರ ಸ್ವಾಮಿಗಳು ಸ್ವರ್ಗ ಸಾಮ್ರಾಜ್ಯಕ್ಕೆ ತೆರಳಿದ್ದರು. ಅವರ ಅಂತಿಮ ದರ್ಶನ ಪಡೆಯಲು ಕಿಕ್ಕಿರಿದ ಜನಸಾಗರ ಸೇರಿತ್ತು. ಅರಶಿನಕೆರೆಯ ದೇವಾಲಯದಲ್ಲೇ ಅವರನ್ನು ಮಣ್ಣು ಮಾಡಲಾಯಿತು.
ಆ ದಿನಗಳಲ್ಲಿ ನಾಡಿನಲ್ಲಿ ಮಳೆಯಿರಲಿಲ್ಲ. ಬರಬೇಕಿದ್ದ ಮಳೆಯೂ ಬರುವ ಸೂಚನೆ ಇರಲಿಲ್ಲ. ಫರಂಗಿ ಸ್ವಾಮಿಯ ಶವವನ್ನು ದೇವಾಲಯದಲ್ಲಿ ಹೂತಿದ್ದರಿಂದಲೇ ನಾಡಿನಲ್ಲಿ ಮಳೆಯಿಲ್ಲವೆಂದು ಪುಕಾರು ಎದ್ದಿತು. ವಿರೋಧಿಬಣದವರು ಇದನ್ನೇ ಕಾದಿತ್ತೆಂಬಂತೆ ಸಮಾಧಿ ಬಗೆದು ಸ್ವಾಮಿಯವರ ಶವವನ್ನು ಹೊರತೆಗೆದು ತುಂಡು ತುಂಡು ಮಾಡಿ ನಾಲ್ದೆಸೆಗಳಿಗೆ ಎಸೆಯಬೇಕೆಂದು ಮಾತಾಡಿಕೊಂಡರು. ಅವರೆಲ್ಲ ದೊಡ್ಡ ಗುಂಪಾಗಿ ಜೋರಾಗಿ ಕೂಗಾಡುತ್ತಾ ಹಾರೆ ಪಿಕಾಸಿಗಳೊಂದಿಗೆ ಚರ್ಚಿನತ್ತ ಧಾವಿಸಿ ಬಂದರು. ಅದೇ ಕ್ಷಣದಲ್ಲಿ ಒಂದು ಪವಾಡವೇ ನಡೆದು ಹೋಯಿತು. ಆಗಸದಲ್ಲಿ ಎಲ್ಲೆಲ್ಲೆಂದಲೋ ಮೋಡಗಳೆಲ್ಲ ದಟ್ಟೈಸಿ ಭಾರೀ ಗುಡುಗು ಸಿಡಿಲುಗಳೊಂದಿಗೆ ಧೋ ಎಂದು ಮಳೆ ಸುರಿಯತೊಡಗಿತು. ಘೋರಕಾಂಡಕ್ಕೆ ಅವಕಾಶ ನೀಡಲಾರನೆಂದು ಮಾತೆ ಮರಿಯಮ್ಮನವರೇ ಮಳೆಗೆ ಅಪ್ಪಣೆ ನೀಡಿದಂತೆ ಆಕಾಶ ಬಾಯ್ದೆರೆದು ಇಡೀ ರಾತ್ರಿ ಭಯಂಕರ ಮಳೆಗರೆದು ಶಾಂತವಾಯಿತು. ಸಮಾಧಿ ಬಗೆಯಲೆಂದು ಬಂದಿದ್ದ ಜನ ಭಯಭೀತರಾಗಿ ಸಮಾಧಿಯ ಮುಂದೆ ಸಾಷ್ಟಾಂಗವಾಗಿ ಎರಗಿ ಅಲ್ಲಿನ ಮಣ್ಣನ್ನು ಕಣ್ಣಿಗೊತ್ತಿಕೊಂಡರು. ತಮ್ಮದು ತಪ್ಪಾಯಿತೆಂದು ಕೆನ್ನೆ ಬಡಿದುಕೊಂಡರು.
ಬೆಳಗ್ಗೆ ಆರುಕಟ್ಟಿದ ಜನ ತಮ್ಮ ಹೊಲಗಳಲ್ಲಿ ಉಳುತ್ತಾ ರಾಜೇಂದ್ರ ಸ್ವಾಮಿಯವರ ಪವಾಡದ ಗುಣಗಾನ ಮಾಡಿದರು. ಮೈಸೂರು ಸೀಮೆಯ ಎಲ್ಲೆಡೆ ರಾಜೇಂದ್ರ ಸ್ವಾಮಿಗಳ ಪವಾಡದ ಸುದ್ದಿ ಮಿಂಚಿನಂತೆ ಹರಿದಾಡಿತು. ಮಳೆಗಾಗಿ, ಸಂತಾನಕ್ಕಾಗಿ, ಸಮಸ್ಯೆಗಳ ಪರಿಹಾರಕ್ಕಾಗಿ ಇಂದಿಗೂ ಜನರು ಕ್ರೈಸ್ತ ಕ್ರೈಸ್ತೇತರರೆನ್ನದೆ ರಾಜೇಂದ್ರ ಸ್ವಾಮಿಗಳ ಸಮಾಧಿಯನ್ನು ದರ್ಶಿಸಿ ಬೇಡುತ್ತಾರೆ ಹಾಗೂ ಅದರ ಫಲವನ್ನು ಪಡೆಯುತ್ತಾರೆ.
[1720ರ ಜೆಸ್ವಿತ್ ವಾರ್ಷಿಕ ವರದಿಯನ್ನೇ ಇಲ್ಲಿ ಕನ್ನಡಿಸಲಾಗಿದೆ. ಅದರಲ್ಲಿ ಹೇಳಲಾದ ಅರಶಿನಕೆರೆಯು ಇಂದು ಚಿಕ್ಕರಸಿನಕೆರೆ ಎಂದು ಕರೆಸಿಕೊಳ್ಳುತ್ತಿದೆ. ಮದ್ದೂರಿನಿಂದ ಮಳವಳ್ಳಿಗೆ ಹೋಗುವ ರಸ್ತೆಯ ಬದಿಯಲ್ಲೇ ಚಿಕ್ಕರಸಿನಕೆರೆ ರಾಜೇಂದ್ರಸ್ವಾಮಿಗಳ ಸಮಾಧಿ ಇದ್ದು ಆ ಮಾರ್ಗದ ಎಲ್ಲ ಬಸ್ಸುಗಳೂ ಅಲ್ಲಿ ನಿಲ್ಲುತ್ತವೆ]
No comments:
Post a Comment