Wednesday, 7 August 2019

ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ

ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ

- ಜೋವಿ

ಕೆಟ್ಟಮರ ಒಳ್ಳೆಯ ಹಣ್ಣನ್ನು ಕೊಡಲಾರದು

ನಮ್ಮ ರಾಜ್ಯದ ರಾಜಕೀಯದಲ್ಲಿ ನಡೆಯುತ್ತಿರುವ ಡೊಂಬರಾಟ ಏಕೋ ಮುಗಿಯುವಂತೆ ಕಾಣುತ್ತಿಲ್ಲ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಶುರುವಾದಾಗಿಂದಲೂ ಡೊಂಬರಾಟ ನಡೆಯುತ್ತಲೇ ಬಂದಿದೆ. ಈ ನಾಟಕ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಕೆಲವೊಂದು ಶಾಸಕರು ತಮ್ಮ ಮೈತ್ರಿ ಸರ್ಕಾರದ ವಿರುದ್ಧವೇ ದಂಗೆ ಎದ್ದು, ರಾಜೀನಾಮೆ ಪತ್ರಗಳನ್ನು ಸ್ವೀಕರ್ ಕಛೇರಿಯಲ್ಲಿ ಕೊಟ್ಟು ಬಾಂಬೆ ಸೇರಿಕೊಂಡಿದ್ದರಿಂದ ತೀವ್ರಗೊಂಡಿತ್ತು. ರಾಜೀನಾಮೆ ಪತ್ರಗಳಲ್ಲಿ ದೋಷವಿದೆ ಎಂದು ಹೇಳಿದಾಕ್ಷಣ ಬಾಂಬೆಯಿಂದ ಹಾರಿ ಬಂದು, ಸ್ವೀಕರ್ ಬಳಿಗೆ ಓಡೋಡಿ ಮತ್ತೊಮ್ಮೆ ರಾಜೀನಾಮೆ ಪತ್ರವನ್ನು ಸಲ್ಲಿಸಿ ಬಾಂಬೆಗೆ ಪುನಃ ಬಂದ ವೇಗದಲ್ಲೇ ಹಾರಿ ಹೋದರು. 
ಈ ಕಡೆ ಅತೃಪ್ತರನ್ನು ಸಮಾಧಾನ ಪಡಿಸಲು ನಾನಾ ರೀತಿಯ ಸರ್ಕಸ್ಸುಗಳನ್ನು ಮೈತ್ರಿ ನಾಯಕರು ಮಾಡಿದರು. ಬಾಂಬೆಯ ಹೋಟೆಲ್ ಒಂದರಲ್ಲಿ ಸೇರಿಕೊಂಡಿದ್ದ ಅತೃಪ್ತ ಶಾಸಕರನ್ನು ಡಿಕೆಶಿ ಮತ್ತು ಬಳಗ ವಾಪಸ್ಸು ಕರೆತರಲು ಸರ್ವಪ್ರಯತ್ನ ಮಾಡಿ ಕೊನೆಗೆ ಕೈಚೆಲ್ಲಿದರು. ಇದು ಸೇರಿ ಮೈತ್ರಿ ಸರ್ಕಾರದ ಯಾವ ತಂತ್ರವೂ ಉಪಯೋಗಕ್ಕೆ ಬರಲಿಲ್ಲ. ಕೊನೆಗೆ, ಸದನದ ಚರ್ಚೆಯನ್ನು ಸಹ ಅನವಶ್ಯಕವಾಗಿ ಎಳೆದು ಸ್ವಲ್ಪ ಕಾಲಾವಕಾಶವನ್ನು ಪಡೆದರೂ ವಿಶ್ವಾಸಮತ ಯಾಚನೆಯಲ್ಲಿ ಮ್ಯಾಜಿಕ್ ನಂಬರ್ ಸಿಗದೆ ಕುಮಾರಸ್ವಾಮಿಯವರು ರಾಜೀನಾಮೆ ಕೊಟ್ಟು ಮನೆಗೆ ಹೋದರು. 
ಮತ್ತೊಂದು ಕಡೆ ಅಧಿಕಾರಕ್ಕಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದ ಯಡ್ಡಿ ತಂಡ ಸದನದ ಚರ್ಚೆಯಲ್ಲಿ ಮೈತ್ರಿ ಪಕ್ಷದವರು ಮಾಡಿದ ಆರೋಪಗಳಿಗೂ ಉತ್ತರಿಸದೆ ದಿವ್ಯಮೌನವಹಿಸಿದ್ದರು. ಈಗ ಅತೃಪ್ತ ಶಾಸಕರೆಲ್ಲರೂ ಅನರ್ಹರಾಗಿದ್ದಾರೆ. ಅನರ್ಹತೆಯನ್ನು ಪ್ರಶ್ನಿಸಿ ಕೋರ್ಟಿಗೆ ಹೋಗುವುದಾಗಿ ಹೇಳಿದ್ದಾರೆ. ಅವರಲ್ಲೇ ಕೆಲವರು ರಾಜಕೀಯ ನಿವೃತ್ತಿ ಪಡೆಯುವುದಾಗಿ ಸಹ ಹೇಳಿಕೊಂಡಿದ್ದಾರೆ. ಸದನದಲ್ಲಿ ಬಹುಮತ ಸಾಬೀತುಪಡಿಸಿದ ಯಡಿಯೂರಪ್ಪ ರಾಜ್ಯದ ಹೊಸ ಮುಖ್ಯಮಂತ್ರಿಯಾಗಿದ್ದಾರೆ. ಇಂದಿನಿಂದ ಅಭಿವೃದ್ಧಿಯ ಪರ್ವ ಆರಂಭವಾಗುವುದೆಂದು ಬಿಜೆಪಿಯವರು ಹೇಳಿಕೊಳ್ಳುತ್ತಿದ್ದಾರೆ. 
ಈ ಎಲ್ಲಾ ವಿದ್ಯಮಾನಗಳಿಂದ ಬೇಸತ್ತ ಜನರು ನಾನಾ ರೀತಿಯ ಹೇಳಿಕೆಗಳನ್ನು ಕೊಟ್ಟಿದ್ದಾರೆ:
"ಇದು ಬರೀ ಟ್ರೈಲರ್ ಮಾತ್ರ.. ಸಿನಿಮಾ ಬಾಕಿ ಇದೆ. ಕೋಮುವಾದಿಗಳನ್ನು ಬೆಂಬಲಿಸಿದ ಎಲ್ಲರಿಗೂ ಕಾದಿದೆ."
"ನಾವು ನೋಟಿಗಾಗಿ ವೋಟನ್ನು ಮಾರಿದರೆ ರಾಜಕಾರಣಿಗಳು ಅದೇ ನೋಟಿಗಾಗಿ ನಾಡನ್ನೇ ಮಾರುತ್ತಾರೆ"
"ಭ್ರಷ್ಟಾಚಾರವನ್ನು ನ್ಯಾಯಬದ್ಧ ಮಾಡಿರುವ ಒಂದು ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ ಎಂಬ ವಾಸ್ತವವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು"
"ಗೆದ್ದೇ ಎಂಬ ಅಹಂಕಾರದಿಂದ ಬೀಗಬೇಡ, ನೀನು ಖರೀದಿಸಿದ್ದು ಖದೀಮರನ್ನೇ ಹೊರತು ಕಾರ್ಯಕರ್ತರನ್ನಲ್ಲ."
ಹೊಸ ಸರ್ಕಾರವೂ ಸ್ಥಿರವಲ್ಲ. ಅದು ಎಲ್ಲರಿಗೂ ಗೊತ್ತಿರುವ ವಿಷಯ. ಸ್ಥಿರಪಡಿಸಿಕೊಳ್ಳಲು ಬಿಜೆಪಿಯವರು ಆಪರೇಶನ್ ಕಮಲ –  2 ಪ್ರಾರಂಭಿಸಬಹುದು ಎಂಬ ಗುಸುಗುಸು ಮಾತುಗಳು ಕೇಳಿಬರುತ್ತಿವೆ. ಯಾವುದೋ ಒಂದು ಲೆಕ್ಕಚಾರದಲ್ಲಿ ಬಹುಮತ ಸಾಬೀತುಪಡಿಸಿದ ಬಿಜೆಪಿ ಪಕ್ಷವು ಸಹ ಸ್ಥಿರ ಆಡಳಿತ ನೀಡುವುದು ಅನುಮಾನ. 
ಈಗಿನ ಸರ್ಕಾರದ ಬಗ್ಗೆ ಯೋಚಿಸುವಾಗ ಕ್ರಿಸ್ತನ ಈ ಮಾತುಗಳು ನೆನಪಿಗೆ ಬರುತ್ತಿವೆ: "ವಿನಾಶಕ್ಕೆ ಒಯ್ಯುವ ಬಾಗಿಲು ಹಿರಿದು; ಅದರ ಮಾರ್ಗ ಸರಾಗ; ಅದನ್ನು ಹಿಡಿಯುವವರು ಅನೇಕರು. ಸುಳ್ಳು ಪ್ರವಾದಿಗಳ ಬಗ್ಗೆ ಎಚ್ಚರಿಕೆಯಿಂದಿರಿ. ಹೊರಗೆ ಕುರಿಯ ವೇಷದಲ್ಲಿ ಬಂದರೂ ಒಳಗೆ ಅವರು ಕಿತ್ತು ತಿನ್ನುವ ತೋಳಗಳು. ಅವರ ವರ್ತನೆಯಿಂದ ನೀವು ಅವರನ್ನು ಗುರುತು ಹಚ್ಚುವಿರಿ. ಮುಳ್ಳುಕಳ್ಳಿಯಲ್ಲಿ ದ್ರಾಕ್ಷಿ ಕೊಯ್ಯುವುದುಂಟೇ? ಮದ್ದುಗುಣಿಕೆಯಲ್ಲಿ ಅಂಜೂರ ಕೀಳುವುದುಂಟೇ? ಅದರಂತೆಯೇ ಒಳ್ಳೆಯ ಮರ ಒಳ್ಳೆಯ ಹಣ್ಣನ್ನೂ ಕೆಟ್ಟ ಮರವು ಕೆಟ್ಟ ಹಣ್ಣನ್ನೂ ಕೊಡುತ್ತದೆ. ಒಳ್ಳೆಯ ಮರ ಕೆಟ್ಟ ಹಣ್ಣನ್ನು ಕೊಡಲಾರದು, ಹಾಗೆಯೇ ಕೆಟ್ಟ ಮರ ಒಳ್ಳೆಯ ಹಣ್ಣನ್ನು ಕೊಡಲಾರದು". ಏಕೋ ಕ್ರಿಸ್ತನ ಈ ಮಾತುಗಳು ಜನರಿಗೆ ಎಚ್ಚರಿಕೆಯ ಮಾತುಗಳಂತೆ ಕೇಳುತ್ತಿವೆ.
ಇನ್ನೊಂದು ಕಡೆ, ಬಂಡೆಯ ಮೇಲೆ ಮನೆ ಕಟ್ಟಿಕೊಂಡ ಬುದ್ದಿವಂತನ ಬಗ್ಗೆ ಹೇಳುವ ಕ್ರಿಸ್ತ ಮಳೆ ಬಿತ್ತು, ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು, ಆದರೂ ಅದು ಬೀಳಲಿಲ್ಲ; ಕಾರಣ ಅದರ ಅಡಿಗಟ್ಟು ಬಂಡೆಯ ಮೇಲಿತ್ತು ಎಂದು ಹೇಳಿ ಬುದ್ದಿವಂತನನ್ನು ಪ್ರಶಂಸಿಸುತ್ತಾನೆ. ಮರಳಿನ ಮೇಲೆ ಮನೆ ಕಟ್ಟಿಕೊಂಡ ಬುದ್ದಿಹೀನನ ಬಗ್ಗೆ ಹೇಳುತ್ತಾ ಮಳೆ ಬಿತ್ತು, ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು; ಅದು ಕುಸಿದು ಬಿತ್ತು. ಅದಕ್ಕಾದ ಪತನವೋ ಅಗಾಧ! ಎಂದು ಟಿಪಿಕಲ್ ಇಂಜಿನಿಯರನ ಬುದ್ದಿವಂತಿಕೆಯನ್ನು ತೋರ್ಪಡಿಸುವ ಕ್ರಿಸ್ತ, ಸರ್ಕಾರದ ಬುನಾದಿ ಯಾವ ಬಲದ ಮೇಲೆ ಸ್ಥಾಪಿತಗೊಳ್ಳಬೇಕೆಂದು ಸ್ಪಷ್ಟವಾಗಿ ಸರಳ ಮಾತುಗಳಲ್ಲಿ ಹೇಳಿದ್ದಾನೆ ಎಂದೆನಿಸುತ್ತದೆ. ನಮ್ಮ ಹೊಸ ಸರ್ಕಾರ ಆಗಾಗ ತಲೆದೋರುವ ಸಮಸ್ಯೆಗಳನ್ನು ಮೆಟ್ಟಿ ಸುಭದ್ರವಾಗಿ ಇರುತ್ತದೆಯೋ ಕಾದು ನೋಡೋಣ

ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ. ಆದರೆ ಆ ಹೊಣೆಗಾರಿಕೆ ಅಷ್ಟು ಸುಲಭವಲ್ಲ. ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವವರ ವಿರುದ್ಧ ದನಿಯೇರಿಸಿ ಮಾತನಾಡುವುದೆಂದರೆ ಬೀದಿಯಲ್ಲಿ ಹೋಗೋ ಮಾರೀನಮನೆಗೆ ಕರೆದಂತೆ, ಅದರಲ್ಲೂ ಪ್ರಭುತ್ವದ ವಿರುದ್ಧ ಮಾತನಾಡಬೇಕೆಂದರೆ ನೂರುಸಲ ಯೋಚಿಸಿದರೂ ಸಾಲದು. ಅದು ಜೀವಕ್ಕೆ ಅಪಾಯವನ್ನು ತಂದೊಡ್ಡುವ ಕೆಲಸ. ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ಏಕೆ ಹೇಳ್ತಿದೀನಿ ಅಂದ್ರೆ ಕಳೆದ ಮಂಗಳವಾರ, ಚಲನಚಿತ್ರ ನಿರ್ಮಾಪಕರಾದ ಮಣಿರತ್ನಂ, ಅನುರಾಗ್ ಕಶ್ಯಪ್, ಶ್ಯಾಮ್ ಬೆನಗಲ್ ಮತ್ತು ಅಪರ್ಣಾ ಸೇನ್ ಮತ್ತು ಗಾಯಕ ಶುಭಾ ಮುದ್ಗಲ್ ಮತ್ತು ಇತಿಹಾಸಕಾರ ರಾಮಚಂದ್ರ ಗುಹಾ ಸೇರಿದಂತೆ 49 ವ್ಯಕ್ತಿಗಳು "ಧಾರ್ಮಿಕ ಆಧಾರಿತ ದ್ವೇಷ ಅಪರಾಧಗಳ (ಗುಂಪುಹತ್ಯೆಗಳ)" ಬಗ್ಗೆ ಕಳವಳ ವ್ಯಕ್ತಪಡಿಸಿ, `ಜೈ ಶ್ರೀರಾಮ್" ಘೋಷಣೆಯು ಹಿಂಸೆಯನ್ನು ಕೆರಳಿಸುವ ಮಂತ್ರವಾಗಿ ಮತ್ತು ಅದರ ಹೆಸರಿನಲ್ಲಿ ಅನೇಕ ಹಲ್ಲೆಗಳು ನಡೆಯುತ್ತಿವೆ ಎಂದು ಪ್ರಧಾನ ಮಂತ್ರಿಯವರಿಗೆ ಬಹಿರಂಗ ಪತ್ರ ಬರೆದು ತಮ್ಮ ಕಳವಳವನ್ನು ವ್ಯಕ್ತಪಡಿಸಿದರು. 
ಇದರ ಬೆನ್ನಲ್ಲೇ ಆ ಪತ್ರಕ್ಕೆ ಪ್ರತ್ಯುತ್ತರವಾಗಿ ಗೀತರಚನೆಕಾರ ಪ್ರಸೂನ್ ಜೋಷಿ ಮತ್ತು ಗಾಯಕಿ ಮಾಲಿನಿ ಅವಸ್ಥಿ ಸೇರಿದಂತೆ ಅರವತ್ತೊಂದು ಖ್ಯಾತನಾಮರು ಸೇರಿ 49 ಪ್ರಸಿದ್ಧ ವ್ಯಕ್ತಿಗಳು ಬರೆದಿರುವ ಪತ್ರಕ್ಕೆ ಪ್ರಕ್ರಿಯಿಸುತ್ತಾ `ಆಯ್ದ ಘಟನೆಗಳನ್ನು ತಪ್ಪಾಗಿ ನಿರೂಪಿಸಿ, ಅವುಗಳ ಬಗ್ಗೆ ಮಾತ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ,' ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯುತ್ತಿರುವ ಭಾರತ ದೇಶಕ್ಕೆ ಕಳಂಕ ತರುವ ಉದ್ದೇಶವನ್ನು ಹೊಂದಿದೆ ಮತ್ತು ಭಾರತೀಯತೆಯ ತಿರುಳಾಗಿರುವ ಸಕಾರಾತ್ಮಕ ರಾಷ್ಟ್ರೀಯತೆ ಮತ್ತು ಮಾನವತಾವಾದದ ಅಡಿಪಾಯಗಳ ಮೇಲೆ ಆಡಳಿತವನ್ನು ಜಾರಿಗೆ ತರಲು ಪ್ರಧಾನಮಂತ್ರಿಯ ಅವಿರತ ಪ್ರಯತ್ನಗಳನ್ನು ಋಣಾತ್ಮಕವಾಗಿ ಚಿತ್ರಿಸುವ ಉದ್ದೇಶವನ್ನು ಹೊಂದಿದೆ; ಎಂದು ಆಪಾದಿಸಿದ್ದಾರೆ. 
'ಶಾಲೆಗಳನ್ನು ಸುಟ್ಟು ಹಾಕುವುದಾಗಿ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಬೆದರಿಕೆ ಹಾಕಿದಾಗ, ದೇಶದ ಕೆಲವು ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಒಳಗೆ ಭಾರತವನ್ನು ವಿಭಜಿಸುವ `ಟುಕಡೆ– ಟುಕಡೆ' ಘೋಷಣೆ ಮೊಳಗಿದಾಗ ಈ ತಂಡದವರು ಮೌನ ವಹಿಸಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ದೇಶದ ಸ್ವಾತಂತ್ರ್ಯ, ಏಕತೆ, ಸಮಗ್ರತೆಯನ್ನು ಬೇಕಾದರೂ ಬಲಿಕೊಡಬಹುದು ಎಂದು ಈ ಗುಂಪು ಭಾವಿಸಿದಂತಿದೆ. ಇವರಲ್ಲಿ ಕೆಲವರು ಹಿಂದೆ ದಂಗೆಕೋರರು, ಪ್ರತ್ಯೇಕತಾವಾದಿಗಳು ಹಾಗೂ ಭಯೋತ್ಪಾದಕರ ಪ್ರಚಾರಕರಂತೆ ಮಾತನಾಡಿದ್ದೂ ಇದೆ. ಇವೆಲ್ಲವನ್ನೂ ಗಮನಿಸಿದರೆ ಅವರ ಆತಂಕವು ಅಪ್ರಾಮಾಣಿಕವಾದುದು' ಎಂದು ಪತ್ರದಲ್ಲಿ ಹೇಳಲಾಗಿದೆ. 
ಅಷ್ಟು ಮಾತ್ರವಲ್ಲ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಗುಂಪುಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿ ಪ್ರಧಾನಿಗೆ ಪತ್ರ ಬರೆದ 49 ಖ್ಯಾತನಾಮರ ವಿರುದ್ಧ ದೇಶದ್ರೋಹ ಮತ್ತು ಇತರ ಆರೋಪಗಳನ್ನು ದಾಖಲಿಸುವಂತೆ ಬಿಹಾರ ನ್ಯಾಯಾಲಯದಲ್ಲಿ ಶನಿವಾರ ಅರ್ಜಿ ಸಲ್ಲಿಸಲಾಗಿದೆ. ಮುಖ್ಯ ಜ್ಯುಡಿಷಿಯಲ್‌ಮ್ಯಾಜಿಸ್ಟ್ರೇಟ್‌ನ್ಯಾಯಾಲಯದಲ್ಲಿ ವಕೀಲ ಸುಧೀರ್‌ಕುಮಾರ್‌ಒಝಾ ಎನ್ನುವವರು ಈ ಅರ್ಜಿ ಸಲ್ಲಿಸಿದ್ದಾರೆ. 49 ಪ್ರಸಿದ್ಧರ ಪತ್ರಕ್ಕೆ ಪ್ರತ್ಯುತ್ತರ ನೀಡಿದ್ದ 61 ಖ್ಯಾತನಾಮರಲ್ಲಿದ್ದ ನಟಿ ಕಂಗನಾ ರಣಾವತ್‌ಮತ್ತು ನಿರ್ದೇಶಕರಾದ ಮಧುರ್‌ಭಂಡಾರ್ಕರ್‌, ವಿವೇಕ್‌ಅಗ್ನಿಹೋತ್ರಿ ಅವರನ್ನು ಸಾಕ್ಷಿದಾರರನ್ನಾಗಿ ಮಾಡಲಾಗಿದೆ.
ದೇಶದಲ್ಲಿ ಗುಂಪುಹತ್ಯೆಗಳು ರಾಜಾರೋಷವಾಗಿ ನಡೆಯುತ್ತಿರುವುದು ನಮಗೆಲ್ಲಾ ಗೊತ್ತೇ ಇದೆ. ಕೆಲವೊಂದು ಕಡೆ ಕೊಲೆಗಾರರಿಗೆ ಪ್ರಭುತ್ವದ ರಕ್ಷಣೆ ಸಹ ನೀಡಲಾಗಿದೆ. ಅದರಲ್ಲೂ ಬಿಜೆಪಿ ಸರ್ಕಾರವು ಆಧಿಕಾರಕ್ಕೆ ಬಂದ ನಂತರ ಗುಂಪುಹತ್ಯೆಗಳಲ್ಲಿ ಬಹಳಷ್ಟು ಏರಿಕೆ ಕಾಣುತ್ತಿದ್ದೇವೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಈ ಹತ್ಯೆಗಳು ನಡೆಯುತ್ತಿರುವುದು ತುಂಬಾ ಗಂಭೀರವಾದಂತಹ ವಿಷಯವೂ ಹೌದು. 
ಈ ವಿಷಯದಲ್ಲಿ ಸರ್ಕಾರಗಳು ಜಾಣ ಕುರುಡು ಮತ್ತು ಕಿವುಡು ಪ್ರದರ್ಶಿಸುತ್ತಿವೆ. ಗೋಪ್ರೇಮ, ತೋರಿಕೆಯ ರಾಷ್ಟ್ರಭಕ್ತಿ, ಧರ್ಮರಕ್ಷಣೆ(?) ನೆಪದಲ್ಲಿ ಕೊಲೆಗೆಡುಕರನ್ನು ಹೀರೋಗಳಂತೆ, ಧರ್ಮರಕ್ಷಕರಂತೆ ಬಿಂಬಿಸಲಾಗುತ್ತಿದೆ, ಅಂತಹ ಕೊಲೆಗಡುಕರನ್ನು ಬೆಂಬಲಿಸಿ ಜನರು ಮಾತನಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಹಿರಂಗ ಪತ್ರ ಬರೆದು ಎಚ್ಚರಿಸುವುದು ತಪ್ಪಾ?
ಹೌದು ಇಂತಹ ವಿಷಮ ಸ್ಥಿತಿಯಲ್ಲಿ ನಾವೆಲ್ಲರೂ ದನಿಯೆತ್ತಬೇಕಾಗಿದೆ. ಈ ಸಂದರ್ಭದಲ್ಲಿ ಡಾ. ಎಂ ಎಂ ಕಲುಬುರ್ಗಿಯವರ ಮಾತುಗಳು ನೆನಪಿಗೆ ಬರುತ್ತವೆ. ಅವರು ಸಂಶೋಧನೆಯ ಬಗ್ಗೆ ಮಾತನಾಡುವಾಗ, ಸಮಾಜವೆಂದರೆ ವ್ಯಕ್ತಿಗಳೆಂದು ತಿಳಿದುಕೊಂಡವರಿಗೆ ಸಮಾಜದಲ್ಲಿ ವ್ಯಕ್ತಿಗಳಿಲ್ಲ, ಇರೋದು ಸದಸ್ಯರು ಮಾತ್ರ ಎಂದು ಹೇಳುತ್ತಾರೆ. ಸದಸ್ಯರೆಂದರೆ ಒಬ್ಬರಿಗೊಬ್ಬರು ಅವಲಂಬಿತರು. ಅವಲಂಬಿತರಾಗಿ ಬದುಕುವವರು. ಎಲ್ಲರ ಕ್ಷೇಮವನ್ನು ಬಯಸುವವರು. ಇಲ್ಲಿ ಎಲ್ಲರು ಸಮಾನರು. ಕೆಲವರು ಸಮಾಜವೆಂದರೆ ವ್ಯಕ್ತಿಗಳು ಎಂದು ತಿಳಿದುಕೊಂಡಿದ್ದಾರೆ. ಈ ರೀತಿಯ ವ್ಯಾಖ್ಯಾನದಲ್ಲಿ `ನಾನು' `ನನ್ನದು' `ನನಗೆ' ಮಾತ್ರ ಮುಖ್ಯವಾಗುತ್ತದೆ, `ಅವನ' ಕ್ಷೇಮ ಮಾತ್ರ ಅವನಿಗೆ ಮುಖ್ಯವಾಗುತ್ತದೆ. 
ಆದ್ದರಿಂದ ವ್ಯಕ್ತಿಗಳಿಗೆ ಹಾನಿ ಅಗುತ್ತಿದ್ದರೆ, ವಿಚಾರ ಮಾಡಬಾರದು, ಆದರೆ ಸದಸ್ಯರಿಗೆ ನೋವಾದರೆ ಗಟ್ಟಿಯಾಗಿ ಮಾತನಾಡಬೇಕು ಎಂದು ಕಲುಬುರ್ಗಿಯವರು ಹೇಳುತ್ತಾರೆ. ವ್ಯಕ್ತಿಗಳೆಂದರೆ ಸ್ವಾರ್ಥಿಗಳು, ಸ್ವಹಿತವನ್ನೇ ಬಯಸುವವರು. ಆದ್ದರಿಂದ ವ್ಯಕ್ತಿಕೇಂದ್ರಿತ ಸಮಾಜವನ್ನು ಕೆಡವಬೇಕು ಮತ್ತು ಸದಸ್ಯ ಕೇಂದ್ರಿತ ಸಮಾಜವನ್ನು ಕಟ್ಟಬೇಕು ಎಂದು ಕರೆಕೊಡುತ್ತಾರೆ. ಸಾಮಾಜಿಕ ನ್ಯಾಯವು ಹೋರಾಟದ ಖಡ್ಗವಾಗಬೇಕು, ಸುಳ್ಳು ಇತಿಹಾಸದ ಮೂಲಕ ವರ್ತಮಾನವನ್ನು ಶೋಷಣೆ ಮಾಡುತ್ತಿರುವರ ವಿರುದ್ಧ ಹೋರಾಡಬೇಕು, ಸತ್ಯ ಹೇಳಬೇಕು, ಜನರ ಕಣ್ಣು ತೆರೆಸಬೇಕು. ಈ ಹೋರಾಟದಲ್ಲಿ ಸೋಲು ಗೆಲುವುಗಳಿರುತ್ತದೆ; ಸತ್ಯಕ್ಕೆ ಸೋಲಾದರೂ ಅದು ಸೋಲಲ್ಲ. ಲೋಕವಿರೋಧಿ ಎನ್ನಿಸಿಕೊಂಡರೂ ಪರವಾಗಿಲ್ಲ ವ್ಯಕ್ತಿವಾದಿಯನ್ನು ನಾಶಮಾಡಿ, ಸದಸ್ಯವಾದಿಯನ್ನು ಬೆಳೆಸಿ ಎಂದು ಕರೆ ಕೊಡುತ್ತಾರೆ. 
ಸಮಾಜ ವಿರೋಧಿಸುತ್ತದೆ, ವ್ಯಕ್ತಿಗಳು ವಿರೋಧಿಸುತ್ತಾರೆ, ವಿರೋಧಿಗಳನ್ನು ಲೆಕ್ಕಿಸದೆ ಸದಸ್ಯವಾದಿಗಳನ್ನು ಬೆಳೆಸಬೇಕು. ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವುದು ನಮ್ಮ ಹೊಣೆಗಾರಿಕೆ; ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವ ಎಲ್ಲಾ ಅಂಶಗಳ ವಿರುದ್ಧ ದನಿ ಎತ್ತೋಣ. ಏಕೆಂದರೆ ಒಬ್ಬರು ಇನ್ನೊಬ್ಬರನ್ನು ಆಶ್ರಯಿಸುವ, ಒಬ್ಬರು ಮತ್ತೊಬ್ಬರ ಮೇಲೆ ಅವಲಂಬಿತವಾಗಿರುವ ಸಮಾಜ ನಮ್ಮದು ಎಂದು ಕಲುಬುರ್ಗಿಯವರು ಹೇಳುತ್ತಾರೆ.
ಕೊನೆಗೆ ಗಿರೀಶ್ ಕಾರ್ನಾಡ್‍ರವರು ಹೇಳಿರುವ ಮಾತುಗಳನ್ನು ಉಲ್ಲೇಖಿಸುತ್ತೇನೆ:
ನನ್ನ ರಾಜ್ಯದಲ್ಲಿ ಪ್ರತಿಯೊಂದು ಕಾರ್ಯವೂ ಪ್ರಾರ್ಥನೆಯಾಗಬೇಕು, ಪ್ರತಿಯೊಂದು ಪ್ರಾರ್ಥನೆಯೂ ದೇವರಲ್ಲಿಗೆ ಒಯ್ಯುವ ಮೆಟ್ಟಿಲಾಗಬೇಕು ಆದರೆ ಇಲ್ಲಿ ಪ್ರಾರ್ಥನೆಗೂ ರಾಜಕಾರಣ ಸೋಂಕು ಬಡಿದಿದೆ..

ಬನ್ನಿ ಸದಸ್ಯವಾದಿ ಸಮಾಜವನ್ನು ಕಟ್ಟೋಣ

ನಶ್ವರದ ಅರಿವಲ್ಲಿ ಅಧ್ಯಾತ್ಮದ ಕೈಪಿಡಿಯಾದ ಇಗ್ನೇಷಿಯಸ್ ಲೊಯೋಲ
ಇಗ್ನೇಶಿಯಸ್ ಲೊಯೋಲ ಯೇಸುಸಭೆ ಎಂಬ ಧಾರ್ಮಿಕ ಸಭೆಯನ್ನು ಸ್ಥಾಪಿಸಿದ ಶ್ರೇಷ್ಠ ಸಂತ. ಹುಟ್ಟು ಸಾಹಸಿಯಾದ ಅವನು ಪಾಂಪ್ಲೊನಾ ಎಂಬಲ್ಲಿ ನಡೆಯುತ್ತಿದ್ದ ಯುದ್ಧದಲ್ಲಿ ಹೋರಾಡುತ್ತಿದ್ದಾಗ ಫಿರಂಗಿ ಗುಂಡೊಂದು ಅವನ ಕಾಲಿಗೆ ಬಡಿದಿತ್ತು. 1521ರಲ್ಲಿ ನಡೆದ ಈ ಮಾರಣಾಂತಿಕ ಘಟನೆ ಅವನ ಬದುಕಿನ ಪರಿಯನ್ನೇ ಬದಲಾಯಿಸಿತು. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಗ್ನಾಸಿ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಕಾಡುವ ಕೆಟ್ಟ ಬೇಸರದಿಂದ ಹೊರಬರಲು ಪುಸ್ತಕಗಳ ಮೊರೆ ಹೋಗಲು ನಿಶ್ಚಿಯಿಸಿದ. ಆದರೆ ಅವನಿಗೆ ಬೇಕಾಗಿದ್ದ ರೋಮ್ಯಾಂಟಿಕ್ ಪುಸ್ತಕಗಳು ಸಿಗದ ಕಾರಣ, ಒಲ್ಲದ ಮನಸ್ಸಿನಿಂದ ಸಿಕ್ಕ ಎರಡು ಗ್ರಂಥಗಳಾದ ಯೇಸುವಿನ ಜೀವನ ಚರಿತ್ರೆ ಮತ್ತು ಸಂತರ ಜೀವನ ಚರಿತ್ರೆಗಳನ್ನು ಓದಲಾಂಭಿಸಿದ. ಈ ಓದಿನಿಂದ ಅವನಿಗೆ ಹೊಸ ದರ್ಶನ ಪ್ರಾಪ್ತವಾಗಿ, ಹೊಸ ಜೀವನದತ್ತ ಪ್ರಯಾಣ ಬೆಳೆಸಿದ.
ಓದಿದ ಪುಸ್ತಕಗಳಲ್ಲಿ ಕಂಡ ಕ್ರಿಸ್ತನ ಹಾಗೂ ಇತರ ಸಂತರ ವ್ಯಕ್ತಿತ್ವ ಹಾಗೂ ಬೋಧನೆಗಳಿಂದ ಪ್ರೇರಿತನಾದ ಇಗ್ನಾಸಿ ಅಶಾಂತನಾದ. ಒಂದು ಕಡೆ ನಿಲ್ಲಲಾಗದಂತಹ ಮನಸ್ಥಿತಿಯಲ್ಲಿ ಊರೂರು ಸುತ್ತಿದ. ಹುಟ್ಟೂರಾದ ಲೊಯೋಲಾದಿಂದ ಮೊನ್‍ಸೆರತ್, ಮೊನ್‍ಸೆರತಿನಿಂದ ಮನ್ರೇಸಾ ಮತ್ತು ಮನ್ರೇಸಾದಿಂದ ಜೆರೊಸಲೆಮ್, ಜೆರೊಸಲೆಮಿನಿಂದ ಪುನಃ ಸ್ಪೇಯ್ನ್, ಪ್ಯಾರಿಸ್, ವೆನಿಸ್ ಕೊನೆಗೆ ರೋಮ್ ನಗರ ತಲಪಿದ.
ಈ ಯಾತ್ರೆಯಲ್ಲಿ ಧ್ಯಾನ, ಅಧ್ಯಯನ, ಬೋಧನೆ ಮೊದಲಾದ ಆಧ್ಯಾತ್ಮಿಕ ಕಾರ್ಯಗಳಲ್ಲಿ ಮಗ್ನನಾಗಿ ಆತ್ಮಸಿದ್ಧಿಯನ್ನು ಸಾಧಿಸಿದ. ಕೊನೆಗೆ ಲೋಕದ ನಶ್ವರತೆಯನ್ನು ಮನಗಂಡ ಇಗ್ನಾಸಿ 'ಇಡೀ ಲೋಕವನ್ನು ಗೆದ್ದುಕೊಂಡು ತನ್ನ ಆತ್ಮವನ್ನು ಕಳೆದುಕೊಂಡರೆ ಏನು ಪ್ರಯೋಜನ' ಎಂಬ ಅಲೌಕಿಕತೆಯ ಆದರ್ಶದಲ್ಲಿ ದೃಢಗೊಂಡ.
ತನಗಾದ ಅಧ್ಯಾತ್ಮದ ಅನುಭವಗಳ ಹೊಳಹುಗಳನ್ನು Spiritual Exercises (ಆಧ್ಯಾತ್ಮಿಕ ಅಧ್ಯಯನಗಳು) ಎಂಬ ಪುಸ್ತಕದಲ್ಲಿ ದಾಖಲಿಸುವ ಮುನ್ನ ಕಂಡ ಕಂಡ ಜನರಿಗೆ ಅಧ್ಯಾತ್ಮವನ್ನು ಬೋಧಿಸಿದ. ಇವನ ಆದರ್ಶದಿಂದ ಪ್ರೇರಿತರಾದ ಅನೇಕರು ಇವನ ಜೊತೆ ಸೇರಿಕೊಂಡರು. ಕೊನೆಗೆ ಇವರಿಂದ "ದೇವರ ಉನ್ನತ ಮಹಿಮೆಗಾಗಿ" ಎಂಬ ಧ್ಯೇಯವಾಕ್ಯದೊಂದಿಗೆ ಯೇಸುಸಭೆಯು ಸ್ಥಾಪನೆಗೊಂಡಿತ್ತು.
ಇಗ್ನೇಶಿಯಸ್ ಬೋಧಿಸಿದ ಅನೇಕ ಆಧ್ಯಾತ್ಮಿಕ ಸಂಗತಿಗಳಲ್ಲಿ ಮುಖ್ಯವಾಗಿ ಇಂದು ನಮಗೆ ಬೇಕಾಗಿದ್ದು ಇವಿಷ್ಟು:

ಲೋಕದ ನಶ್ವರತೆಯ ಅರಿವು ನಮಗಾಗಬೇಕಿದೆ.
ಎಲ್ಲವೂ ದೇವರಿಂದ, ದೇವರಿಗಾಗಿ, ದೇವರಲ್ಲಿ ಮತ್ತು ದೇವರೆಡೆಗೆ ಎಂಬ ಅಧ್ಯಾತ್ಮದಲ್ಲಿ ನಾವು ಬೆಳೆಯಬೇಕಿದೆ.
ಒಳ್ಳೆಯದು ಕೆಟ್ಟದು ಮತ್ತು ಉತ್ತಮದಲ್ಲಿ ಅತ್ಯುತ್ತಮವಾದದ್ದನ್ನು ಆರಿಸಿಕೊಳ್ಳುವ ವಿವೇಚನಾ ಶಕ್ತಿ ನಮಗೆ ಬೇಕಾಗಿದೆ.
ಎಲ್ಲರಲ್ಲೂ ಎಲ್ಲದರಲ್ಲೂ ಎಲ್ಲೆಲ್ಲಿಯೂ ದೇವರನ್ನು ಕಾಣುವ ಆತ್ಮದೃಷ್ಟಿಯನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ.


*******


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...