Wednesday, 7 August 2019

ಸಾಲ - - ಫಾ ಮೆಲ್ವಿನ್ ಪಿಂಟೊ ಯೇ.ಸ

ಬೀರನ ಅಪ್ಪನಂತೆ ತನ್ನ ಅಪ್ಪನೂ ಆತ್ಮಹತ್ಯೆ ಮಾಡಬಹುದೆಂದು ಶಿವು ಕನಸಿನಲ್ಲಿಯೂ ಎನಿಸಿರಲಿಲ್ಲ. ಬೀರನ ಅಪ್ಪ ಅದೇನೋ ಮೂರು ಲಕ್ಷ ಸಾಲ ಮಾಡಿದ್ದರಂತೆ. ಬೀರ ಹೇಳುತ್ತಿದ್ದ, ಬಡ್ಡಿಯೇ ತಿಂಗಳಿಗೆ ನಾಲ್ಕು-ಐದು ಸಾವಿರ ಆಗುತ್ತಿತ್ತು ಅಂತ. ಮೇಲಾಗಿ ಬೀರನ ಅಪ್ಪ ತುಂಬಾ ಕುಡಿಯುತ್ತಿದ್ದ. ದಿನಾ ಸಂಜೆ ಕುಡಿದು ಬಂದು ಬೀರನ ತಾಯಿ ಜೊತೆ ಜಗಳವಾಡುತ್ತಿದ್ದರಂತೆ. ಹೀಗೆ ಒಂದು ದಿನ ಸಾರಾಯಿಯ ಬದಲು ವಿಷ ಕುಡಿದು ಆತ ಆತ್ಮಹತ್ಯೆ ಮಾಡಿದ್ದ.
ಆದರೆ ತನ್ನ ಅಪ್ಪನೂ ಹಾಗೆಯೇ ಆತ್ಮಹತ್ಯೆ ಮಾಡಿಕೊಳ್ಳಬಹುದೆಂದು ಶಿವು ಯೋಚಿಸಿರಲೇ ಇಲ್ಲ. ಆತನ ಅಪ್ಪನೂ ಸಾಹುಕಾರನಿಂದ ಒಂದೂವರೆ ಲಕ್ಷ ಸಾಲ ತಗೊಂಡಿದ್ದಾನೆ ಅಂತ ಅಮ್ಮ ಹೇಳುತ್ತಿದ್ದಳು.
ಮಾಡಿದ ಸಾಲ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಹೋಗುವುದನ್ನು ಕಂಡು ಶಿವುಗೆ ನಿಜಕ್ಕೂ ತುಂಬಾ ಬೇಸರವಾಗುತ್ತಿತ್ತು. ಬೀರನ ಅಪ್ಪ, ಶಂಕರನ ಮಾವ, ದುರ್ಗಿಯ ಚಿಕ್ಕಪ್ಪ, ಶಿವಲಿಂಗಿಯ ಅಪ್ಪ ಹೀಗೆ ಆತ್ಮಹತ್ಯೆ ಮಾಡಿದವರ ಸಂಖ್ಯೆ ಬೆಳೆಯುತ್ತಲೇ ಇತ್ತು. ಆ ಸಂಖ್ಯೆಗೆ ಇಂದು ತನ್ನ ಅಪ್ಪನ ಸಂಖ್ಯೆ ಕೂಡ ಸೇರಬಹುದು ಅಂತ ಶಿವುಗೆ ಖಂಡಿತ ಅನಿಸಿರಲಿಲ್ಲ.
ಅವನ ಚಿಕ್ಕ ಗುಡಿಸಲಿನಂತಿದ್ದ ಮನೆಯಲ್ಲಿ ಒಂದು ಮಧ್ಯದ ಕೋಣೆ, ಇನ್ನೊಂದು ಅಡುಗೆ ಕೋಣೆ. ಮಧ್ಯದ ಕೋಣೆಯಲ್ಲಿ ನಡುವೆ ಚಾಪೆಯ ಮೇಲೆ ಅಪ್ಪನ ನಿರ್ಜೀವ ಶರೀರವನ್ನು ಇಡಲಾಗಿತ್ತು. ಮೂಗಿನ ಎರಡೂ ಹೊಳ್ಳೆಗಳಿಗೂ ಹತ್ತಿಯನ್ನು ತುರುಕಲಾಗಿತ್ತು. ಸತ್ತವರ ಮೂಗಿಗೆ ಹತ್ತಿಯನ್ನು ಯಾಕಾದರೂ ತುರುಕುತ್ತಾರೆ ಎಂಬುದು ಶಿವುಗೆ ಅರ್ಥವಾಗುತ್ತಿರಲಿಲ್ಲ. ಕೆಲವು ದಿನಗಳ ಹಿಂದೆ ಬೀರನ ಅಪ್ಪನ ಮೂಗಿಗೂ ಇದೇ ರೀತಿ ಹತ್ತಿ ಇಟ್ಟಿದ್ದರು.
ಅಪ್ಪನ ಮುಖ ಮಾತ್ರ ವಿಕಾರವಾಗಿ ಕಾಣುತ್ತಿತ್ತು. ತಗಡಿನ ಡಬ್ಬಿಯಲ್ಲಿನ ವಿಷಪೂರಿತ ಮದ್ದಿನ ಪರಿಣಾಮ ಇರಬೇಕು. ತಲೆಯ ಮೇಲೆ ಹೊಲಿಗೆ ಹಾಕಿದ ಗಾಯ – ಪೋಲಿಸರು ಪೋಸ್ಟ್ ಮಾರ್ಟಮ್ ಅಂತ ಏನೋ ಮಾಡಿದ್ದರು. ಅಪ್ಪನ ಕಣ್ಣು ಒಂದಿಷ್ಟು ತೆರೆದೇ ಇದ್ದವು. ಹೊರಗಿನಿಂದ ಬೀಳುವ ಬೆಳಕು ಕಣ್ಣು ರೆಪ್ಪೆಯ ಒಳಗೆ ಬಿದ್ದು ಕಣ್ಣುಗಳು ಹೊಳೆಯುತ್ತಿದ್ದವು. ಯಾಕೋ ಅಪ್ಪ ಸತ್ತಿದ್ದಾನೆ ಎಂದು ನಂಬುವುದು ಶಿವುಗೆ ಕಷ್ಟವಾಯಿತು.
ಅಮ್ಮ ಬೆಳಿಗ್ಗೆಯಿಂದ ಒಂದೇ ಸಮನೆ ರೋಧಿಸುತ್ತಿದ್ದಳು. ಪಕ್ಕದ ಮನೆಯ ವಸಂತಿಯಕ್ಕ ಆಕೆಗೆ ಸಮಾಧಾನ ಪಡಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದರು. ಅತ್ತು ಅತ್ತು ಅಮ್ಮನ ಕಣ್ಣುಗಳಿಂದ ಕಣ್ಣೀರು ಬತ್ತಿ ಹೋಗುವುದು ಕೂಡ ಶಿವುಗೆ ಗೋಚರಿಸದೆ ಇರಲಿಲ್ಲ.
ತಾನು ಈ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂಬುದೇ ಶಿವುಗೆ ತಿಳಿಯಲಿಲ್ಲ. ಯಾಕೋ ಕಣ್ಣಂಚುಗಳಿಂದ ಕಣ್ಣೀರು ಬರುತ್ತಿರಲಿಲ್ಲ. ಹಾಗೆ ನೋಡಿದರೆ ತಾನು ಹಠಮಾರಿ ಎಂದು ಅಮ್ಮ ಆಗಾಗ್ಗೆ ಹೇಳುತ್ತಿದ್ದಳು. ದಿನಂಪ್ರತಿ ಎಂಬಂತೆ ಲೆಕ್ಕ ಎನೂ ಅರ್ಥವಾಗದೆ, ಕೊಟ್ಟ ಮನೆಕೆಲಸ ಮಾಡದೆ ನಳಿನಿ ಟೀಚರ್ ಹೊಡೆತಗಳು ಮೈಮೇಲೆಲ್ಲ ಜಡಿ ಮಳೆಯಂತೆ ಬೀಳುತ್ತಿದ್ದವು. ಆದರೂ ಕಣ್ಣಿನಿಂದ ನೀರು ಬರುತ್ತಿರಲಿಲ್ಲ. ಆಗಾಗ ಬೆಳಗ್ಗಿನ ನಾಸ್ಟ ತಪ್ಪಿದ್ದಿದೆ, ಆದರೆ ನಳಿನಿ ಟೀಚರ್ ಕೊಡುವ ನಾಗಬೆತ್ತದ ಪೆಟ್ಟು ತಪ್ಪುತ್ತಿರಲಿಲ್ಲ. ಆದರೂ ಕಣ್ಣಾಲಿಗಳು ತೇವಗೊಳ್ಳುತ್ತಿರಲಿಲ್ಲ. ಮನಸ್ಸನ್ನು ಬೇಕಂತಲೇ ಕಠಿಣಗೊಳಿಸುವುದಿತ್ತು.
ಇವತ್ತು ಕೂಡ ತನ್ನ ಅಪ್ಪ ಹೀಗೆ ಕೊಠಡಿಯಲ್ಲಿ ಮಧ್ಯೆ ಜೀವವಿಲ್ಲದೆ ಅಡ್ಡಡ್ಡ ಮಲಗಿದರೂ, ತಾನು ಅಳಬೇಕು ಅಂತ ಅನಿಸಿದರೂ, ಶಿವುಗೆ ಕಣ್ಣೀರು ಬರುತ್ತಿರಲಿಲ್ಲ.
“ನೀನು ದೊಡ್ಡವನಾಗಿ ನನ್ನ ಹಾಗೆ ರೈತನಾಗುವುದು ಬೇಡ ಶಿವು. ರೈತ ಅನ್ನದಾತ ಅಂತ ಹೇಳುತ್ತಾರೆ. ಆದರೆ ಈ ದಿನಗಳಲ್ಲಿ ಅನ್ನದಾತನಿಗೇ ಅನ್ನದ ಗತಿ ಇಲ್ಲ. ನೀನು ರೈತನಾಗುವುದು ಬೇಡ," ಅಪ್ಪ ಹಲವಾರು ದಿನಗಳ ಹಿಂದೆ ಹೇಳಿದ ಮಾತು!
ದೊಡ್ಡವನಾದ ಮೇಲೆ ತಾನು ಏನಾಗಬೇಕೆಂದು ನಿರ್ಧಾರ ಮಾಡುವುದು ಶಿವುಗೆ ಕಷ್ಟದ ಕೆಲಸವಾಗಿತ್ತು. ಎಂಕ್ಟ ತಾನು ಮುಂದೆ ಮಿನಿಸ್ಟರ್ ಆಗುತ್ತೇನೆ ಅಂತ ಹೇಳುತ್ತಿದ್ದ. ಮಿನಿಸ್ಟರ್ ಆದರೆ ಕಾರು ಸಿಗುತ್ತದೆ, ಊರೆಲ್ಲಾ ಸುತ್ತಾಡಬಹುದು ಎಂಬುದು ಆತನ ಯೋಚನೆ. ಬೀರ ಅವನ ಅಪ್ಪ ಸಾಯುವ ಮುಂಚೆ ತಾನು ಪೋಲಿಸ್ ಇನ್ಸ್‍ಪೆಕ್ಟರ್ ಆಗುತ್ತೇನೆ ಎನ್ನುತ್ತಿದ್ದ. ಕೆಲವೊಮ್ಮೆ ಆತ ತಾನು ಪೋಲಿಸ್ ಇನ್ಸ್‍ಪೆಕ್ಟರ್ ಎಂಬಂತೆ, ಇಲ್ಲದ ಮೀಸೆ ತಿರಿಗಿಸುತ್ತಾ ತನ್ನ ಗಲ್ಲ ನೇವರಿಸುವುದು ನೋಡಲು ಮಜಾ ಅನಿಸುತ್ತಿತ್ತು.
ಕೆಲವೊಮ್ಮೆ ಶಿವು ಯೋಚಿಸಿದ್ದಿದೆ, ತಾನು ದೊಡ್ಡವನಾದ ಮೇಲೆ ಲಾರಿ ಮಾಲಿಕನಾಗಬೇಕು. ಚೈತ್ರಳ ಅಪ್ಪನಿಗೆ ಮೂರು ಲಾರಿಗಳಿದ್ದವು. ಅವರ ಮನೆ ಕೂಡ ಸಾಧಾರಣ ಸಮಾಜ ಕ್ಲಾಸಿನಲ್ಲಿ ವೆಂಕಪ್ಪ ಮಾಸ್ತರ್ ವರ್ಣಿಸಿದ ವಿಜಯನಗರ ಅರಮನೆಯಂತೆ ಕಾಣುತ್ತಿತ್ತು. ಲಾರಿ ಮಾಲಿಕನಾದರೆ ಖಂಡಿತ ಶ್ರೀಮಂತ ಆಗಬಹುದು, ಹೀಗೆ ಶಿವು ಯೋಚಿಸುತ್ತಿದ್ದ.
ಆದರೆ ಇಂದು ಮಾತ್ರ ಅಪ್ಪನ ಅಕಾಲ ಸಾವಿನಿಂದಾಗಿ ತನ್ನ ನಿರ್ಧಾರ ಬದಲಾಗುವ ಹಾಗೆ ಕಾಣುತ್ತಿತ್ತು ಅವನಿಗೆ.
ಅಪ್ಪನ ನೆನಪುಗಳು ಯಾಕೋ ಮೇಲೇರಿ ಬಂದವು. ಇನ್ನೂ ಶಾಲೆಗೆ ಸೇರುವ ಹಿಂದಿನ ದಿನಗಳ ನೆನಪುಗಳು ಕೂಡ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದ್ದವು. ಆಗ ಮನೆ ಪರಿಸ್ಥಿತಿ ಎಷ್ಟೊಂದು ಚೆನ್ನಾಗಿತ್ತು! ಅಪ್ಪ ಮತ್ತು ಅಮ್ಮ ಎಷ್ಟೊಂದು ಪ್ರೀತಿಯಿಂದ ಇದ್ದರು! ಹಟ್ಟಿಯಲ್ಲಿ ಎರಡು ಎತ್ತುಗಳು, ಎರಡು ಹಾಲು ಕರೆಯುವ ದನ, ಅವುಗಳ ಕರುಗಳು. ಮುಂಜಾನೆ ಶಿವುಗೆ ಹಾಲು ತಪ್ಪುತ್ತಿರಲಿಲ್ಲ. ಅಪ್ಪ ಬೆಳಿಗ್ಗೆ ಎತ್ತುಗಳನ್ನು ಉಳುಮೆಗೆ ಕಟ್ಟಿಕೊಂಡು ಹೋಗುವಾಗ ತನ್ನನ್ನು ಕೂಡ ಕರೆದುಕೊಂಡು ಹೋಗುತ್ತಿದ್ದ. ಉಳುವಾಗ ತನ್ನನ್ನು ಆತನ ಹೆಗಲ ಮೇಲೆ ಕೂರಿಸುತ್ತಿದ್ದ. ಆತ ಉಳುವಾಗ ಯಾವ್ಯಾವುದೋ ಹಾಡು ಹಾಡುತ್ತಿದ್ದಂತೆ ತಾನು ಚಪ್ಪಾಳೆ ತಟ್ಟುವುದಿತ್ತು.
ಆಗಾಗ ಅಪ್ಪ ಶಿವುಗೆ ಪೇಟೆಗೆ ಕರೆದುಕೊಂಡು ಹೋಗುವುದು ಕೂಡ ಇತ್ತು. ರಾಮಣ್ಣನ ಹೋಟೆಲ್ನಲ್ಲಿ ಕುಳಿತುಕೊಂಡು ಗೋಳಿಬಜೆ, ಪೂರಿ ತೆಗೆಸಿ ಕೊಟ್ಟಿದ್ದುಂಟು. ಮರಳಿ ಬರುವಾಗ ಹೆಗಲ ಮೇಲೆ ಕೂರಿಸಿ ತರಕಾರಿ, ಮೀನು ತರುವುದಿತ್ತು.
ಇದೆಲ್ಲ ಯಾವಾಗ ಬದಲಾಗುತ್ತಾ ಬಂತು ಶಿವುಗೆ ತಿಳಿಯಲಿಲ್ಲ. ತಾನು ಮೂರನೆ ಕ್ಲಾಸಿನಲ್ಲಿ ಇದ್ದಾಗ ಅಮ್ಮನ ವಿರೋಧದ ನಡುವೆಯೂ ಅಪ್ಪ ಇದ್ದ ಎರಡೂ ದನಗಳನ್ನು ಮಾರಿಬಿಟ್ಟ. ಅದಾದ ನಂತರ ತನಗೆ ಸಿಗುತ್ತಿದ್ದ ಬೆಳಗ್ಗಿನ ಹಾಲು ನಿಂತು ಹೋಯಿತು. ವಸಂತಿ ಅಕ್ಕನ ಮನೆಯಿಂದ ತರುತ್ತಿದ್ದ ಅರ್ಧ ಲೋಟ ಹಾಲಿನಿಂದ ಮಾಡಿದ ಕಪ್ಪು ಚಹಾದಿಂದ ಬೆಳಗ್ಗಿನ ಉಪಹಾರ ಮುಗಿಯುತ್ತಿತ್ತು.
ನಾಲ್ಕನೆ ಕ್ಲಾಸಿನಲ್ಲಿ ಇದ್ದಾಗ, ಅಂದರೆ ಹೋದ ವರ್ಷ, ಅಪ್ಪ ಹಟ್ಟಿಯಲ್ಲಿ ಇದ್ದ ಕರುಗಳನ್ನೂ ಮಾರಿಬಿಟ್ಟ. ಸರಾಯಿ ಕುಡಿಯದ ಅಪ್ಪ ಈಗೀಗ ದಿನಾ ಸಂಜೆ ಸರಾಯಿ ಕುಡಿದು ಬರುವುದನ್ನು ಶಿವು ಗಮನಿಸಿದ್ದ. ಅಮ್ಮ ಮಾತ್ರ ದಿನಾ ರಾತ್ರಿ ಅಪ್ಪನ ಜೊತೆ ಜಗಳವಾಡಿ ರಾತ್ರಿ ಕಣ್ಣೀರು ಹಾಕುತ್ತಿದ್ದಳು. ಅಪ್ಪ ಬೇಸಾಯಕ್ಕಾಗಿ ಸಾಹುಕಾರನಿಂದ ಒಂದೂವರೆ ಲಕ್ಷ ಸಾಲ ತೆಗೆದಿದ್ದಾಗಿಯೂ, ಅದರ ತಿಂಗಳ ಬಡ್ಡಿಯೇ ಎರಡು-ಮೂರು ಸಾವಿರ ಆಗುವುದಾಗಿಯೂ, ಇದನ್ನು ತೀರಿಸಲಾಗದೆ ಅಪ್ಪ ಸೋಲುತ್ತಿರುವುದಾಗಿಯೂ ಹೇಳುತ್ತಿದ್ದಳು.
ಊರಲ್ಲಿ ಸಾಲ ಮಾಡದೆ ಬೇಸಾಯ ಮಾಡಿದವರಾದರೂ ಯಾರು? ಬೀರನ ಅಪ್ಪ ಮತ್ತು ಎಂಕ್ಟನ ಅಪ್ಪ ಕೂಡ ಸಾಲ ಮಾಡಿದ್ದರು. ಹೊಸ ರೀತಿಯ ಭತ್ತದ ಬೀಜಗಳು ಊರಲ್ಲಿ ಬಂದು ಅದರಲ್ಲಿ ಹೆಚ್ಚು ಆದಾಯ ಇದೆ ಎಂಬ ಸುದ್ದಿ ಊರೆಲ್ಲ ಹರಡುತ್ತಿದ್ದಂತೆ ರೈತರು ಸಾಲ ಮಾಡಿ ಆ ಬೀಜಗಳನ್ನು ಖರೀದಿಸಿದ್ದರು. ಆದರೆ ಫಸಲು ಮಾತ್ರ ಅಪೇಕ್ಷಿಸಿದಷ್ಟು ಬಂದಿರಲಿಲ್ಲ. ಸಾಲದ್ದಕ್ಕೆ ಭತ್ತಕ್ಕೆ ಕೀಟಗಳ ಹಾವಳಿಯಾಗಿ ಕೀಟನಾಶಕ ತರಲು ಮತ್ತೆ ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಿತ್ತು.
ತಗಡಿನ ಡಬ್ಬಿಯ ಕಪ್ಪು ಕೀಟನಾಶಕ!
ಭತ್ತಕ್ಕೆ ಹರಡಿದ ಕೀಟದ ಹಾವಳಿ ತಡೆಯಲು ಅಪ್ಪ ಪಟ್ಟಣಕ್ಕೆ ಹೋಗಿ ಕೊಂಡು ತಂದ ಔಷಧ. ಕಳೆದ ದಿನಗಳಲ್ಲಿ ಜಯಣ್ಣನ ಮನೆಗೆ ಹೋಗಿ ಸ್ಪ್ರೇ ಪಂಪು ತಂದು ಅದನ್ನು ಬೆನ್ನಿಗೆ ನೇತುಹಾಕಿ, ಮುಖಕ್ಕೆ ಬಟ್ಟೆ ಕಟ್ಟಿ ತಗಡಿನ ಡಬ್ಬಿಯಲ್ಲಿನ ಆ ಕೀಟ ನಾಶಕವನ್ನು ಸೀಮೆ ಎಣ್ಣೆ ಜೊತೆ ಬೆರೆಸಿ ಸಿಂಪಡಿಸುವುದನ್ನು ಶಿವು ನೋಡಿದ್ದ. ಅದರ ಘಾಟು ವಾಸನೆ ವಾಕರಿಕೆ ತರುವಂತಿತ್ತು. ಅದೇ ಮದ್ದನ್ನು ಕುಡಿದು ಅವನ ಅಪ್ಪ ನಿನ್ನೆ ಆತ್ಮಹತ್ಯೆ ಮಾಡಿದ್ದ.....
"ಈ ದರಿದ್ರ ಬೇಸಾಯದಿಂದಾಗಿ, ಬಿತ್ತನೆಯಿಂದಾಗಿ ಇನ್ನೆಷ್ಟು ಜೀವಗಳು ಹೋಗುವುದಿದೆಯೋ?" ಅಂಗಳದಲ್ಲಿ ನೆರೆಮನೆಯ ಪುರುಷರೆಲ್ಲ ಸೇರಿ ಮಾತಾಡುವುದು ಶಿವುಗೆ ಕೇಳಿಸಿತು.
ಒಂದೂವರೆ ಲಕ್ಷ ರೂಪಾಯಿ! ಸಾಹುಕಾರನಿಂದ ತೆಗೆದುಕೊಂಡ ಸಾಲ. ಅಪ್ಪ ಅದನ್ನು ತೀರಿಸುತ್ತಿದ್ದನಾದರೂ ಹೇಗೆ? ತಿಂಗಳ ಬಡ್ಡಿ ತೀರಿಸಲಿಕ್ಕೆಂದು ಆತ ಮನೆಯಲ್ಲಿ ಮಾರಲು ಸಾಧ್ಯವಾದನ್ನೆಲ್ಲ ಮಾರಿ ಆಗಿತ್ತು – ದನ, ಕರು, ಮನೆಯ ಮುಂದಿದ್ದ ಹಲಸಿನ ಮರ, ಅಮ್ಮನ ಕೊರಳಲ್ಲಿದ್ದ ನೂಲಿನಂತ ಚೈಯ್ನು, ಕಿವಿಯ ಬೆಂಡೋಲೆ, ತಾಮ್ರದ ಪಾತ್ರೆಗಳು... ಯೋಚಿಸುವಾಗ ಶಿವುಗೆ ನಿಜಕ್ಕೂ ಸಂಕಟವಾಗುತ್ತಿತ್ತು. ಆದರೆ ಅವನಿಗೆ ಹೆಚ್ಚು ಸಂಕಟಕ್ಕೆ ಈಡು ಮಾಡಿದ ಸಂಗತಿಯೆಂದರೆ ಅವನಿಗೆ ಅಮ್ಮ ದಿನಾ ಹಾಲು ಸುರಿದು ಕೊಡುತ್ತಿದ್ದ ಬೆಳ್ಳಿಯ ಲೋಟವನ್ನು ಕೂಡ ಅಪ್ಪ ಮಾರಿದ್ದ. ಅಮ್ಮನ ಮದುವೆಯ ಸಂದರ್ಭದಲ್ಲಿ ಆಕೆಯ ಅಪ್ಪ ನೀಡಿದ ಲೋಟವಾಗಿತ್ತಂತೆ ಅದು. ಅದರಲ್ಲಿ ಹಾಲು ಕುಡಿದರೆ ಹೆಚ್ಚು ಬುದ್ಧಿವಂತರಾಗುತ್ತಾರೆ ಎಂದು ಅಜ್ಜ ಹೇಳುತ್ತಿದ್ದನಂತೆ. ಅದಕ್ಕಾಗಿಯೇ ಅಮ್ಮ ಪ್ರತಿ ದಿನ ಅದರಲ್ಲೇ ಹಾಲು ಸುರಿದು ಕೊಡುತ್ತಿದ್ದಳು. ಆದರೆ ಅಪ್ಪ ಅದನ್ನೂ ಮಾರಿದ್ದ. ಅದರ ನಂತರ ಬೆಳ್ಳಿ ಲೋಟವೂ ಇಲ್ಲ, ಹಾಲೂ ಇಲ್ಲ.
ಅವನ ಪ್ರೀತಿಯ ಕರು ಲಕ್ಷ್ಮಿಯನ್ನು ದಲ್ಲಾಳಿ ಎಳೆದುಕೊಂಡು ಹೋದಾಗ ತನ್ನ ಹೃದಯವನ್ನೇ ಯಾರೋ ಕಿತ್ತು ಎಳೆದುಕೊಂಡು ಹೋಗುವಂತೆ ಭಾಸವಾಗಿತ್ತು ಶಿವುಗೆ. ಅವನು ಅಮ್ಮನ ಸೆರಗಲ್ಲಿ ಅವಿತುಕೊಂಡು ಅತ್ತಿದ್ದ. ಓಡಿ ಕರುವನ್ನು ಹಿಂದಕ್ಕೆ ಎಳೆದು ತರುವ ಮನಸ್ಸಾಯಿತಾದರೂ ಧೈರ್ಯವಾಗಲಿಲ್ಲ. ಮೂರು ದಿನ ಅವನಿಗೆ ಊಟ ಕೂಡ ರುಚಿಸಿರಲಿಲ್ಲ.
ದುರಹಂಕಾರಿ, ಮೋಸಗಾರ ಸಾಹುಕಾರನಿಂದ ಸಾಲ ಪಡೆದು ಸೋತು ಹೋಗಿದ್ದ ಅಪ್ಪ. ತಿಂಗ ತಿಂಗಳಿಗೆ ಬಡ್ಡಿ ಕಟ್ಟಿಯೇ ಆತ ಸುಸ್ತಾಗುತ್ತಿದ್ದ. ಅಪ್ಪನ ಕಷ್ಟಗಳನ್ನು ನೋಡಿ ಶಿವು ತನ್ನ ಕಷ್ಟಗಳನ್ನು ಮರೆತು ತನ್ನನ್ನೇ ತಾನು ಸಮಾಧಾನ ಪಡಿಸುತ್ತಿದ್ದ.
ನಿಜಕ್ಕೂ ಘೋರ ವಂಶಸ್ಥನಿರಬೇಕು ಸಾಹುಕಾರ. ಅವನ ಹೆಸರೇ ಅದನ್ನು ಸೂಚಿಸುತ್ತಿತ್ತು: ಸುಖಾನಂದ್. ಹೆಸರಿಗೆ ತಕ್ಕಂತೆ ಸದಾ ಸುಖಿ ಆತ. ಆತನನ್ನು ನೋಡುವಾಗಲೇ ಮೈಯಲ್ಲಿ ನಡುಕ ಹುಟ್ಟುತ್ತಿತ್ತು. ದೊಡ್ಡ ದೊಡ್ಡ ಕಣ್ಣುಗಳು, ತುಟಿ ಮೇಲೆ ಪೊದೆ ಮೀಸೆ - ವೀರಪ್ಪನ್ ತರಾ. ಉದ್ದನೆಯ ವ್ಯಕ್ತಿ. ನಡೆಯುವಾಗ ಸಣ್ಣಗೆ ಭೂಕಂಪ ಆದಂತ ಅನುಭವ ಆಗುತ್ತಿತ್ತು.
ಊರಲ್ಲಿ ಹೆಚ್ಚಾಗಿ ಎಲ್ಲಾ ರೈತರು ಸಾಹುಕಾರನಿಂದ ಸಾಲ ಮಾಡಿದ್ದರು ಮತ್ತು ಅದನ್ನು ತೀರಿಸಲಾಗದೆ ಒದ್ದಾಡುತ್ತಿದ್ದರು. ತಿಂಗ ತಿಂಗಳಿಗೆ ಬಡ್ಡಿ ಕಟ್ಟಿಯೇ ಅವರೆಲ್ಲ ಸೋತು ಹೋಗುವುದು ಶಿವುಗೆ ತನ್ನ ಸಹಪಾಠಿಗಳ ಮೂಲಕ ತಿಳಿಯುತ್ತಿತ್ತು.
ಬೀರನ ಅಪ್ಪ ಆತ್ಮಹತ್ಯೆ ಮಾಡಿದ ಮೇಲೆ ಬೀರ ಶಾಲೆಯೇ ಬಿಟ್ಟು ಬಿಟ್ಟ. ಈಗ ಆತ ತನ್ನ ತಾಯಿ ಜೊತೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾನೆ ಎಂದು ಅವನ ಪಕ್ಕದ ಮನೆಯ ಶಾರದಾ ಹೇಳುತ್ತಿದ್ದಳು. ಶಿವಲಿಂಗಿಯ ಅಪ್ಪನ ಆತ್ಮಹತ್ಯೆಯ ನಂತರ ಶಿವಲಿಂಗಿಯ ಕುಟುಂಬವೇ ಊರು ಬಿಟ್ಟು ಬೇರೆಲ್ಲೋ ಗುಳೇ ಹೋಯಿತು.
ಕೆಲವೇ ತಿಂಗಳ ಹಿಂದೆ ಊರಲ್ಲಿ ಎಷ್ಟೊಂದು ಸಂತೋಷ, ಸಂಭ್ರಮವಿತ್ತು! ಮಕ್ಕಳದೇ ರಾಜ್ಯ. ಸಂಜೆ ಶಾಲೆ ಮುಗಿದ ತಕ್ಷಣ ಎಲ್ಲಾ ಮಕ್ಕಳು ವಸಂತಿಯಕ್ಕನ ಬಾಕಿಮಾರು ಹೊಲದಲ್ಲಿ ಸೇರುವುದಿತ್ತು. ಆಲದ ಮರದ ಬೇರುಗಳನ್ನು ಹಿಡಿದು ಜೋಕಾಲಿ ಆಡುವುದಿತ್ತು. ಮರಗಳಲ್ಲಿ ಹಕ್ಕಿಗಳು ಹೇಗೋ, ಭೂಮಿ ಮೇಲೆ ಮಕ್ಕಳು!
ಆದರೆ ಕಳೆದ ಒಂದೆರಡು ತಿಂಗಳುಗಳಲ್ಲಿ ಎಲ್ಲವೂ ಬದಲಾಗಿ ಹೋಯಿತಲ್ಲ? ಯಾರೋ ಧರೋಡೆಕೋರರು ಬಂದು ಊರಿನ ಸಂತೋಷವನ್ನೆಲ್ಲಾ ದಿನಬೆಳಗ್ಗೆಯೇ ದೋಚಿಕೊಂಡು ಹೋಗಿದ್ದಾರೋ ಎಂಬಂತಾಗಿತ್ತು ಪರಿಸ್ಥಿತಿ. ಈಗೀಗ ಮರಗಳ ಮೇಲೆ ಹಕ್ಕಿಗಳೂ ಮಾಯವಾಗಿದ್ದವು, ಅಥವಾ ಹಾಗೆ ಆತನಿಗೆ ಅನಿಸುತ್ತಿತ್ತು...
ಸುಮಾರು ಮಧ್ಯಾಹ್ನದ ಸಮಯವಾಗುತ್ತಾ ಬಂತು. ಅಮ್ಮ ಇನ್ನೂ ಆಳುತ್ತಲೇ ಇದ್ದಳು. ಬೆಳಿಗ್ಗೆಯಿಂದ ಏನೂ ತಿನ್ನದೆ ಆಕೆ ಜೀವ ಇಲ್ಲದಂತಾಗಿದ್ದಳು. ವಸಂತಿಯಕ್ಕ ಬೆಳಿಗ್ಗೆ ಗಂಜಿ ಮಾಡಿ ತಂದಿದ್ದರು. ಆದರೆ ಅಮ್ಮ ಉಂಡಿರಲಿಲ್ಲ. ವಸಂತಿಯಕ್ಕ ಒತ್ತಾಯ ಮಾಡಿ ಶಿವುಗೆ ಸ್ವಲ್ಪ ಉಣಿಸಿದ್ದರು. ಯಾಕೋ ಇಡೀ ವಾತಾವರಣ ಭೀಕರವಾಗಿ ಕಾಣುತ್ತಿತ್ತು ಶಿವುಗೆ.
ನಿನ್ನೆ ಸಂಜೆಯಿಂದ ಇಲ್ಲಿ ತನಕ ನಡೆದ ಘಟನೆಗಳು ಶಿವು ಕಣ್ಣ ಮುಂದೆ ಹಾದು ಹೋದ ಹಾಗೆ ಅವನು ಇನ್ನಷ್ಟು ವಿಚಲಿತನಾದ. ನಿನ್ನೆ ರಾತ್ರಿ ಊಟದ ಮುಂಚೆ ಅಪ್ಪ ಅಮ್ಮನ ಮಧ್ಯೆ ದೊಡ್ಡ ಜಗಳವಾಗಿತ್ತು. ಅಪ್ಪ ನಿನ್ನೆ ಕೂಡ ಕುಡಿದು ಬಂದಿದ್ದ. ಊಟದ ಬಟ್ಟಲಲ್ಲಿ ಅನ್ನ ಮತ್ತು ತಿಳಿ ಸಾರು ಹಾಗೂ ಒಣ ಮೀನು ನೋಡಿ ಅಪ್ಪನಿಗೆ ಎಲ್ಲಿಲ್ಲದ ಕೋಪ.
"ನಿಯತ್ತಿನಿಂದ ಒಂದು ಒಳ್ಳೆ ಊಟ ಹಾಕಲೂ ಆಗೋದಿಲ್ಲ ನಿನಗೆ ಮೂರು ಕಾಸಿನವಳೇ" ಅಪ್ಪ ಗದರಿದ್ದ.
“ಇನ್ನೇನು ಕುರಿ ಮಾಂಸ ಮಾಡಿ ಹಾಕಲೇ? ಮನೆಯಲ್ಲಿ ಏನು ತಂದು ಹಾಕಿದ್ದಿ ಅಂತ ಒಳ್ಳೆ ಊಟ ಕೇಳ್ತೀಯಾ?" ಅಮ್ಮ ತಿರುಗೇಟು ನೀಡಿದ್ದಳು.
“ಮನೆಯಲ್ಲಿ ಏನೂ ಇಲ್ಲದ್ದಕ್ಕೇನು ನೀನು ದಿನೇ ದಿನೇ ಗುಂಡಗಾಗುತ್ತ ಇದ್ದೀಯಾ? ಆರಾಮಾಗಿದ್ದೀಯಾ ನೀನು. ನಿನಗೆಲ್ಲಿಯ ಚಿಂತೆ?" ಅಪ್ಪನ ಸ್ವರ ಏರುತ್ತಿತ್ತು.
“ಹೌದು, ನೀನು ಸಾಲ ಮಾಡಿ ಇಡೀ ಕುಟುಂಬಾನೇ ಸರ್ವನಾಶ ಮಾಡಿದಿ. ಇದ್ದದ್ದೆಲ್ಲ ತಿಂದು ಮುಗಿಸಿದಿ. ನಿನ್ನ ಆ ಮಗನನ್ನು ನೋಡು, ಚರ್ಮ ಎಲುಬು ಬಿಟ್ರೆ ಏನಿಲ್ಲ ಅವನ ದೇಹದಲ್ಲಿ," ಶಿವುವನ್ನು ತೋರಿಸಿ ಅಮ್ಮ ಹೇಳಿದ್ದಳು.
“ಏನು? ನಾನು ಸರ್ವನಾಶ ಮಾಡಿದ್ನಾ? ಆ ಸಾಹುಕಾರನಲ್ಲಿ ಸಾಲ ಮಾಡಿ ನಿನಗೆ ಅವನ ಜೊತೆ ಮಲಗಲು ದಾರಿ ಮಾಡಿ ಕೊಟ್ಟೆ ನಾನು ರಂಡೆ. ನನಗೇನು ಗೊತ್ತಿಲ್ಲ ಅಂತ ತಿಳಿದಿದ್ದೀಯಾ?"
ರಂಡೆ ಎಂಬ ಮಾತು ಕೇಳಿ ಅಮ್ಮ ಒಂದು ಕ್ಷಣ ಬಾಯಿ ಬಾರದಂತಾದಳು. ಆದರೂ ಸಾವರಿಸಿಕೊಂಡ ಆಕೆಯ ಸ್ವರ ಮತ್ತಷ್ಟು ಏರಿತು.
“ನೀನು ನನ್ನ ಗಂಡನಾ? ಮಣ್ಣು ತಿಂದು ಹೋಗುತ್ತೀ ನೋಡು ಈ ರೀತಿ ಮಾತಾಡಿದ್ರೆ. ನಾಲಗೆ ಹೇಗೂ ತಿರುಗುತ್ತೆ ಅಂತ ಏನೇನೋ ಮಾತಾಡ್ತಾ ಹೋಗ್ಬೇಡ, ಬಿದ್ದು ಹೋದೀತು. ಮಗನ ಮುಂದೆ ಈ ರೀತಿ ಮಾತಾಡ್ತಿ ಅಲ್ಲ, ನಾಚಿಕೆ ಆಗೋದಿಲ್ವಾ ನಿನಗೆ?" ಅಮ್ಮ ನಿಜಕ್ಕೂ ಬೊಬ್ಬಿಡುತ್ತಿದ್ದಳು.
“ಇದ್ದದ್ದನ್ನೇ ಮಾತಾಡ್ತಿದ್ದೀನೇ ಲಜ್ಜೆಗೆಟ್ಟವಳೆ. ಹೋಗು, ಹೋಗು, ಎಲ್ಲಿ ತನಕ ಅವನ ಜೊತೆ ಮಜಾ ಮಾಡ್ತೀಯಾ? ನಾನಿರುವ ತನಕವಷ್ಟೇ? ಯಾರಿಗೊತ್ತು, ನಾನು ಸತ್ತ ನಂತರ ಕಾಯಾಮ್ ಆಗಿ ನೀನು ಅವನ ಜೊತೆ ಹೋಗಲು ಸುಲಭವಾದೀತು."
ಮಾತಿಗೆ ಮಾತು ಏರುತ್ತಾ ಜಗಳ ಹೆಚ್ಚುತ್ತಾ ಹೋಯಿತು. ಅಪ್ಪ ಊಟ ಮಾಡಲಿಲ್ಲ. ತೂರಾಡುತ್ತಾ ಎದ್ದು ಕೋಪದಿಂದಲೇ ಹೊರಗೆ ಹೋದ.
“ಮಣ್ಣು ತಿನ್ನು ಹೋಗು; ನಿನ್ನ ಹೊಟ್ಟೆಗೆ ಕಲ್ಲು ಬೀಳ," ಅಮ್ಮನ ಕೋಪ ಕಡಿಮೆ ಆಗಿರಲಿಲ್ಲ.
ಶಿವುಗೆ ಮಾತ್ರ ಇದೆಲ್ಲ ಅರ್ಥವೇ ಆಗುತ್ತಿರಲಿಲ್ಲ. ಅಪ್ಪ ಯಾಕೆ ಇಷ್ಟು ಒಳ್ಳೆಯ ಅಮ್ಮನನ್ನು ಪೀಡಿಸುತ್ತಾನೆ? ಸಾಲ ಮಾಡಿ ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು ಅವನು ತಾನೆ? ಆತನಿಗೆ ಯಾಕೆ ದುರಾಸೆ ಹುಟ್ಟಿತು? ಈಗ ಅವನ ದೆಸೆಯಿಂದಾಗಿ, ಆ ಸಾಲದಿಂದಾಗಿ ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲದಂತಾಯಿತು.
ಅದಾದ ನಂತರ ಅಮ್ಮ ಶಿವುಗೆ ಊಟ ಬಡಿಸಿದಳು. ಅದೇ ಅನ್ನ, ತಿಳಿ ಸಾರು ಮತ್ತು ಒಣ ಮೀನು. ಒಳ್ಳೆ ಊಟ ಮಾಡಿ ಎಷ್ಟು ದಿನಗಳಾದವೋ!
ನಂತರ ಆತ ಮಲಗಲು ಹೋಗಿದ್ದ. ಮಧ್ಯ ರಾತ್ರಿ ಯಾರೋ ಕಿರುಚಿದಂತಾಯಿತು. ಆತ ಎದ್ದ. ಅಪ್ಪ ಮನೆ ಮುಂದಿರುವ ಮಾವಿನ ಮರದ ಬುಡದಲ್ಲಿ ಬಿದ್ದಿದ್ದ. ಅಮ್ಮ ಚೀರುತ್ತಿದ್ದಳು. ತಗಡಿನ ಡಬ್ಬಿಯಲ್ಲಿನ ಕಪ್ಪು ಮದ್ದನ್ನು ಆತ ಕುಡಿದಿದ್ದ. ಶಿವು ತಕ್ಷಣ ಹೋಗಿ ವಸಂತಿಯಕ್ಕ ಮತ್ತು ಇತರರನ್ನು ಕರೆದುಕೊಂಡು ಬಂದ. ಅವಸರದಿಂದ ಎಲ್ಲರೂ ಸೇರಿ ಅಪ್ಪನನ್ನು ಆಸ್ಪತ್ರೆಗೆ ಸೇರಿಸಿದರಾದರೂ ಉಪಯೋಗವಿರಲಿಲ್ಲ. ಅಪ್ಪ ಸಾಕಷ್ಟು ಮದ್ದು ಕುಡಿದಿದ್ದನಾದ್ದರಿಂದ ಅವನನ್ನು ಬದುಕಿಸುವುದು ಸಾಧ್ಯವಾಗಲಿಲ್ಲ.
ಪೋಲಿಸರು ಬಂದರು. ಅಪ್ಪನ ಶವವನ್ನು ಕೊಂಡು ಹೋದರು. ನಂತರ ಅಪ್ಪನ ಶವವನ್ನು ಬಿಡಿಸಿ ತರುವುದು ಕೂಡ ಒಂದು ಕಷ್ಟದ ಕೆಲಸವೇ ಆಯಿತು. ಜಯಣ್ಣ ಪೋಲಿಸರಿಗೆ ಲಂಚ ಕೊಡಬೇಕಾಗಿ ಬಂತು ಎಂಬುದು ಶಿವುಗೆ ನಂತರ ತಿಳಿಯಿತು. ಹೀಗೆ ಅಪ್ಪನ ಶವ ಮನೆಗೆ ತರುವಾಗ ಬೆಳಿಗ್ಗೆಯ ಹತ್ತು ಘಂಟೆ...
ಶಿವು ಹೀಗೆಲ್ಲ ಯೋಚಿಸುತ್ತಿರುವಾಗಲೇ ದೇವಸ್ಥಾನದ ಪೂಜಾರಿ ಬಂದ. ಹಲವಾರು ರೀತಿಯ ಮಂತ್ರಗಳನ್ನು ಪಠಿಸುತ್ತಾ ಆತ ಅಪ್ಪನ ನಿರ್ಜೀವ ಶರೀರಕ್ಕೆ ಅದೇನೋ ಲೇಪನ ಮಾಡುವುದನ್ನು ಶಿವು ನೋಡಿದ – ಬಹುಶಃ ಗಂಧದ ಲೇಪನವಿರಬೇಕು, ಅದರ ಪರಿಮಳ ಕೋಣೆಯಲ್ಲೆಲ್ಲಾ ಹರಡಿತು. ಪೂಜಾರಿ ಮಂತ್ರ ಪಠಿಸುತ್ತಿದ್ದಂತೆ ಅಮ್ಮನ ರೋಧನ ಕೂಡ ಹೆಚ್ಚುತ್ತಾ ಹೋಯಿತು. ವಸಂತಿಯಕ್ಕ ಅಮ್ಮನನ್ನು ಇನ್ನೂ ಘಟ್ಟಿಯಾಗಿ ಹಿಡಿದು ಕೂತಿದ್ದರು.
“ಹೋಗೋ ಮಗಾ, ಮೈಯ ಬಟ್ಟೆ ತೆಗೆದು ಯಾವುದಾದರೂ ಬಿಳಿ ಬಟ್ಟೆ ಒದ್ದೆ ಮಾಡಿ ಮೈ ಮೇಲೆ ಹಾಕು. ಚಿತೆಗೆ ಕೊಳ್ಳಿ ಇಡ್ಬೇಕು ನೀನು," ವಸಂತಿಯಕ್ಕ ಹೇಳಿದರು.
ಅಲ್ಲೇ ಹಗ್ಗದ ಮೇಲೆ ನೇತಾಡುತ್ತಿದ್ದ ಬಿಳಿ ಬಟ್ಟೆಯನ್ನು ತೆಗೆದುಕೊಂಡು ಶಿವು ಹೊರಗೆ ಬಂದ. ಅಂಗಳದಲ್ಲಿ ಪಕ್ಕದ ಮನೆಯವರೆಲ್ಲ ಸೇರಿದ್ದರು. ಅವನ ಸಹಪಾಠಿಗಳಾದ ಎಂಕ್ಟ, ಬೀರ, ದುರ್ಗಿ, ಶಂಕರನ ಜೊತೆಗೆ ಇನ್ನೂ ಹಲವರಿದ್ದರು. ಅವರೆಲ್ಲ ಅವನ ಕಡೆ ಕನಿಕರದ ದೃಷ್ಟಿ ಬೀರಿದಾಗ ಶಿವುನ ಜೀವ ಇರುವೆಯಷ್ಟಾಯಿತು. ಹೆಚ್ಚು ಹೊತ್ತು ಅವರನ್ನು ನೋಡಿ ಇರಲಾಗದೆ ಶಿವು ಬಟ್ಟೆಯನ್ನು ಮಾವಿನ ಮರದ ಕೆಳಗೆ ಇದ್ದ ಬಚ್ಚಲಿನಲ್ಲಿ ತೋಯಿಸಿದ. ಮೈ ಮೇಲೆ ಹಾಕಿದಾಗ ಮೈಯಲ್ಲೆಲ್ಲಾ ಥಂಡಿ ಹರಡಿ, ಜೀವ ಒಂದು ಘಳಿಗೆ ನಡುಗಿತು.
ಅಷ್ಟಾಗಲೇ ಅಪ್ಪನ ಕಳೇಬರವನ್ನು ಹೊಲದ ಕಡೆಗೆ ಕೊಂಡೊಯ್ಯುವ ತಯಾರಿ ಪ್ರಾರಂಭವಾಯಿತು. ಪೂಜಾರಿ ಶಿವುಗೆ ಕೆಂಡಗಳಿಂದ ತುಂಬಿದ ಸಣ್ಣ ಮಡಕೆಯನ್ನು ಕೊಟ್ಟರು. ನಾಲ್ಕು ಪುರುಷರು ಕಳೇಬರದ ಚಟ್ಟವನ್ನು ಎತ್ತಿದರು. ಆಗ ಆಯಿತು ಅಮ್ಮನ ಮುಗಿಲು ಮುಟ್ಟುವ ಆಕ್ರಂಧನ. ನಿನ್ನೆವರೆಗೆಲ್ಲ ಅಪ್ಪನನ್ನು ಹಿಗ್ಗಾಮುಗ್ಗಾ ಬೈಯುತ್ತಿದ್ದ ಅಮ್ಮ ನಿಜಕ್ಕೂ ಸಂಕಟ ಪಡುತ್ತಿದ್ದಾಳೆಯೇ? ಶಿವುಗೆ ಇದೆಲ್ಲ ಅರ್ಥವಾಗುತ್ತಿರಲಿಲ್ಲ. ಅವನ ಕಣ್ಣುಗಳಿಂದ ಬೇಕೆಂದರೂ ಒಂದು ತೊಟ್ಟು ಕಣ್ಣೀರು ಬಂದಿರಲಿಲ್ಲ.
ಕೂಕ್ರ ಮತ್ತು ಅವನ ಸಂಗಡಿಗರ ಡೋಲಿನ ನಾದದೊಂದಿಗೆ ಮೆರವಣಿಗೆ ಅಟ್ಟಣಿಕೆ ದಾಟಿ ಮುಂದೆ ಮುಂದೆ ಸಾಗಿತು. ಬಾಕಿಮಾರು ಗದ್ದೆಯ ಮಗ್ಗುಲಿನ ಸಣ್ಣ ಗದ್ದೆಯಲ್ಲಿ ಚಿತೆ ಏರಿಸಲಾಗಿತ್ತು. ಸಣ್ಣವನಿದ್ದಾಗ ಅದೇ ಗದ್ದೆಯಲ್ಲಿ ಅಪ್ಪನ ಹೆಗಲ ಮೇಲೆ ಕೂತು ಅಪ್ಪ ಹಾಡುತ್ತಾ ಉಳುತ್ತಿದ್ದಂತೆ ತಾನು ಹಾಡಿ ಚಪ್ಪಾಳೆ ತಟ್ಟಿದ ನೆನಪುಗಳು ಗಕ್ಕನೆ ಬಂದು ನಿಂತವು. ಅದ್ಯಾಕೋ ಹೊಟ್ಟೆಯಲ್ಲಿ ಒಂದು ರೀತಿಯ ಸಂಕಟದ ಅನುಭವ ಆಯಿತು ಶಿವುಗೆ.
ಅಪ್ಪನ ಕಳೇಬರವನ್ನು ಚಿತೆಯ ಮೇಲೆ ಇಡಲಾಯಿತು. ಮೆರವಣಿಗೆ ಈಗ ಚಿತೆಯ ಸುತ್ತ ಬಂದು ಸೇರಿತು. ಪೂಜಾರಿ ಮತ್ತೆ ಮಂತ್ರ ಶುರು ಮಾಡಿದರು. ಆತ ನೀರು ತುಂಬಿದ ಕೊಡವನ್ನು ಶಿವು ಹೆಗಲಿಗೆ ಎತ್ತಿ ಕೊಟ್ಟರು. ಅದಕ್ಕೆ ಸಣ್ಣ ತೂತು ಮಾಡಲಾಗಿ ನೀರು ಹನಿ ಹನಿಯಾಗಿ ನೆಲಕ್ಕೆ ಬೀಳುತ್ತಿತ್ತು. ಶಿವು ಚಿತೆಯ ಸುತ್ತ ಭಾರವಾದ ಹೆಜ್ಜೆ ಹಾಕತೊಡಗಿದ.
ಒಮ್ಮೆಲೆ ಶಿವು ಕಣ್ಣು ಸಾಹುಕಾರನ ಮೇಲೆ ಬಿತ್ತು – ಸುಖಾನಂದ್. ಆತ ಕೂಡ ಬಂದಿದ್ದ ಅಪ್ಪನನ್ನು ಬೀಳ್ಕೊಡಲು. "ಮುಠ್ಠಾಳ ನಿನ್ನಿಂದಲೇ ನನ್ನ ಅಪ್ಪ ಆತ್ಮಹತ್ಯೆ ಮಾಡಿದ," ಯೋಚಿಸತೊಡಗಿದ ಶಿವು.
ಚಿತೆಯ ಸುತ್ತ ಮೂರು ಸುತ್ತು ತೆಗೆದಂತೆ ಉರಿಯುತ್ತಿದ್ದ ಕೊಳ್ಳಿಯನ್ನು ಪೂಜಾರಿ ಶಿವು ಕೈಗೆ ನೀಡಿದ. ಓಡಿ ಹೋಗಿ ಕೊಳ್ಳಿಯನ್ನು ಆ ಕರುಣೆಯಿಲ್ಲದ ಸಾಹುಕಾರನ ಹೊಟ್ಟೆಗೆ ತೂರಿಸುವ ಪ್ರಬಲ ಹಂಬಲವಾಯಿತು ಆತನಿಗೆ.
ಆಗಲೇ ಶಿವುಗೆ ಅದೇನೋ ನೆನಪಾಯಿತು.
ಸುಮಾರು ಎರಡು ತಿಂಗಳ ಹಿಂದೆ ನಡೆದ ಘಟನೆ!
ಆ ಸಂಜೆ ಶಾಲೆಯಿಂದ ಮನೆಗೆ ಬಂದಾಗ ಮನೆಯಲ್ಲಿ ಯಾರೋ ಗಟ್ಟಿ ಸ್ವರದಿಂದ ಮಾತಾಡುತ್ತಿದ್ದರು. ಇಣುಕಿ ನೋಡಿದಾಗ ಇದೇ ಸಾಹುಕಾರ ಅಮ್ಮನಿಗೆ ಗದರಿಸುವುದನ್ನು ಆತ ನೋಡಿದ್ದ. ಅಪ್ಪ ಮನೆಯಲ್ಲಿ ಇರಲಿಲ್ಲ.
"ಒಂದೂವರೆ ಲಕ್ಷ...ಒಂದೂವರೆ ಲಕ್ಷ ಸಾಲ ಮಾಡಿದ್ದಾನೆ ನಿನ್ನ ಗಂಡ. ಬದುಕಿರುವಾಗ ಅದನ್ನು ತೀರಿಸಲು ಸಾಧ್ಯವಾಗ್ಲಿಲ್ಲ ಅವನಿಗೆ. ನನಗೇನು ಹಣ ಆಕಾಶದಿಂದ ಬೀಳುತ್ತಾ? ಮೂರು ವರ್ಷಗಳಾಗುತ್ತಾ ಬಂತು, ಇನ್ನೂ ತೀರಿಸಿಲ್ಲ ಸಾಲ. ಕಳೆದ ಮೂರು ತಿಂಗಳಿಂದ ಬಡ್ಡಿ ಕೂಡ ಕಟ್ಟಿಲ್ಲ. ಇದು ಈ ರೀತಿ ಮುಂದುವರಿಯುವುದು ಸಾಧ್ಯವಿಲ್ಲ," ಸಾಹುಕಾರ ಬೊಬ್ಬಿಡುತ್ತಿದ್ದ.
ಮರೆಯಲ್ಲಿ ನಿಂತು ಕೇಳುತ್ತಿದ್ದ ಶಿವು ಎದೆ ವಿಪರೀತವಾಗಿ ಬಡಿಯುತ್ತಿತ್ತು.
"ಧ..ಧನಿ.. ದಯ ಮಾಡಿ ಸ್ವಲ್ಪ ಉಪಕಾರ ಮಾಡಿ. ಆತ ನಿಜಕ್ಕೂ ಕಷ್ಟದಲ್ಲಿದ್ದಾರೆ. ಬೆಳೆ ಚೆನ್ನಾಗಿ ಆಗಿಲ್ಲ. ಆದರೂ ಹೇಗಾದರೂ ಸಾಲ ತೀರಿಸುತ್ತಾರೆ. ಸ್ವಲ್ಪ ಕಾಲಾವಕಾಶ ಕೊಡಿ.." ಅಮ್ಮ ರೋಧಿಸುತ್ತಿದ್ದಳು.
"ಕಾಲಾವಕಾಶ? ಇನ್ನೆಷ್ಟು ಕಾಲಾವಕಾಶ ಕೊಡಲಿ, ಹಾಂ? ಸಾಲ ಮಾಡುವಾಗ ನಿನ್ನ ಗಂಡನಿಗೆ ತುಂಬಾ ಸುಲಭವಾಗಿತ್ತು. ಈಗ ಮೂಗಿನವರೆಗೆ ಬಂದಾಗ ಎಲ್ಲಾ ಕಟ್ಟು ಕಥೆಗಳು ತನ್ನಿಂತಾನೆ ಬರುತ್ತವೆ ನಿಮ್ಗೆ.."
"ಹಾಗಲ್ಲ ಧನಿ..."
"ಮತ್ತು ಇನ್ನೇಗೆ? ಸೆಗಣಿಯಲ್ಲಿರೋ ಹುಳ ಆಕಾಶದಲ್ಲಿ ಹಾರುವ ಪ್ರಯತ್ನ ಮಾಡಿದ್ರೆ ಈ ರೀತಿನೇ ಆಗೋದು!"
ಕೆಲವು ಹೊತ್ತು ಅಲ್ಲಿ ಮೌನ ಆವರಿಸಿತು. ಅಮ್ಮ ಮಾತಾಡಲಿಲ್ಲ. ನಂತರ ಸಾಹುಕಾರನೇ ಹೇಳಿದ:
"ಒಂದು ಉಪಾಯ ಹೇಳ್ತೇನೆ ತಗೋ. ಹೇಗೂ ನಿನ್ನ ಗಂಡ ಬಡ್ಡಿ ಕಟ್ತಾ ಇಲ್ಲ. ನನಗೂ ಸದ್ಯ ಮನೆಗೆಲಸಕ್ಕೆ ಒಬ್ಬ ಆಳು ಬೇಕು. ನನ್ನ ಹೆಂಡ್ತಿ ಕೂಡ ಆಕೆಯ ಅಮ್ಮನ ಆರೈಕೆ ಮಾಡೋದಿಕ್ಕೆ ತವರಿಗೆ ಹೋಗಿದ್ದಾಳೆ. ಆದ್ದರಿಂದ ನಾಳೆಯಿಂದ ನೀನು ನನ್ನ ಮನೆ ಕೆಲಸಕ್ಕೆ ಬಾ. ನಿನ್ನ ಗಂಡನಾದವನಿಗೆ ನಾನೇ ಹೇಳುತ್ತೇನೆ..."
ಈ ರೀತಿ ಹೆದರಿಸುತ್ತಾ ಸಾಹುಕಾರ ಮೆಟ್ಟಲಿಳಿದು ಹೋಗಿದ್ದ. ಆತ ನಡೆದಾಗ ಸಣ್ಣಗೆ ಭೂಕಂಪ ಆದ ಅನುಭವ!
ಶಿವು ಆ ದಿನ ಮನೆ ಒಳಗೆ ಹೋದಾಗ ಅಮ್ಮ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.
"ಚಿತೆಗೆ ಬೆಂಕಿ ಇಡೋ ಮಗಾ.." ಪೂಜಾರಿ ಎಚ್ಚರಿಸಿದಾಗ ಶಿವು ಸ್ಥಿಮಿತಕ್ಕೆ ಬಂದ. ಉರಿಯುವ ಕೊಳ್ಳಿಯನ್ನು ಚಿತೆಗೆ ಇಟ್ಟಾಗ ಅದು 'ಬಗ್' ಅಂತ ಉರಿಯಿತು. ಆ ಚಿತೆಯಲ್ಲಿ ಅಪ್ಪನ ಹೆಣ ಮೆಲ್ಲ ಮೆಲ್ಲನೆ ಉರಿಯತೊಡಗಿತು, ಜೊತೆಗೆ ತನ್ನ ಎಲ್ಲಾ ಕನಸುಗಳೂ ಉರಿಯುವಂತೆ ಭಾಸವಾಯಿತು ಶಿವುಗೆ.
ಚಿತೆಯ ಮಧ್ಯದಿಂದ ಸಾಹುಕಾರ ಸುಖಾನಂದ ಬೋಳೆ ಕಣ್ಣು ಬಿಡುತ್ತಾ, ತಲೆ ಮೇಲಿದ್ದ ಕೊಂಬುಗಳನ್ನು ತಿರುಗಿಸುತ್ತಾ ಅಟ್ಟಹಾಸಗೈಯುತ್ತಾ ಬ್ರಹ್ಮರಕ್ಕಸನ ರೀತಿ ಕುಣಿಯುವಂತೆ ತೋರಿತು. ಸಣ್ಣಗೆ ಭೂಕಂಪ ಆಗುವುದು ಮಾತ್ರ ತಪ್ಪಲಿಲ್ಲ!

***********

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...