1. ರೆವರೆಂಡ್ ಗಾಡ್ ಫ್ರೆ ವೈಗಲ್ :
ಕ್ರಿ.ಶ. 1816ರಲ್ಲಿ ಸೆಲ್ ಎಂಬ ಗ್ರಾಮದಲ್ಲಿ ಗಾಡ್ ಫ್ರೆ ವೈಗಲ್ ಜನಿಸಿದರು. ಇವರ ತಂದೆ ಪಾದ್ರಿಯಾಗಿದ್ದರು. ಗಾಡ್ ಫ್ರೆ ಬಾಲ್ಯದಲ್ಲಿಯೇ ಕ್ರೈಸ್ತ ಶಿಕ್ಷಣ ಪಡೆದರು. ಇವರು 18 ವರ್ಷದವರಾಗುವ ಮೊದಲೇ ತಂದೆ ತಾಯಿಯನ್ನು ಕಳೆದುಕೊಂಡರು. ಕ್ರಿ.ಶ. 1835ರಿಂದ ಕ್ರಿ.ಶ. 1838ರ ವರೆಗೆ ಟ್ಯೂಬಿಂಗನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ಅಲ್ಲಿ ಅರಬ್ಬೀ ಹಾಗೂ ಸಂಸ್ಕೃತ ವಿಷಯಗಳನ್ನು ಕಲಿತರು ನಂತರ ಬಾಸೆಲ್ ಮಿಶನ್‌ನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಕ್ರಿ.ಶ. 1840ರಲ್ಲಿ ಭಾರತಕ್ಕೆ ಬಂದರು. ರೆ. ಮೊಗ್ಲಿಂಗರು ವೈಗಲರ ಆಪ್ತ ಸ್ನೇಹಿತ ಹಾಗೂ ಸಂಬಂಧಿಯಾಗಿದ್ದರು. ಮಂಗಳೂರಿಗೆ ಬಂದ ಕೆಲವೇ ತಿಂಗಳಿನಲ್ಲಿ ವೈಗಲರು ಇಂಗ್ಲಿಷ್ ಶಾಲೆಯ ಜವಬ್ದಾರಿಯನ್ನು ವಹಿಸಿಕೊಂಡರು. ಆ ಸಮಯದಲ್ಲಿ ಮಿಶನಿಗೆ ತನ್ನದೇ ಆದ ಮುದ್ರಣಾಲಯವಿಲ್ಲದ್ದು ದೊಡ್ಡ ಕೊರೆತೆಯಾಗಿತ್ತು. ಕ್ರಿ.ಶ. 1842ರಲ್ಲಿ ರೆವರೆಂಡ್ ಗಾಡ್ ಫ್ರೆ ವೈಗಲ್‌ರವರು ಮುಂಬೈಯಿಂದ ಮುದ್ರಣಯಂತ್ರವನ್ನು ದಾನವಾಗಿ ಪಡೆದು ತಂದು ದಕ್ಷಿಣ ಭಾರತದಲ್ಲಿಯೇ ಶ್ರೇಷ್ಠ ಮುದ್ರಣಾಲಯ ಎಂದು ಖ್ಯಾತಿ ಪಡೆದ ಬಾಸೆಲ್ ಮಿಷನ್ ಮುದ್ರಣಾಲಯದ ಸ್ಥಾಪನೆಗೆ ಕಾರಣರಾದರು. ರೆ.ವೈಗಲರನ್ನು ನೀಲಗಿರಿಗೆ ಕಳುಹಿಸಿದಾಗ ಅಲ್ಲಿ ಅವರು ಬಡಗ ಮಿಶನ್ ಸ್ಥಾಪಿಸಿದರು. ವೈಗಲ್ಲರಿಗೆ ಗಣಿತ, ಸಂಗೀತ ಹಾಗೂ ವೈದ್ಯಕೀಯದಲ್ಲಿ ಆಸಕ್ತಿ ಇತ್ತು.
ಲಂಡನ್ ಮಿಶನಿನ ಜಾನ್‌ಗ್ಯಾರಟ್‌ರವರು ಸಂಪಾದನೆ ಮಾಡಿದ ಭಗವದ್ಗೀತಾ ವಿಷಯದಲ್ಲಿ ಸಲಹೆ ನೀಡಿದರಲ್ಲದೆ ಹಲವು ಶ್ಲೋಕಗಳ ಅನುವಾದ ಮಾಡಿ ಟೀಕೆ, ಟಿಪ್ಪಣಿಗಳನ್ನು ಸೇರಿಸಿದರು. 'ಯಾತ್ರಿಕನ ಸಂಚಾರ' ಎಂಬುದು ರೆವರೆಂಡ್ ಗಾಡ್ ಫ್ರೆ ವೈಗಲರ ಅನುವಾದ ಕೃತಿಯಾಗಿದೆ. ಇದರಲ್ಲಿ ಬರುವ ಪದ್ಯಗಳನ್ನು ಕನ್ನಡದ ವೃತ್ತಗಳಲ್ಲಿ ಅನುವಾದಿಸಿದ್ದು ಅವು ಹೊಸಗನ್ನಡದ ಪ್ರಾರಂಭದ ಪದ್ಯಗಳೆನಿಸಿವೆ. ಇದರ ಮಹತ್ವವನ್ನು ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ರಂ. ಶ್ರೀ.ಮುಗಳಿಯವರು ತಿಳಿಸಿದ್ದಾರೆ. ರೆ. ವೈಗಲರು ಅನುವಾದ ಕಲೆಯ ವಿಶೇಷ ವರವನ್ನು ಪಡೆದಿದ್ದರೆಂದು ರೆ. ಮೊಗ್ಲಿಂಗರೂ ಹೇಳುತ್ತಾರೆ. ಬಾಸೆಲ್ ಮಿಶನ್ ಸಂಗೀತದಲ್ಲಿ ಇಪ್ಪತ್ತಮೂರು ಸಂಗೀತಗಳನ್ನು ವೈಗಲರು ರಚಿಸಿದ್ದಾರೆ.
ಕನ್ನಡ ಸಾಹಿತ್ಯ ಪರಂಪರೆಯ ಕಲ್ಪನೆ ಕನ್ನಡಿಗರಿಗಿಲ್ಲದಿರುವಾಗ ರೆ. ವೈಗಲ್ ಜರ್ಮನಿಯ ಪಂಡಿತ ಪತ್ರಿಕೆಯಾದ '‘ZDMG’ ಯಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಕುರಿತು ಲೇಖನ ಬರೆದರು. ತೌಲನಿಕ ಅಧ್ಯಯನಗಳು ನಡೆಯದಿದ್ದ ಕಾಲದಲ್ಲಿ ಸಂಸ್ಕೃತ ಭಾಷೆಯನ್ನು ದ್ರಾವಿಡ ಭಾಷೆಗಳಿಗೆ ಹೋಲಿಸಿ ಬರೆದಿರುವುದು, ಜನಪದ ಸಾಹಿತ್ಯವು ಸ್ವತಂತ್ರ ಶುದ್ಧ ಕಾವ್ಯ ಎಂದು ಹೇಳುತ್ತಾ ಯಕ್ಷಗಾನ ಪ್ರಸಂಗಗಳು ಹಾಗೂ ಜನಪದ ಹಾಡುಗಳನ್ನು ಸಾಹಿತ್ಯದ ಅಂಗವಾಗಿಯೇ ಪರಿಗಣಿಸಿದ್ದು ಅದರಲ್ಲಿಯ ವೈಶಿಷ್ಟ್ಯ ಎಂಬುದು ಗಮನಾರ್ಹವಾದುದು. ಕನ್ನಡದ ಅಮರಕೋಶ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಕೃತಿ 'ಕರ್ನಾಟಕ ಶಬ್ದಮಂಜರಿ' ಅದನ್ನು ಇಂಗ್ಲೀಷಿಗೆ ಅನುವಾದಿಸಲು ರೆವರೆಂಡ್ ಗಾಡ್ ಫ್ರೆ ವೈಗಲ್ ಕೈಗೆತ್ತಿಕೊಂಡರು. ಆದರೆ ಅದನ್ನು ಪೂರ್ತಿಗೊಳಿಸಲಿಲ್ಲ. ರೆವರೆಂಡ್ ಗಾಡ್ ಫ್ರೆ ವೈಗಲರು ಪ್ರಾರ್ಥನೆಗಳು, ದೇವರ ವಾಕ್ಯ ಬೋಧನೆಯ ಪ್ರಶ್ನೋತ್ತರ, ದೃಢೀಕರಣದ ಪ್ರಶ್ನೋತ್ತರ ಮುಂತಾದ ಕ್ರೈಸ್ತ ಧಾರ್ಮಿಕ ಪುಸ್ತಕಗಳನ್ನೂ ರಚಿಸಿದರು.
ರೆವರೆಂಡ್ ಗಾಡ್ ಫ್ರೆ ವೈಗಲರು ಕ್ರಿ.ಶ. 1848ರಲ್ಲಿ ಬೈಬಲ್ ನವೀಕರಣದ ಅಧ್ಯಕ್ಷರಾಗಿದ್ದರು. ಆ ಕೆಲಸ ಸಮರ್ಪಕವಾಗಿ ಮುಗಿದಿದ್ದರಿಂದ ಹಳೆ ಒಡಂಬಡಿಕೆಯ ಅನುವಾದ ಕಾರ್ಯವನ್ನೂ ಇವರಿಗೆ ಒಪ್ಪಿಸಲಾಯಿತು ನಂತರದ ದಿನಗಳಲ್ಲಿ ಮೇಲಿಂದ ಮೇಲೆ ಅನಾರೋಗ್ಯಕ್ಕೆ ತುತ್ತಾಗಿ ವಿಪರೀತ ಜ್ವರದಿಂದ ಬಳಲಿ ಕ್ರಿ.ಶ. 1855ರಲ್ಲಿ ತಮ್ಮ ಕೊನೆಯುಸಿರೆಳೆದರು.
2. ಜಾನ್ ಗ್ಯಾರೆಟ್ :
ಜಾನ್ ಗ್ಯಾರೆಟ್ ಕೂಡ ಶಿಕ್ಷಣದ ಕಡೆಗೆ ಒಲವು ತೋರಿಸಿದ ವಿದೇಶಿ ವಿದ್ವಾಂಸ. ಇವರು ಮೊದಮೊದಲು ವೆಸ್ಲಿಪ್ರೆಸ್‌ನ ವ್ಯವಸ್ಥಾಪಕರಾಗಿ ಕೆಲಸ ಮಾಡಿದರು. ಇಂಗ್ಲಿಷ್ ಶಾಲೆಗಳ ಕ್ರಮಬದ್ಧ ಶ್ರೇಷ್ಠತೆಗೆ ಇವರ ಶ್ರಮ ಅಧಿಕವಾದದ್ದು. ಇದನ್ನು ತಿಳಿದ ಕಮಿಷನರ್ ಕಬ್ಬನ್‌ರವರು ಮೈಸೂರು ಸಂಸ್ಥಾನಕ್ಕೆ ಸೂಕ್ತವಾದ ಶೈಕ್ಷಣಿಕ ಯೋಜನೆಯನ್ನು ರೂಪಿಸಲು ಗ್ಯಾರೆಟ್‍ರವರನ್ನು ಕೇಳಿಕೊಂಡರು. ತನಗೆ ಕೊಟ್ಟ ಕೆಲಸವನ್ನು ನಿಷ್ಠೆಯಿಂದ ಮಾಡಿದರು ಇದರಿಂದ ಸಂಪ್ರೀತರಾದ ಕಬ್ಬನ್ ರವರು ಅವರನ್ನು ಶಿಕ್ಷಣಾಧಿಕಾರಿಯಾಗಿ ನೇಮಿಸಿದರು. ಕ್ರಿ.ಶ. 1856ರಲ್ಲಿ ಪಠ್ಯಗಳ ರಚನೆ ಮತ್ತು ಪ್ರಾಚೀನ ಕೃತಿಗಳ ಸಂಪಾದನೆಗಳೆರಡು ಗ್ಯಾರೆಟ್‌ರವರಿಂದ ನಡೆದವು.
ರೀವ್‌ನ ಇಂಗ್ಲಿಷ್-ಕನ್ನಡ ಶಬ್ಧಕೋಶವು ಶಾಲಾ ಮಕ್ಕಳಿಗೆ ಉಪಯುಕ್ತವಾದುದರಿಂದ ಅಂತ ಕೋಶವನ್ನು ಮಕ್ಕಳಿಗಾಗಿ ತಯಾರಿಸಲು ಹಲವು ವಿದೇಶಿ ವಿದ್ವಾಂಸ ಮಿಶನರಿಗಳು ಶ್ರಮಿಸಿದ್ದರು. ಅದರ ಸಾರಥ್ಯವನ್ನು ವೈಗಲ್ ವಹಿಸಿದರು. ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವಂತೆ ರೀವ್‌ನ ಕೃತಿಯ ಸಂಕ್ಷಿಪ್ತ ಆವೃತ್ತಿಯನ್ನು ಇವರೆ ರಚಿಸಿದ್ದು ಹದಿನಾರು ಸಾವಿರ ಶಬ್ಧಗಳಿಗೆ ಚುಟುಕಾಗಿ ಇಂಗ್ಲೀಷಿನ ಸಮನಾರ್ಥ ಕೊಡುವ ಈ ಕೋಶ ಉಪಯೋಗ ಮಾತ್ರವಲ್ಲ ಪ್ರಾಮಾಣ್ಯವೂ ಆಗಿದೆ.
'ಶಬ್ಧಮಣಿ ದರ್ಪಣ' ಕನ್ನಡದ ಪ್ರಮುಖ ವ್ಯಾಕರಣ ಗ್ರಂಥವಾಗಿದ್ದು ಅದರ ಉಪಯೋಗ ವಿಶೇಷವಾಗಿ ಬ್ರಿಟೀಷ್ ಅಧಿಕಾರಿಗಳಿಗೆ ಮತ್ತು ಮಿಷನರಿಗಳಿಗೆ ಬೇಕಿತ್ತು ಹಾಗಾಗಿ ಅವರು ಅದರ ಪ್ರತಿ ಮಾಡಿಕೊಂಡು ಅಭ್ಯಾಸ ಮಾಡುತ್ತಿದ್ದರು. ಇದನ್ನರಿತ ಗ್ಯಾರೆಟ್ ಕ್ರಿ.ಶ. 1868ರಲ್ಲಿ ಶಬ್ಧಮಣಿದರ್ಪಣವನ್ನು ಪ್ರಕಟಿಸಿದರು. ಇದೇ ಈ ಗ್ರಂಥದ ಪ್ರಥಮ ಆವೃತ್ತಿ ಎಂಬುದನ್ನು ಗಮನಿಸಬೇಕು.
ಇದಕ್ಕಿಂತಲೂ ಹೆಚ್ಚಿನ ಮಹತ್ವದ ಕೃತಿ ಎಂದರೆ ಈತನ ಬಹುಭಾಷಾ ಭಗವದ್ಗೀತೆ. ಕ್ರಿ.ಶ. 1846-48ರ ಅವಧಿಯಲ್ಲಿ ರಚಿತವಾದ ಈ ಕೃತಿಯ ಹೊಳಹು ಗ್ಯಾರಟ್‌ರವರದೇ. ಭಗವತ್‌ಗೀತೆಯ ಬಗ್ಗೆ ಅದುವರೆಗೆ ಇದ್ದ ಎಲ್ಲಾ ಸಾಧನಗಳನ್ನು ಬಳಸಿಕೊಂಡು ಅದನ್ನು ಅಭ್ಯಾಸ ಮಾಡುವವರಿಗೆ ಬಹು ಉಪಯೋಗಕ್ಕೆ ಬರುವಂತೆ ಒಳ್ಳೆಯ ಆವೃತ್ತಿಯನ್ನು ಹೊರತಂದುದರ ಜೊತೆಗೆ ಅದರ ಕನ್ನಡ ಅನುವಾದವನ್ನು ಅವರೆ ಸಿದ್ಧಪಡಿಸಿದರು ಮತ್ತು ಅದಷ್ಟನ್ನೇ ಪ್ರತ್ಯೇಕವಾಗಿ ಪುಸ್ತಕ ರೂಪದಲ್ಲಿ ಮರುವರ್ಷ ಪ್ರಕಟಿಸಿದರು. ತನ್ನ ಈ ಅನುವಾದವನ್ನು ತಳಹದಿಯನ್ನಾಗಿಟ್ಟುಕೊಂಡು ಇಂಗ್ಲಿಷ್-ಲ್ಯಾಟಿನ್‌ಗಳ ಅನುವಾದವನ್ನು ಅದಕ್ಕೆ ಸೇರಿಸಿದರು. ಇದಕ್ಕೆ ಮುನ್ನುಡಿ, ವಿಮರ್ಶೆಗಳನ್ನು ಸೇರಿಸಿದಲ್ಲದೆ; ವಾರನ್ ಹೇಸ್ಟಿಂಗ್ಸ್ ಮತ್ತು ಬ್ಯಾರನ್ ಹಂಬೊಲ್ಟ್ ಅವರ ಜರ್ಮನ್ ಅನುವಾದವನ್ನು ಅದಕ್ಕೆ ಸೇರಿಸಿ ಇಡೀ ಜಗತ್ತಿನಲ್ಲಿಯೇ ಒಂದು ವಿಶಿಷ್ಟ ಕೃತಿಯನ್ನಾಗಿ ಮಾಡಿದರು.
'ಕ್ಲಾಸಿಕಲ್ ಡಿಕ್ಷನರಿ ಆಫ್ ಇಂಡಿಯಾ' ಇವರ ಮತ್ತೊಂದು ಮಹತ್ವ ಪೂರ್ಣ ಕೃತಿ. ಸುಪ್ರಸಿದ್ಧವೆನಿಸಿದ ಪುರಾಣನಾಮ ಚೂಡಾಮಣಿಯ ಮಾದರಿಯಲ್ಲಿ ಈ ಹಿಂದೂ ನಾಮಕೋಶವನ್ನು ರಚಿಸಿದರು. ಅವರ ಹಳಗನ್ನಡ ಕಾವ್ಯಗಳ ಪ್ರಸಂಗ ಇಲ್ಲಿ ಹೆಚ್ಚಾಗಿ ಪ್ರಯೋಜನಕ್ಕೆ ಬಂದಿದೆ ಪೌರಾಣಿಕ ವ್ಯಕ್ತಿ, ಘಟನೆಗಳ ಪ್ರಾಥಮಿಕ ಮಾಹಿತಿಯನ್ನು ಕನ್ನಡ ಕಾವ್ಯಗಳಿಂದಲೇ ಅವರು ಆಯ್ದುಕೊಂಡಿರುವುದನ್ನು ನೋಡಿದರೆ ಸಾಕು ಅವರ ವಿದ್ವತ್ತು ತಿಳಿಯುತ್ತದೆ. 'ಬಹುಭಾಷಾ ಭಗವತ್‌ಗೀತೆ' ಮತ್ತು 'ಕ್ಲಾಸಿಕಲ್ ಡಿಕ್ಷನರಿ ಆಫ್ ಇಂಡಿಯಾ' ಕೃತಿಗಳೆರಡು ಜಾನ್ ಗ್ಯಾರೆಟ್‍ರವರಿಗೆ ಅಖಿಲ ಭಾರತ ಮನ್ನಣೆಯನ್ನು ತಂದುಕೊಟ್ಟಿವೆ.
ಜೊತೆಗೆ ಗ್ಯಾರೆಟ್ ಮೈಸೂರು ಸಂಸ್ಥಾನದ ಶಿಕ್ಷಣಾಧಿಕಾರಿಯಾಗಿ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸುವ ಸಲುವಾಗಿ ಇಂಡಿಯಾ-ಬ್ರಿಟನ್ ಕುರಿತ ಅಧಿಕೃತ ಚರಿತ್ರೆಗಳನ್ನು ಇಂಗ್ಲಿಷ್‌ನಲ್ಲಿ ರಚಿಸಿದರು. ಅವು ಕ್ರಮೇಣ ಕನ್ನಡಕ್ಕೆ ಅನುವಾದಗೊಂಡು ಹಲವಾರು ದಶಕಗಳ ಕಾಲ ಪಠ್ಯ ಪುಸ್ತಕಗಳಾಗಿದ್ದವು. ಕ್ರಿ.ಶ. 1865 ರಲ್ಲಿ ಪಂಚತಂತ್ರವನ್ನು ಇವರು ತಿಳಿಯಾದ ಗದ್ಯರೂಪದಲ್ಲಿ ಹೊರತಂದು ಪಠ್ಯವಾಗಿಸಿದರು. ಕ್ರಿ.ಶ. 1866ರಲ್ಲಿ ಬಿ. ರಾಮರಾವ್ ಬರೆದ ರೇಖಾಗಣಿತವನ್ನು ಸಂಪಾದಿಸಿ ಶಿಕ್ಷಣ ಇಲಾಖೆಯ ವತಿಯಿಂದ ಪ್ರಕಟಿಸಿದರು. ಬಾಸೆಲ್ ಮಿಷನ್ ಸಂಸ್ಥೆಯ ವುರ್ತನ 'ಪ್ರಾಕ್ಕಾವ್ಯ ಮಾಲಿಕೆ' ಎಂಬ ಕವನ ಸಂಕಲನವನ್ನು ಬೆಂಗಳೂರಿನ ಸರ್ಕಾರಿ ಅಚ್ಚು ಕೂಟದಲ್ಲಿ ಮುದ್ರಿಸಲು ನೆರವಾದರು. ಅರುಣೋದಯ ಕಾಲದ ಕನ್ನಡ ಸಾಹಿತ್ಯವಾರಿಧಿಗೆ ವಿದೇಶಿ ವಿದ್ವಾಂಸರಾಗಿ ದುಡಿದ ಹಲವರಲ್ಲಿ ಜಾನ್ ಗ್ಯಾರಟ್‌ರವರದು ಪ್ರಮುಖ ಹೆಸರು.
3. ಅಬೆ ದ್ಯುಬ್ವಾ :
ಕ್ರಿ.ಶ. 18ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಪ್ರಚಲಿತವಿದ್ದಂತಹ ಜನಪದ ಜೀವನವನ್ನು ಕುತೂಹಲಕ್ಕಾಗಿ, ತೆರೆದ ಕಣ್ಣುಗಳಿಂದ ಸಮಗ್ರವಾಗಿ ಅಧ್ಯಯನ ಮಾಡಿ ದಾಖಲಿಸಿದ ಮತ್ತೊಬ್ಬ ವಿದೇಶಿ ಕ್ರೈಸ್ತ ಸಂಶೋಧಕ ಮಹನೀಯರೆಂದರೆ ಫ್ರಾನ್ಸ್ ದೇಶದ ಪ್ಯಾರಿಸ್ ಮಿಷನ್‌ಗೆ ಸೇರಿದ ವಂದನೀಯ ಸ್ವಾಮಿ ಅಬೆದ್ಯುಬ್ವಾ. ಸುಮಾರು ಮೂವತ್ತು ವರ್ಷಗಳ ಕಾಲ ಭಾರತೀಯ ಸನ್ಯಾಸಿಯಂತೆ ತಲೆಯ ಮೇಲೆ ರುಮಾಲುಪೇಟ ಮತ್ತು ಉದ್ದನೆಯ ನಿಲುವಂಗಿ ಧರಿಸಿ, ಕೈಯಲ್ಲಿ ಉದ್ದನೆಯ ಕೋಲನ್ನು ಹಿಡಿದು ನೀಳಗಡ್ಡದ ಮುಖ ಹೊತ್ತು, ರಾಜ ಠೀವಿಯಿಂದ ಕರ್ನಾಟಕದ ಹಳೇ ಮೈಸೂರು ಪ್ರಾಂತ್ಯವನ್ನು ಸುತ್ತಾಡಿ ಕ್ರೈಸ್ತತ್ವವನ್ನು ಪ್ರಾಮಾಣಿಕವಾಗಿ ಪ್ರದರ್ಶಿಸಿ ಎಲ್ಲರಿಂದ 'ದೊಡ್ಡ ಸ್ವಾಮಿಯವರು' ಎಂದು ಹೊಗಳಿಸಿಕೊಂಡರು.
ಇವರು ಕ್ರಿ.ಶ. 1806ರಲ್ಲಿ ತಾವು ಸಂಶೋಧಿಸಿ ಸಂಗ್ರಹಿಸಿದ ಅನೇಕ ಮಾಹಿತಿಗಳನ್ನು ಕಲೆಹಾಕಿ 'ಹಿಂದೂ ಮ್ಯಾನರ್ಸ್, ಕಸ್ಟಮ್ಸ್ ಅಂಡ್ ಸೆರೆಮೊನಿಸ್' (Hindu Manners, Customs and Ceremonies) ಎಂಬ ಬೃಹತ್ ಗ್ರಂಥವನ್ನು ತಮ್ಮ ಮಾತೃಭಾಷೆಯಾದ ಫ್ರೆಂಚ್‌ನಲ್ಲಿ ರಚಿಸಿ ಪ್ರಕಟಿಸಿದರು. ಕ್ರಿ.ಶ. 1816ರಲ್ಲಿ ಅದರ ಇಂಗ್ಲಿಷ್ ಅನುವಾದ ಪ್ರಕಟಗೊಂಡಿತು. ಭಾರತೀಯ ಜಾನಪದ ಜೀವನ ಅದರಲ್ಲೂ ವಿಶೇಷವಾಗಿ ಕರ್ನಾಟಕದ ಜಾನಪದ ಜೀವನಕ್ಕೆ ಹಿಡಿದ ರನ್ನಗನ್ನಡಿಯಂತಿದೆ ಈ ಗ್ರಂಥ. ಅವರ ಬದುಕಿನ ನಡುವೆ ನಿಂತು ಅವರುಗಳ ಬದುಕಿನ ನೈಜ ಮಾಹಿತಿಗಳ ಭಂಡಾರವೇ ಈ ಗ್ರಂಥದಲ್ಲಿ ಅಡಗಿರುವುದರಿಂದ ಈ ಕೃತಿಗೆ ಸಾರ್ವಕಾಲಿಕ ಮೌಲ್ಯ ದೊರೆತಿದೆ. ಈ ಗ್ರಂಥದ ಒಂದು ಪಾಲು ಭಾರತೀಯ ಗ್ರಂಥ ಸಮುದಾಯ ಮತ್ತು ಲಿಖಿತ ದಾಖಲೆಗಳ ಆಧಾರದಿಂದ ರಚಿತವಾಗಿದ್ದು, ಮಿಕ್ಕ ಮೂರು ಪಾಲು ಇಲ್ಲಿನ ಸಮಾಜದ ಎಲ್ಲ ವರ್ಗಗಳ ಜನರೊಂದಿಗೆ ಅವರು ಬೆರೆತು ಅವರ ಬಾಯಿಯಿಂದ ನೇರವಾಗಿ ಸಂಗ್ರಹಿಸಿದ ಮಾಹಿತಿಗಳಾಗಿವೆ ಎಂದು ಅಬೆದ್ಯುಬ್ವಾ ನುಡಿದಿರುವುದು ಈ ಕೃತಿಯ ಮಹತ್ವಕ್ಕೆ ಸಾಕ್ಷೀಭೂತವಾಗಿದೆ.
*********
No comments:
Post a Comment