ಪ್ರೀತಿಯ ಅನುಗೆ,
ನಿನ್ನ 25 ಸಂವತ್ಸರಗಳ ಸಾತ್ವಿಕ ಬದುಕಿಗೆ ಅಭಿನಂದನಾ ಮಾತುಗಳು...
ಸೇವೆಯ 25 ಸಂವತ್ಸರಗಳನ್ನು ಕೂಡಿಸಿಕೊಂಡು 26ನೇಯ ವರ್ಷವನ್ನು ಅಪ್ಪಿಕೊಳ್ಳುತ್ತಿದೆ ನಿಮ್ಮ ಸೇವಾ ಬದುಕು. ಇಂತಹ ಶ್ರೇಷ್ಟ ಬದುಕಿನಲ್ಲಿ ಕೂಡಿಸಿಕೊಂಡಿದಕ್ಕಿಂತ ಕಳೆದುಕೊಂಡಿದ್ದೆ ಹೆಚ್ಚು. ಹುಟ್ಟಿದ ಮನೆ ಊರು, ತನ್ನೊಂದಿಗೆ ಬೆರೆತು ಆಡಿ ಬೆಳೆದಗೆಳೆಯ ಗೆಳೆತಿಯರು, ತಂದೆತಾಯಿ, ಅಕ್ಕ ತಂಗಿ ತಮ್ಮಂದಿರು ಕೂನೆಗೆ ತನ್ನ ಸ್ವತಂತ್ರ ಬದುಕನ್ನೇ ಇನ್ನೊಬ್ಬರ ಸುಖಕ್ಕಾಗಿ ಬಿಟ್ಟುಕೊಟ್ಟ ಹೆಗ್ಗಳಿಕೆ ನಿಮ್ಮದು. ಇಲ್ಲಿ ಯಾರ ಒತ್ತಾಯವಿರಲಿಲ್ಲ. ಯಾರನ್ನು ಮೆಚ್ಚುಗೆ ಪಡಿಸುವ ದಾವಂತ/ಇರಾದೆ ನಿಮಗಿರಲಿಲ್ಲ. ಅದು ನಿಮ್ಮ ಸ್ವಂತ ನಿರ್ಧಾರದ ಫಲವಾಗಿತ್ತು. ನಿಮ್ಮ ಆ ಒಂದು ನಿರ್ಧಾರದಿಂದ ನಿಮ್ಮ ಇಡಿ ಬದುಕೇ ಒಂದು ವ್ಯವಕಲನವಾದರೂ, ಕಳೆದುಕೊಂಡಿದ್ದನು ಲೆಕ್ಕ ಮಾಡಲಿಲ್ಲ; ಆದರ ಬಗ್ಗೆ ಮತ್ತೊಬ್ಬರಿಗೆ ಪಟ್ಟಿ ಒಪ್ಪಿಸಲಿಲ್ಲ, ಬಿಟ್ಟುಕೊಟ್ಟೆ ಎಂದು ವ್ಯಥೆಪಡಲಿಲ್ಲ. ಎಲ್ಲದರಿಂದ ಮುಕ್ತವಾಗಿದ್ದೂ ನೆಮ್ಮದಿಯಾಗಿರಬಲ್ಲೆ ಎಂಬದನ್ನು ನೀವು ಬದ್ಕಿ ತೋರಿಸಿಕೊಟ್ಟಿದ್ದೀರಿ. ಆದ್ದರಿಂದ ನಿಮ್ಮಲ್ಲಿ ನಾಳಿನ ಕಳವಳವಿಲ್ಲ. ನಾಳಿನ ತವಕಗಳನ್ನು ಮೀರಿದ ನಿರಾಳ ಬದುಕು ನಿಮ್ಮದಾಗಿತ್ತು.
ನಿಮ್ಮ ಸಾತ್ವಿಕ ಬದುಕಿನ 25 ವರ್ಷಗಳ ನಡೆ ಹೊರಕಣ್ಣಿಗೆ ಕಾಣುವಂತೆ ಸುಗಮ ದಾರಿಯಲ್ಲಿ ನಡೆದಂಥದಲ್ಲ. ಬದುಕು ಗುಲಾಬಿ ಹಾಸಿಗೆ ಆಗಿರಲಿಲ್ಲ ಎಂಬುವುದು ನಿಮ್ಮ ಒಡನಾಡಿಗಳಿಗೆ ತಿಳಿಯದ ವಾಸ್ತವವೆನ್ನಲ್ಲ. ನಿಮ್ಮನು ಎಷ್ಟೊ ಜನರು ತಪ್ಪಾಗಿ ತಿಳಿದುಕೊಂಡರು; ಎಷ್ಟೂ ಜನರು ನಿಮ್ಮ ಜೊತೆಗೆ ಮನಸ್ತಾಪ ಮಾಡಿಕೊಂಡರು, ನಿಮ್ಮ ಬಗ್ಗೆ ಹೊಟ್ಟೆಕಿಚ್ಚು ಪಟ್ಟರು, ನಿಮಗೆ ಕಿರುಕುಳಗಳ ನೀಡಿ ಹಿಂಸಿಸಿದರು. ಕಷ್ಟದ ಕಾಲದಲ್ಲಿ ನಿಮ್ಮ ಬಳಿ ಇರಬೇಕಾದವರು ನಿಮ್ಮನ್ನು ತೊರೆದರು! ಜತೆಗೆ ಯಾವುದೋ ಒಂದು ಕಾಯಿಲೆವೆಂಬ ಭೂತ ನಿಮ್ಮನ್ನು ಹಿಂಸಿಸಿ, ಹಿಂಡಿ ನಿಮ್ಮ ಕನಸ್ಸುಗಳನ್ನೆಲ್ಲಾ ಸುಟ್ಟು ತಿಂದು ತೇಗಿ, ನಿಮ್ಮನ್ನು ಒಂದೇ ಮನೆಯ ಕೋಣೆಯಲ್ಲಿ ಕೂಡಿ ಹಾಕುವುದಿರಲ್ಲಿ ಸೇವೆ ಮಾಡಲು ಬಂದ ನಿಮಗೇ ಮತ್ತೊಬ್ಬರು ಸೇವೆ ಮಾಡಬೇಕಾದ ಅನಿವಾರ್ಯವತೆಯನ್ನು ಸೃಷ್ಟಿಸಿದ; ನಡೆಯಲು ಒಂದು ಉರುಗೋಲಿನ ಅವಶ್ಯಕತೆಯನ್ನು ತಂದು ಒಡ್ಡಿದಲ್ಲದೆ ಹತ್ತಾರು ಆಸ್ಪತ್ರೆಗಳಿಗೆ ಸುತ್ತಾಡಿಸಿ ಬದುಕನ್ನು ನರಕವಾಗಿಸಿದ.
ಇಂತಹ ಸಂಕಟಕರ ಸಮಯದಲ್ಲಿ ಸಾಂತ್ವನಕ್ಕೆ ಬದುಕು ಮತ್ತೊಂದು ಜೀವವನ್ನು ಬಯಸುತ್ತದೆ. ನಿಶಕ್ತ ಬಳ್ಳಿ ನಿಂತುಕೊಳ್ಳಲು ಮರದ ಆಸರೆ ಬೇಡುವಂತೆ. ಅದು ಮಾನವನು ತನ್ನ ಅಸಹಾಯಕತೆಯಲ್ಲಿ ಬೇಡುವ ಪ್ರವೃತಿಯೂ ಹೌದು. ಆದರೆ ನಿಮಗೆ ಆಗಾಗಲಿಲ್ಲ. ನಿಮ್ಮ ಸಾಂತ್ವನವಾಗಬೇಕಿದ್ದ ಸಮುದಾಯದಲ್ಲಿ ನಿಮ್ಮನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ನಿಮ್ಮನ್ನು ತೆಗಳಿದವರು; ನಿಮಗೆ ಉರುಗೋಲು ಆಗುವುದಕ್ಕಿಂತ ನಿಮ್ಮ ಕಾಲು ಎಳೆದವರೇ ಹೆಚ್ಚು. ಅದಕ್ಕಿಂತ ಹೆಚ್ಚಾಗಿ, ನಿಮ್ಮ ಬದುಕನ್ನು ಬೆಂಕಿಯಾಗಿಸಿ ತಮ್ಮ ಬೇಳೆಯನ್ನು ಬೇಯಿಸಿಕೊಂಡ ಸಂಖ್ಯೆಗೇನು ಕಡಿಮೆಯಿಲ್ಲ. ಈ ಕಡೆ ಮನೆಯವರಿಂದ ಕೂಡ ನಿಮಗೆ ನೆಮ್ಮದಿ ಸಿಗಲಿಲ್ಲ. ಮನೆಯ ಅನೇಕ ಆಘಾತ ಚಂಡಮಾರುತಗಳು ನಿಮ್ಮನ್ನು ಅಪ್ಪಳಿಸಿ ನಿಮ್ಮಲ್ಲಿ ತಲ್ಲಣ ಸೃಷ್ಟಿಸಿದವು. ಆದರೆ ನೀವು ದೃತಿಗೆಡಲಿಲ್ಲ, ರೋಗಿಯೆಂದು ಸುಮ್ಮನೆ ಕೂರಲಿಲ್ಲ. ಸೇವೆಯ ಕೈಬಿಡಲಿಲ್ಲ. ಆ ರೋಗಕ್ಕೆ ಸೆಡ್ಡು ಹೊಡೆದು ಸೆಟೆದು ನಿಂತ ಅಂತಃಶಕ್ತಿ ನೀವು.
ನಿಮ್ಮ ಮನೆಯ ಆರ್ಥಿಕ ಸ್ಥಿತಿ ಉತ್ತುಂಗದ ತುತ್ತತುದಿಯಲ್ಲಿದ್ದಾಗ ಮನಸ್ಸು ಮಾಡಿದರೆ ನೀವು ಇತರರಂತೆ ಶ್ರೀಮಂತಿಕೆಯ ಸುಪತಿಗೆಯಲಿ ಇರಬಹುದಾಗಿತ್ತು. ಆದರೆ ಶ್ರಿಮಂತಿಕೆ ನಿಮ್ಮನ್ನು ಆರ್ಕಷಿಸಲಿಲ್ಲ. ಆರ್ಕಷಿಸಿದ್ದರೂ ಅದರ ಸಹವಾಸಕ್ಕೆ ಹೋಗದಿರುವ ಮನಸ್ಸು ನಿಮ್ಮದಾಯ್ತು. ಆ ಶ್ರಿಮಂತಿಕೆಯ ಬಂಡವಾಳ ಆಗಲೇ ನಿಮಗೆ ತಿಳಿದುಬಿಟ್ಟಿತ್ತೆನೋ! ನಿಮ್ಮ ಬದುಕನ್ನು ಸೇವೆಯ ಕಲ್ಲಿನ ಮೇಲೆ ತೇಯುತ್ತಾ ಇತರರಿಗೆ ಸುಗಂಧವಾಗಲು ಇಷ್ಟಪಟ್ಟಿರಿ. ಕಲ್ಲು ಹೊಡೆಯುವ ಕೈಗಳಿಗೆ ಹಣ್ಣುಕೊಡಲು ನಿರ್ಧರಿಸಿದ್ದೀರಿ. ಆ ನಿರ್ಧಾರದ ಫಲದ ಬುಟ್ಟಿಯೇ ಈ 25ವರ್ಷಗಳ ಸೇವೆಯ ಸಂಭ್ರಮ.
ನೀವು ಮಾಡಿರುವ ಸೇವೆ ಅಗಣ್ಯವಾದುದು. ತಮ್ಮ ನಿಷ್ಠೆ, ಶ್ರದ್ಧೆ, ಪ್ರಮಾಣಿಕತೆ, ಸರಳತೆ, ಆಧ್ಯಾತ್ಮಿಕತೆ ಜನಪರ ಜೀವಪೂರಕ ಕಾಳಜಿಗಳಿಂದ ಸಲ್ಲಿಸಿರುವ ಸೇವೆ ಎಂಥವರನ್ನು ಬೆರಗುಗೊಳಿಸುವಂತದ್ದು. ನಮ್ಮ ಕ್ಯಾಲ್ಕುಲೇಟರ್ಗಳ ಲೆಕ್ಕಕ್ಕೆ ಸಿಗದೆ ನಮ್ಮ ಅಸಂವೇದನತ್ವವನ್ನು ಬಡಿದು ಎಚ್ಚರಿಸುವಂತದ್ದು. ನಿಮ್ಮ ಸೇವಾ ಜೀವನ ನಮ್ಮ ಹೊಸ ಹೊಸ ಪ್ರಯತ್ನಗಳಿಗೆ, ಸೇವೆಯ ಉತ್ತುಂಗದ ತುದಿಗೆ ಏರಲು ಸ್ಪೂರ್ತಿಯಾಗುತ್ತಲೇ ನಮ್ಮಗೊಂದು ಮಾದರಿ ಮತ್ತು ಬದುಕಿನ ಅಳತೆ ಗೋಲಾಗಿ ನಿಂತುಬಿಡುವಂತದು. ನಿಮ್ಮದು ಕಣ್ಣು ಕೋರೈಸುವಂತಹ ಪ್ರಚಾರ, ತೋರಿಕೆ ಬಯಸುವ ಸೇವಾ ಸಾಧನೆಗಳಲ್ಲ. ಬದಲಾಗಿ ಅವು ಅಪ್ಪಟ ನಿಸ್ವಾರ್ಥ, ದಿಟ್ಟ, ಅರ್ಪಣಾ ಮನೋಭಾವಗಳಿಂದ ತುಂಬಿದ ಸದ್ದಿಲ್ಲದ ಪ್ರಚಾರ ಬಯಸದ ಎಲೆಮರೆಯ ಸೇವೆಗಳು. ನಿಮ್ಮಂತವರಿಂದಲೋ ಏನೋ.. ತುಂಬಿದ ಕೊಡ ತುಳುಕುವುದಿಲ್ಲ " ಎಂಬಂತಹ ಗಾದೆಗಳು ಹುಟ್ಟಿಕೊಂಡಿರುವುದು! ಖಲೀಲ್ ಗಿಬ್ರಾನ್ ಹೇಳುವಂತೆ "ಬೇರು- ಕೀರ್ತಿಯನ್ನು ನಿರ್ಲಕ್ಷಿಸಿದ ಹೂವು" ಆ ಬೇರು-ಹೂವು ನೀವು.
ನನ್ನ ಮತ್ತು ನಿಮ್ಮ ಒಡನಾಟ ಇತ್ತಿಚೀನದಲ್ಲ. ಅದು ಹತ್ತಾರು ವರ್ಷಗಳದ್ದು ಹಾಗೂ ಗಟ್ಟಿಯಾಗಿ ಬೇರೂರಿರುವಂತದ್ದು. ಹಳೆಯದಾದಷ್ಟು ರುಚಿಸುವ ವೈನಿನಂತದ್ದು (ದ್ರಾಕ್ಷರಸದಂತಹದು). ನಿಮ್ಮ ಹುರುಪು, ಕೌಶಲ್ಯ, ಬಹುಮುಖ ಪ್ರತಿಭೆ, ಪಾದರಸದಂತಹ ಲವಲವಿಕೆ, ಕಲ್ಲಿನ ಮೇಲೆ ಗುದ್ದಿ ನೀರು ಬರಿಸುವಂತಹ ಆತ್ಮವಿಶ್ವಾಸ, ನಗುತ್ತಾ ನಗಿಸುತ್ತಲೇ ವಿಜಯ ಸಾಧಿಸುವಂತಹ ಬುದ್ಧಿವಂತಿಕೆ, ಎಲ್ಲಕ್ಕೂ ಮೀರಿ ಜಟಿಲ ಮನಸ್ಸನ್ನು ತಿಳಿಗೊಳಿಸುವ ನಿಮ್ಮ ಹಾಸ್ಯಪ್ರಜ್ಞೆ ನನ್ನನ್ನು ಮೂಕವಿಸ್ಮಿತನಾಗಿಸಿ ನಿಮ್ಮ ಅಭಿಮಾನಿಯಾಗಿಸಿಬಿಟ್ಟಿದೆ. ಅನುಕರಿಸಲು ಒಂದು ಉತ್ತಮ ಮನುಷ್ಯನನ್ನು ನಿಮ್ಮ ಮೂಲಕ ನನಗೆ ಕೊಟ್ಟಿದೆ ಎಂದರೆ ಅತಿಶಯೋಕ್ತಿಯಾಗಲಾರದು. ನೀವು ಸಹಾನುಭೂತಿಯುಳ್ಳ ಪ್ರೀತಿಪೂರಿತವಾದ ಹೃದಯದ ಮನುಷ್ಯ. ಯಾವುದೇ ಕೆಲಸವನ್ನು ಕೈಗೊಂಡರೂ ಮನಸ್ಸು, ಹೃದಯ ಸ್ವರ್ವಸ್ವವನ್ನು ಆ ಕೆಲಸಕ್ಕೆ ತೊಡಗಿಸಿಬಿಡುವ ಯೋಗಿ ನೀವು. ಹೃದಯ ದೃಢವಾಗಿದ್ದರೆ ಸಂತೆಯಲ್ಲಿ ಆನೆಯನ್ನು ಕೂಡ ಎದುರಿಸಬಲ್ಲೇ ಎನ್ನುವ ಆತ್ಮಶಕ್ತಿ ನಿಮ್ಮದು. ನಿಮ್ಮಲ್ಲಿರುವ ಅಪ್ಪನ ವ್ಯವಹಾರಿಕ, ಲೆಕ್ಕಚಾರಗಳ ಜ್ಞಾನ, ಅಮ್ಮನ ಭಾವಣಿಕೆ ಹೌದು ಅವು ಅಪ್ಪ ಅಮ್ಮ ನಿಮ್ಮಲ್ಲಿ ಹಾಸುಹೊಕ್ಕಿದ್ದಾರೆ ಎಂಬ ಭಾವನೆ ನಮಗೆ ಮೂಡಿಸದೇ ಇರುವುದಿಲ್ಲ.
ಈ ಒಂದು ಸಂತೋಷದ ಗಳಿಗೆಯಲ್ಲಿ ನಿಮ್ಮ ಮನ ಧನ್ಯತೆಯಿಂದ ಭಗವಂತನ ಸ್ತುತಿಗೈಯುವಾಗ, ನಿಮ್ಮ ಪ್ರಮಾಣಿಕತೆಗೆ, ಉದಾರತೆಗೆ ಹಾಗೂ ನಿಮ್ಮ ಸೇವಾ ಕಾರ್ಯಗಳಿಗೆ ನಿಮ್ಮನ್ನು ವಂದಿಸುತ್ತೇನೆ. ನಿಮ್ಮ ಆಯಸ್ಸು ಹೆಚ್ಚಲಿ. ಬದುಕುಸಂತೋಷದಿಂದ ಕೂಡಿರಲಿ. ನಿಮ್ಮ ಕನಸ್ಸುಗಳಿಗೆ ಬಣ್ಣ ಬರಲಿ. ನಿಮ್ಮ ಸೇವಾ ಬದುಕು ನಮ್ಮ ಜನರ ಬದುಕಿಗೆ ಸಂತೋಷ ಮತ್ತು ಸಂತೃಪ್ತಿಗಳನ್ನು ಯಥೇಚ್ಛವಾಗಿ ತುಂಬಿ ತರಲಿ ಎಂದು ಹಾರೈಸುತ್ತೇನೆ. ಕೊನೆಗೆ, ನಿಮ್ಮ ಉದಾರತೆ ಮತ್ತು ಸೇವೆಯತೀವ್ರತೆಯ ಮನಸ್ಸಿನ ಶರವೇಗದ ಜತೆಗೆ ಹೆಜ್ಜೆ ಹಾಕಲು ನಿಮ್ಮ ಅಶಕ್ತ ಕಾಲುಗಳು ಸೋತಾಗ ನಿಮ್ಮ ಮುಖದಲ್ಲಿ ಹುಟ್ಟುವಭಾವನೆಗಳನ್ನು ಗಮನಿಸಿದಾಗೆಲ್ಲಾ ನನಗೆ ಜಾನ್ ಮಿಲ್ಟನ್ ಬರೆದ On His blindness ಎಂಬ ಕವಿತೆ ನೆನಪಿಗೆ ಬರುತ್ತದೆ. ತನ್ನೊಳಗಿನ ಸಾತ್ವಿಕ ಸಂಘರ್ಷಕ್ಕೆ ಮಾತಿನ ರೂಪಕೊಟ್ಟ ಕವಿತೆ ಅದು. ಕವಿ ತನ್ನ ಬದುಕಿನ ನಡು ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಳ್ಳುತ್ತಾನೆ. ತನಗೆ ಆಕಸ್ಮಿಕವಾಗಿ ಅಂಟಿಕೊಳ್ಳುವ ಕುರುಡುತನ ಬಗ್ಗೆ ಪರಿತಪಿಸುವ ಭಾವನಾತ್ಮಕ ಚಿತ್ರಣವೇ ಈ ಕವಿತೆ. ಆದರೆ ಕವಿತೆ ಪರಿತಾಪದಲ್ಲಿ ಕೊನೆಗೊಳ್ಳುವುದಿಲ್ಲ. ಅಷ್ಟಕ್ಕೆ ಮುಗಿದಿದ್ದರೆ ಕವಿತೆಯಲ್ಲಿ ಅಂತಹ ವಿಶೇಷತೆ ಇರುತ್ತಿರಲಿಲ್ಲ. ವಿಶೇಷತೆ ಇರುವುದೇ ಕವಿತೆಯ ಕೊನೆಯ ಸಾಲುಗಳಲ್ಲಿ. ಅವನ ಪರಿತಾಪದಲ್ಲಿ "ತಾಳ್ಮೆ" ಮಾತನಾಡಿ ಅವನ ಬಿರುಗಾಳಿಯ ಮನವನ್ನು ಶಾಂತಪಡಿಸುತ್ತದೆ. ತನ್ನ ಕುರುಡತನದಿಂದಾಗಿ ನಾನು ದೇವರಿಗೆ ಸೇವೆ ಮಾಡಲಾಗುತ್ತಿಲ್ಲ ಎಂಬ ವ್ಯಥೆಯಿಂದ ಕಂಗೆಟ್ಟ ಕವಿಗೆ, " ಮಾನವನಿಂದ ಸೇವೆ ಮಾಡಿಸಿಕೊಳ್ಳುವ ದಾರಿದ್ರ್ಯತೆ ಭಗವಂತನಿಗಿಲ್ಲ. ಅವನ ಸೇವೆಗಂತಲೇ ಅಗಣಿತ ದೇವದೂತರಿದ್ದಾರೆ. ನಿನಗೆ ಕೊಟ್ಟಿರುವ ಕಠಿಣವಲ್ಲದ ನೊಗವನ್ನು ಶಪಿಸದೆ, ಯಾರನ್ನು ದೂರದೆ ಸಮಚಿತ್ತದಿಂದ ನಿಷ್ಠೆಯಿಂದ ಹೊತ್ತು ನಡಿ ಅದೇ ನೀನು ದೇವರಿಗೆ ಮಾಡುವ ದೊಡ್ಡ ಸೇವೆ" ಎಂದು ಅವನ ತಾಳ್ಮೆ ಸ್ವಷ್ಟಪಡಿಸುತ್ತದೆ. (God doth not need
Either man’s work or his own gifts, who best
Bear his milde yoak, they serve him best ).
ಭಗವಂತನಿಗಾಗಿ ಕೇವಲ ನಿಂತು ಕಾಯುವವರು ಕೂಡ ಭಗವಂತನ ಸೇವೆಮಾಡುವವರೇ (They also serve who only stand and waite ) ಎಂಬ ಸಾಲಿನೊಂದಿಗೆ ಕವಿತೆ ಕೊನೆಗೊಳ್ಳುತ್ತದೆ.
ನಿಮ್ಮ ಅನಾರೋಗ್ಯದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ದೇವರು ಕೊಟ್ಟ ಈ ಅನಾರೋಗ್ಯದ ಶಿಲುಬೆಯನ್ನು ಸಮಚಿತ್ತದಿಂದ ಹೊತ್ತು ನಡೆಯುವುದೇ ದೇವರಿಗೆ ನೀವು ಮಾಡುವ ದೊಡ್ಡ ಸೇವೆ. ನಿಮಗೆ ಒಳ್ಳೆಯದಾಗಲಿ, ಧನ್ಯವಾದಗಳು.
ಇಂತಿ ನಿಮ್ಮ
ಆನಂದ್
No comments:
Post a Comment