ಭಾರತ ಎಂಬ ಹೆಸರು ಕೇಳಿದೊಡೆ ಹಲವಾರು ಅಂಶಗಳು ನಮ್ಮ ಕಣ್ಣಮುಂದೆ ಬರುತ್ತವೆ. ಭಾರತ ವೈವಿಧ್ಯತೆಯನ್ನು ಮೈಗೂಡಿಸಿಕೊಂಡಿರುವ ದೇಶ.ವೈವಿಧ್ಯತೆಯ ತವರೂರು, ಸಂಸ್ಕೃತಿಗಳ ಸಂಗಮ, ಹಲವು ಧರ್ಮಗಳ ಸಮಾಗಮ ಮತ್ತು ಸುಮಾರು3000 ಭಾಷೆಗಳ ಉಗಮಸ್ಥಾನ. ಹೀಗೆ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ನಮ್ಮ ಭಾರತ.
ನಮ್ಮ ದೇಶದ ಇನ್ನೊಂದು ಹೆಮ್ಮೆಯ ವಿಷಯವೇನೆಂದರೆ,ಇಡೀ ಪ್ರಪಂಚದಲ್ಲಿಯೇ ಅತೀ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ಏಕೈಕ ರಾಷ್ಟ್ರ ಈ ನಮ್ಮ ಭಾರತ. ಹೀಗೆ ಹಲವಾರು ವೈವಿಧ್ಯತೆಗಳನ್ನು ತನ್ನಒಡಲಿನಲ್ಲಿ ಇರಿಸಿಕೊಂಡಿರುವ ನಮ್ಮ ಭಾರತ ತನ್ನ ಇರುವಿಕೆಯನ್ನು ಇಡೀ ಜಗತ್ತಿಗೆ ತೋರಿಸುತ್ತಿದೆ.
ಜಗತ್ತಿನ ಅತೀ ಬಲಶಾಲಿರಾಷ್ಟ್ರಗಳಲ್ಲಿ ನಮ್ಮ ದೇಶವೂ ಒಂದು. ಪ್ರಸ್ತುತ 132ಕೋಟಿ ಜನಸಂಖ್ಯೆಯನ್ನು ಹೊಂದಿ ಅಭಿವೃದ್ಧಿಯೆಡೆಗೆ ಸಾಗುತ್ತಿದೆ. ಅಭಿವೃದ್ಧಿಯನ್ನೇ ಗುರಿಯಾಗಿಸಿ ಕೊಂಡು ಜಗತ್ತಿನ ಬಲಿಷ್ಠರಾಷ್ಟ್ರಗಳೊಂದಿಗೆ ತಾನೂ ಕೂಡ ಬಲಶಾಲಿ ಎಂಬುದನ್ನು ಸಾರಿಹೇಳುತ್ತಿದೆ.ಇತ್ತೀಚೆಗಷ್ಟೇ ಚಂದ್ರಯಾನದ ಮೂಲಕ ಸುದ್ದಿಮಾಡಿದೆ. ಹೀಗೆ ಹತ್ತು ಹಲವಾರು ಅಭಿವೃದ್ಧಿಗಳೊಂದಿಗೆ ತನ್ನ ಉತ್ತಮ ಭವಿಷ್ಯವನ್ನು ರೂಪಿಸುವತ್ತ ಹೆಜ್ಜೆ ಇಟ್ಟಿದೆ. ಹೀಗೆ ಹೆಜ್ಜೆ ಇಡುತ್ತಿರುವ ಭಾರತದೇಶಕ್ಕೆ72ರ ಹರೆಯ. ತನ್ನ 72ನೇಯ ಸ್ವಾತಂತ್ರ್ಯದಿನಾಚರಣೆಯನ್ನು ಆಚರಿಸುತ್ತಾ ತಾನೂ ಕೂಡ ಅಭಿವೃದ್ಧಿಯ ನೇತಾರ ಎಂಬುದನ್ನು ಸ್ಪಷ್ಟಪಡಿಸಿದೆ. ತಂತ್ರಜ್ಞಾನದಲ್ಲಿ ತನ್ನದೇ ಆದ ಹೊಸತನವನ್ನು ತೋರಿಸುತ್ತಿದೆ. ಕೈಗಾರಿಕಾಕ್ಷೇತ್ರದಲ್ಲಿ ತನ್ನಛಾಪನ್ನು ಮೂಡಿಸುತ್ತಿದೆ. ವಿದ್ಯಾಭ್ಯಾಸದಲ್ಲಿಯೂ ಕೂಡ ತಾನೇನೂ ಕಡಿಮೆಯಿಲ್ಲ ಎಂಬ ಸತ್ಯವನ್ನು ಸಾರುತ್ತಿದೆ.
ಮುಖ್ಯವಾಗಿ ಮಹಿಳೆಯರಿಗೂ ಕೂಡ ಮುಖ್ಯ ಭೂಮಿಕೆಗಳಲ್ಲಿ ತಮ್ಮನ್ನೇ ತೊಡಗಿಸಿಕೊಳ್ಳಲು ಅವಕಾಶವನ್ನು ನೀಡುತ್ತಿದೆ. ಹೀಗೆ ಪುರುಷ ಮತ್ತು ಮಹಿಳೆ ಇಬ್ಬರೂ ಸಮಾನರು ಎಂಬ ಅಂಶವನ್ನು ಒತ್ತಿಹೇಳುತ್ತಿದೆ.ಇದಕ್ಕೆ ಪೂರಕವೆಂಬಂತೆ ನಮ್ಮ ದೇಶದ ವಿವಿಧ ಸ್ತರಗಳಲ್ಲಿ ಮಹಿಳಾ ಕಣ್ಮಣಿಗಳನ್ನು ನಾವು ಕಾಣಬಹುದಾಗಿದೆ. ದೇಶದ ಪ್ರಪ್ರಥಮ ಹಣಕಾಸು ಸಚಿವೆಯಾಗಿ ಶ್ರೀಮತಿ ನಿರ್ಮಲಾಸೀತಾರಾಮನ್ ಅವರು ಸೇವೆಸಲ್ಲಿಸುವುದರ ಮೂಲಕ ಮಹಿಳೆಯರು ಇನ್ನೆಂದೂ ಅಬಲರಲ್ಲ ಬದಲಾಗಿ ಎಲ್ಲಾ ರೀತಿಯಲ್ಲೂ ಸಬಲರಾಗಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಯಾವ ದೇಶದಲ್ಲಿ ಮಹಿಳೆಯರು ಕೇವಲ ಗೃಹಿಣಿಯಾಗಿದ್ದಳೋ ಇಂದು ಅದೇ ದೇಶದಲ್ಲಿ ಮಹಿಳೆಯರು ತಾವೂ ಕೂಡ ಪುರುಷರಷ್ಟೇ ಸಮಾನರು ಎಂಬ ಸತ್ಯವನ್ನು ತಮ್ಮ ಸಾಧನೆಗಳ ಮೂಲಕ ಮಾಡಿತೋರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತದ ಕ್ರೀಡಾಶಕ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳಿಸುತ್ತಿರುವ ಹಿಮಾದಾಸ್ ಇವರು ಮೊನ್ನೆ ಮೊನ್ನೆ ತಾನೇ ಸತತವಾಗಿ ಓಟದ ಸ್ಪರ್ಧೆಯಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದ ಸಾಧನೆ ಮಾಡಿದರು. ದ್ಯುತಿಚಾಂದ್ ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚಿನ್ನದಪದಕದ ಸಾಧನೆ ಮಾಡಿದರು. ಭಾರತಿಯ ಮಹಿಳಾ ಕ್ರಿಕೆಟ್ ತಂಡವು ಹೋದ ವರ್ಷ ನಡೆದ ವಿಶ್ವಕಪ್ ಕ್ರಿಕೆಟ್‍ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ದೇಶದ ಕೀರ್ತಿಯನ್ನು ಹೆಚ್ಚಿಸಿದರು. ಈ ಮೇಲಿನ ಉದಾಹರಣೆಗಳು ನಮ್ಮ ದೇಶವು ಮಹಿಳೆಯರಿಗೂ ಕೂಡ ಆದ್ಯತೆಯನ್ನು ಕೊಡುತ್ತದೆ ಎಂಬುವುದನ್ನು ತೋರಿಸುವಂತೆಮಾಡಿದೆ.
ಮೇಲಿನ ಅಂಶಗಳೆಲ್ಲವೂ ನಮ್ಮ ದೇಶದ ಅಭಿವೃದ್ಧಿಯ ಬಗ್ಗೆ ಬೆಳಕುಚೆಲ್ಲಿದರೆ,ಇನ್ನೂ ಅಭಿವೃದ್ಧಿ ಕಾಣದಅಂಶಗಳು ಹಲವಾರು. ಮುಖ್ಯವಾಗಿ ತನ್ನ ಒಡಲಲ್ಲಿ ಹಲವಾರು ಸಮಸ್ಯೆಗಳ ಹಾವಳಿಯನ್ನೇಇರಿ ಸಿಕೊಂಡಿದೆ. ನಮ್ಮ ದೇಶದ ರಾಜಕಾರಣಿಗಳು ಮತದಾರನನ್ನು ಮರೆತು ಕುರ್ಚಿ ಆಸೆಗಾಗಿ ಪ್ರಜಾಪ್ರಭುತ್ವವನ್ನೇ ಕೊಲೆ ಮಾಡುತ್ತಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರಗಳು ದಿನೇದಿನೇ ಹೆಚ್ಚುತ್ತಾ, ಭಾರತವು ಎಷ್ಟರ ಮಟ್ಟಿಗೆ ಮಹಿಳೆಯರಿಗೆ ರಕ್ಷಣೆಯನ್ನೀಯುತ್ತಿದೆ ಎಂಬ ಪ್ರಶ್ನೆಗೆ ಉತ್ತರವೇ ಇಲ್ಲವಾಗಿದೆ. ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ.ಬಡವರು ಬಡವರಾಗಿಯೇ ಉಳಿದು, ಶ್ರೀಮಂತರು ಶ್ರೀಮಂತರಾಗಿಯೇ ಮುಂದುವರಿಯುತ್ತಿದ್ದಾರೆ. ನಿಜವಾದ ಅನ್ನದಾತರಾದ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದನ್ನು ಬಿಟ್ಟು, ಅವರೆಲ್ಲರೂ ಅದರಲ್ಲಿಯೇ ಕೈತೊಳೆಯುವಂತೆ ಮಾಡಿದೆ. ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳು ಭಾರತದ ಜನರು ಎಷ್ಟರ ಮಟ್ಟಿಗೆ ಬುದ್ಧಿಜೀವಿಗಳು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿವೆ. ಮಾನವ ಮಾನವನನ್ನು ಹಿಂಸೆಗೊಳಿಸಬಾರದು ಎಂಬ ಕನಿಷ್ಟ ಜ್ಞಾನವೂ ಕೂಡ ಇಲ್ಲವಾಗಿದೆ.ಇವುಗಳಿಗೆಲ್ಲಾ ಕೊನೆಯೆಂದು?
ಇಷ್ಟೆಲ್ಲಾ ಸಕರಾತ್ಮಕ ಮತ್ತು ನಕರಾತ್ಮಕ ಅಂಶಗಳು ಒಟ್ಟೊಟ್ಟಿಗೆ ನಮ್ಮ ದೇಶದಲ್ಲಿ ಕಂಡು ಬರುತ್ತಿರುವಾಗ ಭಾರತೀಯ ಪ್ರಜೆಗಳಾದ ನಾವೆಲ್ಲರೂ ನಮ್ಮ ಸಂಕುಚಿತ ಮನೋಭಾವನೆಯನ್ನು ತೊರೆದು ಸುಮನಸ್ಸುಳ್ಳವರಾಗಿ, ವಿಶಾಲ ಮನೋಭಾವನೆಯ ಮೂಲಕ ಪರಸ್ಪರ ಸಹೋದರ ಮತ್ತು ಸಹೋದರಿಯರಾಗಿ ಬಾಳಬೇಕಾಗಿದೆ. ಭ್ರಾತೃತ್ವದಲ್ಲಿ ಬಾಳುತ್ತಾ, ಮಹಿಳೆಯರನ್ನು ಗೌರವಿಸುವ ಮತ್ತು ಶಾಂತಿಯ ರಾಯಭಾರಿಗಳಾಗಿ ಬದುಕಬೇಕಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಮೂಡಿಸುವುದೇ ನಮ್ಮ ದೇಶದ ಮೂಲ ಧ್ಯೇಯವಾಗಿ ಅದು ದೇಶದೆಲ್ಲೆಡೆ ಕಂಗೊಳಿಸಬೇಕಾಗಿದೆ. ಇದನ್ನರಿತು ನಾವು ನಿಜವಾದ ಭಾರತೀಯರಾಗಿ ಬದುಕಬೇಕಾಗಿದೆ. ಇದೆಲ್ಲಾ ಸಾಧ್ಯವಾಗುವುದು ನಾವು ಮೊದಲು ಮನುಷ್ಯರೆಂಬುದನ್ನು ಅರಿತಾಗ. ಈ ಸತ್ಯತೆಯನ್ನು ಅರಿತು ನಮ್ಮ ದೇಶದ ಒಳಿತಿಗಾಗಿ ಶ್ರಮಿಸೋಣ.
ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
********
No comments:
Post a Comment