ಆಂತರಿಕ ಬದುಕು
- ಫಾ. ಪಿ ವಿಜಯ ಕುಮಾರ್, ಬಳ್ಳಾರಿ
- ಫಾ. ಪಿ ವಿಜಯ ಕುಮಾರ್, ಬಳ್ಳಾರಿ
ದುರಸ್ತಿ ಮತ್ತು ನವೀಕರಣ ಒಂದು ನಿರಂತರ ಪ್ರಕ್ರಿಯೆ. ಈ ಪ್ರಕ್ರಿಯೆಗೆ ಅಂತ್ಯವೇ ಇಲ್ಲ! ಇದು ಸ್ಥಗಿತಗೊಂಡರೆ ಹೊಸತನವೇ ಇರುವುದಿಲ್ಲವೆಂದರೆ ಆಶ್ಚರ್ಯವೇನಿಲ್ಲ. ಆದರೆ ಮಾನವರ ಹೊರ ಜಗತ್ತು ದುರಸ್ತಿಯಾದರೆ ಅಥವ ನವೀಕರಣಗೊಂಡರೆ ಸಾಲದು. ಮಾನವರ ಆಂತರಿಕ ಬದುಕು ದುರಸ್ತಿಗೊಳ್ಳಬೇಕು ಹಾಗೂ ನವೀಕರಣಗೊಳ್ಳಬೇಕು. ಈ ಪ್ರಕ್ರಿಯೆ ನಿರಂತರವಾಗಿ ಸಾಗಬೇಕು, ಸ್ಥಗಿತಗೊಳ್ಳಲೇಬಾರದು.
ನಮ್ಮ ಈ ಭವ್ಯ ಭೂಮಿ ಬಿಡುವಿಲ್ಲದೇ ಸುತ್ತುತ್ತಲೇ ಇದೆ, ಅದು ಎಂದೂ ವಿಶ್ರಾಂತಿ ಪಡೆಯುವುದಿಲ್ಲ. ಅದು ಒಂದು ಕ್ಷಣ ನಿಂತರೆ ಏನಾಗಬಹುದೆಂದು ಊಹಿಸಲು ಸಾಧ್ಯವಿಲ್ಲ. ಒಂದು ವೇಳೆ ಅದು ಕ್ಷಣಕಾಲ ನಿಂತರೂ ಜೀವ ಜಗತ್ತು ತಲ್ಲಣಗೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಹಾಗೆಯೇ ನಮ್ಮ ಬದುಕಿನ ದುರಸ್ತಿ ಮತ್ತು ನವೀಕರಣಪ್ರಕ್ರಿಯೆ ಸ್ವಲ್ಪವಿರಾಮ ಪಡೆದರೂ ಜೀವನ ಸ್ಥಿಮಿತತೆಯನ್ನು ಕಳೆದುಕೊಂಡು ವಿನಾಶದೆಡೆ ಮುಖಮಾಡಬಹುದು.
ಇಂದು ನಮ್ಮ ಮಾನವ ಬದುಕು ಹಸನಾಗಬೇಕಾದರೆ ಅದರ ದುರಸ್ತಿ ಮತ್ತು ನವೀಕರಣ ಕಾರ್ಯ ತ್ವರಿತಗತಿಯಲ್ಲಿ ಸಾಗಬೇಕು. ಇಂದು ಸಮಾಜದಲ್ಲಿ ಇಂತಹ ಕಾರ್ಯ ಸಕಾರಾತ್ಮಕವಾಗಿ ನಡೆಯುತ್ತಿಲ್ಲವೆಂದು ಹೇಳಲು ಬಹಳ ದುಃಖವಾಗುತ್ತದೆ. ಮಾನವರು ಇಂದು ತಮ್ಮ ಸ್ವಾರ್ಥ ಸಾಧನೆಗಾಗಿ ಏನು ಮಾಡಲೂ ಸಿದ್ದರಾಗಿದ್ದಾರೆ. ತಮ್ಮತನವನ್ನು ಮರೆತು ಸ್ವಾರ್ಥದ ಮಡುವಿನಲ್ಲಿ ಮುಳುಗಿ ಕತ್ತಲೆಯೇ ಬೆಳಕೆಂಬ ಗುಂಗಿನಲ್ಲಿದ್ದಾರೆ. ಕಪ್ಪೇಬಿಳುಪೆಂದು ವಾದಿಸುತ್ತ ತಾವೇ ಜ್ಞಾನಿಗಳೆಂಬ ಭ್ರಮೆಯಲ್ಲಿ ತೇಲುತ್ತಿದ್ದಾರೆ. ಇಂತಹವರ ಬದುಕು ದುರಸ್ತಿಗೊಂಡು ಹಸನಾಗದಿದ್ದಲ್ಲಿ ನವೀಕರಣವಾಗುವುದಾರೂ ಹೇಗೆ?
ಇಂದು ಮಾನವನ ಆತ್ಮಸಾಕ್ಷಿ ಸತ್ತು ಹೋಗಿದೆ. ಅಂತರಾತ್ಮದಲ್ಲಿ ಸತ್ಯದ ಬೆಳಕು ನಂದಿಹೋಗುತ್ತಿದೆ. ಮಾನವ ದಾರಿತಪ್ಪಿ ಪರಿತಪಿಸುತ್ತಿದ್ದಾನೆ. ಕತ್ತಲೆಯ (ಪಾಪದ) ಕೂಪದಲ್ಲಿ ಮುಳುಗಿಹೋಗುತ್ತಿದ್ದಾನೆ. ಅನ್ಯಾಯ, ಅಧರ್ಮ, ಅಕ್ರಮ ಕಾರ್ಯಗಳಲ್ಲಿ ಮಗ್ನನಾಗಿದ್ದಾನೆ. ವಾಮ ಮಾರ್ಗವೇ ಸರಿಯಾದ ಮಾರ್ಗವೆಂಬ ಭ್ರಮೆಯಲ್ಲಿದ್ದಾನೆ. ಒಬ್ಬರನ್ನು ಮಟ್ಟಹಾಕಿ ತಾನು ಮೇಲೆ ಬರುವುದೇ ಸರಿಯಾದ ಕ್ರಮವೆಂದು ಪರಿಗಣಿಸುತ್ತಿದ್ದಾನೆ. ಹೀಗೇ ಮುಂದುವರಿದರೆ ಮಾನವನ ಬದುಕೇ ದುಸ್ಥರವಾಗಿ ಮಾನವತೆ ಮರೆತು ಅಸುರನಾಗುವುದರಲ್ಲಿ ಸಂದೇಹವೇ ಇಲ್ಲ.
ದೇವರು ಮಾನವರನ್ನು ಒಂದು ಉತ್ತಮ ಬದುಕಿಗೆ ರೂಪಿಸಿದ್ದಾರೆಯೇ ಹೊರತು ಸ್ವಾರ್ಥದ ಬದುಕಿಗಲ್ಲ. ನಿಸ್ವಾರ್ಥ ಬದುಕು ಸದಾ ಸಮಾಜ ಮುಖಿಯಾಗಿರುತ್ತದೆ. ಪರಸ್ನೇಹದಿಂದ ಕೂಡಿರುತ್ತದೆ. ಪರಹಿತವನ್ನು ಬಯಸುತ್ತದೆ.
ಅದನ್ನೇ ಸಂತ ಪೌಲನು "ಸ್ವಾರ್ಥ ಸಾಧನೆಗಾಗಲಿ, ಡಂಭಾಚಾರಕ್ಕಾಗಲಿ ಏನನ್ನೂ ಮಾಡಬೇಡಿ. ಪರಸ್ಪರ ನಮ್ರತೆಯಿಂದ ನಡೆದುಕೊಳ್ಳಿ; ಇತರರು ನಿಮಗಿಂತಲೂ ಶ್ರೇಷ್ಠರೆಂದು ಪರಿಗಣಿಸಿರಿ. ಸ್ವಹಿತವನ್ನೇ ಗಮನಿಸದೆ ಪರರ ಹಿತವನ್ನೂ ಬಯಸಿರಿ. ಕ್ರಿಸ್ತ ಯೇಸುವಿನಲ್ಲಿರುವ ಮನೋಭಾವ ನಿಮ್ಮಲ್ಲೂ ನೆಲೆಸಿರಲಿ" (ಫಿಲಿಪ್ಪಿಯರಿಗೆ:3-5). ಎನ್ನುತ್ತಾನೆ. ಹಾಗೆಯೇ ರೋಮನರಿಗೆ ಬರೆಯುತ್ತ "ನಿಮ್ಮ ಪ್ರೀತಿ ನಿಷ್ಕಪಟವಾಗಿರಲಿ. ಕೆಟ್ಟದನ್ನು ದ್ವೇಷಿಸಿರಿ, ಸೋದರ ಭಾವನೆಯಿಂದ ಒಬ್ಬರನ್ನೊಬ್ಬರು ಹೃತ್ಪೂರ್ವಕವಾಗಿ ಪ್ರೀತಿಸಿರಿ, ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ" (ರೋಮನರಿಗೆ:9-10) ಎನ್ನುತ್ತಾನೆ.
ಸ್ವಾರ್ಥ ಬಿಟ್ಟು ನಿಸ್ವಾರ್ಥಿಯಾಗಿ, ದ್ವೇಷ ಬಿಟ್ಟು ಪ್ರೀತಿಯಲ್ಲಿ ನೆಲೆ ನಿಲ್ಲಬೇಕಾದರೆ ಮಾನವರಾದ ನಾವು ಕ್ರಿಸ್ತಾಂಬರರಾಗಬೇಕು. ನಮ್ಮ ಸ್ವಂತ ಶಕ್ತಿಯಿಂದ ನಮ್ಮನ್ನು ನಾವು ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲ. ಪವಿತ್ರಾತ್ಮರ ಶಕ್ತಿ, ಕ್ರಿಸ್ತರ ಪ್ರಸನ್ನತೆ ಹಾಗೂ ತಂದೆಯ ಅನುಗ್ರಹ ನಮಗೆ ಬೇಕೇ ಬೇಕು. ಅವರ ಪ್ರಸನ್ನತೆಯಿಂದ ನಮ್ಮಲ್ಲಿ ದೈವೀಕ ಜ್ಞಾನ ವೃದ್ಧಿಯಾಗಿ ಸ್ವಾರ್ಥಾಲೋಚನೆಗಳು ನಿಧಾನವಾಗಿ ದಮನಗೊಳ್ಳಲಾರಂಭಿಸುತ್ತವೆ. ಅಲ್ಲಿ ನಿಸ್ವಾರ್ಥ ಚಿಗುರಲಾರಂಭಿಸುತ್ತದೆ.
ಅದನ್ನು ಮಾನವರು ನಿರಂತರವಾಗಿ ಹಾಗೂ ಜೋಪಾನವಾಗಿ ಪೋಷಿಸಿ ಬೆಳೆಯಲು ಅನುವು ಮಾಡಿಕೊಟ್ಟಲ್ಲಿ ಪರಸ್ನೇಹ ಹಾಗೂ ಪರಪ್ರೀತಿಯ ಕಾರಂಜಿಗಳು ಚಿಮ್ಮಲು ಪ್ರಾರಂಭಿಸುತ್ತವೆ. ಇದು ಸ್ಥಿರವಾಗಿ ಸಾಗಬೇಕಾದರೆ ಮಾನವರು ಕ್ರಿಸ್ತನಲ್ಲಿ ಸ್ಥಿರವಾಗಿ ನೆಲೆ ನಿಲ್ಲಬೇಕು. ಇದನ್ನೇ ಯೊವಾನ್ನನು "ನೀವು ನನ್ನಲ್ಲಿ ನೆಲೆಗೊಂಡಿರಿ, ಆಗ ನಾನು ನಿಮ್ಮಲ್ಲಿ ನೆಲೆಗೊಂಡಿರುವೆನು. ಕವಲು ಮೂಲಬಳ್ಳಿಯಲ್ಲಿ ಒಂದಾಗಿ ನೆಲೆಸದಿದ್ದರೆ ತನ್ನಷ್ಟಕ್ಕೆ ತಾನೇ ಫಲ ಕೊಡಲಾಗದು" (ಯೊವಾನ್ನ 15:4) ಎಂದು ಪ್ರಭುವಿನ ಪ್ರಸನ್ನತೆಯ ಮಹತ್ವವನ್ನು ವಿವರಿಸಿದ್ದಾನೆ. ನಮ್ಮ ಆಂತರಿಕ ಬದುಕಿನ ದುರಸ್ತಿ ಹಾಗೂ ನವೀಕರಣಕ್ಕೆ ತ್ರೈಏಕನ ಅನುಗ್ರಹ ಬೇಕೇ ಬೇಕು. ಆಗ ಆಧ್ಯಾತ್ಮಿಕ ಬೆಳವಣಿಗೆ ಸಕಾರಾತ್ಮಕವಾಗಿ ಪ್ರಗತಿಯಾಗಿ ಮಾನವ ಪಾವನನಾಗುತ್ತಾನೆ. ಸ್ವಾರ್ಥ ಕಳಚಿ ನಿಸ್ವಾರ್ಥ ಬದುಕು ಆರಂಭವಾಗುತ್ತದೆ.
*********
No comments:
Post a Comment