Wednesday, 7 August 2019

ಸ್ಮರಣೆಯಿಂದ `ಹಬ್ಬ'ಕ್ಕೆ ಭಾಜನಳಾದ ಮಗ್ದಲಿನ ಮರಿಯ - -ಫ್ರಾನ್ಸಿಸ್ ನಂದಗಾಂವ

ದೇವಪುತ್ರರಾದ ಯೇಸುಕ್ರಿಸ್ತರೇ, ಸಂತ ಮರಿಯ ಮಗ್ದಲೇನಮ್ಮನವರನ್ನು ಸೈತಾನನ ಹಿಡಿತದಿಂದ ಬಿಡಿಸಿ, ಅವರನ್ನು ಪಾಪ ಜೀವನದಿಂದ ವಿಮುಕ್ತಗೊಳಿಸಿದಿರಿ. ಅವರು, ನಿಮ್ಮ ಪ್ರೀತಿ ಮತ್ತು ದಯೆಗೆ ಪಾತ್ರರಾಗಿ ನಿಮ್ಮನ್ನು ಹಿಂಬಾಲಿಸಲು ನಿರ್ಧರಿಸಿದರು. ಆ ಸಂತರು ನಿಮ್ಮ ಯಾತನೆ ಮತ್ತು ಸೇವೆಯಲ್ಲಿ ಪಾಲ್ಗೊಂಡು, ನಿಮ್ಮ ಪುನರುತ್ಥಾನದ ಸಂದೇಶವನ್ನು ನಿಮ್ಮ ಶಿಷ್ಯರಿಗೆ ಆಸಕ್ತಿಯಿಂದ ತಿಳಿಯಪಡಿಸಿದರು. ನಾವು ಸಹ, ನಿಮ್ಮ ಕೃಪೆಯಿಂದ ದುಷ್ಟ ಶಕ್ತಿಯಿಂದ ಬಿಡುಗಡೆ ಹೊಂದಿ, ನಿಮಗೆ ಸತತ ಸೇವೆ ಮಾಡಲು ಮತ್ತು ಪ್ರಭು ಯೇಸುಕ್ರಿಸ್ತರ ಶುಭಸಂದೇಶಕ್ಕೆ ಸಾಕ್ಷಿಯಾಗಿ ಬಾಳಲು ವರವ ನೀಡಿರಿ. ಆಮೆನ್.
    ಇದು ಸಂತ ಮರಿಯ ಮಗ್ದಲೇನಮ್ಮಳ ಕುರಿತ ಪ್ರಾರ್ಥನೆ. ಅವಳನ್ನು ಮಗ್ದಲಿನ ಮರಿಯ ಎಂದೂ ಸಂಬೋಧಿಸಲಾಗುತ್ತದೆ. ಕಥೋಲಿಕ ಧರ್ಮಸಭೆಯ ಪಂಚಾಂಗದ ಪ್ರಕಾರ, ಪ್ರತಿವರ್ಷ ಜುಲೈ 22 ರಂದು ಸಂತ ಮರಿಯ ಮಗ್ದಲೇನಮ್ಮಳ ಸ್ಮರಣೆ ಮಾಡಲಾಗುತ್ತದೆ. ಕುಟುಂಬದ ದೊಡ್ಡ ಜಪದ ಪುಸ್ತಕದಲ್ಲಿನ ಕಥೋಲಿಕ ಧರ್ಮಸಭೆಯ ಪಂಚಾಂಗದಂತೆ, ಜುಲೈ ತಿಂಗಳಲ್ಲಿ ಹದಿನೈದು ಸಂತರುಗಳ ಸ್ಮರಣೆಯ ದಿನಗಳಿವೆ. ಅದೇ ಬಗೆಯಲ್ಲಿ, ಪ್ರೇಷಿತ ಸಂತ ಯಾಕೋಬ ಮತ್ತು ಕಾರ್ಮೆಲ್ ಮಾತೆಯರ ಹಬ್ಬಗಳನ್ನು ಆಚರಿಸಿದರೆ, ಪ್ರೇಷಿತ ಸಂತ ತೋಮಾಸರ ದಿನವನ್ನು ಮಹೋತ್ಸವವೆಂದು ಆಚರಿಸಲಾಗುತ್ತದೆ. ಕಥೋಲಿಕ ಕ್ರೈಸ್ತರ ಪಂಚಾಂಗದಲ್ಲಿ ಕಂಡುಬರುವ ವಾರ್ಷಿಕ, ತಿಂಗಳ ಸಂತರ ಪಟ್ಟಿಗಳು ಆಯಾ ಪ್ರಾಂತ್ಯ, ದೇಶ, ಭಾಷೆ, ಇತಿಹಾಸ, ಸಂಪ್ರದಾಯ ಮುಂತಾದವುಗಳ ಹಿನ್ನೆಲೆಯಲ್ಲಿ ಸಿದ್ಧವಾಗಿರುತ್ತದೆ.
    ನೂರಾರು ಸಂಖ್ಯೆಯ ಸಂತರುಗಳ ಪೈಕಿ ನಮ್ಮ ದೇಶದಲ್ಲಿ ವಿವಿಧೆಡೆ ವಿವಿಧ ಸಂತರ ಹೆಸರುಗಳಲ್ಲಿ ಗುಡಿಗಳನ್ನು ಕಟ್ಟಲಾಗಿದೆ. ವಿವಿಧ ಧರ್ಮಕೇಂದ್ರಗಳು ಮತ್ತು ಧರ್ಮಕ್ಷೇತ್ರ(ಪ್ರಾಂತ್ಯ)ಗಳಿಗೆ, ಅವರವರದೇ ಆದ ಪಾಲಕ ಸಂತರಿರುತ್ತಾರೆ. ಚರ್ಚುಗಳಲ್ಲಿ ಸಾಮಾನ್ಯವಾಗಿ ಕೆಲವು ಐತಿಹಾಸಿಕ ಕಾರಣಗಳಿಂದ, ಅಲ್ಲಿ ನಡೆಯುವ ವಿದ್ಯಮಾನಗಳಿಂದ, ಪವಾಡಗಳಿಂದ, ಬಗೆಬಗೆಯ ಸೌಭಾಗ್ಯಗಳ ಆಶೀರ್ವಾದದಿಂದ, ಅವುಗಳ ಕಲಾವಂತಿಕೆಯಿಂದ ಪ್ರಸಿದ್ಧಿ ಪಡೆದಿರುತ್ತವೆ. ಹಿಂದೊಮ್ಮೆ ಕರ್ನಾಟಕದ ಮೈಸೂರು ಅರಸರ ಆಡಳಿತಕ್ಕೆ, ವಿಜಯನಗರ ಅರಸರ ಆಧಿಪತ್ಯಕ್ಕೆ ಒಳಗಾಗಿದ್ದ, ಸದ್ಯಕ್ಕೆ ಈಗ ತಮಿಳುನಾಡಿನಲ್ಲಿರುವ ಪುಟ್ಟ ಊರೊಂದರಲ್ಲಿನ ಸಂತ ಮರಿಯ ಮಗ್ದಲೇನಮ್ಮಳ ಹೆಸರಿನ ಚರ್ಚು, ಅದರ ಗುಡಿ ಹಬ್ಬದ ಸಂದರ್ಭದಲ್ಲಿ ದೆವ್ವ ಬಿಡಿಸುವ ಕಾಯಕಕ್ಕೆ ಪ್ರಸಿದ್ಧಿ ಪಡೆದಿದೆ.
 ಮತಿಯಾಂಪಟ್ಟಿಯ ಚರ್ಚಿನ ವಾರ್ಷಿಕೋತ್ಸವ:
   ಕಳೆದ ತಿಂಗಳ ಅಂದರೆ, 2019ರ ಸಾಲಿನ ಜುಲೈ 22ರಂದು, ಕರ್ನಾಟಕದ ನೆರೆಯ ತಮಿಳುನಾಡಿನ ನಾಮಕಲ್ ಜಿಲ್ಲೆಯ ರಾಸಿಪುರಂ ತಾಲ್ಲೂಕು, ಮಾಮುಂಡಿ ಅಂಚೆಯ ಮತಿಯಾಂಪಟ್ಟಿ ಗ್ರಾಮದಲ್ಲಿರುವ ಅಲ್ಲಿನ ಖ್ಯಾತ ಸಂತ ಮರಿಯ ಮಗ್ದಲೇನಮ್ಮಳ ಹೆಸರಿನ ಚರ್ಚಿನ ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯಿತು. ಪೂರ್ವ ನಿರ್ಧರಿತ ಕಾರ್ಯಕ್ರಮದಂತೆ ಬೆಂಗಳೂರಿನಲ್ಲಿರುವ ಬೆಂಗಳೂರು ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಡಾ. ಪೀಟರ್ ಮಚಾದೊ ಅವರು ವಾರ್ಷಿಕೋತ್ಸವದ 10 ಗಂಟೆಯ ಆಡಂಬರದ ಪಾಡುಪೂಜೆಯನ್ನು ನಡೆಸಿಕೊಡಬೇಕಿತ್ತು. ಕಾರಣಾಂತರಗಳಿಂದ ಅವರು ಅದರಲ್ಲಿ ಭಾಗವಹಿಸಲಿಲ್ಲ.
   ಸಂತ ಮಗ್ದಲೇನಮ್ಮಳ ಹೆಸರಿನ ಚರ್ಚಿನ ವಾರ್ಷಿಕೋತ್ಸವ ಎನ್ನುವುದು ಶಿಷ್ಟ ಪದ. ಆದರೆ, ಕ್ರೈಸ್ತ ಜನಪದರ ಬಾಯಲ್ಲಿ ಇದು ಸಂತ ಮಗ್ದಲೇನಮ್ಮಳ ಗುಡಿಯ `ಗುಡಿ ಹಬ್ಬ'. ಜಾತ್ರೆ - ಪರಿಷೆಗಳ ಸಕಲ ಲಕ್ಷಣಗಳನ್ನು ಮೈಗೂಡಿಸಿಕೊಂಡಿರುವ ಈ ಸಂತ ಮಗ್ದಲೇನಮ್ಮಳ `ಗುಡಿ ಹಬ್ಬವು', ಜನಪದರ ಬಾಯಲ್ಲಿ ಸಂತ ಮಗ್ದಲೇನಮ್ಮಳ `ಗುಡಿ ಹಬ್ಬದ ಜಾತ್ರೆ'. 
   ಈ ಸಂತ ಮಗ್ದಲೇನಮ್ಮಳ ಹೆಸರಿನ ಚರ್ಚು ತಮಿಳುನಾಡಿನಲ್ಲಿದ್ದರೂ, ಅದಕ್ಕೆ ಬೆಂಗಳೂರು, ರಾಮನಗರ, ಮೈಸೂರು ಮತ್ತು ಮಂಡ್ಯ, ಚಾಮರಾಜನಗರದ ಹಾಗೂ ಇನ್ನೂ ದೂರದ ಹಾಸನ ಜಿಲ್ಲೆಗಳಲ್ಲಿರುವ ಕಥೋಲಿಕ ಕ್ರೈಸ್ತರ ಒಕ್ಕಲಿನ ಊರುಗಳ ಕ್ರೈಸ್ತ ವಿಶ್ವಾಸಿಗಳು ತಪ್ಪದೇ ಈ ಮಗ್ದಲೇನಮ್ಮಳ ಗುಡಿ ಹಬ್ಬದ ಜಾತ್ರೆಗಳಲ್ಲಿ ಭಾಗವಹಿಸಿ ಪಾವನರಾಗುತ್ತಾರೆ, ದೈವಕೃಪೆಯ ಅನುಭವ ಅವರದಾಗಿರುತ್ತದೆ. ಅವರಿಗೆ ಅದೊಂದು ಪಾವನ ಭೂಮಿ, ಪುಣ್ಯಕ್ಷೇತ್ರ. 
   ಬೆಂಗಳೂರಿನ ಚಾಮರಾಜಪೇಟೆಯ ಕಥೋಲಿಕ ಕ್ರೈಸ್ತರ ಜಾಗೃತಿ ಬಳಗವು, ಪ್ರತಿವರ್ಷವೂ ಮತಿಯಾಂಪಟ್ಟಿಯ ಸಂತ ಮರಿಯ ಮಗ್ದಲೇನಮ್ಮಳ ಜಾತ್ರೆಗೆ ತಪ್ಪದೇ ಭಕ್ತರನ್ನು ಬಸ್ಸುಗಳಲ್ಲಿ ಕರೆದುಕೊಂಡು ಹೋಗುವ ಕಾಯಕವನ್ನು ನೇಮದಂತೆ ಪಾಲಿಸಿಕೊಂಡು ಬರುತ್ತಿರುವ ಪರಿ ಬೆರಗು ಮೂಡಿಸುವಂಥದ್ದು. ಭಕ್ತಾದಿಗಳ ಪಾಲಿಗೆ ಮರಿಯಾಂಪಟ್ಟಿಯ ಸಂತ ಮರಿಯ ಮಗ್ದಲೇನಮ್ಮಳ ಗುಡಿಯು ಒಂದು ಪ್ರಮುಖ ಪುಣ್ಯಕ್ಷೇತ್ರವಷ್ಟೇ ಅಲ್ಲ ಅದ್ಭುತ ಪವಾಡಗಳ ತಾಣವೂ ಆಗಿದೆ. ಧ್ವಜಾರೋಹಣದೊಂದಿಗೆ ಆರಂಭವಾಗುವ ಒಂಬತ್ತು ದಿನಗಳ ಜಾತ್ರೆಯ ಸಂದರ್ಭದಲ್ಲಿ ಹಗಲು ರಾತ್ರಿ ಭಕ್ತಾದಿಗಳ ದಂಡೇ ಅಲ್ಲಿ ಸೇರಿರುತ್ತದೆ. ಗುಡಿಯ ಮುಂದಿನ ಬಯಲೇ ಅವರಿಗೆ ಮನೆ, ಅರಮನೆಯಾಗಿರುತ್ತದೆ. ರಾತ್ರಿಯಿಡೀ ತಮಿಳುನಾಡಿನ ವಿವಿಧೆಡೆಯಿಂದ ಭಕ್ತಜನ ಬರುವುದು ಹೋಗುವುದು ನಡದೇ ಇರುತ್ತದೆ. ಚರ್ಚ್ ಆಡಳಿತ‌ವು ಕಾಣಿಕೆಗಳನ್ನು ಪಡೆಯಲು ತೋರುವಷ್ಟು ಉತ್ಸುಕತೆಯ ಮಾದರಿಯಲ್ಲೇ, ಭಕ್ತಾದಿಗಳಿಗೆ ಸೌಲಭ್ಯ ಕಲ್ಪಿಸುವಲ್ಲಿ ಮತ್ತು ಸುತ್ತಮುತ್ತಲ ಪರಿಸರದ ನೈರ್ಮಲ್ಯ ಕಾಪಾಡುವ ಕಡೆಗೂ ಆಸ್ಥೆಯಿಂದ ಕಾರ್ಯತತ್ಪರವಾಗಿರುತ್ತದೆ.
   ತಮಿಳುನಾಡು ಮತ್ತು ಕರ್ನಾಟಕದ ಕ್ರೈಸ್ತ ಜನಪದರು, ಯೇಸುಸ್ವಾಮಿಯಿಂದ ತನ್ನಲ್ಲಿ ಸೇರಿಕೊಂಡಿದ್ದ ಏಳು ದೆವ್ವಗಳನ್ನು ಬಿಡಿಸಿಕೊಂಡ, ಸಂತ ಪದವಿಯನ್ನು ಹೊಂದಿರುವ ಸಂತ ಮಗ್ದಲಿನ ಮರಿಯಳನ್ನು ದೆವ್ವ ಬಿಡಿಸುವ ದೈವವೆಂದು ನಂಬಿದ್ದಾರೆ. ಮಕ್ಕಳಿಲ್ಲದವರಿಗೆ ಮಕ್ಕಳನ್ನು ದಯಪಾಲಿಸುವ, ಹುಟ್ಟಿದ ಮಕ್ಕಳನ್ನು ಆಶೀರ್ವದಿಸುವ ಮಹಿಮಾಭರಿತ ಸಂತಳೆಂದು ವಿಶ್ವಾಸಿಸುತ್ತಾರೆ. ಒಂಬತ್ತು ದಿನಗಳ ಪ್ರಾರ್ಥನೆಗಳ ನಂತರ ಕೊನೆಯ ದಿನ ನಡೆಯುವ ಸಂತ ಮಗ್ದಲಿನ ಮರಿಯಳ ಹಾಗೂ ವಿವಿಧ ಸಂತರುಗಳ ತೇರುಗಳ ಮೆರವಣಿಗೆಯನ್ನು ಕಣ್ತುಂಬಿಕೊಂಡು ಪಾವನರಾಗುತ್ತಾರೆ. 
 ಪ್ರಥಮ ಶುಭಸಂದೇಶಕಾರ್ತಿಗೆ ಹಬ್ಬದ ಸಂಭ್ರಮ:
   ಕಥೊಲಿಕ ಧರ್ಮಸಭೆಯು ಪ್ರತಿ ವರ್ಷ ಜುಲೈ 22ರಂದು ಸಂತ ಮರಿಯ ಮಗ್ದಲೇನಮ್ಮಳ ಸ್ಮರಣೆಯ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದೆ. ಸಂತ ಮರಿಯ ಮಗ್ದಲೇನಮ್ಮಳು ಯೇಸುಸ್ವಾಮಿಯ ಪುನರುತ್ಥಾನರಾದ ಸಂಗತಿಗೆ ಮೊತ್ತಮೊದಲ ಸಾಕ್ಷಿಯಾಗಿದ್ದವಳು, ಹೀಗಾಗಿ ಅವಳು ಮೊತ್ತಮೊದಲ ಶುಭಸಂದೇಶಕಾರ್ತಿಯೂ ಹೌದು. 
   ಆಕೆಯನ್ನು ಅಪೋಸ್ತಲರ ಅಪೋಸ್ತಲಳು (ಪ್ರೇಷಿತರ ಪ್ರೇಷಿತೆ) ಎಂದು ಕಥೋಲಿಕ ಧರ್ಮಸಭೆ ಗುರುತಿಸುತ್ತದೆ. ಈಗ ಅವಳ ವಾರ್ಷಿಕ ಉತ್ಸವವನ್ನು ಸ್ಮರಣೆಯಿಂದ ಹಬ್ಬದ ಮೇಲ್ದರ್ಜೆಗೆ ಏರಿಸಲಾಗಿದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಇದುವರೆಗೂ ಜುಲೈ 22ರಂದು ಸ್ಮರಣೆಯ ಸೌಭಾಗ್ಯವನ್ನು ಪಡೆದಿದ್ದ ಸಂತ ಮರಿಯ ಮಗ್ದಲೇನಮ್ಮಗಳಿಗೆ ಕಳೆದ 2016ನೇ ಸಾಲಿನಿಂದ ಹಬ್ಬದ ಸ್ಥಾನಮಾನ ದಕ್ಕಿದೆ. ಈ ಸಂಬಂಧ ಇಂದಿನ ಪಾಪುಸ್ವಾಮಿಗಳಾದ (ರೋಮಿನಲ್ಲಿರುವ ಕಥೋಲಿಕ ಧರ್ಮಸಭೆಯ ಸರ್ವೋಚ್ಚಗುರು, ಜಗದ್ಗುರು ಪೋಪರು) 2016ರ ಸಾಲಿನಲ್ಲಿಯೇ ಅವಳ ಕೇವಲ ಸ್ಮರಣೆಯ ದಿನವನ್ನು ಅಧಿಸೂಚನೆ ಹೊರಡಿಸುವ ಮೂಲಕ ಹಬ್ಬದ ದಿನವೆಂದು ಮೇಲ್ದರ್ಜೆಗೆ ಏರಿಸಿ ಆದೇಶಿಸಿದ್ದಾರೆ. 
   ಅಧಿಸೂಚನೆಯ ಕಾರಣವಾಗಿ, ಸಂತ ಮರಿಯ ಮಗ್ದಲೇನಮ್ಮಳನ್ನು ಯೇಸುಸ್ವಾಮಿಯ ತಾಯಿ ಆಶೀರ್ವದಿತ ಕನ್ಯಾಮರಿಯಮ್ಮಳ ನಂತರ, ವಾರ್ಷಿಕ ಹಬ್ಬದ ಸೌಭಾಗ್ಯವನ್ನು ಪಡೆದ ಏಕೈಕ ಮಹಿಳೆ ಎಂದು ಗುರುತಿಸುವಂತಾಗಿದೆ. ಕಥೋಲಿಕ ಧರ್ಮಸಭೆಯು, ಧರ್ಮಸಭೆಯಲ್ಲಿನ ಅವರ ಮಹತ್ವದ ಪಾತ್ರದ ಹಿನ್ನೆಲೆಯಲ್ಲಿ ಪ್ರೇಷಿತರಿಗೆ (ಯೇಸುವಿನ ನೇರ ಹನ್ನೆರಡು ಜನ ಶಿಷ್ಯರು), ಶುಭಸಂದೇಶಕರ್ತರು ಮತ್ತು ವಿಶೇಷವಾಗಿ ಕೆಲವೇ ಕೆಲವು ಜನ ಮಹಿಮಾನ್ವಿತ ಸಂತರಿಗೆ ಮೀಸಲಾಗಿರುವ ಹಬ್ಬದ ಸ್ಥಾನಮಾನವನ್ನು ಕೊಡಮಾಡಿದೆ. 
   ಕಥೋಲಿಕ ಧರ್ಮಸಭೆಯ ಪಂಚಾಂಗದ ಪ್ರಕಾರ, ಮೊದಲ ಹಂತದ ಗೌರವದ ಸಾಲಿನಲ್ಲಿರುವವರಿಗೆ ಮಾತ್ರ ಸಾಂಭ್ರಮಿಕ ಪೂಜಾವಿಧಿಯ ಅರ್ಹತೆ ಇರುತ್ತದೆ. ನಂತರದಲ್ಲಿ ಇರುವವರಿಗೆ ಹಬ್ಬದ ಸ್ಥಾನಮಾನ ಲಭಿಸುತ್ತದೆ. ಇದರೊಂದಿಗೆ ಕೊನೆಯಲ್ಲಿ ಸ್ಮರಣೆಯ ಪಟ್ಟಿಯು ಇರುತ್ತದೆ. ಬಹುತೇಕ ಸಂತರು ಈ ಸ್ಮರಣೆಯ ಪಟ್ಟಿಯಲ್ಲಿಯೇ ಇದ್ದಾರೆ. ಅದರಲ್ಲೂ ಕೆಲವು ಸಂತರ ಸ್ಮರಣೆಯನ್ನು ಐಚ್ಛಿಕ ಎಂದೂ ಕಥೋಲಿಕ ಧರ್ಮಸಭೆ ಗುರುತಿಸಿದೆ.
   ಈ ಅಧಿಸೂಚನೆಯ ದೆಸೆಯಿಂದ ಇಂದಿನ ಪಾಪು ಸ್ವಾಮಿಗಳು ಸಂತ ಮರಿಯ ಮಗ್ದಲೇನಮ್ಮಳಿಗೆ ಅಧಿಕೃತವಾಗಿ ಹೆಚ್ಚಿನ ಮಹತ್ವವನ್ನು ಗೌರವಯುತ ಸ್ಥಾನವನ್ನು ನೀಡಿದ್ದಾರೆ. ತನ್ಮೂಲಕ ತಾವು ಧರ್ಮಸಭೆಯಲ್ಲಿ ಮಹಿಳೆಯರ ಪರ, ಅವರಿಗೂ ಧರ್ಮಸಭೆಯಲ್ಲಿ ಸೂಕ್ತ ಸ್ಥಾನಮಾನ ಒದಗಿಸುವುದು ತಮ್ಮ ಆಸ್ಥೆಯ ನಿಲುವು ಎಂದು ಪ್ರತಿಪಾದಿಸಿದ್ದಾರೆ. 
   ಲೆಕ್ಸ್ ಒರಂಡಿ ಲೆಕ್ಸ್ ಕ್ರೆಡೆಂಡಿ- ನಮ್ಮ ಪೂಜೆಯು, ನಮ್ಮದೇ ನಂಬುಗೆಯ ಪ್ರತಿರೂಪ. ಇದು ರೋಮನ್ ಕಥೋಲಿಕ ಪಂಥದ ಅಧಿಕೃತ ದೇವ ಭಾಷೆ/ಧರ್ಮ ಭಾಷೆ - ಲತೀನ್ ಭಾಷೆಯಲ್ಲಿರುವ ಕಥೋಲಿಕ ಕ್ರೈಸ್ತರು ನಂಬುವ ಧಾರ್ಮಿಕ ಮೂಲತತ್ವ. ಕಥೋಲಿಕ ಧಾರ್ಮಿಕ ಸಂಪ್ರದಾಯದ ಈ ಮೂಲ ತತ್ವದ ಪ್ರಕಾರ, ನಮ್ಮ ನಂಬುಗೆಯ ಪ್ರತಿರೂಪ ನಮ್ಮ ಪೂಜಾವಿಧಿಗಳಲ್ಲಿ ಪ್ರತಿಫಲಿಸಬೇಕು. ಈ ಬೆಳವಣಿಗೆ ಅದೇ ಪಥದ್ದು ಎಂದು ಗುರುತಿಸಲಾಗುತ್ತಿದೆ. 
ಶುಭಸಂದೇಶಗಳಲ್ಲಿ ಮಗ್ದಲಿನ ಮರಿಯ:
   ಯೇಸುಸ್ವಾಮಿಯ ಜೀವನ ಚರಿತ್ರೆ ಮತ್ತು ಬೋಧನೆಗಳ ಗುಚ್ಛವಾಗಿರುವ ನಾಲ್ಕು ಶುಭಸಂದೇಶಗಳಲ್ಲಿ, ಪ್ರಸ್ತಾಪಿಸಲಾದ ಮಹಿಳೆಯರಲ್ಲಿ ಗಲಿಲೇಯ ಸರೋವರದ ದಡದ ಗ್ರಾಮ ಮಗ್ದಲಿನದ ಮರಿಯಳ ಹೆಸರು ಬಹು ಮುಖ್ಯವಾದುದಾಗಿದೆ. ಏಕೆಂದರೆ, ಯೇಸುಸ್ವಾಮಿಯೊಂದಿಗೆ ಹೆಜ್ಜೆಯಿಟ್ಟ, ಶಿಲುಬೆಗೇರಿದ ಸಂದರ್ಭದಲ್ಲಿ ಉಪಸ್ಥಿತಳಿದ್ದ ಹಾಗೂ ಪುನರುತ್ಥಾನರಾದ ಸಂದರ್ಭದಲ್ಲಿ ಸಮಾಧಿಯ ಹತ್ತಿರ ಎಲ್ಲರಿಗಿಂತಲೂ ಮೊದಲು ಯೇಸುಸ್ವಾಮಿಯ ದರ್ಶನದ ಭಾಗ್ಯ ಪಡೆದ ಮಹಿಳೆ ಎಂಬ ಹೆಗ್ಗಳಿಕೆ ಅವಳದು,
   ಯೇಸುವಿನ ತಾಯಿ ಮರಿಯಳಲ್ಲದೇ, ಮಗ್ದಲೇನ ಮರಿಯ, ಮಾರ್ತಾ, ಲಾಜರಸ್ ಅವರ ಸಹೋದರಿ ಬೆಥಾನಿಯದ ಮರಿಯ, ಜೇಮ್ಸ್ ಮತ್ತು ಜೋಸೆಫರ ತಾಯಿ ಮರಿಯ, ಯಕೋಬನ ತಾಯಿ ಮರಿಯ ಮತ್ತು ಕೊಪಸನ ಹೆಂಡತಿ ಮರಿಯ- ಅವರುಗಳಿದ್ದಾರೆ. ಇದಲ್ಲದೇ, ಇನ್ನಿಬ್ಬರು ಮಹಿಳೆಯರೂ ಶುಭಸಂದೇಶಗಳಲ್ಲಿ ಪ್ರಮುಖವಾಗಿ ಕಾಣಸಿಗುತ್ತಾರೆ. ಮೊದಲಿಗಳು ಯೇಸುಸ್ವಾಮಿಗೆ ಬಾವಿಯಿಂದ ನೀರು ಸೆಳೆದುಕೊಟ್ಟ ಸಮಾರಿತ ಮಹಿಳೆ. ಮತ್ತು ಮತ್ತೊಬ್ಬಳು ಧರ್ಮಶಾಸ್ತ್ರದಲ್ಲಿ ತಿಳಿಸಿರುವಂತೆ ನ್ಯಾಯಸಮ್ಮತ ಶಿಕ್ಷೆಗಾಗಿ ಆಗ್ರಹಿಸಿ ಯೇಸುಸ್ವಾಮಿಯ ಮುಂದೆ ಫರಿಸಾಯರು ತಂದು ನಿಲ್ಲಿಸಿದ ವೇಶ್ಯೆ.
  ಲೂಕನ ಶುಭಸಂದೇಶದಲ್ಲಿ (8ನೇ ಅಧ್ಯಾಯ 1 - 3ನೇ ಚರಣಗಳು) ಮಗ್ದಲೇನಿನ ಮರಿಯಳ ಪ್ರಸ್ತಾಪವಿದೆ. 
  `ತರುವಾಯ ಯೇಸುಸ್ವಾಮಿ ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಸಾರುತ್ತಾ ಪಟ್ಟಣಗಳಲ್ಲೂ, ಹಳ್ಳಿಗಳಲ್ಲೂ ಸಂಚಾರ ಮಾಡಿದರು. ಹನ್ನೆರಡು ಮಂದಿ ಶಿಷ್ಯರೂ ಅವರೊಡನೆ ಇದ್ದರು. ದೆವ್ವಗಳ ಕಾಟದಿಂದಲೂ ರೋಗರುಜಿನಗಳಿಂದಲೂ ಬಿಡುಗಡೆ ಹೊಂದಿದ್ದ ಕೆಲವು ಮಹಿಳೆಯರೂ ಅವರ ಜೊತೆಯಲ್ಲಿದ್ದರು. ಅವರಾರೆಂದರೆ, ಮಗ್ದಲದ ಮರಿಯಳು, ಹೆರೋದನ ಅರಮನೆಯ ಮೇಲ್ವಿಚಾರಕನಾಗಿದ್ದ ಕೂಜನ ಪತ್ನಿ ಯೊವಾನ್ನಳು, ಅಲ್ಲದೇ ಸುಸಾನ್ನಳು, ಮತ್ತಿತರ ಅನೇಕರು. ಇವರು ತಮ್ಮ ಆಸ್ತಿಪಾಸ್ತಿಯನ್ನು ವೆಚ್ಚಮಾಡಿ ಯೇಸುವಿಗೂ ಅವರ ಶಿಷ್ಯರಿಗೂ ಉಪಚಾರ ಮಾಡುತ್ತಿದ್ದರು.' ನಂತರ, ಯೇಸುಸ್ವಾಮಿ ಶಿಲುಬೆಗೇರಿಸಿದ ನಂತರದ ವಿವರಗಳಲ್ಲೂ ಅದೇ ಲೂಕನ ಶುಭಸಂದೇಶದಲ್ಲಿ (24ನೇ ಅಧ್ಯಾಯ 13 ರಿಂದ 24ರವರೆಗಿನ ಚರಣಗಳಲ್ಲಿ) ಮಹಿಳೆಯರ ಪ್ರಸ್ತಾಪವಿದೆ. ಆದರೆ, ಅವರನ್ನು ಹೆಸರಿಸಿಲ್ಲ.
  ಯೋವಾನ್ನನ ಶುಭಸಂದೇಶದಲ್ಲಿ (20ನೇ ಅಧ್ಯಾಯ 12ರಿಂದ 18ರವರೆಗಿನ ಚರಣಗಳು), ಯೇಸುಸ್ವಾಮಿ ಮಗ್ದಲಿನ ಮರಿಯಳಿಗೆ ದರ್ಶನಕೊಟ್ಟು, ತನ್ನ ಇರುವಿಕೆಯನ್ನು ಶಿಷ್ಯರಿಗೆ ತಿಳಿಸಲು ಹೇಳುತ್ತಾರೆ. ಮತ್ತಾಯನ ಶುಭಸಂದೇಶದಲ್ಲಿ (16ನೇ ಅಧ್ಯಾಯ 9 ರಿಂದ 11ರವರೆಗಿನ ಚರಣಗಳು) ಮಗ್ದಲಿನ ಮರಿಯಳಿಗೆ ದರ್ಶನಕೊಟ್ಟ ಪ್ರಸಂಗದ ವಿವರಣೆ ಇದೆ. `ಭಾನುವಾರ ಮುಂಜಾನೆ ಪುನರುತ್ಥಾನ ಹೊಂದಿದ ಯೇಸುಸ್ವಾಮಿ, ಮೊತ್ತಮೊದಲು ಮಗ್ದಲದ ಮರಿಯಳಿಗೆ ಕಾಣಿಸಿಕೊಂಡರು. ಅವರು ಏಳು ದೆವ್ವಗಳನ್ನು ಹೊರಗಟ್ಟಿದ್ದು ಈಕೆಯಿಂದಲೇ. ಈಕೆ ಹೋಗಿ ತಾನು ಕಂಡದ್ದನ್ನು ಯೇಸುವಿನ ಸಂಗಡಿಗರಿಗೆ ತಿಳಿಸಿದಳು. ಅವರಾದರೋ ಇನ್ನೂ ಶೋಕಭರಿತರಾಗಿ ಅಳುತ್ತಾ ಇದ್ದರು. ಆದರೆ, ಯೇಸು ಜೀವಂತರಾಗಿದ್ದಾರೆ ಮತ್ತು ಆಕೆಗೆ ಕಾಣಿಸಿಕೊಂಡಿದ್ದಾರೆ ಎಂಬ ವಾರ್ತೆಯನ್ನು ಕೇಳಿದಾಗ ಅವರು ಅದನ್ನು ನಂಬಲಿಲ್ಲ.' 
  ಮತ್ತಾಯನ ಶುಭಸಂದೇಶದಲ್ಲೂ, [`ಭಾನುವಾರ ಬೆಳಗಾಗಲು ಬಂದಿತ್ತು. ಮಗ್ದಲದ ಮರಿಯಳು ಮತ್ತು ಆ ಇನ್ನೊಬ್ಬ ಮರಿಯಳು ಸಮಾಧಿಯನ್ನು ನೋಡಲು ಬಂದರು.... ತಟ್ಟನೇ ಯೇಸುವೇ ಅವರನ್ನು ಎದುರುಗೊಂಡು, `ನಿಮಗೆ ಶುಭವಾಗಲಿ' ಎಂದರು. ಆ ಮಹಿಳೆಯರು ಹತ್ತಿರಕ್ಕೆ ಬಂದು ಅವರ ಪಾದಕ್ಕೆರಗಿ ಪೂಜಿಸಿದರು' (28ನೇ ಅಧ್ಯಾಯ 1ರಿಂದ 10ರವರೆಗಿನ ಚರಣಗಳು)] ಸಮಾಧಿಯ ಹತ್ತಿರ ನಡೆದ ಘಟನಾವಳಿಗಳ ವಿವರಣೆ ಇದೆ.
ತಲೆಯ ಮೇಲೆ ತೈಲವನ್ನು ಸುರಿದಳು: 
   `ಅಂದು ಯೇಸು ಬೆಥಾನಿಯದಲ್ಲಿ ಕುಷ್ಟರೋಗಿ ಸಿಮೋನನ ಮನೆಯಲ್ಲಿದ್ದರು. ಆಗ ಮಹಿಳೆಯೊಬ್ಬಳು ಅಮೃತಶಿಲೆಯ ಭರಣಿಯ ತುಂಬ ಅತ್ಯಮೂಲ್ಯವಾದ ಸುಗಂಧ ತೈಲವನ್ನು ತೆಗೆದುಕೊಂಡು ಅಲ್ಲಿಗೆ ಬಂದಳು. ಊಟಕ್ಕೆ ಕುಳಿತಿದ್ದ ಯೇಸುವಿನ ತಲೆಯ ಮೇಲೆ ಆ ತೈಲವನ್ನು ಸುರಿದಳು. ಇದನ್ನು ಕಂಡ ಶಿಷ್ಯರು ಸಿಟ್ಟಿಗೆದ್ದರು.``ಏಕೆ ಇಷ್ಟೊಂದು ವ್ಯರ್ಥ? ಈ ತೈಲವನ್ನು ಅಧಿಕ ಬೆಲೆಗೆ ಮಾರಿ, ಬಂದ ಹಣವನ್ನು ಬಡವರಿಗೆ ಕೊಡಬಹುದಿತ್ತಲ್ಲ'', ಎಂದರು. ಇದನ್ನು ಅರಿತುಕೊಂಡ ಯೇಸು ಶಿಷ್ಯರಿಗೆ, ``ಈ ಮಹಿಳೆಗೇಕೆ ಕಿರುಕುಳ ಕೊಡುತ್ತೀರಿ? ಈಕೆ ನನಗೊಂದು ಸತ್ಕಾರ್ಯ ಮಾಡಿದ್ದಾಳೆ. ಬಡಬಗ್ಗರು ನಿಮ್ಮ ಸಂಗಡ ಯಾವಾಗಲೂ ಇರುತ್ತಾರೆ. ಆದರೆ, ನಾನು ನಿಮ್ಮ ಸಂಗಡ ಯಾವಾಗಲೂ ಇರುವುದಿಲ್ಲ. ಈಕೆ ಈ ತೈಲವನ್ನು ನನ್ನ ಮೇಲೆ ಸುರಿದು ನನ್ನ ಶವಸಂಸ್ಕಾರಕ್ಕೆ ಸಿದ್ಧಮಾಡಿದ್ದಾಳೆ. ಜಗತ್ತಿನಾದ್ಯಂತ, ಎಲ್ಲೆಲ್ಲಿ ನನ್ನ ಶುಭಸಂದೇಶ ಪ್ರಕಟವಾಗುವುದೋ ಅಲ್ಲೆಲ್ಲಾ ಈ ಸತ್ಕಾರ್ಯವನ್ನು ಈಕೆಯ ಸವಿನೆನಪಿಗಾಗಿ ಸಾರಲಾಗುವುದು, ಇದು ನಿಶ್ಚಯ'' ಎಂದರು.' (ಮತ್ತಾಯನ ಶುಭಸಂದೇಶ 26ನೇ ಅಧ್ಯಾಯ 6ನೇ ಚರಣದಿಂದ 13ನೇ ಚರಣದವರೆಗೆ)
   ಮಾರ್ಕನ ಶುಭಸಂದೇಶದ 14ನೇ ಅಧ್ಯಾಯ 3ರಿಂದ 9ರವರೆಗಿನ ಚರಣಗಳಲ್ಲಿ ಇದೇ ಮಾಹಿತಿಯ ಮತ್ತಷ್ಟು ವಿವರಗಳಿವೆ. ಆ ಮಹಿಳೆಯು ಭರಣಿಯನ್ನು ಒಡೆದು ಯೇಸುವಿನ ತಲೆಯ ಮೇಲೆ ಅತ್ಯಮೂಲ್ಯವಾದ ಜಟಮಾಂಸಿ ಸುಗಂಧವನ್ನು ಸುರಿಯುತ್ತಾಳೆ. ಯೊವಾನ್ನನ ಶುಭಸಂದೇಶದ 12ನೇ ಅಧ್ಯಾಯ 1ರಿಂದ 8ನೇ ಚರಣದವರೆಗಿನ ಮಾಹಿತಿಯಲ್ಲಿ ಸುಗಂಧ ತೈಲವನ್ನು ಅತ್ಯಂತ ಬೆಲೆಮಾಳುವ ಅಚ್ಚ ಜಟಮಾಂಸಿ ಸುಗಂಧ ಎಂದು ಗುರುತಿಸಲಾಗಿದೆ. ಇಲ್ಲಿ ಆ ಮಹಿಳೆ, ಅರ್ಧ ಲೀಟರಿನಷ್ಟಿದ್ದ ಆ ತೈಲವನ್ನು ತಲೆಯ ಮೇಲೆ ಸುರಿಯದೇ, `ಯೇಸುವಿನ ಪಾದಗಳಿಗೆ ಹಚ್ಚಿ, ತನ್ನ ತಲೆಗೂದಲಿನಿಂದ ಆ ಪಾದಗಳನ್ನು ಒರೆಸಿದಳು. ತೈಲದ ಸುವಾಸನೆ ಮನೆಯಲ್ಲೆಲ್ಲಾ ಹರಡಿತು.' ಎಂದು ತಿಳಿಸಲಾಗಿದೆ. ಜೊತೆಗೆ ಯೊವಾನ್ನನು ಆ ಮಹಿಳೆಯನ್ನು ಮರಿಯಳು ಎಂದು ದಾಖಲಿಸಿದ್ದಾನೆ. ಲೂಕನ ಶುಭಸಂದೇಶದಲ್ಲಿ ಬೆಥಾನಿಯದಲ್ಲಿನ ಸಿಮೋನನ್ನು ಫರಿಸಾಯ ಎಂದು ಗುರುತಿಸಿದ್ದರೆ, ಮತ್ತಾಯನ ಶುಭಸಂದೇಶದಲ್ಲಿ ಅವನನ್ನು ಕುಷ್ಟರೋಗಿ ಸಿಮೋನ ಎಂದು ಹೆಸರಿಸಲಾಗಿದೆ.
  ಈ ಸುಗಂಧವನ್ನು ತಂದ ಮಹಿಳೆಯನ್ನು ನಂತರದಲ್ಲಿ ಮಗ್ದಲಿನ ಮರಿಯ ಎಂದು ಗುರುತಿಸಲಾಗುತ್ತದೆ. ಈ ಬೆಳವಣಿಗೆಗೆ ಪಾಪುಸ್ವಾಮಿ ಮೊದಲನೇ ಜಾಗರೂಕಪ್ಪ (ಗ್ರೆಗೋರಿ) ಕಾರಣರು ಎಂದು ಹೇಳಲಾಗುತ್ತದೆ. ಪ್ಲೇಗ್ ಮಾರಿಯಿಂದ ಬಸವಳಿದ್ದ ಸಂದರ್ಭದಲ್ಲಿ ಪಾಪುಸ್ವಾಮಿ ಪಟ್ಟಕ್ಕೆ ಏರಿದ್ದ ಅವರಿಗೆ, ಮಗ್ದಲಿನ ಮರಿಯಳು, ಆಧ್ಯಾತ್ಮಿಕ ಪ್ಲೇಗ್ ಮಾರಿಯನ್ನು ದೂರಿಕರಿಸುವ ಪಶ್ಚಾತ್ತಾಪದ ಪ್ರತಿಮೆಯಾಗಿ ಕಂಡಳು. ಯೇಸು ಅವಳಿಂದ ಬಿಡಿಸಿದ ದೆವ್ವಗಳನ್ನು ಅವಳಲ್ಲಿದ್ದ ಏಳು ದುರ್ಗುಣಗಳು ಎಂದು ವ್ಯಾಖ್ಯಾನಿಸಿದರಂತೆ. ಜಗದ್ರಕ್ಷಕನ ಚರಣಗಳನ್ನು ಚುಂಬಿಸಿ ಪಾಪಮುಕ್ತಳಾದ ಅವಳು ಪುನೀತಳು ಎಂದು ಅವರು ಸಾರಿದರಂತೆ.
ಶುಭಸಂದೇಶಗಳು ಸಾಕ್ಷಾತ್ ವರದಿಗಳಲ್ಲ:
   ಈಗ ನಮಗೆ ಚಿರಪರಿಚಿತದಲ್ಲಿರುವ ನಾಲ್ಕು ಶುಭಸಂದೇಶಗಳನ್ನು, ಯೇಸುಸ್ವಾಮಿಯ ಮರಣಾನಂತರದ ಕ್ರಿಸ್ತ ಶಕ 35-85ರ ನಂತರದಲ್ಲಿ, ವಿವಿಧೆಡೆ ಹರಿದುಹಂಚಿಹೋಗಿದ್ದ ಹಿಂಬಾಲಕರಲ್ಲಿ ಯೇಸುಸ್ವಾಮಿಯನ್ನು ಕಣ್ಣಾರೆ ಕಂಡವರ, ಅವರ ಬಗ್ಗೆ ಕೇಳಿಸಿಕೊಂಡವರು ಒದಗಿಸಿದ ಮಾಹಿತಿಗಳನ್ನು ಆಧರಿಸಿ ರಚಿಸಲಾಗಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಒಂದೇ ಮಾದರಿಯಲ್ಲಿರುವ ಮಾರ್ಕ, ಮತ್ತಾಯ ಮತ್ತು ಲೂಕರ ಶುಭಸಂದೇಶಗಳನ್ನು ಕ್ರಿಸ್ತ ಶಕ 65ರಿಂದ 85ರ ನಡುವೆ ರಚಿಸಿರಬೇಕು ಎನ್ನಲಾಗುತ್ತದೆ. ಕ್ರಿಸ್ತ ಶಕ 90-95ರಲ್ಲಿ ರಚನೆಯಾದ ಯೊವಾನ್ನನ ಶುಭಸಂದೇಶ ಉಳಿದವುಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಇವೆಲ್ಲವೂ ಸಾಕ್ಷಾತ್ ಚರಿತ್ರೆಗಳಲ್ಲ, ನೆನಪಿನ ಬುತ್ತಿಗಳನ್ನು ಬಿಚ್ಚಿ ಆ ಕಾಲದ, ದೈವಶಾಸ್ತ್ರದ ಆಶಯಗಳ ಅಗತ್ಯಕ್ಕೆ ತಕ್ಕಂತೆ ಭಟ್ಟಿ ಇಳಿಸಿ ಸೋಸಿ ತೆಗೆದ ಸಾರಗಳ ಗುಚ್ಛಗಳು ಎಂಬುದು ತಜ್ಞರ ಅಭಿಪ್ರಾಯ.
   ಮರಿಯ ಹೆಸರಿನ ಹಲವಾರು ವ್ಯಕ್ತಿಗಳಿಂದಾದ ಗೊಂದಲ ಹೆಸರಿಲ್ಲದ ಜಾರಿದ ಮಹಿಳೆಯರೊಂದಿಗೆ ಮಗ್ದಲಿನ ಮರಿಯಳನ್ನು ಸಮೀಕರಿಸಲಾಗಿದೆ ಎನ್ನಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮಗ್ದಲಿನ ಮರಿಯಳನ್ನು ಯೇಸುಸ್ವಾಮಿಯ ಕೃಪೆಯಿಂದ ಉದ್ಧಾರಗೊಂಡ ವೇಶ್ಯೆ ಎಂದು ಗುರುತಿಸಿದ ಕಥೋಲಿಕ ಧರ್ಮಸಭೆಯ ಪಂಡಿತರು ಅವಳನ್ನು ಪಾಪಗಳಿಗಾಗಿ ಪಶ್ವಾತ್ತಾಪಪಟ್ಟು ಮುಕ್ತಿಪಥದತ್ತ ಸಾಗಿದವಳು ಎಂದು ಬಣ್ಣಿಸಿದ್ದಾರೆ. ಅದರಂತೆಯೇ ಹತ್ತಾರು ಚಿತ್ರಗಳಲ್ಲಿ ಅವಳನ್ನು ಅದೇ ಬಗೆಯಲ್ಲಿ ಚಿತ್ರಿಸಲಾಗಿದೆ. ಸೈತಾನನ ಪ್ರಲೋಭನೆಗೆ ಮೊದಲು ಒಳಗಾದವಳು ಮಹಿಳೆ. ಮಹಿಳೆ ಲೈಂಗಿಕತೆಗೆ, ಪಾಪ ಕೃತ್ಯಗಳಿಗೆ ಕಾರಣಳು ಎಂಬುದನ್ನು ಗಟ್ಟಿಗೊಳಿಸಲು ಕ್ರೈಸ್ತ ಧರ್ಮಸಭೆ ಮಗ್ದಲಿನ ಮರಿಯಳನ್ನು ಸಮರ್ಥವಾಗಿ ಬಳಸಿಕೊಂಡಿತು ಎಂದು ಹೇಳಲಾಗುತ್ತದೆ.
   ಪುನರುತ್ಥಾನಗೊಂಡ ಯೇಸು ಮರಿಯಳನ್ನು ಹೆಸರು ಹಿಡಿದು ಕರೆಯುವುದು ಮತ್ತು ಅವಳಿಗೆ `ನನ್ನನ್ನು ಹಿಡಿದಿಟ್ಟುಕೊಂಡಿರಬೇಡ' ಎಂದು ಹೇಳುವುದು (ಯೊವಾನ್ನನ ಶುಭಸಂದೇಶ 20ನೇ ಅಧ್ಯಾಯ 16ಮತ್ತು 17ನೇ ಚರಣಗಳು) - ಹತ್ತಾರು ಬಗೆಯ ವ್ಯಾಖ್ಯಾನಗಳಿಗೆ ಕಾರಣವಾದದ್ದಂತೂ ನಿಜ.

 ಪುರುಷ ಪ್ರಧಾನ ನಿಲುವಿಗೆ ವಾಲಿದ ಧರ್ಮಸಭೆ:
  ಇತಿಹಾಸಕಾರರು ಹೇಳುವಂತೆ, ಒಂದನೇ ಶತಮಾನದಲ್ಲಿದ್ದ ಯೇಸುಕ್ರಿಸ್ತನ ಬೋಧನೆಗಳ ಪ್ರಭಾವಕ್ಕೆ ಒಳಗಾದ ಜನರಲ್ಲಿ ಬಹತೇಕರು ಅನಕ್ಷರಸ್ಥರಾಗಿದ್ದರು. ವಿವಿಧ ಸಂಪ್ರದಾಯಗಳ ಹಿನ್ನೆಲೆ ಹೊಂದಿದ್ದ ಆ ಜನರು ಯೇಸುಸ್ವಾಮಿ ಶುಭಸಂದೇಶಗಳನ್ನು ಮೌಖಿಕವಾಗಿ ಪ್ರಚುರಗೊಳಿಸುವಾಗ ಕೆಲವಷ್ಟು ವ್ಯತ್ಯಾಸಗಳು ಗೊಂದಲಗಳು ಆಗಿರಲೂಬಹುದು. 
  ಆದಿಯಲ್ಲಿ ಭೂಮಧ್ಯ ಸಮುದ್ರದ ತೀರಗಳಲ್ಲಿ ವಿವಿಧ ಜನಸಮುದಾಯಗಳಲ್ಲಿ ಕ್ರೈಸ್ತ ಮತ ಬೇರೂರಿದ ಸಂದರ್ಭದಲ್ಲಿ ಪ್ರತಿಯೊಂದು ಸಮುದಾಯವೂ ವಿಶ್ವಾಸ ಮತ್ತು ಆಚರಣೆಗಳಲ್ಲಿ ಪ್ರತ್ಯೇಕತೆ ರೂಢಿಸಿಕೊಂಡಿದ್ದವು. ಬಾಯಿ ಮಾತಿನ ಹೇಳಿಕೆಗಳು, ಮೌಖಿಕ ಸಂಪ್ರದಾಯಗಳನ್ನು ಬರಹದ ಭಟ್ಟಿಗೆ ಇಳಿಸಿದಾಗ, ವಿವಿದ ಸಮುದಾಯಗಳಲ್ಲಿ ಅವರದೇ ಆದ ಬಗೆಬಗೆಯ ಶುಭಸಂದೇಶದ ಹೊತ್ತಿಗೆಗಳು ಅಸ್ತಿತ್ವದಲ್ಲಿದ್ದವು. ನಾಲ್ಕನೇ ಶತಮಾನದ ಹೊತ್ತಿಗೆ ಇಂದು ನಮಗೆ ತಿಳಿದಿರುವ ಸಾರ್ವತ್ರಿಕ ಬಳಕೆಯಲ್ಲಿರುವ ದೇವರ ವಾಕ್ಯ - ಹಳೆಯ ಮತ್ತು ಹೊಸ ಒಡಂಬಡಿಕೆಗಳ ಶ್ರೀಗ್ರಂಥ ಸತ್ಯವೇದ (ಪವಿತ್ರ ಬೈಬಲ್) ರೂಪತಾಳಿತು ಎನ್ನಲಾಗುತ್ತದೆ. ಹಳೆಯ ಒಡಂಬಡಿಕೆಯು ಯೆಹೂದ್ಯರ ಹಿನ್ನಲೆಯನ್ನು ಹೊಂದಿದ್ದರೆ, ಹೊಸ ಒಡಂಬಡಿಕೆಯು ಯೇಸುಕ್ರಿಸ್ತ ಮತ್ತು ನಂತರದ ಪ್ರೇಷಿತರ ಕಾರ್ಯವನ್ನೊಳಗೊಂಡಿದೆ.
  ಅಂದಿನ ಕ್ರೈಸ್ತ ಧರ್ಮಸಭೆಯು, ತನ್ನ ನಂಬುಗೆ ವಿಶ್ವಾಸಗಳಿಗೆ ಪೂರಕವಾದ ಆಯ್ದ ಹೊತ್ತಿಗೆಗಳಿಗೆ ಅಧಿಕೃತ ಮಾನ್ಯತೆ ನೀಡಿ, ಉಳಿದವುಗಳನ್ನು ಅನಧಿಕೃತ ಎಂದು ಸಾರಿತು. ಅವುಗಳನ್ನು ನಾಶಪಡಿಸುವಲ್ಲಿ ಆಸಕ್ತಿ ತಳೆಯಿತು. ಆ ಸಮಯದಲ್ಲಿ ನಾಶಗೊಂಡ ಹಲವಾರು ಹೊತ್ತಿಗೆಗಳಲ್ಲಿ ಮರಿಯಳ ಶುಭಸಂದೇಶವೂ ಒಂದು. ಮಗ್ದಲಿನ ಮರಿಯಳನ್ನು ಪ್ರಮುಖ ಶುಭಸಂದೇಶಕಾರ್ತಿ ಎಂದು ಗುರುತಿಸಲಾಗಿತ್ತು. ಐದನೇ ಶತಮಾನದ ನಂತರ, ಒಂದನೇ ಶತಮಾನದಲ್ಲಿದ್ದ ಕ್ರೈಸ್ತ ಮತಕ್ಕೆ ಬಲವಾದ ಭದ್ರ ಬುನಾದಿ ಹಾಕಿದ ಪೌಲನು ಪ್ರತಿಪಾದಿಸುವ ಕ್ರೈಸ್ತ ಮತದ ಪ್ರಮುಖ ಲಕ್ಷಣಗಳಲ್ಲಿ ಒಂದಾದ ದೇವರ ಮುಂದೆ ಎಲ್ಲರೂ ಸಮಾನರು ಎಂಬ ತತ್ವ ಕ್ರಮೇಣ ಹಿಂದೆ ಸರಿದು ಕಥೋಲಿಕ ಧರ್ಮಸಭೆ ಪುರುಷ ಪ್ರಧಾನ್ಯ ನಿಲುವಿನತ್ತ ಹೊರಳಿಕೊಂಡಿತು ಎಂದು ಇತಿಹಾಸಕಾರರು ಪ್ರತಿಪಾದಿಸುತ್ತಾರೆ. 
  ಯೇಸು ಆರಿಸಿಕೊಂಡ ಎಲ್ಲಾ ಹನ್ನೆರಡು ಜನ ಶಿಷ್ಯರು ಪುರುಷರು ಎಂಬುದರತ್ತ ಬೆರಳು ಮಾಡುವ ಕಥೋಲಿಕ ಧರ್ಮಸಭೆ, ಶತಶತಮಾನಗಳಿಂದ ಅದನ್ನೇ ಆಧಾರವಾಗಿ ಇಟ್ಟುಕೊಂಡು ಮಹಿಳೆಯರಿಗೆ ಯಾಜಕ ದೀಕ್ಷೆ ಕೊಡಲು ಹಿಂದೇಟು ಹಾಕುತ್ತಾ ಬಂದಿದೆ ಎಂಬುದು ಮಹಿಳಾ ಹಕ್ಕು ಪ್ರತಿಪಾದಕರ ಆರೋಪ. ಈಚೆಗೆ, ಇಟಲಿಯ ರೋಮ್‍ನ ವ್ಯಾಟಿಕನ್‍ನಲ್ಲಿ ಪ್ರಧಾನಪೀಠ ಹೊಂದಿರುವ ಕಥೋಲಿಕರ ಪರಮೋಚ್ಚ ಗುರು, ಜಗದ್ಗುರು ಪಾಪುಸ್ವಾಮಿ ಫ್ರಾನ್ಸಿಸ್ ಅವರು ಬ್ರೆಜಿಲ್ ಪತ್ರಕರ್ತೆ ಕ್ರಿಶ್ಚಿಯನ್ ಮುರ್ರೆ ಅವರನ್ನು ತಮ್ಮ ವಕ್ತಾರರಲ್ಲಿ ಒಬ್ಬರನ್ನಾಗಿ ನೇಮಕ ಮಾಡಿರುವುದು, ವ್ಯಾಟಿಕನ್ ಮಹಿಳೆಯರಿಗೆ ಎರಡನೇ ದರ್ಜೆಯ ಸ್ಥಾನಮಾನ ನೀಡುತ್ತಿದೆ ಎಂಬ ದೂರನ್ನು ಅಲ್ಲಗಳೆಯುವ ಹಾದಿಯ ಒಂದು ಹೆಜ್ಜೆ ಎಂದು ಹೇಳಲಾಗುತ್ತಿದೆ.
******

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...