ಕಣ್ದಿಟ್ಟಿ ಹರಿದತ್ತ ಗ್ರಂಥ ಗಿರಿಪಂಕ್ತಿಗಳು ನಿಂತು ಬೆರಗೀಯುತಿವೆ ಪುಸ್ತಕಾಲಯದಲ್ಲಿ ... ಎಂಬ ಕವಿವಾಣಿಯು ಗ್ರಂಥಾಲಯದ ಕಪಾಟುಗಳಲ್ಲಿ ವಿಜೃಂಭಿಸುವ ಪುಸ್ತಕಗಳ ಪರ್ವತಸಾಲು ಹೇಗೆ ಅಚ್ಚರಿ ಮೂಡಿಸುತ್ತವೆ ಎಂದು ಬಣ್ಣಿಸುತ್ತದೆ. ನಿಜವಾಗಿಯೂ ಪುಸ್ತಕಗಳೇ ನಮ್ಮ ಒಳ್ಳೆಯ ಗೆಳೆಯರು. ಏಕತಾನದ ಬದುಕಿನಲ್ಲಿ ನಕ್ಷತ್ರಗಳನ್ನು ಮಿನುಗಿಸಿ ಯಾವುದೋ ಅಪ್ರತಿಮ ಲೋಕಕ್ಕೆ ನಮ್ಮನ್ನು ಕರೆದೊಯ್ದು ಮನವನ್ನು ಪ್ರಫುಲ್ಲಗೊಳಿಸುವ ಹಾಗೂ ತನ್ಮೂಲಕ ಜ್ಞಾನಾರ್ಜನೆಗೆ ಮತ್ತು ಮನೋವಿಕಾಸಕ್ಕೆ ಇಂಬಾಗುವ ಪರಿ ಪುಸ್ತಕಗಳಿಂದಲ್ಲದೆ ಇನ್ನೇತರಿಂದ ಸಾಧ್ಯ!
ಪುಸ್ತಕಪ್ರೇಮವು ಪ್ರಾಚೀನ ಕಾಲದಲ್ಲೂ ಇತ್ತು ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಕ್ರಿಸ್ತಪೂರ್ವ 320ರಲ್ಲಿ ಎರಡನೇ ಟಾಲೆಮಿ ಎಂಬ ಅರಸನು ಈಜಿಪ್ಟ್ ದೇಶದ ಅಲೆಕ್ಸಾಂಡ್ರಿಯಾ (ಈಗಿನ ಕೈರೋ ಪಟ್ಟಣ) ದಲ್ಲಿ ದೇಶವಿದೇಶಗಳ ಹೊತ್ತು ತಂದಿದ್ದ ಎಲ್ಲ ಗ್ರಂಥಗಳನ್ನು ಶೇಖರಿಸಲು ಒಂದು ಬೃಹತ್ ಗ್ರಂಥಾಲಯವನ್ನು ಕಟ್ಟಿಸಿದ್ದನೆಂದು ಇತಿಹಾಸ ಹೇಳುತ್ತದೆ. ಜಗತ್ತಿನ ಇತಿಹಾಸದಲ್ಲಿ ಇದೇ ಮೊತ್ತಮೊದಲ ಪುಸ್ತಕಾಲಯ. ದೇಶೀ ವಿದ್ವಾಂಸರಿಗೂ ಪ್ರವಾಸಿ ಜ್ಞಾನದಾಹಿಗಳಿಗೂ ಆ ಪುಸ್ತಕದ ಮನೆ ವಿಶಿಷ್ಟವಾಗಿ ನೆರವಾಗುತ್ತಿತ್ತು. ಆದರೆ ರೋಮನ್ ಸೈನಿಕರು ಕ್ರಿಸ್ತಪೂರ್ವ 48ರಲ್ಲಿ ಅಲೆಕ್ಸಾಂಡ್ರಿಯಾದ ಮೇಲೆ ಧಾಳಿ ಮಾಡಿದಾಗ ಆ ಪುಸ್ತಕಾಲಯಕ್ಕೆ ಬೆಂಕಿ ಬಿದ್ದು ಅಲ್ಲಿದ್ದ ಅಮೂಲ್ಯ ಗ್ರಂಥಗಳೆಲ್ಲವೂ ಬೂದಿಯಾಗಿ ಬಿಡುತ್ತವೆ.
ಆಗಿದ್ದು ಆಗಿಹೋಯಿತು, ತಮ್ಮಲ್ಲಿ ಇಂಥಿಂಥಾ ದೇಶಗಳ ಬೆಲೆಕಟ್ಟಲಾಗದ ಇಂಥಿಂಥಾ ಪುಸ್ತಕಗಳಿದ್ದವು ಎಂದು ಹೇಳಿಕೊಳ್ಳಲಿಕ್ಕಾದರೂ ಇರಲೆಂದು ಅಲ್ಲಿನ ವಿಬುಧರು ಗ್ರಂಥಗಳ ಬೂದಿಯನ್ನು ಕದಡದೇ ಅವುಗಳ ಮುಖಪುಟದ ಮೇಲೆ ಕಂಡುಬರುವ ಒಂದೊಂದು ನುಡಿಯ ಒಂದೊಂದು ಅಕ್ಷರವನ್ನು ಯಥಾವತ್ತಾಗಿ ಬರೆದುಕೊಂಡು ಅವನ್ನೆಲ್ಲ ದೊಡ್ಡದೊಂದು ಕಲ್ಲಿನ ಫಲಕದಲ್ಲಿ ಕೆತ್ತಿಸಿ ಆ ಗ್ರಂಥಾಲಯದ ಆವರಣದಲ್ಲಿ ಸ್ಥಾಪಿಸುತ್ತಾರೆ. ಈಜಿಪ್ಟಿನ ರಾಜಧಾನಿ ಕೈರೋ ನಗರಕ್ಕೆ ಹೋದವರು ಆ ಶಿಲಾಫಲಕವನ್ನು ನೋಡಬಹುದು, ವಿಶೇಷವೆಂದರೆ ಆ ಫಲಕದಲ್ಲಿ ಹಳಗನ್ನಡದ ಅಕ್ಷರವೂ ಇದೆ ಎಂಬುದು ನಮ್ಮ ಹೆಮ್ಮೆ.
ಇನ್ನು ನಮ್ಮ ದೇಶದ ಸಂದರ್ಭಕ್ಕೆ ಬಂದರೆ ಹರಪ್ಪ ಉತ್ಖನನದಲ್ಲಿ ಕೆಲ ಅಕ್ಷರವಿನ್ಯಾಸಗಳು ಕಂಡುಬಂದರೂ ಪದೇ ಪದೇ ಆಕ್ರಮಣಕಾರರ ದುಂಡಾವರ್ತಿಯಿಂದ ಬೇಸತ್ತ ಸಿಂಧೂ ಬಯಲಿನ ಶಾಂತಿಪ್ರಿಯ ನಾಗರಿಕರು ಅಲ್ಲಿಂದ ವಲಸೆ ಹೋದ ಮೇಲೆ ಅವರ ಅಕ್ಷರ ಸಂಪತ್ತು ಏನಾಯಿತೆಂದು ತಿಳಿಯಲು ಅಸಾಧ್ಯವಾಗಿದೆ. ಬದಲಾದ ಅಂದಿನ ಕಾಲಘಟ್ಟದಲ್ಲಿ ಪುಸ್ತಕಗಳನ್ನು ಬರೆದಿಡುವ ಪದ್ದತಿ ಇರಲಿಲ್ಲವಾದ್ದರಿಂದ ಮಹತ್ತಾದುದೆಂದು ಹೇಳಿಕೊಳ್ಳುವ ವೇದಗಳು ಸಹ ಕಂಠಪಾಠದ ಮೂಲಕವೇ ಮುಂದಿನ ಪೀಳಿಗೆಗೆ ರವಾನೆಯಾಗುತ್ತಾ ಬಂದವೆಂದು ತಿಳಿದುಬರುತ್ತದೆ.
ತಿಳಿದು ಬಂದ ಇತಿಹಾಸದ ಪ್ರಕಾರ ನಮ್ಮಲ್ಲಿ ಬರವಣಿಗೆ ಶುರುವಾಗುವುದೇ ಪ್ರಾಕೃತ ಎಂಬ ಆಡುಭಾಷೆಯಿಂದ. ಅದೇ ಮುಂದೆ ಶಿಷ್ಟರೂಪ ತಳೆದು ಸಂಸ್ಕೃತ ಭಾಷೆಗೆ ನಾಂದಿಯಾಗುತ್ತದೆ. ವಿಪರ್ಯಾಸವೆಂದರೆ ಸಂಸ್ಕೃತಕ್ಕೆ ತನ್ನದೇ ಆದ ಲಿಪಿ ಇಲ್ಲ. ಮತ್ತೊಂದು ಲಿಪಿಯನ್ನು ಎರವಲು ಪಡೆದ ಆ ಭಾಷೆ ಅನುಪಮವಾದ ಕಾವ್ಯಗಳನ್ನು ಹೆತ್ತಿತು ಎಂದರೆ ಅಚ್ಚರಿ ಎನಿಸಿದರೂ ಸತ್ಯ!
ಇಡೀ ಇಂಡಿಯಾ ದೇಶಕ್ಕೇ ಅನ್ವಯವಾಗುವಂತ ಲಿಪಿಯನ್ನು ಜಾರಿಗೊಳಿಸಿದ ಕೀರ್ತಿ ಅಶೋಕನಿಗೆ ಸಲ್ಲುತ್ತದೆ. ದೇಶದ ವಿವಿಧೆಡೆಯ ಕವಿಗಳು ತಮ್ಮಲ್ಲಿ ಸ್ಥಳೀಯವಾಗಿ ದೊರೆಯುವ ತಾಳೆಗರಿ, ಬೂರ್ಜ್ವಪತ್ರಗಳ ಜೈವಿಕ ವಿನ್ಯಾಸಕ್ಕೆ ಅಳವಡುವಂತೆ ಅಶೋಕ ಲಿಪಿಯನ್ನು ರೂಪಾಂತರಿಸಿಕೊಂಡು ತಮ್ಮದೇ ಆದ ಭಾಷಾ ಲಿಪಿಯನ್ನು ರೂಢಿಗತ ಮಾಡಿಕೊಂಡರೆಂಬುದು ವೇದ್ಯ. ಭೂರ್ಜ್ವಪತ್ರದಲ್ಲಿ ಮೇಲಿನಿಂದ ಕೆಳಗೆ ಗೀಟು ಹಾಕುವ ರೀತಿಯಲ್ಲಿ ಅಕ್ಷರ ಬರೆದರೆ ತಾಳೆಗರಿಗಳ ಮೇಲೆ ದುಂಡಾಗಿ ಬರೆಯುವುದರ ಮೂಲಕ ಅಕ್ಷರ ಟಂಕಿಸಲಾಗುತ್ತದೆ. ಹೀಗೆ ಗೀಟಕ್ಷರ ಮತ್ತು ದುಂಡಕ್ಷರಗಳ ವ್ಯತ್ಯಾಸವನ್ನು ಅರ್ಥ ಮಾಡಿಕೊಂಡರೆ ಎರಡೂ ಶೈಲಿಗಳ ನಡುವಿನ ಸಮಾನತೆಯನ್ನು ಅರ್ಥ ಮಾಡಿಕೊಳ್ಳಬಹುದು. ಉದಾಹರಣೆಗೆ ಉತ್ತರ ಇಂಡಿಯಾದಲ್ಲಿ ಬರೆಯಲಾಗುವ 'ಕ' ಅಕ್ಷರಕ್ಕೂ ದಕ್ಷಿಣ ಇಂಡಿಯಾದ ಭಾಷೆಗಳಲ್ಲಿ ಬರೆಯಲಾಗುವ 'ಕ' ಅಕ್ಷರಕ್ಕೂ ಹೋಲಿಕೆಯಿರುವುದನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯಬಹುದು.
ಆಮೇಲೆ ನಮ್ಮ ದೇಶದಲ್ಲಿ ನಡೆದ ಅಕ್ಷರಕ್ರಾಂತಿ ಹಾಗೂ ಅದರ ಮುಂದುವರಿಕೆಯಾಗಿ ನಡೆದ ಗ್ರಂಥಾಲಯ ಚಳವಳಿಗೆ ಸೋಪಾನ ಒದಗಿಸಿದವರು ಬೌದ್ಧ ಅನುಯಾಯಿಗಳು. ಅವರು ವಿವಿಧ ವಿಷಯಗಳ ಅಪಾರ ಜ್ಞಾನಭಂಡಾರವನ್ನ ಸಾವಿರಾರು ಹಸ್ತಪ್ರತಿಗಳಲ್ಲಿ ಪಡಿಮೂಡಿಸಿ ತಕ್ಷಶಿಲಾ, ನಳಂದ, ನಾಗಾರ್ಜುನ ಮುಂತಾದ ವಿಶ್ವವಿದ್ಯಾಲಯಗಳಲ್ಲಿ ಜತನದಿಂದ ಸಂಗ್ರಹಿಸಿ ಆ ಗ್ರಂಥ ದೇಗುಲಗಳ ಮೂಲಕ ಸರ್ವರಲ್ಲೂ ಜ್ಞಾನದೀವಿಗೆ ಬೆಳಗುತ್ತಿದ್ದರೆಂದು ಇತಿಹಾಸ ಅರುಹುತ್ತದೆ.
ದುರದೃಷ್ಟವೆಂದರೆ ಪುಸ್ತಕಸಂಸ್ಕೃತಿಯನ್ನು ದ್ವೇಷಿಸುತ್ತಿದ್ದ ಪಾಷಂಡವಾದಿಗಳು ಬೌದ್ಧರ ಮಾರಣಹೋಮ ನಡೆಸಿ ವಿಶ್ವವಿದ್ಯಾಲಯಗಳನ್ನು ನೆಲಸಮಗೊಳಿಸಿ ಅಮೂಲ್ಯ ಆಕರಗ್ರಂಥಗಳನ್ನು ಸುಟ್ಟು ಬೂದಿ ಮಾಡಿದರೆಂದೂ ಇತಿಹಾಸ ಹೇಳುತ್ತದೆ. ದುಷ್ಕರ್ಮಿಗಳೊಂದಿಗೆ ಸೆಣಸಿ ಉಳಿದ ಕೆಲವೇ ಬೌದ್ಧರು ಕೈಗೆ ಸಿಕ್ಕ ಗ್ರಂಥಗಳನ್ನು ಬಾಚಿಕೊಂಡು ಅಜಂತಾ, ಚಂದವಳ್ಳಿ, ಬನವಾಸಿ ಮುಂತಾದ ದುರ್ಗಮ ಗುಹ್ವರಗಳಲ್ಲಿ ಆಶ್ರಯ ಪಡೆದು ಇಂಡಿಯಾದ ಅಕ್ಷರಕ್ರಾಂತಿಯನ್ನು ಜೀವಂತವಾಗಿರಿಸಿದರು ಎಂಬುದು ಸ್ವಲ್ಪ ಸಮಾಧಾನಕರ ಸಂಗತಿ.
ಕನ್ನಡ ನಾಡಿನಲ್ಲಿ ಬಹು ಹಿಂದಿನಿಂದಲೂ ಬೌದ್ಧ ವಿಹಾರಗಳಲ್ಲಿ ಪುರಾತನ ಹಸ್ತಪ್ರತಿಗಳನ್ನು ಸಂಗ್ರಹಿಸಿ ಓದುಗರ ಜ್ಞಾನತೃಷೆಯನ್ನು ನೀಗಿಸಲಾಗುತ್ತಿತ್ತು. ರಾಜರೂ ಧನಿಕರೂ ವಿಹಾರಗಳನ್ನು ಸ್ಥಾಪಿಸಿ ಅವಕ್ಕೆ ದತ್ತಿ ಕೊಡುವ ಸಂಪ್ರದಾಯವೂ ಬೆಳೆದುಬಂದಿತ್ತು. ಕ್ರಿಸ್ತಶಕ ಮೂರನೇ ಶತಮಾನದ ಬನವಾಸಿಯ ಒಂದು ಶಾಸನದಲ್ಲಿ ರಾಜಕುಮಾರಿಯೊಬ್ಬಳು ಬೌದ್ಧ ವಿಹಾರ ನಿರ್ಮಿಸಿದ ಉಲ್ಲೇಖವಿದೆ. ಎರಡನೆಯ ಪುಲಕೇಶಿಯ ಆಳ್ವಿಕೆಯ ಹೊತ್ತಿಗೆ ಇಂತಹ ವಿಹಾರಗಳ ಸಂಖ್ಯೆ ನೂರಕ್ಕೆ ಏರಿತ್ತು.
ಮುಂದೆ ಎಂಟನೇ ಶತಮಾನದ ವೇಳೆಗೆ ಪ್ರತಿಗಾಮಿ ಸಂಸ್ಕೃತಿಯು ಬೌದ್ಧರ ಈ ವಿಚಾರಪ್ರದ ಆಂದೋಲನವನ್ನು ಹೊಸಕಿ ಹಾಕಿಬಿಟ್ಟಿತು. ಆದರೆ ಕನ್ನಡದ ಸುದೈವವೋ ಎಂಬಂತೆ ಬೌದ್ಧರ ಪುಸ್ತಕಪ್ರೀತಿಯನ್ನು ಜೈನರು ವಹಿಸಿಕೊಂಡರು. ಜೈನಯುಗದ ಕಾಲದಲ್ಲೇ ರತ್ನತ್ರಯರು ಕಾವ್ಯಕೃಷಿ ಮಾಡಿದರು. ಅಂದಿನ ಕಾಲದ ಅತ್ತಿಮಬ್ಬೆ ಎಂಬ ಮಹಾಸ್ತ್ರೀ ಗ್ರಂಥದಾನದ ಹೆಸರಲ್ಲಿ ನೂರಾರು ಬರಹಗಾರರಿಗೆ ಊಟ ಹಾಕಿ ಅನೇಕ ಗ್ರಂಥಗಳನ್ನು ಪ್ರತಿ ಮಾಡಿಸಿದಳು ಎಂಬುದು ಗ್ರಂಥೇತಿಹಾಸದ ಒಂದು ಪ್ರಸಿದ್ಧ ಉಲ್ಲೇಖವಾಗಿದೆ.
ಜೈನ ಕವಿಗಳು ಮಹಾಭಾರತ ಕಾವ್ಯಕ್ಕೆ ಜೈನಸಂಸ್ಕೃತಿಯ ವೇಷಗಳನ್ನು ಹಾಕಿ ಮೆರೆಸಿ ಅದನ್ನು ಜನಪ್ರಿಯಗೊಳಿಸಿದರು. ಆದರೂ ವೈದಿಕ ಪರಂಪರೆಯ ಬಗೆಗಿನ ಅಸಹನೆ ಕನ್ನಡಿಗರ ಮನದಲ್ಲಿ ಮುಲುಗುಡುತ್ತಲೇ ಇತ್ತು. ಈ ವೈದಿಕ ಯಾಜಮಾನ್ಯವನ್ನು ಧಿಕ್ಕರಿಸಿದ ಶರಣ ಚಳವಳಿಯು ಸಾಹಿತ್ಯವು ಕನ್ನಡದ ಆಡುಭಾಷೆಯಲ್ಲಿ ಎಲ್ಲೆಡೆ ಪ್ರವರ್ಧಿಸಿತು. ಅಕ್ಕಮಹಾದೇವಿ, ಅಲ್ಲಮಪ್ರಭು, ಬಸವಣ್ಣ, ಆಯ್ದಕ್ಕಿ ಮಾರಯ್ಯ, ನುಲಿಯ ಚಂದಯ್ಯಗಳು ಸುಲಭ ಸರಳ ವಚನಗಳ ಮೂಲಕ ಜನಮನ ಗೆದ್ದರು, ಸಮಸಮಾಜದ ಪರಿಕಲ್ಪನೆಯನ್ನು ಹುಟ್ಟುಹಾಕಿದರು.
ಮನುಸ್ಮೃತಿಯನ್ನು ಅಲ್ಲಗಳೆದ ಶರಣರ ವಿರುದ್ಧ ರಾಜರನ್ನು ಎತ್ತಿಕಟ್ಟಿದ ಒಂದು ವರ್ಗ ಶರಣರನ್ನು ಅಟ್ಟಾಡಿಸಿ ಮಾರಣಹೋಮಗೈದು ಅವರ ಮಠಗಳಿಗೂ ಪುಸ್ತಕಭಂಡಾರಗಳಿಗೂ ಧಾಳಿಯಿಟ್ಟು ಸರ್ವನಾಶ ಮಾಡಿತು. ಅಂದು ಮೂರುಸಾವಿರ ಶರಣರು ಆಶ್ರಯ ಪಡೆದ ಸುರಕ್ಷಿತ ತಾಣವೇ ಮೂರುಸಾವಿರ ಮಠ. ಹೀಗೆ ದಕ್ಷಿಣ ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳಗಳಿಗೆ ಓಡಿಹೋದ ಶರಣರೇ ಗವಿ ಗುಹ್ವರಗಳಂಥ ಸುರಕ್ಷಿತ ತಾಣಗಳಲ್ಲಿ ಬೃಹನ್ಮಠ, ಗವಿಮಠ, ಗೂಳೂರು ಮಠ, ಗುಮ್ಮಳಾಪುರಮಠ, ಯಡಿಯೂರು ಮಠ ಮುಂತಾದ ಮಠಗಳನ್ನು ಸ್ಥಾಪಿಸಿ ಶತಮಾನಗಳ ಕಾಲ ಸದ್ದಿಲ್ಲದೆ ಸರ್ವರಿಗೂ ವಿದ್ಯಾದಾನ ಮಾಡುವ ಕಾಯಕ ವಹಿಸಿಕೊಂಡರೆಂಬುದು ಕನ್ನಡ ನಾಡಿನ ಶೈಕ್ಷಣಿಕ ಕ್ಷೇತ್ರದಲ್ಲಿ ಒಂದು ಹೆಮ್ಮೆಯ ದಾಖಲೆಯಾಗಿದೆ.
ಹದಿನಾಲ್ಕನೇ ಶತಮಾನದಿಂದ ಹದಿನೆಂಟನೇ ಶತಮಾನವದರೆಗೆ ಕನ್ನಡನಾಡಿನಲ್ಲಿ ಸದ್ದು ಮಾಡಿದ್ದು ಯುದ್ದಗಳು ಜಗಳಗಳು ಪಿತೂರಿಗಳು ಹಾಗೂ ರಾಜಕೀಯ ವಿಪ್ಲವಗಳು. ಈ ನಡುವೆ ಕುಮಾರವ್ಯಾಸ, ಲಕ್ಮೀಶ ಮತ್ತು ಕೀರ್ತನಕಾರರು ಬಂದು ಹೋಗಿರುವರಾದರೂ ಇವರೆಲ್ಲರ ಸಾಹಿತ್ಯವು ಅಶಾಂತಿಯಲ್ಲಿ ಕಂಗೆಟ್ಟಿದ್ದ ಜನರಿಗೆ ಒಂದು ಹೊತ್ತಿನ ಮುಕ್ತಿಮಾರ್ಗಕ್ಕೆ ಆಸರೆಯಾದವೇ ವಿನಃ ಪೀಳಿಗೆಗಳ ಶಿಕ್ಷಣಕ್ಕೆ ನೀರುಣಿಸಲಿಲ್ಲ ಎಂಬುದೇ ಇತಿಹಾಸದ ವ್ಯಂಗ್ಯ.
ಅದಾಗಿ ಮುನ್ನೂರು ವರ್ಷಗಳ ನಂತರ ಮೈಸೂರರಸರ ಕಾಲಕ್ಕೆ ಕನ್ನಡದ ಪುಸ್ತಕಲೋಕ ಮತ್ತೆ ಚಿಗುರೊಡೆಯಿತು. ಅದೇ ವೇಳೆಗೆ ಕನ್ನಡನಾಡಿಗೆ ಆಗಮಿಸಿದ ಕ್ರೈಸ್ತ ಧರ್ಮಪ್ರಚಾರಕರು ತಮ್ಮ ಕ್ಷೇತ್ರಕಾರ್ಯಕ್ಕಾಗಿ ಸ್ಥಳೀಯ ಭಾಷೆ ಕನ್ನಡವನ್ನು ಕಲಿಯಬೇಕಾದ ಸಂದರ್ಭದಲ್ಲಿ ಕನ್ನಡದ ಕಾವ್ಯಪರಂಪರೆಯನ್ನು ಕಂಡು ಬೆರಗಾದರು. ಆ ಕಾವ್ಯ ಮತ್ತು ಸಾಹಿತ್ಯಗಳಾವುವೂ ಸಮಾಜದ ಎಲ್ಲ ವರ್ಗವನ್ನೂ ತಲಪುತ್ತಿಲ್ಲ ಎಂಬುದನ್ನೂ ಅವರು ಮನಗಂಡರು.
ಅಂದು ದೇಶವ್ಯಾಪಿಯಾಗಿದ್ದ ಇಂಗ್ಲಿಷ್ ದೊರೆಗಳ ಆಡಳಿತವು ಸಾರ್ವತ್ರಿಕ ಶಿಕ್ಷಣಕ್ಕೆ ಒತ್ತು ನೀಡಿತ್ತು. ಬ್ರಿಟಿಷ್ ಸರಕಾರವು ಜಾತ್ಯತೀತವಾಗಿದ್ದು ಮಿಷನರಿ ಕೆಲಸಕ್ಕೆ ಬೆಂಬಲ ನೀಡಲಿಲ್ಲವಾದರೂ ಸಾರ್ವತ್ರಿಕ ಶಿಕ್ಷಣಕ್ಕೆ ಪಠ್ಯಪುಸ್ತಕಗಳನ್ನು ರೂಪಿಸಲು ಮಿಷನರಿಗಳ ನೆರವು ಪಡೆಯಿತೆಂಬುದು ಗಮನಾರ್ಹ. ಸ್ವತಃ ವಿದ್ವಾಂಸರಾಗಿದ್ದ ಮಿಷನರಿಗಳು ಬ್ರಿಟಿಷ್ ಸರ್ಕಾರದ ಕೋರಿಕೆಯ ಮೇರೆಗೆ ಶಾಲೆಗಳಿಗಾಗಿ ಭೂಗೋಳಶಾಸ್ತ್ರ, ಸಮಾಜಶಾಸ್ತ್ರ, ದೇಶವಿದೇಶಗಳ ಚರಿತ್ರೆ, ಸಾಮಾನ್ಯ ವಿಜ್ಞಾನ, ಗಣಿತ ಮುಂತಾದ ವಿಷಯಗಳನ್ನು ರೂಪಿಸಿ ಅದರ ಜೊತೆಗೆ ಕನ್ನಡ ಕಾವ್ಯಗಳ ರಸಸಾರವನ್ನು ಸಂಗ್ರಹಿಸಿ ಮಕ್ಕಳಿಗೆ ಕಾವ್ಯಬೋಧೆಯನ್ನೂ ಮಾಡಿದರು.
ಹೀಗೆ ದೇವರ ಗೂಡುಗಳಲ್ಲಿ, ಮಠದ ಅಟ್ಟಣಿಗೆಗಳಲ್ಲಿ ಬಟ್ಟೆ ಕಟ್ಟಿ ಇಡಲಾಗಿದ್ದ ಪ್ರಾಚೀನ ತಾಳೆಗರಿಗಳೂ, ಕಾವ್ಯಹೊತ್ತಿಗೆಗಳೂ ಹೊರಬಂದು ಮುದ್ರಣಯಂತ್ರಗಳ ಮೂಲಕ ಅಚ್ಚು ಹಾಕಲ್ಪಟ್ಟು ಸರ್ವಜನರಿಗೂ ತಲಪುವಂತಾದವು. ಶಬ್ದಮಣಿದರ್ಪಣ, ಛಂದೋಂಬುಧಿ, ಪಂಪಭಾರತ, ವಚನಸಾಹಿತ್ಯ, ದಾಸಸಾಹಿತ್ಯ, ಕುಮಾರವ್ಯಾಸ ಭಾರತ, ಜೈಮಿನಿಭಾರತಗಳೆಲ್ಲ ಜನಸಾಮಾನ್ಯರ ಕೈಗೆ ಸಿಗುವಂತಾದವು.
ಮಿಷನರಿಗಳು ಸುದ್ದಿಪತ್ರಿಕೆಗಳನ್ನೂ ನಡೆಸಿದರು. ನಾಡಿನೆಲ್ಲೆಡೆ ಸಂಚರಿಸಿ ಹಾದಿಬೀದಿಗಳಲ್ಲಿ ಗುಡಿಗೋಪುರಗಳಲ್ಲಿ ಕಂಡುಬಂದ ಶಿಲಾಶಾಸನಗಳನ್ನು ಓದಿ ಅಭ್ಯಸಿಸಿ ಅವುಗಳನ್ನೂ ಪುಸ್ತಕರೂಪಕ್ಕೆ ತಂದು ತುಲನೆ ಮಾಡಿದರಲ್ಲದೆ ನಾಡಿನ ಇತಿಹಾಸವನ್ನೂ ಬರೆದು ಕನ್ನಡಿಗರಲ್ಲಿ ಅಖಂಡ ಕರ್ನಾಟಕತ್ವದ ಪರಿಕಲ್ಪನೆಯನ್ನು ಪಡಿಮೂಡಿಸಿದರು.
ಮುದ್ರಣಕ್ರಾಂತಿಯಿಂದಾಗಿ ಇಂದು ನಾವು ಕನ್ನಡದಲ್ಲಿ ನಮ್ಮ ಸಾಹಿತ್ಯವನ್ನಷ್ಟೇ ಅಲ್ಲದೆ ಜಗತ್ತಿನ ವಿವಿಧ ಭಾಷೆಗಳ ಪ್ರಮುಖ ಪುಸ್ತಕಗಳನ್ನು ನಮ್ಮ ಭಾಷೆಯಲ್ಲೇ ಓದುತ್ತಿದ್ದೇವೆ. ವಿಶ್ವಕೋಶಗಳ ಮೂಲಕ ಅಪಾರ ಜ್ಞಾನವನ್ನು ಪಡೆಯುತ್ತಿದ್ದೇವೆ. ಮಿನ್ಬಲದ ಹೊಸ ಹೊಸ ಆವಿಷ್ಕಾರಗಳಿಂದಾಗಿ ನಾವಿಂದು ಜಗತ್ತಿನ ಎಲ್ಲ ಪುಸ್ತಕಗಳನ್ನೂ ಅಂಗೈ ಮೇಲಿನ ಸಾಧನಗಳಲ್ಲಿ ಓದಬಹುದಾಗಿದೆ.
ಆದರೂ ನಗರಜೀವಿಗಳು ಯಾಂತ್ರಿಕ ಜೀವನದ ಜಂಜಾಟದಲ್ಲಿ ಓದುವ ಪ್ರಕ್ರಿಯೆಗೇ ಸಮಯ ನೀಡುತ್ತಿಲ್ಲ. ಓದುವ ಎಲ್ಲ ಆಕರಗಳೂ ಸುಲಭವಾಗಿ ಸಿಗುತ್ತಿವೆಯಾದರೂ ಓದಲು ನಾವು ಮಾನಸಿಕವಾಗಿ ಸಿದ್ಧರಾಗಿಲ್ಲ. ಓದುಗರ ಸಂಖ್ಯೆ ಕ್ರಮೇಣ ಕ್ಷಯಿಸುತ್ತಿದೆ. ಕುವೆಂಪು, ಜಿಎಸ್ ಶಿವರುದ್ರಪ್ಪ, ಗೋವಿಂದಪೈ, ಪೂರ್ಣಚಂದ್ರ ತೇಜಸ್ವಿ, ನಿರಂಜನ, ಹಂಪ ನಾಗರಾಜಯ್ಯ, ಎಂ ಎಂ ಕಲಬುರ್ಗಿ, ನಾ ಡಿಸೋಜ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಎಸ್ ಎಲ್ ಭೈರಪ್ಪ ಮುಂತಾದವರ ಪುಸ್ತಕಗಳನ್ನು ನಾವು ಓದಲೇಬೇಕು. ಮದುವೆ ಗೃಹಪ್ರವೇಶ ಮುಂತಾದ ಸಂದರ್ಭಗಳಲ್ಲಿ ಪುಸ್ತಕಗಳನ್ನೇ ಉಡುಗೊರೆಯಾಗಿ ನೀಡಬೇಕು. ಪುಸ್ತಕಗಳನ್ನು ಪರಸ್ಪರ ಹಂಚಿಕೊಳ್ಳಬೇಕು. ಓದಿದ ಒಳ್ಳೆಯ ಪುಸ್ತಕಗಳ ಬಗ್ಗೆ ಇತರರಲ್ಲಿ ಮಾತಾಡಬೇಕು.
ಈ ಒಂದು ನಿಟ್ಟಿನಲ್ಲಿ ನಮ್ಮ ಧರ್ಮಪ್ರಾಂತ್ಯಗಳೂ ಧರ್ಮಕೇಂದ್ರಗಳೂ ಶಿಕ್ಷಣಸಂಸ್ಥೆಗಳೂ ಗಂಭೀರ ಕ್ರಮ ಕೈಗೊಂಡು ನಮ್ಮ ಧರ್ಮದ ಎಲ್ಲ ಆಕರಗ್ರಂಥಗಳನ್ನೂ ಸಂಗ್ರಹಿಸಿ ಸಂಮೃದ್ಧ ಗ್ರಂಥಾಲಯಗಳನ್ನು ತೆರೆಯಲು ಮನಸ್ಸು ಮಾಡಬೇಕಾಗಿದೆ. ಅದರಲ್ಲಿ ನಾಡಿನ ಅಂದಿನ ಇಂದಿನ ಕ್ರೈಸ್ತ ಕವಿಗಳ ಸಾಹಿತಿಗಳ ಜ್ಞಾನಿಗಳ, ವಿವಿಧ ವಸ್ತುವಿಶೇಷಗಳ, ವಿವಿಧ ಶಿಸ್ತುಗಳ, ಎಲ್ಲ ವಯೋಮಾನದವರಿಗೂ ತಲಪಬಲ್ಲ ವಿವಿಧ ಆಸಕ್ತಿಗಳ ಪುಸ್ತಕಗಳನ್ನು ಸಂಗ್ರಹಿಸಬೇಕಿದೆ. ಪ್ರತಿಯೊಬ್ಬರೂ ಪುಸ್ತಕ ಸಂಸ್ಕೃತಿಯ ಮಹತ್ವವನ್ನು ಪೋಷಿಸುತ್ತಾ ಪ್ರತಿವರ್ಷವೂ ಪುಸ್ತಕ ಖರೀದಿಗೆಂದು ಒಂದಷ್ಟು ಹಣವನ್ನು ವಿನಿಯೋಗಿಬೇಕಿದೆ.
ಕನ್ನಡ ಕ್ರೈಸ್ತರ ಖ್ಯಾತ ಇತಿಹಾಸಕಾರ ಹಾಗೂ ಕನ್ನಡದ ಪವಿತ್ರ ಬೈಬಲಿನ ಅನುವಾದದ ಮುಖ್ಯ ನೇತಾರ ಫಾದರ್ ಐ ಅಂತಪ್ಪನವರು ತಮ್ಮ ಸಂಶೋಧನಾ ಕಾರ್ಯದ ವೇಳೆ ಸಂಗ್ರಹಿಸಿದ ಅನುಪಮವೂ ಅಮೂಲ್ಯವೂ ಆದ ಪುಸ್ತಕಗಳ ರಾಶಿಯನ್ನು ಮುಂದಿನ ಪೀಳಿಗೆಗಾಗಿ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಅವೇ ನಮ್ಮ ಮೊದಲ ಗ್ರಂಥಾಲಯದ ಜೀವದ್ರವ್ಯವಾಗಲಿ ಎಂದು ಹಾರೈಸುತ್ತೇನೆ. ಅದೇ ಮಾದರಿಯನ್ನು ಅನುಸರಿಸಿ ನಮ್ಮ ಧಾರ್ಮಿಕ ವರಿಷ್ಠರೂ ಇತರ ದಾನಿಗಳೂ ಸುಸಜ್ಜಿತ ಸಂವೃದ್ಧ ಪುಸ್ತಕಾಲಯಗಳನ್ನು ರಚಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಒಂದು ಮಹಾಕೊಡುಗೆಯನ್ನು ಬಿಟ್ಟುಹೋಗಲಿ ಎಂದು ಆಶಿಸೋಣ.
ನಮ್ಮ ಗುರುಮಠಗಳಲ್ಲಿ ಕನ್ಯಾಮಠಗಳಲ್ಲಿ ಪುಸ್ತಕಭಂಡಾರಗಳು ಇವೆಯಾದರೂ ಅಲ್ಲಿನ ಕನ್ನಡ ಪುಸ್ತಕಗಳ ಸಂಖ್ಯೆ ನಗಣ್ಯವೆನಿಸಬಹುದಾದಷ್ಟು ಕಡಿಮೆ ಅಲ್ಲದೆ ಅವುಗಳನ್ನು ತೀರಾ ಕೆಳಹಂತದಲ್ಲಿಟ್ಟು ಓದುಗರಿಗೆ ಸುಲಭವಾಗಿ ಕಾಣದಂತೆ ಮಾಡಿದ್ದಾರೆ. ಶಾಲೆಗಳಲ್ಲಿನ ಪುಸ್ತಕ ಭಂಡಾರಗಳು ಅದಿಕಾರಿಗಳಿಗೆ ಲೆಕ್ಕ ತೋರಿಸುವುದಕ್ಕಷ್ಟೇ ಇವೆ ಹೊರತು ವಿದ್ಯಾರ್ಥಿಗಳಿಗೆ ಸದಾ ಬೀಗ ಹಾಕಿರುತ್ತವೆ. ಇವಕ್ಕೆಲ್ಲ ಇತಿಶ್ರೀ ಹಾಡಿ ವಿದ್ಯಾರ್ಥಿ ದೆಸೆಯಲ್ಲಿಯೇ ಓದುವ ಆಸಕ್ತಿಯನ್ನು ಬೆಳೆಸಬೇಕಾದುದೇ ಸನ್ಮಾರ್ಗ.
ನಮ್ಮ ಬೆಂಗಳೂರು ಮಹಾಧರ್ಮಪ್ರಾಂತ್ಯದ ಪಾಲನಾ ಭವನದಲ್ಲಿ ಕುಟುಂಬ ಆಯೋಗ, ಜನಸಾಮಾನ್ಯ ಆಯೋಗ, ಶಿಕ್ಷಣ ಆಯೋಗ, ಕಾರ್ಮಿಕ ಆಯೋಗ, ಬೈಬಲ್ ಆಯೋಗ, ಧರ್ಮೋಪದೇಶ ಆಯೋಗ ಮುಂತಾದ ಹಲವಾರು ಆಯೋಗಗಳು ಕಾರ್ಯನಿರ್ವಹಿಸುತ್ತಾ ಜನಸಾಮಾನ್ಯರ ಪಾಲುಗೊಳ್ಳುವಿಕೆಗೆ ಇಂಬಾಗಿವೆ. ಅವುಗಳ ಜೊತೆಗೆ "ಕನ್ನಡ ಸಾಹಿತ್ಯ-ಸಂಸ್ಕೃತಿ ಆಯೋಗ" ವನ್ನೂ ರಚಿಸಿ, ಸ್ಥಳೀಯ ಕನ್ನಡಿಗರ ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಉದ್ದೀಪಿಸಿ, ಪುಸ್ತಕಸಂಸ್ಕೃತಿ, ಸಮೂಹಗಾನ, ಯಕ್ಷಗಾನ ಬಯಲಾಟ, ನಾಟಕ, ಕೋಲಾಟ, ಸಂಗೀತಸ್ಪರ್ಧೆ, ನಾಟ್ಯ, ಚಿತ್ರಕಲೆಗಳ ಮೂಲಕ ಪ್ರಭು ಯೇಸುಕ್ರಿಸ್ತರ ಸಂದೇಶವನ್ನು ವಿಸ್ತೃತವಾಗಿ ಸಾರುವಂತಾಗಲಿ.
*********
No comments:
Post a Comment